ಚನ್ನಪಟ್ಟಣ: ರೈತರ ಪರವಾಗಿ ಕಾಂಗ್ರೆಸ್ ರಾಜಭವನ ಚಲೋ ವಿಚಾರಕ್ಕೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಪ್ರತಿಕ್ರಿಯಿಸಿದರು.
ಎಲ್ಲರಿಗೂ ಪ್ರತಿಭಟಿಸುವ ಅವಕಾಶವಿದೆ. ಸರ್ಕಾರ ಸಹ ಎಲ್ಲರ ಹೋರಾಟಕ್ಕೆ ಬೆಲೆಕೊಡಬೇಕು. ಸರ್ಕಾರ ಸಮಸ್ಯೆ ಸರಿಪಡಿಸುವ ಕ್ರಮವಹಿಸಬೇಕು. ಬಿ.ಸಿ.ಪಾಟೀಲ್ ಬಗ್ಗೆ ನಾನು ಮಾತನಾಡಲ್ಲ. ಬೂಟಾಟಿಕೆಗಾಗಿ ರೈತರ ಮನೆಯಲ್ಲಿದ್ದು ಬಂದಿದ್ದಾರೆ. ಹಾಗಾಗಿ ಆ ವೀಕ್ ಮೈಂಡ್ ಬಗ್ಗೆಮಾತನಾಡಲಾರೆ. ಇಲಾಖೆಯ ಉಪನಿರ್ದೇಶಕರ ವರ್ಗಾವಣೆಗೂ ಹಣ ಕೇಳುತ್ತಿದ್ದಾರೆ. ಪಾಪ ಅವನು ಎಲ್ಲಿಂದ ಹಣ ತಂದು ಕೊಡ್ತಾನೆ. ಕೊನೆಗೆ ರೈತರಿಂದಲೇ ಹಣ ಪಡೆಯಬೇಕಿದೆ. ಹಾಗಾಗಿ ರೈತರ ಬಗ್ಗೆ ಲಘುವಾಗಿ ಮಾತನಾಡ ಬಾರದು. ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗುವುದು ರಾಮನಗರದಲ್ಲೇ. ರಾಮನಗರ ಜಿಲ್ಲೆಯ ನ್ನು ಬಿಟ್ಟು ನಾನು ಹೊರಗೆ ಹೋಗಲ್ಲ ಎಂದು ಚನ್ನಪಟ್ಟಣ ಕ್ಷೇತ್ರ ಬಿಡುವ ವಿಚಾರಕ್ಕೆ ಹೆಚ್ಡಿಕೆ ಸ್ಪಷ್ಟನೆ ನೀಡಿದರು.
ನಾನು ಎಂದಿಗೂ ಚನ್ನಪಟ್ಟಣ ಕ್ಷೇತ್ರ ಬಿಡಲ್ಲ. ಕೆಲವರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರ ಬಿಡುವುದಿದ್ದರೆ ನಾನು ಚನ್ನಪಟ್ಟಣದಲ್ಲಿ ಯಾಕೆ ಓಡಾಡುತ್ತಿದ್ದೇ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಯತ್ನ ಪಡುತ್ತಿದ್ದೇನೆ. ರಾಮನಗರ-ಚನ್ನಪಟ್ಟಣ ನನ್ನ ಎರಡು ಕಣ್ಣು. ನಾನು ಸಾಯುವುದರೊಳಗೆ ರಾಮನಗರ-ಚನ್ನಪಟ್ಟಣವನ್ನು ಅವಳಿ ನಗರ ಮಾಡುತ್ತೇನೆ.
ಹುಬ್ಬಳ್ಳಿ-ಧಾರವಾಡದ ರೀತಿ ನಗರಪಾಲಿಕೆಯಾಗಿ ಮಾಡುತ್ತೇನೆ. ಈ ಎರಡೂ ಕ್ಷೇತ್ರ ನನ್ನ ಕಣ್ಣುಗಳು, ಕಳೆದುಕೊಂಡರೆ ನಾನು ಕುರುಡಾಗುತ್ತೇನೆ. ಹಾಗಾಗಿ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಇಲ್ಲದಿದ್ದರೆ ಈ ಎರಡೂ ಕ್ಷೇತ್ರಗಳಲ್ಲಿ ನಿರಂತರ ಪ್ರವಾಸ ಕೈಗೊಳ್ಳುವ ಪ್ರಮೇಯವೇ ಎದುರಾಗುತ್ತಿರಲಿಲ್ಲ. ಇಂತಹ ಪುಕಾರುಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಕೊಡಬೇಡಿ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ.
ರಾಮನಗರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪರ್ಧೆ ವಿಚಾರಕ್ಕೆ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಯಾರು ಬೇಕಾದರೂ ಬಂದು ಸ್ಪರ್ಧೆ ಮಾಡಲಿ. ನನ್ನ ವಿರೋಧವಿಲ್ಲ, ವೈಯಕ್ತಿಕ ಸ್ನೇಹ ಬೇರೆ, ರಾಜಕೀಯ ಬೇರೆ. ಆದರೆ ನಾನು ಬದುಕಿ ರೋವರೆಗೂ ರಾಮನಗರ-ಚನ್ನಪಟ್ಟಣದ ಜನ ನನ್ನ ಕೈಬಿಡಲ್ಲ. ಆ ನಂಬಿಕೆ ಸದಾ ನನಗಿದೆ. ಅವರೇ ಬೆಳೆಸಿದ ಮಗು ನಾನು. ಕೊನೆಗೆ ಅವರೇ ಚಿವುಟುತ್ತಾರ. ಹಾಗಾಗಿ ನನಗೆ ವಿಶ್ವಾಸವಿದೆ. ರಾಮನಗರ-ಚನ್ನಪಟ್ಟಣದ ಜನ ನನ್ನ ಕೈಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.