ತಿಳಿರುತೋರಣ
ಶ್ರೀವತ್ಸ ಜೋಶಿ
ಅಮೆರಿಕದ ೪೬ನೆಯ ಅಧ್ಯಕ್ಷನಾಗಿ ಜೋಸೆಫ್ ಆರ್ ಬೈಡನ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
೭೮ರ ತರುಣ ‘ಜೋ’ ಬೈಡನ್, ಅತಿ ಹೆಚ್ಚು ವಯಸ್ಸಿನಲ್ಲಿ ಈ ಅಧಿಕಾರಗ್ರಹಣ ಮಾಡಿದವರು ಎಂಬುದೊಂದು ವಿಶೇಷ. ಉಪಾಧ್ಯಕ್ಷ ಸ್ಥಾನಕ್ಕೆ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳೆಯ ಆಯ್ಕೆ, ಅದರಲ್ಲೂ ಸವರ್ಣೀಯ ಮಹಿಳೆಯ ಆಯ್ಕೆ ಆಗಿರುವುದೂ ಒಂದು ವಿಶೇಷ, ಆ ಪದವಿಯನ್ನು ಕಮಲಾ ಹ್ಯಾರಿಸ್ ಅಲಂಕರಿಸಿರುವುದರಿಂದ.
ಜೋ ಬೈಡನ್‌ರ ಪತ್ನಿ ಜಿಲ್ ಬೈಡನ್ ಇನ್ನು ಮುಂದೆಯೂ ಕಾಲೇಜಿನ ಉಪನ್ಯಾಸಕಿ ವೃತ್ತಿಯನ್ನು ಮುಂದುವರಿಸಲು
ಇಚ್ಛಿಸಿರುವುದರಿಂದ ಅವರು ‘ಶ್ವೇತಭವನದ ಹೊರಗಡೆ ಉದ್ಯೋಗದಲ್ಲಿರುವ ಪ್ರಪ್ರಥಮ ಪ್ರಥಮ ಮಹಿಳೆ’ ಆಗಲಿದ್ದಾರೆ
ಎನ್ನುವುದೂ ಗಮನಾರ್ಹ ವಿಶೇಷವೇ. ಕಮಲಾ ಹ್ಯಾರಿಸ್‌ರ ಪತಿ ಡಗ್ಲಸ್ ಎಮ್ಹಾಫ್‌ರದೂ ಒಂದೆರಡು ವಿಶೇಷಗಳು: ಅವರು
ಅಮೆರಿಕದ ಪ್ರಪ್ರಥಮ ‘ಸೆಕೆಂಡ್ ಜೆಂಟಲ್‌ಮ್ಯಾನ್’; ಹಾಗೆಯೇ, ಅಮೆರಿಕದ ಅಧ್ಯಕ್ಷ/ಉಪಾಧ್ಯಕ್ಷ ಸ್ಥಾನಕ್ಕೆ ಇಷ್ಟು ಹತ್ತಿರದ
ಒಡನಾಟವಿರುವ ಪ್ರಪ್ರಥಮ ಯಹೂದ್ಯ ಜನಾಂಗದ ವ್ಯಕ್ತಿ.
ಸರಿ, ಇವೆಲ್ಲ ಮನುಷ್ಯರ ವಿಚಾರಗಳಾದುವು. ಜೋ ಬೈಡನ್ ಸಾಕಿರುವ ನಾಯಿ, ಜರ್ಮನ್ ಷೆಫರ್ಡ್ ತಳಿಯದು, ‘ಮೇಜರ್’
ಎಂಬ ಹೆಸರಿನದು, ಈಗಿನ್ನು ಶ್ವೇತಭವನದ ನಿವಾಸಿ. ಇದರದೂ ಒಂದು ‘ಮೊತ್ತಮೊದಲ’ ವಿಶೇಷವಿದೆ. ಶ್ವೇತಭವನದ ಪ್ರಪ್ರಥಮ
ಶ್ವಾನ ಎಂದಲ್ಲ. ಈ ಹಿಂದೆಯೂ ಅನೇಕ ಅಧ್ಯಕ್ಷರು ಶ್ವಾನ – ಮಾರ್ಜಾಲಾದಿ ಅನೇಕ ಸಾಕುಪ್ರಾಣಿಗಳನ್ನು ಶ್ವೇತ ಭವನದೊಳಗೇ
ಸಾಕಿದ್ದಾರೆ. ಅವು ಮಾಧ್ಯಮಗಳ ರಸವಾರ್ತೆ ಸುದ್ದಿಸ್ವಾರಸ್ಯಗಳಲ್ಲಿ ಆಗಾಗ ಕಾಣಿಸಿಕೊಂಡಿವೆ.
ಅವುಗಳ ಬಗ್ಗೆಯೇ ಬೇಕಾದಷ್ಟು ಪುಸ್ತಕಗಳು ಪ್ರಕಟವಾಗಿವೆ. ಪ್ರೆಸಿಡೆನ್ಷಿಯಲ್ ಪೆಟ್ಸ್ ಅಂತೊಂದು ಆನ್‌ಲೈನ್ ಮ್ಯೂಸಿಯಂ ಸಹ ಇದೆ. ಹಾಗಾಗಿ ಜೋ ಬೈಡನ್ ನಾಯಿ ಸಾಕಿದ್ದಾರೆ ಎನ್ನುವುದರಲ್ಲೇನೂ ವಿಶೇಷವಿಲ್ಲ. ಪರಂತು ಈ ಮೇಜರ್ ಎಂಬ ನಾಯಿಯ ಮೇಜರ್ ಹೆಗ್ಗಳಿಕೆ ಏನೆಂದರೆ ಇದು ‘ಎನಿಮಲ್ ಶೆಲ್ಟರ್‌ನಿಂದ ವ್ಹೈಟ್‌ಹೌಸ್‌ಗೆ ಭಡ್ತಿ ಪಡೆದ’ ಮೊತ್ತಮೊದಲ ನಾಯಿ! ಅಂದರೆ ಇದರದು ಅಕ್ಷರಶಃ ‘ರ‍್ಯಾಗ್ಸ್-ಟು-ರಿಚಸ್ ಟೇಲ್’.
ಹೇಗೂ ಬಾಲ ಅಲ್ಲಾಡಿಸುವ ನಾಯಿ ಅಲ್ವಾ, ಆದ್ದರಿಂದ ಬೇಕಿದ್ದರೆ ‘ವ್ಯಾಗ್ಸ್-ಟು-ರಿಚಸ್ ಟೈಲ್’ ಎಂದೇ ಇದನ್ನು ಬಣ್ಣಿಸೋಣ.
ಡೆಲವೇರ್ ಸಂಸ್ಥಾನದ ವಿಲ್ಮಿಂಗ್ಟನ್‌ನಲ್ಲಿರುವ ‘ಡೆಲವೇರ್ ಹ್ಯುಮೇನ್ ಎಸೋಸಿಯೇಷನ್’ ಎಂಬ ಹೆಸರಿನ ಎನಿಮಲ್ ಶೆಲ್ಟರ್‌ಗೆ ೨೦೧೮ರ ಆರಂಭದಲ್ಲಿ ಯಾರೋ ಒಬ್ಬರು ಆರು ನಾಯಿಮರಿಗಳನ್ನು ತಂದುಬಿಟ್ಟರು. ಜರ್ಮನ್ ಷೆಫರ್ಡ್ ತಳಿಯ ಮರಿಗಳು, ನೋಡಲಿಕ್ಕೆ ಚಂದ ಇದ್ದವು. ಆದರೆ ತೀವ್ರ ಅನಾರೋಗ್ಯದಿಂದ ಬಳಲಿದ್ದವು. ನಿಸ್ತೇಜವಾಗಿ ಮಲಗಿಯೇ ಇರುತ್ತಿದ್ದು ಎಚ್ಚರವಾ ದಾಗೆಲ್ಲ ವಾಂತಿ ಮಾಡುತ್ತಿದ್ದವು.
ಅವು ಯಾವುದೋ ವಿಷಪದಾರ್ಥದ ಸೇವನೆಯಿಂದಾಗಿ ನರಳುತ್ತಿದ್ದವೆಂದು ಶೆಲ್ಟರ್‌ನವರು ಕಂಡುಕೊಂಡರು. ಚಿಕಿತ್ಸಾಲಯಕ್ಕೆ ಸೇರಿಸಿ ಪಶುವೈದ್ಯರಿಂದ ಔಷಧ ಕೊಡಿಸಿದರು. ಮರಿಗಳು ಚೇತರಿಸಿಕೊಂಡು ಶೆಲ್ಟರ್‌ಗೆ ಮರಳಿದವು. ‘ನಮ್ಮಲ್ಲಿದ್ದ ಜರ್ಮನ್
ಷೆಫರ್ಡ್ ತಳಿಯ ಆರು ಮರಿಗಳು ಈಗ ಆಸ್ಪತ್ರೆಯಿಂದ ಮರಳಿವೆ. ಆರೋಗ್ಯದಿಂದಿವೆ. ಅವುಗಳ ಆಟ ಊಟ ಎಲ್ಲ ಚೆನ್ನಾಗಿ ಸಾಗಿದೆ. ಯಾರಾದರೂ ಫಾಸ್ಟರಿಂಗ್ (ತಾತ್ಕಾಲಿಕವಾಗಿ ಮನೆಯಲ್ಲಿಟ್ಟುಕೊಂಡು ಸಾಕುವುದು) ಮಾಡುವವರಿದ್ದರೆ ತಿಳಿಸಿ’
ಎಂದು ಎನಿಮಲ್ ಶೆಲ್ಟರ್‌ನ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟಿಸಿದರು.
ಜೋ ಬೈಡನ್‌ನ ಮಗಳು ಆಶ್ಲೇ ಬೈಡನ್ ಆ ಪ್ರಕಟಣೆಯನ್ನು ತನ್ನ ತಂದೆಗೆ ತೋರಿಸಿದಳು. ೨೦೧೮ರ ಆರಂಭ ಅಂದರೆ ಜೋ ಬೈಡನ್ ಆಗ ವರ್ಷದ ಹಿಂದೆಯಷ್ಟೇ ಎರಡು ಅವಧಿಗಳ ಉಪಾಧ್ಯಕ್ಷಗಿರಿಯಿಂದ ನಿವೃತ್ತರಾಗಿ ಹೆಚ್ಚೂಕಡಿಮೆ ಸಕ್ರಿಯ ರಾಜಕಾರಣದಿಂದಲೇ ನಿವೃತ್ತರಾಗಿ ಮನೆಯಲ್ಲಿರುತ್ತಿದ್ದರು. ೨೦೨೦ರಲ್ಲಿ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ಆಲೋಚನೆ ಯೆಲ್ಲ ಅವರಿಗಾಗ ಇರಲೇ ಇಲ್ಲ. ಎನಿಮಲ್ ಶೆಲ್ಟರ್ ನಿಂದ ಒಂದು ನಾಯಿಮರಿ ತಂದರಾಗಬಹುದು ಎಂದು ಅವರಿಗೂ ಅನಿಸಿರಬೇಕು. ಕಾರಣ ಅವರ ಬಳಿ ಆಗಲೇ ಇದ್ದ ನಾಯಿ ‘ಚಾಂಪ್’ (ಅದೂ ಜರ್ಮನ್ ಷೆಫರ್ಡ್ ತಳಿಯದೇ) ಮುದಿಯಾಗುತ್ತ ಬಂದಿದ್ದು, ಅದಕ್ಕೊಬ್ಬ ಜೊತೆಗಾರನಾಗುತ್ತಾನೆ ಎಂದು.
ಅದಾದ ಮುಂದಿನ ಭಾನುವಾರ ಈಸ್ಟರ್ ಸಂಡೇ. ಆವತ್ತೇ ಜೋ ಬೈಡನ್ ಖುದ್ದಾಗಿ ಎನಿಮಲ್ ಶೆಲ್ಟರ್‌ಗೆ ಹೋದರು. ಅಲ್ಲಿಯ ಸಿಬ್ಬಂದಿ ಅವರನ್ನು ಸಂತೋಷದಿಂದ ಬರಮಾಡಿ ಕೊಂಡು ನಾಯಿಮರಿಗಳನ್ನು ತೋರಿಸಿದರು. ಆರರಲ್ಲಿ ಒಂದನ್ನು ತಾನು ಫಾಸ್ಟರಿಂಗ್ ಮಾಡುವುದಾಗಿ ಹೇಳಿ ಬೈಡನ್ ಅದನ್ನೆತ್ತಿಕೊಂಡು ಮನೆಗೆ ತಂದೇಬಿಟ್ಟರು! ಮೇಜರ್ ಎಂದು ಅದಕ್ಕೊಂದು ಹೆಸರಿಟ್ಟರು. ಅದಾಗಲೇ ಇದ್ದ ಇನ್ನೊಂದು ನಾಯಿ ‘ಚಾಂಪ್’ನೊಂದಿಗೆ ಮತ್ತು ಮನೆಮಂದಿಯೊಂದಿಗೆ ಮೇಜರ್ ಚೆನ್ನಾಗಿ ಹೊಂದಿಕೊಂಡಿತು.
ನವೆಂಬರ್ ೨೦೧೮ರಲ್ಲೊಂದು ದಿನ ಬೈಡನ್ ಮತ್ತೆ ಆ ಶೆಲ್ಟರ್‌ಗೆ ಹೋಗಿ, ಮೇಜರ್‌ನನ್ನು ಶೆಲ್ಟರ್‌ಗೆ ಮರಳಿಸುವ ಬದಲು ತಾನು ಅದನ್ನು ಪರ್ಮನೆಂಟಾಗಿ ದತ್ತು ತೆಗೆದುಕೊಳ್ಳಲು ನಿರ್ಧರಿಸಿರುವೆನೆಂದು ತಿಳಿಸಿದರು. ಕಾಗದಪತ್ರಗಳಿಗೆ ಸಹಿ ಹಾಕುವ ಪ್ರಕ್ರಿಯೆ ಗಳನ್ನೆಲ್ಲ ಮುಗಿಸಿ, ಈಗ ದತ್ತು ಪಡೆದ ನಾಯಿ ಎಂದು ಮೇಜರ್‌ನನ್ನು ಕಾರಲ್ಲಿ ಕೂರಿಸಿಕೊಂಡು ಮನೆಗೆ ಮರಳಿದರು. ಆಗಲೂ ತಾನು ಎರಡು ವರ್ಷಗಳಲ್ಲಿ ಅಮೆರಿಕದ ಅಧ್ಯಕ್ಷನಾಗುತ್ತೇನೆಂದು ಅವರಿಗೇನೂ ಗೊತ್ತಿರಲಿಲ್ಲ.
ಎರಡು ನಾಯಿಗಳೊಂದಿಗೆ ಆರಾಮಾಗಿ ನಿವೃತ್ತ ಜೀವನ ಸಾಗಿಸುತ್ತೇನೆಂಬುದಷ್ಟೇ ಆ ಸರಳ ಹೃದಯಿ ಅಲ್ಪತೃಪ್ತ ವಯೋ ವೃದ್ಧನಿಗಿದ್ದ ಬಯಕೆ. ಹಾಗೆ ನೋಡಿದರೆ ಮುಂದೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡ ಮೇಲೂ ಜೋ ಬೈಡನ್ ಡೆಮಾಕ್ರಟಿಕ್ ಪಕ್ಷದ ಅಂತಿಮ ಅಭ್ಯರ್ಥಿ ಆಗುತ್ತಾರೋ ಇಲ್ಲವೋ ಎಂಬ ನಿರ್ಣಾಯಕ ಹಂತದಲ್ಲಿ ಇತರ ಉಮೇದ್ವಾರ ರಿಗಿಂತ ಒಮ್ಮೆ ಹಿನ್ನಡೆ ಅನುಭವಿಸಿದ್ದರು.
ಕೊನೆಗೂ ಅವರೇ ಅಭ್ಯರ್ಥಿಯಾದರು. ೨೦೨೦ ನವೆಂಬರ್‌ನ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿ ಅಧ್ಯಕ್ಷರಾಗಿ ಆಯ್ಕೆ ಯಾದರು. ಟ್ರಂಪ್‌ನ ರಂಪಗಳಿಂದಾಗಿ ಅಮೆರಿಕ ದೇಶದ ಬಗ್ಗೆ, ಇಲ್ಲಿನ ಚುನಾವಣೆ ವ್ಯವಸ್ಥೆಯ ಬಗ್ಗೆ ಜಗತ್ತೆಲ್ಲ ಗೇಲಿ
ಮಾಡುವಂತೆ ಆಯಿತಾದರೂ ಜೋ ಬೈಡನ್ ಅಧ್ಯಕ್ಷರಾಗುವರೆಂಬ ವಿಧಿಲಿಖಿತ ವನ್ನು ಯಾರಿಂದಲೂ ಬದಲಾಯಿಸ ಲಿಕ್ಕಾಗಲಿಲ್ಲ.
ಸಂಪ್ರದಾಯದಂತೆ ಜನವರಿ ೨೦ರಂದು ಜೋ ಬೈಡನ್ ಪ್ರಮಾಣವಚನ ಸ್ವೀಕರಿಸಿ ಆವತ್ತಿನಿಂದಲೇ ಶ್ವೇತಭವನದ ಹೊಸ
ಯಜಮಾನರಾಗುತ್ತಾರೆಂದು ಡೆಲವೇರ್ ಸಂಸ್ಥಾನದವರಿಗೆಲ್ಲ ಸಂಭ್ರಮ. ಅದರಲ್ಲೂ ‘ಡೆಲವೇರ್ ಹ್ಯುಮೇನ್ ಎಸೋಸಿಯೇಷನ್’ ಎನಿಮಲ್ ಶೆಲ್ಟರ್‌ನವರಿಗಂತೂ ಹಿಗ್ಗೋಹಿಗ್ಗು! ತಮ್ಮ ಶೆಲ್ಟರ್‌ನಲ್ಲಿ ಆರೈಕೆ ಪಡೆದಿದ್ದ ನಾಯಿಮರಿಗೆ ಈಗಿನ್ನು ‘ಫಸ್ಟ್ ಪೆಟ್’ ಪಟ್ಟ! ಜೋ ಬೈಡನ್ ಪ್ರಮಾಣವಚನ ಸ್ವೀಕರಿಸುವುದಕ್ಕೆ ಇನ್ನೂ ಹತ್ತು ದಿನಗಳಿರುವಾಗ ಮೊನ್ನೆ ಜನವರಿ ೧೦ರಂದು ಆ ಶೆಲ್ಟರ್‌ನವರು ಒಂದು ವಿಶೇಷ ಆನ್‌ಲೈನ್ ಸಮಾರಂಭ ಆಯೋಜಿಸಿದರು.
ಎಲ್ಲ ನಾಯಿಗಳಿಗೂ, ನಾಯಿ ಸಾಕಿದವರಿಗೂ ಆಹ್ವಾನವಿತ್ತರು. ಮ್ಯೂಸಿಕ್ ಸ್ಟಾರ್‌ಗಳನ್ನೆಲ್ಲ ಕರೆಸಿದರು. ಬೈಡನ್‌ನ ‘ಇನಾಗರೇಷನ್ ಫಂಕ್ಷನ್’ಗೂ ಮೊದಲೇ ಇದು ಮೇಜರ್‌ನ ‘ಇಂ-ಡಾಗ್-ರೇಷನ್ ಫಂಕ್ಷನ್’ ಎಂದು ಪ್ರಚಾರ ಮಾಡಿದರು. ಅಷ್ಟಾಗಿ ಮೇಜರ್ ಆ ಸಮಾರಂಭದಲ್ಲಿ ಕಾಣಿಸಿಕೊಳ್ಳಲಿಲ್ಲವಾದರೂ ಒಟ್ಟಾರೆ ಸಡಗರದಲ್ಲಿ ಸುಮಾರು ಎರಡು ಮಿಲಿಯನ್ ಡಾಲರ್ ಗಳಷ್ಟು ದತ್ತಿನಿಧಿ ಸಂಗ್ರಹ ವಾಯ್ತು. ಶೆಲ್ಟರ್‌ನಿಂದ ಪಡೆದ ನಾಯಿಮರಿ ಅಮೆರಿಕದ ಪ್ರೆಸಿಡೆಂಟರಿಗೇ ಒಗ್ಗುತ್ತದೆಂದ ಮೇಲೆ ನಮಗೂ ಒಗ್ಗುತ್ತದೆ ಎಂದು ಜನಸಾಮಾನ್ಯರಿಗೂ ನಾಯಿ ಬೆಕ್ಕುಗಳನ್ನು ಎನಿಮಲ್ ಶೆಲ್ಟರ್ ಗಳಿಂದ ತಂದು ಸಾಕುವುದಕ್ಕೆ ಪ್ರೇರಣೆಯಾಯಿತು.
ಜೋ ಬೈಡನ್‌ರೊಡನೆ ಈಗ ಮೇಜರ್ ಮತ್ತು ಚಾಂಪ್ ನಾಯಿಗಳು ಶ್ವೇತಭವನ ನಿವಾಸಿಗಳಾಗುತ್ತಿರುವ ಸುದ್ದಿಗೆ ಇನ್ನೊಂದು ಮಗ್ಗಲಿನ ಪ್ರಾಮುಖ್ಯವೂ ಇದೆ. ಕಳೆದ ನಾಲ್ಕು ವರ್ಷಗಳಲ್ಲಿ, ಅಂದರೆ ಟ್ರಂಪ್‌ನ ಅಧಿಕಾರಾವಧಿಯಲ್ಲಿ, ಶ್ವೇತಭವನದಲ್ಲಿ ಯಾವುದೇ ಸಾಕುಪ್ರಾಣಿಗಳಿರಲಿಲ್ಲ. ಬಹುಶಃ ಇದನ್ನು ಇಂಗ್ಲಿಷ್ ಪದಗಳಲ್ಲಿ ಹೇಳಿದರೇನೇ ಪರಿಣಾಮಕಾರಿ ಎನಿಸುವುದು: ಟ್ರಂಪ್‌ನ ಕಾಲದಲ್ಲಿ ವ್ಹೈಟ್‌ಹೌಸ್‌ನಲ್ಲಿ ಯಾವುದೇ ‘ಪೆಟ್ಸ್’ ಇರಲಿಲ್ಲ, ಏಕೆಂದರೆ ಟ್ರಂಪ್‌ನೇ ವ್ಹೈಟ್‌ಹೌಸ್‌ಅನ್ನು ಆಕ್ರಮಿಸಿದ್ದ ಒಂದು ದೊಡ್ಡ ‘ಪೆಸ್ಟ್’ (ಕಂಟಕಕಾರಿ ಕೀಟ, ಪೀಡೆ, ಪಿಡುಗು) ಆಗಿದ್ದ!
ಚುನಾವಣಾ ಪ್ರಚಾರದ ರ‍್ಯಾಲಿಯೊಂದರಲ್ಲಿ ಪತ್ರಕರ್ತನೊಬ್ಬ ‘ನೀವೇಕೆ ನಾಯಿ ಸಾಕಿಲ್ಲ?’ ಎಂದು ಪ್ರಶ್ನೆ ಕೇಳಿದ್ದಕ್ಕೆ ‘ಏನು? ವ್ಹೈಟ್‌ಹೌಸ್‌ನ ಅಂಗಳದಲ್ಲಿ ನಾನು ನಾಯಿಯ ಸರಪಳಿ ಹಿಡಿದುಕೊಂಡು ಓಡಾಡುವುದೇ? ಎಂದಿಗೂ ಸಾಧ್ಯವಿಲ್ಲ!’ ಎಂದು ಟ್ರಂಪಣ್ಣ ಮೂಗುಮುರಿದಿದ್ದ. ಜೋ ಬೈಡನ್ ಅದಕ್ಕೊಂದು ಟ್ವೀಟಾಸ್ತ್ರ ಬಿಟ್ಟಿದ್ದರು. ‘ನಂಬಿಕೆಗೆ ಅರ್ಹವಾದ ನಾಯಿಗಳನ್ನು ಶ್ವೇತಭವನ ದಲ್ಲಿರಿಸೋಣ’ ಎಂಬ ಅರ್ಥದ ಆ ಟ್ವೀಟ್ ಬಹಳವೇ ಮಾರ್ಮಿಕವಾಗಿತ್ತು.
ಕಳೆದ ನೂರೈವತ್ತು ವರ್ಷಗಳಲ್ಲಿ (೧೮೪೦ರಲ್ಲಿ ಅಧ್ಯಕ್ಷನಾಗಿದ್ದ ಜೇಮ್ಸ್ ಪೋಲ್ಕ್ ಎಂಬಾತನ ಬಳಿಕ) ಶ್ವೇತಭವನದಲ್ಲಿ ಸಾಕುಪ್ರಾಣಿಗಳಿಲ್ಲದಿದ್ದದ್ದು ಟ್ರಂಪನ ದರ್ಬಾರಿನಲ್ಲಿ ಮಾತ್ರ. ಈಗ ಬಿಳಿಮನೆಯನ್ನು ಮತ್ತೆ ಬೆಳಗಲು ಬೈಡನ್‌ರೊಡನೆ ಎರಡು ಬೌಬೌಗಳು ಬಂದಿವೆ. ಒಂದು ಬೆಕ್ಕನ್ನೂ ಸಾಕಬೇಕೆಂಬ ಇರಾದೆ ಇದೆಯಂತೆ ಪ್ರಥಮ ಮಹಿಳೆ ಡಾ. ಜಿಲ್ ಬೈಡನ್‌ಗೆ.
ಅದೆಲ್ಲ ಇರಲಿ, ಅಮೆರಿಕದ ಅಧ್ಯಕ್ಷರು ಪ್ರಾಣಿಗಳನ್ನೇಕೆ ಸಾಕುತ್ತಾರೆ? ಶೋಕಿಗೆಂದೇ? ಪ್ರತಿಷ್ಠೆಗೆಂದೇ? ಸಂಪ್ರದಾಯವೆಂದೇ? ಅಲ್ಲ! ಅಮೆರಿಕದ ಪ್ರೆಸಿಡೆಂಟ್ ಅಂತ ನಾವು ನೀವೆಲ್ಲ ದೂರದಿಂದ ನೋಡಿ ಅಬ್ಬಾ ಎಂದುಕೊಳ್ಳುತ್ತೇವೆ. ಆದರೆ ಆ ಪೀಠದ ಜವಾಬ್ದಾರಿ, ಲೋಕವೆಲ್ಲ ತನ್ನತ್ತ ನೋಡುತ್ತಿದೆ ಎಂಬ ಅರಿವು, ಒಂದು ರೀತಿಯ ಮಾನಸಿಕ ಒತ್ತಡ ಅಧ್ಯಕ್ಷ ನಾದವನಿಗಷ್ಟೇ
ಗೊತ್ತು. ಮುದ್ದಾದ ಸಾಕುಪ್ರಾಣಿಗಳೊಂದಿಗೆ ಒಡನಾಟ ಈ ಒತ್ತಡಗಳನ್ನೆಲ್ಲ ಸಡಿಲಿಸುತ್ತದೆ. ರಾಷ್ಟ್ರಾಧ್ಯಕ್ಷ ನಾದರೂ ತಾನೊಬ್ಬ
ಸಾಮಾನ್ಯಪ್ರಜೆ ಎಂಬ ಪ್ರಜ್ಞೆಯನ್ನು ಜಾಗ್ರತಗೊಳಿಸುತ್ತದೆ.
ಮಾನವೀಯ ಸಂಬಂಧಗಳಲ್ಲಿನ ಆರ್ದ್ರತೆಯೆಲ್ಲ ಇಂಗಿ ಹೋಗಿ ಬೆಂಗಾಡಾಗಿರುವ ಬದುಕಿಗೆ ಸಂತಸದ ಹನಿಗಳ ಸಿಂಪಡಣೆ
ಸಾಧ್ಯವಿದ್ದರೆ ಅದು ಮೂಕಪ್ರಾಣಿ ಗಳಿಂದ ಮಾತ್ರ. ಅದೇ ಕಾರಣಕ್ಕೆ ಹೆಚ್ಚೂಕಡಿಮೆ ಇದುವರೆಗಿನ ಅಧ್ಯಕ್ಷರುಗಳೆಲ್ಲ ಒಂದಲ್ಲ ಒಂದು ಪ್ರಾಣಿ/ಪಕ್ಷಿಯನ್ನು ಸಾಕಿಕೊಂಡು ಬಂದಿರುವ ಬಗ್ಗೆ ಚರಿತ್ರೆಯ ಪುಟಗಳು ತಿಳಿಸುತ್ತವೆ. ಮೀನು, ಆಮೆ, ಗಿಳಿ, ಹಲ್ಲಿ, ಹದ್ದು, ಹಾವು, ಮೊಲ, ಮಂಗ, ಮೊಸಳೆ, ನಾಯಿ, ಬೆಕ್ಕು, ಕತ್ತೆ, ಕುದುರೆ… ಪಟ್ಟಿ ಮಾಡಿದರೆ ಪ್ರಾಣಿಸಂಗ್ರಹಾಲಯದಲ್ಲಿ ಹಾಜರಿ ಕರೆದಂತೆ ಆಗಬಹುದು!
ಬರಾಕ್ ಒಬಾಮ ಅಧ್ಯಕ್ಷನಾಗಿದ್ದಾಗ ಪೋರ್ಚುಗೀಸ್ ವಾಟರ್‌ಡಾಗ್ ತಳಿಯ ಎರಡು ನಾಯಿಗಳು ಶ್ವೇತಭವನದಲ್ಲಿದ್ದವು. ‘ಬೋ’ ಮತ್ತು ‘ಸನ್ನಿ’ ಎಂದು ಅವುಗಳ ಹೆಸರು. ಮೊದಲನೆಯದನ್ನು ಸೆನೇಟರನೊಬ್ಬ ಒಬಾಮಗೆ ಉಡುಗೊರೆ ಯಾಗಿ ಕೊಟ್ಟದ್ದು, ಎರಡನೆಯದನ್ನು ಡಾಗ್ – ಬ್ರೀಡರರೊಬ್ಬರಿಂದ ಖರೀದಿಸಿದ್ದು. ಆಡಲಿಕ್ಕೆ ನಾಯಿಮರಿ ಬೇಕೇಬೇಕು ಎಂದು ಒಬಾಮನ ಹೆಣ್ಮಕ್ಕಳಿಬ್ಬರೂ ಹಠ ಹಿಡಿದಿದ್ದರಿಂದಲೇ ಈ ನಾಯಿಗಳು ‘ಫಸ್ಟ್ ಪೆಟ್ಸ್’ ಆದದ್ದಂತೆ.
ಒಬಾಮನಿಗಿಂತ ಮೊದಲು ಅಧ್ಯಕ್ಷನಾಗಿದ್ದವನು ಜಾರ್ಜ್ ಡಬ್ಲ್ಯು ಬುಷ್. ಆತನ ತಂದೆ ಜಾರ್ಜ್ ಎಚ್.ಡಬ್ಲ್ಯು ಬುಷ್ ಸಹ ಪ್ರೆಸಿಡೆಂಟ್ ಆಗಿದ್ದವನೇ. ತಂದೆಯ ಕಾಲದಲ್ಲಿ ‘ಮಿಲ್ಲಿ’ ಎಂಬ ಹೆಣ್ಣುನಾಯಿ ಶ್ವೇತಭವನ ದಲ್ಲಿತ್ತು. ಆಗಲೇ ಅದು ‘ಸ್ಪಾಟಿ’ ಎಂಬ ಮರಿಗೆ ಜನ್ಮವಿತ್ತಿತು. ಮುಂದೆ ಮಗನ ಕಾಲದಲ್ಲಿಯೂ ಸ್ಪಾಟಿ ಮತ್ತೊಮ್ಮೆ ಫಸ್ಟ್ ಪೆಟ್ ಎನಿಸಿಕೊಂಡಿತು. ಇಬ್ಬರು ಪ್ರೆಸಿಡೆಂಟರ ಪೆಟ್ ಎಂಬ ಗೌರವ ಪಡೆದ ಏಕೈಕ ನಾಯಿ ಅದು!
ಮಗ ಬುಷ್‌ನ ಬಳಿ ಸ್ಕಾಟಿಷ್ ಟೆರಿಯರ್ ತಳಿಯ ಬಾರ್ನಿ ಮತ್ತು ಬೆಜ್ಲಿ ಎಂಬ ಇನ್ನೂ ಎರಡು ನಾಯಿಗಳಿದ್ದವು. ಮಾತ್ರವಲ್ಲ, ಇಂಡಿಯಾ ಎಂಬ ಹೆಸರಿನ ಒಂದು ಬೆಕ್ಕು ಕೂಡ ಇತ್ತು. ಅಮೆರಿಕದ ಅಧ್ಯಕ್ಷ ತನ್ನ ಬೆಕ್ಕಿಗೆ ಇಂಡಿಯಾ ಎಂದು ಹೆಸರನ್ನಿಟ್ಟು ನಮ್ಮ ದೇಶಕ್ಕೆ ಅವಹೇಳನ ಮಾಡುತ್ತಿದ್ದಾನೆ ಎಂದು ಆಗ ಕೇರಳದಲ್ಲಿ ಕೆಲವರು ಬುಷ್‌ನ ಪ್ರತಿಕೃತಿ ಸುಟ್ಟು ಪ್ರತಿಭಟನೆ ನಡೆಸಿದ್ದೂ ಸುದ್ದಿಯಾಗಿತ್ತು. ಮತ್ತೆ ನೋಡಿದರೆ ಬೆಕ್ಕಿನ ಹೆಸರು ಇಂಡಿಯಾ ಅಂತಿದ್ದದ್ದು ಭಾರತ ದೇಶದ ಹೆಸರಿನಿಂದಲ್ಲ.
ಟೆಕ್ಸಸ್‌ನಲ್ಲೊಬ್ಬ ರುಬೆನಾ ಸಿಯೆರ್ರಾ ಎಂಬ ಹೆಸರಿನ ಬೇಸ್‌ಬಾಲ್ ಆಟಗಾರನಿದ್ದ.
ಜನರು ಅವನನ್ನು ‘ಇಂಡ್ಯೊ’ ಅಂತ ಪ್ರೀತಿಯಿಂದ ಕರೆಯುತ್ತಿದ್ದರು. ಪಕ್ಕಾ ಟೆಕ್ಸಸಿಗ ಬುಷ್ ಮಹಾಶಯ ಆ ಆಟಗಾರನ ಹೆಸರನ್ನೇ ತನ್ನ ಬೆಕ್ಕಿಗೆ ಇಟ್ಟಿದ್ದನು. ಮೂರು ವರ್ಷಗಳ ಹಿಂದೆ ಹಿರಿಯ ಬುಷ್ ತೀರಿಕೊಂಡಾಗ ಆತನ ಸರ್ವಿಸ್ ಡಾಗ್
(ಅಧ್ಯಕ್ಷಗಿರಿಯ ಬಳಿಕ ಮುಪ್ಪಿನಲ್ಲಿ ಸಂಗಾತಿ ಯಾಗಿ ಇದ್ದದ್ದು, ಶ್ವೇತಭವನದಲ್ಲಿದ್ದ ಸಾಕುಪ್ರಾಣಿ ಅಲ್ಲ) ‘ಸಲ್ಲಿ’ ತನ್ನೊಡೆಯನ
ಮೃತದೇಹವನ್ನಿಟ್ಟಿದ್ದ ಕ್ಯಾಸ್ಕೇಟ್‌ನ ಬಳಿ ಮ್ಲಾನವದನವಾಗಿ ಮಲಗಿದ್ದ ಫೋಟೊ ಮನಕಲಕುವಂತಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿತ್ತು. ಬಿಲ್ ಕ್ಲಿಂಟನ್ ಆಡಳಿತಾವಧಿಯಲ್ಲಿ ಶ್ವೇತಭವನದಲ್ಲಿದ್ದ ಸಾಕುಪ್ರಾಣಿ ಗಳು ‘ಸಾಕ್ಸ್’ ಎಂಬ ಬೆಕ್ಕು ಮತ್ತು ‘ಬುಡ್ಡಿ’ ಎಂಬ ನಾಯಿ. ಅವುಗಳ ಸ್ನೇಹಮಯ ಜಗಳ, ಅವುಗಳಿಗೆ ಅಮೆರಿಕದ ಮಕ್ಕಳು ಪ್ರೀತಿ ಯಿಂದ ಬರೆದ ಪತ್ರಗಳನ್ನೆಲ್ಲ ಒಟ್ಟು ಹಾಕಿ ಹಿಲರಿ ಕ್ಲಿಂಟನ್ ಒಂದು ಪುಸ್ತಕವನ್ನೂ ಪ್ರಕಟಿಸಿದ್ದರು. ವ್ಹೈಟ್‌ಹೌಸ್‌ನ ಓವಲ್
ಆಫೀಸ್‌ನಲ್ಲಿ ಅಧ್ಯಕ್ಷರು ಕುಳಿತುಕೊಳ್ಳುವ ಕುರ್ಚಿಯ ಮೇಲೆ ಕ್ಲಿಂಟನ್‌ನ ಬೆಕ್ಕು ರಾಜಮರ್ಜಿಯಲ್ಲಿ ಕುಳಿತುಕೊಂಡ ಒಂದು
ಚಿತ್ರವೂ ಆಗ ಭಾರೀ ಪ್ರಚಾರ ಗಳಿಸಿತ್ತು.
ಒಬ್ಬೊಬ್ಬ ಅಧ್ಯಕ್ಷನ ಒಂದೊಂದು ಸಾಕುಪ್ರಾಣಿಯದೂ ಭಲೇ ಸ್ವಾರಸ್ಯಕರ ಕಥೆಗಳಿವೆ. ಮೊತ್ತಮೊದಲ ಅಧ್ಯಕ್ಷ ಜಾರ್ಜ್
ವಾಷಿಂಗ್ಟನ್‌ನ ಬಳಿ ದೊಡ್ಡದೊಂದು ಕುದುರೆಲಾಯವೇ ಇತ್ತಂತೆ. ಕುದುರೆಗಳ ಹಲ್ಲುಗಳನ್ನು ಉಜ್ಜಲಿಕ್ಕೆಂದೇ ಕೆಲಸದಾಳು ಗಳಿದ್ದರಂತೆ. ಜಾನ್ ಆಡಮ್ಸ್ ಅಧ್ಯಕ್ಷನಾಗಿದ್ದಾಗ ರೇಷ್ಮೆಹುಳ ಸಾಕಿದ್ದನಂತೆ. ಅವನ ಹೆಂಡತಿ ತೊಡುತ್ತಿದ್ದ ಗೌನ್ ಅದೇ ರೇಷ್ಮೆಯಿಂದ ಮಾಡಿದ್ದಾಗಿರುತ್ತಿತ್ತಂತೆ. ಆಂಡ್ರೂ ಜಾಕ್ಸನ್ ಒಂದು ಜತೆ ಇಲಿಗಳನ್ನು ಸಾಕಿದ್ದನು.
ವಿಲಿಯಂ ಟಫ್ಟ್ ಅಧ್ಯಕ್ಷ ನಾಗಿದ್ದಾಗ ಅವನ ಬಳಿ ಒಂದು ಆಕಳು ಇತ್ತಂತೆ, ದೇಶದ ಪ್ರಥಮ ಕುಟುಂಬಕ್ಕೆ ಹಾಲು ಪೂರೈಸುವ ಕಾಮಧೇನು ವಾಗಿತ್ತದು. ಅಬ್ರಹಾಂ ಲಿಂಕನ್ ಬಳಿ ನ್ಯಾನಿ ಮತ್ತು ನಾಂಕೊ ಹೆಸರಿನ ಎರಡು ಮೇಕೆಗಳಿದ್ದುವು. ಕೆಲ್ವಿನ್ ಕೂಲಿಡ್ಜ್ ಬಳಿಯಿದ್ದ ಕತ್ತೆ ಮತ್ತು ಕೊಕ್ಕರೆಗಳು ಒಂದು ಬ್ರಾಡ್‌ವೇ ಪ್ರದರ್ಶನದಲ್ಲೂ ಕಾಣಿಸಿಕೊಂಡಿದ್ದವಂತೆ. ಜೇಮ್ಸ್ ಮ್ಯಾಡಿಸನ್ ಸಾಕಿದ್ದ ಆಡು ಅವನ ಜತೆಗೆ ತಾನೂ ತಂಬಾಕು ಜಗಿಯುತ್ತಿತ್ತಂತೆ. ಕೆಲವೊಮ್ಮೆ ಈ ಜೀವಜಂತುಗಳು ಅಧ್ಯಕ್ಷೀಯ ಗಾಂಭೀರ್ಯಕ್ಕೆ ಭಂಗ ತಂದು ಪೇಚಿನ ಪ್ರಸಂಗಗಳನ್ನು ಸೃಷ್ಟಿಸಿದ್ದೂ ಇದೆ.
ಥಿಯೊಡರ್ ರೂಸ್ ವೆಲ್ಟ್ ಅಧ್ಯಕ್ಷನಾಗಿದ್ದಾಗ ಅವನ ಚಿಕ್ಕ ಮಗ ನಾಲ್ಕು ಹಾವುಗಳನ್ನು ಸಾಕಿದ್ದ. ರೂಸ್‌ವೆಲ್ಟ್ ಯಾವುದೋ ಕ್ಯಾಬಿನೆಟ್ ಚರ್ಚೆಯಲ್ಲಿ ತೊಡಗಿದ್ದಾಗ ಮಗ ಬಂದು ಮೇಜಿನಮೇಲೆ ಹಾವುಗಳನ್ನು ಬಿಟ್ಟ. ಅಲ್ಲಿದ್ದ ಶಾಸಕರೆಲ್ಲ ಗಾಬರಿಯಿಂದ ಓಡಬೇಕಾಯ್ತು. ಲಿಂಡನ್ ಜಾನ್ಸನ್‌ನಿಗೆ ತನ್ನ ನಾಯಿಯ ಕಿವಿ ಹಿಡಿದು ಎಳೆದುಕೊಂಡು ಹೋಗುವ ಅಭ್ಯಾಸವಿತ್ತು. ಆತ ಪ್ರಾಣಿ ದಯಾಸಂಘದವರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು.
ಬೆಂಜಮಿನ್ ಹ್ಯಾರಿಸನ್ ಸಾಕಿದ್ದ ಆಡು ಒಮ್ಮೆ ಶ್ವೇತಭವನದ ಬೇಲಿಯನ್ನು ಹಾರಿ ಎದುರಿನ ರಸ್ತೆಯಲ್ಲಿ ಎರ್ರಾಬಿರ್ರಿ ಓಡತೊಡ ಗಿತು, ಆಗ ಸ್ವತಃ ಅಧ್ಯಕ್ಷನೇ ಕೈಯಲ್ಲಿ ಬಾರುಕೋಲು ಹಿಡಿದುಕೊಂಡು ರಸ್ತೆಯ ಮೇಲೆ ಓಡಿ ಅದನ್ನು ಹಿಡಿಯಬೇಕಾಗಿ ಬಂದ ತಮಾಷೆ ನಡೆಯಿತು. ಬ್ರಹ್ಮಚಾರಿಯಾಗಿದ್ದ ಜೇಮ್ಸ್ ಬಕ್ನನ್‌ನಿಗೆ ಥೈಲ್ಯಾಂಡ್‌ನ ರಾಜನು ಏಳೆಂಟು ಆನೆಗಳ ಹಿಂಡನ್ನೇ ಉಡುಗೊರೆಯಾಗಿ ಕೊಟ್ಟಿದ್ದನು.
ಬಕ್ನನ್ ಡೆಮೊಕ್ರಾಟಿಕ್ ಪಕ್ಷದವನು (ಅವರ ಚುನಾವಣಾ ಚಿಹ್ನೆ ಕತ್ತೆ; ವಿರೋಧಿಗಳಾದ ರಿಪಬ್ಲಿಕನ್ ಪಾರ್ಟಿಯ ಚಿಹ್ನೆ ಆನೆ).
ಮುಜುಗರ ತಪ್ಪಿಸಲಿಕ್ಕೆ ಬಕ್ನನ್ ಆ ಆನೆಗಳನ್ನು ವಾಷಿಂಗ್ಟನ್‌ನ ಪ್ರಾಣಿಸಂಗ್ರಹಾಲಯಕ್ಕೆ ದಾನ ಮಾಡಿಬಿಟ್ಟನು. ಥಾಮಸ್
ಜೆಫರ್ಸನ್‌ಗೆ ಲೆವಿಸ್ ಕಂಪೆನಿಯಿಂದ ಎರಡು ಕರಡಿಮರಿಗಳು, ಜಾನ್ ಆಡಮ್ಸ್‌ಗೆ ಫ್ರೆಂಚ್ ಯೋಧನೊಬ್ಬನಿಂದ ಒಂದು ಮೊಸಳೆ
ಗಿಫ್ಟ್ ರೂಪದಲ್ಲಿ ಬಂದಿದ್ದರೆ ವ್ಯಾನ್ ಬ್ಯೂರನ್‌ಗೆ ಸೌದಿಸುಲ್ತಾನ ಕೊಟ್ಟ ಉಡುಗೊರೆ ಎರಡು ಹುಲಿ ಮರಿಗಳು! ಅವೆಲ್ಲ
ಶ್ವೇತಭವನ ದಿಂದ ಕೂಡಲೆ ಝೂ ಗಾರ್ಡನ್‌ಗೆ ವರ್ಗಾವಣೆ ಯಾಗುತ್ತಿದ್ದವೆನ್ನಿ.
ಒಟ್ಟಿನಲ್ಲಿ, ಅಮೆರಿಕದ ಅಧ್ಯಕ್ಷನಿಗೆ ತಾನೊಬ್ಬ ಸಾಮಾನ್ಯ ಮನುಷ್ಯರಂತೆಯೇ ಅಂತನ್ನಿಸುವುದು, ಸಾಮಾನ್ಯ ಮನುಷ್ಯರಿಗೆ
ಅಮೆರಿಕದ ಅಧ್ಯಕ್ಷನೂ ನಮ್ಮಂತೆಯೇ ಅಂತನ್ನಿಸುವುದು ಈ ಪ್ರಾಣಿಪಕ್ಷಿಗಳ ದೆಸೆಯಿಂದಲೇ. ಹೊಸ ಸೇರ್ಪಡೆಯಾದ ಎರಡು
ಬೌಬೌಗಳೂ, ಬರಲಿರುವ ಮ್ಯಾಂವ್ ಮ್ಯಾಂವ್ ಕೂಡ ಇದಕ್ಕೆ ಭಿನ್ನವೇನಲ್ಲ