ಮೂರ್ತಿಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಹಲ ಕಾಲದಿಂದ ನನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಮುಗಿಸಿ ಸಿಎಂ ಯಡಿಯೂರಪ್ಪ ತತ್ಕಾಲಕ್ಕೆ ಸೈ ಅನ್ನಿಸಿಕೊಂಡಿ ದ್ದೇನೋ ನಿಜ. ಆದರೀಗ ಖಾತೆಗಳ ಹಂಚಿಕೆ ವಿಷಯದಲ್ಲಿ ಅವರ ಅಕ್ಕ – ಪಕ್ಕ ಅನುಮಾನಾಸ್ಪದ ಕೈಗಳು ಕಾಣತೊಡಗಿವೆ.
ಅಂದ ಹಾಗೆ ಬೇರೆ ಪಕ್ಷಗಳಿಂದ ವಲಸೆ ಬಂದವರಿಗೆ ಹೆಚ್ಚಿನ ಅವಕಾಶ ಮಾಡಿಕೊಡುವ ಅನಿವಾರ್ಯತೆಗೆ ಸಿಲುಕಿದ
ಯಡಿಯೂರಪ್ಪ ಇದ್ದುದರಲ್ಲಿಯೇ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಆದರೆ ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯ ನಂತರ
ಸಚಿವರಿಗೆ ಅವರು ಖಾತೆಗಳನ್ನು ಹಂಚಿದರಲ್ಲ? ಇದಾದ ನಂತರ ಅವರನ್ನು ಕಂಡರೆ ಮನಸ್ಸು ಕಹಿ ಮಾಡಿಕೊಳ್ಳುವ ಸಚಿವರ ಸಂಖ್ಯೆ ಹೆಚ್ಚಾಗಿದೆ.
ಮಂತ್ರಿಗಿರಿ ಸಿಗಲಿಲ್ಲ ಎಂದು ಅಸಮಾಧಾನಗೊಳ್ಳುವವರು ಯಾವಾಗಲೂ ಇದ್ದೇ ಇರುತ್ತಾರೆ. ಆದರೆ ಖಾತೆಗಳ ಹಂಚಿಕೆ
ಸರಿಯಾಗಲಿಲ್ಲ ಎಂದು ನೋವು ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ. ಆದರೆ ಈ ಸಲ ಖಾತೆಗಳ ವಿಷಯದಲ್ಲಿ ಅಸಮಾಧಾನಿತ
ರಾದವರ ಪಡೆ ದೊಡ್ಡದಿದೆ. ಈ ಪೈಕಿ ಸಚಿವ ಸುಧಾಕರ್ ಅವರನ್ನೇ ತೆಗೆದುಕೊಳ್ಳಿ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಸುಧಾಕರ್ ಅವರ ಕೈಯಿಂದ ಈಗ ವೈದ್ಯಕೀಯ ಶಿಕ್ಷಣವನ್ನು ಕಿತ್ತುಕೊಳ್ಳಲಾಗಿದೆ.
ವಸ್ತುಸ್ಥಿತಿ ಎಂದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಬಹಳ ಚೆನ್ನಾಗಿಯೇ ನಡೆಸುತ್ತಿದ್ದರು. ಕೋವಿಡ್ ಕಾಲಘಟ್ಟದಲ್ಲಂತೂ ಅವರ ಕಾರ್ಯ ವೈಖರಿಯನ್ನು ಖುದ್ದು ಮೋದಿ – ಅಮಿತ್ ಶಾ ಜೋಡಿಯೇ ಶ್ಲಾಘಿಸಿತ್ತು.
ಎಸ್.ಎಂ. ಕೃಷ್ಣ ಮತ್ತು ಸಿದ್ಧರಾಮಯ್ಯ ಅವರನ್ನು ಬ್ಲೆಂಡ್ ಮಾಡಿದರೆ ಸೃಷ್ಟಿಯಾಗಬಹುದಾದ ನಾಯಕರಂತೆ ಕಾಣುತ್ತಿದ್ದ
ಸುಧಾಕರ್ ತಮ್ಮ ಕಾರ್ಯವೈಖರಿಯಿಂದ ಬಿಜೆಪಿಯ ಪ್ರಮುಖ ಒಕ್ಕಲಿಗ ನಾಯಕರಾಗಿ ಹೊರಹೊಮ್ಮತೊಡಗಿದ್ದರು.
ಅಂಥವರ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಕಿತ್ತುಕೊಳ್ಳಲಾಗಿದೆ ಎಂಬುದರ ಅರ್ಥ ಬೇರೇನೂ ಅಲ್ಲ.
ಅವರ ನಾಯಕತ್ವದ ಏಳ್ಗೆಯನ್ನು ಬಯಸದವರು ಆಟ ಆಡಿದ್ಧಾರೆ ಎಂದೇ ಅರ್ಥ. ಅಂದ ಹಾಗೆ ಸುಧಾಕರ್ ಅವರ ಶಕ್ತಿಯನ್ನು ಕುಗ್ಗಿಸಿದರೆ ಒಕ್ಕಲಿಗ ನಾಯಕತ್ವದ ವಿಷಯದಲ್ಲಿ ಯಾರಿಗೆ ಲಾಭ?ಎಂಬುದು ರಹಸ್ಯವಲ್ಲ. ಇರಲಿ, ಈಗ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರ ಕೈಯಿಂದ ಕಿತ್ತುಕೊಂಡಿದ್ದರ ಪರಿಣಾಮ ವೇನು? ಇದುವರೆಗೂ ಕೋವಿಡ್ ವಿರುದ್ಧ ಪರಿಣಾಮಕಾರಿಯಾಗಿ ನಡೆಯುತ್ತಿದ್ದ ಹೋರಾಟಕ್ಕೆ ಬ್ರೇಕ್ ಬೀಳುತ್ತದೆ.
ಯಾಕೆಂದರೆ ಕೋವಿಡ್ ಸೇರಿದಂತೆ ಹಲವು ವಿಷಯಗಳಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಒಟ್ಟಿಗಿದ್ದರೆ ಹೊಂದಾಣಿಕೆ ಸುಲಭ. ಇಲ್ಲದಿದ್ದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಆಸ್ಪತ್ರೆಗಳ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮಧ್ಯೆ ಹೊಂದಾಣಿಕೆ ಕಷ್ಟ. ಇದುವರೆಗೆ ಯಾವ ಕೆಲಸವನ್ನು ಸುಧಾಕರ್ ನಿರಾಯಾಸವಾಗಿ ಮಾಡುತ್ತಿದ್ದರೋ, ಅದಕ್ಕಾಗಿ ಇನ್ನು ಮುಂದೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಪಡೆದಿರುವ ಜೆ.ಸಿ. ಮಾಧುಸ್ವಾಮಿ ಅವರ ಸಹಕಾರದೊಂದಿಗೆ ಮಾಡಬೇಕಾಗುತ್ತದೆ.
ಆದರೆ ರಾಜಕಾರಣದಲ್ಲಿ ಮಾಧುಸ್ವಾಮಿ ಅವರು ಸುಧಾಕರ್ ಅವರಿಗಿಂತ ಹಿರಿಯರು. ಹೀಗಾಗಿ ಸುಧಾಕರ್ ಬಯಸಿದಂತೆ ಅವರು ನಡೆದುಕೊಳ್ಳುವುದು ಕಷ್ಟ. ಪರಿಣಾಮ? ಮುಂದಿನ ದಿನಗಳಲ್ಲಿ ಸುಧಾಕರ್ ಅವರು ಕಠಿಣ ದಿನಗಳನ್ನು ಎದುರಿಸಬೇಕಾಗುತ್ತದೆ.
ಫೆಬ್ರವರಿ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ಕರ್ನಾಟಕಕ್ಕೆ ಅಪ್ಪಳಿಸಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಆದರೆ ಸದ್ಯದ ಬೆಳವಣಿಗೆಯಿಂದ ಅದು ಕಷ್ಟ ಅನ್ನಿಸತೊಡಗಿದೆ.
ಹಾಗಾಗಲಿ, ಸುಧಾಕರ್ ಅವರಿಗೆ ಅಸಮರ್ಥ ಎಂಬ ಹಣೆಪಟ್ಟಿ ತಗುಲಿಕೊಳ್ಳಲಿ ಎಂಬುದು ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರ ಲೆಫ್ಟ್ ಹ್ಯಾಂಡ್ ಆಗಿರುವ ನಾಯಕರೊಬ್ಬರ ಆಸೆ. ಇನ್ನು ಅರವಿಂದ ಲಿಂಬಾವಳಿ ಅವರ ವಿಷಯಕ್ಕೇ ಬನ್ನಿ. ಅವರಿಗೆ ಅರಣ್ಯ ಖಾತೆಯನ್ನು ನೀಡಲಾಗಿದೆ. ಆದರೆ ಸಾಮಾನ್ಯವಾಗಿ ಅರಣ್ಯ ಖಾತೆಯನ್ನು ಪಡೆದವರಿಗೆ ಪರಿಸರ,
ಜೀವಿಶಾಸ ಇಲಾಖೆಗಳನ್ನು ಸೇರಿಸಿಕೊಡುವುದು ಸಂಪ್ರದಾಯ. ಆದರೆ ಈ ವಿಷಯದಲ್ಲಿ ಅರವಿಂದ ಲಿಂಬಾವಳಿ ಅವರ ಕೈ ಕಟ್ ಮಾಡಲಾಗಿದೆ. ಇದಕ್ಕೆ ಒಂದು ಕಾರಣವೂ ಇದೆ.
ಅದೆಂದರೆ: ಕೆಲ ತಿಂಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದಿದ್ದ ಸಭೆಯೊಂದರಲ್ಲಿ ಪರಿಸರ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಅರವಿಂದ ಲಿಂಬಾವಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವತ್ತು ತುಂಬಿದ ಸಭೆಯಲ್ಲಿ ಪರಿಸರ ಇಲಾಖೆಯ ಉನ್ನತ ಅಧಿಕಾರಿಯೊಬ್ಬರಿಗೆ ಅಮರಿಕೊಂಡಿದ್ದ ಅರವಿಂದ ಲಿಂಬಾವಳಿ ‘ರೀ, ನಿಮ್ಮ ಪರಿಸರ ಇಲಾಖೆಯಲ್ಲಿ ಸಾವಿರಾರು ಫೈಲುಗಳು ಪೆಂಡಿಂಗ್ ಆಗಿವೆ. ಆ ಎಲ್ಲ ಫೈಲುಗಳ ಬಗ್ಗೆ ಬೇಡ. ಆದರೆ ನಿಮ್ಮ ಬಳಿ ಇರುವ ಫೈಲುಗಳ ಪೈಕಿ ನಾಲ್ಕೇ ನಾಲ್ಕು ಫೈಲುಗಳ ಬಗ್ಗೆ ನಾನು ಮಾತನಾಡಲಾ?’ಎಂದಿದ್ದರು.
ನೀವು ಯಾವ ರೀತಿ ಕಾರ್ಖಾನೆಗಳ ಮಾಲೀಕರಿಗೆ, ಕಟ್ಟಡ ಮಾಲೀಕರಿಗೆ ಪರಿಸರ ಇಲಾಖೆಯ ಕಿರಿಕಿರಿ ತಗಲುವಂತೆ ಮಾಡುತ್ತೀರಿ ಎಂಬುದು ನನಗೆ ಗೊತ್ತು. ಹೀಗೆ ಕಿರಿಕಿರಿ ಮಾಡಿ, ನೋಟೀಸು ಕೊಟ್ಟು. ಕೊನೆಗೆ ಎಲ್ಲಿ ಸರಿ ಮಾಡಿಕೊಳ್ಳುತ್ತೀರಿ ಎಂಬುದು ನನಗೆ ಗೊತ್ತಿಲ್ಲದ ವಿಷಯವೇನಲ್ಲ ಎಂದಾಗ ಪರಿಸರ ಇಲಾಖೆಯ ಆ ಅಧಿಕಾರಿ ಸುಸ್ತಾಗಿ ಹೋಗಿದ್ದರು. ಹೀಗೆ ಪರಿಸರ ಇಲಾಖೆಯ ಆಳ – ಅಗಲ ಬಲ್ಲ ಅರವಿಂದ ಲಿಂಬಾವಳಿ ಅವರ ಕೈಗೆ ಅದೇ ಇಲಾಖೆಯನ್ನು ಕೊಟ್ಟರೆ ಏನಾಗುತ್ತದೆ? ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ರೈಟ್ ಹ್ಯಾಂಡು ಅನ್ನಿಸಿಕೊಂಡ ಯುವ ನಾಯಕರೊಬ್ಬರಿಗೆ ಗೊತ್ತಿತ್ತು. ಹೀಗಾಗಿ ಲಿಂಬಾವಳಿ ಕೈಗೆ ಪರಿಸರ ಇಲಾಖೆ ಹೋಗದಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.
ಈಗ ಲಿಂಬಾವಳಿ ಅವರಿಗೆ ಅರಣ್ಯದ ಜತೆ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಸೇರಿಸಿ ಸಮಾಧಾನಿಸುವ ಯತ್ನ ಮಾಡಲಾಗಿದೆ. ಆದರೆ ಒಂದು ಕಡೆ ಅರಣ್ಯ ನೋಡಿಕೊಂಡು ಮತ್ತೊಂದು ಕಡೆ ಕನ್ನಡ ಮತ್ತು ಸಂಸ್ಕೃತಿಯನ್ನು ನಿಭಾಯಿಸುವ ಅನಿವಾರ್ಯತೆಗೆ ಅವರು ಸಿಲುಕಿದ್ಧಾರೆ.
ಇದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ನೋಡಿಕೊಳ್ಳುತ್ತಿದ್ದ ಕೆ. ಗೋಪಾಲಯ್ಯ ಅವರ ಕೈಯಿಂದ ಆ ಖಾತೆಯನ್ನು ಕಿತ್ತುಕೊಳ್ಳಲಾಯಿತು. ಇದಕ್ಕಿದ್ದ ಮುಖ್ಯ ಕಾರಣ ಗೋಪಾಲಯ್ಯ ಅವರು ರಾಜಧಾನಿ ಬೆಂಗಳೂರಿನಲ್ಲಿ ಪವರ್ ಫುಲ್ ಆಗಬಾರದು ಎಂಬುದು. ಯಾರೇನೇ ಹೇಳಲಿ, ಆಹಾರ ಸಚಿವರಾಗಿ ಕೆ.ಗೋಪಾಲಯ್ಯ ಸಮರ್ಥವಾಗಿ ಕೆಲಸ ಮಾಡುತ್ತಿದ್ದರು.
ಕರೋನಾ ಕಾಲಘಟ್ಟದಲ್ಲಂತೂ ತಮ್ಮ ಇಲಾಖೆ ಬಡ, ಮಧ್ಯಮ ವರ್ಗದ ಪಾಲಿಗೆ ಶಕ್ತಿಯಾಗುವಂತೆ ನೋಡಿಕೊಂಡಿದ್ದರು. ಆಹಾರ ಇಲಾಖೆಯನ್ನು ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಗೋಪಾಲಯ ಕೇಂದ್ರ ಸರಕಾರದಿಂದ ರಾಜ್ಯ ಪಡೆಯ ಬಹುದಾದ ಅನುಕೂಲಗಳನ್ನು ಸಮರ್ಪಕವಾಗಿ ಪಡೆದು ಬಡ, ಮಧ್ಯಮ ವರ್ಗಕ್ಕೆ ಭರವಸೆ ತುಂಬಿದ್ದರು. ಇತ್ತೀಚಿನ ವರ್ಷ ಗಳಲ್ಲಿ ವಿವಾದಗಳನ್ನು ಸೃಷ್ಟಿಸಿಕೊಳ್ಳದ ಆಹಾರ ಸಚಿವರಿದ್ದರೆ ನಂಬರ್ ಒನ್ ಸ್ಥಾನ ಗೋಪಾಲಯ್ಯ ಅವರಿಗೆ ಹೋಗಬೇಕು. ತಮ್ಮ ಪಾಡಿಗೆ ತಾವು ಎಂಬಂತೆ ಕೆಲಸ ಮಾಡಿಕೊಂಡಿದ್ದ ಗೋಪಾಲಯ್ಯ ಅವರಿಗೆ ಖಾತೆ ಬದಲಾವಣೆ ಮಾಡಿದ ನಂತರ ತೋಟಗಾರಿಕೆ ಖಾತೆಯನ್ನು ಕೊಡಲಾಗಿತ್ತು.
ಈಗ ಅದನ್ನು ಬದಲಿಸಿ ಅಬಕಾರಿ ಖಾತೆಯನ್ನು ನೀಡಲಾಗಿದೆ. ಗೋಪಾಲಯ್ಯ ಅವರ ಕಾರ್ಯವೈಖರಿಗೆ ಆಹಾರ ಖಾತೆ ಪ್ಲಸ್ ಆಗಿತ್ತು. ಆದರೆ ಈ ಅಬಕಾರಿ ಖಾತೆಯನ್ನು ಇಟ್ಟುಕೊಂಡು ಏನು ಮಾಡಲಿ? ಎಂದು ಗೋಪಾಲಯ್ಯ ಆಪ್ತರೆದುರು ಪೇಚಾಡಿ ಕೊಳ್ಳುತ್ತಿದ್ದಾರೆ. ಮೊನ್ನೆ, ಮೊನ್ನೆಯ ತನಕ ಪೌರಾಡಳಿತ, ತೋಟಗಾರಿಕೆ ಖಾತೆಯನ್ನು ನೋಡಿಕೊಳ್ಳುತ್ತಿದ್ದ ನಾರಾಯಣ ಗೌಡರು ಕೆಲಸಕ್ಕೆ ಒತ್ತುಕೊಟ್ಟವರೇ ಹೊರತು ಪ್ರಚಾರಕ್ಕಲ್ಲ. ಖಾತೆ ಯನ್ನು ಪರಿಣಾಮಕಾರಿಯಾಗಿ ನೋಡಿ ಕೊಳ್ಳುತ್ತಿದ್ದ ಅವರಿಗೀಗ ಕ್ರೀಡೆ, ಯುವಜನ ಸಬಲೀಕರಣ ಖಾತೆಯನ್ನು ನೀಡಲಾಗಿದೆ. ಈ ಬದಲಾವಣೆ ಅವರಿಗೆ ಪಥ್ಯವಾಗಿಲ್ಲ.
ಇಲಾಖೆಗಳ ಮೇಲೆ ಇನ್ನೇನು ನಿಯಂತ್ರಣ ಸಿಕ್ಕಿತು ಎಂದುಕೊಳ್ಳುತ್ತಿದ್ದಂತೆಯೇ ಖಾತೆ ಬದಲಾವಣೆ ಮಾಡಿದರೆ ಪುನಃ ಬೇರೆ ಖಾತೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದರ ಕಾಲ ಕಳೆದು ಹೋಗುತ್ತದೆ ಎಂಬುದು ಅವರ ನೋವು. ಇನ್ನು ತಮಗೆ ನೀಡಲಾಗಿರುವ ವೈದ್ಯಕೀಯ ಶಿಕ್ಷಣ ಖಾತೆಯಲ್ಲಿ ಮಾಧುಸ್ವಾಮಿಯವರಿಗೆ ಸೀಮಿತ ಆಸಕ್ತಿ ಇದೆಯೇ ಹೊರತು ಅದಕ್ಕೊಂದು ವಿಸ್ತೃತ ಆಸಕ್ತಿ ಇಲ್ಲ.
ಹಜ್ ಮತ್ತು ವಕ್ ಖಾತೆಯ ವಿಷಯದಲ್ಲಿ ಅವರಿಗೆ ಸೀಮಿತ ಆಸಕ್ತಿಯೂ ಇಲ್ಲ. ಅಂದ ಹಾಗೆ ಅವರಿಂದ ವಾಪಸ್ಸು
ಪಡೆದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ
ಹೆಚ್ಚುವರಿಯಾಗಿ ಕೊಡಲಾಗಿದೆ. ಆ ದೃಷ್ಟಿಯಿಂದ ನೋಡಿದರೆ ಯಡಿಯೂರಪ್ಪ ಅವರ ಸಂಪುಟದಲ್ಲೀಗ ಬಸವರಾಜ
ಬೊಮ್ಮಾಯಿ ಅತ್ಯಂತ ಪವರ್ ಫುಲ್.
ವಾಸ್ತವವಾಗಿ ಅವರೇ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ನಂಬರ್ ಟೂ. ಮೂವರು ಉಪ ಮುಖ್ಯಮಂತ್ರಿಗಳಿದ್ದರೂ ಒಬ್ಬ ಸಚಿವ ನಂಬರ್ ಟೂ ಆಗಿ ಪ್ರತಿಬಿಂಬಿತರಾಗುತ್ತಿರುವುದು ವಿಶೇಷವಲ್ಲದೆ ಮತ್ತೇನು? ಇವತ್ತು ಅವರು ನಂಬರ್ ಟೂ ಆಗಿ ಮಿರಿ ಮಿರಿ ಮಿಂಚುತ್ತಿದ್ದರೆ ಮೂವರು ಉಪಮುಖ್ಯಮಂತ್ರಿಗಳ ಡಮ್ಮಿಗಳಂತೆ ಕಾಣುತ್ತಿದ್ಧಾರೆ. ಇದು ಕೂಡಾ ಯಡಿಯೂರಪ್ಪ ಅವರಿಗೆ ಉಪಮುಖ್ಯಮಂತ್ರಿಗಳ್ಯಾರೂ ಪರ್ಯಾಯ ಶಕ್ತಿ ಕೇಂದ್ರಗಳಲ್ಲ ಎಂದು ತೋರಿಸುವ ಉದ್ದೇಶ.
ಇನ್ನು ಎಂ.ಟಿ.ಬಿ.ನಾಗರಾಜ್ ಅವರ ಗೋಳೂ ಕಡಿಮೆಯದಲ್ಲ. ತಮಗೆ ನೀಡಿದ ಪೌರಾಡಳಿತ ಖಾತೆಯ ಬಗ್ಗೆ ಅವರಿಗೆ ಒಲವಿಲ್ಲ. ಹೀಗೆ ನೋಡುತ್ತಾ ಹೋದರೆ ಯಡಿಯೂರಪ್ಪ ಸಚಿವ ಸಂಪುಟದ ಬಹುತೇಕರು ತಮ್ಮ ಆಸಕ್ತಿಗೆ ವಿರುದ್ಧವಾದ ಖಾತೆಗಳನ್ನು ಪಡೆದುಕೊಂಡಿದ್ದಾರೆ. ಈ ಮಧ್ಯೆ ಮುರುಗೇಶ್ ನಿರಾಣಿ ಅವರ ಬಗ್ಗೆ ಇನ್ನೂ ಯಡಿಯೂರಪ್ಪ ಗ್ಯಾಂಗಿಗೆ ಅನುಮಾನ.
ಮುಖ್ಯಮಂತ್ರಿ ಹುದ್ದೆಯ ಮೇಲೇ ಕಣ್ಣಿಟ್ಟವರು ಅವರು, ಹೀಗಿರುವಾಗ ಪ್ರಬಲ ಖಾತೆಯನ್ನು ನೀಡಿದರೆ ಅದನ್ನವರು ತಮ್ಮ ಉದ್ದೇಶಕ್ಕೆ ಪೂರಕವಾಗಿ ಎನ್ಕ್ಯಾಶ್ ಮಾಡಿಕೊಳ್ಳಬಹುದು ಎಂಬುದು ಅದರ ಶಂಕೆ. ಹೀಗಾಗಿ ಅವರಿಗೆ ಭೂಗರ್ಭ ಮತ್ತು ಗಣಿ ವಿಜ್ಞಾನ ಖಾತೆ ನೀಡಲಾಗಿದೆ. ವಸ್ತುಸ್ಥಿತಿ ಎಂದರೆ ಗಣಿ ಮತ್ತು ಭೂ ಗರ್ಭ ವಿಜ್ಞಾನ ಇಲಾಖೆ ಮುಖ್ಯಮಂತ್ರಿಗಳ ಆಣತಿಯಿಲ್ಲದೆ ಯಾವ ಕೆಲಸ ಮಾಡುವುದಿಲ್ಲ. ನಾಳೆ ಮುರುಗೇಶ್ ನಿರಾಣಿ ಅವರು ಖಾತೆಯಲ್ಲಿ ಏನೇ ಕೆಲಸ ಮಾಡಲಿ, ಅದರ ಇಂಚಿಂಚೂ
ವಿವರವೂ ಮುಖ್ಯಮಂತ್ರಿಗಳಿಗೆ ದಕ್ಕುತ್ತದೆ. ಹೀಗೆ ತಮ್ಮ ನಿಗಾದ ಇರಲಿ ಎಂದು ಮುರುಗೇಶ್ ನಿರಾಣಿ ಅವರಿಗೆ ಈ ಖಾತೆ ನೀಡಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಪಡೆದಿರುವ ಉಮೇಶ್ ಕತ್ತಿ ಕೂಡಾ ಸಮಾಧಾನದಿಂದಲ್ಲ. ವಾಸ್ತವವಾಗಿ ಅವರ ಅನುಭವಕ್ಕೆ ಪೂರಕವಾಗಿ ತಮ್ಮ ಬಳಿ ಇದ್ದ ಪ್ರಬಲ ಖಾತೆಗಳ ಪೈಕಿ ಒಂದನ್ನು ಅವರಿಗೆ ಕೊಡಬಹುದಿತ್ತು. ಶುರುವಿನಲ್ಲಿ ಉಮೇಶ್ ಕತ್ತಿ ಕೂಡಾ ಇದೇ ಮಾತನ್ನು ಮುಖ್ಯಮಂತ್ರಿಗಳಿಗೆ ಹೇಳಿದ್ದರು. ಆದರೆ ಮಂತ್ರಿಗಳಿಗೆ ಖಾತೆ ಹಂಚುವ ಕೆಲಸದ ಹಿಂದೆ ಲೆಫ್ಟ್ ಹ್ಯಾಂಡು, ರೈಟ್ ಹ್ಯಾಂಡುಗಳ ನೆರಳು ಕಂಡ ಮೇಲೆ ಉಮೇಶ್ ಕತ್ತಿ, ನಿಮ್ಮಿಷ್ಟ ಬಂದ ಖಾತೆ ಕೊಡಿ ಎಂದು ನಿರ್ಲಿಪ್ತ ರಾಗಿಬಿಟ್ಟರು.
ಹೀಗೆ ಯಡಿಯೂರಪ್ಪ ಅವರ ಸಂಪುಟದಲ್ಲಿರುವ ಬಹುತೇಕರು ತಮಗೆ ಆಸಕ್ತಿ ಇಲ್ಲದ ಖಾತೆಗಳಿಗೆ ಒಡೆಯ ರಾಗಿದ್ಧಾರೆ. ಇಂಥವರು ಮನಃ ಪೂರ್ವಕವಾಗಿ ಕೆಲಸ ಮಾಡಲು ಹೇಗೆ ಸಾಧ್ಯ? ಅದೇ ರೀತಿ ಕೆಲಸ ಮಾಡುವ ಆಸಕ್ತಿ ಕಳೆದುಕೊಂಡ ಬಹುತೇಕ ರನ್ನು ಅಕ್ಕ – ಪಕ್ಕದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರಕಾರ ಹೇಗೆ ಮುನ್ನಡೆಯುತ್ತದೆ? ಹಿಂದೆಲ್ಲ ಮಂತ್ರಿಗಳಾದವರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಖಾತೆಗಳನ್ನು ಹಂಚುವ ಕೆಲಸ ನಡೆಯುತ್ತಿತ್ತು. ಆದರೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಪಡೆದ ಬಹುತೇಕರಿಗೆ ಖಾತೆ ಒಂದು ಉದ್ಯೋಗವೇ ಹೊರತು ಆಸಕ್ತಿಯ ಹೊಣೆಗಾರಿಕೆ ಅಲ್ಲ.
ಅಂದ ಹಾಗೆ ಮಂತ್ರಿಗಳಾಗುವವರ ಇಚ್ಛೆಯನುಸಾರ ಖಾತೆ ನೀಡಲಾಗುವುದಿಲ್ಲ ಎಂಬುದೇನೋ ನಿಜ. ಆದರೆ ಅವರ ಆಸಕ್ತಿ, ಕೆಲಸ ಮಾಡುವ ಸಾಮರ್ಥ್ಯಕ್ಕೆ ಯಾವ ಖಾತೆ ಒಗ್ಗುತ್ತದೆ ಎಂಬುದನ್ನು ಗುರುತಿಸುವ ಕೆಲಸ ಸರಕಾರದ ಮುಖ್ಯಸ್ಥರಿಂದ ಆಗಬೇಕು. ಇದು ಸಾಧ್ಯವಾದಾಗ ಮಂತ್ರಿ ಮಂಡಲದ ಸಹೋದ್ಯೋಗಿ ಗಳಿಂದ ಕೆಲಸ ತೆಗೆಯಲು ಸಾಧ್ಯ. ಇಲ್ಲದೆ ಹೋದರೆ
ಮಂತ್ರಿಗಳಾದವರು ಮುಖ್ಯಮಂತ್ರಿಗಳ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೆ ಕಾಲಹರಣ ಮಾಡುತ್ತಾರೆ. ಖಾತೆ ಹಂಚಿಕೆ ಪ್ರಕ್ರಿಯೆ ಅದಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂಬುದು ಸ್ಪಷ್ಟ.