Thursday, 14th November 2024

ವಿದ್ಯೆ ಇಲ್ಲದಿದ್ದರೂ ನಡೆಯುತ್ತದೆ, ಬುದ್ದಿಯಾದರೂ ಬೇಕಲ್ಲವೇ ?

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ಇಮ್ಮಾರ್ಟಾಲಿಟಿ (ಅಮರತ್ವ) ಮೂಲತಃ ಚೆಕ್ ದೇಶದ ಮಿಲನ್ ಕುಂದೇರನ ಅತ್ಯಮೂಲ್ಯ ಕಾದಂಬರಿ. ಸಂಗೀತ, ಸಾಹಿತ್ಯ, ಕಲೆ, ರಾಜಕಾರಣ, ಬದುಕು ಮುಂತಾದ ವಿಷಯಗಳ ಕುರಿತು ಕುಂದೇರನ ಜ್ಞಾನ ಅಸಾಮಾನ್ಯ.

ರಾಜಕೀಯ ನಿಲುವು ವಿಭಿನ್ನವಾದರೂ, ಎಸ್.ಎಲ್. ಭೈರಪ್ಪನವರಿಗೂ ಕುಂದೇರನಿಗೂ ಇರುವ ಸಾಮ್ಯತೆ ಕುರಿತು ಪುಟ್ಟದಾಗಿ ಫೇಸ್ಬುಕ್ಕಿನಲ್ಲಿ ಬರೆದಿದ್ದೆ. ಸದರೀ ಕಾದಂಬರಿಯಲ್ಲಿ, ಮಾಧ್ಯಮ ಕುರಿತಂತೆ ಕುಂದೇರಾ ತೀಕ್ಷ್ಣ ಒಳನೋಟ ಬೀರಿದ್ದಾರೆ. ಬರ್ನಾರ್ಡ್ ಎಂಬ ರೇಡಿಯೊ ಪತ್ರಕರ್ತನ ಚಿತ್ರಣವಿದೆ.

ಫ್ರೆಂಚ್ ಚಿತ್ರನಟನೊಬ್ಬನನ್ನು ಸಂದರ್ಶಿಸುವ ಆತ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ನಟನಿಗೆ ಕಿರಿಕಿರಿಯುಂಟು ಮಾಡುತ್ತಾನೆ. ಮಾರನೇ ದಿನ ಮಜಬೂತಾದ ಆಗಂತುಕನೊಬ್ಬ ಅವನ ಕಚೇರಿಗೆ ತೆರಳಿ, ಮುಗುಳ್ನಗುತ್ತಾ ಅವನಿಗೆ (ಗೌರವ) ಡಿಪ್ಲೊಮಾ ಪ್ರದಾನ ಮಾಡಲು ಬಂದಿರುವುದಾಗಿ ತಿಳಿಸುತ್ತಾನೆ. ಬರ್ನಾರ್ಡ್ ಕೈಗೆ ರಟ್ಟಿನಲ್ಲಿ ಮಾಡಿದ ಕೊಳವೆಯನ್ನು ನೀಡುತ್ತಾ ಅದನ್ನು ತನ್ನೆದುರಿನ ತೆರೆಯಲು ಬರ್ನಾಡ್‌ನನ್ನು ಕೋರುತ್ತಾನೆ.

ಖುಷಿಯಿಂದ ಬರ್ನಾರ್ಡ್ ತೆಗೆದು ನೋಡಲು ಈ ಮೂಲಕ ಬರ್ಟ್ರೆಂಡ್ ಬರ್ನಾಡ್ನನ್ನು ‘ಪರಿಪೂರ್ಣ ಗಾರ್ಧಭ’ ಎಂದು ಘೋಷಿಸಲಾಗಿದೆ ಎಂದು ಅಂದವಾದ ಅಕ್ಷರಗಳಲ್ಲಿ ಮುದ್ರಿಸಲಾಗಿರುತ್ತದೆ. ಈ ಪ್ರಸಂಗವಾದ ಬಳಿಕ ತನ್ನ ಸಹಪಾಠಿ ಪಾಲ್‌ ನೊಂದಿಗೆ ಊಟ ಮಾಡಲು ರೆಸ್ಟುರಾಗೆ ಭೇಟಿ ನೀಡುತ್ತಾನೆ. ಹಿಂದಿನ ದಿನ ನಡೆದ ಘಟನೆಯನ್ನು ಗೆಳೆಯನೊಂದಿಗೆ ಹೇಳಿಕೊಳ್ಳು
ತ್ತಾನೆ. ಏನಂದೆ? ಪಾಲ್ ನಗುತ್ತಾ ಕೇಳುತ್ತಾನಾದರೂ ಅವನ ಬಿಗಿ ಮೋರೆಯನ್ನು ಕಂಡು ಗಂಭೀರನಾಗುತ್ತಾನೆ.

ಹೌದು, ನನ್ನನ್ನು ಪರಿಪೂರ್ಣ ಕತ್ತೆ ಎಂದು ಘೋಷಿಸಲಾಗಿದೆ. ಯಾರು, ಹಾಗೆ ಕರೆದದ್ದು? ಯಾವುದೇ ಸಂಸ್ಥೆಯ ಹೆಸರಿಲ್ಲ, ಅರ್ಥವಾಗದ ರೀತಿ ಸಹಿಯನ್ನು ಗೀಚಲಾಗಿದೆ ಎಂದು ಖಿನ್ನನಾಗಿ ನುಡಿಯುವ ಬರ್ನಾರ್ಡ್ ಪ್ರಸಂಗವನ್ನು ಮತ್ತೊಂದೆರಡು ಬಾರಿ ವರ್ಣಿಸುತ್ತಾನೆ. ನನಗೆ ಮೊದಲಿಗೆ ನಂಬಲಾಗಲಿಲ್ಲ. (ನನ್ನ ಮೇಲೆ) ಯಾರೋ ಪ್ರಹಾರ ಮಾಡಿದರೆನ್ನಿಸಿತು. ಕೂಗಿಕೊಂಡು ಪೊಲೀಸರನ್ನು ಕರೆಯಬೇಕೆನ್ನಿಸಿತು. ಏನೂ ಮಾಡಲು ತೋಚಲಿಲ್ಲ. ಆಗಂತುಕ ಮುಗುಳ್ನಗುತ್ತಾ, ಹಸ್ತಲಾಘವ ನೀಡುತ್ತಾ ನನ್ನನ್ನು ಅಭಿನಂದಿಸಿದ. ನಾನು ಅತೀವ ಗೊಂದಲದಲ್ಲಿದ್ದೆ.

ಕೈ ನೀಡಿದೆಯಾ? ಉಕ್ಕಿಬಂದ ನಗುವನ್ನು ಬಲವಾಗಿ ಅದುಮಿ ಹಿಡಿದ ಪಾಲ್ ಕೇಳುತ್ತಾನೆ. ನನಗೆ ಅವನನ್ನು ಪೊಲೀಸರಿಗೆ ಹೇಳಿ ಬಂಧಿಸಲಾಗದು ಎಂದು ಮನವರಿಕೆಯಾಯಿತು. ಆ ಕ್ಷಣವೇ ಮನಸ್ಸನ್ನು ನಿಗ್ರಹಿಸಿಕೊಂಡು ಎಲ್ಲವೂ ಮಾಮೂಲಿನಂತೆ ನಡೆಯುತ್ತಿದೆ, ಆ ಘಟನೆ ನನ್ನನ್ನು ತಟ್ಟಲಿಲ್ಲವೆಂದುಕೊಂಡೆ. ನೀನಾದರೂ ಏನು ಮಾಡಲಿಕ್ಕಾಗುತ್ತದೆ, ವ್ಯಕ್ತಿಯೊಬ್ಬನನ್ನು ಮೂರ್ಖನೆಂದು ಕರೆಯಲಾಕ್ಷಣ ಅವನು ಮೂರ್ಖನಂತೇ ವರ್ತಿಸುತ್ತಾನೆ. ಅದು ಬಿಡು, ಆ ವ್ಯಕ್ತಿಯಾದರೂ ಯಾರು ಎಂದು ತಿಳಿಯಿತೇ? ಅದೇನೊ ಹೆಸರು ಹೇಳಿಕೊಂಡ.

ಗೊಂದಲದಲ್ಲಿ ಎಲ್ಲವನ್ನೂ ಮರೆತುಬಿಟ್ಟೆ. ಈಗಂತೂ ಪಾಲ್‌ಗೆ ನಗು ತಡೆಯಲಾಗುವುದಿಲ್ಲ. ನಿನಗೆ ಇದು ತಮಾಷೆ. ಹೌದು, ತಮಾಷೆಯೇ. ಈ ಘಟನೆಯ ನಂತರ ನನ್ನ ಮನಸ್ಸಿಗೆ ಬೇರೇನನ್ನೂ ಚಿಂತಿಸಲಾಗುತ್ತಿಲ್ಲ. ಇನ್ನೂ ಆ ಗುಂಗಿನ ಇದ್ದೀನಿ ಎಂದು
ಬರ್ನಾರ್ಡ್ ಅಲವತ್ತುಕೊಳ್ಳುತ್ತಾನೆ. ನಕಲಿ ನೇಮಕಾತಿ ಪತ್ರವನ್ನಾಧರಿಸಿ ತನ್ನನ್ನು ತಾನು ಹಾರ್ವರ್ಡ್ ವಿಶ್ವವಿದ್ಯಾಲಯದ (asossiate) ಪ್ರೊಫೆಸರ್ ಎಂದೇ ನಂಬಿ ಹಾಗೆಯೇ ಬಿಂಬಿಸಿಕೊಂಡಿದ್ದ NDTಯ ನಿಧಿ ರಾಜ್ದಾನ್ ಮೊನ್ನೆಯಷ್ಟೆ ತಾನು ಬೇಸ್ತು ಬಿದ್ದದ್ದು ಅರಿವಾಗಿ ನಾನು ಮೂರ್ಖಳು. ಸರಿಯಾಗಿ ವಿಚಾರಿಸಬೇಕಿತ್ತು.

ನನ್ನನ್ನು ನಾನು ಇನ್ನಿಲ್ಲದಂತೆ ಹಳಿದುಕೊಳ್ಳುತ್ತಿದ್ದೇನೆ (I am an idiot. I should have made a thorough due diligence. I am kicking myself for not doing it) ಎಂದೆ ಪರಿತಪಿಸಿದ್ದಾರೆ. ಕತ್ತೆ ತನ್ನನ್ನು ತಾನು ಒದ್ದು ಕೊಳ್ಳುವುದಿಲ್ಲ. ಆ ಕಾರಣ ಬರ್ನಾಡ್‌ನಂತೆ ನಿಧಿಯನ್ನು ಕತ್ತೆ ಎನ್ನಲಿಕ್ಕಾಗದು. ಆದರೆ, ಹಿಂದೊಮ್ಮೆ ತನ್ನ ಮಾಜಿ ಸಹೊದ್ಯೋಗಿ ಮತ್ತು ಪತ್ರಕರ್ತೆ
ಯಾದ ಬರ್ಖಾ ದತ್ತರನ್ನು ನಿಧಿ ಒದ್ದದ್ದುಂಟು. ಸುಮ್ಮನಿರದ ಬರ್ಖಾ ಈಕೆಯನ್ನೂ ಒದ್ದಿದ್ದರು.

ಒದೆತ – ಪ್ರತಿ ಒದೆತಗಳು ಟ್ವಿಟರ್‌ಗೆ ಸೀಮಿತವಾಗಿದ್ದವು. ತದನಂತರದಲ್ಲಿ, NDTVಯಂತೆಯೇ ಅಷ್ಟೇನು ನಂಬಿಕೆಗೆ ಹೆಸರು ಮಾಡಿರದ ABP  ಎಂಬ ಸುದ್ದಿ ಸಂಸ್ಥೆಯಿಂದ ಕೆಲವು ಉದ್ಯೋಗಿಗಳು ಹೊರಬಿದ್ದುದರಲ್ಲಿ ಕೇಂದ್ರ ಸರಕಾರದ ಕೈವಾಡವಿದೆ ಎಂದು ನಿಧಿ ತನ್ನ ಷೋನಲ್ಲಿ ಗುಬ್ಬಿಸಿದ್ದರು. ಮೂರು ವರ್ಷಗಳ ಹಿಂದೆ, NDTVಯಿಂದಲೇ ೭೦ ಉದ್ಯೋಗಿಗಳನ್ನು ಮನೆಗೆ
ಕಳಿಸಲಾಗಿತ್ತು. ಅಲ್ಲಿಂದ ಬರ್ಖಾ ಹೊರಬಿದ್ದದ್ದೂ ಅನೇಕ ಊಹೆಗಳಿಗೆ ಎಡೆ ಮಾಡಿಕೊಟ್ಟಿತ್ತು.

ಗುಬ್ಬಿಸಿದ ನಿಧಿಯನ್ನು ಬರ್ಖಾ ಮತ್ತೆ ಪ್ರಶ್ನಿಸಿದ್ದರು. ಕನಿಷ್ಠ ವಿದ್ಯೆಯೂ ಅಗತ್ಯವಿಲ್ಲದಿರುವುದೇ ಪತ್ರಕರ್ತರಾಗಲಿಕ್ಕೆ ಏಕೈಕ ಅರ್ಹತೆ ಎಂಬಂಥ ವಾತಾವರಣ ಲಾಗಾಯ್ತಿನಿಂದಲೂ ಇದೆ. (ಆದರೆ, ನಿಧಿ ಕೇಂಬ್ರಿಡ್ಜ್‌ನಲ್ಲಿ ಸ್ನಾತಕೋತ್ತರ ಪದವಿ
ಗಳಿಸಿದವರು). NDTVಯ ಕಾರ್ಯ ನಿರ್ವಾಹಕ ಸಂಪಾದಕಿಯಾಗಲು ಬುದ್ಧಿಯೂ ಬೇಡ ಎಂದು ಸಾಬೀತುಗೊಳಿಸಿದಂತಿದೆ.

ಪ್ರಾಫೆಟ್ ಮೊಹಮದ್ ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ತೆಗೆದುಕೊಂಡ ದಿಟ್ಟ ನಿಲುವನ್ನು ಖಂಡಿಸಿ ಕಳೆದ
ಅಕ್ಟೊಬರ್‌ನಲ್ಲಿ ಪಾಕಿಸ್ತಾನ್ ಅಸೆಂಬ್ಲಿ ಆ ದೇಶದಿಂದ ತನ್ನ ರಾಯಭಾರಿಯನ್ನು ಹಿಂಪಡೆಯುವ ನಿರ್ಣಯವನ್ನು
ಅಂಗೀಕರಿಸಿತು. ಆದರೆ, ಅಲ್ಲಿದ್ದ ರಾಯಭಾರಿಯನ್ನು ಮೂರು ತಿಂಗಳು ಮುಂಚೆಯೇ ಚೀನಾಕ್ಕೆ ವರ್ಗಾಯಿಸಲಾಗಿತ್ತು! ಹಾರ್ವರ್ಡ್‌ನಲ್ಲಿ ಪತ್ರಿಕೋದ್ಯಮ ವಿಭಾಗವೇ ಇಲ್ಲ. ಪತ್ರಿಕೋದ್ಯಮ ಪ್ರೊಫೆಸರ್‌ಗಳೂ ಇಲ್ಲ. ಹಾಗಿದ್ದೂ ಅಸೋಸಿಯೆಟ್ ಪ್ರೊ-ಸರ್ ಆಗಿ ನೇಮಕಾತಿ ಪತ್ರ ಬಂದದ್ದನ್ನು ಕಿಂಚಿತ್ತೂ ಅನುಮಾನ ಪಡದ ನಿಧಿ ತಿಂಗಳಾನುಗಟ್ಟಲೆ ಅದನ್ನು ನಂಬಿ ಕೊನೆಗೆ ಅದು
ಮೋಸವೆಂದು ತಿಳಿದಾಗ ತನ್ನನ್ನು ತಾನು ಮೂರ್ಖಳೆಂದು ಕರೆದುಕೊಳ್ಳುವಾಗ ಆಕೆಯ ಅಭಿಪ್ರಾಯ ತಪ್ಪೆಂದು ವಾದಿಸುವುದು ಕಷ್ಟ.

ತನ್ನ ನೇಮಕಾತಿಯ ಹಿಂದಿನ ಕೃತ್ರಿಮದ ಬಗ್ಗೆ ಸಂಶಯ ಹುಟ್ಟಿಸುವಂಥ ಅಂಶಗಳು ಆಗಿಂದಾಗ್ಗೆ ಗೋಚರಿಸುತ್ತಿದ್ದರೂ ನಿಧಿಗೆ, ದಿಢೀರನೆ ಹೇರಳ ನಿಧಿಯನ್ನು ಪಡೆದು ಗರಬಡಿದ ಸಾಮಾನ್ಯನಂತೆ, ಕಾಣಲಿಲ್ಲ. ವಿಶ್ವ ಸಂಸ್ಥೆಯ ಸೆಕ್ರೆಟರಿ – ಜನರಲ್
ಹುzಯನ್ನು ಅಲಂಕರಿಸಲು ಮೂರೇ ಗೇಣು ಅನ್ನುವಷ್ಟು ಹತ್ತಿರ ಹೋಗಿದ್ದ, ಲುಟ್ಯೆನ್ಸ್ ಪತ್ರಕರ್ತರ ಆರಾಧ್ಯ ದೈವವಾದ, ಸಂಸದ ಶಶಿ ತರೂರ್‌ಗೆ ಹಾರ್ವರ್ಡ್‌ನಲ್ಲಿ ಪತ್ರಿಕೋದ್ಯಮ ವಿಭಾಗ ಇಲ್ಲವೆಂಬ ಮಾಹಿತಿ ಇಲ್ಲವೆಂದ ಮೇಲೆ ಇನ್ನಾವ ಪಾಮರರಿಗೆ ತಾನೇ ಅದು ತಿಳಿದಿರಲು ಸಾಧ್ಯ? ಶಶಿ ಮತ್ತು ಮಾಜಿ ಜಮ್ಮು – ಕಾಶ್ಮೀರದ ಮುಖ್ಯ ಮಂತ್ರಿ ಒಮರ್ ಅಬ್ದು ಸೇರಿದಂತೆ ಹಲವಾರು ಗಣ್ಯರು ನಿಧಿಗೆ ಸಿಕ್ಕ ನೂತನ ಮನ್ನಣೆಗಾಗಿ ಆಕೆಯನ್ನು ಅಭಿನಂದಿಸಿದ್ದರು.

ಇನ್ನು ಆಕೆ ಕಣ್ಣು ಹೇಗೆ ತೆರೆದಾರು? ನವೆಂಬರ್ ೨೦೧೯ರಲ್ಲಿ ಆಕೆ ನೀಡಿದ ಉಪನ್ಯಾಸ  ಕಾರ್ಯಕ್ರಮವೊಂದರಲ್ಲಿ ವ್ಯವಸ್ಥಾಪಕರೆನ್ನಲಾದ ವ್ಯಕ್ತಿ(ಅದು ಆಕೆಯ ಮಾತುಗಳೇ!) ಮೊದಲು ನೇಮಕಾತಿಯ ಪ್ರಸ್ತಾಪ ಮಾಡುತ್ತಾನೆ. ನಂತರದಲ್ಲಿ ಹಾರ್ವರ್ಡ್ ಆಕೆಯನ್ನು ಆನ್‌ಲೈನ್‌ನ ೯೦ ನಿಮಿಷಗಳ ಕಾಲ ಸಂದರ್ಶಿಸುತ್ತದೆ. ನೇಮಕಾತಿ ಪತ್ರವೂ ತಲುಪುತ್ತದೆ. ನಿಧಿ
ಅಸೋಸಿಯೆಟ್ ಪ್ರೊಫೆಸರ್ ಎಂದೇ ಲಿಖಿತವಾಗಿಯೂ ಗುರುತಿಸಿಕೊಳ್ಳಲಾರಂಭಿಸುತ್ತಾರೆ.

ಸಕಾಲದಲ್ಲಿ (ಸಂದರ್ಶನವೇ ಇಲ್ಲದೆ ಆಕೆಗೆ ಲಭ್ಯವಾದ) ವರ್ಕ್ ವೀಸಾ ತಲುಪುವುದೆಂದೂ ಹೇಳಲಾಗುತ್ತದೆ. ನಿಧಿಯ ಅನ್ನದಾತ ರಾದ NDTV ಮಾಲೀಕರೂ ಎರಡು ದಶಕಗಳಿಗೂ ಹೆಚ್ಚು ಅವಧಿ ತಮ್ಮ ಸೇವೆ ಸಲ್ಲಿಸಿದ್ದ ನಿಧಿಯನ್ನು ಹಾರ್ವರ್ಡ್ ಪ್ರೊಫೆಸರ್
ಎಂದೇ ಪರಿಗಣಿಸಿಯಾಗಿತ್ತು. ಹಾಗೆಂದು ಅವರನ್ನೂ ದಡ್ಡರೆಂದು ಹೇಳಬರುವುದಿಲ್ಲ. ದಡ್ಡರಾಗಿದ್ದರೆ ಕೋಟ್ಯಂತರ
ರುಪಾಯಿನ ಮಾಧ್ಯಮ ಸಂಸ್ಥೆ ಕಟ್ಟಲಾಗುತ್ತಿರಲಿಲ್ಲ.

ಹಾರ್ವರ್ಡ್‌ನಿಂದ ಬಂದ ಮೊದಲ ಸಂದೇಶ ಹೇಗೆ ನಿಧಿಯನ್ನು ದಿಗ್ಭ್ರಾಂತಿಗೊಳಿಸಲಿಲ್ಲವೋ ಜ್ಞಾನಪೀಠ ಪ್ರಶಸ್ತಿ ತಮಗೆ ಲಭಿಸಿದಾಗ ಯು.ಆರ್. ಅನಂತ ಮೂರ್ತಿ ಕೂಡ ವಿಚಲಿತರಾದದ್ದರ ಬಗ್ಗೆ ನಾನು ಓದಿಲ್ಲ. ಅಂದರೆ, ತಮಗೆ ಲಭಿಸಿದ ಗೌರವಕ್ಕೆ ತಾವು ಪಾತ್ರರೊ ಅಲ್ಲವೊ ಎಂಬ ಸಣ್ಣ ಅನುಮಾನವೂ ಬಾರದಂಥ ಆತ್ಮವಿಶ್ವಾಸದ ಸ್ಥಿತಿಯಲ್ಲಿ ಅವರಿದ್ದರೂ ಯಾರೂ ಆಶ್ಚರ್ಯ ಪಡಬಾರದು. ಚಂಪಾ ಮಾತ್ರ ತಮ್ಮ ಸಂಕ್ರಮಣ ನಿಯತಕಾಲಿಕೆಯಲ್ಲಿ ಮೂರ್ತಿಗೆ ಜ್ಞಾನಪೀಠ ಸಿಕ್ಕಮೇಲೆ ಮತ್ತೊಂದು ಮೂರ್ನಾಲ್ಕು ಪೀಠ ಗಳು ಕನ್ನಡ ಸಾಹಿತ್ಯಕ್ಕೆ ಸದ್ಯದ ವರ್ಷಗಳ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ಲೇಷಿಸಿದ್ದರು.

ಅದೇಕೋ, ಅವರ ಆಸೆ ಇನ್ನೂ ಈಡೇರಿಲ್ಲ. ಇರಲಿ. ಒಂದು ವರ್ಗದ ಜನರಿಗೆ ಪ್ರಶಸ್ತಿಗಳು ಹುಡುಕಿ ಕೊಂಡು ಬರುತ್ತದೆ. ಮತ್ತೊಂದು ವರ್ಗ ಪ್ರಶಸ್ತಿಗಳನ್ನರಸುತ್ತಾರೆ. ಅವುಗಳನ್ನು ಗಿಟ್ಟಿಸಿಕೊಳ್ಳಲು ಕಸರತ್ತು, ಕರಾಮತ್ತು ಗಳೆರಡನ್ನೂ ನಡೆಸುತ್ತಾರೆ. ನಿಧಿ ಪ್ರಸಂಗ ಈ ವಿಷಯಕ್ಕೆ ಹೊಸ ಆಯಾಮವನ್ನು ನೀಡಿದೆ. ದಕ್ಕಿದ ಪ್ರೊಫೆಸರ್ ಗಿರಿ ಕೈಬಿಟ್ಟದ್ದು, ಮೋಸಹೋಗಿದ್ದು, ಜಗಜ್ಜಾಹೀರಾಗಿದ್ದು, ದಡ್ಡಿ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳಬೇಕಾದ್ದು, ಒಪ್ಪಿಕೊಳ್ಳದಿದ್ದರೆ ವಿಧಿಯಿಲ್ಲವೆಂಬ ಅಸಹಾಯ ಕತೆ ಎದುರಿಸಬೇಕಾದದ್ದು, ಅಷ್ಟೆಲ್ಲದರ ನಂತರವೂ ಮೀಸೆ ಅಷ್ಟೇನೂ ಮಣ್ಣಾಗಿಲ್ಲವೆಂಬಂತೆ ತೋರ್ಪಡಿಸಬೇಕಾದದ್ದು, ತನ್ನೊಬ್ಬಳಿಗಷ್ಟೆ ಮಣ್ಣು ಮೆತ್ತಿಲ್ಲವೆಂಬ ನಿಲುವು ತಳೆಯ ಬೇಕಾದದ್ದು, ಸಂತ್ರಸ್ತೆಯಂತೆ ಕಾಣಿಸಿಕೊಳ್ಳಬೇಕಾದದ್ದು, ಮೋಸ
ಹೋಗಿದ್ದಕ್ಕೆ ದೂರು ನೀಡಬೇಕಾದದ್ದು… ಮೂರ್ತಿಯವರ ಶಬ್ದದ ಬಣ್ಣಿಸಬೇಕೆಂದರೆ ಅವಸ್ಥೆ ಪಡಬೇಕಾದದ್ದು.

ದೂರು ಪಡೆದುಕೊಂಡ ಪೊಲೀಸರ ಹೊಣೆ ಇದೆಲ್ಲದಕ್ಕಿಂತ ಭಾರವಾದದ್ದು. ಆಕೆ ಗೌರವ ಕಳೆದುಕೊಂಡದ್ದು ಎಲ್ಲಿ, ಎಂದು, ಹೇಗೆ ಎಂಬುದನ್ನು ಮೈಯೆ ಕಣ್ಣಾಗಿಸಿ ಹುಡುಕಬೇಕಾದ ಹೊರೆ ಅವರ ಹೆಗಲೇರಿದೆ.