ಸುಕ್ಷೇತ್ರ ಬನಶಂಕರಿ ಜಾತ್ರೆ ನಿಮಿತ್ತ ಪಾದಯಾತ್ರೆ ಮೂಲಕ ಆಗಮಿಸುತ್ತಿರುವ ಭಕ್ತಾಧಿಗಳು
ವಿಶೇಷ ವರದಿ: ಬಸವರಾಜ್ ಉಳ್ಳಾಗಡ್ಡಿ
ಬಾದಾಮಿ: ಕೋವಿಡ್ನಿಂದ ರಾಜ್ಯದ ಅನೇಕ ಜಾತ್ರೆೆಗಳು ರದ್ದಾಗಿದ್ದು, ಅಲ್ಲಲ್ಲಿ ಕೆಲವೊಂದು ಜಾತ್ರೆಗಳು ಸಾಂಕೇತಿಕವಾಗಿ ಜರುಗಿವೆ. ಇತ್ತ ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿ ಬನಶಂಕರಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಪಡಿಸಿದ್ದರ ನಡುವೆಯೂ, ಭಕ್ತಾದಿಗಳ ಒತ್ತಾಸೆಗೆ ಶಾಸ್ತ್ರೋಕ್ತವಾಗಿ ಸಾವಿರಾರು ಭಕ್ತರ ಮಧ್ಯ ಬನಶಂಕರಿ ದೇವಿ ರಥೋತ್ಸವ ಯಾವುದೇ ವಿಘ್ನಗಳಿಲ್ಲದೇ ಜಯಘೋಷದೊಂದಿಗೆ ಜರುಗಿತು.
ರಥಾಂಗ ಪೂಜೆ: ಬನಶಂಕರಿ ದೇವಿ ಗುಡಿಯ ಪೂಜಾರ ಮನೆತನದವರಿಂದ ವಿವಿಧ ಪೂಜಾ ಕೈಂಕರ್ಯಗಳು ಮತ್ತು ರಥಾಂಗ
ಹೋಮ ನಡೆದು, ಸಂಜೆ 5 ಗಂಟೆಯ ಹೊತ್ತಿಗೆ ಸಹಸ್ರಾರು ಭಕ್ತರು ದೇವಿಯ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದು ಹೂವು, ಹಣ್ಣು ಕಾಯಿ ಅರ್ಪಿಸುವುದರ ಮೂಲಕ ‘ರಥೋತ್ಸವ’ ಸಾಂಗವಾಗಿ ನೆರವೇರಿಸಿ ಬನದ ಸಿರಿಯಲ್ಲಿ ಜಾತ್ರೆಯ ಐಸಿರಿ ಸೊಬಗನ್ನು
ಬಿಂಬಿಸಿತು. ಹೂವು, ಹಣ್ಣು, ಕಾಯಿ, ಕರ್ಪೂರ ಅರ್ಪಿಸುವುದರ ಜತೆಗೆ ಬಾಳೆಹಣ್ಣು, ಉತ್ತತ್ತಿಗಳನ್ನು ರಥೋತ್ಸವದಲ್ಲಿ ತೂರಿ ಭಕ್ತಿ-ಭಾವವನ್ನು ಮೆರೆದರು.
ಹಳಿಬಂಡೆಯಲ್ಲಿ ತೇರಿನ ಹಗ್ಗ: ಧಾರ್ಮಿಕ ಪದ್ಧತಿಯಂತೆ ದೇವಿ ತೇರಿನ ಹಗ್ಗವನ್ನು ಶೃಂಗಾರಗೊಂಡಿದ್ದ ಹಳ್ಳಿ ಬಂಡಿಯಲ್ಲಿ ಕಾಲ್ನಡಿಗೆ ಮೂಲಕ ಮಾಡಲಗೇರಿಯಿಂದ ತೆಗೆದುಕೊಂಡು ಬಂದು ರಥೋತ್ಸವಕ್ಕೆ ಸಮರ್ಪಿಸಿದರು. ಈ ಭಾಗದಲ್ಲಿಯೇ ಅತ್ಯಂತ ಸಂಭ್ರಮದ ಜಾತ್ರೆ ಎನಿಸಿ, ಜನರ ಆಡು ಭಾಷೆಯಲ್ಲಿ ‘‘ಶಂಕರಿ’’ ಜಾತ್ರೆಯಾಗಿ ಪರಿಣಮಿಸಿರುವ ಈ ಜಾತ್ರೆಗೆಂದು ಸಾವಿರಾರು ಭಕ್ತರು ಬಂದು ಒಂದೆಡೆ ಸೇರಿದ್ದು ಕೂಡು ಕುಟುಂಬದ ಸಂಭ್ರಮದಂತಿತ್ತು.
ಪಾದಯಾತ್ರೆಗೆ ಪೊಲೀಸರ ಸರ್ಪಗಾವಲು: ಬನಶಂಕರಿ ಜಾತ್ರೆ ರದ್ದು ಎಂದು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಆದೇಶಿಸಿ ಪೋಲಿಸರ ಸರ್ಪಗಾವಲು ಹಾಕಿದ್ದರು. ಜತೆಗೆ ದೇವಸ್ಥಾನದ ಮುಖ್ಯದ್ವಾರವನ್ನು ಬಂದ್ ಮಾಡಿ ದೇವಸ್ಥಾನಕ್ಕೆ ಬರುವ ಗದಗ ರಸ್ತೆ, ಶಿವಯೋಗ ಮಂದಿರ ರಸ್ತೆ, ಶಿವಪೂರ ರಸ್ತೆ, ಬಾದಾಮಿಯಿಂದ ಬನಶಂಕರಿ ದೇವಸ್ಥಾನಕ್ಕೆ ಹೋಗುವ ರಸ್ತೆಗಳಿಗೆ ಒಳ ಹೋಗ ದಂತೆ ಪೋಲಿಸರು ದೇವಸ್ಥಾನಕ್ಕೆ ಹೋಗವ ಮಧ್ಯದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಭಕ್ತರನ್ನು ತಡೆಯುತ್ತಿದ್ದು ಕಂಡು ಬಂದಿತು. ಆದರೂ ವಿವಿಧ ಜಿಲ್ಲೆ ತಾಲೂಕಿನ ಭಕ್ತರೊಂದಿಗೆ ಸ್ಥಳೀಯ ಭಕ್ತರು ಪಾದಯಾತ್ರೆ ಮೂಲಕ ಬನಶಂಕರಿಗೆ ಆಗಮಿಸಿ,
ಪಾದಗಟ್ಟೆಗೆ ತೆಂಗಿನ ಕಾಯಿ ಒಡೆದು ಕರಪೂರ ಬೆಳಗಿ ಧನ್ಯತೆ ಮೆರೆದರು.