Friday, 22nd November 2024

ಕೃಷಿ ಕಾಯ್ದೆಗಳ 18 ತಿಂಗಳು ಅಮಾನತು ಪ್ರಸ್ತಾವನೆಗೆ ಬದ್ದ: ಪ್ರಧಾನಿ ಮೋದಿ

ನವದೆಹಲಿ: ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷಗಳವರೆಗೂ ಅಮಾನತಿನಲ್ಲಿಡುವ ಪ್ರಸ್ತಾವನೆಗೆ ಸರ್ಕಾರ ಬದ್ಧ ಎಂದು ಶನಿವಾರ ನಡೆದ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೋಮವಾರ ಕೇಂದ್ರ ಬಜೆಟ್‌ ಮಂಡನೆಯ ಹಿನ್ನೆಲೆಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಶನಿವಾರ ಸರ್ವ ಪಕ್ಷ ಸಭೆ ನಡೆಸಲಾಯಿತು.  ‘ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮತ್ತು ರೈತ ಮುಖಂಡರೊಂದಿಗೆ ನಡೆದಿರುವ 11ನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ ಕೊಡುಗೆಗೆ ಇಂದಿಗೂ ಬದ್ಧ’ ಎಂದಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ‘ಸರ್ಕಾರವು ಚರ್ಚೆ ನಡೆಸಲು ಮುಕ್ತವಾಗಿರುವುದಾಗಿ ಕೃಷಿ ಸಚಿವ ತೋಮರ್‌ ತಿಳಿಸಿದ್ದಾರೆ. ಕೇವಲ ಒಂದು ಫೋನ್‌ ಕರೆಯ ಅಂತರದಲ್ಲಿದಲ್ಲಿರುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

ಸಂಸತ್ತಿನಲ್ಲಿ ದೊಡ್ಡ ಪಕ್ಷಗಳು ಚರ್ಚೆಗಳಿಗೆ ಅಡ್ಡಿ ಉಂಟು ಮಾಡುವುದರಿಂದ ಕಡಿಮೆ ಸದಸ್ಯ ಬಲದ ಪಕ್ಷಗಳಿಗೆ ಅನಾನುಕೂಲ ವಾಗುತ್ತದೆ. ಸದನದಲ್ಲಿ ಮಾತನಾಡಲು ಸಣ್ಣ ಪಕ್ಷಗಳಿಗೆ ಹೆಚ್ಚಿನ ಕಾಲಾವಕಾಶ ಸಿಗಬೇಕಿದೆ ಎಂದರು.

ಮೂರು ಕೃಷಿ ಕಾಯ್ದೆಗಳು

* ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಿಗೆ ಕಾಯ್ದೆ

* ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ ಮತ್ತು ನೆರವು) ಕಾಯ್ದೆ

* ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ