ಹೈದರಾಬಾದ್: ಮೃತರು ವಿವಾಹ ಸಮಾರಂಭಕ್ಕೆಂದು ಬಟ್ಟೆ ಖರೀದಿಸಲು ತೆರಳಿದ್ದ ವೇಳೆಯೇ ದುರ್ಘಟನೆ ಸಂಭವಿಸಿದ್ದು, ಹಸೆಮಣೆ ಏರಬೇಕಿದ್ದ ವಧುವೂ ಸಹ ದುರಂತ ಸಾವಿಗೀಡಾಗಿದ್ದಾಳೆ.
ತೆಲಂಗಾಣದ ಮೆಹಬೂಬಾನಲ್ಲಿ ನಡೆದ ಭೀಕರ ರಸ್ತೆ ಅಪಘಾತ(ಜನವರಿ 29ರಂದು)ದಲ್ಲಿ ಒಂದೇ ಕುಟುಂಬದ ಆರು ಮಂದಿ ಪೈಕಿ ದುರ್ಮರಣಕ್ಕೀಡಾದ ವಧುವೇ ಈಕೆ.
ಮದುವೆಗೆ ಬಟ್ಟೆ ತರಲೆಂದು ಆಟೋ ರಿಕ್ಷಾದಲ್ಲಿ ತೆರಳಿದ್ದರು. ಮಾರ್ಗ ಮಧ್ಯೆ ಎದುರುಗಡೆಯಿಂದ ವೇಗವಾಗಿ ಜವರಾಯನಂತೆ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದು ವಧು ಸೇರಿದಂತೆ ಒಂದೇ ಕುಟುಂಬದ ಆರು ಮಂದಿಯ ಪ್ರಾಣ ಹೊತ್ತೊಯ್ದಿದಿದೆ.
ಮೃತರನ್ನು ವಧು ಪರಿಮಳಾ, ತಂದೆ ಜತೊತ್ ಕಾಸ್ನಾ, ತಾಯಿ ಜತೂತ್ ಕಲ್ಯಾಣಿ, ಸಹೋದರ ಜತೂತ್ ಪ್ರದೀಪ್ ಮತ್ತು ಸಂಬಂಧಿಕರಾದ ಜತೂತ್ ಪ್ರಸಾದ್, ಅವರ ಮಗಳು ಜತೂತ್ ದಿವ್ಯಾ ಮತ್ತು ಆಟೋ ಚಾಲಕ ಜತೂತ್ ರಾಮು ಎಂದು ಗುರುತಿಸಲಾಗಿದೆ. ಮೃತ ಕುಟುಂಬವೂ ಗುಡುರ್ ಮಂಡಲದ ಎರ್ರಕುಂಟಾ ತಾಂಡಾ ಮೂಲದವರು. ಪರಿಮಳಾ ಮದುವೆ ನಿಶ್ಚಯವಾಗಿತ್ತು.
ದುರಂತದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಆಘಾತ ವ್ಯಕ್ತಪಡಿಸಿ, ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ನೀಡಲೆಂದು ಪ್ರಾರ್ಥಿಸಿದ್ದಾರೆ.