Sunday, 15th December 2024

ಬದುಕದ ಹೆಣ್ಣಿಗೊಂದು ವ್ಯಥೆಯಿದ್ದರೆ ಬದುಕಿದ ಗಂಡಿಗೊಂದು ಕಥೆಯಿದೆ

ವಿದೇಶವಾಸಿ

ಕಿರಣ್‌ ಉಪಾಧ್ಯಾಯ ಬಹ್ರೈನ್‌

ಕಳೆದ ವಾರದ ಅಂಕಣದಲ್ಲಿ ಹಿಂದಿ ಚಿತ್ರರಂಗದ ನಟಿ ವಿಮಿಯ ಬಗ್ಗೆ ಬರೆದಿದ್ದೆ. ಇಂತಹ ದುರಂತದ ಕಥೆಗಳು ಒಂದಲ್ಲ
ಎರಡಲ್ಲ, ಹುಡುಕಿದರೆ ಹಿಂದಿ ಚಿತ್ರರಂಗದಲ್ಲಿಯೇ ನೂರಕ್ಕೂ ಹೆಚ್ಚು ಇಂತಹ ಕಥೆಗಳಿವೆ.

ಮೀನಾ ಕುಮಾರಿ, ಪರ್ವೀನ್ ಬಾಬಿ, ಅಚಲಾ ಸಚದೇವ್, ಪ್ರಿಯಾ ರಾಜವಂಶ್, ರೂಬಿ ಮಾಯರ್ಸ್ (ಸುಲೋಚನಾ) ಇವರದ್ದೆಲ್ಲ ಒಂದು ರೀತಿಯ ಕಥೆಯಾದರೆ, ದಿವ್ಯಾ ಭಾರತಿ, ಝಿಯಾ ಖಾನ್, ಆರತಿ ಅಗ್ರವಾಲ್ ಇವರದ್ದೆಲ್ಲ ಇನ್ನೊಂದು ರೀತಿಯ ವ್ಯಥೆ. ಇಂತಹ ಕಥೆಗಳು ಕೇವಲ ನಟಿಯರಿಗಷ್ಟೇ ಸೀಮಿತ ಎಂದರೆ ಅದು ಶುದ್ಧ ಸುಳ್ಳಾದೀತು. ಗುರುದತ್, ರಾಜ್ ಕಿರಣ್, ಎ. ಕೆ. ಹಾನಗಲ್‌, ಭರತ್ ಭೂಷಣ್, ಭಗವಾನ್ ದಾದರಂಥವರನ್ನೂ ಈ ಪಟ್ಟಿಗೆ ಸೇರಿಸಿಕೊಳ್ಳಬಹುದು.

ಏನೇ ಆದರೂ ಅಂತಹ ಒಂದು ಕಥೆಯನ್ನು ಯಾರೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ, ಅಂತಹ ಕಥೆ ಕೇಳಲೂ
ಹಿತವೆನಿಸುವುದಿಲ್ಲ. ಆದರೆ ಈ ಕಥೆಗಳೆಲ್ಲ ಒಂದು ಪಾಠವಾಗಬಹುದು. ವಿಮಿಯ ವಿಷಯವೂ ಅದಕ್ಕೆ ಹೊರತಲ್ಲ. ಅಂಕಣ ಓದಿ ಪ್ರತಿಕ್ರಿಯೆ ನೀಡಿದ ಓದುಗರಲ್ಲಿ ಕೆಲವರು ಅವಳ ವಿಷಯದಲ್ಲಿ ಅನುಕಂಪ ತೋರಿಸಿದರೆ, ಇನ್ನು ಕೆಲವರು ಅಹಂಕಾರ ಅವಳನ್ನು ಆ ಸ್ಥಿತಿಗೆ ತಳ್ಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡೂ ಸರಿಯೇ, ಆದರೆ ಬಹಳಷ್ಟು ಓದುಗರ ಮನದಲ್ಲಿ ಪ್ರಶ್ನೆ ಮೂಡಿದ್ದು ವಿಮಿಯ ಮಕ್ಕಳ ಕುರಿತು. ಅವಳ ಸಾವಿನ ಸಂದರ್ಭ ದಲ್ಲಿ ಅವಳ ಇಬ್ಬರು ಮಕ್ಕಳು ಎಲ್ಲಿದ್ದರು? ಅವರು ತಾಯಿಯ ಅಂತ್ಯ ಸಂಸ್ಕಾರಕ್ಕೆ ಏಕೆ ಬರಲಿಲ್ಲ? ಪ್ರಶ್ನೆ ಸಹಜ
ವಾದದ್ದೇ. ಈ ಕೌತುಕ ನನ್ನಲ್ಲಿಯೂ ಇತ್ತು. ಕೆದಕಿ ಹುಡುಕಿದಾಗ ಸಿಕ್ಕ ಮಾಹಿತಿ ಕುತೂಹಲಕಾರಿಯೇ. ಮಕ್ಕಳ ವಿಷಯಕ್ಕೆ ಹೋಗುವ ಮೊದಲು, ವಿಮಿಯ ಸಾವು ಸಂಭವಿಸುವ ಸಂದರ್ಭದಲ್ಲಿ ಮಕ್ಕಳಿಬ್ಬರೂ ದಾರ್ಜಿಲಿಂಗ್‌ನ ಬೋರ್ಡಿಂಗ್ ಸ್ಕೂಲ್‌ನಲ್ಲಿದ್ದರು.

ಅದಾಗಲೇ ವಿಮಿ ಮತ್ತು ಶಿವ್ ಅಗ್ರವಾಲ್ ವಿಚ್ಛೇದನ ಪಡೆದಾಗಿತ್ತು. ಕೌಟುಂಬಿಕ ಹಿಂಸೆಯ ದೂರಿನಲ್ಲಿ ವಿಚ್ಛೇದನ ಪಡೆದುದ್ದರಿಂದ ನ್ಯಾಯಾಲಯದ ನಿರ್ಣಯದಂತೆ ಶಿವ್ ಅಗ್ರವಾಲ್ ಮನೆಯವರು ವಿಮಿಯನ್ನು ಭೇಟಿ ಮಾಡುವಂತಿರಲಿಲ್ಲ. ವಿಚ್ಛೇದನದ ನಂತರ ಮಕ್ಕಳಿಬ್ಬರೂ ತಂದೆಯ ಜತೆ ಇರುತ್ತಿದ್ದರು. ಅದೇ ಕಾರಣದಿಂದ ಅವಳ ಕಡೆಯವರಾರೂ ಅಂತ್ಯ
ಸಂಸ್ಕಾರಕ್ಕೊ ಬರಲಿಲ್ಲ ಎಂಬ ಮಾತಿದೆ. ವಿಮಿಯ ಮಕ್ಕಳ ವಿಷಯದ ಅನ್ವೇಷಣೆಯಲ್ಲಿ ನನಗೆ ದೊರಕಿದ್ದು ಅರ್ಧ ಯಶಸ್ಸು ಮಾತ್ರ.

ಏಕೆಂದರೆ ಅವಳ ಮಗಳ ಹೆಸರು ಶೋನಾ ಎಂದಾಗಿತ್ತು ಎಂಬುದನ್ನು ಬಿಟ್ಟರೆ ಬೇರೆ ಯಾವ ಮಾಹಿತಿಯೂ ಸಿಗಲಿಲ್ಲ. ಬಹುಷಃ ಅವಳು ತನ್ನ ಅಸ್ತಿತ್ವವನ್ನು ಅಡಗಿಸಿಟ್ಟುಕೋಂಡೇ ಬದುಕಲು ಬಯಸಿರಬಹುದು. ಆರು ದಶಕದ ಹಿಂದಿನ ಭಾರತವನ್ನು
ಒಮ್ಮೆ ಊಹಿಸಿಕೊಳ್ಳಿ, ಅಪ್ಪ ಅಮ್ಮನ ಚಾರಿತ್ರ್ಯದ ಮೇಲೆ ಮಕ್ಕಳನ್ನು ಅಳೆಯುವವರು ನಮ್ಮ ದೇಶದಲ್ಲಿ ಸಾಕಷ್ಟು ಜನ (ಈಗಲೂ) ಇರುವುದರಿಂದ ಅವಳೇ ಅಜ್ಞಾತವಾಗಿರಲು ಬಯಸಿದಳಾ? ತಾಯಿಗೆ ಬಂದ ಸ್ಥಿತಿ ಮಗಳಿಗೆ ಬರಬಾರದೆಂದು ಮನೆಯವರು ಅವಳನ್ನು ಯಾರ ಕಣ್ಣಿಗೂ ಬೀಳದಂತೆ ನೋಡಿ ಕೊಂಡರಾ? ಗೊತ್ತಿಲ್ಲ.

ಆದರೆ ವಿಮಿಯ ಮಗನ ವಿಷಯದಲ್ಲಿ ಮಾತ್ರ ಸಾಕಷ್ಟು ಮಾಹಿತಿ ಲಭ್ಯವಿದೆ. ಆತನ ವಿಷಯ ತಿಳಿಯುತ್ತಾ ಹೋದಂತೆ
ಆಶ್ಚರ್ಯವಾಗುವುದು ನಿಶ್ಚಿತ. ‘ಓಶೋ’ ಹೆಸರನ್ನು ನೀವೆಲ್ಲ ಕೇಳಿರಬಹುದು. ೧೯೩೧ ರಿಂದ ೧೯೯೦ ರವರೆಗೆ ಜೀವಿಸಿದ್ದ  ಆಚಾರ್ಯ ರಜನೀಶ್ ಅಥವಾ ಭಗವಾನ್ ರಜನೀಶ್. ವಿವಾದಾತ್ಮಕ ಗುರು, ಹೊಸ ಧಾರ್ಮಿಕ ಚಳುವಳಿಯ ನಾಯಕ, ಸೆಕ್ಸ್ ಗುರು ಹೀಗೆ ತಮ್ಮ ಜೀವಿತಾವಧಿಯಲ್ಲಿ ಬೇಕಾದದ್ದು, ಬೇಡವಾದದ್ದನ್ನೆಲ್ಲ ಹೇಳಿಸಿಕೊಂಡವರು. ಧ್ಯಾನ, ಸಮಾಧಾನ, ಧೈರ್ಯ,
ಪ್ರೀತಿ, ಸೃಜನಶೀಲತೆ, ಹಾಸ್ಯ ಇವುಗಳ ಮಹತ್ವವನ್ನು ಒತ್ತಿ ಹೇಳಿದವರು.

ಮಾನವ ಲೈಂಗಿಕತೆಗೆ ಮುಕ್ತಭಾವ ಪ್ರತಿಪಾದಿಸಿದ್ದಕ್ಕೆ ಭಾರತದಲ್ಲಿ ಸಾಕಷ್ಟು ವಿವಾದಕ್ಕೂ ಕಾರಣರಾದವರು. ಏನೇ ಇದ್ದರೂ, ಹೆಸರು, ಹಣದೊಂದಿಗೆ ವಿಶ್ವದಾದ್ಯಂತ ಲಕ್ಷಾಂತರ ಅನುಯಾಯಿಗಳನ್ನೂ ಸಂಪಾದಿಸಿದ್ದರು. ಅಂತಹ ಅನುಯಾಯಿಗಳಲ್ಲಿ ಅವರದೇ ಹೆಸರಿನ ರಜನೀಶ್ ಅಗ್ರವಾಲ್ ಕೂಡ ಒಬ್ಬರು. ಮನೆಯ ವಾತಾವರಣವೋ, ಬೆಳೆದ ಪರಿಸರವೋ, ಜೀವನದ ಬಗ್ಗೆ
ಕುತೂಹಲವೋ, ತನ್ನ ಇಪ್ಪತ್ತನೇ ವಯಸ್ಸಿನ ಓಶೋ ಅವರಿಂದ ಪ್ರಭಾವಿತರಾಗಿ, ಓಶೋ ಆಶ್ರಮಕ್ಕೆ ಭೇಟಿ ನೀಡಿ, ಓಶೋ ಅವರನ್ನೇ ತನ್ನ ಗುರು ಎಂದು ಒಪ್ಪಿಕೊಂಡು, ಅವರನ್ನೇ ಅನುಕರಿಸಿ, ಅನುಸರಿಸಿದ ವ್ಯಕ್ತಿ ಈ ರಜನೀಶ್.

ಪಕ್ಕನೆ ನೋಡಿದರೆ ಇಬ್ಬರದ್ದೂ ಸುಮಾರು ಒಂದೇ ರೂಪ. ಓಶೋ ಮೈ ತುಂಬ ಬಟ್ಟೆ ಧರಿಸುವುದರೊಂದಿಗೆ ಆಭರಣಗಳನ್ನೂ
ತೊಡುತ್ತಿದ್ದರೆ, ಈ ರಜನೀಶ್ ಹೆಚ್ಚಾಗಿ ಕಾಣಿಸಿಕೊಳ್ಳುವುದು ಪಂಚೆ ಮತ್ತು ಹೆಗಲುವಸದಲ್ಲಿ; ಅಷ್ಟೇ ವ್ಯತ್ಯಾಸ. ಮೆಕ್ಸಿಕೊದಲ್ಲಿ ನೆಲೆಯೂರಿ, ವಿಶ್ವದಾದ್ಯಂತ ತಮ್ಮದೇ ಅನುಯಾಯಿ ಬಳಗವನ್ನು ಬೆಳೆಸಿಕೊಂಡ, ಸ್ವಾಮಿ ರಜನೀಶ್ ಅಥವಾ ಓಝೆನ್ ರಜನೀಶ್ ಹೆಸರಿನಿಂದ ಗುರುತಿಸಿಕೊಳ್ಳುವ ಈ ರಜನೀಶ್ ಶಿವ್ ಅಗ್ರವಾಲ್ ಮತ್ತು ವಿಮಿಯ ಮಗ ಎಂದರೆ ಆಶ್ಚರ್ಯಪಡಬೇಡಿ.

ರಜನೀಶ್ ಹುಟ್ಟುವಾಗ ವಿಮಿಗೆ ಇನ್ನೂ ಹದಿನೆಂಟು ವರ್ಷ. ತಂದೆ ಶಿವರಾಜ್ ಅಗ್ರವಾಲ್, ಅವರ ತಂದೆ ಸ್ಥಾಪಿಸಿದ ಹಾಡ್ವೇರರ್ ಮತ್ತು ಸ್ಟೀಲ್ ಉತ್ಪಾದನಾ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ರಜನೀಶ್ ಆರು ವರ್ಷದ ಮಗುವಾಗಿದ್ದಾಗ ತಾಯಿ ವಿಮಿ ಹಿಂದಿ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿಯಾಗಿತ್ತು. ಉದ್ಯಮ ಮತ್ತು ಚಿತ್ರರಂಗದಲ್ಲಿ ಹೆಸರುಮಾಡಿದ ಅಪ್ಪ ಅಮ್ಮ ಇರುವಾಗ ಕೇಳಬೇಕೇ? ಬಾಲ್ಯದಿಂದಲೂ ರಜನೀಶ್ ಉನ್ನತ ಸಮಾಜದಲ್ಲಿಯೇ ಬೆಳೆದರು. ನಿತ್ಯದ ಒಡನಾಟ ಏನಿದ್ದರೂ ದೇಶದ ಮೇಲ್ಪಂಕ್ತಿಯ ಉದ್ಯಮಿಗಳು, ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳೊಂದಿಗೆ ಇರುತ್ತಿತ್ತು.

ಅದಕ್ಕೆ ತಕ್ಕಂತೆ ದಾರ್ಜಿಲಿಂಗ್‌ನ ಹೆಸರಾಂತ ಸೇಂಟ್ ಪೌಲ್ಸ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ. ತನ್ನ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಆರ್ಕಿಟೆಕ್ಚರಲ್ ಇಂಜನಿಯರಿಂಗ್‌ನಲ್ಲಿ ಪದವಿ ಪಡೆದರು. ಓದು ಮುಗಿಯುತ್ತಿದ್ದಂತೆಯೇ ಜುಂಝುನುವಾಲಾ ಗ್ರೂಪ್ ಆಫ್ ಕಂಪನೀಸ್‌ನಲ್ಲಿ ಡಿಸೈನರ್ ಆಗಿ ಕೆಲಸಕ್ಕೆ ಸೇರಿಕೊಂಡರು. ೧೯೯೩ರಲ್ಲಿ ಅವರ ಸಂಬಳ ವರ್ಷಕ್ಕೆ ಮೂರು ಲಕ್ಷ ಅಮೆರಿಕನ್
ಡಾಲರ್‌ಗಳು! ಜತೆಗೆ, ಕಂಪನಿಯ ಕೆಲಸದ ನಿಮಿತ್ತ ವಿಶ್ವದ ಅನೇಕ ದೇಶಗಳಿಗೆ ಭೇಟಿ ನೀಡುವ ಸೌಭಾಗ್ಯ ಬೇರೆ.

ತಮ್ಮ ಕಾರ್ಯಕ್ಷಮತೆಯಿಂದ ಸ್ವಿಡ್ಜರ್ಲ್ಯಾಂಡ್, ಹಾಂಗ್‌ಕಾಂಗ್ ದೇಶಗಳೂ ಸೇರಿದಂತೆ ದೇಶ ವಿದೇಶದ ಅನೇಕ ಪ್ರಶಸ್ತಿಗಳನ್ನೂ
ಪಡೆದರು. ಆ ಕಾಲದಲ್ಲಿ ಸಾಮಾನ್ಯರಾದವರು ಕನಸಿನಲ್ಲಿಯೂ ಊಹಿಸದ ವೃತ್ತಿ ಜೀವನ ಅದು. ಅದೂ ಅಷ್ಟು ಸಣ್ಣ ವಯಸ್ಸಿನಲ್ಲಿ!

ಆದರೆ ಇದು ಬಹಳ ವರ್ಷ ನಡೆಯಲಿಲ್ಲ. ರಜನೀಶ್‌ಗೆ ಇದರಿಂದ ತನ್ನ ಜೀವನ ಪರಿಪೂರ್ಣ ಅನಿಸುತ್ತಿರಲಿಲ್ಲ. ಅವರ ಮನದಲ್ಲಿ ಅಧ್ಯಾತ್ಮದ ಬೀಜ ಮೊಳಕೆಯೊಡೆದು ಬೇರು ಬಿಡಲಾರಂಭಿಸಿತ್ತು. ಅವರ ಪೂರ್ಣ ಪ್ರಮಾಣದ ವೃತ್ತಿ ಜೀವನ ನಾಲ್ಕು ವರ್ಷಕ್ಕೇ
ಮೊಟಕಾಯಿತು. ಕೈಲಿ ಹಿಡಿಯಲಾಗದಷ್ಟು ಸಂಬಳ, ಕಾಲು ಸುತ್ತಲಾಗದಷ್ಟು ವಿದೇಶ ಪ್ರವಾಸ, ಕೊರಳು ಹೊರಲಾರದಷ್ಟು ಹಾರ, ತುರಾಯಿ ಎಲ್ಲವನ್ನೂ ಬಿಟ್ಟು ತನ್ನೊಳಗೆ ಇಳಿಯುವ ದಾರಿ ಹುಡುಕುತ್ತಾ ಹೊರಟರು.

ಈ ಹಾದಿಯಲ್ಲಿ ಅವರಿಗೆ ಮೊದಲು ಭೇಟಿಯಾದದ್ದು ಓಶೋ. ಕೆಲವೇ ದಿನಗಳಲ್ಲಿ ತಮಗೆ ಹತ್ತಿರವಾದ ರಜನೀಶ್ ಅಗ್ರವಾಲ್ ಹೆಸರನ್ನು ಸ್ವಾಮಿ ರಜನೀಶ್ ಎಂದು ಬದಲಿಸಿದ್ದರು ಓಶೋ. ೧೯೯೦ರಲ್ಲಿ ಓಶೋ ಮರಣದ ನಂತರ ಸ್ವಾಮಿ ರಜನೀಶ್
ಹಿಮಾಲಯದ ಹಾದಿ ಹಿಡಿದರು. ನಡುವೆ ಎರಡು ಬಾರಿ (ಒಟ್ಟೂ ಐದು ವರ್ಷ) ಕಾರ್ಯ ನಿಮಿತ್ತ ವಿದೇಶಕ್ಕೆ ಹೋಗಿ ಬರುತ್ತಿದ್ದ ರಾದರೂ ೨೦೦೬ ರವರೆಗೆ ಒಬ್ಬಂಟಿಗನಾಗಿ ಹಿಮಾಲಯದ ಮಧ್ಯದಲ್ಲಿ ಮೌನಿಯಾಗಿ ಹುದುಗಿಹೋದರು.

ನಂತರ ಪುಣೆಯಲ್ಲಿರುವ ಓಶೋ ಆಶ್ರಮಕ್ಕೆ ಬಂದು ನೆಲೆಸಲು ಆರಂಭಿಸಿದರು. ಅಲ್ಲಿ ಬರುತ್ತಿದ್ದ ಕೆಲವು ವಿದೇಶಿ ಮಿತ್ರರರು ಓಶೋ ವಿಚಾರಗಳನ್ನು ವಿಶ್ವದಾದ್ಯಂತ ಹರಡಲು ಪ್ರಸ್ತಾಪಿಸಿದಾಗ ಒಪ್ಪಿಕೊಂಡರು. ೨೦೦೭ ರಿಂದ ೨೦೧೦ರವರೆಗೆ ಪರ್ಯಟನೆ ಮಾಡಿ, ವಿಶ್ವದ ಎಂಬತ್ತಕ್ಕೂ ಹೆಚ್ಚು ನಗರಗಳಲ್ಲಿ ಅಧ್ಯಾತ್ಮ ಮತ್ತು ಸನ್ಯಾಸಕ್ಕೆ ಸಂಬಂಧಿಸಿದ ಧ್ಯಾನ ಶಿಬಿರಗಳನ್ನು
ಏರ್ಪಡಿಸಿದರು.

೨೦೧೦ರಲ್ಲಿ ಗೋವಾದಲ್ಲಿ ಮಿಸ್ಟಿಕ್ ರೋಸ್ ವಿಶನ್ ಹೆಸರಿನಲ್ಲಿ ಆಶ್ರಮ ಆರಂಭಿಸಲು ಪ್ರಯತ್ನಿಸಿದರಾದರೂ ಅದು ಯಶಸ್ವಿಯಾಗಲಿಲ್ಲ. ಸರಕಾರದ ಪರವಾನಗಿ ವಿಳಂಬವಾದಾಗ ೨೦೧೧ರಲ್ಲಿ ಗೋವಾ ಬಿಟ್ಟು ಮೆಕ್ಸಿಕೋಗೆ ತೆರಳಿದರು. ಅಲ್ಲಿ
ಮೂರು ವರ್ಷ ಜಮೀನು ಖರೀದಿ, ಸರಕಾರದ ಪರವಾನಗಿ ಇತ್ಯಾದಿಗಳನ್ನು ಪೂರೈಸಿ, ಪ್ಲಾಯಾ ಡೆಲ್ ಕಾರ್ಮೆನ್ ಎಂಬ ಸ್ಥಳದಲ್ಲಿ ಐವತ್ತು ಎಕರೆ ಜಾಗದಲ್ಲಿ ರಜನೀಶ್ ಆಶ್ರಮ ಆರಂಭಿಸಿದರು. ವಸತಿ ಮತ್ತು ಆಹಾರ ಹೊರತುಪಡಿಸಿ, ಉಳಿದಂತೆ ಎಲ್ಲವೂ ಶುಲ್ಕರಹಿತ ಎಂಬ ಕಾರಣಕ್ಕಾಗಿ ಈ ಆಶ್ರಮ ಬೇಗ ಜನಪ್ರಿಯವೂ ಆಯಿತು.

ಇಂದು ಯುರೋಪ್ ರಾಷ್ಟ್ರಗಳೂ ಸೇರಿದಂತೆ ಒಟ್ಟೂ ಇಪ್ಪತ್ತಮೂರು ಕಡೆಗಳಲ್ಲಿ ಅವರ ಧ್ಯಾನ ಕೇಂದ್ರಗಳು ಸ್ಥಾಪಿಸಲ್ಪಟ್ಟಿವೆ.
ಒಂದು ಕಾಲದಲ್ಲಿ ಆಶ್ರಮಕ್ಕೆ ಬರುವ ಶ್ರದ್ಧಾಳುಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಇದೇ ರಜನೀಶ್ ತಮ್ಮ ಗುರು ಓಶೋರನ್ನು ಆರೋಪಿಸಿದ್ದರು. ಓಶೋ ಆಶ್ರಮದಲ್ಲಿ ಭಕ್ತರಿಂದ ಸಂಗ್ರಹಿಸುವ ಹಣಕ್ಕೆ ಯಾವುದೇ ಲೆಕ್ಕ ಪತ್ರ ಇಲ್ಲ ಎಂದು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.

ಓಶೋ ಬಳಿ ಇದ್ದ ತೊಂಬತ್ತೊಂಬತ್ತು ರೋಲ್ಸ್ರಾಯ್ಸ ಕಾರಿನ ವಿಷಯದಲ್ಲಿ, ಪುಣೆಯ ಆಶ್ರಮದಲ್ಲಿ ಪಾರದರ್ಶಕತೆಯ ಕೊರತೆಯ ವಿರುದ್ಧ ಮಾತಾಡಲು ಹಿಂಜರಿಯಲಿಲ್ಲ. ಎಪ್ಪತ್ತು ಕೊಠಡಿಗಳನ್ನು ಹೊಂದಿದ ಮೆಕ್ಸಿಕೊದ ಅವರ ಆಶ್ರಮದಲ್ಲಿ ಇಂದು ಧ್ಯಾನ, ಯೋಗ, ವಿಪಾಸನ, ನೃತ್ಯ, ಸಂಗೀತ, ಕಲೆ, ಆಯುರ್ವೇದದ ಚಟುವಟಿಕೆಗಳು ಉಚಿತವಾಗಿ ನಡೆಯುತ್ತಿವೆ.

ಎಲ್ಲಕ್ಕಿಂತ ಮಿಗಿಲಾಗಿ ಅವರ ಇಪ್ಪತ್ತೆಂಟು ವರ್ಷಗಳ ‘ವಿಪಾಸನ ಧ್ಯಾನ’ ಅಧ್ಯಾತ್ಮ ಲೋಕದಲ್ಲಿ ಅವರನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದೆ. ಇತ್ತೀಚೆಗೆ ಅವರಿಗಾದ ಹೃದಯಾಘಾತದ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ‘ವೈದ್ಯರ ಪ್ರಕಾರ ಇದು ಹೃದಯಾ ಘಾತ, ನನ್ನ ಪ್ರಕಾರ ಇದು ನನ್ನ ದೇಹದದ ಆಂತರಿಕ ಸ್ಫೋಟ, ನನಗೆ ಇದು ಆಗುತ್ತಿರುವುದು ಆರನೇ ಬಾರಿ’ ಎಂದು ತಣ್ಣಗೆ
ನುಡಿದಿದ್ದರು ಸ್ವಾಮಿ ರಜನೀಶ್.

೨೦೦೮ರಲ್ಲಿ ಪುಸ್ತಕ ಬರೆಯಲು ಆರಂಭಿಸಿದ ಅವರ ಮೊದಲ ಕೃತಿ ‘ಟಿಯರ್ಸ್ ಆಫ್ ದಿ ಮಿಸ್ಟಿಕ್ ರೋಸ್ (Tears of the mystic rose). ಈ ಪುಸ್ತಕ ಇಂಗ್ಲಿಷ್, ಹಿಂದಿ, ಜರ್ಮನ್, ರಷ್ಯನ್, ಸ್ಪಾನಿಶ್, ಇಟಾಲಿಯನ್, ಕೊರಿಯನ್ ಭಾಷೆಗಳೂ ಸೇರಿದಂತೆ ವಿಶ್ವದ ಹದಿನಾರು ಭಾಷೆಗಳಲ್ಲಿ ಲಭ್ಯವಿದೆ. ಇದರ ಶುಲ್ಕರಹಿತ ಆವೃತ್ತಿ ಅಂತರ್ಜಾಲದಲ್ಲೂ ಲಭ್ಯವಿದ್ದು ಇದುವರೆಗೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಪ್ರತಿಗಳು ಡೌನ್ಲೋಡ್ ಆಗಿದ್ದು, ನೂರ ಎಂಬತ್ತು ದೇಶದ ಜನರಿಗೆ ತಲುಪಿದೆ.

ಇದುವರೆಗೆ ಸ್ವಾಮಿ ರಜನೀಶ್ ಹನ್ನೆರಡು ಕೃತಿಗಳು ಲೋಕಾರ್ಪಣೆಗೊಂಡಿದ್ದು, ಎಲ್ಲವೂ ಅಂತರ್ಜಾಲದಲ್ಲಿ ಲಭ್ಯವಿದೆ.
ಇಷ್ಟಾಗಿಯೂ ಇವರು ವಿವಾದಕ್ಕೆ ಹೊರತಲ್ಲ. ಓಶೋರಂತೆ ಇವರ ಸುತ್ತಲೂ ವಿವಾದ ಸುತ್ತಿಕೊಂಡಿದೆ. ಲೈಂಗಿಕ ಕಿರುಕುಳದಿಂದ ಹಿಡಿದು, ಅಕ್ರಮ ಭೂಮಿ, ಹಣ ಸಂಪಾದನೆ, ಆಸ್ತಿ ವಂಚನೆ, ವ್ಯಕ್ತಿಯನ್ನು ಕಣ್ಮರೆ ಮಾಡಿದ ಆರೋಪಗಳೂ ಇವೆ.

ಅದೆಲ್ಲದಕ್ಕೂ ಅವರು ಉತ್ತರವನ್ನೂ ಕೊಟ್ಟಿದ್ದಾರೆ. ಈ ಆರೋಪ, ಪ್ರತ್ಯಾರೋಪಗಳು ಎಷ್ಟು ಸಮಂಜಸವೋ ಗೊತ್ತಿಲ್ಲ. ರಜನೀಶ್ ಕಳೆದ ವಾರವಷ್ಟೇ ತಮ್ಮ ಅರವತ್ತನೆಯ ಜನ್ಮದಿನ ಆಚರಿಸಿಕೊಂಡರು. ಆ ಸಂಭ್ರಮದಲ್ಲಿ ಸಾಕಷ್ಟು ಶಾಂಪೇನ್ ಬಾಟಲ್‌ನ ಮುಚ್ಚಳ ಹಾರಿದ್ದು, ಕೆಲವು ಶಿಷ್ಯೆ- ಶಿಷ್ಯರ ವರ್ತನೆಗಳು ತೀರಾ ಸಂಪ್ರದಾಯಸ್ಥರಿಗೆ ಒಗ್ಗಲಿಲ್ಲ. ಕೆಲವರು ‘ಹೇಳಿ ಕೇಳಿ ಈತ ಓಶೋ ಶಿಷ್ಯ ತಾನೆ…’ ಎಂದು ಸಮಾಧಾನಪಟ್ಟುಕೊಂಡರು.

ಸ್ವಾಮಿ ರಜನೀಶ್ ಲೆಕ್ಕದಲ್ಲಿ ‘ಅಧ್ಯಾತ್ಮದ ಅಮಲಿನಲ್ಲಿ ಕಳೆದು ಹೋದವನಿಗೆ ಶಾಂಪೇನ್ ಏನು ಮಹಾ…’ ಎಂದಿರಬಹುದು! ಏನೋ, ರಜನೀಶ್ ಹೆಸರಿರುವಲ್ಲಿ ವಿವಾದವೂ ಇರಬೇಕೇನೋ! ತನ್ನ ಗುರು ಓಶೋರನ್ನು ಕೇಂದ್ರವಾಗಿಸಿಕೊಂಡು ಸ್ವಾಮಿ ರಜನೀಶ್ ಬರೆದ ಟಿಯರ್ಸ್ ಆಫ್ ಮಿಸ್ಟಿಕ್ ರೋಸ್ ಪುಸ್ತಕದಲ್ಲಿ ತನ್ನ ತಾಯಿ ವಿಮಿಯ ಬಗ್ಗೆಯೂ ಹೇಳಿಕೊಂಡಿದ್ದರೆ. ಅವರ ಪ್ರಕಾರ ಅವರ ಅಮ್ಮ ರೂಪವತಿ, ಮೃದು ಸ್ವಭಾವದವಳು, ಅತಿಥಿ ಸತ್ಕಾರ ದಲ್ಲಿ ನಿಪುಣೆ, ಮಕ್ಕಳನ್ನು ಪ್ರೀತಿಸುವವಳಾಗಿದ್ದಳು.

ಅಪ್ಪ ಅಹಂಕಾರಿ, ಸೊಕ್ಕಿನ ಮನುಷ್ಯ. ಅಪ್ಪ ಅಮ್ಮನ ಜಗಳದಲ್ಲಿ ನಾನು ಯಾವತ್ತೂ ಅಮ್ಮನ ಪರವಾಗಿ ನಿಲ್ಲುತ್ತಿದ್ದುದರಿಂದ ಅಪ್ಪನಿಗೆ ನನ್ನನ್ನು ಕಂಡರೆ ಅಷ್ಟಕ್ಕಷ್ಟೇ. ದಾರ್ಜಿಲಿಂಗ್‌ನಿಂದ ಒಮ್ಮೆ ರಜೆಗೆಂದು ಮುಂಬೈಗೆ ಬಂದಿದ್ದಾಗ ತಂದೆಯ ಅಧಿಕವಾದ ಕುಡಿತ ಮತ್ತು ಚಿತ್ರರಂಗದ ಕೆಲವು ಕಲಾವಿದೆ ಯರೊಂದಿಗಿನ ಅವರ ಸಂಬಂಧಗಳನ್ನು ಕಂಡು ಬೇಸರಿಸಿಕೊಂಡು ಮನೆ
ಬಿಟ್ಟುಹೋದ ರಜನೀಶ್ ಹಿಂತಿರುಗಿ ಬರಲೇ ಇಲ್ಲ.

ಪತ್ರಿಕೆಯಲ್ಲಿ ಬಂದ ಸುದ್ದಿ ಓದಿಯೇ ಅವರಿಗೆ ತನ್ನ ತಾಯಿಯ ಸಾವಿನ ಸುದ್ದಿ ತಿಳಿದದ್ದು. ರಜನೀಶ್ ಹೇಳುತ್ತಾರೆ, ‘ನಾನು ನನ್ನ ತಾಯಿಯನ್ನು ಪ್ರೀತಿಸುತ್ತಿದ್ದೆ, ಅವಳ ಸೌಮ್ಯ, ಮೃದು ಸ್ವಭಾವಕ್ಕೆ ಆಕರ್ಷಿತನಾಗಿದ್ದೆ. ಅವಳಲ್ಲಿನ ಸರಳತೆ, ಮಾನವೀಯತೆಯ
ಸೂಕ್ಷ್ಮಗಳು ನನಗೆ ಇಷ್ಟ ವಾಗುತ್ತಿದ್ದವು. ಯಾರೊಂದಿಗಾದರೂ ಪರಿಚಯ ಮಾಡಿಕೊಳ್ಳುವಾಗ, ಸಂಬಂಧ ಬೆಳೆಸುವಾಗ ಹಣ, ಅಂತಸ್ತನ್ನು ಆಕೆ ಪರಿಗಣಿಸುತ್ತಿರಲಿಲ್ಲ.

ಚಿತ್ರರಂಗದಲ್ಲಿ ತಾರೆಯಾಗಿದ್ದ ರೂ ಅಡುಗೆ ಮನೆಗೆ ಹೋಗಿ ನಮಗಾಗಿ, ಅತಿಥಿ ಗಳಿಗಾಗಿ ಅವಳೇ ಅಡುಗೆ ಸಿದ್ಧಮಾಡಿ ಬಡಿಸು ತ್ತಿದ್ದಳು. ಸರಳತೆಯನ್ನು ಅಳವಡಿ ಸಿಕೊಂಡು ಬದುಕುತ್ತಿದ್ದ ಅವಳ ಜೀವನ ಶೈಲಿಯನ್ನು ನಾನು ಆರಾಧಿಸುತ್ತಿದ್ದೆ. ನಾನು
ದೊಡ್ಡವನಾಗಿ ಬೆಳೆದು ನಿಂತಾಗ ಅವಳಂತೆಯೇ ಆಗಬೇಕೆಂದು ಬಯಸುತ್ತಿದ್ದೆ.’ ಮಗ ಬೆಳೆದದ್ದನ್ನು ನೋಡಲು, ಬರೆದದ್ದನ್ನು ಓದಲು ಇಂದು ಅವಳೇ ಇಲ್ಲ.

ಮೇಲಿನ ಲೋಕದಿಂದ ಒಮ್ಮೆ ಇಣುಕಿ ನೋಡಿದರೆ ತನ್ನ ಮಗನ ಸುತ್ತ ಲಕ್ಷಾಂತರ ಜನರಿರುವುದನ್ನು ಕಂಡು ತಾಯಿ ಕರುಳು ಸಂತಸಪಟ್ಟಿತು. ತನಗೆ ಬಂದ ಸ್ಥಿತಿ ತನ್ನ ಮಗನಿಗೆ ಬಾರದು ಎಂದು ಮಾತೃ ಹೃದಯ ನಿಟ್ಟುಸಿರು ಬಿಟ್ಟೀತು.