ಸ್ಮರಣೆ
ನಂ.ಶ್ರೀಕಂಠ ಕುಮಾರ್
ಬೆಂದ್ರೆ ಬೇಂದ್ರೆಯಾದಾನು. ಇದು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ನಾಣ್ಣುಡಿ. ಇದು ಸತ್ಯದ ಮಾತೂ ಸಹ. ಪರಿಪಕ್ವ ಕನ್ನಡ ಸಾಹಿತ್ಯ ಕೃಷಿಯನ್ನು ಮಾಡಿದ ಹಲವರಲ್ಲಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಎಂದಿಗೂ ಚಿರಸ್ಮರಣೀಯರು.
ಗುರು ದತ್ತಾತ್ರೇಯರ ಜನ್ಮದಿನವಾದ ಗುರುಪ್ರತಿಪದೆಯಂದು ಅಂದರೆ 1896ರ ಜನವರಿ 31ರಂದು ಧಾರವಾಡದ ಪೋತನೀ
ಓಣಿಯಲ್ಲಿ ಜನ್ಮತಾಳಿದರು. ತಂದೆ ರಾಮಚಂದ್ರ, ತಾಯಿ ಅಂಬವ್ವ ದಂಪತಿಗಳ ಸುಪುತ್ರರಾಗಿ ಜನಿಸಿದ ಇವರಿಗೆ ದತ್ತನೆಂದೇ ನಾಮಕರಣ ಮಾಡಲಾಯಿತು.
ಪ್ರಾಥಮಿಕ ಶಾಲೆಯಿಂದ ಮೊದಲಾಗಿ ಮೆಟ್ರಿಕ್ಯುಲೇಷನ್ ಪಾಸಾಗುವವರೆಗೆ ಧಾರವಾಡದ ಕಾಮನ ಕಟ್ಟೆಯ ವಾಸ್ತವ್ಯ ದತ್ತನನ್ನು ಕವಿಯನ್ನಾಗಿ ಮಾಡಿತು. ಇಂಗ್ಲೀಷ್ ನಾಲ್ಕನೇ ತರಗತಿಯಲ್ಲಿ ದತ್ತನಿಗೆ ಪಠ್ಯವಾಗಿದ್ದ ಮೆಕಾಲೆಯ ಹೊರೇಸಿಯಸ್ ಕತೆಯು
ವಿಶೇಷ ಪರಿಣಾಮ ಉಂಟುಮಾಡಿತು. ಹೈಸ್ಕೂಲಿನಲ್ಲಿದ್ದಾಗ ವಾರ್ಷಿಕೋತ್ಸವದಲ್ಲಿ ಕಾಳಿದಾಸನ ಶಾಕುಂತಲ, ಭಟ್ಟ ನಾರಾಯ ಣನ ವೇಣೀ ಸಂಹಾರ ನಾಟಕದಲ್ಲಿ ಭಾಗವಹಿಸಿದ್ದರು.
ಮುಂದೆ ಕವಿಯಾಗಿ ಬೆಳೆಯಲಿದ್ದ ಬಾಲಕನ ಮೇಲೆ ಈ ಪ್ರಭಾವಗಳು ಗಣನೀಯವಾದವು. ಊರೊಳಗಿನ ವಿಠೋಬ ದೇವರ
ಗುಡಿ, ದತ್ತಾತ್ರೇಯ ಗುಡಿಗಳಲ್ಲಿ ನಡೆಯುತ್ತಿದ್ದ ಕೀರ್ತನ, ಪುರಾಣ – ಪ್ರವಚನಗಳು, ಶಿರಹಟ್ಟಿ ನಾಟಕ ಕಂಪನಿಯ ಪ್ರಯೋಗಗಳು ಇವೆಲ್ಲಾ ಸಮುದಾಯಗೊಂಡು ಬಾಲಕ ದತ್ತನ ಕವಿ ಪ್ರತಿಭೆಯೊಡನೆ ನಾಟ್ಯ ಪ್ರತಿಭೆಯೂ ಸಮಸಮನಾಗಿ ಬೆಳೆಯುವಂತೆ
ಮಾಡಿದವು. ಮನೆಯಲ್ಲಿ ತಾಯಿಯವರು ಹಾಡುತ್ತಿದ್ದ ಉದಯರಾಗದ ಭಕ್ತಿಗೀತೆಗಳು, ಸಂಪ್ರದಾಯದ ಹಾಡುಗಳು, ದಾಸರ ಕೀರ್ತನೆಗಳು ದತ್ತರ ಜ್ಞಾನವನ್ನು ಬೆಳಗಿಸಿದವು.
1913ರಲ್ಲಿ ಮೆಟ್ರಿಕ್ಯುಲೇಷನ್ ಪಾಸಾದ ಸಂತಸದ ಸುದ್ದಿಯನ್ನು ಪ್ರೀತಿಯ ಅಜ್ಜಿ ಗೋದಾಬಾಯಿಗೆ ತಿಳಿಸಲೆಂದು ಮನೆಗೆ ಬಂದಾಗ ಕಂಡಂದು ಅಜ್ಜಿಯ ಮೃತ ಕಳೆಬರಹ. ಅಜ್ಜಿಯ ಸಾವಿನೊಂದಿಗೆ ದತ್ತನ ಬದುಕಿನಲ್ಲಿ ದೊಡ್ಡದೊಂದು ತಿರುವು ಪಡೆಯಿತು. ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಅನಿವಾರ್ಯವಾಗಿ ಪೂಣೆಗೆ ತೆರಳಬೇಕಾಯಿತು. 1918ರಲ್ಲಿ ಪೂಣೆಯಲ್ಲಿ
ಬಿ.ಎ. ಪಾಸಾದ ನಂತರ ಬೇಂದ್ರೆಯವರು ಮತ್ತೆ ಧಾರವಾಡಕ್ಕೆ ಮರಳಬೇಕಾಯಿತು.
ಅದೇ ಸಂದರ್ಭ ದಲ್ಲಿ ನಾಲ್ಕನೇ ಕರ್ನಾಟಕ ಸಾಹಿತ್ಯ ಸಮ್ಮೇಳನವನ್ನು ಧಾರವಾಡದಲ್ಲಿ ಆಯೋಜಿಸಲಾಗಿತ್ತು. ಸಮ್ಮೇಳನದ
ಅಂಗವಾಗಿ ಜರುಗಿದ ಕವಿಗೋಷ್ಠಿಯಲ್ಲಿ ಬೇಂದ್ರೆ ಯವರಿಂದ ‘ಕೋಗಿಲೆ’ ಕಾವ್ಯ ವಾಚನವಾಯಿತು. ಅಲ್ಲಿನ ಗೋಷ್ಠಿಯಲ್ಲಿ ಹಾಜರಿದ್ದ ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರರಾಯರು, ಮುದವೀಡು ಕೃಷ್ಣರಾಯ
ರಂಥ ಕರ್ನಾಟಕ ಏಕೀಕರಣ ಚಳುವಳಿಯ ನಾಯಕರು ಈ ಕವಿಯ ಸ್ವರಚಿತ ಕಾವ್ಯವನ್ನು ಮೆಚ್ಚಿಕೊಂಡು ಸಂತಸ ವ್ಯಕ್ತಪಡಿಸಿ ದರು.
ಮುಂದೆ ತಾವು ವಿದ್ಯಾರ್ಥಿಯಾಗಿದ್ದ ಹೈಸ್ಕೂಲಿನಲ್ಲೇ ಮಾಸ್ತರ ರಾದರು. ಅಂದಿನಿಂದ ಬೇಂದ್ರೆ ಮಾಸ್ತರ ಎಂದೇ ಖ್ಯಾತರಾದರು. ಇವರ ಸಾಹಿತ್ಯ ಕೃಷಿಯು ಮುಂದುವರಿದು ಕನ್ನಡ ಕಾವ್ಯಲೋಕದ ಗಾರುಡಿಗ ಎಂದೇ ಖ್ಯಾತರಾದರು. ರಸವೇ ಜನನ, ರಸವೇ
ಮರಣ, ಸಮರಸವೇ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಅಪರೂಪದ ರಸಕ. ಕನ್ನಡಿಗರನ್ನು ನಿಜವಾಗಿಯೂ ಭಾವಲೋಕದ ರಸಯಾತ್ರೆಗೆ ಕೊಂಡೊಯ್ದ ಸಾಹಿತಿ. ಅವರಲ್ಲಿ ಕಾಣಬರುವ ವಿಷಯ ಮತ್ತು ನಿರೂಪಣೆಯ
ವೈವಿಧ್ಯಗಳು ಬೆರಗುಗೊಳಿಸುವಂತಹವು.
ಬೇಂದ್ರೆಯವರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿಬಂದವರಲ್ಲ. ಕಷ್ಟಕಾರ್ಪಣ್ಯ, ನೋವು – ನಲಿವುಗಳ ನಡುವೆಯೇ ಅರಳಿದ ಬದುಕು ಅವರದು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ತಾರುಣ್ಯದಲ್ಲಿ ತಾಯಿಯನ್ನೂ ಕಳೆದುಕೊಂಡು
ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದವರು. ಅವರ ಸಾಹಿತ್ಯದ ಬರವಣಿಗೆಗೆ ಅಂಬಿಕಾತನಯದತ್ತ ಎಂದೇ ಕಾವ್ಯನಾಮ ರೂಢಿಗೆ ಬಂತು. ಇತ್ತ ದೇಶದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಎಲ್ಲೆಡೆ ಹಬ್ಬ ತೊಡಗಿತು.
ಕಾವ್ಯನಾಮ ಅಂಬಿಕಾತನಯ ಎಂಬ ಹೆಸರಿನಲ್ಲಿ ನರಬಲಿ ಎಂಬ ದೇಶಭಕ್ತಿ ಗೀತೆಯ ರಚನೆಯ ಆಧಾರದ ಮೇಲೆ ಕವಿಯು ರಾಜದ್ರೋಹವೆಸಗಿದ್ದಾನೆಂದು ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಜೈಲುವಾಸ ವಿಧಿಸಲಾಯಿತು. ನಂತರ
ಬಿಡುಗಡೆಯಾದ ಮೇಲೆ ಜೈಲುವಾಸಿಯಾದ ಪರಿಣಾಮ ಎಷ್ಟಾಯಿತೆಂದರೆ ಎಲ್ಲೂ ನೆಲೆಯಾಗಿ ನಿಲ್ಲಬಲ್ಲ ಉದ್ಯೋಗವಿಲ್ಲದೆ ಅಲೆಮಾರಿಯಂತೆ ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗವನ್ನು ಹಿಡಿದು, ನಡುನಡುವೆ ನಿರುದ್ಯೋಗಿಯಾಗಿ ಕಷ್ಟವನ್ನು
ಅನುಭವಿಸಿದ್ದುಂಟು.
ಹಾಗಾಗಿ ಓದುವ ಹವ್ಯಾಸ ಹೆಚ್ಚಾಯಿತು. ಸಂಸ್ಕೃತ, ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ಸಾಹಿತ್ಯಗಳ ಅಧ್ಯಯನದಿಂದ
ಪರಿಪಕ್ವವಾದ ಚೇತನರಾದರು. ನಂತರ ಗದಗ, ಹುಬ್ಬಳ್ಳಿ ಹೈಸ್ಕೂಲುಗಳಲ್ಲಿ ಮಾಸ್ತರಿಕೆ ಮಾಡಿದ ಮೇಲೆ ಸೊಲ್ಲಾಪುರದ ಡಿ.ಎ.ವಿ.ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡು ಸುಮಾರು ಹನ್ನೆರಡು ವರ್ಷಗಳ ಪ್ರಾಧ್ಯಾಪಕ ವೃತ್ತಿಯ ನಂತರ ನಿವೃತ್ತಿಯಾಗಿ ಮತ್ತೆ ಧಾರವಾಡದ ಸಾಧನಕೇರಿಯಲ್ಲಿ ನೆಲೆಸಿದರು. ಆಕಾಶವಾಣಿ ಕೇಂದ್ರದಲ್ಲಿ ಸಾಹಿತ್ಯ ಸಲಹೆಗಾರರಾಗಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಕೆ, ಆನಂತರ ಅಧ್ಯಾತ್ಮ ಚಿಂತನೆ, ಸಂಖ್ಯಾಶಾಸ್ತ್ರ ಅನ್ವೇಷಣೆ, ಮನೆಮನೆಗೆ ಮೈತ್ರಿಯ ಸಂವಾದ, ಜೀವನ ಜಿಜ್ಞಾಸೆಯಲ್ಲೇ ದಿನ ಕಳೆದವು.
1926ರಲ್ಲಿ ಬೇಂದ್ರೆಯವರು ಧಾರವಾಡದಲ್ಲಿ ಆತ್ಮೀಯರಾದ ವಿ.ಕೃ. ಗೋಕಾಕ, ರಂ.ಶ್ರೀ. ಮುಗಳಿ, ಬೆಟಗೇರಿ ಕೃಷ್ಣಶರ್ಮ, ಶಂಭಾಜೋ ಮೊದಲಾದ ಸ್ನೇಹಿತರನ್ನೊಳಗೊಂಡ ಗೆಳೆಯರ ಬಳಗ ಸ್ಥಾಪಿಸಿ, ತನ್ಮೂಲಕ ಜಯಕರ್ನಾಟಕ, ಸ್ವಧರ್ಮ ಹಾಗೂ
ವಾಗ್ಭೂಷಣ ಪತ್ರಿಕೆಯ ಸಂಪಾದಕತ್ವವನ್ನು ನಿರ್ವಹಿಸಿದರು. ಹಾಗೂ ಜೀವನ ಎಂಬ ಪತ್ರಿಕೆಯ ಸಂಪಾದಕತ್ವವನ್ನೂ ಸಹ ಸ್ವಲ್ಪಕಾಲ ಮಾಡಿದರು.
ನಂತರ ಬಳಗವು ಮೂಲೆ ಗುಂಪಾದುದು ಬೇಂದ್ರೆ ಕವಿ ಹೃದಯಕ್ಕೆ ನೋವುಂಟು ಮಾಡಿತು. 1934ರಲ್ಲಿ ಅವರ ಮೂರ್ತಿ
ಮತ್ತು ಕಾಮಕಸ್ತೂರಿ ಸಂಕಲನ ಹೊರಬಂದಿತು. ಅದರಲ್ಲಿ ಮೂರ್ತಿ ಕತೆ ಬಳಗದ ದುರಂತ ಕಥೆಯನ್ನು ಧ್ವನಿಸುತ್ತದೆ. ಕಾಮ ಕಸ್ತೂರಿಯಲ್ಲಿ ವಿವಿಧ ಚಂದದ ಪ್ರಣಯಗೀತೆಗಳು ಹೆಚ್ಚಾಗಿ ಛಂದಸ್ಸಿನ ಚೌಕಟ್ಟಿನ ಚಿತ್ರಗಳಾಗಿ ಪ್ರಕಟಗೊಂಡವು. ಬೇಂದ್ರೆ ಯವರ ಭಾವಗೀತೆ ಬದುಕಿನ ಭಂಡಾರವಾಗಿರುವಂತೆ ಪ್ರಕೃತಿಯ ಭಂಡಾರವೂ ಹೌದು.
ಅವರೊಬ್ಬ ಪ್ರಕೃತಿಯ ಆರಾಧಕರು. ಶ್ರಾವಣದ ವರ್ಣನೆಯಲ್ಲಂತೂ ಕವಿಯ ಪ್ರಕೃತಿ ಪೂಜೆ ಅಮೋಘ ವಾದುದು. ಹಾಗಾಗಿ ಶ್ರಾವಣದ ಕವಿ ಎಂದೇ ಖ್ಯಾತರಾದರು. ವರಕವಿ ಬೇಂದ್ರೆಯವರು ಕವಿ ಮಾತ್ರವಾಗಿರದೆ ಉತ್ತಮ ವಿನೋಧ – ವಿಡಂಬನೆಗಳ ಉತ್ಕೃಷ್ಟ ಸಾಮಾಜಿಕ ಪ್ರಜ್ಞೆಯ ನಾಟಕಕಾರ ರಾಗಿದ್ದರು. ಬೇಂದ್ರೆಯವರು ಹೆಚ್ಚಾಗಿ ಸಮಯ ಸ್ಪೂರ್ತಿಯಿಂದಲೇ ಮಾತ ನಾಡುತ್ತಿದ್ದರು.
ಆಧುನಿಕ ಕನ್ನಡ ಗದ್ಯಕ್ಕೆ ಒಂದು ಸುಂದರ ರೂಪವನ್ನು ನೀಡಿದವರಲ್ಲಿ ಬೇಂದ್ರೆ ಪ್ರಮುಖರು. ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳ ಸಾಲಿನ ಅಗ್ರಗಣ್ಯರು. ಇವರ ಕವನ ಸಂಕಲನವು ಕೃಷ್ಣಕುಮಾರಿ, ಮೇಘದೂತ, ಗರಿ, ಸಖಿಗೀತ, ನಾದಲೀಲೆ, ಉದ್ಯೋಗಪರ್ವ, ಹಾಡು ಪಾಡು ಹೀಗೆ ಸುಮಾರು ಇಪ್ಪತ್ತಾರು ಕವನ ಸಂಕಲನ ಹಾಗೂ ಒಂಭತ್ತು ವಿಮರ್ಶೆಗಳು ಪ್ರಮುಖವಾಗಿ ಕವಿ ಲಕ್ಷ್ಮೀಶನ ಜೈಮಿನಿ ಭಾರತಕ್ಕೆ ಮುನ್ನುಡಿ, ಕಾವ್ಯೋದ್ಯೋಗ, ಸಾಹಿತ್ಯದ ರಾಟ್ ಸ್ವರೂಪ, ಕುಮಾರವ್ಯಾಸನ ಪುಸ್ತಿಕೆಗಳು ಹಾಗೂ ಎರಡು ಪ್ರಮುಖ ನಾಟಕಗಳು ಹುಚ್ಚಾಟಗಳು, ಹೊಸ ಸಂಸಾರ ಮತ್ತಿತರ ನಾಟಕಗಳು ಹಾಗೂ ನಿರಾಭರಣ
ಸುಂದರಿ ಎಂಬ ಹರಟೆಯನ್ನು ರಚಿಸಿದ್ದು ವಿಶೇಷ.
ಸುಮಾರು ಏಳು ಅನುವಾದಗಳನ್ನು ಪ್ರಕಟಿಸಿ, ಶ್ರೇಷ್ಠ ಅನುವಾದಕರಾಗಿ ಸಾಹಿತ್ಯ ಲೋಕದಲ್ಲಿ ನಿಲ್ಲುತ್ತಾರೆ. ವಿಶೇಷವಾಗಿ ಮರಾಠಿ ಸಾಹಿತ್ಯ ಕೃಷಿಯಲ್ಲೂ ಸೊಗಸನ್ನು ಮೂಡಿಸಿದ್ದಾರೆ. ಶ್ರೀ ಅರವಿಂದರ ವಿಚಾರಧಾರೆಯಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದರು. ಒಂದು ಬಾರಿ ಜರ್ಮನ್ ಭಾಷಾಶಾಸ್ತ್ರದ ಅಧ್ಯಾಪಕ ರೊಬ್ಬರು ಭಾರತಕ್ಕೆ ಬಂದು ಉಪನ್ಯಾಸಗಳನ್ನು ನೀಡಿ ಬೆಂಗಳೂರಿಗೆ ಬಂದರು.
ಅವರು ಮಹಾನ್ ದಾರ್ಶನಿಕ ಶ್ರೀ ಅರವಿಂದರ ಸಾಹಿತ್ಯವನ್ನು ಅಭ್ಯಾಸ ಮಾಡುತ್ತಿದ್ದರಂತೆ. ಅವರು ಭಾರತೀಯ ಭಾಷಾ ಶಾಸ್ತ್ರಜ್ಞರೊಬ್ಬರನ್ನು ಕೇಳಿದರಂತೆ, ಭಾರತದಲ್ಲಿ ಶ್ರೀಅರವಿಂದರ ಅಧ್ಯಾತ್ಮಿಕ ನೆಲೆಗಳು ಮತ್ತು ಸಾಹಿತ್ಯದಲ್ಲೂ ಅವರನ್ನು
ಅರಿತವರು ಯಾರಾದರು ಇದ್ದಾರೆಯೇ? ಅದಕ್ಕೆ ಭಾಷಾ ಶಾಸ್ತ್ರಜ್ಞರು ನಿಮಗೆ ಎರಡರಲ್ಲೂ ಗಟ್ಟಿಗರು ಬೇಕೆಂದರೆ ಬೇಂದ್ರೆ ಯವರೇ ಸರಿ. ಬೇಂದ್ರೆಯವರಿಗೆ ಶ್ರೀಅರವಿಂದರು ಅಧ್ಯಾತ್ಮಿಕ ಗುರುಗಳು.
ಜರ್ಮನಿಯ ವಿದ್ವಾಂಸರು ಬೇಂದ್ರೆ ಯವರನ್ನು ಸಂಪರ್ಕಿಸಿ ಅನೇಕ ದಿನಗಳು ಬೇಂದ್ರೆ ಯವರೊಡನೆ ಶ್ರೀಅರವಿಂದರ ಬಗ್ಗೆ ಚರ್ಚೆ ನಡೆಸಿ ವಿಷಯ ಸಂಗ್ರಹಿಸಿ ಮನನ ಮಾಡಿಕೊಂಡ ಮೇಲೆ ಅವರು ಹೊರಡುವ ಮುನ್ನ ಒಂದು ಸಂದೇಹವನ್ನು ಬೇಂದ್ರೆಯವರೊಡನೆ ತಿಳಿದು ಬಗೆಹರಿಸಿಕೊಂಡು ಹೋಗಬೇಕು ಎಂದು ಕೊಂಡು ಬೇಂದ್ರೆಯೊಡನೆ ಕೇಳಿದರಂತೆ. ನೀವು ಶ್ರೀ
ಅರವಿಂದರನ್ನು ದೇವರಂತೆ ಕಾಣುತ್ತೀರಿ. ಅದು ಸರಿ.
ಆದರೆ ನೀವೂ ಒಬ್ಬ ಕವಿ. ಶ್ರೀ ಅರವಿಂದರೂ ಕವಿಯೇ. ಈ ಇಬ್ಬರು ಕವಿಗಳಲ್ಲಿ ಯಾರು ಶ್ರೇಷ್ಠರು? ತಕ್ಷಣ ಬೇಂದ್ರೆಯವರು ಕವಿಯಾಗಿ ಬೇಂದ್ರೆ ದೊಡ್ಡವ, ದಾರ್ಶನಿಕನಾಗಿ ಶ್ರೀಅರವಿಂದರು ನನ್ನ ಗುರುಗಳು ಎಂದರಂತೆ. ಇವರ ಅರಳು – ಮರಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮರಾಠಿಯ ಸಂವಾದ ಗ್ರಂಥಕ್ಕೆ ಕೇಳ್ಕರ್ ಪ್ರಶಸ್ತಿ, ಇವರ ನಾಕು ತಂತಿ ಕವನ ಸಂಕಲನವು
ನಲವತ್ನಾಲ್ಕು ಕತೆಗಳ ಒಂದು ಪುಟ್ಟ ಗ್ರಂಥ.
ಇದರಲ್ಲಿ ಆತ್ಮ – ಅಧ್ಯಾತ್ಮ, ಲೌಕಿಕ – ಪಾರಮಾರ್ಥ, ವ್ಯಕ್ತಿ – ಶಕ್ತಿ, ಕೃಷಿ – ರಾಜಕೀಯ ಇತ್ಯಾದಿ ದ್ವಂದ್ವಗಳನ್ನು ಧ್ವನಿಸಿದೆ. ಈ ನಾಕು ತಂತಿ ಸಂಕಲನಕ್ಕೆ ಭಾರತದ ಶ್ರೇಷ್ಠ ಜ್ಞಾನಪೀಠ ಪ್ರಶಸ್ತಿಯು ಲಭ್ಯವಾಗಿದೆ. ಬೇಂದ್ರೆಯವರ ಕೃತಿಗಳಲ್ಲಿ ಗ್ರಾಮೀಣ ಭಾಷೆಯ ಜಾನಪದ ಸಾಹಿತ್ಯ ನುಡಿಗಟ್ಟುಗಳು ಸರ್ವೇ ಸಾಮಾನ್ಯವಾಗಿ ಬಳಕೆಯಾಗಿವೆ. ಬೇಂದ್ರೆಯವರು ಸಾಹಿತ್ಯ ದಾರ್ಶನಿಕ
ಲೋಕಕ್ಕೂ ವಿಶೇಷ ಕೊಡುಗೆ ನೀಡಿದ್ದಾರೆ. ಇವರ ಕವನಗಳು ಹಲವಾರು ವಿಚಾರ ಲಹರಿಗಳ ವೈವಿಧ್ಯ ಮಯ ಮಹಾಸಂಗಮ. ಮೇಲ್ನೋಟಕ್ಕೆ ಬೇಂದ್ರೆ ಸಾಹಿತ್ಯವು ಪ್ರಾಸಬದ್ಧವಾಗಿ ಸಂಗೀತಕ್ಕೆ ಹೊಂದಿಕೊಂಡಂತಿದ್ದರೂ ಅದರ ಒಳಾರ್ಥ ನಿಗೂಢ.
ಕೇವಲ ಕಾವ್ಯಾತ್ಮಕ ಮನಸ್ಸು ಮಾತ್ರ ಅರ್ಥ ಮಾಡಿಕೊಳ್ಳಬಲ್ಲಂತಹುದು. ಇವರ ಕತೆಗಳಾದ ಇಳಿದು ಬಾ ತಾಯೆ ಇಳಿದು ಬಾ, ಮೂಡಲ ಮನೆಯ ಮುತ್ತಿನ ನೀರಿನ, ಉತ್ತರ ಧೃವದಿಂದಕ್ಷಿಣ ಧೃವಕೂ, ನೀ ಂಗ ನೋಡ ಬ್ಯಾಡ ನನ್ನ ಮೊದಲಾದವು ಕನ್ನಡ
ಚಲನಚಿತ್ರಗಳಲ್ಲೂ ಸಹ ಅಳವಡಿಸಿರುವುದು ವಿಶೇಷ. ಬೇಂದ್ರೆಯವರಿಗೆ ಮೈಸೂರು ವಿಶ್ವವಿದ್ಯಾನಿಲಯ, ಕಾಶಿ ವಿದ್ಯಾಪೀಠ ಹಾಗೂ ಕರ್ನಾಟಕ ವಿಶ್ವ ವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
1968ರಲ್ಲಿ ಭಾರತ ಸರಕಾರದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು. 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 27ನೇ ಕನ್ನಡ ಸಾಹಿತ್ಯ ರಾಜ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ಬೇಂದ್ರೆ ಯವರು ರಚಿಸಿದ ಮಹಾ ಕಾವ್ಯಗಳು ಭಾವಗೀತೆಗಳಾಗಿ ಜನಮನವನ್ನು ತಲುಪಿ ಗಾಯಕರ ಹಾಗೂ ಶೋತೃಗಳ ಮನಸ್ಸನ್ನು ಪುಳಕಿತ ಗೊಳಿಸಿದೆ.
ರಸಕವಿಯು ತಮ್ಮ ಎಂಭತೈದನೇ ವಯಸ್ಸಿನಲ್ಲಿ ಅನಾರೋಗ್ಯಕ್ಕೊಳಗಾಗಿ ದಿನಾಂಕ 26-10-1981ರಂದು ಮುಂಬೈಯಲ್ಲಿ ನರಕ ಚತುರ್ದಶಿಯಂದು ಸ್ವರ್ಗಸ್ಥರಾದರು. ಅವರ ಜನ್ಮದಿನದಂದು ವರಕವಿಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವೆಂದೇ ಭಾವಿಸೋಣ.