Saturday, 23rd November 2024

ಪ್ರತಿಭಟಿಸುವುದು ಸಂವಿಧಾನದ ಹಕ್ಕು ಹೊರತು, ಹಿಂಸಾಚಾರವಲ್ಲ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ರೀತಿ ನಡೆಯಬೇಕು ಎನ್ನುವುದನ್ನು ತೋರಿಸಿದ್ದ ಭಾರತಕ್ಕೆ ಧರಣಿ, ಪ್ರತಿಭಟನೆ, ರ‍್ಯಾಲಿಗಳೇನು ಹೊಸದಲ್ಲ. ಸರಕಾರದ ತಪ್ಪು ನಿರ್ಧಾರಗಳನ್ನು ತಿದ್ದುವುದಕ್ಕಾಗಿಯೇ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕನ್ನು  ನೀಡಲಾಗಿದೆ.

ಆದರೆ, ಈ ಪ್ರತಿಭಟನೆ ಯಾವ ರೀತಿ ನಡೆಯುತ್ತದೆ ಎನ್ನುವುದರ ಮೇಲೆ, ಆ ಪ್ರತಿಭಟನೆಯ ಗಂಭೀರತೆ ಅರಿವಾಗುತ್ತದೆ. ಪ್ರತಿಭಟನೆ ಪ್ರತಿಭಟನೆಯಾಗಿಯೇ ಉಳಿಯುವುದಕ್ಕೂ, ಹಿಂಸಾಚಾರವಾಗಿ ಸಾರ್ವಜನಿಕ ಆಸ್ತಿ ನಷ್ಟವಾಗುವುದಕ್ಕೂ ಅಜಗಜಾಂತರವಿದೆ.

ಹೌದು, ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಕಾಯಿದೆಗಳನ್ನು ವಿರೋಧಿಸಿ ಎರಡು ತಿಂಗಳ ಕಾಲ ನಡೆದ
ರೈತರ ಪ್ರತಿಭಟನೆಗೂ, ಸರಕಾರ ತನ್ನ ಮಾತನ್ನು ಕೇಳುತ್ತಿಲ್ಲವೆಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ಆ ರ‍್ಯಾಲಿ ರ‍್ಯಾಲಿಯಾಗಿ ಉಳಿಯದೇ
ಹಿಂಸಾಚಾರಕ್ಕೆ ತಿರುಗಿದ್ದನ್ನು ಸಂವಿಧಾನವಾಗಲೀ, ಸರಕಾರ ಗಳಾಗಲೀ ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಳ್ಳಲುಬಾರದು. ರೈತರು ದೆಹಲಿಯ ಗಡಿಯಲ್ಲಿ ಕಳೆದ ಎರಡು ತಿಂಗಳಿನಿಂದ ಕೇಂದ್ರ ಸರಕಾರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ
ಮಾಡು ತ್ತಿದ್ದಾರೆ. ರೈತರು ತಮಗೆ ಆಗಬಹುದಾದ ಅನ್ಯಾಯ ವನ್ನು ಪ್ರತಿಭಟಿಸುವ ಹಕ್ಕನ್ನು ನಮ್ಮ ಸಂವಿಧಾನ ಅವರಿಗೆ ನೀಡಿದೆ.

ರೈತರು ಪ್ರತಿಭಟನೆ ನಡೆಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ರೈತರೊಂದಿಗೆ ಮಾತುಕತೆ ಮೂಲಕ ಪ್ರತಿಭಟನೆಯನ್ನು ಹಿಂಪಡೆಯು ವಂತೆ ಮಾಡಲು ಕೇಂದ್ರ ಸರಕಾರ ಆರಂಭದಲ್ಲಿ ವಿಳಂಬ ಹಾಗೂ ನಿರ್ಲಕ್ಷ್ಯ ತೋರಿದರೂ, ಬಳಿಕ 12ಕ್ಕೂ ಹೆಚ್ಚು ಸುತ್ತಿನ ಮಾತು ಕತೆ ನಡೆಸಿದರು. ಆದರೆ, ಕೃಷಿ ಕಾಯಿದೆಗಳನ್ನು ಹಿಂಪಡೆಯುವುದೊಂದೇ ಏಕಮೇವ ಒತ್ತಾಯವೆಂದು ರೈತರು ಕೂತಿದ್ದರಿಂದ, ಸರಕಾರ ಹಾಗೂ ರೈತರ ನಡುವಿನ ಬಿಕ್ಕಟ್ಟು ಶಮನವಾಗುವ ಹಂತ ಕಾಣಲಿಲ್ಲ. ರೈತರು ತಮ್ಮ ಹಠವನ್ನು ಸಡಿಲಿಸದೇ ಪ್ರತಿಭಟನೆ ಮುಂದುವರಿಸಿದ್ದು, ಸರಿಯೋ ತಪ್ಪೋ ಎನ್ನುವುದು ಬೇರೆ ವಿಷಯ.

ಪ್ರಸ್ತಾಪಿಸುತ್ತಿರುವ ಪ್ರಮುಖ ವಿಷಯವೆಂದರೆ, ರೈತರ ಆಗ್ರಹಕ್ಕೆ ಸರಕಾರ ಮಣಿಯದೇ ಇದ್ದಾಗ, ಪ್ರತಿಭಟನಾ ಸಂಘಟನೆಗಳು, ಈ ಪ್ರತಿಭಟನೆಗೆ ರ‍್ಯಾಲಿಯ ರೂಪ ನೀಡಲು ಮುಂದಾದರು. ಈ ರ‍್ಯಾಲಿಯಲ್ಲಿ ಸಾವಿರಾರು ಟ್ರ್ಯಾಕ್ಟರ್‌ಗಳನ್ನು ಓಡಿಸಿ, ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನವನ್ನು ಮಾಡಲು ಮುಂದಾದರು. ಇದಕ್ಕೆ ಆರಂಭದಲ್ಲಿ ಪೊಲೀಸ್ ಇಲಾಖೆ ಅವಕಾಶ ನೀಡದಿದ್ದರೂ, ಬಳಿಕ ದೆಹಲಿಯ ಹೊರಭಾಗದಲ್ಲಷ್ಟೇ ಟ್ರ್ಯಾಕ್ಟರ್ ರ‍್ಯಾಲಿ ಮಾಡುವ ಭರವಸೆಯನ್ನು ಸಂಘಟನೆಗಳು ನೀಡಿದ್ದ ರಿಂದ, ಅವಕಾಶ ನೀಡಿತ್ತು.

ಆದರೆ, ಈ ಎಲ್ಲ ಭರವಸೆಗಳನ್ನು ಹುಸಿಗೊಳಿಸಿ, ಗಣರಾಜ್ಯೋತ್ಸವದ ದಿನ ಆಗಿದ್ದೆಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ತಲೆತಗ್ಗಿಸು ವಂತಹದ್ದು. ಹೌದು, ಗಣರಾಜ್ಯೋತ್ಸವದ ದಿನ ರೈತರು ಟ್ರ್ಯಾಕ್ಟರ್ ಮೂಲಕ ದೆಹಲಿ ಪ್ರವೇಶಿಸಿ, ಬಳಿಕ ಪೊಲೀಸರ ಮೇಲೆ ಹಲ್ಲೆ
ನಡೆಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆಡವಿದ್ದು, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೆಂಪುಕೋಟೆಗೆ
ಹೋಗಿದ್ದು ಒಪ್ಪುವ ನಡೆಯಲ್ಲ. ಅದರಲ್ಲಿಯೂ ಸಂವಿಧಾನ ದಲ್ಲಿರುವ ಹಕ್ಕನ್ನು ಪಡೆದು, ಸಂವಿಧಾನ ಅಳವಡಿಸಿಕೊಂಡ
ದಿನವೇ, ಸಂವಿಧಾನಕ್ಕೆ ಅಪಚಾರ ಮಾಡುವ ರೀತಿ ನಡೆದು ಕೊಂಡದ್ದು ನಿಜಕ್ಕೂ ತಲೆತಗ್ಗಿಸುವ ಸಂಗತಿ.

ಅಷ್ಟಕ್ಕೂ ಟ್ರ್ಯಾಕ್ಟರ್ ರ‍್ಯಾಲಿ ಮಾಡಿದ ರೈತರಲ್ಲಿ ಎಲ್ಲರನ್ನು ಈ ಸಾಲಿಗೆ ಸೇರಿಸಲು ಸಾಧ್ಯವಿಲ್ಲ. ಅಲ್ಲಿ ಸೇರಿದ್ದ ಶೇ.99ರಷ್ಟು ಮಂದಿ ಸಂವಿಧಾನ ನೀಡಿರುವ ಇತಿಮಿತಿ ಯಲ್ಲಿಯೇ ತಮ್ಮ ಪ್ರತಿಭಟನೆಯನ್ನು ಹೊರಹಾಕುತ್ತಿದ್ದರು. ಆದರೆ, ಕೆಲವೇ ಕೆಲವರು
ಪ್ರತಿಭಟನೆಯ ಹಾದಿಯನ್ನು ಇನ್ನೊಂದು ಕಡೆ ತೆಗೆದುಕೊಂಡು ಹೋದರು. (ಈ ರೀತಿ ನಡೆದುಕೊಂಡವರಲ್ಲಿ ಎಷ್ಟು ಮಂದಿ
ರೈತರು ಎನ್ನುವುದು ಬೇರೆ ವಿಷಯ) ಆದರೆ, ಕೆಲವೇ ಕೆಲವರು ಮಾಡಿದ ದಾಂಧಲೆಯಿಂದ ಇಡೀ ರೈತರ ಮೇಲೆ ಈ ಹುಚ್ಚಾಟದ
ಆರೋಪ ಬಂದಿದೆ.

ಅದಕ್ಕಾಗಿಯೇ ಕೆಲ ರೈತ ಸಂಘಟನೆಗಳು ಈಗಾಗಲೇ ಈ ಹೋರಾಟದ ಹಾದಿಯಿಂದಲೇ ಹಿಂದಕ್ಕೆ ಸರಿದಿವೆ. ಆ ಒಂದು ಘಟನೆ ಯಿಂದ, ಇಡೀ ಹೋರಾಟವೇ Dilute ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಹಾಗೆ ನೋಡಿದರೆ, ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಕೇಂದ್ರ ಸರಕಾರದಲ್ಲಿರುವ ಪ್ರತಿಯೊಬ್ಬರಿಗೂ ಇದು ಬೇಕಾಗಿತ್ತು. ರೈತ ಸಂಘಟನೆಯಲ್ಲಿ ಒಡಕು ತರದೇ ಈ ಹೋರಾಟವನ್ನು ಸಮಾಪ್ತಿ ಮಾಡುವುದು ಸುಲಭದ ಮಾತಾಗಿರಲಿಲ್ಲ.

ಹಾಗೆ ನೋಡಿದರೆ, ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಕಾಯಿದೆಗಳ ಪರ – ವಿರೋಧವಾಗಿ ಹಲವು ಚರ್ಚೆಗಳು ನಡೆದವು. ಬಿಜೆಪಿ ನಾಯಕರು, ಕೃಷಿ ಕಾಯಿದೆಯ ಮಹತ್ವವನ್ನು ದೊಡ್ಡ ಧ್ವನಿಯಲ್ಲಿ ಹೇಳಿದರೆ, ವಿರೋಧಿಸಲು ಪ್ರತಿಪಕ್ಷಗಳು ಸಾವಿರಾರು ಅಂಶಗಳನ್ನು ಜನರ ಮುಂದಿಟ್ಟರು. ಯಾವುದೇ ಕಾಯಿದೆಗಳು ಜಾರಿಗೆ ಬಂದರೂ, ಈ ಪರ ವಿರೋಧ ಚರ್ಚೆಗಳು ಸಹಜ. ಆದರೆ, ಎಪಿಎಂಸಿ ತಿದ್ದುಪಡಿ, ವಿದ್ಯುತ್ ಬಿಲ್ ಸೇರಿದಂತೆ ಕೇಂದ್ರ ಸರಕಾರದ ಕೃಷಿ ಕಾಯಿದೆಗಳನ್ನು ಪ್ರತಿಪಕ್ಷಗಳು ಮಾತ್ರ ವಲ್ಲದೇ, ದೇಶದ ವಿವಿಧ ಭಾಗದ ರೈತರು ವಿರೋಧಿಸಿದರು. ಈ ವಿರೋಧದ ಕೂಸಾಗಿಯೇ ದೆಹಲಿಯಲ್ಲಿ ವಿವಿಧ ರೈತ ಸಂಘಟನೆ ಗಳು ಕಳೆದ ಎರಡು ತಿಂಗಳ ಹಿಂದೆ ಪ್ರತಿಭಟನೆಗೆ ಮುಂದಾಗಿದ್ದವು.

ಇದರಲ್ಲಿ ಪ್ರಮುಖವಾಗಿ ಪಂಜಾಬ್ ಮೂಲದ ರೈತರು ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಈಗಾಗಲೇ ಶಾಹಿನ್‌ಬಾಗ್ ಪ್ರತಿಭಟನೆಯ ಬಿಸಿಯನ್ನು ಅನುಭವಿಸಿದ್ದ ದೆಹಲಿ ಪೊಲೀಸರು, ರೈತರನ್ನು ದೆಹಲಿ ಹೃದಯ ಭಾಗಕ್ಕೆ ಅನುಮತಿ ನೀಡದೆ, ಗಡಿಯಲ್ಲಿಯೇ ಪ್ರತಿಭಟನೆಗೆ ಅವಕಾಶ ನೀಡಿದರು.

ಪಂಜಾಬ್ ಭಾಗದ ರೈತರು ನಡೆಸುತ್ತಿದ್ದ ಈ ಪ್ರತಿಭಟನೆಯನ್ನು ಆರಂಭದಲ್ಲಿ ಕೇಂದ್ರ ಸರಕಾರ ಬಹು ಲಘು ವಾಗಿಯೇ
ಪರಿಗಣಿಸಿತ್ತು. ಆದರೆ, ದಿನದಿಂದ ದಿನಕ್ಕೆ ಈ ಪ್ರತಿಭಟನೆ ರಾಷ್ಟ್ರ – ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ, ಅದನ್ನು ತಡೆಯಲು ಸಂಧಾನ ಸಭೆ ಆರಂಭಿಸಿದವು. ಈ ವೇಳೆಗಾಗಲೇ ರೈತ ಸಂಘಟನೆಗಳು ತಮ್ಮ ಪಟ್ಟನ್ನು ಬಿಗಿಗೊಳಿಸುವು ದರೊಂದಿಗೆ, ತಮ್ಮ ಬಾಹು ಗಳೊಂದಿಗೆ ವಿವಿಧ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು ತಮ್ಮ ಬೆಂಬಲವನ್ನು ಘೋಷಿಸಿದ್ದರಿಂದ ಪ್ರತಿಭಟನೆಯನ್ನು ಕೈಬಿಡುವ ಮನಸ್ಥಿತಿಯಲ್ಲಿಯೇ ಈ ಸಂಘಟನೆಗಳಿಲ್ಲ.

ಈ ರೀತಿ ದಿನದಿಂದ ದಿನಕ್ಕೆ ರೈತ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಕೇಂದ್ರ ಸರಕಾರ
ಕೃಷಿ ನಿರ್ದೇಶಕ, ಕಾರ್ಯದರ್ಶಿ, ಪ್ರಧಾನಿ ಕಾರ್ಯದರ್ಶಿ ಹಂತದಲ್ಲಿ ಸಂಧಾನ ಆರಂಭಿಸಿ ನರೇಂದ್ರ ಸಿಂಗ್ ತೋಮರ್ ತನಕ ಸಂಧಾನ ನಡೆಸಿದರು. ಆದರೆ, ಇದು ಸಾಧ್ಯವಾಗದಿದ್ದಾಗ ಕೊನೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಸಂಧಾನಕ್ಕೆ ಬಂದರು.

ಈ ಸಂಧಾನದಲ್ಲಿ ಒಂದು ಹಂತಕ್ಕೆ ಕೇಂದ್ರ ಸರಕಾರ ತಾನು ತಂದಿರುವ ಕೃಷಿ ಕಾಯಿದೆ ಗಳನ್ನು ಒಂದೂವರೆ ವರ್ಷಗಳ ಕಾಲ
ಜಾರಿಗೊಳಿಸುವುದಿಲ್ಲ ಎನ್ನುವ ಹೊಸ ಆಫರ್ ನೀಡಿದರೂ, ಅದಕ್ಕೂ ಬಗ್ಗದಿದ್ದಾಗ ಏನು ಮಾಡಬೇಕೆಂಬ ಗೊಂದಲಕ್ಕೆ
ಸಿಲುಕಿತ್ತು. ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಕೇಂದ್ರ ಸರಕಾರದ ವಿರುದ್ಧ ನಡೆದ ಪ್ರತಿಭಟನೆ ಇಷ್ಟು
ದೂರ ಕ್ರಮಿಸಿದ್ದು ಇದೇ ಮೊದಲು.

ಇದಕ್ಕೂ ಮೊದಲು ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡಾಗ, ಇದಕ್ಕಿಂತ ಉಗ್ರ ಸ್ವರೂಪದ ಹೋರಾಟಗಳು ನಡೆಯುತ್ತವೆ ಎಂದು ಭಾವಿಸಿದ್ದರೂ, ಅದನ್ನು ಕೆಲವೇ ದಿನದಲ್ಲಿ ತಣ್ಣಗೆ ಮಾಡುವ ಛಾತಿ ಮೋದಿ ಆಂಡ್ ಟೀಂಗೆ ಇತ್ತು. ಆದ್ದರಿಂದಲೇ ಕೃಷಿಕರ ಪ್ರತಿಭಟನೆ ಯನ್ನೂ ಇದೇ ರೀತಿ ತಣ್ಣಗೆ ಮಾಡುವ ಲೆಕ್ಕಾಚಾರದಲ್ಲಿದ್ದ ಮೋದಿ ಅವರ ತಂಡಕ್ಕೆ, ಇದೊಂದು ನುಂಗಲಾರದ ತುತ್ತಾಗಿದ್ದು.

ತಿಂಗಳುಗಟ್ಟಲೆ ಪ್ರತಿಭಟನೆ ನಡೆದ ಬಳಿಕ, ಗಣರಾಜ್ಯೋತ್ಸವದಂದು ರೈತರು ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡಿದಾಗ
ಬಹುತೇಕರು, ಸರಕಾರ ಇದನ್ನು ನಿರಾಕರಿಸುತ್ತೆ ಎಂದು ಭಾವಿಸಿದ್ದರು. ಆದರೆ, ಅದು ಹಾಗಾಲಿಲ್ಲ. ಅವಕಾಶ ನೀಡುವುದ
ರೊಂದಿಗೆ ಹತ್ತಾರು ಮಾರ್ಗಸೂಚಿಯನ್ನು ಪ್ರತಿಭಟನಾಕಾರರ ಮುಂದಿಟ್ಟರು. ಬಳಿಕ ರ‍್ಯಾಲಿ ಆರಂಭಿಸುವ ಸಮಯವನ್ನು
ಉಲ್ಲಂಸಿ ದರೂ, ದೆಹಲಿ ಪೊಲೀಸರು ಏನು ಮಾಡಲಿಲ್ಲ.

ಬಳಿಕ ದೆಹಲಿಯೊಳಗೆ ನುಗ್ಗಲು ಪ್ರತಿಭಟನಾಕಾರರು ಪ್ರಯತ್ನಿಸಿದಾಗಲೂ, ಪೊಲೀಸರು ಬ್ಯಾರಿಕೇಡ್, ಬಸ್, ಕಂಟೇನರ್‌ಗಳನ್ನು
ಅಡ್ಡಲಾಗಿ ನಿಲ್ಲಿಸಿದರೇ ಹೊರತು ತಡೆಯುವ ಪ್ರಯತ್ನವನ್ನು ಹೆಚ್ಚು ಮಾಡಲಿಲ್ಲ. ಇದಾದ ಬಳಿಕ ಪೊಲೀಸರ ಮೇಲೆ ಹಲ್ಲೆ
ನಡೆಸಿದಾಗಲೂ, ಪೊಲೀಸರು ಆಶ್ರುವಾಯು ಪ್ರಯೋಗಿಸಿದ್ದು ಬಿಟ್ಟರೆ, ಮತ್ತೇನು ಮಾಡಲಿಲ್ಲ. ಒಂದು ಹಂತದಲ್ಲಿ ಪೊಲೀಸರು
ಸಂಯಮ ದಿಂದ ವರ್ತಿಸದೇ ಗೋಲಿಬಾರ್‌ನಂತಹ ಕ್ರಮಕ್ಕೆ ಮುಂದಾಗಿದ್ದರೆ, ಇನ್ನಷ್ಟು ಅನಾಹುತವಾಗುತ್ತಿತ್ತು ಎನ್ನುವುದರಲ್ಲಿ
ಅನುಮಾನವಿಲ್ಲ.

ದೆಹಲಿ ಪೊಲೀಸರ ಈ ನಡೆಯನ್ನು ಕೆಲವರು ಗುಪ್ತಚರ ಇಲಾಖೆಯ ವೈಫಲ್ಯವೆಂದರೆ, ಇನ್ನು ಕೆಲವರು ಪೊಲೀಸರ
ಅಸಹಾಯಕತೆ ಎಂದರು. ಪೊಲೀಸರು ಹಿಂದೆ ಸರಿದಷ್ಟು ಪ್ರತಿಭಟನಾಕಾರರು ಅಕ್ರಮಣ ಮಾಡುತ್ತಾ ಹೋದರು. ಈ ಗದ್ದಲ ದಲ್ಲಿ ಕೆಲ ಪೊಲೀಸರಿಗೆ ಗಂಭೀರ ಗಾಯಗಳು ಆದವು. ಇದನ್ನು ಆರಂಭಿಸಿದ ಕೆಲ ಕಿಡಗೇಡಿಗಳು ತಮ್ಮ ಯಶಸ್ಸು ಎಂದು
ಭಾವಿಸಿದ್ದರು. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ, ಕೃಷಿ ಕಾಯಿದೆ ಗಳನ್ನು ವಿರೋಧಿಸಿ ತಿಂಗಳುಗಟ್ಟಲೇ ತಪ್ಪಸ್ಸಿನ ರೀತಿ
ಮಾಡಿದ್ದ ಪ್ರತಿಭಟನೆ, ಈ ಪುಂಡಾಟಿಕೆಯಿಂದ ಸಂಪೂರ್ಣ ಅರ್ಥಕಳೆದು ಕೊಂಡಿತ್ತು.

ಮೊದಲೇ ಹೇಳಿದಂತೆ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಎಲ್ಲ ರೈತರು ಈ ರೀತಿಯ ಅಸಂವಿಧಾನಿಕ ಕೃತ್ಯವನ್ನು ಒಪ್ಪಿಲ್ಲ. ಸ್ವತಃ ರ‍್ಯಾಲಿ ಆರಂಭಿಸಿದ್ದ ನಾಯಕರೇ, ಈ ಘಟನೆಯನ್ನು ‘ನಾಚಿಕೆಗೇಡಿನ ಸಂಗತಿ’ ಎಂದು ಹೇಳಿದ್ದಾರೆ.

ರ‍್ಯಾಲಿಯಲ್ಲಿ ನಡೆದ ಗಲಭೆ, ಕೆಂಪುಕೋಟೆಯ ಮೇಲೆ ಹಾರಿದ ಸಿಖ್ಖರ ಆ ಧ್ವಜ, ಗಣರಾಜ್ಯೋತ್ಸವದ ವೇಳೆ ನಡೆದಿದ್ದ ಶಿಸ್ತುಬದ್ಧಿನ ಕವಾಯತಿನ ಬೆನ್ನಲ್ಲೇ ಕೆಂಪುಕೋಟೆಯ ಆವರಣದಲ್ಲಿ ಸೃಷ್ಟಿ ಯಾದ ಅರಾಜಕತೆಗೆ ಕೇವಲ ಪ್ರತಿಭಟನಾಕಾರರು ಮಾತ್ರವಲ್ಲ, ಈ ಹಂತಕ್ಕೆ ರೈತರು ಮುಂದುವರಿಯುವುದಕ್ಕೆ ಕಾರಣವಾದ ಸರಕಾರದ್ದೂ ತಪ್ಪಿದೆ. ಮೊದಲಿಗೆ ರೈತರ ತಪ್ಪೇನು ಎನ್ನುವುದನ್ನು ನೋಡುವುದಾದರೆ, ರ‍್ಯಾಲಿಗೆ ಅನುಮತಿ ಪಡೆಯುವಾಗ ಸುಪ್ರೀಂ ಕೋರ್ಟ್‌ನಲ್ಲಿ ಸರಕಾರ ನೀಡಿದ್ದ ಎಲ್ಲ ಮಾರ್ಗಸೂಚಿ ಯನ್ನು ಪಾಲಿಸುವ ಭರವಸೆ ನೀಡಿದ್ದ ಸಂಘಟಕರು ಬಳಿಕ, ಗಣರಾಜ್ಯೋತ್ಸವ ಆರಂಭಕ್ಕೂ ಮೊದಲೇ ರ‍್ಯಾಲಿ ಆರಂಭಿಸಿದ್ದು ಮೊದಲ ತಪ್ಪು.

ನಂತರ ದೆಹಲಿಯ ಹೊರಭಾಗದಲ್ಲಿ ನಡೆಯ ಬೇಕಿದ್ದ ರ‍್ಯಾಲಿಯಲ್ಲಿ ದೆಹಲಿಯೊಳಕ್ಕೆ ತರಲು ಮುಂದಾಗಿದ್ದು ಮಗದೊಂದು ತಪ್ಪು. ಈ ಎರಡಕ್ಕಿಂತ ಮುಖ್ಯವಾಗಿ ಖಾಲಿಸ್ತಾನದ ಘೋಷಣೆಗಳನ್ನು ಕೂಗುತ್ತಾ, ಖಾಲಿಸ್ತಾನದ ಕೈಕಡಗವನ್ನು ಧರಿಸಿ, ಕತ್ತಿ ಹಿಡಿದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದು, ಉಗ್ರಗಾಮಿಗಳ ರೀತಿ ನಡೆದುಕೊಂಡದ್ದು ಹಾಗೂ ರಾಷ್ಟ್ರಧ್ವಜವನ್ನು ಹಾರಿಸುವ ಜಾಗದಲ್ಲಿ ತಮ್ಮ ಸಂಘಟನೆ ಅಥವಾ ಧರ್ಮದ ಧ್ವಜವನ್ನು ಹಾರಿಸಿದ್ದು ಬಹುದೊಡ್ಡ ತಪ್ಪು.

ದುಷ್ಕರ್ಮಿಗಳು ಈ ಶಾಂತಿಯುತ ರ‍್ಯಾಲಿಯಲ್ಲಿ ಅಶಾಂತಿ ಮೂಡಿಸುತ್ತಾರೆ ಎನ್ನುವ ಸಣ್ಣ ಅಂದಾಜನ್ನು ಸಂಘಟಕರು
ಯೋಚಿಸಿದ್ದರೆ, ಈ ಸಮಸ್ಯೆಯಾಗದ ರೀತಿ ಎಚ್ಚರವಹಿಸಬಹುದಾಗಿತ್ತು. ಆದರೆ, ಎಲ್ಲೋ ಒಂದು ಕಡೆ ರೈತರು ತಮ್ಮ
ಸಂಘಟನೆಯಲ್ಲಿರುವ ಪುಂಡರನ್ನು ಹದ್ದುಬಸ್ತಿನಲ್ಲಿಡುವ ಕಾರ್ಯದಲ್ಲಿ ವಿಫಲರಾಗಿದ್ದರಿಂದಲೇ, ಈ ಎಲ್ಲ ಅನಾಹುತಕ್ಕೆ
ಕಾರಣವಾಯಿತು.

ಹಾಗೆ ನೋಡಿದರೆ, ದೆಹಲಿಯಲ್ಲಿ ನಡೆದ ರ‍್ಯಾಲಿಯಂತೆಯೇ ಕರ್ನಾಟಕದಲ್ಲಿಯೂ ರೈತರು ರ‍್ಯಾಲಿ ಮಾಡಿದರು. ಎಲ್ಲಿಯೂ ಗೊಂದಲ – ವಿವಾದ ಅಥವಾ ಪುಂಡಾಟಿಕೆಗೆ ಅವಕಾಶವಿಲ್ಲದೇ, ಶಾಂತಿಯುತವಾಗಿ ತಾವು ರವಾನಿಸಬೇಕಿದ್ದ ಸಂದೇಶವನ್ನು ರಾಜ್ಯ ರೈತರು ರವಾನಿಸಿದರು. ಈ ವಿಷಯದಲ್ಲಿ ಸರಕಾರದ್ದು ಒಂದು ತಪ್ಪಿದೆ. ಅದು ಏನೆಂದರೆ, ಕೃಷಿಕರು ಪ್ರತಿಭಟನೆಯನ್ನು ಆರಂಭಿಸಲು ಮುಂದಾಗುತ್ತಿದ್ದಂತೆ, ಅವರನ್ನು ಕರೆಸಿ ಸಂಧಾನ ನಡೆಸಬಹುದಾಗಿತ್ತು. ಆದರೆ, ಆರಂಭದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಇಷ್ಟು ದೊಡ್ಡ ಪ್ರಮಾಣದ ಬೆಲೆ ತೆರಬೇಕಾಯಿತು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ತಮ್ಮ ಸ್ವಪ್ರತಿಷ್ಠೆಯನ್ನು ಬದಿಗೊತ್ತಿ ರೈತರೊಂದಿಗೆ ಆರಂಭದಲ್ಲಿಯೇ
ಚರ್ಚಿಸಿದ್ದರೆ ಇಷ್ಟೆಲ್ಲ ಸಮಸ್ಯೆಯಾಗುತ್ತಿರಲಿಲ್ಲ ಎನ್ನುವುದು ಸುಳ್ಳಲ್ಲ. ಇನ್ನು ಇಲ್ಲೊಂದು ವಿಷಯವನ್ನು ಎರಡು ಬದಿಯಲ್ಲಿ
ನೋಡಬೇಕಿದೆ. ರೈತರ ಪ್ರತಿಭಟನೆ, ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಮಾರ್ಪಟ್ಟು, ಅಲ್ಲಿಂದ ಹಿಂಸಾಚಾರ ಪಡೆದದ್ದನ್ನು ವಿರೋಧಿಸು
ವುದು ಮಾತ್ರವಲ್ಲದೇ, ಇಲ್ಲಿಯವರೆಗೆ ಅದನ್ನು ಬಿಟ್ಟುಕೊಂಡ ಸರಕಾರದ ನಡೆಯೂ ತಪ್ಪು.

ದೇಶದ ಬೆನ್ನೆಲುಬು ಆಗಿರುವ ರೈತರ ಕಷ್ಟ ಕಾರ್ಪಣ್ಯವನ್ನು ಆಲಿಸ ಬೇಕಾಗಿರುವುದು ಸರಕಾರದ ಕೆಲಸ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಸಂವಿಧಾನದ ಪ್ರಕಾರವೇ ನೋಡುವು ದಾದರೂ, ಸರಕಾರ ಕೃಷಿಕರ ಸಂಕಷ್ಟವನ್ನು ಆಲಿಸಬೇಕಿತ್ತು. ಇದನ್ನೇ ಅನೇಕರು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಆದರೆ, ಸರಕಾರ ಕೇಳಲಿಲ್ಲ ಎನ್ನುವ ಮಾತ್ರಕ್ಕೆ ಹೊಡಿಬಡಿ ಮೂಲಕ ಸರಕಾರ ವನ್ನು ಬಗ್ಗಿಸುತ್ತೇವೆ ಎನ್ನುವ ಹುಚ್ಚಾಟವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮ್ಮತವಲ್ಲ. ಈ ರೀತಿ ಹಿಂಸೆ ಮಾಡಿದ ಮಾತ್ರಕ್ಕೇ, ಸರಕಾರಗಳು ಸಂಘಟಕರ ಮುಂದೆ ಮಂಡಿಯೂರಿ ಕೂರುತ್ತವೆ ಎನ್ನುವುದು ಭ್ರಮೆ.

ಭಾರತದ ಕೆಂಪುಕೋಟೆಯಲ್ಲಿ ಈ ರೀತಿ ಗದ್ದಲವಾಗಿರುವುದು ಇದೇ ಮೊದಲಾದರೂ, 1990ರಲ್ಲಿ ಮಂಡಲ ಆಯೋಗದ ವರದಿ
ಯನ್ನು ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆ ಗಳು, ಸಿಖ್ ಧಂಗೆ, ತೀರಾ ಇತ್ತೀಚಿಗೆ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆದ ಪ್ರತಿಭಟನೆಗಳು ಹಿಂಸಾ ಸ್ವರೂಪ ಪಡೆದುಕೊಂಡಿವೆ. ಆಗೆಲ್ಲ ಪ್ರತಿಭಟನೆಗಳು ವೈಫಲ್ಯ ಅನುಭವಿಸಿದ್ದವು ಹೊರತು, ಸರಕಾರಗಳಲ್ಲ.

ಆದ್ದರಿಂದ ಹೊಡಿಬಡಿಯ ಈ ಮನಸ್ಥಿತಿಯಿಂದ ಸರಕಾರಕ್ಕೆ ಆಗುವ ನಷ್ಟಕ್ಕಿಂತ, ಪ್ರತಿಭಟನೆಯ ಸಂಘಟನೆಯನ್ನು ವಿಭಜಿಸಲು
ಅಥವಾ ದಿಕ್ಕುತಪ್ಪಿಸಲು ಪ್ರತಿಭಟನಾಕಾರರೇ ಮಾಡಿಕೊಡುವ ಸುಲಭದ ದಾರಿಯಷ್ಟೇ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ
ರಾಷ್ಟ್ರವಾಗಿರುವ ಭಾರತಕ್ಕೆ ಈ ಎಲ್ಲ ಪುಂಡಾಟಿಕೆಯನ್ನು ತಡೆದುಕೊಂಡು ಮುನ್ನಡೆಯುವ ಶಕ್ತಿಯಿದೆ ಎನ್ನುವುದರಲ್ಲಿ
ಅನುಮಾನವಿಲ್ಲ.

ಗಣತಂತ್ರ ವ್ಯವಸ್ಥೆಯ, ಅದರಲ್ಲಿಯೂ ಭಾರತ ಪ್ರಜಾಪ್ರಭುತ್ವದ ಪ್ರಮುಖ ದಿನವಾದ ಗಣರಾಜ್ಯೋತ್ಸವದಂದು ಈ ರೀತಿಯ ಧಂಗೆ ನಡೆದದ್ದು, ಭಾರತ ಇತಿಹಾಸದಲ್ಲಿ ಕಪ್ಪುಚುಕ್ಕೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಕಪ್ಪುಚುಕ್ಕೆ ಅಳಿಸುವುದಕ್ಕೆ
ಏನೇ ಪ್ರಯತ್ನಿಸಿದರೂ, ಅದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಕೊಟ್ಟ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ
ತಿರುಗಿದಾಗ ಇಂತಹ ಘಟನೆಗಳು ನಡೆಯುತ್ತವೆ.

ಒಟ್ಟಾರೆ ಕೇಂದ್ರ ಸರಕಾರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ಎರಡು ತಿಂಗಳ ಕಾಲ ವ್ಯವಸ್ಥಿತವಾಗಿ ಹೋರಾಡಿದ್ದ ರೈತರು, ಕೆಲ ದುಷ್ಟರ ಕೈವಾಡದಿಂದ, ಇಡೀ ಹೋರಾಟದ ಹಾದಿಯೇ ತಪ್ಪು ದಾರಿಗೆ ಸರಿಯುವುದು ಮಾತ್ರವಲ್ಲದೇ, ಹೋರಾಟವೇ ವ್ಯರ್ಥ ವಾಗುವಂತೆ ಮಾಡಿದ್ದು ದುರಾದೃಷ್ಟಕರ ಸಂಗತಿ.