ಶಶಾಂಕಣ
ಶಶಿಧರ ಹಾಲಾಡಿ
ಮೊನ್ನೆ ಬುಧವಾರ ನಡೆದ ಈ ಘಟನೆ ಮಾತ್ರ ನಿಜಕ್ಕೂ ಸ್ವಾರಸ್ಯಕರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಳಿನೆಲೆ ಗ್ರಾಮದಲ್ಲಿ ಬೊಳ್ಳು ಎಂಬ ನಾಯಿ ಈ ಪ್ರಕರಣದ ಹೀರೋ. ಸುತ್ತಲೂ ಮರಗಿಡಗಳಿಂದ ತುಂಬರುವ ಕೊಂಬಾರು ಅರಣ್ಯದ ಅಂಚಿನಲ್ಲಿರುವ ಊರಿನ ನಿವಾಸಿ. ರಾತ್ರಿ ಅದೆಷ್ಟೋ
ಹೊತ್ತಿ ನಲ್ಲಿ ಈ ನಾಯಿಯನ್ನು ಚಿರತೆ ಯೊಂದು ಅಟ್ಟಿಸಿಕೊಂಡು ಬಂದಿರಬೇಕು.
ಬೊಳ್ಳು ನಾಯಿಯು, ಭಯಬಿದ್ದು, ಸೀದ ಮನೆಯ ಟಾಯಿಲೆಟ್ ಒಳಗೆ ಅಡಗಿ ಕುಳಿತಿತು. ಆ ಚಿರತೆಯೋ, ತಾನೂ ನಾಯಿಯ ಹಿಂದೆಯೇ
ಟಾಯಿಲೆಟ್ ಪ್ರವೇಶಿಸಿತು. ಆದರೆ ಅದೇಕೋ ಒಂದೇ ಏಟಿಗೆ ನಾಯಿಯನ್ನು ಕೊಲ್ಲಲಿಲ್ಲ. ಅಷ್ಟರಲ್ಲಿ ಬೆಳಗಾಯಿತು. ಮನೆಯ ಮಾಲಕಿ ಬಂದು ನೋಡುತ್ತಾಳೆ, ಚಿರತೆಯ ಬಾಲ ಟಾಯಿಲೆಟ್ ಬಾಗಿಲ ಬಳಿ ಕಾಣಿಸುತ್ತಿದೆ. ಕಾಡಿನಂಚಿನ ಮನೆಗಳ ಮಹಿಳೆಯರು ಸಾಮಾನ್ಯವಾಗಿ ಧೈರ್ಯಶಾಲಿ
ಗಳು. ಹಾವು, ಚಿರತೆ, ರಾತ್ರಿಯ ಕತ್ತಲು, ದೆವ್ವ ಇವೆಲ್ಲಾ ಅವರಿಗೆ ಮಾಮೂಲು.
ಟಾಯಿಲೆಟ್‌ನಲ್ಲಿ ಚಿರತೆಯ ಬಾಲವನ್ನು ಕಂಡದ್ದೇ ತಡ, ಆ ಟಾಯಿಲೆಟ್ ಬಾಗಿಲನ್ನು ಭದ್ರ ಮಾಡಿದಳು, ಆ ಧೀರ ವನಿತೆ. ಆ ಚಿಕ್ಕ ಟಾಯಿಲೆಟ್‌ನ ಒಂದು ಮೂಲೆಯಲ್ಲಿ ನಾಯಿ, ಭಯದಿಂದ ನಡುಗುತ್ತಾ ಕುಳಿತಿತು. ತಪ್ಪಿಸಿಕೊಂಡು ಹೋಗೋಣವೆಂದರೆ, ಬಾಗಿಲ ಬಳಿ ಚಿರತೆ ರಾಯ! ಬಾಗಿಲು ಭದ್ರವಾದ ನಂತರ, ಚಿರತೆಯು ಇನ್ನೊಂದು ಮೂಲೆಯಲ್ಲಿ ಪವಡಿಸಿತು. ನಾಯಿಗಂತೂ ಭಯ, ನಡುಕ, ಗಾಬರಿ! ಏನು ಮಾಡುವುದೆಂದು ತಿಳಿಯದೇ, ಕಿಂಕರ್ತವ್ಯ ಮೂಢನಾಗಿ, ಗೋಡೆಗೊತ್ತಿಕೊಂಡು ಕುಳಿತಿತು. ಮನೆಯ ಮಾಲಕಿ, ಆ ಧೀರ ವನಿತೆಯು ಟಾಯಿಲೆಟ್ ಬಾಗಿಲು
ಹಾಕಿದ್ದರಿಂದಲೋ ಏನೊ, ಚಿರೆತೆಗೂ ಗಾಬರಿಯಾಗಿರಬೇಕು.
ಚಿರತೆಗಳು ಸಾಕಷ್ಟು ಬುದ್ಧಿವಂತ ಪ್ರಾಣಿಗಳು. ಬಾಗಿಲು ಮುಚ್ಚಿದ್ದರಿಂದ, ತನಗೆ ವಾಪಸಾಗುವ ದಾರಿಯೇ ಬಂದ್ ಆಗಿದ್ದು ಅದರ ಅರಿವಿಗೆ ಬಂದಿರಬೇಕು. ನಾಯಿ ಯನ್ನು ಬಡಿದು ತಿನ್ನುವ ಬದಲು, ಒಂದು ಮೂಲೆಯಲ್ಲಿ ತಗ್ಗಿ ಬಗ್ಗಿ, ನಾಯಿಯ ವರ್ತನೆಯನ್ನು ಗಮನಿಸುತ್ತಾ ಕುಳಿತಿತು. ಆರಡಿ ಉದ್ದದ ಆ ಟಾಯಿಲೆಟ್‌ನಲ್ಲಿ ನಾಯಿಯೊಂದು ಮೂಲೆಯಲ್ಲಿ, ಚಿರತೆ ಇನ್ನೊಂದು ಮೂಲೆ ಯಲ್ಲಿ! ಮನೆಯವರು ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಷಯ ತಿಳಿಸಿದರು. ಆ ಪುಟಾಣಿ ಟಾಯಿಲೆಟ್‌ನ್ನು ಬಲೆಯಿಂದ ಮುಚ್ಚಿ, ಟಾಯಿಲೆಟ್‌ನ ಶೀಟ್ ಛಾವಣಿಗೆ ಕಿಂಡಿ ಮಾಡಿ, ಚಿರತೆಯನ್ನು ಹೊರಗೆ ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನವನ್ನೇನೋ ನಡೆಸಿತು.
ಆದರೆ ಚಿರತೆಯು ಚಾಣಾಕ್ಷತನದಿಂದ ಛಾವಣಿಯ ಶೀಟ್ ಮಾಡಿನ ಕಿಂಡಿಯ ಮೂಲಕ ನೆಗೆದು, ಬಲೆಯನ್ನು ತಳ್ಳಿಕೊಂಡು, ಪಕ್ಕದ ಕೊಂಬಾರು ಕಾಡಿಗೆ ಪಲಾಯನ ಮಾಡಿತು. ಚಿರತೆ ಹಿಡಿಯಲು ಬಂದ ಅರಣ್ಯ ಇಲಾಖೆಯ ಸಿಬ್ಬಂದಿ, ಟಾಯಿಲೆಟ್ ಒಳಗೆ ಹೋಗಿ, ನಾಯಿಯನ್ನು ಹಿಡಿದುಕೊಂಡು ಹೊರಬರುತ್ತಿರುವ ಫೋಟೋ ಈಗ ವೈರಲ್ ಆಗಿದೆ!
ಬುಧವಾರ (3.2.2021) ಮಧ್ಯಾಹ್ನ 2 ಗಂಟೆಗೆ ಟಾಯಿಲೆಟ್‌ನಿಂದ ಹೊರಬಂದ ಬೊಳ್ಳುನಾಯಿ ಈಗ ನಿಜವಾದ ಹೀರೋ! ಅರ್ಧ ದಿನಕ್ಕೂ ಹೆಚ್ಚು ಸಮಯ ಚಿರತೆಯೊಂದಿಗೆ ಒಂದೇ ಕೊಠಡಿಯಲ್ಲಿ ಕಾಲ ಕಳೆದ ಖ್ಯಾತಿ ಈ ಬೊಳ್ಳು ನಾಯಿಯದು. ತನ್ನ ವೈರಿ ಎನಿಸಿದ, ತನ್ನ
ಜಾತಿಯವ ರನ್ನು ಬೇಟೆಯಾಡಿ ತಿನ್ನುವ ಚಿರತೆಯೊಂದಿಗೆ ರಾತ್ರಿಯೆಲ್ಲಾ ಕಳೆಯುವಾಗ ಅದಕ್ಕೆ ಎಷ್ಟು ಭಯವಾಗಿರಬಹುದು!
ಇತ್ತ ಚಿರತೆ ಏಕೆ ನಾಯಿಯನ್ನು ಸಾಯಿಸಲಿಲ್ಲ ಎಂಬ ಪ್ರಶ್ನೆಗೆ ಸುಲಭ ಉತ್ತರವಿಲ್ಲ. ಇದೊಂದು ವಿಕ್ಷಿಪ್ತ ನಡವಳಿಕೆ ಎನ್ನಬಹುದೆ? ಈ ಪ್ರಶ್ನೆಗೆ ವನ್ಯಜೀವಿ ತಜ್ಞರು ಉತ್ತರ ನೀಡಬಲ್ಲರು. ಈಚಿನ ದಶಕಗಳಲ್ಲಿ ಮನುಷ್ಯ ಮತ್ತು ಚಿರತೆಯ ಸಂಘರ್ಷದಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವುದೇ ನಾಯಿ – ಅಂದರೆ, ಆಹಾರಕ್ಕಾಗಿ ಸಾಕು ನಾಯಿಯನ್ನು ಹಿಡಿಯಲು ಬರುವ ಚಿರತೆಗಳೇ ಮನುಷ್ಯನೊಂದಿಗೆ ಅನಿವಾರ್ಯವಾಗಿ ಮುಖಾಮುಖಿ ಯಾಗುತ್ತಿವೆ, ಸಂಘರ್ಷಕ್ಕೆ ಒಳಗಾಗುತ್ತಿವೆ. ವಾಸಸ್ಥಳದ ಹತ್ತಿರ ಚಿರತೆ ಯನ್ನು ಕಂಡ ಮನುಷ್ಯನು ತಕ್ಷಣ ಅವುಗಳನ್ನು ಹಿಡಿಯಲು, ಬೇರೆಡೆ
ಓಡಿಸಲು ಪ್ರಯತ್ನಿಸುತ್ತಿದ್ದಾನೆ.
ಈಚಿನ ವರ್ಷಗಳಲ್ಲಿ ಬೆಂಗಳೂರಿನಂತಹ ಮಹಾ ನಗರವೂ ಸೇರಿದಂತೆ, ಎಲ್ಲೆಡೆ ಚಿರತೆ ಮತ್ತು ಮಾನವನ ಮುಖಾಮುಖಯ ವರದಿಗಳ ಸಂಖ್ಯೆ ಹೆಚ್ಚಳಗೊಂಡಿವೆ. ಕಳೆದ ವಾರವಷ್ಟೆ ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ರಾತ್ರಿ ಹೊತ್ತು
ಠಳಾಯಿಸುತ್ತಿದ್ದ ಚಿರತೆಯ ಓಡಾಟ ಸೆರೆ ಆಯಿತು. ಮರುದಿನ, ಒಮ್ಮೆಗೇ ಗುಲ್ಲು! ಸಿಸಿಟಿವಿ ಚಿತ್ರ ಕಂಡ ಅಪಾರ್ಟ್ ಮೆಂಟ್ ವಾಸಿಗಳು ಗದ್ದಲ ವೆಬ್ಬಿಸಿದರು. ನಮ್ಮ ಅಪಾರ್ಟ್‌ಮೆಂಟ್ ಹತ್ತರ ಚಿರತೆ ಓಡಾಡಿದರೆ, ನಿವಾಸಿಗಳಿಗೆ ಅಪಾಯ! ಅರಣ್ಯ ಇಲಾಖೆಗೆ ದೂರು ಹೋಯಿತು.
ಅವರು ಸಕಲ ಸಿದ್ಧತೆಗಳೊಂದಿಗೆ ಬಂದು, ಆ ಚಿರತೆಯನ್ನು ಹಿಡಿದು, ದೂರದ ಕಾಡಿನಲ್ಲಿ ಬಿಟ್ಟರಂತೆ. ಆ ಚಿರತೆ ಮಾಡಿದ ದೊಡ್ಡ ತಪ್ಪೆಂದರೆ, ನಡುರಾತ್ರಿಯ ನಿಶ್ಶಬ್ದ ವಾತಾವರಣದಲ್ಲಿ ನಿಧಾನವಾಗಿ ಅಡ್ಡಾಡುತ್ತಾ ಬಂದಾಗ, ಆ ಸಿಸಿಟಿವಿ ವ್ಯಾಪ್ತಿಗೆ ಬಂದು, ಚಿತ್ರ ಸಹಿತ ಸಿಕ್ಕಿಬಿದ್ದದ್ದು! (ಮಾಲು ಸಹಿತ ಅಲ್ಲ!) ಪಾಪ, ಆ ಚಿರತೆ ಸಾಕಷ್ಟು ಅದೃಷ್ಟಶಾಲಿ, ಅದನ್ನು ಹಿಡಿಯುವ ಭರದಲ್ಲಿ ಜೀವ ಕಳೆದುಕೊಳ್ಳಲಿಲ್ಲ. ಈಚಿನ ಕೆಲವು ವರ್ಷಗಳಲ್ಲಿ ನಡೆದ ಇಂತಹ ಪ್ರಕರಣದಲ್ಲಿ, ಅರಣ್ಯ ಇಲಾಖೆಯು ಸೆರೆಹಿಡಿದ ಅದೆಷ್ಟೋ ಚಿರತೆಗಳು ಸತ್ತು ಹೋಗಿವೆ.
ಮುಖ್ಯವಾಗಿ ಅರಿವಳಿಕೆ ಮದ್ದು ಚುಚ್ಚಿಸಿಕೊಂಡ ಚಿರತೆಗಳ ಜೀವ ಅಪಾಯಕ್ಕೆ ಸಿಲುಕುತ್ತಿವೆ, ಅದೇಕೋ ಅರಿವಳಿಕೆ ಚುಚ್ಚುವ ಮೂಲಕ ವನ್ಯ ಚಿರತೆಗಳನ್ನು ಹಿಡಿಯುವ ಪ್ರಯತ್ನಗಳಲ್ಲಿ, ಅವುಗಳ ಜೀವಕ್ಕೆ ಅಪಾಯ ವಾಗಿದ್ದೇ ಹೆಚ್ಚು. ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಕಾರಣಗಳಿಂದ
ಸಾಯುತ್ತಿರುವ ಚಿರತೆಗಳ ವಿವರ ತಿಳಿದಾಗ ತುಸು ಕಳವಳ ಮೂಡುತ್ತದೆ. ಮನುಷ್ಯನ ಜೀವನವು ಹೆಚ್ಚು ಹೆಚ್ಚು ನಾಗರಿಕಗೊಂಡಂತೆಲ್ಲಾ, ಕಾಡಿನಲ್ಲಿರುವ, ಕುರುಚಲು ಜಾಗದಲ್ಲಿರುವ ಚಿರತೆಗಳು ತಮ್ಮ ಪ್ರಾಣತ್ಯಾಗ ಮಾಡುವುದು ಹೆಚ್ಚಾಗುತ್ತಿದೆ.
ಮೊನ್ನೆ ಕರಾವಳಿಯುದ್ದಕ್ಕೂ ಚಲಿಸುವ ರೈಲಿಗೆ ಸಿಲುಕಿ, ಕಪ್ಪು ಚಿರತೆಯೊಂದು ಮೃತಪಟ್ಟ ಘಟನೆ ವರದಿಯಾಯಿತು. ಕುಂದಾಪುರದ ಹತ್ತಿರದ
ಬಡಾಕೆರೆ ಎಂಬ ಹಳ್ಳಿಯ ಬಳಿ ಸುಳಿದಾಡಿದ ಕಪ್ಪುಚಿರತೆಗೆ ರೈಲು ಬಡಿದು, ಆ ಅಪರೂಪದ ಕಪ್ಪು ಚಿರತೆ ಸತ್ತುಹೋಯಿತು. ಆ ಪ್ರದೇಶದಲ್ಲಿ ರೈಲು ಬಡಿದು ಚಿರತೆಯೊಂದು ಮೃತಪಟ್ಟದ್ದು ಇದೇ ಮೊದಲು. ಚಿರತೆಗಳು ಸಾಕಷ್ಟು ಚುರುಕಾಗಿರುವುದರಿಂದ, ರೈಲಿಗೆ ಸಿಲುಕುವುದನ್ನು
ತಪ್ಪಿಸ ಕೊಳ್ಳಬಲ್ಲವು. ಕುಂದಾಪುರದ ಬಳಿ ಆ ಕಪ್ಪು ಚಿರತೆ ಅದು ಹೇಗೆ ರೈಲಿಗೆ ಸಿಲುಕಿತೋ ಅಚ್ಚರಿ. ಕುಂದಾಪುರ ಸರಹದ್ದಿನ ಕಾಡುಗಳಲ್ಲಿ ಹತ್ತು ಚಿರತೆಗಳಿವೆಯಂತೆ. ಆದರೆ ಕಪ್ಪು ಚಿರತೆಗಳು ತುಸು ವಿರಳ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವು ಕಪ್ಪು ಚಿರತೆಗಳಿವೆ.
ಕೆಲವು ವರ್ಷಗಳ ಹಿಂದೆ ಉಡುಪಿಯ ಮಂದರ್ತಿ ಬಳಿ ಕಪ್ಪುಚಿರತೆಯೊಂದು ಬಾವಿಗೆ ಬಿದ್ದು, ಅರಣ್ಯ ಇಲಾಖೆಯ ಪ್ರಯತ್ನದಿಂದ ರಕ್ಷಣೆಗೆ ಒಳಗಾಯಿತು. ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ ‘ಬೆಟ್ಟದ ಜೀವ’ದಲ್ಲಿ ಕಪ್ಪು ಚಿರತೆಯ ವಿಚಾರ ಪ್ರಸ್ತಾಪವಾಗುತ್ತದೆ. ಸುಳ್ಯದ ಬಂಟಮಲೆ ಕಾಡಿನಲ್ಲಿ ಸ್ಥಳೀಯರು ಕಂಡ ಕಪ್ಪು ಚಿರತೆಯ ವಿವರವೇ ಆ ಕಥಾ ಪ್ರಕರಣಕ್ಕೆ ಕಾರಂತರಿಗೆ ಸೂರ್ತಿ ನೀಡಿರಬೇಕು. ಮೊದಲಿನಿಂದಲೂ ಪ್ರಕೃತಿ, ಪರಿಸರದ ಕುರಿತು ಅತೀವ ಆಸಕ್ತಿ ಹೊಂದಿದ್ದ ಕಾರಂತರು, ತಮ್ಮ ಆ ಪ್ರಮುಖ ಕಾದಂಬರಿಯಲ್ಲಿ ಅಪರೂಪದ ಕಪ್ಪು ಚಿರತೆಗೆ ಒಂದು ಸ್ಥಾನ
ನೀಡಿರುವುದು, ಕನ್ನಡ ಸಾಹಿತ್ಯದ ಮಟ್ಟಿಗೆ ಒಂದು ವಿಶಿಷ್ಟ ದಾಖಲೆ.
ನಮ್ಮ ದೇಶದಲ್ಲಿ ಚಿರತೆಗಳಿಗೆ ಇಂದು ಕಾನೂನಿನ ರಕ್ಷಣೆಯಿದೆ; ಆದ್ದರಿಂದ ಕಳೆದ ಕೆಲವು ವರ್ಷಗಳಿಂದ ಅವುಗಳ ಸಂಖ್ಯೆ ಹೆಚ್ಚಳಗೊಂಡಿದೆ. 2018ರಲ್ಲಿ ನಮ್ಮ ಭಾರತದಲ್ಲಿ 12,852 ಚಿರತೆಗಳಿವೆ ಎಂದು ಲೆಕ್ಕಹಾಕಲಾಗಿದ್ದು, 2014ಕ್ಕೆ ಹೋಲಿಸಿದರೆ ಈ ಸಂಖ್ಯೆ ಶೇ.60ರಷ್ಟು ವೃದ್ಧಿ ಯಾಗಿದೆ. ಮಧ್ಯಪ್ರದೇಶದಲ್ಲಿ 3,421, ಕರ್ನಾಟಕದಲ್ಲಿ 1,783 ಮತ್ತು ಮಹಾರಾಷ್ಟ್ರದಲ್ಲಿ 1690 ಚಿರತೆಗಳಿವೆ ಎಂಬ ಲೆಕ್ಕಾಚಾರ ವಿದೆ.
ಹೋಲಿಕೆಗೆ, ಆಫ್ರಿಕಾದಲ್ಲಿ 700000 ಚಿರತೆಗಳಿವೆ! ಚಿರತೆಗಳು ಚಾಣಾಕ್ಷ ಮತ್ತು ಬುದ್ಧಿವಂತ ಪ್ರಾಣಿಗಳು. ಮನುಷ್ಯನ ಚಲನವಲನ ವನ್ನೂ
ತುಂಬಾ ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ತಮ್ಮ ನಡವಳಿಕೆಯನ್ನು ಹೊಂದಿಸಿ ಕೊಳ್ಳಬಲ್ಲವು. ಮೃಗಾಲಯದಲ್ಲಿ ಸಾಕಿದ ಚಿರತೆಗಳು ತಮಗೆ ಆಹಾರ ನೀಡುವ ಸಿಬ್ಬಂದಿಯೊಂದಿಗೆ ಗೆಳೆತನ ಬೆಳೆಸಿಕೊಳ್ಳಬಲ್ಲವು, ಅಂತಹ ಸಿಬ್ಬಂದಿಯನ್ನು ಸ್ಪಷ್ಟವಾಗಿ ಗುರುತಿಸಬಲ್ಲವು.
ಕಾಡಿನಲ್ಲಿ ಮತ್ತು ಬಯಲುಸೀಮೆಯ ಕುರುಚಲು ಪ್ರದೇಶಗಳಲ್ಲಿ ತಮ್ಮ ಪಾಡಿಗೆ ತಾವು ಇರುವ ಚಿರತೆಗಳು, ಅಲ್ಲೇ ಆಹಾರ ಹುಡುಕಿಕೊಂಡು ತಮ್ಮ ಪೀಳಿಗೆಯನ್ನು ಮುಂದುವರಿಸುತ್ತವೆ, ಹೊರತು ಸಾಮಾನ್ಯವಾಗಿ ಮನುಷ್ಯನ ಮೇಲೆ ಆಕ್ರಮಣ ಮಾಡುವುದಿಲ್ಲ. ಆದ್ದರಿಂದಲೇ ಚಿರತೆ ದಾಳಿಯಿಂದ ಮನುಷ್ಯರು ಸತ್ತ ಪ್ರಕರಣಗಳು ವಿರಳ. ಅಪರೂಪಕ್ಕೊಮ್ಮೆ ಚಿರತೆದಾಳಿಯ ವರದಿಯಾಗುವುದುಂಟು. ಕೆಲವು ವರ್ಷಗಳ ಹಿಂದೆ ಕೋಲಾರದಲ್ಲಿ ಇಬ್ಬರನ್ನು ಚಿರತೆಯೊಂದು ಸಾಯಿಸಿತ್ತು.
1995ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 11 ಜನರನ್ನು ಚಿರತೆ ಸಾಯಿಸಿತೆಂದು ಬಹಳಷ್ಟು ಗುಲ್ಲೆದ್ದಿತು. ಅದು ಒಂದು ತಲ್ಲಣ ಸೃಷ್ಟಿಸಿದ ಸಂದರ್ಭ. ಭಯಭೀತರಾದ ಜನಸಾಮಾನ್ಯರ ಹಾಹಾಕಾರ ತಡೆಯಲು ಏನಾದೂ ತುರ್ತಾಗಿ ಮಾಡಬೇಕಾದ ಅನಿವಾರ್ಯತೆ; ಆ ಸರಹದ್ದಿನ 17 ಚಿರತೆಗಳನ್ನು ಒಂದರ ಹಿಂದೆ ಒಂದರಂತೆ ಸಾಯಿಸಲಾಯಿತು! ಆ ನಂತರ ಅಲ್ಲಿ ಚಿರತೆ ಹಾವಳಿ ಹೇಳಹೆಸರಿಲ್ಲದಂತಾಯಿತು. ಮನುಷ್ಯ-ಪ್ರಾಣಿ ಸಂಘರ್ಷದಲ್ಲಿ, ಮನಸ್ಸು ಮಾಡಿದರೆ ಮನುಷ್ಯನು ಹೇಗೆ ಮೇಲುಗೈ ಸಾಧಿಸಬಲ್ಲ, ಹೇಗೆ ಪ್ರಾಣಿಗಳನ್ನು ಹೊಸಕಿ ಹಾಕಬಲ್ಲ ಎಂಬುದಕ್ಕೆ ಇದೊಂದು ದುರಂತಮಯ ಉದಾಹರಣೆ.
ಚಿರತೆ ಮನುಷ್ಯನನ್ನು ಸಾಯಿಸಿದ ಪ್ರಕರಣಗಳು ನಮ್ಮ ರಾಜ್ಯದಲ್ಲಿ ಈಚಿನ ವರ್ಷಗಳಲಿ ತೀರಾ ಅಪರೂಪ. ಆದರೆ, ನಮ್ಮ ದೇಶದಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಕುಖ್ಯಾತ ನರಹಂತಕಗಳಿದ್ದವು ಎಂದು ಬ್ರಿಟಿಷ್ ವ್ಯಕ್ತಿಗಳು ವಿವರವಾಗಿ ದಾಖಲಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಉತ್ತರಾಖಂಡದ
ಕುಮಾಂವ್ ಪ್ರಾಂತ್ಯದಲ್ಲಿದ್ದ ನರಹಂತಕ ಚಿರತೆಯ ಬಗ್ಗೆ ಪುಸ್ತಕಗಳ ಪ್ರಕಟಗೊಂಡಿದ್ದು, ಅವು ‘ರುದ್ರಪ್ರಯಾಗದ ನರಭಕ್ಷಕ’ ಮೊದಲಾದ ಹೆಸರಿ ನಲ್ಲಿ ಕನ್ನಡಕ್ಕೂ ಅನುವಾದ ವಾಗಿರುವುದರಿಂದ, ಆ ಚಿರತೆಗಳು ಕನ್ನಡ ಓದುಗರಿಗೂ ಪರಿಚಿತ. ಆ ದಿನಗಳಲ್ಲಿ ಬ್ರಿಟಿಷ್ ಭಾರತೀಯ ಸೇನೆ ಯಲ್ಲಿ ಕರ್ನಲ್ ಆಗಿದ್ದ ಜಿಮ್ ಕಾರ್ಬೆಟ್, ಹಲವು ನರಹಂತಕ ಚಿರತೆಗಳನ್ನು ಬೇಟೆಯಾಡಿ, ತನ್ನ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಅಲ್ಲಿನ ನರಹಂತಕ ಚಿರತೆಗಳಿಗೆ ವಿಶ್ವಮಟ್ಟದ ಖ್ಯಾತಿಯನ್ನು ಒದಗಿಸಿದ್ದಾರೆ.
ಉತ್ತರಾಖಂಡದಲ್ಲಿ ಚಿರತೆಗಳನ್ನು ಬೇಟೆಯಾಡಿ, ಅವುಗಳ ಜೀವನ ಕ್ರಮವನ್ನು ಹತ್ತಿರದಿಂದ ಗಮನಿಸಿರುವ ಜಿಮ್ ಕಾರ್ಬೆಟ್, ಒಂದು ಕುತೂಹಲ ಕಾರಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕುಮಾಂವ್ ಜಿಲ್ಲೆಯಲ್ಲಿ ಚಿರತೆಗಳು ಏಕೆ ಮನುಷ್ಯರ ಬೇಟೆಯಾಡಲು ಕಲಿತವು? ಕೆಲವು ಮಾನವ ನಿರ್ಮಿತ ಸನ್ನಿವೇಶದಿಂದಾಗಿ, ಚಿರತೆಗಳು ಮನುಷ್ಯರ ಮಾಂಸವನ್ನು ಇಷ್ಟಪಡತೊಡಗಿದವು ಎಂದಿದ್ದಾರೆ ಜಿಮ್ ಕಾರ್ಬೆಟ್. 1919ರ ಸಮಯದಲ್ಲಿ ಹರಡಿದ ಸಾಂಕ್ರಾಮಿಕ ರೋಗ, ನಂತರದ ವರ್ಷಗಳಲ್ಲಿ ಕಂಡು ಬಂದ ಕಾಲರಾ ಸಂದರ್ಭದಲ್ಲಿ ಹೆಚ್ಚಿನ ಜನ ಮೃತಪಟ್ಟು, ಅಂತಹ ಸಂದರ್ಭ ದಲ್ಲಿ ಸೂಕ್ತ ಅಂತ್ಯ ಸಂಸ್ಕಾರ ಮಾಡಲು ಅವಕಾಶವಿಲ್ಲದೇ, ಸತ್ತವರನ್ನು ಕಾಡಂಚಿನಲ್ಲಿ ಎಸೆದು ಬರುತ್ತಿದ್ದರಂತೆ.
ಆ ಮೃತದೇಹಗಳನ್ನು ಆಕಸ್ಮಿಕವಾಗಿ ತಿನ್ನಲು ಆರಂಭಿಸಿದ ಕೆಲವು ಚಿರತೆಗಳು, ಕ್ರಮೇಣ ನರಭಕ್ಷಕ ಎನಿಸಿದವು. ಜಿಮ್ ಕಾರ್ಬೆಟ್ ಗುರುತಿಸಿದಂತೆ, ರುದ್ರ ಪ್ರಯಾಗದ ನರಭಕ್ಷಕ ಚಿರತೆ ಮತ್ತು ಪಾನೆರ್ ಕಾಡಿನ ನರಭಕ್ಷಕ ಚಿರತೆ – ಇವೆರಡು ಚಿರತೆಗಳು ಸುಮಾರು 525 ಜನರನ್ನು ಕುಮಾಂವ್ ಸರಹದ್ದೊಂದರಲ್ಲೇ ಸಾಯಿಸಿದ್ದವು. ಜಿಮ್ ಕಾರ್ಬೆಟ್ ನರಭಕ್ಷಕ ಚಿರತೆಗಳನ್ನು ಬೇಟೆಯಾಡಲು ಹೋಗುತ್ತಿದ್ದಾಗ, ಅಲ್ಲಿನ ಕುಗ್ರಾಮಗಳ ಜನಜೀವನವನ್ನು ವಿವರವಾಗಿ ದಾಖಲಿಸಿದ್ದಾರೆ. ಆ ವಿವರಗಳು ಕೆಲವು ಬಾರಿ ಅತಿ ರಂಜಿತ ಎನಿಸಿದರೂ, ನರ ಭಕ್ಷಕ ಚಿರತೆಗಳಿಂದಾಗಿ ಭಯದಲ್ಲೇ
ವಾಸಿಸುತ್ತಿದ್ದ ಜನರು, ಆ ಚಿರತೆಗಳನ್ನು ಕೊಲ್ಲಬೇಕೆಂದು ಇವರಿಗೆ ಮನವಿ ಮಾಡುತ್ತಿದ್ದುದನ್ನೂ ಬರೆದಿದ್ದಾರೆ.
ರುದ್ರಪ್ರಯಾಗ ಮತ್ತು ಪಾನೆರ್‌ನ ನರಭಕ್ಷಕ ಚಿರತೆಗಳನ್ನು ಗುಂಡಿಟ್ಟು ಸಾಯಿಸಿದ ಜಿಮ್ ಕಾರ್ಬೆಟ್, ಅದೊಂದು ಕೆಲಸಕ್ಕಾಗಿ ಬಹಳಷ್ಟು ಗೌರವ, ಪುರಸ್ಕಾರ ಪಡೆದಿದ್ದರು. ನಂತರದ ದಿನಗಳಲ್ಲಿ ಛಾಯಾಚಿತ್ರಣವನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡು, ವನ್ಯಜೀವಿಗಳನ್ನು ರಕ್ಷಿಸಬೇಕೆಂದು ಒತ್ತಾಯಮಾಡತೊಡಗಿದರು. ಉತ್ತರಾಖಂಡದಲ್ಲಿರುವ ನ್ಯಾಷನಲ್ ಪಾರ್ಕ್‌ಗೆ ಅವರ ಹೆಸರನ್ನು ಇಟ್ಟದ್ದು (1957) ಇದೇ ಹಿನ್ನೆಲೆಯಲ್ಲಿ.
ಚಿರತೆ, ಆನೆ, ಹುಲಿ ಮೊದಲಾದ ಪ್ರಾಣಿಗಳಿಗೆ ಕಾನೂನಿನ ರಕ್ಷಣೆ ಇದ್ದರೂ, ಅವುಗಳು ಇಂದು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದಿನ ಕಳೆಯಬೇಕಾದ ಪರಿಸ್ಥಿತಿ ಇದೆ.
ಸಿಸಿಟಿವಿಯಂತಹ ಆಧುನಿಕ ತಂತ್ರಜ್ಞಾನವು, ಜನರಿಗೆ ರಕ್ಷಣೆ ನೀಡಿದರೆ, ಚಿರತೆಗಳಿಗೆ ಬಂಧನವನ್ನೇ ತಂದೊಡ್ಡುತ್ತಿವೆ. ಬಯಲುಸೀಮೆಯ ಕುರುಚಲು ಪ್ರದೇಶದ ಚಿರತೆಯ ಆವಾಸಸ್ಥಾನವನ್ನು ಮನುಷ್ಯನು ಬಹು ವೇಗವಾಗಿ ಸ್ವಾಹಾ ಮಾಡುತ್ತಿದ್ದಾನೆ. ಆನೆಯ ವಾಸಸ್ಥಳವು ದಿನೇ ದಿನೇ
ಕಡಿಮೆ ಯಾಗುತ್ತಿದೆ. ಹುಲಿಯ ಸರಹದ್ದು, ವ್ಯಾಪ್ತಿ ಸ್ಥಳ ಸಂಕಷ್ಟದಲ್ಲಿದೆ. ಇವಿಷ್ಟೇ ಅಲ್ಲ, ಎಲ್ಲಾ ವನ್ಯ ಜೀವಿಗಳೂ ವಿನಾಶದತ್ತ ಸಾಗುವ ಒಮ್ಮುಖ ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿವೆ. ಅವು ಎಂದು ಆ ರಸ್ತೆಯ ಕೊನೆ ಮುಟ್ಟುತ್ತವೋ, ಅಂದು ‘ಜೀವ ವೈವಿಧ್ಯ’ ಎಂಬ ಶಬ್ದ ಡಿಕ್ಷನರಿಯಿಂದ ಅಳಿಸಿ
ಹೋಗುತ್ತದೆ. ಅಲ್ಲಿಗೆ ಮನುಷ್ಯ ಗೆದ್ದ ಎಂದು ಬೀಗಬಹುದೆ? ಖಂಡಿತಾ ಇಲ್ಲ, ತನ್ನ ಸಹಜೀವಿಗಳು ಇಲ್ಲದ ಈ ಜಗತ್ತಿನಲ್ಲಿ ಮನುಷ್ಯ ಬದುಕಿ ಏನು ಪ್ರಯೋಜನ! ಪರಿಸರ, ಪ್ರಾಣಿ, ಪಕ್ಷಿಗಳು, ಗಿಡಮರಗಳು ತಮ್ಮ ಪಾಡಿಗೆ ತಾವು ಇದ್ದರೆ ಮಾತ್ರ ಮನುಷ್ಯನ ಬದುಕಿಗೆ ಒಂದು ಅರ್ಥ.