ಅಭಿಮತ
ಶ್ರೀನಿವಾಸ ಎನ್.ದೇಸಾಯಿ
ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎಂಬ ತ್ರಿಕಾಲ ಸತ್ಯವಾದ ಮಾತನ್ನು ನಾವು ಚೆನ್ನಾಗಿ ಅರ್ಥೈಸಿಕೊಂಡಿzದರೆ ಖಂಡಿತವಾಗಿಯೂ ನಾವು ಶ್ರೇಷ್ಠ ವ್ಯಕ್ತಿಗಳಾಗಿ ಈ ಸಮಾಜದಲ್ಲಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.
ಭಾರತೀಯ ಸಂಪ್ರದಾಯದಲ್ಲಿ ಮಾತನ್ನು ಸರಸ್ವತಿ ಸ್ವರೂಪ ಎಂದು ಪರಿಗಣಿಸಲಾಗಿದೆ. ಹಾಗಾಗಿ ಮಾತನಾಡಲು ಒಳ್ಳೆಯ ಜ್ಞಾನ, ಕೌಶಲ್ಯ, ತಿಳಿವಳಿಕೆ ಹಾಗೂ ಪರಿಪೂರ್ಣತೆ ಬೇಕೆಬೇಕು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ಹಾಗೆ ನಾವು ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದ ಮಾತನಾಡಬೇಕು. ನಮ್ಮ ಮಾತುಗಳು ಇನ್ನೊಬ್ಬರಿಗೆ
ಸಂತಸವನ್ನುಂಟು ಮಾಡಲಾಗದಿದ್ದರೂ ಪರವಾಗಿಲ್ಲ.
ಆದರೆ ನೋವು, ದುಃಖ, ಸಂಕಟಗಳನ್ನುಂಟು ಮಾಡುವಂತಿರಬಾರದು. ಒಳ್ಳೆಯ ಮಾತುಗಳನ್ನಾಡಬೇಕು, ಇಲ್ಲದಿದ್ದರೆ ಮೌನಕ್ಕೆ ಶರಣಾಗಿ ಬಿಡಬೇಕು. ಕೆಟ್ಟ, ಅಸಂಬದ್ಧ ಮಾತುಗಳಿಂದ ಅದೇಷ್ಟೋ ಸಂಬಂಧಗಳು ಮರಿದು ಬಿದ್ದಿವೆ. ಹಾಗಾಗಿ ನಾವು
ಅವಸರವಸರ ದಲ್ಲಿಯೋ, ಕೋಪದಲ್ಲಿಯೋ ಅಥವಾ ದುಡುಕಿಯೋ ಕೆಟ್ಟದಾಗಿ ಮಾತನಾಡಿಬಿಟ್ಟರೆ ಒಂದೊಳ್ಳೆಯ ಸಂಬಂಧ ಹಾಳಾಗಲು ಅದು ಕಾರಣವಾಗಿ ಬಿಡುತ್ತದೆ.
ಇನ್ನೊಬ್ಬರನ್ನು ಗೇಲಿ ಮಾಡುವ, ಮೂದಲಿಸುವ, ಟೀಕಿಸುವ ಮಾತುಗಳಿಂದ ಅವರಲ್ಲಿನ ಆತ್ಮವಿಶ್ವಾಸ ಕುಗ್ಗಿ ಜುಗುಪ್ಸೆ ಹೊಂದಿ ತಳಮಳಗೊಳ್ಳುವಂತೆ ಮಾಡುತ್ತದೆ. ಅದರ ಬದಲಾಗಿ ಸ್ಪೂರ್ತಿದಾಯಕ, ಪ್ರೋತ್ಸಾಹದ ಮತ್ತು ಹಿತಕರವಾದ ಮಾತುಗಳಿಂದ ನಾವು ಮತ್ತೊಬ್ಬರ ಬಾಳಿನಲ್ಲಿ ಬೆಳಕಾಗಿ ಪ್ರಜ್ವಲಿಸುತ್ತೇವೆ. ಆದ್ದರಿಂದ ವ್ಯಕ್ತಿಗತವಾದ, ಸಾಮೂಹಿಕವಾದ ನಿಂದನೆ ಮಾಡಿ
ಅನಾಹುತಗಳನ್ನು ತಮ್ಮ ಕೈಯಾರೆ ತಾವೇ ತಂದುಕೊಂಡು ಕೊರಗಿ ಕೊರಗಿ ಸಾಯುವುದಕ್ಕಿಂತ ಪೂರ್ವದಲ್ಲಿಯೇ ಚೆನ್ನಾಗಿ ಅರಿತು ಮಾತನಾಡಬೇಕು.
ಕೆಲವು ಸಂದರ್ಭಗಳಲ್ಲಿ ಮಾತನಾಡುವಾಗ ನಮ್ಮನ್ನು ನಾವೇ ತುಂಬಾ ಪೇಚಿಗೆ ಸಿಲುಕಿಸಿಕೊಂಡಂತಾಗುತ್ತದೆಯಲ್ಲವೇ? ಅದಕ್ಕೆ ಮುಖ್ಯ ಕಾರಣ ನಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಲು ಹೋಗಿ ಅವಮಾನ ಅನುಭವಿಸಬೇಕಾಗುತ್ತದೆ. ಕೆಲವು ಜನರ ಸ್ವಭಾವವು ಹೇಗಿರುತ್ತದೆಯೆಂದರೆ ಏನೂ ಗೊತ್ತಿಲ್ಲದಿದ್ದರೂ ಎಲ್ಲವೂ ಗೊತ್ತಿದೆ ಎಂದು ತೋರ್ಪಡಿಸಿಕೊಳ್ಳಲು ಪ್ರಯತ್ನಿಸಿ, ತಮ್ಮ ಅಜ್ಞಾನವನ್ನು ತಾವೇ ಹರಾಜಿಗಿಟ್ಟಂತಾಗುತ್ತದೆ.
ನಾನು ಜಾಣ, ಬುದ್ಧಿವಂತ ಎಂದು ನಾವು ತೋರಿಸಿಕೊಳ್ಳುವುದಕ್ಕಿಂತ ನಾವು ಆಡುವ ಮಾತುಗಳೇ ನಮ್ಮನ್ನು ಜಾಣರೆಂದು ಪ್ರತಿಬಿಂಬಿಸುವಂತಿರಬೇಕು. ಬೇರೆಯವರು ಮಾತನಾಡುವಾಗ ಮಧ್ಯದಲ್ಲಿ ಬಂದು ಮೂಗು ತೂರಿಸುವ ಕೆಲಸ ಮಾಡಿzದರೆ ಅದು ಮೂರ್ಖತನದ ಪರಮಾವಧಿಯಾದೀತು, ಜೋಕೆ. ಎಲ್ಲಿ ನಮ್ಮ ಮಾತಿಗೆ ಬೆಲೆ, ಗೌರವ ಇರುತ್ತದೆಯೋ ಅಂಥ ಕಡೆಗಳಲ್ಲಿ ಮಾತ್ರ ಹದವರಿತು ಮಾತನಾಡಬೇಕು.
ಸಂದರ್ಭಕ್ಕೆ ತಕ್ಕಂತೆ ಮಾತನಾಡಿದರೆ ನಮ್ಮನ್ನು ಪ್ರತಿಯೊಬ್ಬರೂ ಸ್ಮರಿಸಿಕೊಳ್ಳುವಂತಾಗುತ್ತದೆ. ಅನಗತ್ಯವಾಗಿ, ಅನಾವಶ್ಯಕ ವಾಗಿ, ಅನುಚಿತವಾಗಿ ಮಾತನಾಡಿದರೆ ಅದು ಕ್ಷುಲ್ಲಕವಾಗಿ ಹಲವರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಒಂದು ನಿಷ್ಪ್ರಯೋಜಕ ವಾದವು ಒಬ್ಬ ಒಳ್ಳೆಯ ವ್ಯಕ್ತಿಯನ್ನು ದೂರ ಮಾಡಿದಂತಾಗುತ್ತದೆ, ಹೀಗಾಗಿ ನಮಗೆ ಸಂಬಂಧವೇ ಇಲ್ಲದ ಗೊಡ್ಡು ವಾದವನ್ನು ಮಾಡಿ ಸಮಯ ಹಾಗೂ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವ ಬದಲು ತಟಸ್ಥರಾಗಿ ಉಳಿದು ಬಿಡುವುದು ಒಳ್ಳೆಯದಲ್ಲವೇ? ಆ ಒಂದು ಗೊಡ್ಡು ವಾದದಲ್ಲಿ ಸೋತರೂ ಚಿಂತೆಯಿಲ್ಲ, ಒಂದೊಳ್ಳೆಯ ಸಂಬಂಧಕ್ಕೆ ಬೆಲೆ ಕೊಟ್ಟ ನಿಮ್ಮ ದೊಡ್ಡ ಗುಣ ಆದರ್ಶಪ್ರಾಯವಾಗಿರುತ್ತದೆ.
ನಗುನಗುತ್ತಾ ಮಾತನಾಡುವ ಶೈಲಿ ನಿಮ್ಮದಾಗಿದ್ದರೆ ಖಂಡಿತವಾಗಿಯೂ ನೀವು ಅಪಾರವಾದ ಮನಸ್ಸುಗಳನ್ನು ಗೆದ್ದಿರುತ್ತೀರಿ. ಅಂತಹ ಮಾತಿನಲ್ಲಿ ಸ್ಪಷ್ಟತೆ, ನಿಖರತೆ ಹೆಚ್ಚಾಗಿರುತ್ತದೆ. ಅಲ್ಲಿರುವ ಆತ್ಮವಿಶ್ವಾಸವೂ ಕೂಡಾ ಸೆಳೆಯುವಂತೆ ಮಾಡುತ್ತದೆ. ಮುಖವನ್ನು ಗಂಟಿಕ್ಕಿ, ಗಂಭೀರವಾಗಿ ಮಾತನಾಡುವ ಜನರನ್ನೂ ಈ ಜಗತ್ತಿನಲ್ಲಿ ಯಾರೂ ಇಷ್ಟ ಪಡಲಾರರು.
ನಮ್ಮ ಮಾತಿನಲ್ಲಿ ತಿಳಿಹಾಸ್ಯವಿದ್ದರೆ ನಾವು ಜಗತ್ತನ್ನೇ ಗೆಲ್ಲಬಹುದೇನೋ..? ತಮಾಷೆಯ ನೆಪದಲ್ಲಿ ಇನ್ನೊಬ್ಬರ ಮನಸ್ಸು ನೋಯಿಸುವ ಮಾತುಗಳು ಬೇಡವೇ ಬೇಡ. ಆ ಒಂದು ಮಾತು ನಮಗೆ ತಮಾಷೆಯಾಗಿರಬಹುದು, ಅದು ಹಲವರಿಗೆ ಅತ್ಯಂತ ಹೆಚ್ವಿನ ನೋವು ತಂದು ಹತಾಶೆಯನ್ನುಂಟುಮಾಡಬಹುದು.