ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1966. ಚಲನಚಿತ್ರ ನಿರ್ದೇಶಕರೊಬ್ಬರು ಬಹಳ ಉತ್ಸಾಹ ಆಸ್ಥೆಯಿಂದ ಸಿನಿಮಾವೊಂದನ್ನು ನಿರ್ದೇಶಿಸುತ್ತಾರೆ. ತನ್ನ ಮಹಾತ್ವಾಕಾಂಕ್ಷೆಯ ಚಿತ್ರವನ್ನು ಪ್ರೇಕ್ಷಕ ಕೈಬಿಡುವುದಿಲ್ಲ, ಅದನ್ನು ನೋಡಿ ಮನತುಂಬಿ ಹೊಗಳಿ ಚಿತ್ರವನ್ನು ಗೆಲ್ಲಿಸುತ್ತಾನೆ ಎಂಬ ನಂಬಿಕೆಯಿಂದ ಬಿಡುಗಡೆಯಾದ ಚಿತ್ರಮಂದಿರದ ಮುಂದೆ ಬಂದು ನಿಲ್ಲುತ್ತಾರೆ.
ಸಿನಿಮಾ ನಿರ್ದೇಶಕ ನೆಂದರೆ ಜಂಟಲ್ಮ್ಯಾನ್ ಎಂದು ಸ್ವತಃ ಭಾವಿಸಿಕೊಂಡ ಆ ನಿರ್ದೇಶಕರು ಸೂಟುಬೂಟು ಟೈ ಕಟ್ಟಿಕೊಂಡು ನಿಂತು ಚಿತ್ರಮಂದಿರದಿಂದ ಚಿತ್ರವನ್ನು ನೋಡಿ ಹೊರಬಂದ ಪ್ರೇಕ್ಷಕರ ಅಭಿಪ್ರಾಯಕ್ಕೆ ಕಾತರದಿಂದ ನಿಂತರೆ ಒಬ್ಬ ಪ್ರೇಕ್ಷಕ
ಏಕಾಏಕಿ ‘ಥೂ ಇವ್ನಾ..ಎಂಥ ದರಿದ್ರ ಸಿನಿಮಾ ತೆಗೆದಿದ್ದಾನೆ..? ಎಂದರೆ, ಮತ್ತೊಬ್ಬ ‘ಯಾವ.. ನನ್ನಮಗ ತೆಗೆದಿದ್ದಾನಪ್ಪ ಈ ಚಿತ್ರನಾ? ಎಂದು ಶಪಿಸಿಕೊಂಡು ಹೋಗುತ್ತಾರೆ.
ಆ ನಿರ್ದೇಶಕರು ಟೈ ಕೋಟು ಟೋಪಿ ಒಂದೊಂದಾಗಿ ಕಳಚುತ್ತಾ ಮುದುಡಿ ಕಂಕುಳಲ್ಲಿಟ್ಟುಕೊಂಡು ಅವಮಾನಿತರಾಗಿ ಅಲ್ಲಿಂದ ಕಣ್ಮರೆಯಾಗುತ್ತಾರೆ. ಮುಂದೆ ಆ ನಿರ್ದೇಶಕರು ನಿರ್ದೇಶಿಸಿದ ಚಿತ್ರ ಗಳಾವುದು ಗೊತ್ತೇ? ನೋಡಿ, ಗಂಧದ ಗುಡಿ, ಶ್ರೀನಿವಾಸ ಕಲ್ಯಾಣ, ಮಯೂರ, ನಾನಿನ್ನ ಮರೆಯಲಾರೆ, ಬಡವರ ಬಂಧು, ಸನಾದಿ ಅಪ್ಪಣ್ಣ, ನಾ ನಿನ್ನ ಬಿಡಲಾರೆ, ಹುಲಿಯ ಹಾಲಿನ ಮೇವು, ಆಟೋರಾಜ, ನೀ ನನ್ನ ಗೆಲ್ಲಲಾರೆ, ಭಕ್ತಪ್ರಹ್ಲಾದ, ಶಿವ ಮೆಚ್ಚಿದ ಕಣ್ಣಪ್ಪ, ದೇವ, ಮೋಜುಗಾರ ಸೊಗಸುಗಾರ, ಕರ್ನಾಟಕ ಸುಪುತ್ರ ಹೀಗೆ ನಲವತ್ತಕ್ಕೂ ಹೆಚ್ಚು ಕನ್ನಡ ಚಿತ್ರಗಳೊಂದಿಗೆ ತೆಲುಗು ತಮಿಳು, ಹಿಂದಿ ಮಲಯಾಳಂ ಭಾಷೆಗಳಲ್ಲೂ
ನಿರ್ದೇಶಿಸಿ ಪ್ರೇಕ್ಷಕನ ನಾಡಿಮಿಡಿತವನ್ನು ಅರಿತು ಯಶಸ್ವಿಯಾದ ನಿರ್ದೇಶಕರೇ ವಿಜಯಾ ರೆಡ್ಡಿ.
ಇವರು ನಿರ್ದೇಶಿಸಿದ ಒಂದೊಂದು ಚಿತ್ರದ ಹೆಸರನ್ನೂ ಪ್ರೇಕ್ಷಕ ಮರೆಯಲಾರ. ಇದನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಚಲನಚಿತ್ರ
ವೆಂಬುದು ಅಸ್ತಿತ್ವದಲ್ಲಿರುವುದೇ ಪ್ರೇಕ್ಷಕನ ಅಸ್ತಿತ್ವದಲ್ಲಿ. ಆತ ತನ್ನ ಸ್ವಯಂಪ್ರೇರಿತನಾಗಿ ಜೇಬಿನಿಂದ ಹಣ ವ್ಯಯಿಸಿ ಚಿತ್ರ ಮಂದಿರದೊಳಗೆ ಕೂತು ಚಿತ್ರವನ್ನು ನೋಡಿ ಖುಷಿಪಟ್ಟು ಹೊರಬರುತ್ತಾನಲ್ಲಾ, ಅದೇ ನೋಡಿ ಆ ಚಿತ್ರ, ಅದರ ನಿರ್ಮಾಪಕ, ನಿರ್ದೇಶಕ ಮತ್ತು ಅದರಲ್ಲಿನ ಕಲಾವಿದರು ತಂತ್ರಜ್ಞರ ಬದುಕು ಸಾರ್ಥಕ. ಸಿನಿಮಾಲೋಕವೆಂಬ ಗ್ರಹಕೂಟದ ಉದ್ಯಮದ ರೀಲು ಸುತ್ತುತ್ತಿರುವುದೇ ಪ್ರೇಕ್ಷಕನ ಸುತ್ತ.
ಪ್ರೇಕ್ಷಕನೇ ಈ ಗ್ರಹಗಳ ಗುರುತ್ವಾಕರ್ಷಣೆಯ ಕೇಂದ್ರಶಕ್ತಿ. ಚಿತ್ರರಂಗದ ಥಿಯೇಟರ್ ಸಮಸ್ಯೆ, ಡಬ್ಬಿಂಗ್ ಸಮಸ್ಯೆ, ಪರಭಾಷ ಚಿತ್ರಗಳ ಸಮಸ್ಯೆ ಇವುಗಳೆಲ್ಲದರ ಮೂಲಪುರುಷನೇ ಪ್ರೇಕ್ಷಕ. ಮೊನ್ನೆ ದರ್ಶನ್ ತಮ್ಮ ರಾಬರ್ಟ್ ಸಿನಿಮಾಗೆ ತೆಲುಗಿನಲ್ಲಿ
ಬಿಡುಗಡೆಯಾಗಲು ಆ ರಾಜ್ಯಗಳಲ್ಲಿ ಚಿತ್ರಮಂದಿರಗಳು ಲಭಿಸದೇ ಹೋದಾಗ ಕೂಡಲೇ ಕಂಗಾಲಾಗಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಧಾವಿಸಿ ದೂರು ನೀಡಿ, ಮಾರನೇ ದಿನವೇ ಸಮಸ್ಯೆ ಬಗೆಹರಿದು ಆಂಧ್ರದಲ್ಲಿ ನೂರಾರು ಚಿತ್ರಮಂದಿರಗಳು ಲಭಿಸು
ವಂತಾಗಿ, ಕೊನೆಗೂ ದರ್ಶನ್ ಅವರು ‘ಕನ್ನಡಿಗರ ಅಸ್ತಿತ್ವ’ (?) ವನ್ನು ಉಳಿಸಿಕೊಂಡರು.
ಇನ್ನು ಸುದೀಪ್ ದುಬೈನಲ್ಲಿ ಬಾನೆತ್ತರ ರಾರಾಜಿಸಿದ್ದೂ ಪ್ರೇಕ್ಷಕ ಅಭಿಮಾನಿಗಳು ಆರಾಧಿಸಿ ಮೆರೆಸಿದ್ದರಿಂದಲೇ. ಹೀಗೆ ಹಿರಿನಟರಾಗಲಿ ಕಿರುನಟ ರಾಗಲಿ ಪ್ರೇಕ್ಷಕನೆಂಬ ಮಹಾಪ್ರಭು ಅನ್ನದಾತ ಚಿತ್ರಮಂದಿರಕ್ಕೆ ಬಂದು ಅರಸಿದರೆ ಮಾತ್ರ ತಮ್ಮ
ಬದುಕು ಬಂಡವಾಳ ಎಂಬ ಸಹಜ ಸತ್ಯವನ್ನು ಅರಿತು ಅವರನ್ನು ತಮ್ಮ ಹೆತ್ತವರಿಗಿಂತ ಮೊದಲಾಗಿ ಹೆದರಿ ಗೌರವಿಸುತ್ತಾರೆ. ಹೀಗಾಗಿ ಪ್ರೇಕ್ಷಕನೇ ಒಂದು ಸಿನಿಮಾ ಯಶಸ್ಸಿಗೆ ಅಥವಾ ಸೋಲಿಗೆ ನೇರ ಕಾರಣಕರ್ತನಾಗುತ್ತಾನೆ.
ಇಂಥ ಪ್ರೇಕ್ಷಕನನ್ನು ಒಲಿಸಿಕೊಳ್ಳಲು ಆಕರ್ಷಿಸಲು ಆತನಿಗೆ ಖುಷಿನೀಡಲು ಕೊನೆಗೆ ಆತನನ್ನು ತಮ್ಮ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಧಾವಿಸಿ ಬರುವಂತೆ ಮಾಡಲು ನಿರ್ಮಾಪಕರು ಸಾಲ ಮಾಡಿ ಬಡ್ಡಿಕಟ್ಟಿ ಆಸ್ತಿ ಮಾರಿಕೊಂಡು ಚಿತ್ರಕ್ಕೆ ಬಂಡವಾಳ ಹೂಡುತ್ತಾರೆ. ಕೆಜಿಎಫ್ ಬಾಹುಬಲಿಯಂಥ ಚಿತ್ರಗಳು ವರ್ಷಾನುಗಟ್ಟಲೆ ಸಾವಿರಾರು ಕಾರ್ಮಿಕ ರೊಂದಿಗೆ
ಕೋಟ್ಯಂತರ ರುಪಾಯಿಗಳನ್ನು ವ್ಯಯಿಸಿ ಹಗಲುರಾತ್ರಿ ಚಿತ್ರೀಕರಣ ನಡೆಸುತ್ತಾರೆ.
ಇನ್ನು ಕಲಾವಿದರು ಆ ಸಿನಿಮಾಕ್ಕಾಗಿ ಮನೆ, ಸಂಸಾರ, ಕುಟುಂಬಗಳಿಂದ ದೂರವಾಗಿ ಆಯಾ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹವನ್ನು ಹಿಗ್ಗಿಸಿ ಕುಗ್ಗಿಸಿ ಯೋಗ ವ್ಯಾಯಾಮ ಆಹಾರ ಪಥ್ಯೆ ಉಪವಾಸ ವ್ರತಗಳಂಥ ಕಟ್ಟುಪಾಡುಗಳನ್ನು ಹಾಕಿಕೊಂಡು ಪಾತ್ರಗಳಿಗೆ ಜೀವ ತುಂಬುತ್ತಾರೆ.
ಪ್ರಾಣದ ಹಂಗನ್ನು ತೊರೆದು ಭಯಾನಕ ಸಾಹಸ ದೃಶ್ಯಗಳನ್ನು ನಿರ್ವಹಿಸುತ್ತಾರೆ. ಇನ್ನು ತಂತ್ರಜ್ಞರು ಯುನಿಟ್ ಹುಡುಗರು ತಮ್ಮ ಮನೆಯವರ ಮುಖನೋಡುವುದು ಆ ಚಿತ್ರ ಬಿಡುಗಡೆಗೊಂಡ ನಂತರವೇ. ಇಷ್ಟೆಲ್ಲಾ ಯಾರಿಗಾಗಿ ಮಾಡುತ್ತಾರೆ
ಹೇಳಿ?, ಅದು ಬಂಡವಾಳದ ಲಾಭಕ್ಕಾಗಿ ಎನ್ನಬಹುದಾದರೂ ಆ ಲಾಭ ತಂದುಕೊಡುವುದು ಪ್ರೇಕ್ಷಕನೇ ಅಲ್ಲವೇ? ಆತ ಚಿತ್ರಮಂದಿರಕ್ಕೆ ಬಂದು ಚಿತ್ರಮಂದಿರದ ಗಲ್ಲಪೆಟ್ಟಿಗೆ ತುಂಬಿಸಿದರೆ ಮಾತ್ರ ಅಲ್ಲವೇ.
ಇಂಥ ಚಿತ್ರಗಳಿಗೆ ಪ್ರಶಸ್ತಿ ಪುರಸ್ಕಾರಕ್ಕಿಂತ ಮೊದಲ ಆದ್ಯತೆ ಪ್ರೇಕ್ಷಕನೇ ಆಗಿರುತ್ತಾನೆ. ಆದರೆ ನೋಡಿ, ಇಂಥ ಪ್ರೇಕ್ಷಕನ ಅವಶ್ಯಕತೆಯೇ ಇಲ್ಲದೇ, ಆತನನ್ನು ಕ್ಯಾರೇ ಅನ್ನದೆಯೇ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿ ಸಿಕ್ಕಾಪಟ್ಟೆ ಪ್ರಶಸ್ತಿಗಳನ್ನು
ಬಾಚಿಕೊಂಡು ಸಬ್ಸಿಡಿಗಳನ್ನು ತುಂಬಿಸಿಕೊಂಡು ತಾನೊಬ್ಬ ದೊಡ್ಡ ನಿರ್ದೇಶಕ, ಪ್ರಶಸ್ತಿ ವಿಜೇತ ನಿರ್ದೇಶಕ, ಯಶಸ್ವಿ ನಿರ್ದೇಶಕ ಎಂದೆಲ್ಲಾ ಗುರುತಿಸಿ ಕೊಳ್ಳುವುದಿದೆಯಲ್ಲಾ ಅದೊಂಥರ ಮದುವೆಯೇ ಆಗದೆ ಮಕ್ಕಳನ್ನು ಹುಟ್ಟಿಸಿ ‘ತಂದೆ’ ಅನ್ನಿಸಿಕೊಂಡಂತೆ.
ಇಂಥ ‘ಬಿಳಿಆನೆ’ ಗಳಂಥ ನಿರ್ದೇಶಕರ ಒಂದು ಕೂಟ ಗಾಂಧಿನಗರದಲ್ಲಿದೆ. ಇವರುಗಳು ಒಂದು ಕನ್ನಡ ಚಿತ್ರವನ್ನು ಸುಮಾರು ಏಳರಿಂದ ಹತ್ತುಲಕ್ಷ ರುಪಾಯಿಗಳ ಬಂಡವಾಳದಲ್ಲಿ ಮುಗಿಸಿಬಿಡುತ್ತಾರೆ. ನಂತರ ಸಬ್ಸಿಡಿಗಳಿಗೆ ಹಾತೊರೆಯುತ್ತಾರೆ. ಪಾಪ, ಸರಕಾರ ಕಲೆಗೆ ದೇಶದ ಪರಂಪರೆ ಸಾಂಸ್ಕೃತಿಕ ಸಾಹಿತ್ಯಿಕ ಶೈಕ್ಷಣಿಕ ವಿಚಾರಗಳ ಅಭ್ಯುದಯದ ಭಾಗವಾಗಿ ಸಾಮಾಜಿಕ
ಬದ್ಧತೆಯುಳ್ಳ ‘ಗುಣಾತ್ಮಕ? (ಕಲಾತ್ಮಕವಲ್ಲ) ಚಲನಚಿತ್ರ ಗಳಿಗೆ ಇಂತಿಷ್ಟು ಅನುದಾನ (ಸಬ್ಸಿಡಿ)ವನ್ನು ಪ್ರೋತ್ಸಾಹಕರವಾಗಿ ನೀಡುತ್ತದೆ.
ತಲಾ 25 ಲಕ್ಷ ರುಪಾಯಿಗಳು 4 ಅತ್ಯುತ್ತಮ ಮಕ್ಕಳ ಚಿತ್ರಗಳಿಗೆ, ತಲಾ 15 ಲಕ್ಷ. ಉತ್ತಮ ಸಾಹಿತ್ಯ ಕೃತಿ ಆಧರಿತ 5 ಗುಣಾತ್ಮಕ
ಚಿತ್ರಗಳಿಗೆ, ತಲಾ 25 ಲಕ್ಷ , ಚಾರಿತ್ರಿಕ ಮತ್ತು ಪ್ರವಾಸಿತಾಣ ಕೇಂದ್ರಿತ 4 ಚಿತ್ರಗಳಿಗೆ, ತಲಾ 20 ಲಕ್ಷ ಜೇನುಗೂಡು? ಕಥಾಕಣಜ ದಿಂದ ಕಥೆ ಪಡೆದು ನಿರ್ಮಾಣಗೊಳ್ಳುವ ಚಿತ್ರಗಳಿಗೆ, 18.75 ಲಕ್ಷ ರು. ರಾಷ್ಟ್ರೀಯ – ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಗಳಲ್ಲಿ ಪ್ರದರ್ಶನಗೊಳ್ಳುವ 10 ಚಿತ್ರಗಳಿಗೆ ಮತ್ತು 5 ಲಕ್ಷ ರುಪಾಯಿಗಳನ್ನು ಕಥಾ ಲೇಖಕನಿಗೆ ಸಹಾಯಧನವನ್ನು ಪ್ರತಿವರ್ಷ 8 ಕನ್ನಡ ಚಿತ್ರಗಳು ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೂ ನೀಡುತ್ತದೆ.
ಇಂಥ ಸಹಾಯಧನದ ‘ಮಾನದಂಡವನ್ನೇ ಮಂತ್ರ ದಂಡವನ್ನಾಗಿಸಿಕೊಂಡ ಕೆಲವು ಬುದ್ಧಿವಂತ ನಿರ್ದೇಶಕರುಗಳು ಅದಕ್ಕೆ ಪೂರಕವಾಗಿ ‘ದಿಢೀರ್? ಸಿನಿಮಾಗಳನ್ನು ತಯಾರಿಸಿ ಸಬ್ಸಿಡಿ ಪ್ರಶಸ್ತಿ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ, ಟಿ.ವಿ ಪ್ರಸಾರದ
ಹಕ್ಕು, ಡಬ್ಬಿಂಗ್ ಹಕ್ಕು ಹೀಗೆ ಹತ್ತತ್ತಿರ ಐವತ್ತು ಲಕ್ಷಗಳವರೆಗೂ ಗಳಿಸುತ್ತಾರೆ. ಇಂಥವರಿಗೆ ಚಿತ್ರೀಕರಣ ಮುಹೂರ್ತ, ಮುಕ್ತಾಯ,
ಟೈಟಲ್ ಲಾಂಚಿಂಗ್, ಫಸ್ಟ್ ಲುಕ್, ಟೀಸರ್, ಟೈ ಲರ್ ಲಾಂಚಿಂಗ್, ಪ್ರಚಾರ, ಬಿಡುಗಡೆ ಇದ್ಯಾವುದಕ್ಕೂ ಸಮಾರಂಭಗಳು, ಗಣ್ಯರು, ಸಿನಿಮಾ ಪತ್ರಕರ್ತರ ಅವಶ್ಯಕತೆ ಇರುವುದಿಲ್ಲ.
ಇವರಿಂದ ಪತ್ರಿಕೆಗಳಿಗೆ ಟಿವಿ ಮಾಧ್ಯಮಗಳಿಗೆ ಯಾವ ಜಾಹೀರಾತುಗಳೂ ದಕ್ಕುವುದಿಲ್ಲ. ಒಂದು ದಿನ ಪತ್ರಿಕೆಯಲ್ಲಿ ವಾರ್ತಾ
ಇಲಾಖೆಯ ಸುದ್ದಿಗೋಷ್ಠಿಯ ವಿವರಗಳು ಪ್ರಕಟಗೊಳ್ಳುತ್ತದೆ. ಆಗಲೇ ಇವರ ಚಿತ್ರಗಳ ಹೆಸರು ಪ್ರಶಸ್ತಿಯೊಂದಿಗೆ ಪ್ರಕಟ ವಾಗುತ್ತದೆ. ಅಲ್ಲಿಯವರೆಗೂ ಇಂಥ ಚಿತ್ರಗಳ ಬಗ್ಗೆ ಪತ್ರಕರ್ತರಿಗೇ ತಿಳಿದಿರುವುದಿಲ್ಲ. ಇನ್ನು ಪ್ರಶಸ್ತಿ ದೊರಕಿ ಚಲನಚಿತ್ರೋ ತ್ಸವಗಳಿಗೆ ಹೋದರಷ್ಟೇ ಸಾಕು. ಅಲ್ಲಿಗೆ ಎಲ್ಲವೂ ಮುಗಿಯಿತು. ಎಂಗೇಜ್ ಮೆಂಟು, ಆಹ್ವಾನ ಪತ್ರಿಕೆ, ಶಾಸ್ತ್ರ ಮುಹೂರ್ತ, ಚಪ್ಪರ ಗಟ್ಟಿಮೇಳ ಧಾರೆ ಊಟ ಉಪಚಾರ ಸ್ನೇಹಿತರು ನೆಂಟರು ಬಂಧುಗಳು ಅಸಲಿಗೆ ಮದುವೆಯೇ ಆಗದೆ ಮುಂದೊಂದು ದಿನ ನಾನು ‘ಅಪ್ಪ’ ಆಗಿದ್ದೀನಿ ಎಂದು ಸ್ನೇಹಿತನೊಬ್ಬ ಹೇಳಿದರೆ ಹೇಗಿರುತ್ತದೆ ಹೇಳಿ?.
ಇಂಥ ನಿರ್ದೇಶಕರನ್ನೇ ಉಪೇಂದ್ರ ಅವರು ‘ನಿರುದ್ದೇಶಕರು? ಎಂದು ಕರೆದಿರಬಹುದು. ಯಾರಾದರು ತಯಾರಕರು ಪ್ರಶಸ್ತಿ ಪಡೆದ ಚಿತ್ರವೆಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಿದರಷ್ಟೇ ಆಯ್ತು. ಬಿಡುಗಡೆಯಾದರೂ ಪ್ರೇಕ್ಷಕ ಚಿತ್ರಮಂದಿರಕ್ಕೆ
ಸುಳಿಯಲಾರ. ಏಕೆಂದರೆ ಇಂಥ ಚಿತ್ರಗಳ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಜಾಹೀರಾತು ಪ್ರಕಟಗೊಳ್ಳದೆ ಪರಿಚಯವೇ ಆಗಿರುವುದಿಲ್ಲ. ಅಸಲಿಗೆ ಇವುಗಳು ಪ್ರೇಕ್ಷಕನಿಗಾಗಿ ನಿರ್ಮಿಸಲಾದ ಚಿತ್ರಗಳೇ ಆಗಿರುವುದಿಲ್ಲ.
ತಾಜಾ ಉದಾಹರಣೆ ಯೆಂದರೆ ಕಳೆದ ತಿಂಗಳಷ್ಟೇ ಒಂದೆಡೆ ಪರಿಪೂರ್ಣ ಸಾಹಿತಿಯೂ ಅಲ್ಲದ ಒಂದೆಡೆ ಪೂರ್ಣ ಸಿನಿಮಾ ದವರೂ ಅಲ್ಲದ ಬರಗೂರು ರಾಮಚಂದ್ರಪ್ಪನವರ ‘ಅಮೃತಮತಿ’ ಎಂಬ ಚಿತ್ರಕ್ಕೆ ಅಮೆರಿಕಾದ ಅಟ್ಲಾಂಟದಲ್ಲಿ ನಡೆದ ‘ಅಟ್ಲಾಂಟ’ ಪ್ರಶಸ್ತಿ, ಅರ್ಹತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಅತ್ಯುತ್ತಮ ದೇಶಿ ಭಾಷಾ ಚಿತ್ರ ಪ್ರಶಸ್ತಿ ಪಡೆದಿರುವ
ಸುದ್ದಿ ಪ್ರಕಟವಾಯಿತು. ಜತೆಗೆ 5 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ.
ನೋಯ್ಡಾದ 4ನೇ ಭಾರತೀಯ ವಿಶ್ವ ಚಲನ ಚಿತ್ರೋತ್ಸವದ ಸ್ಪರ್ಧಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿ, ನಟಿ ಹರಿಪ್ರಿಯಗೆ ಶ್ರೇಷ್ಠನಟಿ ಪ್ರಶಸ್ತಿಯೂ ದೊರಕಿದೆ ಎಂಬ ಸುದ್ದಿ ಓದುತ್ತಾ, ಕುತೂಹಲದಿಂದ ಚಿತ್ರ ಯಾವಾಗ ಬಿಡುಗಡೆ ಕಾಣುತ್ತದೆ ಎಂದು ಮುಂದೆ ಓದಿದರೆ, ಮುಂಬರುವ ಮಾರ್ಚ್ನಲ್ಲಿ ರಾಜ್ಯಾದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗುವ ‘ನಿರೀಕ್ಷೆಯಿದ್ದು’ ಅದೂ ಮುಂಬೈ ಮೂಲದ ಸಂಸ್ಥೆಯೊಂದು ಚಿತ್ರದ ಪ್ರದರ್ಶನದ ಹಕ್ಕನ್ನು ಪಡೆದಿರುವುದಾಗಿ ವರದಿಯಾಗಿದೆ.
ಹೀಗೆ ಐದಾರು ‘ಮೇಲ್ದರ್ಜೆಯ? ನಿರ್ದೇಶಕರ ಕೂಟದಲ್ಲಿ ‘ಅವನಿಗೆ ಬಿಟ್ಟು ಇವನು, ಇವನಿಗೆ ಬಿಟ್ಟು ಅವನು? ಎಂಬಂತೆ
ರೊಟೇಶನ್ನಲ್ಲಿ ಇಂಥ ‘ಆಗಂತುಕ’ ಚಿತ್ರಗಳು ನಿರ್ಮಾಣಗೊಂಡು ಸಬ್ಸಿಡಿಗಾಗಿ ಪ್ರಶಸಿ, ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಂಡು ‘ಪ್ರೇಕ್ಷಕರ’ ನಿರ್ದೇಶಕರನ್ನು ‘ಅಸ್ಪೃಶ್ಯರಂತೆ? ಕಾಣುತ್ತಾ ಚಿತ್ರರಂಗದಲ್ಲಿ ‘ಅಘೋರಿ’ಗಳಂತೆ ಇರುತ್ತಾರೆ.
ಹಾಗಂತ ಕನ್ನಡ ಚಿತ್ರಗಳಿಗೆ ಪ್ರಶಸ್ತಿಗಳು ಅಂತಾರಾಷ್ಟ್ರೀಯ ಮನ್ನಣೆಗಳು ದೊರಕಬಾರದೆಂದಲ್ಲ.
ನಮ್ಮ ಕನ್ನಡದ ಬೇಡರಕಣ್ಣಪ್ಪ, ನಾಗರಹಾವು, ಒಂದಾನೊಂದು ಕಾಲದಲ್ಲಿ ಚಿತ್ರಗಳಿಗೂ ಪ್ರಶಸ್ತಿಗಳು ದೊರಕಿವೆ. ಅದಕ್ಕಿಂತ ಮಿಗಿಲಾಗಿ ಪ್ರೇಕ್ಷಕರ ಮೆಚ್ಚುಗೆಯ ಪ್ರಶಸ್ತಿಯನ್ನು ಗಳಿಸಿವೆ. ನಾಗಭರಣ, ಗಿರೀಶ್ ಕಾಸರವಳ್ಳಿ, ಸುರೇಶ್ ಹೆಬ್ಳೀಕರ್, ಶಂಕರನಾಗ್ ರಂಥ ನಿರ್ದೇಶಕರು ಕನ್ನಡಚಿತ್ರಗಳನ್ನು ಮೊದಲಿಗೆ ಪ್ರೇಕ್ಷಕನಿಗೆ ತೋರಿಸಿ ಪ್ರಶಸ್ತಿಗಳಿಸಿ, ರಾಜ್ಯದ ಹಿರಿಮೆಯನ್ನ ವಿಶ್ವಮಟ್ಟ ಕ್ಕೇರಿಸಿದ್ದಾರೆ.
ಇವರ ಗ್ರಹಣ, ಚಿನ್ನಾರಿ ಮುತ್ತ, ಮೈಸೂರು ಮಲ್ಲಿಗೆ, ಸಂತಶಿಶುನಾಳ ಷರೀಫ್, ಚಿಗುರಿದ ಕನಸು, ಆಘಾತ, ಕಾಡಿನಬೆಂಕಿ, ಪ್ರಥಮ, ಉಷಾಕಿರಣ, ಘಟಶ್ರಾದ್ಧ, ತಬರನಕಥೆ, ಆಕ್ಸಿಡೆಂಟ್, ಮಿಂಚಿನ ಓಟ, ಹೀಗೆ ಪ್ರೇಕ್ಷಕರೂ ನೋಡಿ ಮೆಚ್ಚಿದ್ದಾರೆ
ಮತ್ತು ಅವುಗಳೂ ವಿವಿಧ ಚಿತ್ರೋತ್ಸವ ಗಳಲ್ಲಿ ಪ್ರದರ್ಶನಗೊಂಡಿವೆ. ಆದರೆ ಇಂದು ಪೇಕ್ಷಕರಿಗಿಂತ ಪ್ರಶಸ್ತಿ ಸಬ್ಸಿಡಿ ವೈಯಕ್ತಿಕ ಘನತೆ ಗಳಿಗಾಗಿಯೇ ಕದ್ದುಮುಚ್ಚಿ ಸಿನಿಮಾ ಮಾಡುವ ತಂತ್ರ ಜಾರಿಯಲ್ಲಿದೆ.
ಇಂಥವರಿಗೆ ಪ್ರೇಕ್ಷಕರು, ಪತ್ರಕರ್ತರು, ಮಾಧ್ಯಮಗಳು, ಪ್ರಚಾರರಕರು, ತಯಾರಕರು, ಚಿತ್ರಮಂದಿರಗಳು, ಇವುಗಳಾವುದರ ಹಂಗಿಲ್ಲದೆ ಕಡೆಗೆ ಯಾವುದೇ ಸ್ಟಾರ್ ನಟನಟಿಯರನ್ನೂ ಮೂಸದೆ ಕೇವಲ ಹತ್ತು ಲಕ್ಷದೊಳಗೆ ಸಿನಿಮಾ ಮುಗಿಸಿ ನಾಲ್ಕೆ ದು ಪಟ್ಟು ಸರಕಾರಿ ಹಣವನ್ನು ಸಂಪಾದಿಸಿಕೊಂಡು ಅವಾರ್ಡ್ ನಿರ್ದೇಶಕ? ಎನಿಸಿಕೊಂಡು ಸರಕಾರಗಳ ಮಟ್ಟದಲ್ಲಿ ಮಹಾನ್ ಬುದ್ಧಿಜೀವಿಗಳಂತೆ ತೋರಿಸಿಕೊಂಡು ಅಲ್ಲಿಯೂ ಗಂಜಿಕೇಂದ್ರವನ್ನು ಆಶ್ರಯಿಸಿಕೊಂಡು ಬದುಕುತ್ತಾರೆ.
ಇನ್ನು ಗಾಂಧಿನಗರದಲ್ಲಿ ಸಬ್ಸಿಡಿ – ಪ್ರಶಸ್ತಿಗಳ ಸುತ್ತಲೂ ದೊಡ್ಡ ದಂಧೆಯೇ ಜಾರಿಯಲ್ಲಿದೆ. ಒಂದು ಸಿನಿಮಾಕ್ಕೆ 2 ರಿಂದ 3 ಲಕ್ಷ ಲಂಚ ಬಿಸಾಡಿದರೆ ಸಾಕು 10 ಲಕ್ಷ ಗ್ಯಾರಂಟಿ ಎಂಬ ಮಾತು ನಂಬಿಕೆ ಸೃಷ್ಠಿಯಾಗಿದೆ. ಅದಕ್ಕೆಂದೇ ಏಜೆಂಟರುಗಳು ಅದಕ್ಕೆ
ಪೂರಕವಾಗಿ ರಾಜಕೀಯ ಅಧಿಕಾರಸ್ಥರು ಅಧಿಕಾರಿ ಶಾಹಿಗಳ ಪಾತ್ರಗಳೂ ಇವೆ. ಕುಮಾರ್ ಎಂಬ ಸದಭಿರುಚಿಯ ನಿರ್ಮಾಪಕ ರೊಬ್ಬರು ತಮಗಾದ ಕೆಟ್ಟ ಅನುಭವದಿಂದ ಇಂಥ ಅನೈತಿಕತೆಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದಾರೆ.
ಉಪೇಂದ್ರ ರಂಥವರು ಮನಸ್ಸು ಮಾಡಿದರೆ ಈ ಕರ್ಮಕಾಂಡ ಗಳನ್ನೇ ಕಥಾವಸ್ತುವಾಗಿಸಿ ಒಂದು ಅದ್ಭುತ ‘ಪ್ರೇಕ್ಷಕರ ಕಳಕಳಿಯ’ ಸಿನಿಮಾ ಮಾಡಬಹುದು. ಇಂಥ ಅಡ್ಡದಾರಿಗಳನ್ನು ಅದ್ಧೂರಿ ನಿರ್ಮಾಪಕ ರಾದ ಕೆಸಿಎನ್ ಗೌಡರು, ಚಂದುಲಾಲ್ ಜೈನ್, ವೀರಸ್ವಾಮಿ, ಪಾರ್ವತಮ್ಮನವರು, ದ್ವಾರಕೀಶ್, ಎಂ.ಪಿ. ಶಂಕರ್, ರಾಮು, ರವಿಚಂದ್ರನ್ರಂಥವರು ಹಿಡಿದಿದ್ದರೆ ಒಬ್ಬೊಬ್ಬರೂ ಇನ್ನೂರು ಮುನ್ನೂರು ಚಿತ್ರಗಳನ್ನು ಮಾಡಿ ಬಿಸಾಡುತ್ತಿದ್ದರು.
ಆದರೆ ಮದುವೆಯೇ ಆಗದೆ ತಂದೆ ಎನಿಸಿಕೊಳ್ಳುವ ಅನೈತಿಕ ಗೀಳು ಇವರದ್ದಲ್ಲ. ಪುಟ್ಟಣ್ಣರಂಥ ನಿರ್ದೇಶಕರು ತಮ್ಮ ಚಿತ್ರಕ್ಕೆ ಪ್ರೇಕ್ಷಕರು ಬರದೇ ಹೋದರೆ ಕಂಗಾಲಾಗಿ ಕಣ್ಣೀರಿಡುತ್ತಿದ್ದರು. ವಿಜಯಾರೆಡ್ಡಿಯವರಂತೆ ಅನೇಕ ಕನ್ನಡ ನಿರ್ದೇಶಕರು
ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಮಾರುವೇಷದಲ್ಲಿ ಚಿತ್ರ ಮಂದಿರದ ಮುಂದೆ ನಿಂತು ಪ್ರೇಕ್ಷಕನ ನಾಡಿಮಿಡಿತವನ್ನು ಅರಿಯಲು ಯತ್ನಿಸಿದ್ದಾರೆ. ದುರಾದೃಷ್ಟವೆಂದರೆ ವಿಶ್ವದ ಸರ್ವಶ್ರೇಷ್ಠ ನಟರಾದ ರಾಜ್ ಅವರಿಗೇ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿಯೇ ದೊರಕಲಿಲ್ಲ.
ಆದರೆ ಅದನ್ನೆಲ್ಲಾ ಮೀರಿ ಪ್ರೇಕ್ಷಕರನ್ನು ಅಭಿಮಾನಿ ದೇವರುಗಳೆಂದು ಕರೆದರು. ಅಂಥ ಪ್ರೇಕ್ಷಕ ಅಭಿಮಾನಿಗಳ ಬಲದಿಂದಲೇ ನೆಲಜಲ ಭಾಷೆ, ಸಂಸ್ಕೃತಿಗೆ ಹೋರಾಡಿ ಕನ್ನಡದ ಶಕ್ತಿಯಾಗಿ ನಿಂತರು.