Friday, 15th November 2024

ಹೆಸರೆಂದು ಇಟ್ಟ ಹೆಸರಿಗೆ ಅರ್ಥ ಇರಲೇಬೇಕೆಂದೇನಿಲ್ಲ

ತಿಳಿರುತೋರಣ

ಶ್ರೀವತ್ಸ ಜೋಶಿ

ಅರ್ಥ ಇದ್ದರೆ ಆ ಹೆಸರಿಗೆ ಮತ್ತಷ್ಟು ಮೆರುಗು, ಮತ್ತಷ್ಟು ಮೌಲ್ಯ ನಿಜವೇ. ಆದರೆ ಹೆಸರಿಗೆ ಅರ್ಥ ಇರಲೇಬೇಕೆಂಬ ನಿಯಮ ವೇನಿಲ್ಲ. ಆದ್ದರಿಂದಲೇ, ಧಾರವಾಡ ಉತ್ತರ ಕ್ಷೇತ್ರದ ಸಂಸದ ಮಹಾಶಯರು ತನ್ನ ಹೆಸರು ‘ಪ್ರಲ್ಹಾದ ಜೋಶಿ’ ಎಂದು, ಮತ್ತು ಪತ್ರಿಕೆಗಳು ಅದನ್ನು ಹಾಗೆಯೇ ಅಚ್ಚು ಮಾಡಬೇಕು ಎಂದು ಹೇಳುವುದರಲ್ಲಿ ತಪ್ಪೇನಿಲ್ಲ.

ಅವರ ಹೆಸರು ‘ಪ್ರಲ್ಹಾದ’ ಎಂದು ಇರುವುದಕ್ಕೆ ಏನೇನೂ ಅಡ್ಡಿಯಿಲ್ಲ, ಆದರೆ ಆ ಹೆಸರಿಗೆ ಅರ್ಥ ಇಲ್ಲ ಅಷ್ಟೇ. ‘ಶ್ರೀಮನ್ನಾರಾಯಣನು ನೃಸಿಂಹ ಅವತಾರವೆತ್ತಿ ಹಿರಣ್ಯಕಶಿಪು ಎಂಬ ರಾಕ್ಷಸನನ್ನು ಕೊಂದಿದ್ದನಲ್ವಾ, ಹಿರಣ್ಯಕಶಿಪುವಿನ ಹಿರಿಯ ಮಗ ಹರಿಭಕ್ತನಾಗಿದ್ದನಲ್ವಾ, ಆ ಕಥೆಯಿಂದಲೇ ನನ್ನ ಹೆಸರು ಬಂದಿರುವುದು. ಆ ಮಹಾನ್ ಹರಿಭಕ್ತನ ಹೆಸರೇ ನನ್ನ ಹೆಸರು ಕೂಡ!’ ಅಂತೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುವ ಅಧಿಕಾರ ನಮ್ಮ ಸಂಸದ ಮಹಾಶಯರಿಗೆ ಇಲ್ಲ.

ಏಕೆಂದರೆ ಹಿರಣ್ಯಕಶಿಪುವಿನಹಿರಿಯ ಮಗ, ಮಹಾನ್ ಹರಿಭಕ್ತನ ಹೆಸರು ‘ಪ್ರಹ್ಲಾದ’ ಅಂತಿದ್ದದ್ದೇ ಹೊರತು ‘ಪ್ರಲ್ಹಾದ’ ಅಲ್ಲ. ಮಾತ್ರವಲ್ಲ, ಪ್ರಹ್ಲಾದನಿಗೆ ನಾಲ್ಕು ಜನ ಸಹೋದರರೂ ಇದ್ದರು. ಅವರಲ್ಲಿ ಇಬ್ಬರ ಹೆಸರುಗಳು ಅನುಕ್ರಮವಾಗಿ ಸಂಹ್ಲಾದ ಮತ್ತು ಅನುಹ್ಲಾದ. ಉಳಿದಿಬ್ಬರು ಶಿಬಿ ಮತ್ತು ಬಾಷ್ಕಲ. ಆಯ್ತು, ಪ್ರಲ್ಹಾದ ಎಂಬ ಹೆಸರಿಗೆ ಅರ್ಥ ಇಲ್ಲ ಒಪ್ಪಿಕೊಳ್ಳೋಣ, ಪ್ರಹ್ಲಾದ ಎಂಬ ಹೆಸರಿಗಾದರೆ ಅರ್ಥ ಇದೆಯೇ ಎಂದು ಕೇಳುತ್ತೀರಾ? ಖಂಡಿತ ಇದೆ.

ಈ ಪ್ರಹ್ಲಾದ, ಸಂಹ್ಲಾದ, ಅನುಹ್ಲಾದ ಎಂಬ ಹೆಸರುಗಳು, ಹಾಗೆಯೇ ಆಹ್ಲಾದ ಎಂದು ನಮಗೆಲ್ಲ ಪರಿಚಿತವೇ ಇರುವ ಪದ ಸಹ ಹುಟ್ಟಿಕೊಂಡಿರುವುದು ‘ಹ್ಲಾದ’ ಎಂಬ ಮೂಲ ಪದದಿಂದ. ಸಂಸ್ಕೃತದಲ್ಲಿ ‘ಹ್ಲಾದ’ ಅಂದರೆ ಹಿಗ್ಗು, ಆನಂದ, ಸಂತೋಷ. ಹ್ಲಾದಕ್ಕೆ ಮುಂದಿನಿಂದ ಪ್ರ ಅಥವಾ ಆ ಅಥವಾ ಸಂ ಇತ್ಯಾದಿ ಉಪಸರ್ಗಗಳ ಪೈಕಿ ಒಂದು ಸೇರಿಕೊಂಡರೆ ಮತ್ತಷ್ಟು
ಹೆಚ್ಚು ಹಿಗ್ಗು ಎಂಬ ಅರ್ಥ ಬರುತ್ತದೆ. ಹ್ಲಾದ ಶಬ್ದದಿಂದಲೇ ರೂಪುಗೊಂಡ ಬೇರೆ ಕೆಲವು ಪದಗಳೂ ಸಂಸ್ಕೃತದಲ್ಲಿವೆ: ಹ್ಲಾದನ
ಅಂದರೆ ಸಂತೋಷಪಡಿಸುವುದು.

ಹ್ಲಾದನೀಯ ಅಂದರೆ ಸಂತೋಷಪಡಿಸಬೇಕಾದ. ಹ್ಲಾದಿತ ಅಂದರೆ ಸಂತೋಷ ಪಡಿಸಲ್ಪಟ್ಟ. ಹ್ಲಾದ್ಯ ಅಂದರೆ ಸಂತೋಷ ಪಡಬೇಕಾದ. ಇನ್ನೂ ಒಂದು ಸ್ವಾರಸ್ಯಕರ ಸಂಗತಿಯಿದೆ. ಹ್ಲಾದ ಶಬ್ದ ಇದ್ದಹಾಗೆ ಲ್ಹಾದ ಎಂಬ ಶಬ್ದ ಕೂಡ ಸಂಸ್ಕೃತದಲ್ಲಿ ಇರಬಹುದಲ್ವಾ ಎಂದು ಯಾರಿಗಾದರೂ (ಸಂಸದ ಮಹಾಶಯರಿಗೇ ಅಂತಿಟ್ಕೊಳ್ಳೋಣ) ತರ್ಕ ಹೊಳೆಯ ಬಹುದು. ಇಲ್ಲ. ಸಂಸ್ಕೃತದಲ್ಲಿ ಲ್ಹಾದ ಎಂಬ ಶಬ್ದವೇ ಇಲ್ಲ. ಮಾತ್ರವಲ್ಲ, ಲ ವ್ಯಂಜನಕ್ಕೆ ಯಾವುದೇ ವ್ಯಂಜನವು ಒತ್ತಕ್ಷರವಾಗಿ ಬರುವ ಯಾವುದೇ ಶಬ್ದ ಸಂಸ್ಕೃತ ಭಾಷೆಯಲ್ಲಿಲ್ಲ!

ಶಬ್ದವೇ ಇಲ್ಲವೆಂದ ಮೇಲೆ ಅರ್ಥದ ಮಾತೆಲ್ಲಿ ಬಂತು? ಹಾಗಾಗಿ ಪ್ರಲ್ಹಾದ ಎನ್ನುವುದು ಅರ್ಥರಹಿತ ಪದ. ಹಾಗಾದರೆ ಪ್ರಲ್ಹಾದ ಜೋಶಿಯವರಿಗೇಕೆ ತನ್ನ ಹೆಸರು ಪ್ರಲ್ಹಾದ ಅಂತಲೇ ಹೊರತು ಪ್ರಹ್ಲಾದ ಅಲ್ಲ ಎಂಬ ಹಠ? ಅದಕ್ಕೆ ಉಚ್ಚಾರ ಕಾರಣ. ಉತ್ತರ ಕರ್ನಾಟಕದ ಮಂದಿ ಪ್ರಹ್ಲಾದ ಎಂಬುದನ್ನು ಪ್ರಲ್ಹಾದ ಎಂದೇ ಉಚ್ಚರಿಸುತ್ತಾರೆ. ಪಂಡಿತ್ ಭೀಮಸೇನ ಜೋಶಿಯವರು ಹಾಡಿರುವ ‘ಕರುಣಿಸೋ ರಂಗ ಕರುಣಿಸೋ…’ ಕೀರ್ತನೆಯನ್ನೊಮ್ಮೆ ಸೂಕ್ಷ್ಮವಾಗಿ ಕೇಳಿ.

‘ಬಲಿಯಂತೆ ದಾನವ ಕೊಡಲು ಅರಿಯೆ| ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ|’ ಎಂದು ಪುರಂದರ ದಾಸರು ಬರೆದಿರುವು ದನ್ನು ಭೀಮಸೇನ ಜೋಶಿಯವರು ‘ಭಕ್ತಿ ಛಲವನು ಅರಿಯೆ ಪ್ರಲ್ಹಾದನಂತೆ’ ಎಂದೇ ಹಾಡುತ್ತಾರೆ. ಇನ್ನೊಂದು ಕೀರ್ತನೆ ‘ತುಂಗಾ ತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ…’ ಸಹ ಬೇಕಿದ್ದರೆ ಗಮನಿಸಿ. ಅಲ್ಲಿಯೂ ‘ಕ್ಷುಲ್ಲಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ’ ಎಂದು ಜನಾರ್ದನ ವಿಠಲದಾಸರು ಬರೆದಿರುವುದನ್ನು ಭೀಮಸೇನ ಜೋಶಿಯವರು ‘ಕ್ಷುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಲ್ಹಾದನು ತಾನಿಲ್ಲಿಹನಮ್ಮ’ ಎಂದೇ ಹಾಡುತ್ತಾರೆ.

ಮರಾಠಿ ಭಾಷೆಯಲ್ಲಿ ಲ ಅಕ್ಷರಕ್ಕೆ ಹ ಒತ್ತಕ್ಷರವಾಗಿ ಬರುವ ಪದಗಳು ಬೇಕಾದಷ್ಟಿವೆ. ಅವುಗಳ ಪ್ರಭಾವದಿಂದಾಗಿಯೇ ಉತ್ತರ ಕರ್ನಾಟಕದವರಿಗೆ ಪ್ರಹ್ಲಾದ ಪ್ರಲ್ಹಾದ ಆಗಿದ್ದಾನೆ. ತಾತ್ಪರ್ಯ ಇಷ್ಟೇ: ಧಾರವಾಡ ಉತ್ತರ ಕ್ಷೇತ್ರದ ಸಂಸದರು ತನ್ನ ಹೆಸರನ್ನು ಪ್ರಲ್ಹಾದ ಎಂದು ಧಾರಾಳವಾಗಿ ಬರೆಯಬಹುದು; ಬೇರೆಯವರೂ ಹಾಗೆಯೇ ಬರೆಯಬೇಕೆಂದು ಅಪ್ಪಣೆ ಸಹ ಕೊಡಿಸಬಹುದು. ಆದರೆ ‘ಹಿರಣ್ಯಕಶಿಪುವಿನ ಹಿರಿಯ ಮಗನ ಹೆಸರೇನು?’ ಎಂಬ ಪ್ರಶ್ನೆಗೆ ಅವರೇನಾದರೂ ಪರೀಕ್ಷೆಯಲ್ಲಿ ‘ಪ್ರಲ್ಹಾದ’ ಎಂದು ಉತ್ತರ
ಬರೆದರೆ ಅವರಿಗೆ ಆ ಉತ್ತರಕ್ಕೆ ಮಾರ್ಕ್ ಸಿಗುವುದಿಲ್ಲ.

‘ಎಂ.ಪಿ ಕೋಟಾ’ದಲ್ಲಿಯೂ ಸಿಗುವುದಿಲ್ಲ. ಅಷ್ಟನ್ನು ಅವರು ಅರ್ಥಮಾಡಿಕೊಂಡರೆ ಸಾಕು. ಶೃತಿ ಎಂಬ ಹೆಸರು ಇರುವವರದೂ ಇದೇ ಸಮಸ್ಯೆ. ಶ್ರುತಿ ಎಂಬುದನ್ನು ಅನೇಕರು ತಪ್ಪಾಗಿ ‘ಶೃತಿ’ ಎಂದು ಬರೆಯುತ್ತಾರೆ/ ಉಚ್ಚರಿಸುತ್ತಾರೆ. ಶೃತಿ ಎಂಬ ಪದವೇ ಇಲ್ಲ ಸಂಸ್ಕೃತದಲ್ಲಿ! ಶ್ರುತಿ ಎಂಬ ಪದಕ್ಕಾದರೆ ವೇದ, ಕರ್ಣ(ಕಿವಿ), ಶ್ರವಣ(ಕೇಳುವುದು), ವಾರ್ತೆ, ಶಬ್ದ, ವಾಚಕಶಬ್ದ, ಶ್ರವಣ ನಕ್ಷತ್ರ, ಸಂಗೀತದಲ್ಲಿ ಸ್ವರಾರಂಭದ ಅವಯವವಾದ ಒಂದು ನಾದ – ಹೀಗೆ ಹಲವು ಅರ್ಥಗಳು ಇವೆ.

ಗಂಟೆಯ ಶಬ್ದದಿಂದ ಉಂಟಾಗುವ ನಾದಸಂತಾನವು ಸ್ವರ. ಹಾಗೆಯೇ ಸ್ವರಾರಂಭದ ಅವಯವಭೂತವಾದ ಶ್ರುತಿಯ ಅನುರಣನವೇ ಸ್ವರ – ಎಂದು ಕೂಡ ನಿಘಂಟುಕಾರರು ವಿವರಿಸುತ್ತಾರೆ. ‘ಶ್ರು ಎಂಬುದನ್ನೊಳಗೊಂಡ ಅನೇಕ ಪದಗಳು ಪ್ರಾಚೀನ
ಭಾರತೀಯರ ವಿದ್ಯೆ, ಜ್ಞಾನ, ಮೊದಲಾದವುಗಳ ಕಲ್ಪನೆಯ ಬಗ್ಗೆ ಒಂದು ವಿಶೇಷವನ್ನು ತಿಳಿಯಪಡಿಸುತ್ತವೆ.

ಶ್ರು ಧಾತುವಿಗೆ ಸಂಸ್ಕೃತದಲ್ಲಿ ‘ಕೇಳು’ವುದೆಂದು ಅರ್ಥ. ಶ್ರುತ ಅಂದರೆ ಕೇಳಿದ್ದು. ಶ್ರುತಿ ಎಂದರೆ ಕೇಳಿಬಂದದ್ದು. ವೇದಗಳು ಆದ್ಯ ಋಷಿಗಳಿಗೆ ಒಂದು ರೀತಿಯ ಭಾವಾವೇಶದ ಸ್ಥಿತಿಯಲ್ಲಿ ಕೇಳಿಸಿಕೊಂಡವು. ಭಾವಾವೇಶದ ಸ್ಥಿತಿಯಲ್ಲಿ ಅವರು ರಚಿಸಿದ ಕೃತಿ ಗಳಲ್ಲ. ವೇದದ ಅಕ್ಷರ ಅಕ್ಷರವೂ ಶಬ್ದಶಬ್ದವೂ ಇದ್ದಕ್ಕಿದ್ದಂತೆ ಪರಮಾತ್ಮನಿಂದ ಅನುಗ್ರಹಿಸಲ್ಪಟ್ಟದ್ದು; ಮತ್ತು ಬದಲಾವಣೆ ಯಾಗದ ಸತ್ಯವನ್ನು ಹೇಳುವಂಥದ್ದು. ಮಂತ್ರಗಳನ್ನು ಹಾಗೆ ಯಾರು ಕೇಳಿಸಿಕೊಂಡರೋ ಅವರು ಅವುಗಳನ್ನು ಶಿಷ್ಯಂದಿರಿಗೆ
ಬಾಯ್ದೆರೆಯಾಗಿ ಉಪದೇಶಿದರು.

ಆ ಪರಂಪರೆ ಮುಂದುವರಿಯಿತು. ಸಾವಿರಾರು ವರ್ಷಗಳಿಂದ ಕಿವಿ(ಶ್ರುತಿ) ಮೂಲಕವೇ ಕಲಿಸಿ ಕಲಿತು ಬಂದದ್ದು ಹೊರತು ಓದಿನಿಂದ ಬಂದದ್ದಲ್ಲ. ನಿಜಕ್ಕೂ ವಿದ್ಯೆಯೆಂಬುದು ಗುರುಮುಖದಿಂದ ಕೇಳಿ ಕಲಿಯತಕ್ಕದ್ದು. ಶ್ರುತಿ ಪದವಿ ವೇದಗಳಿಗೆ ಮಾತ್ರ ಸಿಕ್ಕಿದರೂ ಎಲ್ಲ ವಿದ್ಯೆಯೂ ಶ್ರುತವೇ. ಬರೇ ಓದಿನಿಂದ ಬರತಕ್ಕದ್ದಲ್ಲ’ ಎನ್ನುತ್ತಾರೆ ಪಾ.ವೆಂ ಆಚಾರ್ಯರು ಪದಾರ್ಥ ಚಿಂತಾಮಣಿ ಗ್ರಂಥದಲ್ಲಿ. ಡಾ.ರಾಜಕುಮಾರ್, ಮಾಧವಿ, ಗೀತಾ ಅಭಿನಯದ ಜನಪ್ರಿಯ ಚಲನಚಿತ್ರದ ಹೆಸರು ‘ಶ್ರುತಿ ಸೇರಿದಾಗ’ ಎಂದು ಇದೆಯೇ ಹೊರತು ‘ಶೃತಿ ಸೇರಿದಾಗ’ ಅಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಅಕಸ್ಮಾತ್ ಯಾರಾದರೂ ‘ಶೃತಿ ಸೇರಿದಾಗ’ ಎಂದು ಬರೆದಿದ್ದರೂ ಅದನ್ನು ‘ಶ್ರುತಿ ಸೇರಿದಾಗ’ ಎಂದು ಸರಿಪಡಿಸುವಷ್ಟು ಅಪ್ಪಟ ಅಪರಂಜಿ ನಮ್ಮ ಅಣ್ಣಾವ್ರು.

ಶ್ರುತಿ ಪದಕ್ಕೆ ಸಂಬಂಧಿಸಿದಂತೆಯೇ ಅಪಶ್ರುತಿ, ಫಲಶ್ರುತಿ ಮುಂತಾದ ಪದಗಳು. ಅವುಗಳನ್ನು ಅಪಶೃತಿ, ಫಲಶೃತಿ ಎಂದು
ಬರೆಯಲಾಗದು. ಹಾಗಾದರೆ, ಶೃತಿ ಎಂಬ ಹೆಸರು ಇರಬಾರದೇ? ಖಂಡಿತವಾಗಿ ಇರಬಹುದು. ಅದಕ್ಕೆ ಅರ್ಥ ಇಲ್ಲ ಅಷ್ಟೇ. ಹೆಸರಿಗೆ ಅರ್ಥ ಇರಲೇಬೇಕೇ? ಬೇಕಾಗಿಲ್ಲ! ಈಗ, ಅಂಬರೀಷ ಎಂಬ ಹೆಸರಿನ ವಿಚಾರಕ್ಕೆ ಬರೋಣ. ಇದು ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನಿಗೆ… ಎನ್ನುವ ರೀತಿಯದಲ್ಲ. ಶ್ರೀಶ, ಸುರೇಶ, ರಮೇಶ, ಗಣೇಶ, ಗಿರೀಶ, ಉಮೇಶ, ಮಹೇಶ, ಮಾದೇಶ, ಮಹಾಂತೇಶ, ಪ್ರಥಮೇಶ, ವೆಂಕಟೇಶ… ಮುಂತಾದ ಯಾವ ಹೆಸರುಗಳಂತೆಯೂ ಅಲ್ಲ.

ಕಾರಣವೇನಿರಬಹುದು ಊಹಿಸಿ. ಅಂಬರೀಷ ಎಂಬ ಹೆಸರಲ್ಲಿ ಯಾವ ಈಶನೂ ಇಲ್ಲ. ಅಸಲಿಗೆ ಶ ಅಕ್ಷರವೇ ಇಲ್ಲ, ಅಲ್ಲಿರುವುದು ಷ ಅಕ್ಷರ. ಪಟ್ಟೆ ಷ ಅಥವಾ ಷಣ್ಮುಖ ಷ ಅಂತೇವಲ್ವಾ ಅದು. ನಮಗೆಲ್ಲ ಗೊತ್ತೇ ಇರುವಂತೆ ಈಶ ಎಂಬ ಪದಕ್ಕೆ ಶಿವ, ಪರಮಾತ್ಮ, ಗಂಡ, ಯಜಮಾನ, ಧಣಿ ಎಂಬಿತ್ಯಾದಿ ಅರ್ಥಗಳಿವೆ. ಗಣೇಶ, ಗಿರೀಶ, ಉಮೇಶ, ಮಹೇಶ ಮುಂತಾದ ಎಲ್ಲ ಹೆಸರುಗಳಲ್ಲಿ ಈ ಅರ್ಥಗಳ ಪೈಕಿ ಒಂದನ್ನು ಹಿಡಿದುಕೊಂಡು ಈಶ ಇದ್ದಾನೆ. ಆದರೆ ಅಂಬರೀಷ ಹಾಗಲ್ಲ.

ಅದು ಅಂಬರ + ಈಷ ಎಂಬ ಪದಗಳಿಂದಾಗಿರುವು ದಲ್ಲ. ಏಕೆಂದರೆ ಈಷ ಎಂಬ ಪದವೇ ಸಂಸ್ಕೃತದಲ್ಲಿ ಇಲ್ಲ! ಹಾಗಾದರೆ
ಅಂಬರೀಷ ಎಂಬ ಹೆಸರಿನ ಅರ್ಥ ಏನು? ಏನೂ ಇಲ್ಲ. ಅದೊಂದು ಅರ್ಥವಿಲ್ಲದ ಹೆಸರು ಅಷ್ಟೇ. ೨೦೧೬ ಜನವರಿ ೧೭ರಂದು ವಿಶ್ವವಾಣಿ ಪತ್ರಿಕೆಯಲ್ಲಿ ‘ತಿಳಿರು ತೋರಣ’ ಅಂಕಣ ಆರಂಭಿಸಿದಾಗ ಈ ಹೆಸರಿನ ಬಗ್ಗೆ ಸಾಕಷ್ಟು ಧೂಳೆದ್ದಿತ್ತು.

‘ಅದು ತಳಿರುತೋರಣ ಎಂದು ಇರಬೇಕಲ್ವಾ ತಪ್ಪಾಗಿ ಬರೆದಿದ್ದೀರೇಕೆ?’ ಎಂದು ಕೆಲವರು ಪ್ರಾಮಾಣಿಕವಾಗಿ ಕೇಳಿದರೆ ಮತ್ತೆ ಕೆಲವು ಭಾಷಾಪಂಡಿತರು ‘ಅಂಕಣದ ಹೆಸರನ್ನೇ ತಪ್ಪುತಪ್ಪಾಗಿ ಬರೆವವರು ಅದೇನು ಮಹಾ ಅಂಕಣ ಬರೆಯುತ್ತಾರೋ!’ ಎಂದು ಕುಹಕವಾಡಿದ್ದರು. ಅಂಕಣದ ಮೊತ್ತಮೊದಲ ಕಂತಿನಲ್ಲೇ ನಾನು ಸ್ಪಷ್ಟವಾಗಿ ವಿವರಿಸಿದ್ದೆ.

‘ಇಲ್ಲಿರುವುದು ಲೈಟ್ ರೀಡಿಂಗ್ ಸರಕು. ತಿಳಿ ಸಾರು, ತಿಳಿ ಮಜ್ಜಿಗೆ ಇದ್ದಂತೆ ತಿಳಿ ವ್ಯಾಖ್ಯಾನ. ಇದರಲ್ಲಿಯೇ ಹೊಸಹೊಸ ವಿಚಾರ ಗಳನ್ನು ತಿಳಿದುಕೊಳ್ಳುತ್ತ, ತಿಳಿವಳಿಕೆಯನ್ನು ಪರಸ್ಪರ ಹಂಚಿಕೊಳ್ಳುತ್ತ ಸಾಗಬೇಕು. ತಿಳಿವಳಿಕೆಯೇ ಇಲ್ಲಿನ ಮುಖ್ಯ ಹೂರಣ. ಅದಕ್ಕೋಸ್ಕರವೇ ಇದು ತಿಳಿರುತೋರಣ’ ಎಂದು ಬರೆದಿದ್ದೆ. ತಿಳಿರುತೋರಣ ಎಂಬುದು ಅಂಕಣಕ್ಕೆ ಇಟ್ಟ ಹೆಸರು.

ಅನನ್ಯವಾಗಿ ಇರಬೇಕೆಂದು ಯೋಚಿಸಿಯೇ ಇಟ್ಟದ್ದು. ಇದೊಂದು ಅಂಕಿತನಾಮ. ಇದಕ್ಕೆ ಅರ್ಥ, ವ್ಯಾಕರಣಬದ್ಧತೆ
ಇರಲೇ ಬೇಕೆಂಬ ಯಾವ ನಿಯಮವೂ ಇಲ್ಲ. ತಳಿರುತೋರಣ ಎಂಬ ಅರ್ಥಬದ್ಧ ಪದವನ್ನು ತಪ್ಪಾಗಿ ಬರೆದದ್ದಲ್ಲ. ಹಾಗೊಂದು
ವೇಳೆ ತಿಳಿರುತೋರಣ ಅಂಕಣಕ್ಕೆ ಸಂಬಂಧಿಸಿದಂತೆಯೇ, ಭವ್ಯವಾದ ಒಂದು ಸಮಾರಂಭ ಏರ್ಪಡಿಸಿ ಮುಂಬಾಗಿಲಿಗೆ ಚಂದದ ತೋರಣ ಕಟ್ಟಿದರೆ ಅದು ತಳಿರುತೋರಣ ಸಿಂಗಾರ ಆಗುತ್ತದೆಯೇ ಹೊರತು ತಿಳಿರುತೋರಣ ಅಲ್ಲ. ಅಂಕಣದ ಹೆಸರಾಗಿ ಮಾತ್ರ ತಿಳಿರುತೋರಣ. ಇದಕ್ಕೆ ನಾನು ಪೂರ್ವಸೂರಿಯೊಬ್ಬರ ಉದಾಹರಣೆಯನ್ನು ಆದರ್ಶವಾಗಿ ಪರಿಗಣಿಸಿದ್ದೇನೆ.

ಸಾಹಿತ್ಯವಲಯದಲ್ಲಿ ‘ಎನ್ಕೆ’ ಎಂದು ಪ್ರಸಿದ್ಧರಾದ, ಧಾರವಾಡದವರಿಗೆಲ್ಲ ‘ನಾನೀಕಾಕಾ’ ಎಂದೇ ಆಪ್ತರಾದ ಎನ್. ಕೆ.ಕುಲಕರ್ಣಿ ಯವರು ‘ಎನ್ಕೇನ ಪ್ರಕಾರೇಣ’ ಎಂಬ ಹರಟೆ ಅಂಕಣ ಬರೆಯುತ್ತಿದ್ದರು. ಆಮೇಲೆ ಅದೇ ಹೆಸರಿನ ಪುಸ್ತಕವೂ ಬಂತು. ವ್ಯಾಕರಣ ಬದ್ಧವಾಗಿ ಇರಬೇಕಂತಾದರೆ ಆ ಹೆಸರು ‘ಯೇನ ಕೇನ ಪ್ರಕಾರೇಣ’ ಎಂದಾಗಬೇಕು. ಆದರೆ ಎನ್ಕೆ ಎಂಬ ಅವರ ಇನಿಷಿಯಲ್‌ಗಳು ಬರುವಂತೆ ಎಷ್ಟು ಕ್ರಿಯೇಟಿವ್ ಆಗಿ ‘ಎನ್ಕೇನ ಪ್ರಕಾರೇಣ’ ಎಂದುಬಿಟ್ಟರು! ಅಲ್ಲಿ ಹೆಸರಿಗೆ ಅರ್ಥ, ವ್ಯಾಕರಣಬದ್ಧತೆ ಮುಖ್ಯ ವಲ್ಲ. ಅನನ್ಯವಾಗಿ ಮತ್ತು ವಿಭಿನ್ನವಾಗಿ ಇರುವುದಷ್ಟೇ ಮುಖ್ಯ.

ಕೆಲವು ಪ್ರಖ್ಯಾತ ಕಂಪನಿಗಳ ಉತ್ಪನ್ನಗಳ ಹೆಸರು, ಅಂದರೆ ಬ್ರ್ಯಾಂಡ್ ನೇಮ್, ಶುದ್ಧ ಪದದ ಒಂದೆರಡಕ್ಷರಗಳನ್ನು ಬೇಕಂತಲೇ ಬದಲಾಯಿಸಿ ಹೊಸ ಪದ ತಯಾರಿಸಿದ್ದಿರುತ್ತದೆ. ಬೆಂಗಳೂರಿನಲ್ಲಿ ‘ಕ್ವಾಲಿಟಿ ಬಿಸ್ಕೇಟ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯು ‘ಕ್ವಾಲಿಟಿಸ್’ ಎಂಬ ಬ್ರ್ಯಾಂಡ್‌ನ ಗ್ಲುಕೋಸ್ ಬಿಸ್ಕೇಟ್ಸ್ ತಯಾರಿಸುತ್ತಿತ್ತು. ಈಗ ಆ ಕಂಪನಿ ಇದೆಯೇ ಅಥವಾ ಪಾರ್ಲೆ ಬ್ರಿಟಾನಿಯಾ ಮುಂತಾದ ದೊಡ್ಡ ಕಂಪನಿಗಳು ಅದನ್ನು ಕಬಳಿಸಿವೆಯೇ ನನಗೆ ಸರಿಯಾಗಿ ಗೊತ್ತಿಲ್ಲ. ನಾನಿಲ್ಲಿ ನಿಮ್ಮ ಗಮನ ಸೆಳೆಯುತ್ತಿರುವುದು ಆ ಬಿಸ್ಕೇಟ್ ಕಂಪನಿಯ ಬ್ರ್ಯಾಂಡ್ ನೇಮ್‌ನಲ್ಲಿ ‘ಕ್ವಾಲಿಟಿ’ ಎಂಬ ಪದದ ಸ್ಪೆಲ್ಲಿಂಗ್.

ಅದು ‘ಕ್ಯೂ ಯು ಎ ಎಲ್ ಐ ಟಿ ವೈ’ ಆಗಿರದೆ ‘ಕೆ ಡಬ್ಲ್ಯು ಎ ಎಲ್ ಐ ಟಿ ವೈ’ ಅಂತ ಇರುತ್ತಿತ್ತು! ಏಕೆ? ತಪ್ಪಾಗಿ ಬರೆದದ್ದೇ? ಅಲ್ಲ. ಉದ್ದೇಶಪೂರ್ವಕವಾಗಿ ಅದೇ ಸ್ಪೆಲ್ಲಿಂಗ್. ಅನನ್ಯವಾಗಿ, ವಿಭಿನ್ನವಾಗಿ ಇರುವುದಕ್ಕೆ. ಪಾರ್ಲೆ ಯವರ ‘ಕ್ರ್ಯಾಕ್‌ಜಾಕ್’ ಬಿಸ್ಕೇಟ್ ಬ್ರ್ಯಾಂಡ್‌ನೇಮ್ ನಲ್ಲಿಯೂ ಹಾಗೆಯೇ. ಕ್ರ್ಯಾಕ್ ಎಂಬ ಪದದ ಸ್ಪೆಲ್ಲಿಂಗ್ ‘ಸಿ ಆರ್ ಎ ಸಿ ಕೆ’ ಎಂಬುದರ ಬದಲಿಗೆ ‘ಕೆ ಆರ್ ಎ ಸಿ ಕೆ’ ಎಂದು ಇದೆ.

ಏಕಿರಬಹುದು? ಹಾಗೆ ಕ್ರ್ಯಾಕ್ ಪದವನ್ನು ಕೆ ಅಕ್ಷರದಿಂದ ಆರಂಭಿಸಿದರೆ, ಜಾಕ್ ಪದದ ಕೊನೆಯಕ್ಷರ ಹೇಗೂ ಕೆ ಇದೆ. ಆರಂಭ ಮತ್ತು ಅಂತ್ಯ ಒಂದೇ ಅಕ್ಷರದಿಂದ ಆಗುವುದು ಜನಮಾನಸದಲ್ಲಿ ಬ್ರ್ಯಾಂಡ್ ನೇಮ್ ಅಚ್ಚಳಿಯದೇ ನಿಲ್ಲಲಿಕ್ಕೆ ಕಾರಣವಾಗುತ್ತದೆ. ದಶಕಗಳ ಹಿಂದೆ ಕ್ಯಾಮರಾದಲ್ಲಿ ಬಳಸುತ್ತಿದ್ದ ಫಿಲ್ಮ್ ರೋಲ್ ‘ಕೊಡಾಕ್’ ಹೆಸರು, ನೆರಳಚ್ಚು ಯಂತ್ರದ ‘ಕ್ಸೆರಾಕ್ಸ್’ ಹೆಸರುಗಳೆಲ್ಲ ಕ್ಲಿಕ್ ಆದದ್ದು ಮತ್ತೆ ಹೇಗೆ ಅಂತೀರಿ? ಅಂದಹಾಗೆ ಫ್ಲಿಪ್‌ಕಾರ್ಟ್‌ನಲ್ಲಿ ಕಾರ್ಟ್‌ಗೆ ಸಿ ಅಕ್ಷರವಿಲ್ಲ ಕೆ ಇದೆ. ಸಿಟಿಬ್ಯಾಂಕ್‌ನ ಸಿಟಿ ಭಾಗವು ಸಿ ಐ ಟಿ ವೈ ಆಗಿರದೆ ಸಿ ಐ ಟಿ ಐ ಅಂತ ಇದೆ. ಗಮನಿಸಿದ್ದೀರಾ?

ಇದನ್ನು ಜಾಹಿರಾತು ಜಗತ್ತಿನಲ್ಲಿ ‘ಸೆನ್ಸೇಷನಲ್ ಸ್ಪೆಲ್ಲಿಂಗ್’ ಎಂದು ಕರೆಯುತ್ತಾರೆ. ಉತ್ಪನ್ನಗಳ ಹೆಸರು (ಬ್ರ್ಯಾಂಡ್ ನೇಮ್) ಜನರನ್ನು ಥಟ್ಟನೆ ಆಕರ್ಷಿಸುವಂತೆ, ಆ ಆಕರ್ಷಣೆ ಚಿರಕಾಲ ಮನಸ್ಸಿನಲ್ಲಿ ಉಳಿಯುವಂತೆ ಮಾಡಲಿಕ್ಕಾಗಿ ಈ ತಂತ್ರ. ಅಮೆರಿಕದಲ್ಲಿ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. ‘ಕ್ರಿಸ್ಪಿ ಕ್ರೀಮ್ ಡೋನಟ್ಸ್’ ಕಂಪನಿಯ ಹೆಸರಿನಲ್ಲಿ ಕ್ರಿಸ್ಪಿ ಮತ್ತು ಕ್ರೀಮ್ ಎರಡೂ ಪದಗಳಲ್ಲಿ ಸಿ ಅಕ್ಷರದ ಬದಲಿಗೆ ಕೆ ಅಕ್ಷರ ಬಳಸಿದ್ದಿದೆ. ಪಬ್ಲಿಕ್ಸ್ ಎಂಬ ಸುಪರ್ ಮಾರ್ಕೆಟ್ ಹೆಸರಿನ ಸ್ಪೆಲ್ಲಿಂಗ್ ‘ಪಿ ಯು ಬಿ ಎಲ್ ಐ ಸಿ ಎಸ್’ ಎಂದಿರದೆ ‘ಪಿ ಯು ಬಿ ಎಲ್ ಐ ಎಕ್ಸ್’ ಎಂದು ಇದೆ. ಕಿಡ್ಸ್ ಆರ್ ಅಸ್, ಬೇಬಿಸ್ ಆರ್ ಅಸ್, ಟಾಯ್ಸ್ ಆರ್ ಅಸ್ ಎಂಬ ತ್ರಿವಳಿ ಕಂಪನಿಗಳ ಹೆಸರಿನಲ್ಲಿ ಆರ್ ಅಕ್ಷರ ಉಲ್ಟಾ ಬರೆದದ್ದಿರುತ್ತದೆ!

ಆ ಬಗ್ಗೆ ಚಿಕ್ಕ ಮಕ್ಕಳ ಹೆತ್ತವರು, ಶಿಕ್ಷಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರೂ ಕಂಪನಿಯು ಜಗ್ಗದೆ ಅದೇ ಸ್ಟೈಲ್
ಮುಂದುವರಿಸಿಕೊಂಡು ಬಂದಿದೆ. ಮಕ್ಕಳಿಗೆ ಶೈಕ್ಷಣಿಕ ಆಟಿಕೆಗಳನ್ನು ತಯಾರಿಸುವ ‘ಪ್ಲೇಸ್ಕೂಲ್’ ಕಂಪನಿಯ ಹೆಸರಿನಲ್ಲಿ ಸ್ಕೂಲ್ ಪದದ ಸ್ಪೆಲ್ಲಿಂಗ್ ‘ಎಸ್ ಕೆ ಓ ಓ ಎಲ್’ ಎಂದು ಇದೆ. ಕೆಲ್ಲಾಗ್ಸ್ ಕಂಪನಿಯ ‘ಫ್ರೂಟ್ ಲೂಪ್ಸ್’ ಬ್ರೇಕ್ ಫಾಸ್ಟ್ ಸೀರಿಯಲ್‌ನ ಹೆಸರಿನಲ್ಲಿ ‘ಫ್ರೂಟ್’ ಸ್ಪೆಲ್ಲಿಂಗ್ ‘ಎಫ್ ಆರ್ ಯು ಐ ಟಿ’ ಎಂದು ಇರದೆ ‘ಎಫ್ ಆರ್ ಓ ಓ ಟಿ’ ಎಂದು ಇದೆ.

ಏಕಿರಬಹುದು? ಲೂಪ್ಸ್ ಸ್ಪೆಲ್ಲಿಂಗ್‌ನಲ್ಲಿ ಹೇಗೂ ಎರಡು ಓ ಅಕ್ಷರಗಳಿವೆ. ಅದಕ್ಕೆ ಸರಿಹೊಂದುವಂತೆ ಫ್ರೂಟ್ ಸ್ಪೆಲ್ಲಿಂಗ್‌ನಲ್ಲೂ ಎರಡು ಓ ಅಕ್ಷರಗಳು. ಆ ನಾಲ್ಕೂ ಓ ಅಕ್ಷರ ಗಳನ್ನು ನಾಲ್ಕು ಬೇರೆಬೇರೆ ಬಣ್ಣಗಳ ಸೀರಿಯಲ್ ಬಿಲ್ಲೆಗಳಾಗಿ ಚಿತ್ರಿಸಿದ್ದಾರೆ. ಗ್ರಾಹಕನ ತಲೆಯಲ್ಲಿ ಈ ಚಿತ್ರ ಅಚ್ಚೊತ್ತಿ ನಿಂತರೆ ಉದ್ದೇಶ ಈಡೇರಿತಲ್ಲ!

ತಂತ್ರಜ್ಞಾನದ ಕಂಪನಿಗಳಂತೂ ಪ್ರತಿಯೊಂದೂ ಈ ಗಿಮಿಕ್ ಬಳಸಿವೆ. ಬ್ಲು-ರೇ ಡಿಸ್ಕ್, ಫ್ಲಿಕರ್, ರೆಡ್ಡಿಟ್, ಟಂಬ್ಲರ್, ಗೂಗಲ್, ಸ್ಕ್ರೈಬ್ಡ್ ಇವೆಲ್ಲ ಹೆಸರುಗಳಲ್ಲಿಯೂ ಸ್ಪೆಲ್ಲಿಂಗ್ ಸರ್ಕಸ್ ನಡೆದಿದೆ. ಇದರ ಪೈಕಿ ಗೂಗಲ್‌ನದು ಉದ್ದೇಶಪೂರ್ವಕ ಸರ್ಕಸ್ ಅಲ್ಲವಂತೆ. ಗೂಗೋಲ್ ಎಂದು ಹೆಸರಿಡುವ ಉದ್ದೇಶ ಇದ್ದದ್ದು. ಗೂಗೋಲ್ ಅಂದರೆ ಒಂದು ಬಹು ದೊಡ್ಡ ಸಂಖ್ಯೆ. ಹತ್ತರ ಘಾತ ನೂರು. ಅಂದರೆ ರ ಬಳಿಕ ನೂರು ಸೊನ್ನೆಗಳನ್ನು ಬರೆದಾಗ ಸಿಗುವ ಸಂಖ್ಯೆ.

ಕಣ್ತಪ್ಪಿನಿಂದ ಗೂಗಲ್ ಎಂದು ಬರೆದದ್ದು, ಆ ತಪ್ಪು ರೂಪವೇ ಉಳಿದುಕೊಂಡಿತು. ಈಗಿನ ತಲೆಮಾರಿಗೆ ಅದು ಗುರುಸಮಾನ.
ಗೂಗಲ್ ಬ್ರಹ್ಮ ಗೂಗಲ್ ವಿಷ್ಣು ಗೂಗಲ್ ದೇವೋ ಮಹೇಶ್ವರಃ ಎಂದು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ
ಸರ್ಚ್ ರಿಸಲ್ಟ್ಸು. ಆಧುನಿಕ ಕಂಪನಿಗಳು ಹೀಗೆ ಸೆನ್ಸೇಷನಲ್ ಸ್ಪೆಲ್ಲಿಂಗ್ ಬಳಸುವುದರ ಹಿಂದೆ ಬೇರೆಬೇರೆ ಉದ್ದೇಶಗಳಿರುತ್ತವೆ.
ಮೊದಲನೆಯದಾಗಿ ಟ್ರೇಡ್‌ಮಾರ್ಕ್ ನೋಂದಣಿಗೆ ಅನುಕೂಲ ವಾಗುತ್ತದೆ. ಹಾಗೆಯೇ ಅಂತರಜಾಲ ತಾಣಕ್ಕೆ ಬೇಕಾದ ಡೊಮೈನ್ ಹೆಸರು ನೋಂದಣಿಯೂ ಸುಲಭವಾಗುತ್ತದೆ (ಪದಗಳ ಶುದ್ಧರೂಪದಲ್ಲಿ ಆಗಲೇ ಡೊಮೈನ್ ಹೆಸರು ರಿಜಿಸ್ಟರ್ ಆಗಿದ್ದರೆ ಅದನ್ನು ಬಿಟ್ಟುಕೊಡಲಿಕ್ಕೆ ಬೃಹತ್ ಮೊತ್ತದ ಬೇಡಿಕೆ ಇರುವ ಸಾಧ್ಯತೆಯಿರುತ್ತದೆ).

ಇಂಟರ್‌ನೆಟ್ ಸರ್ಚ್ ಎಂಜಿನ್ ತಂತ್ರಾಂಶಗಳು ಸೆನ್ಸೇಷನಲ್ ಸ್ಪೆಲ್ಲಿಂಗ್ ಹೆಸರುಗಳನ್ನು ಮಾಮೂಲಿ ಹೆಸರುಗಳ ರಾಶಿಯಿಂದ
ಪ್ರತ್ಯೇಕವಾಗಿಸಿ ನಿರ್ದಿಷ್ಟ ಫಲಿತಾಂಶಗಳನ್ನಷ್ಟೇ ಡಿಸ್ಪ್ಲೇ ಮಾಡುವುದು ಸಾಧ್ಯವಾಗುತ್ತದೆ. ಕಂಪನಿಯ ಮತ್ತು ಉತ್ಪನ್ನದ
ಹೆಸರಿಗೆ ಅರ್ಥವಾಗಲೀ ವ್ಯಾಕರಣಬದ್ಧತೆಯಾಗಲೀ ಮುಖ್ಯವಾಗಿರದೆ ಅನನ್ಯತೆ, ವಿಭಿನ್ನತೆ ಇರುವುದು ಈ ಎಲ್ಲ
ಸಂದರ್ಭ ಗಳಲ್ಲಿಯೂ ಹೆಚ್ಚು ಉಪಯೋಗಕ್ಕೆ ಬರುತ್ತದೆ.

ಮತ್ತೆ, ಅರ್ಥ ಅಂದರೆ ಹಣ ಎಂದು ಕೂಡ ಆಗುತ್ತದಷ್ಟೆ? ಆ ದೃಷ್ಟಿಯಿಂದ ನೋಡಿದರೆ ಹೆಸರಿಗೆ ಅರ್ಥ ಇಲ್ಲದಿದ್ದರೂ ಹೆಸರಿ ನಿಂದಾಗಿ ಕಂಪನಿಯ ‘ಅರ್ಥ’ ವ್ಯವಸ್ಥೆಯನ್ನು ಉಚ್ಛ್ರಾಯ ಸ್ಥಿತಿಗೇರಿಸುವ ಹುನ್ನಾರ ಇದ್ದೇ ಇರುತ್ತದೆನ್ನಿ. ಅಂತೂ ಪ್ರಪಂಚದಲ್ಲಿ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಅಂತನಿಸದೆ ಪ್ರತ್ಯೇಕ ಅಸ್ಮಿತೆ ಉಳಿಸಿಕೊಳ್ಳಲು ಪ್ರತಿಯೊಬ್ಬರದೂ ಬಹುಕೃತ ವೇಷಂ.