ವಿಶ್ಲೇಷಣೆ
ಪ್ರಕಾಶ್ ಶೇಷರಾಘವಾಚಾರ್
2014ರಿಂದ 19ರವರೆಗೆ ಮೋದಿ ವಿರೋಧಿಗಳು ಹಾಗೂ ಅವರ ರಾಜಕೀಯ ಪ್ರತಿಸ್ಪರ್ಧಿಗಳು ಜಾತೀಯ ವಿಷ ಬೀಜ ಬಿತ್ತಿ ಅರಾಜಕತೆಯನ್ನು ಸೃಷ್ಟಿಸಿ ಸರಕಾರದ ಮತ್ತು ಮೋದಿಯವರ ಜನಪ್ರಿಯತೆ ಕುಗ್ಗಿಸಲು ವಿಫಲಯತ್ನ ನಡೆಸಿ ಮುಖಭಂಗಿತ ರಾದರೂ ಮೋದಿಯವರ 2.0ದಲ್ಲಿ ತಮ್ಮ
ವರಸೆಯನ್ನು ಮುಂದುವರಿಸುತ್ತಾರೆ. 2019 ರಿಂದ 2021ರಲ್ಲಿ ಇದೇ ಗ್ಯಾಂಗ್‌ಗಳು ಸಮುದಾಯಗಳನ್ನು ಎತ್ತಿ ಕಟ್ಟುವ ಷಡ್ಯಂತರ ರಚಿಸುವುದರಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೊಸ ಬೆಳವಣಿಗೆಯಲ್ಲಿ ವಿದೇಶಿ ಶಕ್ತಿಗಳು ಬಹಿರಂಗವಾಗಿ ಮೋದಿ ಯವರ ವಿರುದ್ಧ ಧ್ವನಿ ತೆಗೆದಿರುವುದು ಆತಂಕದ ವಿಷಯವಾಗಿದೆ. ಜಾತಿಗಳ, ಧರ್ಮ ಮತ್ತು ಸಮುದಾಯಗಳ ನಡುವೆ ಕಂದಕವನ್ನು ನಿರ್ಮಿಸುತ್ತಿರುವ ಈ ಸಮಾಜ ವಿರೋಧಿ ಶಕ್ತಿಗಳು ಮೋದಿ ಯವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಪೊಳ್ಳು ಆರೋಪವನ್ನು ಮಾಡುತ್ತಾರೆ.
2019 ಫೆಬ್ರವರಿ 26 ರಂದು ಬೆಳಗ್ಗೆ ಭಾರತದ ವಾಯಪಡೆಯು ಪಾಕಿಸ್ತಾನದ ಖೈಬರ್ ಫುಕ್‌ತುನಕ್ವಾ ಪ್ರಾಂತ್ಯದ ಬಾಲಾ ಕೋಟ್ ಜೈಶೆ ಮೊಹಮ್ಮದ್ ಉಗ್ರರ ತಾಣದ ಮೇಲೆ ವೈಮಾನಿಕ ದಾಳಿ ಮಾಡಿ ನೂರಾರು ಉಗ್ರರನ್ನು ಅಳಿಸಿ ಹಾಕುತ್ತದೆ. ಫೆಬ್ರವರಿ 14ರಂದು ಪುಲ್ವಾಮ ಸಮೀಪ ಜೈಶೆ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಅದಿಲ್ ಅಹಮದ್ ಆತ್ಮಾಹುತಿ ದಾಳಿಯಲ್ಲಿ ಸಿ.ಆರ್.ಪಿ.ಎಫ್ ಯೋಧರು ಇದ್ದ ವಾಹನಕ್ಕೆ ಮತ್ತೊಂದು ವಾಹನದಲ್ಲಿ ಬಂದು 100ಕೆಜಿ ಸ್ಫೋಟಕದೊಂದಿಗೆ ಗುದ್ದುತ್ತಾನೆ.
ಈ ದಾಳಿಯಲ್ಲಿ 44 ಜನ ಸಿ.ಆರ್.ಪಿ.ಎಫ್ ಯೋಧರು ಮೃತ ಪಡುತ್ತಾರೆ. ಪುಲ್ವಾಮ ದಾಳಿಗೆ ಉತ್ತರವಾಗಿ ಭಾರತ ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ವೈಮಾನಿಕ ಸರ್ಜಿಕಲ್ ಸ್ಟ್ರೆ ಕ್ ನಡೆಸಿ ತಕ್ಕ ಪ್ರತೀಕಾರವನ್ನು ಕೈಗೊಳ್ಳುತ್ತದೆ. ಮೋದಿಯವರ ಈ ದಿಟ್ಟ ಕ್ರಮ ಮುಂದಿನ ದಿನಗಳಲ್ಲಿ ರಾಜಕೀಯದ ದಿಕ್ಕನ್ನು ಸಂಪೂರ್ಣ ವಾಗಿ ಬದಲಾಯಿಸುತ್ತದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಸೋಲಿನ ನಿರೀಕ್ಷೆಯಲ್ಲಿ ಇದ್ದ ವಿರೋಧಿಗಳಿಗೆ ಮತ್ತೇ ನಿರಾಸೆ. ಈ ಬಾರಿ ಏಕಾಂಗಿಯಾಗಿ ಬಿಜೆಪಿ 303 ಸೀಟು ಗೆಲ್ಲುತ್ತದೆ ಮತ್ತು ಎನ್ ಡಿಎ ಮೈತ್ರಿ ಕೂಟಕ್ಕೆ 353 ಸೀಟು ದೊರೆಯುತ್ತದೆ.
ಕಾಂಗ್ರೆಸ್ ಪಾರ್ಟಿಯು ಕೇವಲ 52 ಸ್ಥಾನಗಳಿಗೆ ತೃಪ್ತರಾಗಿ ಮತ್ತೇ ಅಧಿಕೃತ ವಿರೋಧ ಪಕ್ಷದ ಸ್ಥಾನದಿಂದ ವಂಚಿತ ವಾಗುತ್ತದೆ. ಐದು ವರ್ಷಗಳ ಕಾಲ ಮೋದಿಯವರ ವಿರುದ್ಧ ನಡೆಸಿದ ಅಪಪ್ರಚಾರ ಕೆಲಸ ಮಾಡಲೇ ಇಲ್ಲ. ಆದರೆ ಮೋದಿಯವರು ಐದು ವರ್ಷದಲ್ಲಿ ಬಡವರ ಪರವಾಗಿ ಮಾಡಿದ್ದ ಜನ ಕಲ್ಯಾಣ ಯೋಜನೆಗಳು ಅವರ ಕೈ ಬಿಡಲೇ ಇಲ್ಲ. ಮೋದಿ 2.0 ದಲ್ಲಿ ನಾಲ್ಕು ಪ್ರಮುಖ ಬೆಳವಣಿಗೆಗಳು ಅಧಿಕಾರ ಸ್ವೀಕರಿಸಿದ ಏಳು ತಿಂಗಳಲ್ಲಿ ನಡೆಯುತ್ತದೆ.
ತ್ರಿವಳಿ ತಲಾಖ್ ರದ್ದು ಮಾಡಿ ಕಾನೂನು ರೀತ್ಯಾ ತ್ರಿವಳಿ ತಲಾಖ್ ಶಿಕ್ಷಾರ್ಹ ಅಪರಾಧ ಮಾಡುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡುತ್ತಾರೆ. ಆಗಸ್ಟ್ ತಿಂಗಳಿನಲ್ಲಿ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದು ಪಡಿಸಲಾಗುತ್ತದೆ. ಈ ಮಹತ್ವದ ಕ್ರಮ ದಿಂದ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಮಾರಣಾಂತಿಕ ಪೆಟ್ಟನ್ನು ಸರಕಾರ ನೀಡುತ್ತದೆ. ನವೆಂಬರ್ ತಿಂಗಳಿನಲ್ಲಿ ಕಳೆದ ಹಲವಾರು ದಶಕಗಳಿಂದ ವಿವಾದಾಸ್ಪದವಾಗಿ ಪರಿಹಾರ ಕಾಣದೆ ಕಗ್ಗಂಟಾಗಿದ್ದ ಅಯೋಧ್ಯೆಯ ರಾಮ ಜನ್ಮಸ್ಥಾನದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಮೊಕದ್ದಮೆಯನ್ನು ಸುಪ್ರೀಂಕೋರ್ಟ್ ಇತ್ಯರ್ಥ ಪಡಿಸಿ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆಯನ್ನು ನೀಡುತ್ತದೆ.
2019 ಡಿಸೆಂಬರ್ ತಿಂಗಳಿನಲ್ಲಿ ಸರಕಾರವು 1955ರ ಪೌರತ್ವ ವಿಧೇಯಕಕ್ಕೆ ತಿದ್ದುಪಡಿಯನ್ನು ತಂದು ಪಾಕಿಸ್ಥಾನ, ಅಫಘಾನಿಸ್ಥಾನ ಮತ್ತು ಬಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳದ ಕಾರಣ ಭಾರತಕ್ಕೆ ವಲಸೆ ಬಂದ ಹಿಂದೂ, ಪಾರ್ಸಿ, ಬೌದ್ಧ ಕ್ರಿಶ್ಚಿಯನ್ ಮತ್ತು ಸಿಖ್ಖ್‌ರಿಗೆ ಪೌರತ್ವ ನೀಡಲು ಅವಕಾಶ ನೀಡುತ್ತದೆ. ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಇತ್ಯರ್ಥ ವಾಗದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ಸರಕಾರದ ಕೆಲಸದ ವೇಗದಿಂದ ವಿರೋಧಿಗಳ ಜಂಘಾಬಲವೇ ಉಡುಗಿ ಹೋಗಿ ಸರಕಾರಕ್ಕೆ ಅಡ್ಡಗಾಲು ಹಾಕಲು ಹೊಂಚು ಹಾಕುತ್ತಿದ್ದರು. ಪೌರತ್ವ ಕಾಯಿದೆಗೆ ತಂದಿರುವ ತಿದ್ದುಪಡಿಯನ್ನು ಸರಕಾರದ ವಿರುದ್ಧ ಮುಸಲ್ಮಾನರನ್ನು ಎತ್ತಿ ಕಟ್ಟುತ್ತಾರೆ. ಈ ಕಾಯಿದೆ ಜಾರಿಯಾದರೆ ಮುಸಲ್ಮಾನರ ಪೌರತ್ವ ರದ್ದಾಗುತ್ತದೆ ಎಂದು ತಪ್ಪು ಮಾಹಿತಿಯನ್ನು ಹರಡಿಸಿ ಅವರಲ್ಲಿ ಭಯ ಮತ್ತು ಆತಂಕವನ್ನು ಹುಟ್ಟುಹಾಕತ್ತಾರೆ.
ಇದರ ಪರಿಣಾಮ ಸಿಎಎ ವಿರುದ್ಧ ದೇಶಾದ್ಯಂತ್ಯ ಪ್ರತಿಭಟನೆಯ ಪರ್ವ ಆರಂಭ ವಾಯಿತು. ದೆಹಲಿಯ ಶಾಹೀನ್‌ಬಾಗ್‌ನಲ್ಲಿ ಸಾವಿರಾರು ಮುಸ್ಲಿಂ ಮಹಿಳೆ ಯರನ್ನು ಧರಣಿ ಕೂರುವಂತೆ ಮಾಡಿ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನ ಮಾಡುತ್ತಾರೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯು ಕೋಮುಗಲಭೆಗೆ ತಿರುಗಿ ನಡೆದ ವ್ಯಾಪಕ ಹಿಂಸಾಚಾರಕ್ಕೆ ಇಬ್ಬರು ಪೊಲೀಸ್ ಗುಂಡಿಗೆ ಬಲಿಯಾಗುತ್ತಾರೆ. ಉತ್ತರ ಪ್ರದೇಶದಲ್ಲಿ ಸಿಎಎ ಗಲಭೆಯು ಹಿಂಸಾಚಾರಕ್ಕೆ ತಿರುಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ 6 ಜನರು ಸಾವಿಗೀಡಾಗುತ್ತಾರೆ.
ಪಶ್ಚಿಮ ಬಂಗಾಳ, ಬಿಹಾರ್, ಜಾರ್ಖಂಡ್ ಗುಜರಾತ್ ಅಸ್ಸಾಂ ಮತ್ತು ತೆಲಂಗಾಣ ಮುಂತಾದ ರಾಜ್ಯಗಳ ಲ್ಲಿಯೂ ಸಿಎಎ ಪ್ರತಿಭಟನೆ ತೀವ್ರ ಸ್ವರೂಪದಲ್ಲಿ ನಡೆಯಿತು. ದೇಶಾದ್ಯಂತ್ಯ ಹೋರಾಟದ ಮೂಲಕ ಎಲ್ಲೆಡೆ ಅರಾಜಕತೆ ನಿರ್ಮಿಸುವುದೇ ಇದರ ಉದ್ದೇಶವಾಗಿತ್ತು. ಬ್ರವರಿ 26ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ದೆಹಲಿ ಭೇಟಿ ನಿಗದಿಯಾಗಿತ್ತು. ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಮೋದಿ ಯವರ ವರ್ಚಸ್ಸಿಗೆ ಮಸಿ ಬಳೆಯಲು ರಚಿಸಿದ್ದ ಸಂಚಿನ ಫಲ ದೆಹಲಿಯು 6 ದಿನಗಳ ಕಾಲ ಕೋಮು ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತದೆ.
ದೇಶದ ಮಾನವನ್ನು ಹಾಳುಮಾಡಿದರು ಸರಿಯೇ ಮೋದಿಯವರಿಗೆ ವಿದೇಶಿ ಗಣ್ಯ ಅತಿಥಿಯ ಮುಂದೆ ಮುಜುಗರವಾಗಬೇಕು ಎಂಬ ಒಂದೇ ಉದ್ದೇಶದಿಂದ ಈ ಕೋಮು ಗಲಭೆಯು ನಡೆಯುತ್ತದೆ. ದುರ್ದೈವ ಈ ಗಲಭೆಯಲ್ಲಿ 54 ಮಂದಿ ಅಸುನೀಗುತ್ತಾರೆ. ಕೇಂದ್ರೀಯ ಗುಪ್ತಚರ ವಿಭಾಗದ ಅಂಕಿತ ಶರ್ಮಾರವರನ್ನು ಅಮಾನುಷ ವಾಗಿ 50ಕ್ಕೂ ಹೆಚ್ಚು ಬಾರಿ ಇರಿದು ಕೊಂದು ದೇಹವನ್ನು ಚರಂಡಿಯಲ್ಲಿ ಬಿಸಾಕಿದ್ದರು. ಆಮ್ ಆದ್ಮಿ ಪಾರ್ಟಿಯ ಕಾರ್ಪೋರೇಟರ್ ತಾರ್ ಹುಸೇನ್ ಅಂಕಿತ್ ಶರ್ಮಾ ಕೊಲೆಯ ಆರೋಪದ ಮೇಲೆ ಬಂಧಿಸಲಾಗಿದೆ.
ಮುಸ್ಲಿಂ ಸ್ಟುಡೆಂಟ್ ಆಫ್ ಜೆಎನ್‌ಯುನ ರ್ಶಾಜೀಲ್ ಇಮಾಮ್, ಜಾಮೀಯಾ ಸಮನ್ವಯ ಸಮಿತಿ, ಪಿಂಜ್ರಾ ತಾಡ್ ಮತ್ತು ಜೆಎನ್‌ಯು ಕುಖ್ಯಾತಿಯ ಉಮರ್ ಖಾಲಿದ್ ದಂಗೆಯ ಹಿಂದೆ ಇದ್ದ ಸಂಚುಕೋರರು. ದೆಹಲಿ ಪೊಲೀಸರು 11000 ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.
ನಿಂತ ನೀರಾಗಿ ದಶಕಗಳಿಂದ ಸುಧಾರಣೆ ಕಾಣದೆ ಸಂಕಷ್ಟದಲ್ಲಿರುವ ರೈತಾಪಿ ವರ್ಗದ ಜನರ ಬದುಕನ್ನು ಮತ್ತು ಅವರ ವರಮಾನವನ್ನು ದುಪ್ಪಟ್ಟು ಮಾಡುವ ಸದುದ್ದೇಶದಿಂದ ಮೋದಿ ಸರಕಾರವು ಮೂರು ಕೃಷಿ ಸುಧಾರಣಾ ಕಾಯಿದೆಯನ್ನು ಜಾರಿಗೆ ತಂದಿರುವುದು.
ನರೇಂದ್ರ ಮೋದಿಯವರು ತಮ್ಮ 7 ವರ್ಷಗಳ ಅಧಿಕಾರಾವಧಿಯಲ್ಲಿ ಹತ್ತಾರು ರೈತ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿಗೆ ಭಾಜನರಾಗಿದ್ದಾರೆ. ಕೃಷಿ ಸಿಂಚಯನ್ ಯೋಜನೆ, ಫಸಲ್ ಬಿಮಾ ಯೋಜನೆ, ಕೃಷಿ ಸಮ್ಮಾನ್ ಯೋಜನೆ, ಈ ನಾಮ್ ಮತ್ತು ಸ್ವಾಮಿನಾಥನ್ ಸಮಿತಿಯು ಕೃಷಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಮಾಡಿದ್ದ ಬಹುತೇಕ ಶಿಫಾರಸ್ಸುಗಳನ್ನು ಜಾರಿಗೆ ತರಲಾಗಿತ್ತು. ಸ್ವತಃ ಸ್ವಾಮಿನಾಥನ್ ರವರು ಇದನ್ನು ಅನುಮೋದಿಸಿದ್ದು ಮೋದಿಯವರ ರೈತರ ಹಿತ ಕಾಪಾಡುವ ಬದ್ಧತೆಗೆ ಸಾಕ್ಷಿಯಾಗಿದೆ. ಖಾಸಗಿ ಬಂಡವಾಳ ವನ್ನು ಕೃಷಿ ಕ್ಷೇತ್ರಕ್ಕೆ ಆಕರ್ಷಿಸಲು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಕೃಷಿಯಲ್ಲಿ
ಅಳವಡಿಸಿಕೊಳ್ಳಲು ಮೂರು ಪ್ರಮುಖ ಕಾಯಿದೆಗಳನ್ನು ತರಲಾಗುತ್ತದೆ.
ರೈತ ತನ್ನ ಉತ್ಪನ್ನಗಳನ್ನು ಕೇವಲ ಎಪಿಎಂಸಿ ಯಾರ್ಡ್ ಅಲ್ಲದೆ ನೇರವಾಗಿ ಮಾರಾಟ ಮಾಡಲು ಅವಕಾಶ. ಗುತ್ತಿಗೆ ಕೃಷಿಗೆ ಅನುಮತಿ ಮತ್ತು ಅಗತ್ಯ ವಸ್ತು ಕಾಯಿದೆಗೆ ತಿದ್ದುಪಡಿ ತರಲಾಗಿದೆ. ಈ ಸುಧಾರಣೆಗಳ ಬಗ್ಗೆ ವಿಶೇಷವಾಗಿ ಪಂಜಾಬ್ ಹರಿಯಾಣ ರೈತರು ಕಾಯಿದೆಯು ಜಾರಿಗೆ ಬಂದರೆ ಕನಿಷ್ಠ ಬೆಂಬಲ ಬೆಲೆಯನ್ನು ರದ್ದು ಪಡಿಸಲಾಗುವುದು ಎಂಬ ತಪ್ಪು ಗ್ರಹಿಕೆಯಿಂದ ಅಥವಾ ದಾರಿ ತಪ್ಪಿಸುತ್ತಿರುವವರ ಪಿತೂರಿ ಯಿಂದ ಕೃಷಿ ಕಾಯಿದೆಗೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿ ದೆಹಲಿಯಲ್ಲಿ ನಿರಂತರ ಧರಣಿ ಆರಂಭಿಸಿದ್ದಾರೆ.
ಕಾಂಗ್ರೆಸ್ ಮತ್ತು ಎಡ ಪಕ್ಷಗಳು ರೈತರಿಗೆ ದಾರಿ ತಪ್ಪಿಸಿ ಈ ಕಾಯಿದೆಯ ವಿರುದ್ಧ ಹೋರಾಡಲು ಕುಮ್ಮಕ್ಕು ನೀಡಿವೆ. ನೇರವಾಗಿ ಮೋದಿಯವರನ್ನು ರಾಜಕೀಯವಾಗಿ ಅಥವಾ ಅಭಿವೃದ್ಧಿಯ ವಿಚಾರದಲ್ಲಿ ಎದುರಿಸುವ ಶಕ್ತಿ ಇಲ್ಲದೆ ಅಲ್ಪಸಂಖ್ಯಾತರ ಮತ್ತು ರೈತರ ಹೆಗಲ ಮೇಲಿಂದ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಪಂಜಾಬ್ ರೈತರನ್ನು ಎತ್ತಿ ಕಟ್ಟಿ ಬಹು ದೊಡ್ಡ ತಪ್ಪನ್ನು ಕಾಂಗ್ರೆಸ್ ಪಾರ್ಟಿಯು ಮತ್ತೊಮ್ಮೆ ಮಾಡುತ್ತಿದೆ. ಹಿಂದೆ ಬಿಂದ್ರನ್‌ವಾಲೆಯನ್ನು ಎತ್ತಿಕಟ್ಟಿ ನಡೆದ ಅನಾಹುತದ ತರುವಾಯವು ಪಾಠ ಕಲಿಯದ ಕಾಂಗ್ರೆಸ್ ತನ್ನ ಸ್ವಾರ್ಥ ಸಾಧನೆಗೆ ಬೆಂಕಿಯೊಂದಿಗೆ ಸರಸವಾಡುತ್ತಿದೆ.
ಸಂವಿಧಾನಕ್ಕೆ ಜಗ್ಗದಂತೆ ಕಾಣದ ಕೈಗಳು ಪದೇ ಪದೆ ರೈತ ನಾಯಕರನ್ನು ತಡೆಯುತ್ತಿವೆ. ಹನ್ನೊಂದು ಬಾರಿ ಮಾತುಕತೆ ಯಾದರು ಒಮ್ಮತ ಮೂಡದಂತೆ ಮತ್ತು ಹೋರಾಟ ಹಿಂತೆಗೆದುಕೊಳ್ಳದಂತೆ ನೋಡಿಕೊಳ್ಳುತ್ತಿದೆ. ಜನವರಿ 26 ಗಣರಾಜ್ಯೋತ್ಸವದ ದಿನ ರೈತ ಸಂಘಟನೆಗಳು ಕೈಗೊಂಡ ಟ್ರಾಕ್ಟರ್ ರ‍್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರ, ರಾಷ್ಟ್ರಧ್ವಜಕ್ಕೆ ಅಪಮಾನವು ದೇಶವ್ಯಾಪಿ ಆಕ್ರೋಶಕ್ಕೆ ಗುರಿ ಯಾಯಿತು. ರೈತರ ಚಳವಳಿಯಲ್ಲಿ ನುಸುಳಿರುವ ಸಮಾಜ ಘಾತುಕ ಶಕ್ತಿಗಳು ರ‍್ಯಾಲಿಯನ್ನು ಹಿಂಸಾ ರೂಪಕ್ಕೆ ತಿರುಗಿಸಿ ಗಲಭೆ ನಡೆಯುವಂತೆ ನೋಡಿಕೊಂಡರು.
ಹಿಂಸಾಚಾರ ಕೈಮೀರಿದಾಗ ಪೊಲೀಸರು ಅನಿವಾರ‍್ಯವಾಗಿ ಲಾಠಿಚಾರ್ಜ್ ಮತ್ತು ಗುಂಡು ಹಾರಿಸುವಂಥಾ ಪರಿಸ್ಥಿತಿಯನ್ನು ನಿರ್ಮಿಸಿ ಸಾವು ನೋವಿಗೆ ಮೋದಿಯವರನ್ನು ಹೊಣೆ ಮಾಡಿ ದೇಶಾದ್ಯಂತ್ಯ ರೈತರನ್ನು ಬೀದಿಗೆ ಬರುವಂತೆ ಮಾಡುವ ದುರುದ್ದೇಶ ದಂತೆ ಭಾಸವಾಗುತ್ತದೆ. ರೈತರ ಹೋರಾಟಕ್ಕೆ ಹೊಸದೊಂದು ತಿರುವು ಪಡೆದಿದೆ. ಅಂತಾರಾಷ್ಟ್ರೀಯ ಖ್ಯಾತ ನಾಮರು ಪಾಪ್ ಸಿಂಗರ್ ಹಸಿರು ಹೋರಾಟಗಾತಿ(?) ಗ್ರೇಟ ತುನ್‌ಬರ್ಗ್, ಗಾಯಕ ಜೇ ಶಾನ್ ಮುಂತಾದವರು ಭಾರತದ ಆಂತರಿಕ ವಿಚಾರದಲ್ಲಿ ಅನಗತ್ಯ ವಾಗಿ ಮೂಗು ತೂರಿಸಿ ರೈತ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿ ಮೋದಿ ವಿರುದ್ಧ ಷಡ್ಯಂತರ ಕೇವಲ ದೇಶೀಯ ಮಟ್ಟಕ್ಕೆ ಸೀಮಿತವಲ್ಲ ವಿದೇಶಿ ಶಕ್ತಿಗಳು ಕೈಜೋಡಿಸಿರುವುದನ್ನು ಬೆಳಕಿಗೆ ತಂದಿದ್ದಾರೆ.
ಗ್ರೇಟ ತುನ್‌ಬರ್ಗ್ ಈ ಹೋರಾಟವನ್ನು ಹೇಗೆ ನಡೆಸಬೇಕು ಮತ್ತು ಅದಕ್ಕೆ ಪ್ರಚಾರ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಪಡೆಯುವ ವಿವರಗಳ ಟೂಲ್ ಕಿಟ್ ಟ್ವೀಟ್ ಮಾಡಿ ಅದನ್ನು ತೆಗೆದು ಹಾಕಲಾ ಯಿತು. ನಾನಾ ಶಕ್ತಿಗಳು ಇದೀಗ ಮೋದಿಯವರನ್ನು ಮಣಿಸಲು ಕೈಜೋಡಿಸಿವೆ. ರೈತರ ಬೆಳೆಯನ್ನು ಬಹುರಾಷ್ಟ್ರೀಯ ಕಂಪನಿ ಗಳು ಮತ್ತು ಕಾರ್ಪೋರೇಟ್ ವಲಯದವರು ಈಗಲೂ ಖರೀದಿಸುತ್ತಿದ್ದಾರೆ. ಆದರೆ ಕೃಷಿ ಕಾಯಿದೆಯು ಜಾರಿಗೆ ಬಂದರೆ ರೈತರು ಬಂಡವಾಳ ಶಾಹಿಗಳ ಕೈಗೊಂಬೆಯಾಗುತ್ತಾರೆ ಎಂದು ಸತ್ಯಕ್ಕೆ ದೂರವಾದ ಅಪಪ್ರಚಾರವು ಮೋದಿಯವರ ಜನಪ್ರಿಯತೆ ಕುಗ್ಗಿಸಲು ನಡೆಯುತ್ತಿರುವ ಹುನ್ನಾರವಿದು.
ಮೋದಿ 2.0 ಇನ್ನೂ ಎರಡು ವರ್ಷ ಪೂರೈಸುವ ಮುನ್ನವೇ ಸರಣಿ ಪಿತೂರಿಗಳು ನಡೆಯುತ್ತಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ಬಲಿಪಶು ಮಾಡಲು ಮುಂದಾಗಿದ್ದರು. ಕೇಂದ್ರ ಸರಕಾರದ ಕೋವಿಡ್ ಹೋರಾಟ ವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ್ದರು. ಕೋವಿಡ್ ಲಸಿಕೆಯ ಬಗ್ಗೆ ಅನುಮಾನದ ಹುತ್ತ ಕಟ್ಟಿ ಲಸಿಕಾ ಅಭಿಯಾನವನ್ನು ವಿಫಲಗೊಳಿಸುವ ಸಂಚು ನಡೆಯಿತು.
2014 ರಿಂದ 19ರವರೆಗೆ ನಡೆಸಿದ ನಾನಾ ಸಂಚುಗಳನ್ನು ಮೋದಿಯವರು ಎದುರಿಸಿ 2019ರಲ್ಲಿ ಇನ್ನೂ ಹೆಚ್ಚಿನ ಬಹುಮತ ದಿಂದ ಪುನರಾಯ್ಕೆಯಾದರು. ತಮ್ಮ ಎರಡನೆ ಅವಧಿಯಲ್ಲಿ ಮುಂದುವರಿದಿರುವ ಪಿತೂರಿಗಳನ್ನು ಕೂಡಾ ಯಶಸ್ವಿಯಾಗಿ ಮೆಟ್ಟಿ ನಿಂತು ಸಂಕಷ್ಟಗಳನ್ನು ದಾಟಿ ಮುನ್ನಡೆಯುವುದರಲ್ಲಿ
ಯಾವುದೇ ಸಂದೇಹವಿಲ್ಲ.