Friday, 22nd November 2024

ದಿನಬಳಕೆ ವಸ್ತುಗಳ ಬೆಲೆ ದಿಢೀರ್‌ ಏರಿಕೆ

ತೈಲ ದರ ಏರಿಕೆ ಬೆನ್ನಲ್ಲೇ ಆಹಾರ ಧಾನ್ಯ ಬೆಲೆ ಗಗನಕ್ಕೆ

ವಿಶೇಷ ಲೇಖನ: ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ, ಆಹಾರ ಧಾನ್ಯ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಸದ್ದಿಲ್ಲದೆ ಗಗನಕ್ಕೇರಿದೆ. ಇದಕ್ಕೆ ಸವಾಲೆಸೆಯುವಂತೆ ಹಾಲು, ಪ್ರಯಾಣ ದರ ಹಾಗೂ ಹೋಟೆಲ್ ತಿಂಡಿ, ತಿನಿಸುಗಳ ದರಗಳನ್ನೂ ಏರಿಕೆ ಮಾಡಬೇಕೆನ್ನುವ ಒತ್ತಡಗಳು ಹೆಚ್ಚಾಗುತ್ತಿವೆ.

ವಾರದ ಹಿಂದೆ ರಾತ್ರೋರಾತ್ರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗುತ್ತಿದ್ದಂತೆ ಸರಪಳಿ ಮಾದರಿಯಲ್ಲಿ ಈ ಏರಿಕೆ ಆರಂಭವಾಗಿದ್ದು, ಇದಕ್ಕೆೆ ಇನ್ನಷ್ಟು ಅಗತ್ಯ ವಸ್ತುಗಳು ಮತ್ತು ಸೇವೆಗಳು ಸೇರಿಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ಸರಕಾರ ಮಂಡಿಸಿದ್ದ ಬಜೆಟ್‌ನಲ್ಲಿ
ಕೃಷಿ ಉತ್ಪನ್ನಗಳ ಉತ್ತೇಜನಕ್ಕೆ ಸೆಸ್ ವಿಧಿಸುವುದಾಗಿ ಪ್ರಕಟಿಸಿದ್ದು, ಇದನ್ನು ಜಾರಿಗೊಳಿಸುವ ಮುನ್ನವೇ ಆಹಾರ ಧಾನ್ಯ ಮತ್ತು ತರಕಾರಿಗಳ ಬೆಲೆ ಏರುಗತಿಯಲ್ಲಿದೆ. ಇನ್ನು ಸೆಸ್ ಜಾರಿಯಾದರೆ ಗತಿ ಏನು ಎನ್ನುವ ಆತಂಕದ ಚರ್ಚೆ ಎಪಿಎಂಸಿಗಳಲ್ಲಿ ನಡೆಯುತ್ತಿದೆ.

ಕರೋನಾ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೂರೈಕೆ ವ್ಯತ್ಯಯದಿಂದಾಗಿ ಕೊಂಚ ಏರಿಕೆಯಾಗಿದ್ದ ಅಗತ್ಯ ವಸ್ತು ಗಳ ಬೆಲೆ ನಂತರ ಮಾರುಕಟ್ಟೆಗಳ ಸ್ಥಿತಿ ಸಹಜವಾಗುತ್ತಿದ್ದಂತೆ ಸುಧಾರಿಸುವ ನಿರೀಕ್ಷೆ ಇತ್ತು. ಆದರೆ ವಾರದಿಂದೀಚೆಗೆ ಬಹುತೇಕ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು, ಇದರ ಬಿಸಿ ಗ್ರಾಹಕರಿಗೆ ತಡವಾಗಿ ತಟ್ಟುತ್ತಿದೆ.

ಇದರ ಬೆನ್ನಲ್ಲೆ ಸಿಬ್ಬಂದಿ ವೇತನಕ್ಕೂ ಹಣಕಾಸಿನ ಕೊರತೆ ಎದುರಿಸುತ್ತಿರುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣ ದರ ಏರಿಕೆ ಮಾಡಬೇಕು ಎಂಬ ಚರ್ಚೆ ನಡೆದಿದೆ. ಹಾಗೆಯೇ ಹಾಲಿನ ದರ ಕೂಡ ಏರಿಕೆ ಮಾಡ ಬೇಕೆನ್ನುವ ಚರ್ಚೆಗಳು ಕೆಎಂಎಫ್‌ನಲ್ಲಿ ನಡೆಯುತ್ತಿವೆ. ಈ ಮಧ್ಯೆ ಬೆಲೆ ಏರಿಕೆ ಬಿಸಿಗೆ ಸಿಕ್ಕಿರುವ ಹೋ ಟೆಲ್ ಮಾಲೀಕರು ತಿಂಡಿ, ತಿನಿಸು, ಸೇವೆಗಳ ದರ ಏರಿ ಸುವ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಡುಗೆ ಅನಿಲ ಇನ್ನಷ್ಟು ದುಬಾರಿ!
ಎರಡು ತಿಂಗಳ ಹಿಂದೆ ಕೇವಲ 550 ರು.ಗೆ (ಸಿಲಿಂಡರ್) ಸಿಗುತ್ತಿದ್ದ ಅಡುಗೆ ಅನಿಲ, ಈಗ 722 ರು.ಗೆ ಏರಿದೆ. ಎರಡು ತಿಂಗಳ ಅವಧಿಯಲ್ಲಿ ಮೂರು ಬಾರಿ ಏರಿಯಾಗಿದ್ದು, ವಾರದಲ್ಲಿ 25 ರು. ಹೆಚ್ಚಾಗಿದೆ ಎನ್ನುತ್ತಾರೆ ಡೀಲರ್‌ಗಳು. ಇನ್ನೂ ಆಹಾರ ಧಾನ್ಯಗಳಾದ ತೊಗರಿ ಬೇಳೆ, ಉದ್ದಿನ ಬೇಳೆ, ಅಕ್ಕಿ, ಅಡುಗೆ ಎಣ್ಣೆೆ ಸೇರಿದಂತೆ ಅನೇಕ ವಸ್ತುಗಳಲ್ಲಿ ₹30ರಿಂದ ₹40 ವರೆಗೂ ಏರಿಕೆ
ಕಂಡಿದೆ.

ತೋಟಗಾರಿಕೆ ಬೆಳೆಗಳಾದ ಬೀನ್ಸ್‌, ಈರುಳ್ಳಿ, ದೊಡ್ಡ ಮೆಣಸಿನ ಕಾಯಿ, ಕುಂಬಳಕಾಯಿ, ಸೋರೆಕಾಯಿ ಹಾಗೂ ಈರೇಕಾಯಿ ಬೆಲೆಯಲ್ಲಿ ₹20ರಿಂದ ₹30 ವರೆಗೂ ಏರಿಕೆಯಾಗಿದೆ. ಈ ಮಧ್ಯೆೆ, ರಾಜ್ಯದ ಹಲವೆಡೆ ತೊಗರಿ ಬೇಳೆಯನ್ನು ರಿಲಯನ್ಸ್ ಸಂಸ್ಥೆ
ಖರೀದಿಸುತ್ತಿದ್ದು, ಇದು ದಾಸ್ತಾನ ಆಗುವ ಸಾಧ್ಯತೆ ಇದೆ. ಇದರಿಂದ ತೊಗರಿ ಬೇಳೆ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೆಟ್ರೋಲ್ ಎಷ್ಟಿತ್ತು? ಎಷ್ಟಾಯ್ತು? ಏಕೆ?
ರಾಜ್ಯದಲ್ಲಿ ಇಡಿಯನ್ ಆಯಿಲ್, ಎಚ್‌ಪಿಸಿಎಲ್ ಹಾಗೂ ಬಿಪಿಸಿಎಲ್ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸಿದ್ದು, ಎರಡು ವಾರಗಳಲ್ಲಿ ಸುಮಾರು ಒಂದು ರುಪಾಯಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕಳೆದ ವಾರ 89 ರು.ಗೆ ಸಿಗುತ್ತಿದ್ದ
ಪೆಟ್ರೋಲ್, ಈಗ 90 ರು.ಗಳಿಗೆ ಏರಿಕೆಯಾಗಿದೆ. ಅದೇ ರೀತಿ ₹80ರಿಂದ 82ಕ್ಕೇರಿದೆ. ಇದೇ ರೀತಿ ವರ್ಷದಲ್ಲಿ ಸುಮಾರು 20 ಬಾರಿ ಹೆಚ್ಚಳವಾಗಿದೆ.

ಕೋಟ್ಸ್

ಹಿಂದಿನ ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು 6ತಿಂಗಳು ಮತ್ತು ವರ್ಷಕ್ಕೊಮ್ಮೆ ಎರಡು ರುಪಾಯಿ ಆಗುತ್ತಿತ್ತು. ಆದರೆ ಈಗ ವಾರಕ್ಕೊಮ್ಮೆ ಪೈಸೆ ಲೆಕ್ಕದಲ್ಲಿ ಏರಿಕೆ ಮಾಡಲಾಗುತ್ತಿದೆ. ಇದು ಅಪಾಯಕಾರಿ ವ್ಯವಸ್ಥೆ.

-ಡಾ.ಬಾಲಾಜಿ ಪೆಟ್ರೋಲ್, ಡೀಸೆಲ್ ಡೀಲರ್ ಗಳ ಸಂಘದ ಅಧ್ಯಕ್ಷ

ಕೆಲವು ತರಕಾರಿಗಳ ಬೆಲೆಗಳಲ್ಲಿಏರಿಕೆಯಾಗಿದೆ. ಇದಕ್ಕೆ ಕೇಂದ್ರ ಸರಕಾರದ ಕೃಷಿ ಸೆಸ್ ಘೋಷಣೆ ಕಾರಣವಲ್ಲ. ಉತ್ಪಾದನೆ ಮತ್ತು ಪೂರೈಕೆಯಲ್ಲಿನ ವ್ಯತ್ಯದಿಂದ ಬೆಲೆ ಏರಿಕೆಯಾಗಿರಬಹುದು.

-ಉಮೇಶ್ ಮಿರ್ಜಿ, ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ

ಕಳೆದ ಎರಡು ತಿಂಗಳಲ್ಲಿ ಅಡುಗೆ ಅನಿಲ ಮೂರು ಬಾರಿ ಹೆಚ್ಚಾಗಿದೆ. ಇದಕ್ಕೆ ಕಾರಣ ಕೇಳಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಡೆ ಕೈ ತೋರಿಸುತ್ತಿದ್ದಾರೆ.
-ಮುರಳಿ ಎಚ್.ಪಿ. ಬೆಂಗಳೂರು ಅಡುಗೆ ಅನಿಲ್ ಡೀಲರ್