Friday, 22nd November 2024

ಫೆ.12ರಂದು ಬಾದಾಮಿಗೆ ಡಿಸಿಎಂ ಕಾರಜೋಳ, ಸಚಿವ ಶ್ರೀರಾಮುಲು ಭೇಟಿ

ಸಿದ್ದರಾಮಯ್ಯ ಸಾರಥ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬಾದಾಮಿ: ವಿಧಾನಸಭೆ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ದೊರೆಯಲಿದೆ.

ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಸಚಿವರಾದ ಶ್ರೀರಾಮುಲು, ಪ್ರವಾಸೋದ್ಯಮ ಸಚಿವರಾದ ಯೋಗೇಶ್ವರ್ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಕೆಲವಡಿ ಗ್ರಾಮದಲ್ಲಿ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ, ಮುಷ್ಟಿಗೇರಿ ಗ್ರಾಮ ದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬೀರಲಿಂಗೇಶ್ವರ ಸಮುದಾಯ ಭವನಕ್ಕೆ ಶಿಲಾನ್ಯಾಸ,  ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡದ ಉದ್ಘಾಟನೆ ನಡೆಯಲಿದೆ.

ಐತಿಹಾಸಿಕ ತಾಣವಾದ ಪಟ್ಟದಕಲ್ಲ ಗ್ರಾಮದಲ್ಲಿ ಪ್ರವಾಸೋದ್ಯಮ ಇಲಾಖೆ ಯ ಉದ್ದೇಶಿತ ಸಮಗ್ರ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಅಡಿಗಲ್ಲು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ನೂತನ ಉಪ ವಿಭಾಗದ ಕಚೇರಿ ಉದ್ಘಾಟನೆ ನೆರವೇರಲಿದೆ.

ಕ್ಷೇತ್ರದ ವಿವಿಧೆಡೆ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೆತ್ತಿಕೊಳ್ಳ ಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ  ಬಾದಾಮಿ ಹಾಗೂ ಗುಳೇದ ಗುಡ್ಡ ತಾಲೂಕಿನ 16 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಜೀವಜಲ ಮಿಷನ್ ಯೋಜನೆಗೂ ಇದೇ ವೇಳೆ ಚಾಲನೆ ನೀಡಲಾಗುವುದು.