Friday, 15th November 2024

ಇದನ್ನು ಮೋದಿಯವರಲ್ಲದಿದ್ದರೆ, ಯಡಿಯೂರಪ್ಪನವರಾದರೂ ಮಾಡಬಹುದು !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

Living life is just like driving a vehicle, where someone will constantly be ahead of you. If you really want to
move ahead, then you should try overtaking’ instead of just honking’

ಕೆಲವು ದಿನಗಳ ಹಿಂದೆ, ಬೆಂಗಳೂರಿನಲ್ಲಿ ಸುಮಾರು ಮೂರು ವರ್ಷಗಳ ಕಾಲ ನೆಲೆಸಿದ್ದ ಇಸ್ರೇಲಿ ರಾಯಭಾರ ಕಚೇರಿಯಲ್ಲಿದ್ದ ಹಿರಿಯ ಅಽಕಾರಿಯೊಬ್ಬರು ವರ್ಗವಾಗಿ ತಮ್ಮ ಊರಿಗೆ ಹೋದರು. ಅವರ ಗೌರವಾರ್ಥ ಒಂದು ಪಾರ್ಟಿ ಏರ್ಪಡಿಸಲಾಗಿತ್ತು. ಅಲ್ಲಿ ಅವರು ತಮ್ಮ ಮೂರು ವರ್ಷಗಳ ಸವಿನೆನಪುಗಳನ್ನು ಹಂಚಿಕೊಂಡರು.

ಬೆಂಗಳೂರನ್ನು ಬಿಟ್ಟು ಹೋಗುತ್ತಿರುವ ಬಗ್ಗೆ ಅವರಲ್ಲಿ ವಿಷಾದವಿತ್ತು. ‘ನಿಮಗೆ ಬೆಂಗಳೂರು ಅಥವಾ ಭಾರತದ ಬಗ್ಗೆ ತೀರಾ ಬೇಸರ ಹುಟ್ಟಿಸಿದ ಸಂಗತಿ ಯಾವುದು?’ ಎಂದು ಕೇಳಿದೆ. ಅದಕ್ಕೆ ಅವರು ಸ್ವಲ್ಪವೂ ಯೋಚಿಸದೇ ತಟ್ಟನೆ, “Honking… Honking… its highly unbearable..’ ಎಂದರು. ಇದು ಅನ್ಯ ದೇಶೀಯರಿಗೆ ಒಂದು ಸಮಸ್ಯೆ ಎಂದು ಸಹ ನಮಗೆ ಅನಿಸಲಿಕ್ಕಿಲ್ಲ. ಆದರೆ ಅವರಿಗೆ ಇದು ಸಹಿಸಲಸಾಧ್ಯವಾದ ಗಂಭೀರ ಸಮಸ್ಯೆಯಾಗಿತ್ತು.

ನಾನು ಬೆಂಗಳೂರಿಗೆ ಬರುವುದಕ್ಕಿಂತ ಮುನ್ನ ಇಸ್ರೇಲಿನಲ್ಲಿರುವ ನನ್ನ ಸ್ನೇಹಿತರು ಈ ಸಮಸ್ಯೆಯ ಬಗ್ಗೆ ಎಚ್ಚರಿಸಿದ್ದರು. ಆದರೆ ಈ ಸಮಸ್ಯೆ ಇಷ್ಟು ತೀವ್ರವಾಗಿರ ಬಹುದೆಂದು ನಾನು ಊಹಿಸಿರಲಿಲ್ಲ. ಇಲ್ಲಿಗೆ ಬಂದ ನಂತರವೇ ಇದರ ತೀವ್ರತೆ ಅರಿವಿಗೆ ಬಂದಿದ್ದು. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಲೇ, ಕಾರನ್ನೇರಿ ಬರುವಾಗ, ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದ ಡ್ರೈವರ್ ಒಂದೇ ಸಮನೆ ಹಾರ್ನ್ ಮಾಡುವುದನ್ನು ನೋಡಿ ನನಗೆ ಷಾಕ್ ಆಯಿತು.

ದಯವಿಟ್ಟು ಹಾರ್ನ್ ಮಾಡಬೇಡ ಎಂದು ಹೇಳಿದೆ. ಆದರೆ ನಮ್ಮ ಸುತ್ತಮುತ್ತಲ ಇದ್ದ ವಾಹನಗಳಿಂದ ಆರ್ಕೆಸ್ಟ್ರಾ ಮಾದರಿ ಯಲ್ಲಿ (ಹಾರ್ನ್) ಸದ್ದು ಕೇಳಿಬರುತ್ತಿತ್ತು. ‘ಮೇಡಂ, ಹಾರ್ನ್ ಮಾಡದಿದ್ದರೆ, ನಮಗೆ ಯಾರೂ ದಾರಿ ಬಿಡುವುದಿಲ್ಲ. ನಾವು ಇಲ್ಲೇ ಇರಬೇಕಾಗುತ್ತದೆ’ ಎಂದ ಡ್ರೈವರ್. ನನಗೆ ಅವನ ಮಾತು ಯಾಕೋ ಇಷ್ಟವಾಗಿರಲಿಲ್ಲ. ಆದರೆ ಈಗ ಅನಿಸುತ್ತಿದೆ, ಆತ ಹೇಳಿದ್ದು ನಿಜವೆಂದು. ‘ಬೆಂಗಳೂರಿನಲ್ಲಿ ಡ್ರೈವಿಂಗ್ ಮಾಡಬೇಕೆಂದರೆ ಹಾರ್ನ್ ಮಾಡಲೇಬೇಕು.

ಹಾರ್ನ್ ಮಾಡದೇ ಡ್ರೈವ್ ಮಾಡುವುದು ಸಾಧ್ಯವೇ ಇಲ್ಲ. ನನಗೆ ಈ ನಗರದ ಬಗ್ಗೆ ಇಷ್ಟವಾಗದ ಸಂಗತಿಯೆಂದರೆ ಅದೊಂದೇ. ಬೆಂಗಳೂರಿನಲ್ಲಿ ಜನ ಯಾಕೆ ತಮ್ಮ ವಾಹನಗಳ ಹಾರ್ನನ್ನು ಆ ಪರಿ ಒದರಿಸುತ್ತಾರೋ, ಅರ್ಥವಾಗುವುದಿಲ್ಲ. ಆದರೆ ಆಘಾತಕಾರಿ ಸಂಗತಿಯೆಂದರೆ ಯಾರಿಗೂ ತಾವು ತಪ್ಪು ಮಾಡುತ್ತಿದ್ದೇವೆ ಎಂದು ಅಂದುಕೊಳ್ಳದಿರುವುದು. ಹಾರ್ನ್ ಮಾಡದೇ ವಾಹನ ಓಡಿಸುವುದು ಒಂದು ಒಳ್ಳೆಯ ಅಭ್ಯಾಸ ಎಂದಾಗಲಿ, ಹಾರ್ನ್ ಮಾಡುವುದು ಅತ್ಯಂತ ಕೆಟ್ಟ ಅಭ್ಯಾಸವೆಂದಾಗಲಿ ಇಲ್ಲಿನವರಿಗೆ ಗೊತ್ತೇ ಇಲ್ಲ.

ಹಾರ್ನ್ ಮಾಡುವುದು ತೀರಾ ಸಹಜ ಕ್ರಿಯೆ ಎಂದೇ ಎಲ್ಲರೂ ಭಾವಿಸಿzರೆ. ಪ್ರಾಯಶಃ ಈ ಕೆಟ್ಟ ಅಭ್ಯಾಸವನ್ನು ನಿಲ್ಲಿಸುವುದು
ಮೋದಿಯವ ರಿಂದಲೂ ಸಾಧ್ಯವಿಲ್ಲವೇನೋ?’ ಎಂದರು. ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ, ಇಲ್ಲಿ ಅಷ್ಟೊಂದು
ವಾಹನಗಳಿರಲಿಲ್ಲ. ಒಂದು ವೇಳೆ ಈಗಿರುವಷ್ಟು ವಾಹನಗಳು ಆಗ ಇದ್ದಿದ್ದರೆ, ಅವರು ಹಾರ್ನ್ (honking) ಮಾಡುವುದು
ಕೆಟ್ಟ ಅಭ್ಯಾಸ ಎಂಬುದನ್ನು ಕಲಿಸಿ ಹೋಗುತ್ತಿದ್ದರು. ಆದರೆ ನಮಗೆ ಇದೊಂದು ಕೆಟ್ಟ ನಡತೆ, ಕೆಟ್ಟ ಅಭ್ಯಾಸ, ಸಾರ್ವಜನಿಕ
ಆರೋಗ್ಯಕ್ಕೆ ಮಾರಕ, ಸಾಮಾಜಿಕ ಪಿಡುಗು ಎಂದು ಸಹ ಅನಿಸುತ್ತಿಲ್ಲ. ಈ ದೇಶಕ್ಕೆ ನಾವು ಯಾವ ಕೊಡುಗೆಯನ್ನೂ
ಕೊಡಬೇಕಿಲ್ಲ, ಹಾರ್ನ್ ಮಾಡದೇ ವಾಹನ ಓಡಿಸಿದರೆ ಸಾಕು.

ಅದರಂಥ ಉಪಕಾರ ಮತ್ತೊಂದಿಲ್ಲ. ಅಂದರೆ ಹಾರ್ನ್ ಮಾಡುವ ಮೂಲಕ ನಾವು ಅದೆಷ್ಟು ದೇಶವಿರೋಧಿ ಕೃತ್ಯವೆಸಗು ತ್ತಿದ್ದೇವೆ, ಊಹಿಸಬಹುದು. ಸಿಗರೇಟು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುದು ಕನಿಷ್ಠ ಅದನ್ನು ಸೇದುವವನಿಗಾದರೂ ಗೊತ್ತು. ಹೀಗಾಗಿ ಒಂದಲ್ಲ ಒಂದು ದಿನ, ಮನ ಪರಿವರ್ತನೆಯಾಗಿ, ಸಿಗರೇಟು ಸೇದುವುದನ್ನು ಆತ ನಿಲ್ಲಿಸಬಹುದು. ಆದರೆ ಹಾರ್ನ್ ಅಮುಕುತ್ತಾ ವಾಹನ ಓಡಿಸುವವನಿಗೆ, ತಾನು ಮಾಡುತ್ತಿರುವುದು ಕೆಟ್ಟ ಅಭ್ಯಾಸ ಎಂಬುದೇ ಗೊತ್ತಿಲ್ಲ.

ಹೀಗಿರುವಾಗ ಅದನ್ನು  ನಿಲ್ಲಿಸುವುದಾದರೂ ಹೇಗೆ? ಮುಂಬೈ, ಬೆಂಗಳೂರಿಗಿಂತ ಲಂಡನ್ ಮತ್ತು ನ್ಯೂಯಾರ್ಕ್ ನಗರ ದೊಡ್ಡದು ಮತ್ತು ಅಲ್ಲಿ ಅತಿ ಹೆಚ್ಚು ಜನಸಂಖ್ಯೆ ಮತ್ತು ವಾಹನ ಸಂಖ್ಯೆಗಳಿವೆ. ಆದರೆ ಲಂಡನ್ ಮತ್ತು ನ್ಯೂಯಾರ್ಕಿನಲ್ಲಿ ಒಂದೇ ಒಂದು ಹಾರ್ನ್ ಸದ್ದನ್ನು ಕೇಳಲು ಸಾಧ್ಯವಿಲ್ಲ. ಅದೆಂಥ ವಾಹನದಟ್ಟಣೆಯೇ ಇರಲಿ, ಯಾರೂ ಹಾರ್ನ್ ಮಾಡುವು ದಿಲ್ಲ.

ಹಾರ್ನ್ ಮಾಡಿದರೆ, ಎಲ್ಲರೂ ಕ್ಯಾಕರಿಸಿ ಅವನತ್ತ ನೋಡುತ್ತಾರೆ. ತೀರಾ ಅನಿವಾರ್ಯ ಪ್ರಸಂಗದಲ್ಲಿ ಹಾರ್ನ್ ಮಾಡಬಹು ದಷ್ಟೆ. ಆದರೆ ಅದಕ್ಕೆ ಬಲವಾದ ಕಾರಣವಿರುತ್ತದೆ ಮತ್ತು ಹಾರ್ನ್ ಮಾಡಿದವನ ಮುಖದಲ್ಲಿ ಒಂದು ವಿಷಾದ, ವಿಷಣ್ಣ ಭಾವವಿರುತ್ತದೆ. ಮಾಡಬಾರದ ತಪ್ಪನ್ನು ಮಾಡಿದೆ ಎಂಬ guilt ಕಾಡುತ್ತಿರುತ್ತದೆ. ಆತ ಕನಿಷ್ಠ, ಹಾರ್ನ್ ಮಾಡಿದ್ದಕ್ಕೆ ತಪ್ಪಾಯ್ತು
ಎಂಬುದನ್ನು ತನ್ನ ಆಂಗಿಕ ಭಾಷೆಯದರೂ ವ್ಯಕ್ತಪಡಿಸುತ್ತಾನೆ.

ಅದು ತನ್ನ ಜನ್ಮಸಿದ್ಧ ಹಕ್ಕು ಎಂಬ ಲವಲೇಶವೂ ಅವನಲ್ಲಿರುವುದಿಲ್ಲ. ನಾನು ಒಮ್ಮೆ ನಲವತ್ತೆರಡು ದಿನಗಳ ಕಾಲ ಅಮೆರಿಕ ದಲ್ಲಿದ್ದೆ. ಒಮ್ಮೆಯೂ ಒಂದೇ ಒಂದು ಹಾರ್ನ್ ಸಪ್ಪಳ ಕಿವಿ ಮೇಲೆ ಬೀಳಲಿಲ್ಲ. ಈ ಮಾತನ್ನು ನನ್ನ ಅಮೆರಿಕವಾಸಿ ಸ್ನೇಹಿತನ ಮುಂದೆ ಹೇಳಿದಾಗ, ‘ನಾನು ಎಂಟು ವರ್ಷಗಳಿಂದ ಆ ದೇಶದಲ್ಲಿ ನೆಲೆಸಿದ್ದೇನೆ. ನಾನು ಇನ್ನೂ ಒಂದು ಹಾರ್ನ್ ಸದ್ದು ಕೇಳಿಲ್ಲ’ ಎಂದು ಹೇಳಿದ್ದು ನೆನಪಾಗುತ್ತದೆ.

ಕತ್ತಲ ಖಂಡದ ಕತ್ತಲ ದೇಶ ಎಂದೇ ಹೆಸರಾದ ಆಫ್ರಿಕಾದ ರವಾಂಡದಂಥ ದೇಶಕ್ಕೆ ನಾನು ಮೂರು ಸಲ ಹೋಗಿ ಬಂದಿದ್ದೇನೆ. ಅಲ್ಲಿ ವಾರಗಟ್ಟಲೆ ಉಳಿದರೂ ಒಂದೇ ಒಂದು ಹಾರ್ನ್ ಸಪ್ಪಳ ಕೇಳಿಲ್ಲ. ದಕ್ಷಿಣ ಆಫ್ರಿಕಾ, ನೈಜೀರಿಯಾ, ಉಗಾಂಡ, ಜಿಂಬಾಬ್ವೆ, ಬುರುಂಡಿ, ಕೀನ್ಯಾದಂಥ ದೇಶಗಳಲ್ಲಿ ಓಡಾಡುವಾಗಲೂ ಹಾರ್ನ್ ಸದ್ದು ಕೇಳಿಲ್ಲ. ಆದರೆ ನಮ್ಮ ದೇಶದಲ್ಲಿ ಹಾರ್ನ್ ಸದ್ದಿನ ಹಿನ್ನೆಲೆ ಸಂಗೀತ ಮೊಳಗದ ನಗರ, ಊರುಗಳೇ ಇಲ್ಲ. ಹಾರ್ನ್ ಒಂದು ಅಸಭ್ಯ ನಡೆ, ಅದು ಕರ್ಕಶ, ತಲ್ಲಣಕಾರಿ, ಆಘಾತಕಾರಿ, ಕೆಟ್ಟ ಸಾರ್ವಜನಿಕ ವರ್ತನೆ ಎಂದು ನಮಗೆ ಇಲ್ಲಿಯ ತನಕವೂ ಅನಿಸಿಲ್ಲ.

ದುರಂತ ಅಂದರೆ, ಲಾರಿಗಳ ಮೇಲೆ, Sound Horn Please ಎಂದು ಬರೆಯಿಸಲೇಬೇಕು ಎಂದು ಮೋಟಾರು ವಾಹನ ಕಾಯ್ದೆ ಹೇಳುತ್ತದೆ. ಹಾಗೆ ಬರೆಯಿಸದಿದ್ದರೆ ಅಧಿಕಾರಿಗಳು ದಂಡ ಪೀಕುತ್ತಾರೆ. ಅಂದರೆ ವಾಹನ ಓಡಿಸುವಾಗ ಹಾರ್ನ್ ಮಾಡಿ ಎಂದು ಸರಕಾರವೇ ಹೇಳುತ್ತದೆ. ಇಂದಿಗೂ ಎಲ್ಲಾ ಟ್ರಕ್ಕುಗಳ ಹಿಂಬದಿಯಲ್ಲಿ ಕಡ್ಡಾಯವಾಗಿ Sound Horn ಎಂದು  ಬರೆಯಿಸಿರುವು ದನ್ನು ನೋಡಬಹುದು.

ನಮ್ಮ ಸರಕಾರಕ್ಕೂ ಇದೊಂದು ಸಾರ್ವಜನಿಕ ಪಿಡುಗು ಎಂದು ಅನಿಸಿಲ್ಲ. ಹೀಗಾಗಿ ಜಗತ್ತಿನ ಯಾವ ದೇಶಗಳಲ್ಲೂ ಕೇಳಿಸದ ಸದ್ದು ನಮ್ಮ ದೇಶದಲ್ಲಿ ಮಾತ್ರ ಕೇಳಿಸುತ್ತದೆ ಮತ್ತು ಅದು ಕೊನೆಗೊಳ್ಳುವ ಯಾವ ಸೂಚನೆಯೂ ಇಲ್ಲದಂತಾಗಿದೆ. ನಮ್ಮ ದೇಶಕ್ಕೆ ಯಾರೇ ಬರಲಿ, ಅವರಿಗೆ ಬರಬರುತ್ತಲೇ ಷಾಕ್ ಕೊಡುವುದು ಈ ಹಾರ್ನ್‌ಗಳು. ಹುಟ್ಟಾ ಕೇಳಿರದ ಸದ್ದು ಅವರನ್ನು ತರಗಾಬರಗಾ ಮಾಡುತ್ತದೆ ಮತ್ತು ಆ ಕ್ಷಣದ ನಮ್ಮ ದೇಶದ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಮಾಡುತ್ತದೆ.

ವಿಚಿತ್ರವೆಂದರೆ, ಈ ಭಾವನೆ ನಮ್ಮ ದೇಶದಲ್ಲಿ ಇರುವಷ್ಟು ಕಾಲ ಮತ್ತು ಇಲ್ಲಿಂದ ಹೋದ ನಂತರವೂ ಅವರಲ್ಲಿ ಶಾಶ್ವತವಾಗಿ
ಮನೆ ಮಾಡಿರುತ್ತದೆ. ಅಂದರೆ ನಮ್ಮ ದೇಶದ ಮಾನ ಹರಾಜು ಹಾಕಲು ಈ ಹಾರ್ನ್‌ಗಳೊಂದೇ ಸಾಕು. ಹಾರ್ನ್ ಕೇಳಿದ ಯಾವ ವಿದೇಶಿಯನೂ ನಮ್ಮ ದೇಶದ ಬಗ್ಗೆ ಒಳ್ಳೆಯ ಭಾವನೆಯನ್ನು ಇಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಆದರೆ ನಮಗೆ ಹಾರ್ನ್ ನಮ್ಮ ಡ್ರೈವಿಂಗಿನ ಅವಿಭಾಜ್ಯ ಅಂಗವೇ ಆಗಿದೆ.

ವಿಚಿತ್ರ ಅಂದರೆ, ಕೆಲವರು ಸಿಗ್ನಲ್‌ಗಾಗಿ ನಿಂತು ಕಾಯುತ್ತಿರುವಾಗಲೂ, ಹಾರ್ನ್ ಮಾಡುತ್ತಲೇ ಇರುತ್ತಾರೆ. ತಮ್ಮ ಮುಂದಿನ ವಾಹನ ಚಲಿಸಲು, ಎರಡು ಸೆಕೆಂಡ್ ತಡವಾದರೂ ಸಾಕು, ಹಾರ್ನ್ ಬಜಾಯಿಸುತ್ತಾರೆ. ಇನ್ನು ಕೆಲವರಿಗೆ ಹಾರ್ನ್ ಮಾಡುವು ದೊಂದು ಚಟ. ತಮ್ಮ ವಾಹನಕ್ಕೆಎಲ್ಲರೂ ದಾರಿ ಬಿಟ್ಟು ಕೊಡಬೇಕು. ದಾರಿ ಬಿಡುವವರೆಗೂ ಹಾರ್ನ್ ಮೇಲೆ ಒತ್ತಿದ ಕೈಯನ್ನು ತೆಗೆಯುವುದಿಲ್ಲ. ಹಾರ್ನ್ ಎನ್ನುವುದು ಸೈರನ್ ಥರಾ ಮೊಳಗುತ್ತಿರುತ್ತದೆ. ದ್ವಿಚಕ್ರ ವಾಹನ ಸವಾರರನ್ನು ಕಂಗಾಲು ಮಾಡಲು ಹಾರ್ನ್‌ನಂಥ ಅಸ್ತ್ರ ಮತ್ತೊಂದಿಲ್ಲ.

ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಲ್ಲಿ ಹಾರ್ನ್ ಸದ್ದು ಅತೀವ ಕರ್ಕಶವನ್ನುಂಟು ಮಾಡುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೇ ಹಾರ್ನ್ ಅದುಮುತ್ತಲೇ ಇರುತ್ತಾರೆ. Good drivers dont honk ಎಂಬ ಸಾಮಾನ್ಯ ಸಂಗತಿ ಕೂಡ ಎಷ್ಟೋ ಜನರಿಗೆ ಗೊತ್ತಿಲ್ಲ. ಡ್ರೈವಿಂಗ್ ವೀಲ್ ಹಿಂದೆ ಕುಳಿತಾಗ ಪ್ರತಿಯೊಬ್ಬರೂ ಅಂದುಕೊಳ್ಳಬೇಕಂತೆ æ DONT HONK, BE A MONK
ಅಂತ. ಆದರೆ ಈ ನಿಯಮವನ್ನು ಎಲ್ಲರೂ ಉಲ್ಲಂಘನೆಯ ಆಚರಿಸುತ್ತಾರೆ. ತಾವು ಮಾಡುವ ಒಂದು ಹಾರ್ನ್ ಸದ್ದು, ಅದೆಷ್ಟು ಶಬ್ದ ಮಾಲಿನ್ಯಕ್ಕೆ ಕಾರಣವಾಗಬಹುದು, ನಗರದ ಶಾಂತ ವಾತಾವರಣಕ್ಕೆ ಭಂಗ ತರಬಹುದು ಎಂಬ ಪ್ರಜ್ಞೆಯೂ ಇರುವುದಿಲ್ಲ. ಇದರಲ್ಲಿ ಅವಿದ್ಯಾವಂತರಷ್ಟೇ ವಿದ್ಯಾವಂತರ ಕೊಡುಗೆಯೂ ಇದೆ.

ಬಿಎಂಡಬ್ಲ್ಯೂ, ಆಡಿ, ಬೆಂಜ್ ಮುಂತಾದ ದೊಡ್ಡ ಕಾರುಗಳನ್ನು ಇಟ್ಟುಕೊಂಡವರು ಬೇರೆಯವರ ಗಮನ ಸೆಳೆಯಲಾದರೂ, ಹಾರ್ನ್ ಮಾಡದೇ ಹೋಗುವುದಿಲ್ಲ. ಇನ್ನು ಕೆಲವರಿಗೆ ಹಾರ್ನ್ ಎಂಬುದು ಸಂವಹನದ ಮಾಧ್ಯಮ. ಕೆಲವು ಡ್ರೈವರುಗಳು ಹಾರ್ನ್ ಮೂಲಕವೇ ಮಾತಾಡುತ್ತಾರೆ, ಸಂಜ್ಞೆ ಕೊಡುತ್ತಾರೆ. ಇಂಥವರಿಗೆ ಹಾರ್ನ್ ಇಲ್ಲದಿದ್ದರೆ ಡ್ರೈವ್ ಮಾಡಲು ಆಗುವುದಿಲ್ಲ.
ಹಾಗೆ ನೋಡಿದರೆ, ವಾಹನಗಳಿಗೆ ಹಾರ್ನ್ ಬೇಕಿಲ್ಲ. ಆದರೆ ಭಾರತದಲ್ಲಿ ವಾಹನಗಳಿಗೆ ಬ್ರೇಕ್ ಇಲ್ಲದಿದ್ದರೂ ನಡೆಯುತ್ತದೆ,
ಆದರೆ ಹಾರ್ನ್ ಇರಲೇ ಬೇಕು.

ಹಾರ್ನ್ ಇದ್ದರೆ, ಬ್ರೇಕ್ ಇಲ್ಲದಿದ್ದರೂ ಆದೀತು. ಅಷ್ಟರಮಟ್ಟಿಗೆ ನಮ್ಮ ದೇಶ ಜಗತ್ತಿನಲ್ಲಿ Honking Capital  ಎಂದು ಕರೆಯಿಸಿ ಕೊಂಡಿದೆ. ಬೆಂಗಳೂರು, ಮುಂಬೈ ಮತ್ತು ದಿಲ್ಲಿ ಮಹಾನಗರಗಳಲ್ಲಿ ದಿನದ ‘ಪೀಕ್ ಅವರ್’ನಲ್ಲಿ 80 ರಿಂದ 90 ಡೆಸಿಬಲ್ ಶಬ್ದ ಮಾಲಿನ್ಯಇರುತ್ತದೆ. ಅಂದರೆ ಗೂಡ್ಸ್ ಟ್ರೇನ್ ಹಾದು ಹೋಗುವಾಗ ಹದಿನೈದು ಅಡಿ ದೂರದಲ್ಲಿ ನಿಂತರೆ, ಯಾವ ರೀತಿ ಭಾರಿ ಸಪ್ಪಳ ಕೇಳಿಸುವುದೋ ಅಂಥ ಸದ್ದು ಆ ಸಮಯದಲ್ಲಿ ಹೊಮ್ಮುತ್ತಲೇ ಇರುತ್ತದೆ.

ಬೆಂಗಳೂರಿನಲ್ಲಿ ಈ ಪ್ರಮಾಣ 120 ರಿಂದ 135 ರ ತನಕವೂ ಹೋಗುವುದುಂಟು. ಈ ಪ್ರಮಾಣದ ಶಬ್ದ ಮಾಲಿನ್ಯ ಲಂಡನ್ ನಗರದದರೆ, ಅವರು ಊರು ಬಿಟ್ಟು ಹೋಗುತ್ತಾರೆ. ಆದರೆ ನಮಗೆ ಅದು ತೀರಾ ಸಹಜವಾಗಿ ಬಿಟ್ಟಿದೆ. ಹಾಗಾದರೆ ಈ ‘ಹಾರ್ನ್ ಮಾರಿ’ಯನ್ನು ಓಡಿಸುದು ಹೇಗೆ? ಈ ಸಮಸ್ಯೆಗೆ ಪರಿಹಾರವಿದೆಯಾ? ಹಾರ್ನ್ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಈ ಕೆಟ್ಟ ಅಭ್ಯಾಸವನ್ನು ಹೋಗಲಾಡಿಸಿ ಸುಧಾರಣೆ ತರಲು ಸಾಧ್ಯವಾ? ಖಂಡಿತಾ ಸಾಧ್ಯವಿದೆ ಅಂತಾರೆ Invertonomics : 8 ideas to transform India ಎಂಬ ಪುಸ್ತಕದ ಲೇಖಕ ಗೂಂಮೀತ್ ಸಿಂಗ್ ಚೌಹಾಣ್. ಇದ್ದಕ್ಕಿದ್ದಂತೆ ಯಾವ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿ ಯಶಸ್ವಿ ಯಾಗುವುದು ಕಷ್ಟ.

ಅದರಲ್ಲೂ ಜನರ ಅಭ್ಯಾಸವನ್ನು ಬದಲಿಸುವುದು ಇನ್ನೂ ಕಷ್ಟ. ಜನ ಬದಲಾವಣೆಗಳನ್ನು ತಕ್ಷಣಕ್ಕೆ ಒಪ್ಪಿಕೊಳ್ಳುವುದಿಲ್ಲ. ಆದರೆ ಕ್ರಮೇಣ ಸುಧಾರಣೆ ತರುವುದು ಸಾಧ್ಯವಿದೆ. ಮುಂಬೈ ನಗರದಲ್ಲಿ ಸಿಗ್ನಲ್ ಗಾಗಿ ಕಾಯುವಾಗ ವಾಹನ ಚಾಲಕರು ಹಾರ್ನ್ ಮಾಡುವುದನ್ನು ನಿಲ್ಲಿಸಲು ಪೊಲೀಸರು ಒಂದು ಕ್ರಮವನ್ನು ಜಾರಿಗೆ ತಂದರು. ಸಿಗ್ನಲ್ ಮುಂದೆ ನಿಂತಾಗ ಯಾರಾದರೂ ಹಾರ್ನ್ ಮಾಡಿದರೆ, ಕೆಂಪು ದೀಪ ಹೋಗಿ ಹಸುರು ದೀಪ ಬರುವ ಅವಧಿಯನ್ನು ಹದಿನೈದು ಸೆಕೆಂಡುಗಳ ಕಾಲ ವಿಸ್ತರಿಸಿದರು.

ನೂರಾರು ವಾಹನಗಳ ಪೈಕಿ ಒಂದು ವಾಹನದಿಂದ ಹಾರ್ನ್ ಸಪ್ಪಳ ಕೇಳಿ ಬಂದರೂ ಕಾಯುವ ಅವಧಿಯನ್ನು ವಿಸ್ತರಿಸಿದಾಗ, ಹಾರ್ನ್ ಮಾಡಿದ ಚಾಲಕನನ್ನ ಉಳಿದವರು ಬೈಯಲಾರಂಭಿಸಿದರು. ಕ್ರಮೇಣ ಸಿಗ್ನಲ್‌ಗಾಗಿ ಕಾಯುವಾಗ ಹಾರ್ನ್ ಮಾಡುವ ಕೆಟ್ಟ ಚಟ ನಿಂತು ಹೋಯಿತು.

ಗೂಂಮೀತ್ ಸಿಂಗ್ ಚೌಹಾಣ್ ಪ್ರಕಾರ, ಬೇಕಾಬಿಟ್ಟಿ ಹಾರ್ನ್ ಮಾಡುವ ಅಭ್ಯಾಸವನ್ನು ನಿಲ್ಲಿಸುವುದು ಸಾಧ್ಯವಿದೆ. ಅದಕ್ಕೆ ಮಾಡಬೇಕಾದುದು ಇಷ್ಟೇ. ಪ್ರತಿ ವಾಹನದಲ್ಲೂ ಜಿಪಿಎಸ್ ಶಕ್ತ ಸಿಮ್ ಕಾರ್ಡ್ ಇರುವ ಸಣ್ಣ ಉಪಕರಣವನ್ನು ಅಳವಡಿಸಬೇಕು. ಈ ಉಪಕರಣ ಆಯಾ ವಾಹನದಿಂದ ಎಷ್ಟು ಸಲ ಹಾರ್ನ್ ಮಾಡಲಾಗಿದೆ ಎಂಬುದನ್ನು ಮಾನಿಟರ್ ಮಾಡುತ್ತದೆ ಮತ್ತು ಅದನ್ನು ರೆಕಾರ್ಡ್ ಮಾಡಿಕೊಳ್ಳುತ್ತದೆ. ಈ ಉಪಕರಣ ತಾನು ಸಂಗ್ರಹಿಸಿದ ಈ ಮಾಹಿತಿಯನ್ನು ಮೋಟಾರು ವಾಹನ ಇಲಾಖೆಗೆ ರವಾನಿಸುತ್ತದೆ. ಈ ಇಲಾಖೆ ಪ್ರತಿ ಹಾರ್ನ್‌ಗೆ ಒಂದು ರುಪಾಯಿ ದಂಡದಂತೆ, ಇಮೇಲ್ ಅಥವಾ ಮೊಬೈಲ್ ಮೂಲಕ ಬಿಲ್ ಕಳಿಸುತ್ತದೆ.

ಪ್ರತಿ ಸಲ ಹಾರ್ನ್ ಮಾಡಿದಾಗ, ತಕ್ಷಣ ಅವರ ಖಾತೆಯಿಂದ ಒಂದು ರುಪಾಯಿ ಕಟ್ ಆಗುವಂತೆಯೂ ಮಾಡಬಹುದು.
ಬೆಂಗಳೂರಿನಂದೇ ಸುಮಾರು ಐವತ್ತೈದು ಲಕ್ಷ ವಾಹನಗಳಿವೆ. ಒಂದು ವಾಹನ, ಒಂದು ದಿನಕ್ಕೆ ಮೂವತ್ತು ಸಲ ಹಾರ್ನ್ ಮಾಡಿದೆ ಅಂತಿಟ್ಟುಕೊಂಡರೆ, ಐವತ್ತೈದು ಲಕ್ಷ ವಾಹನಗಳಿಂದ ಹೊರಹೊಮ್ಮಿದ ಹಾರ್ನ್‌ಗಳ ಸಂಖ್ಯೆ – 165000000. ಅಂದರೆ ಒಂದು ದಿನಕ್ಕೆ 16.5 ಕೋಟಿ ಹಾರ್ನ್ ಗಳಾದವು. ಇದರಿಂದ ಒಂದು ದಿನಕ್ಕೆ ದಂಡ ರೂಪದಲ್ಲಿ 16.5 ಕೋಟಿ ರುಪಾಯಿ ಸಂಗ್ರಹವಾದಂತಾಯಿತು.

ಅಂದರೆ ಒಂದು ತಿಂಗಳಿಗೆ 4,950,000,000 ರುಪಾಯಿ. ಒಂದು ನಗರದಿಂದ ತಿಂಗಳಿಗೆ 500 ಕೋಟಿ ರುಪಾಯಿ ಸಂಗ್ರಹವಾದರೆ, ಹತ್ತು ನಗರಗಳಿಂದ 5000 ಕೋಟಿ ರುಪಾಯಿ ಸಂಗ್ರಹ ವಾದಂತಾಯಿತು. ವರ್ಷಕ್ಕೆ 60000 ಕೋಟಿ ರುಪಾಯಿ ! ಇದು ಕೇವಲ ಹತ್ತು ನಗರಗಳ ಕತೆಯಾಯಿತು. ಇದನ್ನು ಇಡೀ ದೇಶಕ್ಕೆ ವಿಸ್ತರಿಸಿದರೆ, ಒಂದು ಲಕ್ಷ ಕೋಟಿಗಿಂತ ಅಧಿಕ ಹಣ ಸಂಗ್ರಹವಾಗುತ್ತದೆ.

ಕರೋನಾದಿಂದ ಕೆರ ಹಿಡಿದಿರುವ ದೇಶದ ಬೊಕ್ಕಸವೂ ಭರ್ತಿಯಾಗಬಹುದು. ಕ್ರಮೇಣ ಈ ಹಾರ್ನ್ ಎಂಬ ಅನಿಷ್ಟವೂ ತೊಲಗ ಬಹುದು. ಈ ಐಡಿಯಾವನ್ನು ಮೋದಿಯವರ ತಲೆಯೊಳಗೆ ಬಿಟ್ಟರೆ, ಅವರು ಇದನ್ನು ಜಾರಿಗೊಳಿಸಬಹುದು. ಹಾರ್ನ್ ಚಟ ಬಿಡಿಸುವುದಕ್ಕಿಂತ ದಂಡದ ಹಣದ ಮೇಲಿನ ಆಸೆಯಿಂದಾದರೂ ಇದನ್ನು ಮಾಡಬಹುದು. ಇದನ್ನು ಮೋದಿಯವ ರಲ್ಲದಿದ್ದರೆ, ಯಡಿಯೂರಪ್ಪನವರಾದರೂ ಮಾಡಬಹುದು.

ಹಾರ್ನ್ ಮೇಲೆ ಕೈಯಿಟ್ಟರೆ, ಪರ್ಸ್ ಖೋತಾ ಎಂಬ ಭಾವನೆ ಬಂದರೆ ಸಾಕು, ಹಾಂಕ್ ಮಾಡುವಾಗ ಯೋಚಿಸುತ್ತಾರೆ.