Friday, 15th November 2024

ಆತ್ಮಚರಿತ್ರೆಗಳು, ಓದುವವರ ಆತ್ಮಗಳನ್ನು ಕೆದಕುತ್ತವೆ

ಪ್ರಾಣೇಶ್‌ ಪ್ರಪಂಚ 

ಗಂಗಾವತಿ ಪ್ರಾಣೇಶ್

ಕನ್ನಡ ಲೋಕದ ಗೆಳೆಯ ವಸಂತ್, ಮನೆ ಮನೆಗೆ ಪುಸ್ತಕಗಳನ್ನು ಮುಟ್ಟಿಸುವ ಕೆಲಸವನ್ನು ಹವ್ಯಾಸವನ್ನಾಗಿ ಮಾಡಿಕೊಂಡ ವಿಷಯ ಈಗಾಗಲೇ ಕನ್ನಡಿಗರಿಗೆಲ್ಲ ತಿಳಿದಿದೆ. ಮೊನ್ನೆ ನನಗೆ ಮೂರ‍್ನಾಲ್ಕು ಪುಸ್ತಕ ಇರುವ ಪಾರ್ಸಲ್ ಬಂತು.

ಅದರಲ್ಲಿ ಗಬಕ್ಕನೆ ಕೈಗೆತ್ತಿಕೊಂಡು ಓದಲು ಶುರು ಮಾಡಿದ ಪುಸ್ತಕ ಯಾವುದು ಗೊತ್ತೆ? ನಮಗೆಲ್ಲ ಮಾತಿನಿಂದಲೇ ಮೋಡಿ
ಮಾಡಿ ನಗಿಸುವ ಗುಟ್ಟನ್ನೂ, ಅದಕ್ಕೆ ಬೇಕಾದ ಓದು, ಅನುಭವಗಳನ್ನು ಗಳಿಸಿ ಕೊಳ್ಳಲು ತಮ್ಮ ಭಾಷಣ, ನಾಟಕಗಳಿಂದ
ಕಲಿಸಿಕೊಟ್ಟ ಮಾಸ್ಟರ್ ಹಿರಣ್ಣಯ್ಯನವರ ‘ನನ್ನ ಕಥೆ ಹೇಳ್ತೀನಿ’ ಎಂಬ ಅವರ ಆತ್ಮಚರಿತ್ರೆ ಭರ್ತಿ 611 ಪುಟಗಳ ಹೂರಣದ ಪೂರ್ಣ ಪುಸ್ತಕ.

ಹಸಿದು ಕಂಗಾಲಾದವನಿಗೆ ತಟ್ಟೆ ತುಂಬಾ ವಿವಿಧ ಖಾದ್ಯ ಗಳನ್ನು ಬಡಿಸಿ ಅವನ ಮುಂದೆ ಸರಿಸಿ ‘ತಿನ್ನು’ ಎಂದರೆ ಅವನು
ಬಿಡುತ್ತಾನೆಯೇ? ಗಬಗಬನೆ ತಿನ್ನಲಾರಂಭಿಸು ವುದಿಲ್ಲವೇ? ಹಾಗೆ ನಾನೂ ಬಡಬಡನೆ ಅದನ್ನು ಓದಲಾರಂಭಿಸಿದೆ. ಮೊದಲಿ ನಿಂದಲೂ ನನಗೆ ಆತ್ಮಚರಿತ್ರೆ ಗಳೆಂದರೆ ವಿಶೇಷ ಗೌರವ, ಕುತೂಹಲ. ಆತ್ಮಚರಿತ್ರೆಗಳ ಬಗ್ಗೆ ನನಗೆ ಎಂಭತ್ತರ ದಶಕದಲ್ಲೇ ಕುತೂಹಲ ಮೂಡಿಸಿದವರು ನನ್ನ ಗುರುಗಳಾದ ಬೀಚಿಯವರು ತಮ್ಮ ‘ಬಯಾಗ್ರಫಿ’ ಮೂಲಕ.

ಆಮೇಲೆ ರವಿ ಬೆಳಗೆರೆಯವರ ಚಲಂ, ಭೈರಪ್ಪರ ಗೃಹಭಂಗ, ಮರಾಠಿಯ ‘ಉಚಲ್ಯಾ’ ಬದುಕಿದರೆ ಇವರ ಹಾಗೆ ಬವಣೆಪಟ್ಟು ಬದುಕಿ, ನಂಜು ನುಂಗಿ ನಗಿಸಬೇಕೆಂಬ ಛಲ ಮೂಡಿತು. ನಿಜ ಹೇಳಬೇಕೆಂದರೆ ತಿಂದು, ತೊಟ್ಟು, ಉಂಡು, ಆಡಿ ಬೆಳೆದವರಿಗೆ ಜೀವನ, ಪ್ರಪಂಚ ಎಂಬುದೇ ತಿಳಿಯುವುದಿಲ್ಲ. ದೇವರು, ಅಧ್ಯಾತ್ಮ, ತತ್ತ್ವಜ್ಞಾನ ಅವರ ಬಳಿಯೂ ಸುಳಿಯುವುದಿಲ್ಲ. ಅವರ ಬುದ್ಧಿಯಲ್ಲಿ ಈ ಕಡೆ ಆಲೂಗಡ್ಡೆ ಹಾಕಿ ಆ ಕಡೆಯಿಂದ ಬಂಗಾರ ತೆಗೆಯುವ ಯಂತ್ರಗಳನ್ನು ಪಡೆಯಬಹುದು ಎಂಬ ಭ್ರಾಮಕ, ಹಾಸ್ಯಾಸ್ಪದ ಮಾತು ಗಳೇ ಬರುತ್ತಿರುತ್ತವೆ.

ಇಂಥವರನ್ನು ನಾನು ಬಾಲ್ಯ ದಲ್ಲೂ ನೋಡಿದ್ದೇನೆ, ಯೌವ್ವನದಲ್ಲೂ ನೋಡಿದ್ದೇನೆ, ಈಗ ಮುಪ್ಪಿಗೂ ಅವರು ಸೊಪ್ಪು ಹಾಕದೇ ತಪ್ಪು ತಪ್ಪು ಮಾತಾಡು ವುದು ಕೇಳಿ ನಕ್ಕಿದ್ದೇನೆ. ಬಳ್ಳಾರಿ, ಹೊಸಪೇಟೆ ಕಡೆ ನಮ್ಮ ಬಂಧುಗಳು ಯಾರಾದರೂ ಸತ್ತರೆ, ತೀರಾ ಅವರ ಸಂಬಂಧಿಕರುಚ ಶೋಕಿಸುವ ಶಾಸ ಮಾಡುತ್ತಾರಾಗಲಿ, ಇನ್ನುಳಿದ ದೂರದ ಸಂಬಂಧಿಗಳು ತಂದೆಯನ್ನೋ, ತಾಯಿ ಯನ್ನೋ ಕಳೆದುಕೊಂಡ ಮಕ್ಕಳು ಈ ಸಂಬಂಧಿಗಳಿಗೆ ಸತ್ತ ವಿಷಯ ತಿಳಿಸಿದರೆ, ಸಂಬಂಧಿಗಳು ಕಾಟಾಚಾರಕ್ಕೆ ‘ಏನಾಗಿತ್ತೇ, ಭೇಷ್ ಇದ್ನಲ್ಲಾ’ ಎಂದು ಲೊಚಗುಟ್ಟಿ ಹಿಂದೆಯೇ ಅವನ ತಿಥಿ ಕರ್ಮಗಳನ್ನೆಲ್ಲ ಪಕ್ಕದ ಹಂಪಿ ಯೊಳಗೆ ಮಾಡಿರಿ, ಯಾಕಂದ್ರೆ ಅಲ್ಲಿ ಕುಂಬಳಕಾಯಿ ಹುಳಿ, ಪಲ್ಯ ಭೇಷ್ ಮಾಡ್ತಾರೆ, ವಡೆ, ಅಂಬೊಡೆ ಕೇಳಿದಷ್ಟು ಹಾಕ್ತಾರೆ, ಆಮೇಲೆ ರವೆ ಉಂಡೆನೂ ಪ್ರಸಾದ ಅಂತೇಳಿ ಎಂಟ್ಹತ್ತು ಕಟ್ಟಿಕೊಡ್ತಾರೆ.

ರಾತ್ರಿ ಕೂಡಾ ಮುದ್ದಿ, ಅನ್ನ, ಬಿಸಿ ಬಿಸಿ ಸಾರು ಬಡಿಸ್ತಾರ, ಉಂಡು ವಿರೂಪಾಕ್ಷ ದೇವರ ಮುಂದಿನ ಬಯಲಿನಲ್ಲಿ ಬಂಡೆಗಳ ಮೇಲೆ ಮಲಗಿದ್ರೆ ಗಡದ್ದು ನಿದ್ದಿ ಆಗ್ತದೆ, ಎಲ್ಲ ಭೇಷ್ ಅದೆ ಅಲ್ಲಿ. ಅಲ್ಲೇ ಮಾಡು ಎಂದು ಎಗ್ಗು, ಸಿಗ್ಗು ಇಲ್ಲದೆ ಹೇಳ್ತಾರೆ. ಇಂಥವ ರಿಗೆ ಬೆಂದು ಬೇಂದ್ರೆ ಆಗೋದೂ ಗೊತ್ತಿಲ್ಲ, ಅಷ್ಟೇ ಏಕೆ ಬೇಂದ್ರೆ ಅಂದ್ರೆನೇ ಗೊತ್ತಿಲ್ಲ. ಅನ್ನ ಬೆಂದರೆ ಎಂಬುದು ಮಾತ್ರ ಗೊತ್ತು. ಹೀಗಾಗಿ ಇಂಥವರ ಮಧ್ಯದ ಮಕ್ಕಳು, ಅಳಿಯಂದಿರು, ಭಾವಂದಿರು ಎಲ್ಲಾ ಸದ್ದಾಮುದ್ದೆ ಗಳೇ. ಹಗಲು ರಾತ್ರಿ ಕೂತಲ್ಲೇ ಓದುವುದು, ಎಕ್ಸಾಮ್ಸ್ ಬರೆದು ಪಾಸಾಗಿ ಕೆ.ಇ.ಬಿ., ಎಲ್.ಐ.ಸಿ., ಬ್ಯಾಂಕ್, ತಾಲೂಕು ಕಚೇರಿ, ಪಿ.ಡಬ್ಲ್ಯೂ.ಡಿ ಗಳಲ್ಲಿ ನೌಕರಿ
ಪಡೆದು ಅಲ್ಲಿನ ಮೇಲಾಽಕಾರಿಗಳ ಮಗಳನ್ನೇ ಮದುವೆಯಾಗಿ, ಕರೆಂಟ್ ಬಿಲ್ ಇಲ್ಲದ ಕ್ವಾಟರ್ಸ್‌ಗಳಲ್ಲಿ ಇಪ್ಪತ್ನಾಲ್ಕು ಗಂಟೆ ಎ.ಸಿ., ಫ್ರಿಡ್ಜ್‌ಗಳಲ್ಲೆ ತಂಪಾಗಿದ್ದು, ಹೊರಗೊಂದು ಪ್ರಪಂಚವಿದೆ ಎಂಬುದನ್ನೇ ಮರೆತು ಬಾಳುವ ಇಂಥ -ಮಿಲಿ ಗಳಿಂದ ಜೀವನಕ್ಕೆ ಏನು ಪಾಠ ಸಿಕ್ಕೀತು ಅಲ್ಲವೇ? ಹೀಗಾಗಿ ಓದುವ ನನ್ನ ಹವ್ಯಾಸದಿಂದ ಪುಸ್ತಕಗಳ ರುಚಿ ಹತ್ತಿ, ವಿಶ್ವವೇ ನನ್ನ ಮುಂದೆ ತೆರೆದುಕೊಂಡಿತು.

ಬದುಕೆಂದರೆ ಬರೀ ಬಟ್ಟೆ ಬರೆಯಲ್ಲ, ಬದುಕೆಂದರೆ ಬರೀ ಸ್ವಂತ ಮನೆ, ಸ್ವಂತ ಕಾರು, ಆ ಕಾರಲ್ಲಿ ಹೋಗಿ ಮನೆ ದೇವರಿಗೆ ಕಾಯಿ ಒಡೆಸಿಕೊಂಡು, ಒಂದನ್ನೂ ಪೂಜಾರಿಗೂ ಬಿಡದೇ ಎರಡೂ ಹೋಳು ತೆಗೆದುಕೊಂಡು ಬರುವುದಲ್ಲ, ಸ್ವಂತದೆಂಬುದನ್ನು ಪರರಿಗೆ ಕೊಟ್ಟಷ್ಟೂ ಬೆಳೆಯುತ್ತದೆಂಬ ಭಾವನೆಯನ್ನು ಇತರರಿಗಲ್ಲದೇ ತಮಗೂ ತಮ್ಮ ಮಕ್ಕಳಿಗೂ ಕಲಿಸುವುದು. ಮಾಸ್ಟರ್ ಹಿರಣ್ಣಯ್ಯ ಜೀವನ ಚರಿತ್ರೆಯಲ್ಲಿ ಅವರ ತಂದೆ ಹಿರಣ್ಣಯ್ಯರಿಂದ ಹಿಡಿದು, ನಾವೆಲ್ಲ ನೋಡಿದ ನರಸಿಂಹಮೂರ್ತಿ ಮಾಸ್ಟರ್ ಹಿರಣ್ಣಯ್ಯರವರೆಗೆ ಬಂದ ಅವರ ವೃತ್ತಿ ನಾಟಕಗಳನ್ನಾಡುವುದು.

ಕೇವಲ ತಂದೆಯಿಂದ ಮಗನಿಗೆ ಬಂದ ಸರಕಾರಿ ನೌಕರಿಯಾಗಿರಲಿಲ್ಲ. ಮಗನ ಜತೆ ಜತೆಗೆ ನಲವತ್ತು, ಐವತ್ತು ಮಂದಿ ಬದುಕುವ ವೃತ್ತಿ ಯೆಂಬುದು ಅದು ಕಲೆಯ ರೂಪದಲ್ಲಿತ್ತು. ಮುಸುರಿ ಕೃಷ್ಣಮೂರ್ತಿ, ಮುನಿರಂಗಪ್ಪ, ಯೋಗಾ ನರಸಿಂಹ, ಪ್ರಭಾಕರ ಶಾಸಿ, ಸುಭದ್ರಮ್ಮ, ಲಲಿತಮ್ಮ ಮುಂತಾದ ಕಲಾವಿದರೆಲ್ಲ ಸುತ್ತಿದ ಊರುಗಳು, ಪಟ್ಟ ಬವಣೆಗಳು, ಆದ ಅವಮಾನಗಳು ಎಲ್ಲವೂ ನಾನೀಗ ನನ್ನ ಹಾಸ್ಯ ಸಂಜೆ ಗಳಿಗಾಗಿ ತಂಡ ಕಟ್ಟಿಕೊಂಡು ಸುತ್ತುವುದನ್ನೇ ನೆನಪಿಸುತ್ತವೆ.

ನಾನಿನ್ನೂ ಹುಟ್ಟದೇ ಇರುವಾಗಲೇ 1950-1956 ಇಸವಿಗಳಲ್ಲಿನ ಕೆಲ ಊರುಗಳ ವರ್ಣನೆ, ಅಲ್ಲಿನ ಜನರ ರಸಿಕತೆ, ಅವರ ಧಾರಾಳತನಗಳು ನನಗೆ ಈಗಲೂ ಅವೇ ಕಂಡುಬರುತ್ತಿರುವುದರಿಂದ ‘ನೆಲದ ಬಣ್ಣವೆ ನೀರಿಗೆ ಬರುತ್ತದೆ, ನೀರಿನ ಗುಣದಿಂದ ಜನರ ಸ್ವಭಾವ ರೂಪು ಗೊಳ್ಳುತ್ತದೆ’ ಎನಿಸುತ್ತಿದೆ. 1970 -1980ರ ದಶಕದಲ್ಲಿ ಸಿನಿಮಾ – ನಾಟಕಗಳದ್ದೇ ಸಾಮ್ರಾಜ್ಯ.
ಬೆಂಗಳೂರು, ಮೈಸೂರುಗಳನ್ನು ಸಿನಿಮಾ ಆಕ್ರಮಿಸಿದ್ದರೆ, ನಮ್ಮ ಉತ್ತರ ಕರ್ನಾಟಕವನ್ನು ನಾಟಕಗಳು ಸೆರೆಹಿಡಿದಿದ್ದವು. ಆಗೆಲ್ಲ ಊರಲ್ಲಿ ಎರೆಡೆರೆಡು ನಾಟಕ ಕಂಪನಿಗಳಿರುತ್ತಿದ್ದವು.

ಸಿನಿಮಾಕ್ಕೆಂದು ಒಳಹೋಗಿ ಕೂತು ಅರ್ಧ ಸಿನಿಮಾ ನೋಡಿ ‘ಏ. ನಡಿಯಲೇ.. ಈ ಸಿನಿಮಾದಾಗೆ ಏನೂ ಇಲ್ಲ. ನಾಟಕಕ್ಕೆ ಹೋಗೋಣ ನಡಿ’ ಎಂದು ಅರ್ಧಕ್ಕೆ ಸಿನಿಮಾ ಟಾಕೀಸ್‌ನಿಂದ ಹೊರ ಬಂದು ರಾತ್ರಿ ಎರಡರವರೆಗೆ ನಡೆಯುತ್ತಿದ್ದ ನಾಟಕದ ತಟ್ಟಿ ಥೇಟರ್‌ನೊಳಗೆ ನುಗ್ಗುತ್ತಿದ್ದೆವು.

ಆಗೆಲ್ಲ ನಮ್ಮ ಗಂಗಾವತಿಯಲ್ಲಿ ಜಂಬುನಾಥ ನಾಟ್ಯ ಮಂದಿರವೆಂಬುದೊಂದು ಇತ್ತು. (ಈಗಿನ ಚಿನಿವಾಲರ ಆಸ್ಪತ್ರೆ ಇರುವ ಜಾಗ) ಅಲ್ಲಿಗೆ ಗುಡಗೇರಿ, ಕಡಪಟ್ಟಿ, ಅರಷಣಗಿ, ರಾಮರಾವ ದೇಸಾಯವರ ಗೌಡ್ರ ಗದ್ಲ ನಾಟಕ ಕಂಪನಿಗಳು ಒಂದಲ್ಲಾ ಒಂದು ಖಾಯಂ ಇರುತ್ತಿದ್ದವು. ನಾವು ಭರ್ತಿ ಪಿ.ಯು.ಸಿ., ಡಿಗ್ರಿ ವಿದ್ಯಾರ್ಥಿಗಳು ಆಗ. ನನಗೋ ಸಿನಿಮಾ, ನಾಟಕಗಳ ಆಕರ್ಷಣೆ. ನಾನು ಮತ್ತು ನನ್ನ ಗೆಳೆಯ ಶರದ್ ದಂಡಿನ್ ಹಗಲು ಹೊತ್ತಲ್ಲೇ ನಾಟಕದ ಥೇಟರ್ ಹತ್ತಿರ ಹೋಗಿ ಗೇಟಿನವನನ್ನು ಕೇಳಿ, ಒಳಹೋಗಿ ಖಾಲಿ ಕುರ್ಚಿಗಳ ಮೇಲೆ ಕೂತು, ಪರದೆ ಇಳಿಬಿಟ್ಟ ವೇದಿಕೆಯನ್ನೇ ನೋಡುತ್ತಾ ಕೂತುಬರುತ್ತಿದ್ದೆವು.

ಮಾಸ್ಟರ್ ಹಿರಣ್ಣಯ್ಯರ ಕಂಪನಿಯೂ ನಮ್ಮ ಊರಲ್ಲಿ ನಾಟಕ ಆಡಿತು. ಡ್ಯಾನ್ಸ್, ಹಾಡು, ಬಾಟಲಿ ಬಾರಿಸೋದು ಇಲ್ಲದೇ ಬರೀ
ಮಾತುಗಳಲ್ಲೇ ಮುಗಿಯುತ್ತಿದ್ದ ನಾಟಕ, ರಾಜಕೀಯ ವಿಶ್ಲೇಷಣೆ ತಿಳಿಯದ ವಯಸ್ಸು ನನ್ನದಾಗ. ಆಗ ಅವರ ‘ದೇವದಾಸಿ’ ಸಿನಿಮಾ ಕೂಡಾ ರಿಲೀಸ್ ಆಗಿದ್ದು, ಅದನ್ನು ನೋಡಿದ್ದ ನಾನು ಅದರಲ್ಲಿನ ಅವರ ಒಂದು ಹಾಡು ‘ಸುಖವೀವ ಸುರಪಾನವಿದೆ ಸ್ವರ್ಗ ಸಮಾನಂ’ ಹಾಡಿನ ಸಾಹಿತ್ಯ ಮೆಚ್ಚಿ ಅವರನ್ನು ಅವರಿಳಿದುಕೊಂಡಿದ್ದ ನಮ್ಮ ಗಂಗಾವತಿಯ ’ಶಿರಿಗೇರಿ ಟೂರಿಸ್ಟ್ ಹೋಂ’ ಹೋಟಲ್ಲಿನ ರೂಮಿನಲ್ಲಿ ಭೇಟಿಯಾಗಿ ಅವರಿಗೆ ಅಭಿನಂದನೆ ಹೇಳಿ ಆಟೋಗ್ರಾಫ್ ಪಡೆದಿದ್ದೆ.

ಮುಂದೆ ಇಪ್ಪತ್ತು ವರ್ಷಗಳ ಮೇಲೆ ಅವರ ಜತೆ ಒಂದೇ ವೇದಿಕೆಯಲ್ಲಿ ಕೂತು ಭಾಷಣ ಮಾಡುವ ಯೋಗವೇ ಬಂತು. ತುಮಕೂರು, ಬೆಂಗಳೂರು ಕಾರ್ಯಕ್ರಮಗಳಲ್ಲಿ ಉದಯ ಟಿ.ವಿ.ಯ ಹರಟೆ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಲ ಜತೆಯಾದಿವಿ,
ಅವರ ಸಾವಿನ ಕೆಲವು ತಿಂಗಳ ಮುಂಚೆ ಅವರ ಮನೆಗೂ ಹೋಗಿ ಅವರನ್ನ ಭೇಟಿಯಾಗಿ ಬಂದೆ. ‘ನಮ್ಮ ಮನಿಗೆ ನಮ್ಮ ಮರೀ ಬೀಚಿ ಬಂದಾನೆ’ ಎಂದು ಸಂಭ್ರಮಿಸಿದ್ದರು. ನಮ್ಮ ಮಧ್ಯೆ ಕೊನೆಕೊನೆಗೆ ಅವರು ನನ್ನನ್ನು ಹೆಸರು ಹಿಡಿದು ಗುರುತಿಸುವಷ್ಟು ಕರೆಯುವಷ್ಟು ಸ್ನೇಹವಾಗಿತ್ತು.

ಈಗ ಅವರ ‘ನನ್ನ ಕಥೆ ಹೇಳ್ತಿನಿ’ ಪುಸ್ತಕ ಓದುತ್ತಿರುವಾಗ ಅದೆಂಥಾ ದಾರಿ ಸಾಗಿ ಬಂದ, ಎಷ್ಟೋ ಜನರನ್ನು ಕಂಡು ಬಂದಿದ್ದ ವ್ಯಕ್ತಿಯಿದ್ದರು ಎನಿಸುತ್ತಿದೆ. ಮೈಸೂರು ಮಹಾರಾಜರು, ವರದಳ್ಳಿ ಶ್ರೀಧರ ಸ್ವಾಮಿಗಳು, ಮಂತ್ರಾಲಯದ ರಾಯರ ಅನುಗ್ರಹ ವಾದದ್ದು ಎಲ್ಲ ಓದುತ್ತಿದ್ದಂತೆ, ಇವರಿಗೆ ಸಿಕ್ಕಂತಹ ಜನ ಸಹೃದಯರು ಈಗಿಲ್ಲ ಎನಿಸುತ್ತದೆ. ಆಗ ಕಲಾವಿದರನ್ನು ಬೆಳೆಸುವ ಜನರಿದ್ದರು. ಈಗ ಕಲಾವಿದರನ್ನು ಬಳಸಿಕೊಂಡು ತಾವು ಹೇಗೆ ಬೆಳೆಯಬೇಕು, ತಮ್ಮ ಪ್ರಾಡಕ್ಟ್‌ಗಳನ್ನು ಹೇಗೆ ಮಾರಿಕೊಳ್ಳಬೇಕು ಎಂದು ಯೋಚಿಸುವವರೇ ಹೆಚ್ಚಿದ್ದಾರೆ.

ನಾವೂ ಮಾತಾಡೋದನ್ನ ಕೇಳಿ ಎಂದು ನಮ್ಮ ಮುಂದೆಯೇ ನಮ್ಮ ಜೋಕ್ ಹೇಳ್ತಾರೆ. ಹಿರಣ್ಣಯ್ಯರ ಈ ಆತ್ಮಚರಿತ್ರೆ ಕಲಾವಿದರಿಗೆಲ್ಲ ಮಾರ್ಗದರ್ಶಿ ಯಾಗಿದೆ. ನೆಹರೂ, ಗಾಂಧಿ ಯಾದಿಯಾಗಿ ರಾಜಕಾರಣಿಗಳು ಮಾತ್ರ ಆತ್ಮಚರಿತ್ರೆ ಬರೆಯಬೇಕು. ಅದೂ ಜೈಲಿನಲ್ಲಿದ್ದಾಗ ಮಾತ್ರ ಎನ್ನುವುದು ಹೋಗಿ, ಕಲಾವಿದರು, ನಟ – ನಟಿಯರು ಅದರಲ್ಲೂ ನೋವು ನುಂಗಿ ನಗಿಸಿದ ಚಾಪ್ಲೀನ್, ನರಸಿಂಹರಾಜು, ಅವರುಗಳು ಅನುಭಸಿದ ದಿನಚರಿಯನ್ನೂ ಬರೆದಿಡುವ ಈ ಬದಲಾವಣೆಗೆ ಸಂತೋಷವೆನಿಸುತ್ತಿದೆ. ಮರಾಠಿಯ ‘ಉಚಲ್ಯಾ’ ಎನ್ನುವ ಆತ್ಮಕಥೆಯಂತೂ ಅಮೋಘವಾಗಿದೆ.

ನನ್ನ ವಿದ್ಯಾರ್ಥಿ ದೆಸೆಯ ದಿನಗಳಲ್ಲಿ ನಾವು ಗಂಗಾವತಿ ಯಿಂದ ಊರಿನ ಮಧ್ಯಭಾಗದ ಉಪ್ಪಾರ ಓಣಿಯಲ್ಲಿ ಇರುತ್ತಿದ್ದೆವು. ಆ
ಓಣಿಯಲ್ಲಿ ಮನೆ ಕಟ್ಟುವ ಉಪ್ಪಾರರ ಬಡ ಕುಟುಂಬಗಳಿದ್ದವು. ಅವರ ಮಕ್ಕಳೇ ನನ್ನ ಸ್ನೇಹಿತರಾಗಿರು ತ್ತಿದ್ದರು. ಅಲ್ಲಿ ಕಡಿಮೆ ರೇಟಿಗೆ ಬಾಡಿಗೆ ಮನೆಗಳು ಸಿಗುತ್ತಿದ್ದವು. ನಮ್ಮ ಊರಿಗೆ ಬರುವ ನಾಟಕ ಕಂಪನಿಗಳ ನಟರು, ಕಲಾವಿದರು ಆ ನಮ್ಮ ಓಣಿಯಲ್ಲೇ ಮನೆ ಮಾಡಿರುತ್ತಿದ್ದರು. ರಾತ್ರಿಯೆಲ್ಲ ನಾಟಕವಾಡಿ, ಹಗಲೆಲ್ಲ ನಿದ್ರಿಸುತ್ತಿದ್ದರು. ಮಧ್ಯಾಹ್ನ ಒಂದು –  ಒಂದೂವರೆ ಸುಮಾರಿಗೆ ಟಿಫಿನ್ ಕ್ಯಾರಿಯರ್ ಹಿಡಿದು ಆ ಕಲಾವಿದರು ನಾಟಕದ ಬೋರ್ಡಿಂಗ್ ಮನೆಗೆ ಹೋಗಿ ತಮಗೂ ತಮ್ಮ ಹೆಂಡತಿಗೂ ಊಟ ತರುತ್ತಿದ್ದರು.

ನಿದ್ದೆ ಇಲ್ಲದೇ ಊದಿಕೊಂಡ ಅವರ ಮುಖ, ಕೆಂಪಾದ ಕಣ್ಣುಗಳು, ಕಿವಿಯ ಬಳಿ ಹತ್ತಿರವಿರುತ್ತಿದ್ದ ಅವರು ರಾತ್ರಿ ಬಳಿದ ಬಣ್ಣ ನೋಡುತ್ತಾ, ಎಂಥ ಪುಣ್ಯವಂತರಿವರು, ಎಷ್ಟು ಮಂದಿ ಯನ್ನು ನಗಿಸುತ್ತಾರೆ. ರಾತ್ರಿಯೆಲ್ಲ ಓದುತ್ತಿದ್ದ ನಮಗೆ, ರಾತ್ರಿಯಲ್ಲಿ
ಜನರನ್ನು ನಗಿಸುವ ಕಾಯಕ ಮಾಡುತ್ತಾರಲ್ಲ ಎನಿಸುತ್ತಿತ್ತು. ಹಗಲು ಹೊತ್ತಲ್ಲಿ ಅವರನ್ನು ನೋಡುತ್ತಿದ್ದೆ ವಾಗಲಿ, ರಾತ್ರಿ ಅವರ ನಾಟಕ ನೋಡಲು ಎರಡು ರುಪಾಯಿ ಇರುತ್ತಿದ್ದಿಲ್ಲ, ನಮ್ಮಪ್ಪನಿಗೆ ನಾಟಕ, ಸಿನಿಮಾ ಎಂದರೆ ಅಲರ್ಜಿ. ಛೊಲೋ ಓದಿ ಸರಕಾರಿ ನೌಕರಿ ಹಿಡೀರಿ ಎನ್ನುತ್ತಿದ್ದ.

ಸಂಜೆ 7ಕ್ಕೆಲ್ಲ ರಾತ್ರಿ ಊಟ ಮುಗಿಸಿ ನಾವು ಕಂಡವರ ಮನೆ, ಕಂಡವರ ಕಟ್ಟೆಗಳಿಗೆ ಮಲಗಲು ಹೋಗಬೇಕಿತ್ತು. ಲೈಟು
ಇರುವವರ ಮನೆಯ ಮಾಳಿಗೆ ಮೇಲೆ ಅವರನ್ನು ಕೈ ಮುಗಿದು ಬೇಡಿ, ಅವರ ಬೆಳಕಿಂಡಿ ಯಿಂದ ವೈರು ಎಳೆದುಕೊಂಡು ಒಂದು
ಬೊಂಬಿಗೆ ಅವರತ್ತು ಕ್ಯಾಂಡಲ್ ಬಲ್ಬ್ ಇಳಿಬಿಟ್ಟು ನಾನು, ಶರದ್, ಸಂಗಮೇಶ ಅರಳಿ, ಪಂಪಾಪತಿ ಎಲಿಗಾರ್, ರಾಘವೇಂದ್ರ ಹಬ್ಬು ಸುತ್ತಲೂ ಓದುತ್ತಾ ಕೂಡುತ್ತಿದ್ದೆವು. ಹಾಗೆ ಕೂತಾಗ 9-30ಕ್ಕೆ ನಾಟಕ ಶುರುವಾದ ನಾಂದಿ ಹಾಡು, ಹಾರ್ಮೋನಿಯಂ ವಾದನ, ತಬಲಾಗಳ ಸದ್ದು ಕೇಳಿ ಮೈ ನರೇಳುತ್ತಿತ್ತು.

ಮೊದಲು ಸೀನು ಆರಂಭವಾಗಿ ಖಳನಾಯಕನ ನಗು ಅಲೆ ಅಲೆಯಾಗಿ ತೇಲುತ್ತಿದ್ದರೆ, ಕಿವಿಗೆ ಬೀಳುತ್ತಿದ್ದರೆ, ಈ ಪರೀಕ್ಷೆ, ಪುಸ್ತಕ ಗಳನ್ನು ಸುಡುವಷ್ಟು ಕೋಪ ಬರುತ್ತಿತ್ತು. ಹೀಗೆಯೇ ನಾನೊಮ್ಮೆ ನಮ್ಮ ಊರಿಗೆ ಸಿನಿಮಾ ನಟಿ ಉದಯ ಚಂದ್ರಿಕಾಳ ನೃತ್ಯ ಪ್ರದರ್ಶನ ಬಂದಾಗ ಟಾಂಗಾದಲ್ಲಿ ಕುಳಿತು ಮೈಕ್‌ನಲ್ಲಿ ಉದಯಚಂದ್ರಿಕಾಳ ನಾಟ್ಯ ನೋಡಲು ಮರೆಯದಿರಿ ಎಂದು ಪ್ರಚಾರ ಮಾಡಿದ್ದೆ. ಹೀಗೆ ಹಿರಣ್ಣಯ್ಯನವರ ಆತ್ಮ ಚರಿತ್ರೆ ‘ನನ್ನ ಕಥೆ ಹೇಳ್ತೀನಿ ಕೇಳಿ’ ಓದುತ್ತಿದ್ದಾಗ ಅವರು ನಮ್ಮೂರಿಗೆ ಬಂದಾಗ ನಾನಿದ್ದ ಆ ಪರಿಸ್ಥಿತಿಯ ನೆನಪಾಯಿತು.

ಆತ್ಮಚರಿತ್ರೆಗಳು ನಮ್ಮ ಆತ್ಮಗಳನ್ನು ಕೆದಕಿ, ಬೆದಕುವುದೇ ಹೀಗೆ. ದೇಹಗಳಷ್ಟೇ ಬೇರೆ ಬೇರೆ, ಆತ್ಮ ಒಂದೇ ಅಲ್ಲವೇ?