Friday, 15th November 2024

ಪೂಜಿಸುವ ಆಕಳೆಂಬ ಪ್ರಾಣಿಯ ಬಗ್ಗೆ ನಮಗೆಷ್ಟು ಗೊತ್ತು ?

ಶಿಶಿರ ಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಅ – ಅಮ್ಮ. ಆ – ಆಕಳು. ಹೀಗೆ ಶುರುವಾಗುತ್ತದೆ ನಮ್ಮ ಅಕ್ಷರ ಮಾಲೆಯ ಕಲಿಕೆ. ಅ – ಅರಸ, ಆ – ಆನೆ ಎನ್ನುವ ಬಳಕೆಯೇ
ಜಾಸ್ತಿ. ಹೀಗೆ ಆಕಳನ್ನು ಬಳಸದೇ ಆನೆಯನ್ನೇ ಬಳಸುವುದೇಕೆ ಎಂದು ಹುಡುಕಿ ಹೊರಟರೆ ಅದಕ್ಕೂ ಒಂದು ಕಾರಣ ಸಿಗಬಹುದೇನೋ.

ಎಲ್ಲದರ ಹಿಂದೆಯೂ ಒಂದು ಕೊನ್ಸ್ಪಿರೇಸಿ ಸಿಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈಗೀಗ ತೀರಾ ಮುಗ್ಧೆವೆನ್ನುವ ವಿಚಾರ ಕೂಡ ಕೆದಕಿ ನೋಡಿದಾಗ ಅದರ ಹಿನ್ನೆಲೆ ಯಂದು ಅವಾಸ್ತವಿಕ ಕೆಟ್ಟ ಉದ್ದೇಶ ಧುತ್ತನೆ ಎದುರಿಗೆ ಬಂದುಬಿಡುತ್ತದೆ. ಆದರೆ ಸ್ಥಾನದ ಮಟ್ಟಿಗೆ ಹೇಳುವುದಾದರೆ ನಮ್ಮಲ್ಲಿ ಅಮ್ಮ ಮತ್ತು ಆಕಳ ನಂತರದ ಸ್ಥಾನ ಆಳುವ ಅರಸನಿಗೆ.

ಅಮ್ಮನ ನಂತರದ ತಾಯಿಯ ಸ್ಥಾನ ನಮ್ಮಲ್ಲಿ ಆಕಳಿಗೆ. ಆಕಳಲ್ಲಿ ಇರುವ ಮುಕ್ಕೋಟಿ ದೇವರು ಅದೆಲ್ಲ ಎಲ್ಲರಿಗೂ ತಿಳಿದಿದೆ ಯೆಂದುಕೊಂಡ ವಿಷಯ. ಮಾನಸಿಕ ವಾಗಿ ಮತ್ತು ಧಾರ್ಮಿಕವಾಗಿ ನಾವು ಆಕಳಿಗೆ ಕೊಟ್ಟ ಸ್ಥಾನದ ಬಗ್ಗೆ ಮತ್ತೆ ವಿವರಿಸಿದಲ್ಲಿ ಹಾಡಿದ್ದೇ ಹಾಡಿದ ಹಾಗಾಗುತ್ತದೆ. ನಿಮ್ಮ ಮುಂದೆ ಪುನಃ ಅದೆಲ್ಲವನ್ನು ಪ್ರಸ್ತಾಪಿಸಿ ಕಿಸುಬಾಯಿಯ ದಾಸ ಆಗುವುದಿಲ್ಲ ಬಿಡಿ.

ನನಗೆ ಈಗೀಗ ಆಕಳು, ಮಹಾಭಾರತ, ಭಗವದ್ಗೀತೆ ಹೀಗೆ ನಮಗೆಲ್ಲ ಭಾವನಾತ್ಮಕವಾಗಿ ಮತ್ತು ಧಾರ್ಮಿಕವಾಗಿ ಆಪ್ತವಾಗುವ ಕೆಲವು ವಿಚಾರಗಳೆಡೆಗೆ ನಮ್ಮ ಕ್ರಿಯೆ – ಪ್ರತಿಕ್ರಿಯೆಯಲ್ಲಿ ಒಂದು ಸಾಮ್ಯತೆಯಿದೆ ಎಂದೆನಿಸ ತೊಡಗಿದೆ. ನಾವು ಈ ಯಾವುದೇ ಒಂದರ ವಿರುದ್ಧ ಯಾರೇ ಅಭಾಸ ಮಾತನಾಡಿದರೂ ತಕ್ಷಣ ಉರಿದು ಬೀಳುತ್ತೇವೆ. ಆಯುಧ ಹಿಡಿಯುವ ಮಟ್ಟಿಗೆ ತಯಾರಾಗಿ ನಿಂತುಬಿಡುತ್ತೇವೆ. ಆದರೆ ಇವೆಲ್ಲದರ ಬಗ್ಗೆ ಎಷ್ಟು ಗೊತ್ತು ಎಂದು ಕೇಳಿದರೆ ಬೆಪ್ಪನಂತೆ ನಿಲ್ಲುವ ಸ್ಥಿತಿ ನಮ್ಮಲ್ಲಿದೆ.

ಮಹಾಭಾರತ ಮತ್ತು ಭಗವದ್ಗೀತೆ ನಮ್ಮಲ್ಲಿ ಎಷ್ಟು ಮಂದಿ ಅರ್ಥ ಮಾಡಿಕೊಂಡವರಿದ್ದೇವೆ? ಭಗವದ್ಗೀತೆ ಎಂದು ಹೇಳಿದಾಕ್ಷಣ ಪವಿತ್ರ, ಪರಮೋಚ್ಚ ಎಂದೆಲ್ಲ ಹೇಳುವ, ಜಗತ್ತಿನ ಎಲ್ಲ ವಿಚಾರಗಳೂ ಇದರಲ್ಲಿಯೇ ಅಡಕವಾಗಿದೆ ಎಂದು ಉದ್ದುದ್ದ ಭಾಷಣ ಬಿಗಿಯಲು ನಿಲ್ಲುವ ನಮ್ಮಲ್ಲಿ ಎಷ್ಟು ಮಂದಿಗೆ ಭಗವದ್ಗೀತೆಯಲ್ಲಿ ಹದಿನೆಂಟು ಅಧ್ಯಾಯವಿದೆ ಎನ್ನುವ ತಿಳಿವಳಿಕೆಯ ಆಚೆ ಎಷ್ಟು ಗೊತ್ತು? ‘ಕರ್ಮಣ್ಯೇ ವಾಧಿಕಾರಸ್ಥೆ’ ಎನ್ನುವ ಮಾತನ್ನು ಆಗೀಗ ಹೇಳಿ ಕೇಳಿ ಗೊತ್ತೇ ವಿನಃ ಅದರ ಗೂಡಾರ್ಥ ಎಷ್ಟು ಮಂದಿ ಬಲ್ಲರು? ಅಸಲಿಗೆ ಆ ಶ್ಲೋಕದ ಎರಡನೆಯ ಭಾಗ ಗೊತ್ತಿಲ್ಲದವರೇ ನಮ್ಮಲ್ಲಿ ಜಾಸ್ತಿ.

ಮೊನ್ನೆ ಮಾತು ಮಾತಿಗೆ ಸ್ನೇಹಿತನೊಬ್ಬ ಕರ್ಮಣ್ಯೇ ವಾಽಕಾರಸ್ಥೆ – ನಮ್ಮ ಕೆಲಸ ನಾವು ಮಾಡೋದು ಎಂದು ಯಾವುದೋ ಒಂದು ಕಾರಣಕ್ಕೆ ಮಾತಿಗೆ ಬಳಸಿದಾಗ ಕಿಚಾಯಿಸಲು ಹಾಗಾದರೆ ಪ್ರತಿಫಲಾಪೇಕ್ಷೆಯಿಲ್ಲದೇ ಎಲ್ಲ ಕೆಲಸ ಮಾಡಬೇಕೆ? ಬದುಕೇ ಕರ್ಮವೇ – ಫಲವನ್ನು ಅಪೇಕ್ಷಿಸದಷ್ಟು ವೈರಾಗ್ಯದಿಂದ ಬದುಕಬೇಕು ಎಂದದ್ದೇ ಕೃಷ್ಣ ಎಂದು ನಾಲ್ಕಾರು ಪ್ರಶ್ನೆ ಕೇಳಿದಾಗ ತಬ್ಬಿಬ್ಬಾದರು.

ಸ್ನೇಹಿತನಿಗೆ ಆ ವಾಕ್ಯದ ಹಿಂದೆ ಮುಂದೆ ಗೊತ್ತಿರಲಿಲ್ಲ. ಅದೆಲ್ಲ ಪರೀಕ್ಷೆಗಿಂತ ಕಾಲೆಳೆಯಲೆಂದೇ ಕೇಳಿದ ಪ್ರಶ್ನೆಗಳು. ಆದರೆ ಇದು ಇಂದಿನ ನಮ್ಮ ವಾಸ್ತವ. ನಮ್ಮಲ್ಲಿ ಭಗವದ್ಗೀತೆ ಎನ್ನುವ ಹೆಸರಿನ ಆಚೆ ಅದರ ಅರಿವಿಲ್ಲದವರೇ ಜಾಸ್ತಿ. ಸೋಷಿಯಲ್
ಮೀಡಿಯಾದಲ್ಲಿ ಹೋರಾಟ – ಧಾರ್ಮಿಕ ಅಪಮಾನ ಎಂಬಿತ್ಯಾದಿ ಬೇಕಾ ಬಿಟ್ಟಿ ಕಾಮೆಂಟ್ ಬರೆಯುತ್ತ – ಅದರ ವಿರುದ್ಧ ಮಾತನಾಡಿದವರ ವಿರುದ್ಧ (ಅ)ಸಂಸ್ಕೃತದಲ್ಲಿ, ಸಂಸ್ಕಾರ ವಿಹೀನ ರೀತಿಯಲ್ಲಿ ಬೈಯ್ಯುವ ವರಲ್ಲಿ ಹೆಚ್ಚಿನವರಿಗೆ ತಾರ್ಕಿಕ ಉತ್ತರ ಕೊಡಲು ಗೊತ್ತಿಲ್ಲ. ನೀವೇ ನೋಡಿ – ಅವರ‍್ಯಾರೂ ವೈಚಾರಿಕ ಹಿನ್ನೆಲೆಯಲ್ಲಿ ಉತ್ತರ ಕೊಟ್ಟು ಯಾವೊಂದು
ವಿಚಾರವನ್ನು ಸಮಂಜಸವಾಗಿ ವಿರೋಧಿಸುವುದೇ ಇಲ್ಲ.

ಏಕೆಂದರೆ ಅವರಿಗೆ ಅಸಲಿ ತರ್ಕಕ್ಕೆ ಬೇಕಾಗುವಷ್ಟು ಗೊತ್ತಿರುವುದೇ ಇಲ್ಲ. ಗಟ್ಟಿ – ಭಗವದ್ಗೀತೆಯ ಯಾವುದಾದರೂ ಒಂದು ಸಾಲಿನ ಸಾರ ಏನು ಎಂದು ಕೇಳಿದರೆ ಭಗವದ್ಗೀತೆ ಓದುವ ಪುರಸೊತ್ತೆಲ್ಲಿ ಎನ್ನುವ ಹಾರಿಕೆಯ ಉತ್ತರ ಸಿಗಬಹುದು. ಇಲ್ಲವೇ ನನ್ನದೇನು ಭಗವದ್ಗೀತೆ ಓದುವ ವಯಸ್ಸೇ ಎನ್ನುವ ಉಡಾ-ಯ ಉತ್ತರ ಬರಬಹುದು. ಹಾಗಂತ ಭಾವನಾತ್ಮಕವಾಗಿ ಧರ್ಮಗ್ರಂಥದ ಮೇಲೆ ಪ್ರೀತಿ ಇರುವುದು ತಪ್ಪು ಎಂದೇನಲ್ಲ – ಇರಲೇ ಬೇಕು. ಅಥವಾ ಅರ್ಥ ಗೊತ್ತಿದ್ದವರಷ್ಟೇ ಮಾತನಾಡಬೇಕು ಎನ್ನುವುದು ಕೂಡ ನನ್ನ ವಾದವಲ್ಲ.

ಆದರೆ ನಮ್ಮ ಧಾರ್ಮಿಕ ಗ್ರಂಥಗಳನ್ನು ಹೊತ್ತುಕೊಂಡು ಬರುವ ಹೆಚ್ಚಿನವರಲ್ಲಿ ಅದರಲ್ಲೇನಿದೆ ಎಂದು ತಿಳಿದುಕೊಳ್ಳುವ ಎಂಟಾಣೆ ಶ್ರದ್ಧೆ, ಇಚ್ಛೆ, ದರ್ದು ಇರುವುದಿಲ್ಲ ಎನ್ನುವುದಂತೂ ಸತ್ಯ. ಅದು ವಿಪರ್ಯಾಸ ಅಲ್ಲದೇ ಇನ್ನೇನು? ಇಂದು
ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎನ್ನುವ ನೂರಕ್ಕೆ ತೊಂಬತ್ತೊಂಬತ್ತರಷ್ಟು ಮಂದಿಗೆ ಅಸಲಿಗೆ ಇರಲೇ ಬೇಕಾದ ಭಾವನೆಯ ಹಿನ್ನೆಲೆಯ ಕನಿಷ್ಠ ಜ್ಞಾನವಿರುವುದಿಲ್ಲ. ಹಾಗಾಗಿ ಅಲ್ಲಿರುವ ಭಾವನೆಯೇ ಜೊಳ್ಳು ಎಂದೆನಿಸಿಬಿಡುತ್ತದೆ. ಈ ರೀತಿಯ ಹೆಚ್ಚಿನ ಮೂಲ ಪ್ರಶ್ನೆಗಳಿಗೆ ಸಾಮಾನ್ಯರಲ್ಲಿ ಉತ್ತರವಿಲ್ಲದಿದ್ದಾಗ ಭಗವತ್ ಭಾವನೆಯನ್ನೇ ಪ್ರಶ್ನಿಸುವ ಮೂರು ಕಾಸಿನ ಭಗವಾನ್‌ಗಳು ಹುಟ್ಟಿಕೊಳ್ಳುತ್ತಾರೆ – ಅದನ್ನು ವಿರೋಧಿಸಲು ನಾವು ಬೈಗುಳ ಭಾಷಾ ಜ್ಞಾನವನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಇದು ಭಗವದ್ಗೀತೆಯ ಕಥೆಯಾಯಿತು.

ಬಿಡಿ. ಆದರೆ ಭಗವತ್ ಗೋವಳನ ಪ್ರೀತಿಯ ಸಾಕುಪ್ರಾಣಿಯಾದ, ಕಾಮಧೇನು ಎಂದೇ ನಾವು ಪೂಜಿಸುವ ಆಕಳು ಎನ್ನುವ ಪ್ರಾಣಿಯ ಬಗ್ಗೆ ನಮಗೆಷ್ಟು ಗೊತ್ತು? ಗೋವಿನ ಬಗ್ಗೆ, ಗೋ ಹತ್ಯೆಯ ಬಗ್ಗೆ ಇತ್ತೀಚೆಗೆ ಎಲ್ಲಿಲ್ಲದ ಜಾಗ್ರತೆ ಸಮಾಜದಲ್ಲಿ ಉಂಟಾಗಿದೆ. ಅದು ಸ್ವಾಗತಾರ್ಹ ಮತ್ತು ಅವಶ್ಯಕ ಎನ್ನುವುದ ರಲ್ಲಿ ಎರಡನೇ ಮಾತಿಲ್ಲ. ಆದರೆ ನಮಗೆ ಗೋ ಮಾತೆಯ ಬಗ್ಗೆ ಎಷ್ಟು ಗೊತ್ತು ಎಂದು ಕೇಳಿದರೆ ಅದು ಕೂಡ ಭಗವದ್ಗೀತೆಯಷ್ಟೇ ಎಂಬಂತಾಗಿಬಿಟ್ಟಿದೆ. ಆಕಳು ಕೇವಲ ಹಾಲಿಗಾಗಿ ಸಾಕುವ
ಪ್ರಾಣಿ ಅಥವಾ ಗೋಮೂತ್ರ ಅಥವಾ ಗೋಮಯಕ್ಕೆ ಬೇಕಾಗಿ ಅಷ್ಟೇ ಸಾಕುವ ಪ್ರಾಣಿ ಅಲ್ಲವಲ್ಲ. ಹಾಲು ಒಂದೇ ಆಕಳ ಪೂಜನೀಯ ಸ್ಥಾನಕ್ಕೆ ಕಾರಣವಾಗಿದ್ದರೆ ಆಡು ಕುರಿಗಳಿಗೆ ಕೂಡ ಆಕಳ ಸ್ಥಾನವೇ ಕೊಡಬೇಕಿತ್ತಲ್ಲ.

ಕೇವಲ ಆಕಳ ಮಲ ಮೂತ್ರದಲ್ಲಿರುವ ಔಷಧಿಯ ಗುಣದಿಂದಾಗಿ ಆಕಳಿಗೆ ಇಷ್ಟು ಮಹತ್ವ ಕೊಟ್ಟದ್ದೇ? ಅಥವಾ ಸ್ವಭಾವ
ಸೌಮ್ಯ ಎನ್ನುವುದೇ ಆಕಳನ್ನು ದೈವೀಕರಿಸಿದ್ದಕ್ಕೆ ಕಾರಣವೇ? ಆಕಳನ್ನು ಕಾಮಧೇನು – ಕೇಳಿದ್ದನ್ನು ಕೊಡುವವಳು ಎಂದದ್ದು ಕೇವಲ ವ್ಯಾವಹಾರಿಕ ಕಾರಣಕ್ಕಾಗಿಯೇ? ಆಕಳನ್ನು ಮಾರುವ, ಹಾಲನ್ನು ಮಾರಿ ಬದುಕುವ ವಿಚಾರ ಅಷ್ಟೇನೂ ಹಳೆಯದಲ್ಲ. ಏಕೆಂದರೆ ಹಿಂದೆಲ್ಲ ಪ್ರತೀ ಮನೆಯಲ್ಲೂ ಆಕಳಿರುತ್ತಿತ್ತು. ಆಕಳನ್ನು ಹಣಕ್ಕಾಗಿ ಸಾಕುವುದು ಎನ್ನುವ ವಿಚಾರವೇ ಡೈರಿ ವ್ಯವಸ್ಥೆಯ ನಂತರ, ಈಗೊಂದು ಶತಮಾನ ದಿಂದೀಚೆ ಹುಟ್ಟಿಕೊಂಡದ್ದು.

ಹಾಗೆ ನೋಡಿದರೆ ವ್ಯವಹಾರಿಕವಾಗಿಯೇ ವಿಚಾರ ಮಾಡಿದಲ್ಲಿ ಹಾಲು, ಸಗಣಿ ಕೊಡುವ ಕೆಲಸವನ್ನು ಮೇಕೆಯೂ ಮಾಡುತ್ತದೆ. ಆದರೆ ಮೇಕೆಯನ್ನು ಕಾಮಧೇನು ಎನ್ನಲಿಲ್ಲ. ಮೇಕೆ ಪುರಾಣಗಳಲ್ಲಿ ಪ್ರಸ್ತಾಪವಾದರೂ ಅದಕ್ಕೆ ಆಕಳ ಸ್ಥಾನಮಾನ ಎಂದೂ
ಕೊಟ್ಟಿಲ್ಲ. ವೇದ ಪುರಾಣಗಳಲ್ಲಿ ಬಹಳಷ್ಟು ಕಡೆ ಆಕಳನ್ನು, ಕಾಮಧೇನು ವನ್ನು ಪ್ರಸ್ತಾಪಿಸಲಾಗಿದೆ ಎನ್ನುವ ಉದ್ದೇಶವೇ ಆಕಳಿಗೆ ಆ ಸ್ಥಾನ ದೊರಕಿಸಿದೆ ಎಂದು ಬಹಳಷ್ಟು ಮಂದಿ ವಾದಿಸುತ್ತಾರೆ.

ಆದರೆ ಅಸಲಿಗೆ ವೇದ ಪುರಾಣಗಳಲ್ಲಿ ಅವಕ್ಕೆ ಆ ಸ್ಥಾನ ಕೊಟ್ಟಿದ್ದೇಕೆ ಎನ್ನುವ ಮೂಲ ಪ್ರಶ್ನೆ ಕೇಳಿದಾಗ ಅದಕ್ಕೊಂದು ಸಮಂಜಸ ಉತ್ತರ ಇಂದಿನ ಬಹುತೇಕ ಪ್ರಾಜ್ಞರಿಂದ ಸಿಗುವುದಿಲ್ಲ. ಆಡು ಕುರಿ ಕೂಡ ಆಕಳಷ್ಟೇ ಸೌಮ್ಯ, ಅಷ್ಟೇ ಉಪಯೋಗಿ ಆದರೂ ಆಕಳಿಗಷ್ಟೇ ಅಷ್ಟೊಂದು ವಿಶೇಷ ಸ್ಥಾನವೇಕೆ? ಇದು ಪಾರ್ಷಿಯಾಲಿಟಿ ಅಲ್ಲವೇ? ಪುಣ್ಯ, ಆಡು ಕುರಿಗಳಿಗೆ ವೋಟ್ ಹಾಕುವ ಹಕ್ಕಿಲ್ಲ. ಇದ್ದಿದ್ದರೆ ಆಕಳಿಗೆ ಇಂದಿನ ಬ್ರಾಹ್ಮಣರ ಸ್ಥಿತಿ ಬಂದಿರುತ್ತಿತ್ತೇನೋ.

ಆನೆ, ಹುಲಿ, ಸಿಂಹ, ಹದ್ದು, ಹಾವು, ಇಲಿ ಹೀಗೆ ಎಲ್ಲ ಪ್ರಾಣಿಗಳನ್ನೂ ದೇವರ ಜತೆ ಕಾಣುವ ನಾವು ಆಕಳಿಗೆ ಮಾತ್ರ ಒಂದು ಪ್ರತ್ಯೇಕ ಸ್ಥಾನ ಕೊಟ್ಟದ್ದಾದರೂ ಏಕೆ? ಆ ವಿಚಾರ, ಜಿಜ್ಞಾಸೆ ನಿಮಗೇ ಬಿಡುತ್ತೇನೆ. ಮನುಷ್ಯ ಪ್ರಾಣಿಗಳನ್ನು ಸಾಕಲು ಶುರುಮಾಡಿ ಅದೆಷ್ಟೋ ಸಾವಿರ ವರ್ಷವಾಯಿತು. ಅಮೆರಿಕಾದಂಥ ದೇಶಗಳಲ್ಲಂತೂ ಏನೇನೆಲ್ಲ ಪ್ರಾಣಿ ಗಳನ್ನು ಸಾಕುವ ಖಾಯಾಲಿ ಇದೆ. ನಾಯಿ, ಬೆಕ್ಕು, ಗಿನಿ ಪಿಗ್, ಹಂದಿ, ಗಿಳಿ, ಹಕ್ಕಿಗಳು, ಮೊಲ, ಆಮೆ, ಮೀನು, ಹಾವು, ಇಲಿ ಹೀಗೆ ಪಟ್ಟಿ
ಮಾಡುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಇಂಗ್ಲೆಂಡಿನಲ್ಲಿ ಮೀನು ನೆಚ್ಚಿನ ಸಾಕುಪ್ರಾಣಿ.

ಸೌದಿ ಅರೇಬಿಯಾದಲ್ಲಿ ಹದ್ದು ಸಾಕುವುದು ಒಂದು ರೀತಿಯ ಸ್ಟೇಟಸ್ ವಿಚಾರ. ಅಮೆರಿಕನ್ನರು ವಾರ್ಷಿಕ ಐವತ್ತು ಬಿಲಿಯನ್ ಡಾಲರ್ ಸಾಕುಪ್ರಾಣಿಗಾಗಿಯೇ ವ್ಯಯಿಸುತ್ತಾರೆ. ಹೀಗೆ ಒಂದೊಂದು ಕಡೆ ಒಂದೊಂದು ಟ್ರೆಂಡ್. ಇನ್ನು ಇತಿಹಾಸಕ್ಕೆ ಹೋದರೆ
ಕೂಡ ಈ ರೀತಿಯ ಸಾಕು ಪ್ರಾಣಿಯ ಶೋಕಿ ಕಾಣಿಸುತ್ತದೆ. ನಮ್ಮ ದೇಶದಲ್ಲಿಯೇ ಸಾಕುಪ್ರಾಣಿಗಳಿಗೆ ಮಹಲ್‌ಗಳನ್ನು ಕಟ್ಟಿದ ರಾಜರುಗಳ ಉದಾಹರಣೆ ಅದೆಷ್ಟೋ ಸಿಗುತ್ತದೆ.

ಜಹಾಂಗೀರ್ ತನ್ನ ಪ್ರೀತಿಯ ಜಿಂಕೆಯ ಸ್ಮಾರಕವಾಗಿ ಹಿರನ್ ಮಿನಾರ್ ಕಟ್ಟಿದ್ದ. ಈಜಿಪ್ಟ್ ರಾಜರುಗಳು ಬೆಕ್ಕಿಗೆ ಕೊಟ್ಟ ಸ್ಥಾನ ವಿಶೇಷ. ಆದರೆ ಆಕಳು ಜಗತ್ತಿನ ಎಲ್ಲ ದೇಶಗಳಲ್ಲಿ ಸಾಕಲ್ಪಟ್ಟರೂ ಅದನ್ನು ನಡೆಸಿಕೊಂಡ ರೀತಿಯೇ ಬೇರೆ. ಆಕಳನ್ನು
ಫ್ಯಾಶನ್‌ಗೆ ಸಾಕಿದ ಉದಾಹರಣೆ ಸಿಗುವುದು ಕಷ್ಟ. ಇಂದು ಭೂಮಿಯಲ್ಲಿ ಸುಮಾರು ಒಂದು ಬಿಲಿಯನ್‌ಗಿಂತ ಸ್ವಲ್ಪ
ಜಾಸ್ತಿ ಆಕಳಿವೆ ಎನ್ನುವುದು ಅಂದಾಜು ಲೆಕ್ಕ. ಅದೇ ಲೆಕ್ಕವನ್ನು ಪರಿಗಣಿಸಿ ತಾಳೆ ಹಾಕಿದಲ್ಲಿ ಪ್ರತೀ ಏಳು ಮಂದಿಗೆ ಒಂದು ಆಕಳು. ಮನುಷ್ಯನ ಆಪ್ತ ಸಾಕು ಪ್ರಾಣಿ ನಾಯಿಯ ಸಂಖ್ಯೆ ಆಕಳಿಗಿಂತ ಕಡಿಮೆ.

ಮನುಷ್ಯನ ಇತಿಹಾಸದುದ್ದಕ್ಕೂ ಸುಮಾರು ಎಂಟು ಸಾವಿರ ವರ್ಷದಿಂದ ಸಾಕು ಪ್ರಾಣಿಯಾಗಿ ಉಳಿದುಕೊಂಡ ಅತೀ ಸಕ್ಸಸ್ ಫುಲ್ ಪ್ರಾಣಿ ಎಂದರೆ ಅದು ಆಕಳು ಮಾತ್ರ. ಇಂದು ಸುಮಾರು ಇನ್ನೂರಕ್ಕೂ ಹೆಚ್ಚು ಸಸ್ತನಿ, ಮನುಷ್ಯ ಬಳಸಬಹುದಾದ ಹಾಲನ್ನು ಕೊಡುವ ಪ್ರಾಣಿಗಳು ಭೂಮಿಯಲ್ಲಿವೆ. ಆದರೆ ಕೇವಲ ಬೆರಳೆಣಿಕೆಯಷ್ಟು ಪ್ರಾಣಿಗಳನ್ನಷ್ಟೇ ಪಳಗಿಸಿ ಸಾಕುಪ್ರಾಣಿ ಯನ್ನಾಗಿಸಬಹುದು – ಉಳಿದವನ್ನು ಪಳಗಿಸಲು ಸಾಧ್ಯವೇ ಇಲ್ಲ.

ಎಲ್ಲ ಪಳಗಿಸಲು ಸಾಧ್ಯವಾಗುವ, ಸಸ್ತನಿ, ಹಾಲು ಕುಡಿಯಲು ಬಳಸಬಹುದಾದ ಪ್ರಾಣಿಗಳಲ್ಲಿ ಆಕಳಿಗೆ ಮೊದಲ ಸ್ಥಾನ. ಅದರ ನಂತರದ್ದು ಎಮ್ಮೆ, ಆಡು ಮತ್ತಿತರ ಪ್ರಾಣಿಗಳದ್ದು. ಹಾಗಾದರೆ ಆಕಳ ಈ ಯಶಸ್ಸಿಗೆ ಕಾರಣವಾದರೂ ಏನು? ಆಕಳ ಭಾವನೆ ಗಳು, ಕೆಲ ನಡವಳಿಕೆಗಳು ತೀರಾ ಸೂಕ್ಷ್ಮ ಮತ್ತು ಮನುಷ್ಯನಿಗೆ ಹೋಲಿಕೆಯಾಗುವಂಥದ್ದು. ಆಕಳನ್ನು ಸೂಕ್ಷ್ಮವಾಗಿ ಸಾಕಿ
ಗೊತ್ತಿದ್ದವರಿಗೆ ಇದು ಗೊತ್ತಿರುತ್ತದೆ. ಹೇಗೆ ಮನುಷ್ಯರಲ್ಲಿ ಸೌಮ್ಯ, ಮುಂಗೋಪಿ, ಪುಂಡು, ಪ್ರೀತಿ ತುಂಬಿದ, ಸೋಷಿಯಲ, ಒಂಟಿ,
ಹುಂಬ ಹೀಗೆ ಗುಣವಿಶೇಷದಿಂದ ಕೂಡಿದ ವ್ಯಕ್ತಿತ್ವವಿರುತ್ತದೆಯೋ ಹಾಗೆಯೇ ಥೇಟ್ ಗುಣವಿಶೇಷ ಆಕಳಲ್ಲಿಯೂ ಇರುತ್ತದೆ.

ಹೇಗೆ ನಮ್ಮಲ್ಲಿ ಕೆಲವರಿಗೆ ಇನ್ನೊಬ್ಬ ವ್ಯಕ್ತಿ ಕಾರಣವೇ ಇಲ್ಲದೆ ಇಷ್ಟವಾಗುವುದಿಲ್ಲವೋ ಅದೇ ರೀತಿ ಆಕಳಿಗೂ ಕೂಡ ಹಾಗೆಯೇ. ನಮ್ಮ ಪಕ್ಕದ ಮನೆಯಲ್ಲಿ ಒಂದು ಆಕಳಿತ್ತು. ಅದಕ್ಕೆ ಹೆಂಗಸರನ್ನು ಕಂಡರೆ ಆಗುತ್ತಿರಲಿಲ್ಲ. ಯಾರೇ ಸೀರೆ ಉಟ್ಟುಕೊಂಡು ಅದರ ಹಾಲು ಕರೆಯಲು ಹೋದರೂ ಒದೆಯುತ್ತಿತ್ತು. ಅದರ ಹಾಲು ಕರೆಯಲು ಗಂಡಸರೇ ಬೇಕು. ನಮ್ಮ ಮನೆಯಲ್ಲಿದ್ದ ಒಂದು ಆಕಳಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಇನ್ನೊಂದು ಆಕಳಿಗೆ ಮಕ್ಕಳನ್ನು ಕಂಡರಾಗುತ್ತಿರಲಿಲ್ಲ – ಹತ್ತಿರ ಹೋದರೆ ಓಡಿಸಿಕೊಂಡು ಬರುತ್ತಿತ್ತು.

ಇನ್ನೊಂದು ಆಕಳಿಗೆ ಹಾಲು ಕರೆಯಲು ಅಮ್ಮನೇ ಆಗಬೇಕು. ಬೇರೆ ಯಾರೇ ಬಂದರೂ ತಿರುಗಾಡಿ, ಕಾಲಲ್ಲಿ ಹಾಲಿನ ಚೊಂಬನ್ನು ಒದ್ದು ರಂಪಾಟ ಏಳಿಸುತ್ತಿತ್ತು. ಹೀಗೆ ಇಂಥದ್ದೊಂದು ಕಾರಣ ಎಂದಿರದೇ ಪ್ರೀತಿಸುವ ಇಲ್ಲವೇ ಸಿಟ್ಟಾಗುವ ಪ್ರಾಣಿ
ಎಂದರೆ ಮನುಷ್ಯನ ನಂತರ ಆಕಳೇ. ನಮ್ಮಲ್ಲಿ ಸೌಮ್ಯ ಗುಣ ವಿಶೇಷಣಕ್ಕೆ ವ್ಯಕ್ತಿಯನ್ನು ಆಕಳಿಗೆ ಹೋಲಿಸಿ ಆಕಳಂತಹ ಮನಸ್ಸುಳ್ಳವ ಎನ್ನುವುದಿದೆ.

ಅದೇಕೆ ಹಾಗೊಂದು ಹೋಲಿಕೆ ಹುಟ್ಟಕೊಂಡಿತೋ ಗೊತ್ತಿಲ್ಲ. ಎಲ್ಲ ಆಕಳು ಸೌಮ್ಯವಲ್ಲ ಎನ್ನುವುದು ಆಕಳುಗಳನ್ನು ಸಾಕಿದವರಿಗಷ್ಟೇ ಗೊತ್ತು. ಕೆಲವೊಮ್ಮೆ ಮನುಷ್ಯನ ಇನ್ನೊಂದು ಗುಣದ ಹೋಲಿಕೆ ಆಕಳಿನ ಜತೆ ಮಾಡುವುದುಂಟು. ಏನನ್ನೂ ತಿಳಿಯದ, ದಡ್ಡತನವನ್ನು ಗುರುತಿಸಿ ತಿವಿಯುವಾಗ ದನ ಕಾಯಲಿಕ್ಕೆ ಸರಿ ಎನ್ನುವುದಿದೆ. ದನ ಕಾಯೋದು ಎಂದರೆ ಅದಕ್ಕೆ ಒಂದು ಸ್ಪೆಷಲ್ ಸ್ಕಿಲ್‌ನ ಅವಶ್ಯಕತೆಯಿಲ್ಲ ಎನ್ನುವುದು ಅಲ್ಲಿನ ತಿವಿತದ ಒಳಾರ್ಥ.

ಇಂಗ್ಲಿಷ್‌ನಲ್ಲಿ ಆಕಳಿಗೆ ಬೊವೈನ್ ಎನ್ನುವ ಶಬ್ದದ ಬಳಕೆಯಿದೆ. ಈ ಶಬ್ದದ ಮೂಲ ದಡ್ಡ, ತಲೆಯಿಲ್ಲದ, ಮಿದುಳಿಲ್ಲದ, pea brained ಬಟಾಣಿ ಕಾಳಿನಷ್ಟು ಬುದ್ಧಿಯುಳ್ಳ ಎನ್ನುವುದು ಇದರ ಡಿಕ್ಷನರಿ ಅರ್ಥ. ಪಾಶ್ಚಾತ್ಯ ಮಕ್ಕಳ ಪುಸ್ತಕಗಳಲ್ಲಿ, ಕಾರ್ಟೂನ್ ‌ಗಳಲ್ಲಿ ಆಕಳೆಂದರೆ ಅದೊಂದು ದಡ್ಡ, ಬೋಳೆ ಪ್ರಾಣಿ. ಜಗತ್ತಿನ ಒಂದು ಕಡೆ ಆಕಳಿಗೆ ದೈವತ್ವ ಕೊಟ್ಟ ಮನುಷ್ಯ ಇನ್ನೊಂದು ಕಡೆ ದಡ್ಡ, ಭಾವನೆಯೇ ಇಲ್ಲದ ದಡ್ಡ ಪ್ರಾಣಿ ಎಂದು ಆರೋಪಿಸುವುದು, ರೂಢಿಯಲ್ಲಿರುವುದು ತೀರಾ ವೈರುಧ್ಯ. ಪಾಶ್ಚಾತ್ಯ ಜಗತ್ತಿನ ಸರ್ಕಸ್ ಗಳಲ್ಲಿ ಎಲ್ಲ ಪ್ರಾಣಿಗಳಿಗೆ ಜಾಗವಿರುತ್ತಿತ್ತು – ಆದರೆ ದಡ್ಡ ಎನ್ನುವ ಪೂರ್ವಗ್ರಹದಿಂದಾಗಿ ಆಕಳನ್ನು ಸರ್ಕಸ್ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ಭಾವನಾ ಗ್ರಾಹ್ಯ ಶಕ್ತಿ ಹೆಚ್ಚಿಗೆಯಿದ್ದ ಭಾರತೀಯರಿಗೆ ಆಕಳ ಬುದ್ಧಿಮತ್ತೆಯ ಅರಿವು ಚೆನ್ನಾಗಿತ್ತು. ಪ್ರಾಣಿಗಳ ಬೌದ್ಧಿಕ ಸಾಮರ್ಥ್ಯ ವನ್ನು ಪರೀಕ್ಷಿಸುವಾಗ ಪಾಶ್ಚಾತ್ಯ ವಿಜ್ಞಾನಿಗಳು ನಾಯಿ, ಮಂಗಗಳನ್ನೇ ಆಯ್ಕೆಮಾಡಿ ಕೊಂಡದ್ದೇ ಜಾಸ್ತಿ.

ಅವರ ಮಟ್ಟಿಗೆ ಆಕಳ ಮಟ್ಟಿಗಿನ ಪೂರ್ವಾಗ್ರಹವೆಷ್ಟು ಎಂದರೆ ಅದು ಪರೀಕ್ಷೆಗೂ ಯೋಗ್ಯವಲ್ಲ ಎಂದು. ಆದರೆ ಭಾರತೀಯರಿಗೆ ಅದೊಂದು ಹೊಸತಾಗಿ ಪರೀಕ್ಷೆ ಮಾಡುವ ವಿಚಾರವಾಗಿ ಎಂದೂ ಕಾಣಿಸಲೇ ಇಲ್ಲ. ತೀರಾ ಇತ್ತೀಚೆಗಿನ ಬ್ರಿಟಿಷ್ ಮತ್ತು ಇಟಾಲಿಯನ್ ರಿಸರ್ಚ್‌ಗಳ ಪ್ರಕಾರ ಬುದ್ಧಿಮತ್ತೆಯಲ್ಲಿ ಚಿಮ್ಪಾಂಜಿ ಮತ್ತು ಮಂಗನ ನಂತರದ ಪ್ರಾಣಿ ಎಂದರೆ ಅದು ನಾಯಿ ಯಲ್ಲ, ಬೆಕ್ಕಲ್ಲ – ಆಕಳು. ಭಾವನಾ ಶಕ್ತಿ, ಮನುಷ್ಯನನ್ನು ಪ್ರೀತಿಸುವ ಪ್ರಾಣಿಗಳಲ್ಲಿ ನಾಯಿಗಿಂತ ಆಕಳೇ ಮುಂದೆ. ಆಕಳು
ಪ್ರೀತಿಯನ್ನು ಮನುಷ್ಯನಿಗೆ ಅರ್ಥವಾಗುವ ರೀತಿ ಅಭಿವ್ಯಕ್ತಿಸುವುದರಲ್ಲಿ ಹಿಂದೆ. ಯಾವುದೇ ಪ್ರಾಣಿಯನ್ನು ಸರ್ಕಸ್‌ಗೆ ಪಳಗಿಸಲು ಒಂದು ಆಕ್ಷನ್ ರಿಯಾಕ್ಷನ್ ಅವಶ್ಯಕತೆಯಿರುತ್ತದೆ.

ಸಾಮಾನ್ಯವಾಗಿ ಪ್ರಾಣಿಯನ್ನು ಪಳಗಿಸುವಾಗ ಆಹಾರವನ್ನು ಮುಂದಿಟ್ಟು ಸನ್ನೆ ಮಾಡಿದಂತೆ ನಡೆಯುವಂತೆ ಮಾಡಿ, ಆಮೇಲೆ ಕೇವಲ ಸನ್ನೆ ಮಾಡಿದಾಗ ನಿಷ್ಟ ಪ್ರತಿಕ್ರಿಯೆ ಮಾಡುವಂತೆ ಮಾಡಲಾಗುತ್ತದೆ. ಎಲ್ಲ ಪ್ರಾಣಿಗಳನ್ನು ಸರ್ಕಸ್‌ನಲ್ಲಿ ಪಳಗಿಸಲು ಸಾಧ್ಯವಿಲ್ಲ. ಕೆಲವನ್ನು ಪಳಗಿಸಲು ಬುದ್ಧಿಮತ್ತೆಯ ಕೊರತೆಯಿಂದ ಕಷ್ಟ. ಆದರೆ ಆಕಳು ಮಾತ್ರ ಇದೆಲ್ಲವನ್ನು ಮೀರಿ, ಗ್ರಹಿಸಿ, ಆಣತಿಯಂತೆ ನಡೆದುಕೊಳ್ಳದ ದಾರ್ಷ್ಟ್ಯ ಹೊಂದಿ ವ್ಯವಹರಿಸಬಲ್ಲದು ಎನ್ನುವುದು ಇತ್ತೀಚಿಗೆ ತಿಳಿದುಬಂದ ವಿಚಾರ. ಎಂದರೆ ಆಕಳಿಗೆ ರಿಂಗ್ ಮಾಸ್ಟರ್‌ನ ವ್ಯವಹಾರವೇ ಸರ್ಕಸ್ ತರಹ ಕಾಣಿಸುತ್ತದೆಯಂತೆ. ಇದರ ವರದಿ ಓದಿದರೆ ಆಕಳನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನವೇ ಅಷ್ಟು ಮುಂದುವರಿಯ ಬೇಕಾಯಿತೇನೋ ಎಂದೆನ್ನಿಸುತ್ತದೆ.

ಆದರೆ ಇದೆಲ್ಲ ಸೂಕ್ಷ್ಮವನ್ನು ನಮ್ಮ ಪೂರ್ವಜರು ಮಾತ್ರ ಅತ್ಯಂತ ಸೂಕ್ಷ್ಮವಾಗಿ ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ತಿಳಿದಿದ್ದರಲ್ಲ ! ಕಾಡಿನಲ್ಲಿ ವೈಲ್ಡ್ ಆಗಿ ಬದುಕಿದ ಆಕಳನ್ನು ಪಳಗಿಸುವುದು ಆದಿ ಮಾನವನಿಗೆ ಸುಲಭವಾಗಿತ್ತೇ ಎನ್ನುವ ವಿಚಾರವಾಗಿ ಕೆಲವು ಪ್ರಯೋಗ ಗಳು ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದವು. ಉಳಿದೆಲ್ಲ ಪ್ರಾಣಿಗಳಂತೆ ಕಾಡಿನಲ್ಲಿ ಒಂದಾಗಿ ಬದುಕುವ ಆಕಳು ಇಂದು ಸಿಗುವುದೇ ಇಲ್ಲ. ಆದರೆ ಇಂಗ್ಲೆಂಡಿನ ಚಿಲ್ಲಿಂಗ್ಹ್ಯಾಮ್‌ನಲ್ಲಿ ಒಂದು ವೈಲ್ಡ್ ಕೌ ಪಾರ್ಕ್ ಇದೆ.
ಸುಮಾರು ಎಂಟುನೂರು ವರ್ಷದ ಹಿಂದೆ ಬ್ರಿಟಿಷ್ ರಾಜ ಬೇಟೆ ಗೋಸ್ಕರ ಈ ಪಾರ್ಕ್ ನಿರ್ಮಿಸಿ ಅಲ್ಲಿ ಆಕಳನ್ನು ವೈಲ್ಡ್ ಆಗಿ
ಬದುಕುವಂತೆ ವ್ಯವಸ್ಥೆ ಮಾಡಿಕೊಂಡಿದ್ದ.

ಅಂದಿನಿಂದ ಇಂದಿನವರೆಗೆ ಆ ರಕ್ಷಿತ ಪ್ರದೇಶದಲ್ಲಿ ಕಾಡು ಪ್ರಾಣಿಯಂತೆ ಆಕಳು ಜೀವಿಸುತ್ತಿವೆ. ಅಲ್ಲಿನ ವಿಜ್ಞಾನಿಗಳು ಇತ್ತೀಚಿಗೆ ಈ ರಕ್ಷಿತಾರಣ್ಯದಲ್ಲಿ ಪ್ರಯೋಗಕ್ಕೊಸ್ಕರ ಕೆಲವು ಆಕಳನ್ನು ಪಳಗಿಸುವ ಕೆಲಸಕ್ಕೆ ಮುಂದಾದರು. ಈ ಪ್ರಯೋಗದಿಂದ
ತಿಳಿದದ್ದೇನೆಂದರೆ ಕೇವಲ ಎರಡು ತಿಂಗಳಲ್ಲಿ ಕಾಡು ದನವನ್ನು ಕಟ್ಟಿ ಹಾಕಿ ಪಳಗಿಸಬಹುದು. ಉಳಿದ ವನ್ಯಮೃಗಗಳನ್ನು ಕಾಡಿನಿಂದ ಹೊರ ತಂದು ಪಳಗಿಸಲು ಕನಿಷ್ಠ ಎರಡರಿಂದ ಹತ್ತು ವರ್ಷ – ಕೆಲವೊಮ್ಮೆ ಎರಡು ಮೂರು ತಲೆಮಾರೇ ಬೇಕಾಗುತ್ತದೆ. ಆದರೆ ಆಕಳನ್ನು ಪಳಗಿಸುವುದು ಉಳಿದೆಲ್ಲ ಪ್ರಾಣಿಗಳಿಗಿಂತ ಸುಲಭ. ಅವು ಮನುಷ್ಯನನ್ನು ಅಷ್ಟು ಬೇಗ
ನಂಬಿಬಿಡುತ್ತವೆ.

ಆಕಳಿನ ಇನ್ನೊಂದು ವಿಶಿಷ್ಟ ಗುಣವಿಶೇಷ ಎಂದರೆ ಅಗ್ರೆಶನ್ ಇಲ್ಲದ ಸಾಮಾಜಿಕ ವರ್ತನೆ. ಆಕಳು ಗುಂಪಿನಲ್ಲಿ ಇದ್ದಾಗ ಸಹಜವಾಗಿ ಅದರಂದು ಬಾಸ್ ಆಕಳಿರುತ್ತದೆ. ಆದರೆ ಉಳಿದ ಪ್ರಾಣಿಗಳಂತೆ ಈ ಪ್ರಮುಖ ಆಕಳು ಯಾವುದೇ ಯಜಮಾನಿಕೆ ಬಹಿರಂಗವಾಗಿ ತೋರಿಸಿ ಕೊಳ್ಳುವುದಿಲ್ಲ. ಅಥವಾ ಈ ಯಜಮಾನ ಆಕಳು ಯಾವುದೇ ಕಾರಣಕ್ಕೂ ಅಧಿಕಾರ ದುರುಪಯೋಗ’ ಮಾಡಿಕೊಳ್ಳುವುದಿಲ್ಲ. ಹೆಚ್ಚಿನ ಪ್ರಾಣಿಗಳಲ್ಲಿ ಗುಂಪಿನ ಯಜಮಾನ ಎಂದೆನಿಸಿಕೊಂಡ ಪ್ರಾಣಿ ಉತ್ತಮ ಆಹಾರ ಸಿಕ್ಕಾಗ
ಅದಕ್ಕೇ ಮೊದಲು ಸಲ್ಲಬೇಕು ಎನ್ನುವ ರೀತಿ ವರ್ತಿಸುತ್ತವೆ.

ಒಂದೊಮ್ಮೆ ಜಮಾನನನ್ನು ಮೀರಿ ಇನ್ನೊಂದು ದುರ್ಬಲ ಪ್ರಾಣಿ ಆಹಾರಕ್ಕೆ ಕೈ ಹಾಕಿದರೆ ಯಜಮಾನನೆನಿಸಿಕೊಂಡ ಪ್ರಾಣಿ ಆ ದುರ್ಬಲ ಪ್ರಾಣಿಯ ಮೇಲೆ ಎರಗುತ್ತದೆ. ಆದರೆ ಆಕಳು ಹಾಗೆ ವರ್ತಿಸುವುದೇ ಇಲ್ಲ. ಆಕಳ ಯಜಮಾನಿಕೆ ಏನಿದ್ದರೂ ಗುಂಪಿನ ರಕ್ಷಣೆಗಷ್ಟೇ ಸೀಮಿತ. ಹೀಗೆ ಗುಂಪಿನ ಯಜಮಾನನೆನ್ನಿಸಿಕೊಂಡ ಆಕಳು ಅದರ ದಿನದ ಹೆಚ್ಚಿನ ಪಾಲು ಉಳಿದ ಆಕಳ ಜತೆ ನಿಂತು ಒಂದು ರೀತಿಯ ಸಂಬಂಧವನ್ನು ಸ್ಥಾಪಿಸುವುದರಲ್ಲಿ ವ್ಯಯಿಸುತ್ತದೆ.

ಯಜಮಾನ ಆಕಳು ಉಳಿದ ಆಕಳಿಗಿಂತ ಕಡಿಮೆ ಆಹಾರವನ್ನು ಸ್ವೀಕರಿಸುತ್ತದೆ. ಅಲ್ಲದೇ ಆಕಳ ಗುಂಪಿನಲ್ಲಿ ಗೂಳಿಯಿದ್ದರೆ
ಅದೇ ಯಜಮಾನನಾಗಬೇಕೆಂದೇನೂ ನಿಯಮವಿಲ್ಲ. ಅಲ್ಲಿ ಲಿಂಗಭೇಧವಿಲ್ಲ. ಪ್ರಾಣಿವರ್ಗದಲ್ಲಿ ಈ ರೀತಿಯ ವ್ಯವಹಾರ ತೀರಾ
ವಿರಳ. ಅಗ್ರೆಶನ್ – ದೈಹಿಕ ಸಾಮರ್ಥ್ಯಕ್ಕಿಂತ ಸೋಷಿಯಲ್ ವರ್ತನೆಯೇ ಗುಂಪಿನಲ್ಲಿ ಮುಖ್ಯ ಸ್ಥಾನ ಪ್ರಾಪ್ತಿಸಿ ಕೊಳ್ಳಲು ಕಾರಣ ವಾಗುವುದು ಮನುಷ್ಯನನ್ನು ಬಿಟ್ಟರೆ ಆಕಳಲ್ಲಿಯೇ. ಆಕಳ ಎಲ್ಲ ವಿಶೇಷ, ಉಳಿದ ಪ್ರಾಣಿಗಳಿಗೆ ಹೋಲಿಸಿದಲ್ಲಿ ಪ್ರತ್ಯೇಕಿಸುವ ಗುಣಗಳ ದೊಡ್ಡ ಪಟ್ಟಿಯೇ ಇದೆ.

ಸುಮ್ಮನೆ ಬಿಡುವಿದ್ದಾಗ Cow+Pshycology ಎಂದು ಯುಟ್ಯೂಬ್‌ನಲ್ಲಿ ಹುಡುಕಿದರೆ ಹತ್ತಾರು ವಿವರಣೆಗಳು ಎದುರಿಗೆ ಬಂದು ನಿಲ್ಲುತ್ತವೆ. ಅವನ್ನೆಲ್ಲ ಒಟ್ಟಾರೆ ಗ್ರಹಿಸಿದಲ್ಲಿ ಆಕಳೆಡೆಗಿನ ದೃಷ್ಟಿಕೋನವೇ ಬದಲಾಗುತ್ತದೆ. ಆಕಳು ಉಳಿದ ಪ್ರಾಣಿಗಳಂತೆ
ಇನ್ನೊಂದು ಪ್ರಾಣಿಯಲ್ಲ ಎನ್ನುವುದು ತಿಳಿಯುತ್ತದೆ. ಯಾವುದೇ ಕಾಡು ಪ್ರಾಣಿ ತನ್ನನ್ನು ಸಾಕಲು ಮನುಷ್ಯನಿಗೆ ಅನುವು ಮಾಡಿಕೊಡುವಾಗ ಅಂದು ಒಪ್ಪಂದವಾಗಿರುತ್ತದೆ. ಅಲ್ಲಿ ರಕ್ಷಣೆ ಮನುಷ್ಯನ ಹೊಣೆ. ಈ ಒಪ್ಪಂದವನ್ನು ಮನುಷ್ಯನ ಜತೆ
ಮಾಡಿಕೊಂಡ ಮೊದಲ ಕೆಲವೇ ಪ್ರಾಣಿಗಳಲ್ಲಿ ಆಕಳು ಕೂಡ ಒಂದು.

ಹೀಗೆ ಸುಲಭದಲ್ಲಿ ಮನುಷ್ಯನನ್ನು ನಂಬಿಬಿಡುವ ಪ್ರಾಣಿಯೊಂದನ್ನು ಇಂದು ನಾವು ಅತಿ ಹೆಚ್ಚು ಎಕ್ಸ್ ಪ್ರೋಯ್ಟ್ ಮಾಡುತ್ತಿದ್ದೇವೆ. ಇದೆಲ್ಲ ಎ ಒಂದು ಕಡೆ ಮೂಕ, ಬುದ್ಧಿವಂತ ಮತ್ತು ಭಾವನಾತ್ಮಕವಾಗಿ ಹಚ್ಚಿಕೊಳ್ಳುವ ಪ್ರಾಣಿಗೆ ನಾವು ಎಸಗುತ್ತಿರುವ ನಂಬಿಕೆ ದ್ರೋಹದಂತೆ ಕಾಣಿಸುತ್ತದೆ. ಇಂದು ಪೇಟೆಯಲ್ಲಿ ಬೆಳೆಯುವ ಮಕ್ಕಳಿಗೆ, ನಮ್ಮಲ್ಲಿ ಬಹುತೇಕರಿಗೆ ಆಕಳೆಂದರೆ ಕೇವಲ ಒಂದು ಪ್ರಾಣಿಯಷ್ಟೇ. ಇಲ್ಲವೇ ರಾಜಕೀಯಕ್ಕೆ, ಜನರನ್ನು ಎತ್ತಿಕಟ್ಟಲು ಇನ್ನೊಂದು ವಿಷಯ.

ನಮ್ಮ ಜತೆ ಎಂಟು ಸಾವಿರ ವರ್ಷ ಬದುಕಿದ ಪ್ರಾಣಿ ಈಗ ಬಹುತೇಕ ದೊಡ್ಡ ದೊಡ್ಡ ಡೈರಿ ಫಾರ್ಮ್‌ಗಳಲ್ಲಿ ಹಾಲು ತಯಾರಿ ಸುವ ಯಂತ್ರವಾಗಿದೆ. ಪೈಪ್ ಗಳಲ್ಲಿ ಕೇವಲ ಮೂರು ಸೆಕೆಂಡಿಗೆ ಒಂದು ಲೀಟರ್ ಹೀರುವ ಮಷಿನ್ಗಳನ್ನು ಕಂಡುಹಿಡಿದು ನಾವು ಬೀಗುತ್ತಿದ್ದೇವೆ. ಆಕಳು ಹಾಲು ಕೊಡದಿದ್ದರೆ, ಗರ್ಭ ಧರಿಸದಿದ್ದರೆ ಕಸಾಯಿಕಾನೆಗೆ ಕಳಿಸಿಕೊಡುತ್ತಿದ್ದೇವೆ.

ಇಂದು ಆಕಳೆಂದರೆ ಮನುಷ್ಯನಿಗೆ ಒಂದು ಕೊಮೊಡಿಟಿ – ಸರಕು ಅಷ್ಟೇ. ಅಷ್ಟಕ್ಕೂ ಎಂಟು ಸಾವಿರ ವರ್ಷದ ಹಿಂದೆ ನಮ್ಮ ಪೂರ್ವಜರು ಆಕಳಿನ ಪೂರ್ವಜರೊಂದಿಗೆ ಮಾಡಿಕೊಂಡ ಒಪ್ಪಂದವನ್ನು ನಾವೇಕೆ ಇಂದು ಒಪ್ಪಿಕೊಳ್ಳಬೇಕು ಅಲ್ಲವೇ? ಎಷ್ಟಂದರೂ ಭೂಮಿ ನಮ್ಮ ಸ್ವತ್ತು – ಇಲ್ಲಿರುವ ಎಲ್ಲ ಚರಾಚರಗಳೂ ನಮಗಾಗಿಯೇ. ಆಶೀರ್ವಾದ ಬೇಕಾದರೆ ಕಲ್ಲಿನ ನಂದಿ ಇದ್ದೇ ಇದೆ.