Thursday, 19th September 2024

ಉತ್ತರಾಖಂಡದಲ್ಲಿ ನೀರ್ಗಲ್ಲು ಕುಸಿತ: ಮೃತರ ಸಂಖ್ಯೆ 37ಕ್ಕೆ ಏರಿಕೆ

ಚಮೋಲಿ (ಉತ್ತರಾಖಂಡ): ಮೈಥಾನಾ ನದಿ ದಡದಲ್ಲಿ ಶುಕ್ರವಾರ ಮೃತದೇಹ ಪತ್ತೆಯಾಗುವುದರೊಂದಿಗೆ ಉತ್ತರಾಖಂಡ ದಲ್ಲಿ ನೀರ್ಗಲ್ಲು ಕುಸಿತ ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.  ಈ ಕುರಿತು ಚಮೋಲಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ತಪೋವನ ಸುರಂಗದ 12 ಮೀಟರ್ ಕೆಳಗಿರುವ ಸಣ್ಣ ಸುರಂಗಕ್ಕೆ ಪ್ರವೇಶಿಸುವ ನಿಟ್ಟಿನಲ್ಲಿ ಕೊರೆಯುವ ಕಾರ್ಯ ಪ್ರಾರಂಭಿಸ ಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಸಹ ಪ್ರತಿಕ್ರಿಯಿಸಿದ್ದಾರೆ.

ಕಳೆದ ಗುರುವಾರ ರಿಷಿಗಂಗಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾದ ಪರಿಣಾಮ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿತ್ತು. ನೀರ್ಗಲ್ಲು ಕುಸಿತ ದುರಂತದಲ್ಲಿ ಈಗಲೂ 168 ಮಂದಿ ನಾಪತ್ತೆಯಾಗಿದ್ದಾರೆ ಎಂಬುದನ್ನು ಜಿಲ್ಲಾಡಳಿತ ಖಚಿತಪಡಿಸಿದೆ. 37 ಮೃತದೇಹಗಳ ಪೈಕಿ 10 ಮಂದಿಯನ್ನಷ್ಟೇ ಗುರುತಿಸಲಾಗಿದೆ. ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆ ಬಳಿಕ ಅಂತಿಮ ಸಂಸ್ಕಾರ ನಡೆಸಲಾಗುತ್ತಿದೆ.

ತಪೋವನದ ರೈನಿ ಗ್ರಾಮದಲ್ಲಿ ನೀರು ಸಂಗ್ರಹ ಮಟ್ಟ ಅಳೆಯಲು ಎಸ್‌ಡಿಆರ್‌ಎಫ್ ತಂಡ ಕಾಲ್ನಡಿಗೆಯಲ್ಲಿ ತೆರಳಿ ಅವಲೋಕನ ಮಾಡಲಿದ್ದು, ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಡಿಆರ್‌ಫ್ ಡಿಐಜಿ ರಿಧಿಮ್ ಅಗರವಾಲ್ ತಿಳಿಸಿದರು.

ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂ.ಗಳ ಪರಿಹಾರ ನಿಧಿ ನೀಡುವ ಕಾರ್ಯವನ್ನು ಸರ್ಕಾರ ಪ್ರಾರಂಭಿಸಿದೆ. ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ದುರಂತದಲ್ಲಿ ಮೃತಪಟ್ಟವರಿಗೆ ತಲಾ ನಾಲ್ಕು ಲಕ್ಷ ರೂ.ಗಳ ನೆರವನ್ನು ಘೋಷಿಸಿದ್ದರು.