Friday, 22nd November 2024

ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಶೀಘ್ರ ದೊರೆಯಲಿದೆ: ಶಾ

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲಾಗುವುದು, ಆ ಸಂದರ್ಭ ಬಹುಬೇಗ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ತಿಳಿಸಿದರು.

ಸಂವಿಧಾನದ 370ನೇ ವಿಧಿ ರದ್ಧತಿ ವೇಳೆ ನೀಡಲಾಗಿದ್ದ ಭರವಸೆಗಳ ಬಗ್ಗೆ ಏನು ಮಾಡಿದ್ದಿರಿ ಎಂಬ ಪ್ರತಿಪಕ್ಷಗಳ ಟೀಕೆಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶಾ, 370ನೇ ವಿಧಿ ರದ್ದುಪಡಿಸಿ 17 ತಿಂಗಳಾಗಿದೆ. ಅಷ್ಟರಲ್ಲಾಗಲೇ, ಹೊಣೆ ಹೊರಲು ಒತ್ತಾಯಿಸು ತ್ತಿದ್ದೀರಿ. 70 ವರ್ಷ ನೀವು ಏನು ಮಾಡಿದ್ರಿ? ಅದಕ್ಕೆ ನೀವು ಹೊಣೆ ಹೊತ್ತುಕೊಳ್ಳುವಿರಾ? ಎಂದು ತರಾಟೆಗೆ ತೆಗೆದು ಕೊಂಡರು.

ನನಗೆ ಯಾವುದೇ ಆಕ್ಷೇಪವಿಲ್ಲ, ಎಲ್ಲದಕ್ಕೂ ನಾನೇ ಹೊಣೆ ಹೊರುತ್ತೇನೆ. ಆದರೆ, ತಲೆಮಾರುಗಳವರೆಗೆ ಆಡಳಿತ ನಡೆಸಲು ಅವಕಾಶ ನೀಡಲ್ಪಟ್ಟವರು ಸರಿಯಾಗಿ ಆಡಳಿತ ನಡೆಸಿದ್ದಾರೆಯೇ ಎಂಬುದನ್ನು ಮನನ ಮಾಡಿಕೊಳ್ಳಬೇಕಾಗಿದೆ ಎಂದರು.

ಕೇಂದ್ರ ಸರ್ಕಾರ 2019, ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು- ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿತ್ತು.