Saturday, 23rd November 2024

ರೋಹಿತ್‌ ಶತಕ, ರಹಾನೆ ಅರ್ಧಶತಕ: ಭಾರತ ಆರು ವಿಕೆಟ್‌ ನಷ್ಟಕ್ಕೆ 300 ರನ್‌

ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅಮೋಘ ಶತಕದ (161) ಬೆಂಬಲದೊಂದಿಗೆ ಟೀಮ್ ಇಂಡಿಯಾ ಮೊದಲ ದಿನದಾಟದಲ್ಲಿ 88 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 300 ರನ್ ಪೇರಿಸಿದೆ.

ರೋಹಿತ್‌ಗೆ ಉತ್ತಮ ಬೆಂಬಲ ನೀಡಿದ ಉಪನಾಯಕ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕದ (67) ಸಾಧನೆ ಮಾಡಿದರು. ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ದ್ವಿತೀಯ ಓವರ್‌ನಲ್ಲೇ ಶುಭಮನ್ ಗಿಲ್ (0) ವಿಕೆಟ್ ಕಳೆದುಕೊಂಡ ಭಾರತವನ್ನು ಚೇತೇಶ್ವರ ಪೂಜಾರ (21) ಜೊತೆಗೂಡಿದ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿ ದರು.

ರೋಹಿತ್, ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ ಶೈಲಿಯನ್ನು ನೆನಪಿಸಿದರು. ಅಲ್ಲದೆ ಮೊದಲ ಅವಧಿಯಲ್ಲೇ 80 ರನ್ ಸೊರೆಗೈದರು. ರೋಹಿತ್ ಹಾಗೂ ಪೂಜಾರ ದ್ವಿತೀಯ ವಿಕೆಟ್‌ಗೆ 85 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ಪೂಜಾರ ಔಟಾದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರೊಂದಿಗೆ 86 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಒಳಗಾಗಿತ್ತು.

ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಟೆಸ್ಟ್ ವೃತ್ತಿ ಜೀವನದ ಏಳನೇ ಶತಕ ಸಾಧನೆ ಮಾಡಿದರು. ಆಂಗ್ಲರ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರೋಹಿತ್ ಗೆ ಉಪನಾಯಕ ಅಜಿಂಕ್ಯ ರಹಾನೆ ಸಾಥ್ ನೀಡಿದರು.

ರೋಹಿತ್ ಹಾಗೂ ರಹಾನೆ ನಾಲ್ಕನೇ ವಿಕೆಟ್‌ಗೆ 162 ರನ್‌ಗಳ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಈ ಮಧ್ಯೆ ರೋಹಿತ್ 150ರ ಗಡಿಯನ್ನು ದಾಟಿದರು. ರಹಾನೆ ಕೂಡಾ ಆಕರ್ಷಕ ಅರ್ಧಶತಕ ಬಾರಿಸಿದರು.

ದಿನದ ಕೊನೆಯ ಅವಧಿಯಲ್ಲಿ ರೋಹಿತ್ ಹಾಗೂ ರಹಾನೆ ವಿಕೆಟ್ ಕಳೆದುಕೊಂಡ ಭಾರತ ಮಗದೊಮ್ಮೆ ಹಿನ್ನಡೆ ಅನುಭವಿ ಸಿತು. ರೋಹಿತ್ 18 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 161 ರನ್ ಗಳಿಸಿದರು. 149 ಎಸೆತಗಳನ್ನು ಎದುರಿಸಿದ ರಹಾನೆ ಒಂಬತ್ತು ಬೌಂಡರಿಗಳಿಂದ 67 ರನ್ ಗಳಿಸಿದರು.

ಕೊನೆಯಲ್ಲಿ ರಿಷಭ್ ಪಂತ್ 33 ರನ್ ಗಳಿಸಿ ಅಜೇಯರಾಗುಳಿದರು. ಚೊಚ್ಚಲ ಪಂದ್ಯವನ್ನಾಡುತ್ತಿರುವ ಅಕ್ಷರ್ ಪಟೇಲ್ (5*) ಕ್ರೀಸಿನಲ್ಲಿದ್ದಾರೆ.

ಇಂಗ್ಲೆಂಡ್ ಪರ ಜ್ಯಾಕ್ ಲೀಚ್ ಹಾಗೂ ಮೊಯಿನ್ ಅಲಿ ತಲಾ ಎರಡು ಮತ್ತು ಒಲ್ಲಿ ಸ್ಟೋನ್ ಹಾಗೂ ನಾಯಕ ಜೋ ರೂಟ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.