ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಡಿಕ್ಷನರಿ ಅಥವಾ ಪದಕೋಶ ಓದುವುದರ ಆನಂದವೇ ಬೇರೆ. ಅದನ್ನು ಎಲ್ಲಿಂದ ಬೇಕಾದರೂ ಆರಂಭಿಸಬಹುದು. ಅಡಕೆ ಕೊನೆ (ಗೊಂಚಲು)ಯನ್ನು ಕೊಯ್ಯುವವರಂತೆ, ಒಂದು ಪದದಿಂದ ಮತ್ತೊಂದು ಪದಕ್ಕೆ ಜೀಕುತ್ತಾ ಹೋಗಬಹುದು.
ಕೆಲವು ಪದ ಅಥವಾ ಪುಟಗಳನ್ನು ಬಿಟ್ಟು ಮತ್ತೆ ಜಿಗಿಯಬಹುದು. ಪುನಃ ಹಿಂದಕ್ಕೆ ಬಂದು, ಮತ್ತೆ ಯಾವುದೋ ಪದದ ಮೈದಡವಬಹುದು. ಅದರ ವ್ಯುತ್ಪತ್ತಿ, ವಿವಿಧ ಸ್ವರೂಪಗಳನ್ನು ಅರಿಯುತ್ತಾ, ಆ ಪದದ ಪರಿಚಯ ಮಾಡಿಕೊಳ್ಳುತ್ತಾ, ನಮ್ಮ ವಿಚಾರಗಳನ್ನು ಆ ಪದದಲ್ಲಿ ಹೇಗೆ ಹುಡುಗಿಸಿಡಬಹುದು, ಹೇಗೆ ಅದನ್ನು ಬಳಸಬಹುದು ಎಂದು ಮನಸ್ಸಿನಲ್ಲಿ ಪದಬಂಧ ಕಟ್ಟಬಹುದು. ಒಂದಷ್ಟು ಹೊಸ ಪದದ ಅರ್ಥ ತಿಳಿದುಕೊಂಡು ಒಲಿಸಿಕೊಳ್ಳಬಹುದು.
ಗೊತ್ತಿರುವ ಪದಗಳ ವಿಸ್ತಾರ ಅರಿತು ನಮ್ಮ ಗ್ರಹಿಕೆಯನ್ನು ಸುಧಾರಿಸಿಕೊಳ್ಳಬಹುದು. ಹೀಗಾಗಿ ನಾನು ಯಾವ ಪದಕೋಶ ಸಿಕ್ಕರೂ, ಪ್ರೀತಿಯಿಂದ ಎತ್ತಿಕೊಂಡು ಮೈದಡವುತ್ತೇನೆ. ನನ್ನ ಬಳಿ ಪದಕೋಶಗಳ ದೊಡ್ಡ ಸಂಗ್ರಹವಿದೆ. ಈ ಪದಕೋಶಗಳನ್ನು ನೋಡಿದಾಗಲೆ ನನಗೆ ಪದಗಳ ಅಣೆಕಟ್ಟನ್ನು ನೋಡಿದಂತಾಗುತ್ತದೆ. ಆ ಪದಗಳ ಹಿನ್ನೀರಿನಲ್ಲಿ ವಿಹರಿಸಿದ ಅನುಭವ. ಪದಗಳ ಸಾಂಗತ್ಯದಲ್ಲಿದಾಗ ಬೇಸರವಾಯಿತು ಎಂಬುದಿಲ್ಲ. ಅದು ಪದಗಳ ಸಂತೆಪೇಟೆಯಲ್ಲಿ ಓಡಾಡಿದಂತೆ. ಒಬ್ಬೊಬ್ಬರು
ಒಂದೊಂದು ರೀತಿ ಇರುವಂತೆ, ಪದಗಳೂ.
ಎಲ್ಲವನ್ನೂ ಸೇರಿಸಿ ಪದಕೋಶಗಳಲ್ಲಿ ಇಟ್ಟಿದ್ದೇ ಒಂದು ಸಾಹಸ, ಕೌತುಕ. ಇಷ್ಟೆ ಪದಗಳನ್ನು ಸಂಗ್ರಹಿಸುವುದು, ಅವುಗಳಿಗೆ ಅರ್ಥಗಳನ್ನು ಹುಡುಕುವುದು, ಅವನ್ನೆ ಒಂದು ಶಿಸ್ತಿನಲ್ಲಿ ಅಕ್ಷರ ಅನುಕ್ರಮದಲ್ಲಿ ಜೋಡಿಸಿಡುವುದು ಸಣ್ಣ ಕೆಲಸವಲ್ಲ. ಇದು
ಜೀವಮಾನದ ಕೆಲಸ. ಇದು ಶಾಶ್ವತವಾದ ಕಾರ್ಯ. ಅದಕ್ಕಾಗಿಯೇ ಯಾವುದೇ ಪದಕೋಶ ಎತ್ತಿಕೊಳ್ಳಿ, ಅದು ಮಣಭಾರ ಎಂದು ಅನಿಸುವುದು. ಕೇವಲ ತೂಕದಂದೇ ಅಲ್ಲ, ಮೌಲಿಕವಾಗಿಯೂ ಅದು ಭಾರ.
I was reading the dictionary, I thought it was a poem about everything ಎಂಬ ಮಾತಿದೆ. ಪದಗಳು ಹೊರಗಿದ್ದಾಗ, ಅವುಗಳಿಗೆ ಅರ್ಥವಿದೆಯೋ, ಅರ್ಥ ಇರುತ್ತವೋ, ಗೊತ್ತಿಲ್ಲ. ಆದರೆ ಒಂದು ಸಲ ಅವು ಪದಕೋಶದಲ್ಲಿ ಪ್ರವೇಶ ಪಡೆದರೆ, ಸಹಜವಾಗಿ ಅರ್ಥವನ್ನು ಪಡೆಯುತ್ತವೆ. ಪದಕೋಶಗಳಲ್ಲಿರುವ ಪದಗಳು ಅಬ್ಬೇಪಾರಿಯಲ್ಲ. ಅಸ್ತಿತ್ವವನ್ನು ಪಡೆಯುತ್ತವೆ. ಎಲ್ಲಾ ಪದಗಳಂತೆ ತಲೆ ಎತ್ತಿ ನಿಲ್ಲುತ್ತವೆ. ಅವು ಸ್ವಂತಿಕೆಯ ಜತೆಗೆ ಅರ್ಥವಂತಿಕೆಯನ್ನು ಪಡೆಯುತ್ತವೆ. ಒಂದು ಪದ, ಪದಕೋಶದಲ್ಲಿ ಜಾಗ ಪಡೆಯಿತೆಂದರೆ ಅದಕ್ಕೆ ಸಾವಿಲ್ಲ. ಯಾರು ಬಳಸಲಿ, ಬಿಡಲಿ, ಅದು ಜನಮಾನಸದಿಂದ ದೂರವಾಗಲಿ, ಆದರೆ ಅದು ಎಂದೆಂದೂ ಸಾಯುವುದಿಲ್ಲ. ಪದಕೋಶದಲ್ಲಿ ಬೆಚ್ಚಗೆ, ಜೀವಂತವಾಗಿ ಇರುತ್ತದೆ. ದರ್ದಿದ್ದವನು ಅದನ್ನು ಬಳಸುತ್ತಾನೆ. ಅರ್ಥವಂತೂ ಇದ್ದೇ ಇದೆ. ಅದನ್ನು ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ.
ಹೆಚ್ಚೆಂದರೆ ಆಗಾಗ ಅರ್ಥವನ್ನು ಅಲ್ಪಸ್ವಲ್ಪ ಬದಲಿಸಬಹುದಷ್ಟೆ. ಹೀಗಾಗಿ ಪದಕೋಶ ಸೇರಿಕೊಂಡರೆ ಪದಗಳಿಗೆ ಧನ್ಯತಾ ಭಾವ. ಎಲ್ಲಾ ಪದಗಳಿಗೆ ಅರ್ಥ ನೀಡುವುದು ನಿಘಂಟುಕಾರನ ಕೆಲಸವಲ್ಲ. ಎಲ್ಲಾ ಪದಗಳನ್ನು ಹುಟ್ಟು ಹಾಕಿದವನು ಸಹ ಅವನಲ್ಲ. ಆದರೆ ಪದಗಳಿಗೆ ಇರುವ ಅರ್ಥವನ್ನು ಅಚ್ಚುಕಟ್ಟಾಗಿ ಕೊಡುವುದು ಅವನ ಕೆಲಸ. ಕೆಲವು ನಿಘಂಟುಕಾರರು ಪದಗಳ ಮೇಲಿನ ಮಮತೆಯಿಂದ ಅರ್ಥ ಕೊಡುವ ಕೆಲಸವನ್ನು ಮಾಡಿರಬಹುದು.
ಹರಿಯುವ ಭಾಷೆ, ಪದಕೋಶದಲ್ಲಿ ಹೋಗಿ ಸೇರಿಕೊಂಡಂತೆ ಎಂಬ ಮಾತಿದೆ. ಪದಗಳು ಪದಕೋಶದಲ್ಲಿ ಜಾಗ ಪಡೆಯಲೇ ಬೇಕು. ಹಾಗಂತ ಅಂದೇ ಇದ್ದು ಬಿಡಬಾರದು. ಅದು ಪದಗಳ comfort zone ಕೂಡ ಹೌದು. ಪದಗಳು ಪದಕೋಶದಲ್ಲಿ ಜಾಗ ಗಿಟ್ಟಿಸಿದ ನಂತರವೂ ಜನರ ನಾಲಗೆ ಮೇಲೆ ನಲಿಯುತ್ತಿರಬೇಕು. ಜನರ ನಾಲಗೆ ಮೇಲಿರುವ ಪದಗಳಿಗೆ ಪದಕೋಶದ ಹಂಗಿಲ್ಲ. ಅಂಥ ಪದಗಳನ್ನು ನಾನೂ ಸಂಗ್ರಹಿಸಿಟ್ಟುಕೊಂಡಿದ್ದೇನೆ ಎಂದು ಪದಕೋಶ ಹೆಮ್ಮೆಪಟ್ಟುಕೊಳ್ಳಬೇಕಷ್ಟೆ.
ಅಂದರೆ ಪದಗಳು ಪದಕೋಶದೊಳಗೆ ಅವಿತುಕೊಳ್ಳಬಾರದು ಅಥವಾ ಹೂತು ಹೋಗಬಾರದು. ಅದು ಆಡುಮಾತಿನ ಪಾತಳಿ ಯಲ್ಲಿ ಬದುವನ್ನು ಕಟ್ಟಿಕೊಳ್ಳಬೇಕು. ಇತ್ತೀಚೆಗೆ ನನಗೆ ಪ್ರಕಾಶಕರೊಬ್ಬರು ಕುಂದಾಪ್ರ ಕನ್ನಡ ನಿಘಂಟು’ ಕೃತಿಯನ್ನು ಕಳಿಸಿದ್ದರು. ಖ್ಯಾತ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ, ಸಿ.ಎ.ಪೂಜಾರಿ ಮತ್ತು ರಾಮಚಂದ್ರ ಉಪ್ಪುಂದ ಸೇರಿ, ಸುಮಾರು ೬೯೦ ಪುಟಗಳ ಈ ನಿಘಂಟನ್ನು ರಚಿಸಿದ್ದಾರೆ. ಅತ್ಯಂತ ಕುತೂಹಲದಿಂದ ಈ ನಿಘಂಟನ್ನು ಎತ್ತಿ ಮುದ್ದಾಡಿದೆ.
ಇದು ಸುಮಾರು ಇಪ್ಪತ್ತು ವರ್ಷಗಳ ಪರಿಶ್ರಮದ ಕೆಲಸ. ಇದು ನಿಜಕ್ಕೂ ಭಾರವಾದ ಕೆಲಸ. ಈ ಕೆಲಸ ಆಗಲೇಬೇಕಿತ್ತು. ನಿಘಂಟು
ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ಈ ಮೂವರ ಕೆಲಸ ಸ್ತುತ್ಯರ್ಹ. ಕುಂದಾಪ್ರ ಕನ್ನಡಕ್ಕೆ ಈ ಕೃತಿ ಅಕೆಡೆಮಿಕ್ ಮಾನ್ಯತೆಯ ಠಸ್ಸೆ ಹೊಡೆದಿದೆ. ಇದನ್ನು ಬೇರೆಯವರೂ ಅರ್ಥ ಮಾಡಿಕೊಳ್ಳಲು ಈ ಕೃತಿ ಅನುವು ಮಾಡಿಕೊಟ್ಟಿದೆ.
ಕಳೆದ ಒಂದೂವರೆ, ಎರಡು ದಶಕಗಳಿಂದ ಕುಂದಾಪ್ರ ಕನ್ನಡ ರಾಜ್ಯದ ಇತರ ಭಾಗಗಳಲ್ಲೂ ಹರಡಿ, ಇಂಥದ್ದೊಂದು ಅಪರೂಪ
ಸೊಗಡಿನ ಭಾಷೆಯ ಘಮಲನ್ನು ಗುರುತಿಸುವಂತೆ, ಗೌರವಿಸುವಂತೆ ಮಾಡಿರುವುದು ಉತ್ತಮ ಬೆಳವಣಿಗೆ.
ಕುಂದಾಪ್ರ ಕನ್ನಡ ಬಹಳ ಚೆಂದದ, ಒಂದು ಚಿಕ್ಕ ಪ್ರದೇಶಕ್ಕೆ ಸೀಮಿತವಾಗಿರುವ ಭಾಷೆ. ಈ ಭಾಷೆಯನ್ನೂ ಆಡುವ ಮಂದಿ ಅರಬ್ ರಾಷ್ಟ್ರಗಳು ಸೇರಿದಂತೆ, ಜಗತ್ತಿನ ಎ ದೇಶಗಳಲ್ಲೂ ಇzರೆ. ಯಾರ ಬಾಯದರೂ ಕುಂದಾಪ್ರ ಕನ್ನಡ ಕೇಳಿದರೆ ಸಾಕು, ಸಾವಿರ ದೃಶ್ಯಗಳ ಮೆರವಣಿಗೆ ಕಣ್ಮುಂದೆ ಕಟ್ಟಿದಂತಾಗುತ್ತದೆ. ಕಲ್ಯಾಣಪುರ ಹೊಳೆಯಿಂದ ಶಿರೂರು – ಭಟ್ಕಳ ತನಕ ಕೇಳಿಬರುವ ಕುಂದಾಪ್ರ ಕನ್ನಡ ಅತ್ಯಂತ ವಿಶಿಷ್ಟ, ಗ್ರಾಮೀಣ ಸೊಗಡಿನ ಭಾಷೆ. ಶಿಷ್ಟ ಅಥವಾ ಗ್ರಾಂಥಿಕ ಕನ್ನಡದಲ್ಲಿ ಕಂಡುಬಾರದ ಹಳಗನ್ನಡದ ಅವೆಷ್ಟೋ ಪದಪ್ರಯೋಗಗಳು ಕುಂದಾಪ್ರ ಕನ್ನಡದಲ್ಲಿ ಇನ್ನೂ ಬಳಕೆಯಲ್ಲಿವೆ.
‘ಕುಂದಾಪುರ ಕನ್ನಡ’ ಅಂದರೆ ಅದು ‘ಕುಂದಾಪ್ರ ಕನ್ನಡ’ ಅಲ್ಲ. ‘ಕುಂದಾಪ್ರ’ ಅಂತಿದ್ದರೆ ಮಾತ್ರ ಅದು ಕುಂದಾಪ್ರ ಕನ್ನಡ.
ಪ್ರಾಚೀನತೆ, ಗ್ರಾಮ್ಯ ಸೊಗಡು, ಮಣ್ಣಿನ ವಾಸನೆ ಮತ್ತು ಭಾಷಾ ಸಿರಿವಂತಿಕೆಯಿಂದ ಕುಂದಾಪ್ರ ಕನ್ನಡ ಅನನ್ಯತೆಯನ್ನು
ಪಡೆದಿದೆ ಎಂಬುದನ್ನು ಈ ನಿಘಂಟು ತೋರಿಸಿಕೊಟ್ಟಿದೆ. ಹಾಗೆ ನೋಡಿದರೆ, ಈ ನಿಘಂಟು ರಚನೆ ಕಾರ್ಯವನ್ನು ಸರಕಾರ, ಕನ್ನಡ ಸಾಹಿತ್ಯ ಪರಿಷತ್ತು ಅಥವಾ ಕನ್ನಡ ವಿಶ್ವವಿದ್ಯಾಲಯ ಮಾಡಬೇಕಿತ್ತು. ಇದು ಕೆಲವು ವ್ಯಕ್ತಿಗಳು ಸೇರಿ ಮಾಡುವಂಥದ್ದಲ್ಲ.
ಅಷ್ಟೊಂದು ಘನವಾದ ಕಾರ್ಯವಿದು.
ಆದರೆ ಇದನ್ನು ಪಂಜು ಗಂಗೊಳ್ಳಿ, ಪೂಜಾರಿ ಮತ್ತು ಉಪ್ಪುಂದ ಅವರು ಆಸ್ಥೆಯಿಂದ ಮಾಡಿದ್ದಾರೆ. ಇವರಿಗೆ ರಾಜಾರಾಮ್ ತಲ್ಲೂರು ಅವರು ಕೈಜೋಡಿಸಿರುವುದು ಶ್ಲಾಘನೀಯ. ಈ ಮೂವರು ಭಾಷಾ ಪಂಡಿತರಲ್ಲ, ಶಿಷ್ಟ ನಿಘಂಟುಕಾರರೂ ಅಲ್ಲ. ಅವರ ಒಂದೇ ಒಂದು ಆಶಯವೆಂದರೆ, ಕುಂದಾಪ್ರ ಕನ್ನಡದ ಶಬ್ದ, ಹಾಡು, ನುಡಿಗಟ್ಟು, ಒಗಟುಗಳನ್ನು ಒಂದೆಡೆ
ಸಂಗ್ರಹಿಸಿಡುವುದು. ಕುಂದಾಪ್ರ ಕನ್ನಡದ ಬಗ್ಗೆ ಶುದ್ಧ ಕರುಳ ಪ್ರೀತಿ, ಕಕ್ಕುಲಾತಿ ಅವರಿಂದ ಈ ಕೆಲಸ ಮಾಡಿಸಿದೆ. ಕೆಲವು ಪದ,
ನುಡಿಗಟ್ಟು, ಪದಪ್ರಯೋಗಗಳಿಗಾಗಿ ಇವರು ಊರೂರು ಅಲೆದಾಡಿ ಅವುಗಳ ಅರ್ಥ ಸಂಗ್ರಹಿಸಿಕೊಂಡು ಬಂದಿರುವುದು ಈ
ಕೃತಿ ಹೊರತರುವಲ್ಲಿ ಅಡಗಿರುವ ಪರಿಶ್ರಮವನ್ನು ಹೇಳುತ್ತದೆ.
ಕುಂದಾಪ್ರ ಕನ್ನಡ ವೈಶಿಷ್ಟ್ಯ ಅಂದರೆ ನುಡಿಗಟ್ಟುಗಳು. ‘ಗಂಡ್ ಸತ್ತ್ ದುಕ್ಕು ಬ್ಯಾರೆ, ಬಡ್ಡ್ ಕೂಪಿನ್ ಉರಿ ಬ್ಯಾರೆ’ ಎನ್ನುವ
ಮಾತಿನಲ್ಲಿ ಗ್ರಾಮೀಣ ನುಡಿಗಟ್ಟಿನ ಗಮ್ಯವನ್ನು ಆಸ್ವಾದಿಸಬಹುದು. ಗಂಡ ಸತ್ತಾಗ ಹೆಂಡತಿಯಾದವಳು ಕೂದಲನ್ನು ನುಣುಪಾಗಿ ಬೋಳಿಸಿಕೊಳ್ಳುವ ಸಂಪ್ರದಾಯವಿದೆ. ಹೀಗೆ ಬೋಳಿಸುವಾಗ, ಕೂಪು ಅಂದರೆ ಚಾಕು ಅಥವಾ ರೇಜರ್, ಹರಿತವಾಗಿ ಇಲ್ಲದಿದ್ದರೆ (ಬಡ್ಡ್) ಆಗ ಗಾಯವಾಗಿ ರಕ್ತ ಬರುತ್ತದೆ.
ಗಂಡ ಸತ್ತ ದುಃಖಕ್ಕಿಂತ ಈ ಗಾಯದ ನೋವೇ ಜಾಸ್ತಿ ಎಂದು ಹೇಳುವಾಗ, ಈ ನುಡಿಗಟ್ಟನ್ನು ಬಳಸುವುದುಂಟು. ಇಂಥ ಎರಡು
ಸಾವಿರಕ್ಕೂ ಅಽಕ ನುಡಿಗಟ್ಟು ಮತ್ತು ಅರ್ಥಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಿರುವುದು ಹೆಚ್ಚುಗಾರಿಕೆಯೇ. ‘ಹಣ್ಣೆಲೆ ಬೀಳುವಾಗ ಚಿಗುರೆಲೆ ನಗೆಯಾಡುತ್ತದಂತೆ’ ಎಂಬ ಮಾತು ಕುಂದಾಪ್ರ ಕನ್ನಡದಲ್ಲಿ ‘ಹಣ್ಣೆಲಿ ಬೀಳೊತಿಗೆ ಕಾಯ್ ಎಲಿ ನ್ಯಗಿಯಾಡತ್ತಂಬ್ರ’ ಎಂದಾಗುತ್ತದೆ. ಶಿಷ್ಟ ಕನ್ನಡ ನುಡಿಗಟ್ಟಿಗೂ ಕುಂದಾಪ್ರ ಕನ್ನಡದ ನುಡಿಗಟ್ಟಿಗೂ ಇದೇ ವ್ಯತ್ಯಾಸ. ಕುಂದಾಪ್ರ ಕನ್ನಡ ಜನರ ಮಧ್ಯೆ, ಆಡುಮಾತಿನಲ್ಲಿ ಹುಟ್ಟಿದ ಉಪಭಾಷೆ.
ಇದು ಮಣ್ಣಿನ ಭಾಷೆ. ನೆಲಪ್ರೀತಿಯ ಭಾಷೆ. ಇದಕ್ಕಿರುವ ಸೊಗಡಿನ ಮುಂದೆ, ಶಿಷ್ಟ ಭಾಷೆ ಹೈಬ್ರಿಡ್! ಈ ನಿಘಂಟು ಕುಂದಾಪ್ರ ಕನ್ನಡಕ್ಕೆ ಮಾತ್ರವಲ್ಲ, ಇಡೀ ಕನ್ನಡಕ್ಕೆ ಮಾಡಿದ ಬಹಳ ದೊಡ್ಡ ಉಪಕಾರ.
ಅದು ಹದವಾಗಿ ಅದ್ದಿದ ಮೊಸರನ್ನ!
ಹೀಗೊಂದು ಸಣ್ಣ ಕತೆ. ನಾನು ದೊಡ್ಡವನಾದ ಮೇಲೆ ಒಳ್ಳೆಯ ಅಡುಗೆ ಭಟ್ಟ ಆಗಬೇಕು. -ಹಾಗೆಂದು ಹೇಳಿದವನು ನಲವತ್ತೆಂಟು ವರ್ಷ ವಯಸ್ಸಿನ ಅಡುಗೆಯವ. ಮೊದಲ ಸಾಲನ್ನು ಓದುವಾಗ ನಿಮಗೆ ಏನೂ ಅನಿಸುವುದಿಲ್ಲ.
ಎರಡನೆಯ ಸಾಲು ಓದಿ ಮುಗಿಸುತ್ತಿದ್ದಂತೆ ಕತೆಗೆ ಸಂಪೂರ್ಣ ಟ್ವಿಸ್ಟ್. ಸಣ್ಣ ಕತೆ ಮಾಡುವ ಚಮತ್ಕಾರವಿದು. ಇನ್ನೊಂದು
ಸಣ್ಣಕತೆಯನ್ನು ಗಮನಿಸಿ. ಬಿ ಫಾರ್ ಬಾಲ್ ಎಂದು ಬರಿ ಎಂದು ಮೇಷ್ಟ್ರು ಹೇಳಿದರು. ಐದು ವರ್ಷದ ಹುಡುಗ ಬಟರ್ – ಎಂದು ಬರೆದ.
ಒಬ್ಬ ರೆಬೆಲ್ ಜನಿಸಿದ.
‘ಅವಳು ಸಿಕ್ಕಳು. ಆದರೂ ಹುಡುಕುತ್ತಿದ್ದೇನೆ’ ಎಂಬ ಕತೆ ನೂರು ಜನರಲ್ಲಿ ನೂರು ರೀತಿಯ ಭಾವ ಸ್ಪುರಣಕ್ಕೆ ಕಾರಣವಾಗ ಬಹುದು. ಇಲ್ಲಿ ಕತೆ ಮುಗಿದರೂ ಅದು ಸಾಗುತ್ತಲೇ ಇರುತ್ತದೆ. ತಾಣ ತಲುಪಿದ ನಂತರವೂ ಪಯಣ ಮುಂದುವರಿದಿರುತ್ತದೆ. ಕತೆ ಮುಗಿದ ನಂತರವೂ ಕತೆಯ ಸಾಧ್ಯತೆಗಳು ಬೆಳೆಯುತ್ತಲೇ ಇರುತ್ತವೆ. ಹೊಸ ಹೊಸ ರೂಪು ಪಡೆಯುತ್ತಲೇ ಇರುತ್ತವೆ.
ನನ್ನ ದೃಷ್ಟಿಯಲ್ಲಿ ಜಗತ್ತಿನ ಅತಿ ಸಣ್ಣ ಕತೆ ಅಂದರೆ – ಕೊನೆಯಲ್ಲಿ ಎಲ್ಲರೂ ಕತೆಗಳೇ !
ಸಣ್ಣ ಕತೆಗಳ ವೈಶಿಷ್ಟ್ಯವಿರುವುದು ಅವು ಮುಗಿಯದಿರುವುದರಲ್ಲಿ. ಕೊನೆಯಾದರೂ ಅಂತ್ಯವಾಗುವುದಿಲ್ಲ. ಇದು ಕತೆಯ
ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಸಣ್ಣ ಕತೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಅದಕ್ಕೆ ಪಾತ್ರಧಾರಿಗಳೇ ಬೇಕಿಲ್ಲ. ಅಮೂರ್ತತೆಯೂ ಅದರ ಮುಖ್ಯ ಧಾತುವೇ. ಈ ಸಾಧ್ಯತೆಯೇ ಅದರ ಹಂದರವನ್ನು ವಿಸ್ತರಿಸುತ್ತದೆ.
ಸಣ್ಣ ಕತೆ ಒಂಥರಾ ನಿಂತು ನಿಂತು ಹೊರಡುವ ಬಸ್ ಇದ್ದಂತೆ. ಆದರೂ ಪಯಣ ಮಾತ್ರ ವೇಗ ಮತ್ತು ಸರಾಗ. ಟ್ಯಾಕ್ಸಿಯಲ್ಲಿ ನನ್ನ ಪಕ್ಕ ಕುಳಿತ ಅಪರಿಚಿತ ತನ್ನಷ್ಟಕ್ಕೆ ಬಿಕ್ಕುತ್ತಿದ್ದ. ನಾನು ಒಂಟಿ ಅಲ್ಲ ಎನಿಸಿತು. ಈ ಸಣ್ಣಕತೆ ಭಾವದಲ್ಲಿ ಹದವಾಗಿ ಅದ್ದಿದ ಮೊಸರನ್ನ. ವಿಷಾದ, ಹತಾಶೆ, ಸಂತಸ, ವ್ಯಂಗ್ಯ, ಹುಯ್ದಾಟ, ತೀವ್ರತೆ.. ಮುಂತಾದ ಮಾನವ ಸಹಜ ಒಗ್ಗರಣೆ ಇದ್ದರೆ ಅದರ ಮಜಾವೇ ಬೇರೆ.
ನನ್ನೊಳಗೆ ಎಷ್ಟೊಂದು ಸಣ್ಣಕತೆಗಳಿದ್ದವು ಎಂಬುದು ಗೊತ್ತೇ ಇರಲಿಲ್ಲ ಎಂಬುದು ಸಣ್ಣಕತೆಗಳೇ ಪಾತ್ರಧಾರಿಯಾದ ಒಂದು ಕತೆ.
ಗಂಡಸರ ಬುದ್ಧಿ
ಗಂಡಸರು ಗಂಡಸರೇ. ಎಲ್ಲಿ ಹೋದರೂ ಅವರು ತಮ್ಮ ಬುದ್ಧಿ
ಬಿಡುವುದಿಲ್ಲ.
ಅದಕ್ಕೆ ನಿದರ್ಶನವಾಗಿ, ಇಬ್ಬರು ಸ್ನೇಹಿತರ ನಡುವಿನ ಈ
ಸಂಭಾಷಣೆಯನ್ನು ಕೇಳಿ.
‘ನಾನು ನನ್ನ ಹೆಂಡತಿಗೆ ಡೈಮಂಡ್ ಉಂಗುರವನ್ನು
ಉಡುಗೊರೆಯಾಗಿ ಕೊಟ್ಟೆ’
‘ಹೌದಾ? ಮತ್ತೆ ನೀನು ನನಗೆ ಹೇಳಿದ್ದು ಸುಳ್ಳಾ?’
‘ಏನು?’
‘ನಿನ್ನ ಹೆಂಡತಿಗೆ ಕಾರು ಅಂದ್ರೆ ಇಷ್ಟ ಅಂತ ಮತ್ತು ಅವಳಿಗೆ
ಕಾರನ್ನೇ ಉಡುಗೊರೆಯಾಗಿ ಕೊಡ್ತೀನಿ ಅಂತ ಹೇಳಿz
‘ಹೌದು.. ಹಾಗೆ ಹೇಳಿದ್ದೇ, ನಿಜ. ಆದರೆ ಗಿಲೀಟು (-ಕ್)
ಕಾರನ್ನು ಎಲ್ಲಿಂದ ತರಲಿ?’
ಬರೆದಿದ್ದೇ ಬೇರೆ, ಅರ್ಥವೇ ಬೇರೆ
ಅಹಮದಾಬಾದಿನ ವಿ.ರಂಗನಾಥನ್ ಅವರು ಹೊಸ ವರ್ಷದ ಮುನ್ನಾ ದಿನ ವಡಸರ್‌ದಲ್ಲಿರುವ ಇಂಡಿಯನ್ ಏರ್ ಫೋರ್ಸ್
ಕ್ಯಾಂಪ್‌ಗೆ ಸ್ಕ್ವಾಡ್ರನ್ ಲೀಡರ್ ಆದ ತಮ್ಮ ಅಳಿಯನ ಜತೆಗೆ ಹೋಗಿದ್ದರಂತೆ.
ಅಲ್ಲಿನ ಮುಖ್ಯ ದ್ವಾರದಲ್ಲಿ ನೇತು ಹಾಕಿದ್ದ ಒಂದು ಫಲಕವನ್ನು ನೋಡಿ ಒಂದು ಕ್ಷಣ ಆಶ್ಚರ್ಯಚಕಿತರಾಗಿ ನಿಂತರಂತೆ.
ಆ ಫಲಕದಲ್ಲಿ ಬರೆದಿತ್ತು Trespassers will be shot. Survivors will be shot again.
ಈ ಫಲಕ ನೋಡಿ ಫಕ್ಕನೆ ನಕ್ಕ ರಂಗನಾಥನ್, ಅಲ್ಲಿಯೇ ಇದ್ದ ಸೆಕ್ಯೂರಿಟಿ ಗಾರ್ಡ್‌ಗೆ ಈ ಫಲಕದಲ್ಲಿ ಬರೆದಿರುವ ಸಾಲಿನ ಅರ್ಥ
ಕೇಳಿದರಂತೆ. ಅದಕ್ಕೆ ಆತ ಹೇಳಿದ್ದು – ‘ಅತಿಕ್ರಮಣ ಮಾಡಿ ಯಾರಾದರೂ ಒಳಗೆ ಬಂದರೆ ಅಥವಾ ಒಳ ನುಸುಳಿ ಬಂದರೆ
ಅವರ ಮೇಲೆ ಗುಂಡು ಹಾರಿಸಲಾಗುವುದು. ಒಂದು ವೇಳೆ ಗುಂಡು ಹಾರಿಸಿದ್ದು ತಗುಲದಿದ್ದರೆ ಮತ್ತೊಮ್ಮೆ ಗುಂಡು ಹಾರಿಸ ಲಾಗುವುದು ಎಂದರ್ಥ.’
ರಂಗನಾಥನ್ ಮತ್ತೊಮ್ಮೆ ಇಂಗ್ಲಿಷಿನಲ್ಲಿ ಬರೆದಿದ್ದನ್ನು ಓದಿ,
ಜೋರಾಗಿ ನಕ್ಕರಂತೆ.
ವೆಜಿಟೇರಿಯನ್ ಬಾಸ್ !
ಇತ್ತೀಚಿನ ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್‌ನಲ್ಲಿ ಓದಿದ ಒಂದು ಪ್ರಸಂಗ. ಒಮ್ಮೆ ತಮ್ಮ ಬಾಸ್ ಬರ್ತ್ ಡೇ ಪಾರ್ಟಿಯನ್ನು ತಮ್ಮ
ಮನೆಯಲ್ಲಿ ಆಚರಿಸಲು ಅವರ ಸಹೋದ್ಯೋಗಿಯೊಬ್ಬ ನಿರ್ಧರಿಸಿದನಂತೆ. ಆ ಸಹೋದ್ಯೋಗಿಗೆ ಗೊತ್ತಿತ್ತು, ತನ್ನ ಬಾಸ್ ಶುದ್ಧ ಶಾಕಾಹಾರಿಯೆಂದು. ಆದರೂ ಬಾಸ್, ‘ಆಯ್ತು ಬರ್ತೇನೆ, ಆದರೆ ನಿಮಗೆ ಗೊತ್ತಲ್ಲ, ನಾನು ವೆಜಿಟೇರಿಯನ್ ಅಂತ.
ಮೊಟ್ಟೆ ಹಾಕಿದ ಕೇಕ್‌ನ್ನು ಸಹ ನಾನು ತಿನ್ನುವುದಿಲ್ಲ ಅಂತ. ಆದರೂ ಗೊತ್ತಿರಲಿ ಎಂದು ಹೇಳಿದೆ’ ಎಂದು ಹೇಳಿದರು.
ಸಹೋದ್ಯೋಗಿ, ಕೇಕ್ ಮಾಡುವವನಿಗೆ ಎರಡೆರಡು ಸಲ ಫೋನ್ ಮಾಡಿ ಬಾಸ್ ಹೇಳಿದ್ದನ್ನು ಹೇಳಿದ. ಸರಿ, ಬಾಸ್ ತನ್ನ ಸಹೋದ್ಯೋಗಿ ಮನೆಗೆ ಬಂದ. ಮನೆಯ ಸೇರಿದ್ದರು. ಕೇಕ್ ತರಲಾಯಿತು. ಇನ್ನೇನು ಬಾಸ್ ಕೇಕ್ ಕಟ್ ಮಾಡಬೇಕು ಎನ್ನುವಾಗ ಅದರ ಮೇಲೆ ಬರೆದಿದ್ದು ಕಾಣಿಸಿತು – Happy Birthday, Eggless !