Friday, 15th November 2024

ಬುರ್ಜ್‌ ಖಲೀಫಾ ಬೇರೆ, ಮಿಯಾ ಖಲೀಫಾ ಬೇರೆ

ವಿದೇಶ ವಾಸಿ

ಕಿರಣ್ ಉಪಾಧ್ಯಾಯ ಬಹ್ರೈನ್‌

ಮೊನ್ನೆ ನನ್ನ ಹಳೆಯ ಮಿತ್ರನೊಬ್ಬ ಫೋನ್ ಮಾಡಿದ್ದ. ಹೆಸರು ಬೇಕಾದರೆ ಅರಸಯ್ಯ ಅಂದುಕೊಳ್ಳಿ. ಆಂಧ್ರಪ್ರದೇಶ ಮೂಲದ ಆತ ಸೌದಿ ಅರೇಬಿಯಾದಲ್ಲಿ ನನ್ನೊಂದಿಗೆ ಹದಿನೇಳು ವರ್ಷ ಇಕ್ವಿಪ್ಮೆಂಟ್ ಆಪರೇಟರ್ ಆಗಿ ಕೆಲಸಮಾಡಿದ್ದ.

ಆತನ ಕರೆ ಬಂದರೆ ಸಾಕು, ನನ್ನ ಆತಂಕ ಮುಗಿಲಿಗೇರುತ್ತದೆ. ಯಾವುದೇ ಆತಂಕವಾದಿಯ ಅಥವಾ ಭೂಗತ ಲೋಕದ ಡಾನ್ ಕರೆ ಮಾಡಿದರೂ ನಾನು ಅಷ್ಟು ಹೆದರಲಿಕ್ಕಿಲ್ಲ, ಆದರೆ ಈ ನನ್ನ ಮಿತ್ರನ ಕರೆ ಬಂದರೆ ನನ್ನ ಬೆವರಿಳಿಯುತ್ತದೆ. ಕಾರಣ, ಆತನ ಪ್ರಶ್ನೆಗಳು. ಒಂದು ಪ್ರಶ್ನೆಗೆ ಒಬ್ಬರ ಕೈಕಾಲು ಬಿಡಿಸುವ ತಾಕತ್ತಿದೆ ಎಂದು ಆತ ಆಗಾಗ ನೆನಪಿಸುತ್ತಿರುತ್ತಾನೆ. ಆತನ ಮಾತು ಆರಂಭವಾಗುವುದೇ ಪ್ರಶ್ನೆಯಿಂದ.

ಸೌಜನ್ಯದ ಮಾತುಗಳಾದ ನಮಸ್ಕಾರ, ಹೇಗಿದ್ದೀರಿ, ಚೆನ್ನಾಗಿದ್ದೀರಾ ಇವನ್ನೆಲ್ಲ ಆತ ಕೇಳುವುದು ಕೊನೆಯಲ್ಲಿ. ಕರೆ ಸ್ವೀಕರಿಸಿದಾಗ ಮೊದಲು ಬರುವುದು ಸುಂಟರಗಾಳಿಯಂತಹ ಪ್ರಶ್ನೆಗಳು. ಮೊನ್ನೆಯೂ ಅಂತಹದ್ದೇ ಒಂದು ಕರೆ ಬಂತು, ಬಾಣದಂತಹ ಒಂದು ಪ್ರಶ್ನೆ ಕಿವಿಗೆ ಅಪ್ಪಳಿಸಿತು. ‘ಬುರ್ಜ್ ಖಲೀಫಾಗೂ ಮಿಯಾ ಖಲೀಫಾಗೂ ಏನು ಸಂಬಂಧ?’ ದೂರ ದೂರದವರೆಗೆ ಯಾವ
ಸಂಬಂಭವೂ ಇಲ್ಲ ಎಂದು ಉತ್ತಾರಿಸುವುದಕ್ಕೆ ಮೊದಲು ‘ಏಕೆ? ಏನಾಯ್ತು?’ ಎಂದು ಕೇಳಿದೆ.

‘ಏನಿಲ್ಲ, ಮೊನ್ನೆ ಬುರ್ಜ್ ಖಲೀ-ದಲ್ಲಿ ಚಿತ್ರನಟ ಸುದೀಪ್ ಚಿತ್ರ ತೋರಿಸಿ ಶುಭ ಕೋರಿದರಂತೆ, ಆದರೆ ಮಿಯಾ ಖಲೀಫಾ ಬಗ್ಗೆ ಭಾರತದಲ್ಲಿ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರಲ್ಲ, ಅದಕ್ಕೆ ಕೇಳಿದೆ. ಮಿಯಾ ಖಲೀಫಾ ಅಂದರೆ ಖಲೀಫಾ ಮನೆತನಕ್ಕೆ
ಸೇರಿದವನಾ?’ ಎಂದ. ‘ಈಗ’ ತೆಲಗು ಚಿತ್ರದಿಂದ ನಟ ಸುದೀಪ್ ಅಭಿಮಾನಿಯಾಗಿದ್ದ ನನ್ನ ಮಿತ್ರ, ಮಿಯಾ ಖಲೀಫಾಳ ಅಶ್ಲೀಲ ಚಿತ್ರ ವೀಕ್ಷಿಸುವ ನಾಲ್ಕುಕೋಟಿ ಭಾರತೀಯರಲ್ಲಿ (ಆಕೆಯೇ ಕೊಡುವ ಲೆಕ್ಕ) ಸೇರಿಲ್ಲವೆಂಬುದಂತೂ ದೃಢವಾಯಿತು.

‘ಸನ್ನಿ ಲಿಯೋನ್. ಹೆಸರು ಕೇಳಿದ್ದೀಯಾ?’ ಎಂದೆ, ‘ಹೌದು’ ಎಂದ. ‘ವೃತ್ತಿಯಲ್ಲಿ ಮಿಯಾ ಖಲೀಫಾ ಆಕೆಯ ತಂಗಿ’ ಎಂದಾಗ ಆತ ಸುಸ್ತು. ‘ಅಯ್ಯೋ ನಾನು ಮಿಯಾ ಖಲೀ- ಗಂಡು ಅಂದುಕೊಂಡಿದ್ದೆ’ ಎಂದು ಮಾತು ಮುಂದುವರಿಸಿದ್ದ. ಆವನೊಂದಿಗೆ ಕೆಲ ನಿಮಿಷ ಮಾತನಾಡಿದ ನಂತರವೇ ಆತನಿಗೆ ವಿಷಯ ಅರ್ಥವಾದದ್ದು. ಆಗಿದ್ದಿಷ್ಟೇ, ಇತ್ತೀಚೆಗೆ ಸುದೀಪ್ ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷವಾದ ಸಂಭ್ರಮದಲ್ಲಿ ಯುಎಇ ರಾಷ್ಟ್ರದ ದುಬೈನಲ್ಲಿರುವ ಬುರ್ಜ್ ಖಲೀಫಾ ಕಟ್ಟಡದ ಹೊರಮೈ ಮೇಲೆ ಸುದೀಪ್ ಚಿತ್ರ ಹಾಕಲಾಗಿತ್ತು.

ವಿಶ್ವದ ಅತಿ ಎತ್ತರದ ಕಟ್ಟಡ ಎಂದೇ ಹೆಸರಾಗಿರುವ ಬುರ್ಜ್ ಖಲೀಫಾ ಮೇಲೆ ಸುದೀಪ್ ಚಿತ್ರದೊಂದಿಗೆ ಕರ್ನಾಟಕದ ಬಾವುಟದ ಹಳದಿ ಮತ್ತು ಕೆಂಪು ಬಣ್ಣ, ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಟೈಟಲ್ ಲೋಗೋವನ್ನೂ ಪ್ರಕಟಗೊಳಿಸ ಲಾಯಿತು. ಇದು ಕನ್ನಡಿಗರು ಹೆಮ್ಮೆ ಪಡುವ ವಿಷಯವಂತೂ ಹೌದು. ಇದು ದುಬೈನಲ್ಲಷ್ಟೇ ಅಲ್ಲ, ಭಾರತದಲ್ಲೂ ಸಾಕಷ್ಟು ಹವಾ ಎಬ್ಬಿಸಿದ್ದು ಎಲ್ಲರಿಗೂ ತಿಳಿದ ವಿಷಯವೇ.

ಇದೇ ಸಂದರ್ಭದಲ್ಲಿ ರೈತ ಚಳುವಳಿಯ ಪರವಾಗಿ ನಡೆದ ಸರಣಿ ಟ್ವೀಟ್‌ಗಳೂ ಸುದ್ದಿ ಮಾಡಿದವು. ಬಹಳಷ್ಟು ಜನ ಮಿಯಾ ಖಲೀಫಾ ಹೆಸರು ಕೇಳಿದ್ದೇ ಆಗ ಎಂದರೆ ತಪ್ಪಾಗಲಾರದು. ಟ್ವಿಟರ್, ಫೇಸ್ಬುಕ್‌ನಂಥ ಸಾಮಾಜಿಕ ಮಾಧ್ಯಮಗಳ ಲೋಕದಿಂದ ಇಂದಿಗೂ ಹೊರಗುಳಿದ ನನ್ನ ಮಿತ್ರ ಆ ಹೆಸರು ಕೇಳಿದ್ದು ಮೊನ್ನೆಯೇ. ತನ್ನ ಟ್ವೀಟ್ ಅಷ್ಟೊಂದು ಗುಬ್ಬಿಸುತ್ತದೆ ಎಂದು ಮಿಯಾ ಕೂಡ ಎಣಿಸಿರಲಿಕ್ಕಿಲ್ಲ.

ಅಲ್ಲಿಯವರೆಗೂ ಅವಳ ಟ್ವೀಟ್‌ಗೆ ಬರುತ್ತಿದ್ದ ಲೈಕ್ ಗಳು ಒಂದು ಸಾವಿರದಿಂದ ಇಪ್ಪತ್ತು ಸಾವಿರದವರೆಗೆ. ಭಾರತದಲ್ಲಿ ನಡೆಯು ತ್ತಿರುವ ರೈತ ಚಳುವಳಿಯ ಪರವಾಗಿ ಆಕೆ ಮಾಡಿದ ಮೊದಲ ಟ್ವೀಟ್‌ಗೆ ಒಂದು ಲಕ್ಷಕ್ಕೂ ಮಿಗಿಲಾಗಿ ಲೈಕ್‌ಗಳು ಬಂದವು. ನಂತರ ಈ ವಿಷಯದ ಕುರಿತಾಗಿ ಮಾಡಿದ ಎಲ್ಲಾ ಟ್ವೀಟ್‌ಗಳಿಗೂ ಲಕ್ಷ ಮೀರಿದ ಲೈಕ್‌ಗಳೇ. ಈ ನಡುವೆ ಆಕೆ ಮಾಡುತ್ತಿದ್ದ ಇತರ ಟ್ವೀಟ್ ‌ಗಳಿಗೆ ಅದೇ ಸಾವಿರದ ಆಸುಪಾಸಿನ ಲೈಕ್‌ಗಳು ಎನ್ನುವುದು ಬೇರೆ ವಿಚಾರ ಬಿಡಿ.

ಇದು ಹಣಕೊಟ್ಟು ಮಾಡಿಸಿದ ಟ್ವೀಟ್‌ಗಳ, ಟ್ವೀಟ್ ಮಾಡಿಸಲು, ಲೈಕ್ ಮಾಡಲು ಒಂದು ವರ್ಗದ ಜನರೇ ಇದರ ಹಿಂದೆ ಇದ್ದೀರಾ ಇವೆಲ್ಲ ಬೇರೆಯದೇ ಚರ್ಚೆಯ ವಿಷಯಗಳು. ಗ್ರೇಟಾ ಥಂಬರ್ಗ್, ರಿಹಾನಾರಂಥವರು ಒಂದೆರಡು ಟ್ವೀಟ್ ಮಾಡಿ ಸುಮ್ಮನಾದರು. ಮಿಯಾ ಮಾತ್ರ ಕೈ ಕೆರೆದು, ಕೆರೆದು ಟ್ವೀಟ್ ಮಾಡಿದಳು. ಆದರೂ, ಎಲ್ಲಾ ಒಂದು ಮೂಲೆಯಲ್ಲಿದ್ದ ಅವಳ ಹೆಸರನ್ನು ನನ್ನ ಮಿತ್ರನ ತಲೆಯಲ್ಲಿ ತುಂಬಿ, ಬಾಯಲ್ಲಿ ಬರುವಂತೆ ಮಾಡಿದ ಶ್ರೇಯ ಏನಿದ್ದರೂ ಮಾಧ್ಯಮದವರಿಗೇ
ಸಲ್ಲಬೇಕು.

ಆದರೆ ಆತನ ಪ್ರಶ್ನೆ ಸಾಧುವೇ. ಸಾಮಾನ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ಮಿಯಾ ಎನ್ನುವ ಶಬ್ದ ಗಂಡಸರಿಗೆ ಸಂಬೋಧನೆಗೆ ಇರುವಂಥದ್ದು. ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಭಾರತ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಮುಸ್ಲಿಂ ಸಮುದಾಯದವರು ಪುರುಷರ ಹೆಸರಿನ ಮುಂದೆ ಗೌರವ ಸೂಚಕವಾಗಿ ಬಳಸುವ ಉರ್ದು ಪದ ‘ಜನಾಬ’ ಮತ್ತು ‘ಮಿಯಾ.’ ಕೊಲ್ಲಿ ರಾಷ್ಟ್ರಗಳಲ್ಲಿ ಗೌರವ ಸೂಚಕವಾಗಿ ‘ಶೇಖ್’ ಪದ ಬಳಸುತ್ತಾರಲ್ಲ, ಹಾಗೆಯೇ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಗಂಡನನ್ನು ಮಿಯಾ ಎಂದು ಹೇಳುವುದೂ ಇದೆ. ಆದರೆ ಎಲ್ಲಿಯೂ ಈ ಪದವನ್ನು ಸೀಲಿಂಗಕ್ಕೆ ಸಂಬೋಧಿಸುವುದಿಲ್ಲ.

ಹೆಣ್ಣು ಮಕ್ಕಳಿಗೆ ಈ ಹೆಸರಿಟ್ಟಿದ್ದನ್ನು ನಾನಂತೂ ಕೇಳಿಲ್ಲ. ಹಾಗಾಗಿಯೇ ನನ್ನ ಮಿತ್ರ ಮಿಯಾ ಖಲೀ- ಗಂಡು ಎಂದು ಎಣಿಸಿದ್ದು.
ಇನ್ನು ದುಬೈನಲ್ಲಿರುವ ‘ವರ್ಟಿಕಲ್ ಸಿಟಿ’ ಎಂದೇ ಹೆಸರಾದ ಬುರ್ಜ್ ಖಲೀಫಾಕ್ಕೆ ಆ ಹೆಸರೇ ಏಕೆ? ಅರಬ್ಬಿ ಮತ್ತು ಉರ್ದು ಭಾಷೆಯಲ್ಲಿ ‘ಬುರ್ಜ್’ ಎಂದರೆ ಶಿಖರ, ಗೋಪುರ, ಎತ್ತರವಾದ ಸ್ಥಾವರ ಅಥವಾ ಕಟ್ಟಡ. ‘ಖಲೀ-’ ಎಂದರೆ ನಾಯಕ, ಆಡಳಿತ ಗಾರ ಅಥವಾ ಉತ್ತರಾಧಿಕಾರಿ. ಯುನೈಟೆಡ್ ಅರಬ್ ಎಮಿರೆಟ್ಸ್‌ನ ಅಧ್ಯಕ್ಷ ಮತ್ತು ಅಬುಧಾಬಿ ಪ್ರಾಂತ್ಯದ ದೊರೆಯ ಹೆಸರು ‘ಖಲೀಫಾ.’

ಹಾಗಾದರೆ ಇಷ್ಟು ಎತ್ತರದ ಕಟ್ಟಡಕ್ಕೆ ವ್ಯಕ್ತಿಯ ಹೆಸರೇಕೆ? ಬುರ್ಜ್ ಅಲ್ ಅರಬ್ ಇದ್ದಂತೆ ಬುರ್ಜ್ ಅಲ್ ಖಲೀಜ್, ಬುರ್ಜ್ ದುಬೈ, ಬುರ್ಜ್ ಎಮರಾತಿ ಏನಾದರೂ ಇಡಬಹುದುತ್ತಲ್ಲ ಎಂದು ಸಾಮಾನ್ಯವಾಗಿ ಪ್ರಶ್ನೆ ಮೂಡುವುದಿದೆ. ನಿರ್ಮಾಣ
ಕಾರ್ಯ ಆರಂಭವಾದಾಗ ಈ ಕಟ್ಟಡಕ್ಕೆ ‘ಬುರ್ಜ್ ಅಲ್ ದುಬೈ’ ಎಂಬ ಹೆಸರೇ ಇತ್ತು. ನಿರ್ಮಾಣದ ಮುಗಿಯುವ ಹಂತಕ್ಕೆ ತಲುಪಿದಾಗ ಯೋಜನೆಗೆ ಆರ್ಥಿಕ ಸಂಕಷ್ಟ ಎದುರಾಯಿತು. ಆ ಸಂದರ್ಭದಲ್ಲಿ ಸಹಾಯಮಾಡಿದ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಗೌರವಾರ್ಥವಾಗಿ ಅವರ ಹೆಸರನ್ನು ಈ ಗಗನಚುಂಬಿ ಇಮಾರತಿಗೆ ಇಡಲಾಯಿತು.

ಆದರೆ ಖಲೀಫಾ ಎಂಬ ಹೆಸರಿದ್ದ ಕಾರಣ ಸಂಬಂಧ ಕಲ್ಪಿಸಿದ್ದು ನನ್ನ ಮಿತ್ರನ ಮುಗ್ಧತೆಯೋ, ಮೂರ್ಖತನವೋ, ಅಜ್ಞಾನವೋ ಗೊತ್ತಿಲ್ಲ, ವಿಪರ್ಯಾಸವಂತೂ ಹೌದು. ಬುರ್ಜ್ ಖಲೀ- ವಿಷಯ ಹೆಚ್ಚೇನೂ ತಿಳಿಯದ ಆತನಿಗೆ ನನಗೆ ತಿಳಿದಷ್ಟನ್ನಾದರೂ ಹೇಳಬೇಕೆನಿಸಿತು. 2010ರ ಜನೆವರಿ ತಿಂಗಳಿನಲ್ಲಿ ಉದ್ಘಾಟಿಸಲ್ಪಟ್ಟರೂ, 2009ರ ಅಕ್ಟೋಬರ್ ತಿಂಗಳಿನಿಂದಲೇ ವಿಶ್ವದ
ಅತ್ಯಂತ ಎತ್ತರದ ಕಟ್ಟಡ ಎಂದು ದಾಖಲಾದ ಬುರ್ಜ್ ಖಲೀಫಾದ ನಿರ್ಮಾಣ ಕಾರ್ಯ ಆರಂಭವಾದದ್ದು 2004ರ ಜನವರಿ ಯಲ್ಲಿ.

ಅದಕ್ಕೆ ಒಂದೂವರೆ ವರ್ಷ ಮೊದಲೇ ವಿನ್ಯಾಸ, ಯೋಜನೆ, ಅಂದಾಜು ವೆಚ್ಚದ ಕೆಲಸ ಆರಂಭವಾಗಿತ್ತು. ಮೃದುವಾದ ಕಲ್ಲು ಮತ್ತು ಮರಳು ಭೂಮಿಯಲ್ಲಿ ಎಂಟುನೂರ ಮೂವತ್ತು ಮೀಟರ್ ಎತ್ತರದ, ಮೋಡವನ್ನೂ ಸೀಳಿ ತಲೆಯೆತ್ತಿ ನಿಂತು, ಬಾನಿಗೆ
ನಾಲಿಗೆ ಚಾಚುವ ಕಟ್ಟಡ ನಿರ್ಮಾಣವೆಂದರೆ ಬರೇ ಮಾತಲ್ಲ, ಅದಕ್ಕೆ ಭೀಮ ಗುಂಡಿಗೆಯೇ ಬೇಕು. ಅದುವರೆಗೆ ವಿಶ್ವದ ಅತಿ ಎತ್ತರದ ಕಟ್ಟಡವೆಂದು ಕರೆಸಿಕೊಳ್ಳುತ್ತಿದ್ದ ತೈವಾನ್ ದೇಶದ ರಾಧಾನಿಯಲ್ಲಿದ್ದ ‘ತೈಪೆ 101’ (ಈಗ ಎರಡನೆಯ ಸ್ಥಾನ ದಲ್ಲಿರು ವುದು 632 ಮೀಟರ್ ಎತ್ತರದ ಶಾಂಘೈ ಟವರ್) ಕಟ್ಟಡಕ್ಕಿಂತಲೂ ಇನ್ನೂರು ಮೀಟರ್ ಎತ್ತರದ ಕಟ್ಟಡ ನಿರ್ಮಾಣದ ಕನಸು ಕಾಣುವುದಕ್ಕೂ ಶತಗಜ ತ್ರಾಣ ಬೇಕು.

ಘಟಾನುಗಟಿ ದೇಶಗಳೇ ಕಲ್ಪಿಸಿಕೊಳ್ಳಲಾಗದ ಯೋಜನೆಗೆ ಇಂದಿಗೆ ಎರಡು ದಶಕದ ಹಿಂದೆಯೇ ಕೈ ಹಾಕಿತ್ತು ದುಬೈ. ಆ ಕಾರಣಕ್ಕೆ ದುಬೈಗೆ ಒಂದು ದೊಡ್ದ ಸಲಾಂ ಹೇಳಲೇಬೇಕು. ಅಂತೆಯೇ ಈ ಯೋಜನೆಯನ್ನು ವಿನ್ಯಾಸಗೊಳಿಸಿದ ಎಂಜಿನಿಯರ್ ಆಡ್ರಿಯನ್ ಸ್ಮಿತ್‌ಗೂ ಒಂದು ಗೌರವ ಸಲ್ಲಿಸಲೇ ಬೇಕು. ಎಮಾರ್ ಪ್ರಾಪರ್ಟೀಸ್ ಒಂದುವರೆ ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಮೂರು ಲಕ್ಷ ಮೂವತ್ತು ಸಾವಿರ ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಸುರಿಯಲಾಗಿದೆ.

ಬಲವರ್ಧನೆಗೆ ಮುವತ್ತೊಂಬತ್ತು ಸಾವಿರ ಟನ್ ಉಕ್ಕಿನ ಸರಳನ್ನು ಬಳಸಲಾಗಿದೆ. ಒಂದು ಲಕ್ಷ ಮೂರು ಸಾವಿರ ಚದರ ಮೀಟರ್‌ ನಷ್ಟು ಗ್ಲಾಸ್ ಪೆನಲ್‌, ಹದಿನೈದುವರೆ ಸಾವಿರ ಚದರ ಮೀಟರ್ ಕೆತ್ತನೆಯಿಂದ ಕೂಡಿದ ಸ್ಟೆನ್ಲೆಸ್ ಸ್ಟೀಲ್ ಬಳಸಲಾಗಿದೆ. ಒಂಬತ್ತು ನಿರ್ವಹಣೆಯ ಅಂತಸ್ತುಗಳೂ ಸೇರಿ ಒಟ್ಟೂ 163 ಅಂತಸ್ತಿನ ಈ ಮಾಯಾನಗರಿಯಲ್ಲಿದೆ.

555 ಮೀಟರ್ ಎತ್ತರದಲ್ಲಿ, 124 ಮತ್ತು 125ನೇ ಮಹಡಿಯಲ್ಲಿ ವೀಕ್ಷಣಾಲಯವೂ ಇದ್ದು, ಎಲ್ಲಾ ದಿಕ್ಕುಗಳಿಂದಲೂ ದುಬೈ ನಗರವನ್ನು ನೋಡುವ ಸೌಲಭ್ಯವಿದೆ. ಈ ಆಕಾಶಚುಂಬಿಯ ಒಳಗೆ ಒಟ್ಟೂ ಐವತ್ತೇಳು ಲಿಫ್ಟ್‌ಗಳೂ, ಎಲಿವೇಟರ್‌ಗಳೂ ಇವೆ.  ಇಲ್ಲಿಯ ಲಿಫ್ಟ್ ಅತ್ಯಂತ ವೇಗವಾಗಿ ಚಲಿಸುವ ಲಿಫ್ಟ್ ಆಗಿದ್ದು ಸೆಕಂಡ್ ಒಂದಕ್ಕೆ ಹತ್ತು ಮೀಟರ್ ಎತ್ತರಕ್ಕೆ ಚಲಿಸುತ್ತದೆ. ಅಂದರೆ, ನೆಲದಿಂದ 124ನೇ ಮಹಡಿ ತಲುಪಲು ಅಥವಾ ಅರ್ಧ ಕಿಲೋ ಮೀಟರ್ ಎತ್ತರಕ್ಕೇರಲು ಕೇವಲ ಒಂದು ನಿಮಿಷ ಸಾಕು. ಈ ಕಟ್ಟಡದ ಹೊರ ಮೇಲ್ಮೆ ಯನ್ನು ಪ್ರತಿನಿತ್ಯ ಶುಚಿಗೊಳಿಸಲಾಗುತ್ತದೆ.

ಆದರೂ ಒಂದು ಕಡೆಯಿಂದ ಆರಂಭಿಸಿದರೆ ಪುನಃ ಅದೇ ಜಾಗ ತಲುಪಲು ಮೂರು ತಿಂಗಳು ಬೇಕು! ಸುಮಾರು ಇಪ್ಪತ್ತು ಕಿಲೋ ಮೀಟರ್ ದೂರದಿಂದಲೂ ತನ್ನ ಅಸ್ತಿತ್ವ ತೋರಿಸಿಕೊಡುವ ಈ ಕಟ್ಟಡದಲ್ಲಿ ಒಟ್ಟೂ 900 ಮನೆಗಳಿವೆ. ಇಲ್ಲಿ ಎರಡು
ಬೆಡ್ರೂಮ್‌ನ ಒಂದು ಮನೆಯನ್ನು ಬಾಡಿಗೆಗೆ ಹಿಡಿಯಬೇಕೆಂದರೂ ವರ್ಷಕ್ಕೆ ನಲವತ್ತು ಲಕ್ಷ ರುಪಾಯಿ ಕೊಡಬೇಕು. ಖರೀದಿಗೆ ಬೇಕೆಂದರೆ ಒಂದು ಬೆಡ್ರೂಂನ ಮನೆಯ ಮೌಲ್ಯ ಎಂಟು ಕೋಟಿ ರುಪಾಯಿ.

ಎರಡು ಬೆಡ್ರೂಮ್ ಇರುವಮನೆಯ ಮೌಲ್ಯ ಸುಮಾರು ಹದಿಮೂರು ಕೋಟಿ, ನಾಲ್ಕು ಬೆಡ್ರೂಮ್ ಇರುವ ಪೆಂಟ್ಹೌಸ್ ಮೌಲ್ಯ ಐವತ್ತು ಕೋಟಿ ರುಪಾಯಿ. ಬುರ್ಜ್ ಖಲೀಫಾದ ನೆಲದ ವಿಸ್ತೀರ್ಣ ಸುಮಾರು ಮೂರು ಲಕ್ಷ ಹತ್ತು ಸಾವಿರ ಚದರ ಮೀಟರ್. ಪಂಚತಾರಾ ಹೋಟೆಲ, ದೊಡ್ಡ ಶಾಪಿಂಗ್ ಮಾಲ್‌, ಅಕ್ವೇರಿಯಮ್‌, ಎಲ್ಲವನ್ನೂ ಒಳಗೊಂಡ ಈ ಕಟ್ಟಡ ಸ್ವತಃ ಒಂದು ನಗರವೆಂದರೆ ತಪ್ಪಾಗಲಾರದು.

ಅಂದಹಾಗೆ, ಕಟ್ಟಡದ ಮೇಲೆ ಮೊನ್ನೆ ಸುದೀಪ್ ಚಿತ್ರದ ಜಾಹೀರಾತು ಕಂಡಿತಲ್ಲ, ಅಂತಹ ಜಾಹೀರಾತು ಪ್ರದರ್ಶನಕ್ಕೆ ಬೆಲೆ ಎಷ್ಟು  ಗೊತ್ತೇ? ಮೂರು ನಿಮಿಷಕ್ಕೆ ಸುಮಾರು ಐವತ್ತರಿಂದ ಅರವತ್ತು ಲಕ್ಷ ರುಪಾಯಿಗಳು! ವಿಮಾನದಿಂದ ದುಬೈಗೆ ಬಂದಿಳಿ ಯುವಾಗ ಮೇಲಿನಿಂದ ನೋಡಿದರೆ ನಿಲ್ಲಿಸಿಟ್ಟ ಇಂಜೆಕ್ಷನ್ ಸಿರೀಂಜ್‌ನಂತೆ ಕಾಣುವ ಈ ಕಟ್ಟಡದ ನಿರ್ಮಾಣಕ್ಕೆ ತಗಲಿದ್ದು ಬರೊಬ್ಬರಿ ಇಪ್ಪತ್ತೆರಡು ಮಿಲಿಯನ್ ಮ್ಯಾನ್ ಹವರ್ಸ್ !

ಪ್ರಮುಖ ಗುತ್ತಿಗೆದಾರ ಸಂಸ್ಥೆ ಕೋರಿಯಾದ ಸ್ಯಾಮ್ಸಂಗ್ ಸಿ ಎಂಡ್ ಟಿ ಕಾರ್ಪೊರೇಷನ್, ನಿರ್ಮಾಣದ ಹಂತದಲ್ಲಿ ಸಾಕಷ್ಟು
ತೀವ್ರಗತಿಯಲ್ಲಿ ಕಾರ್ಮಿಕರ ಮುಷ್ಕರಗಳನ್ನೂ ಎದುರಿಸಿದೆ. ಆದರೂ ಹಿಂದಡಿಯಿಡದೆ, ಕಾರ್ಯ ವಿಮುಖರಾಗದೆ ಹಡಿದ ಕಾರ್ಯವನ್ನು ಮಾಡಿ ಮುಗಿಸಿದ್ದು ಶ್ಲಾಘನೀಯವೇ. ಮರುಭೂಮಿಯ ಮಿತಿ ಮೀರುವ ತಾಪಮಾನ, ಆಗಾಗ ಬೀಸುವ
ಮರಳಿನ ಗಾಳಿ, ಒಂದಾ ಎರಡಾ? ಅದರಲ್ಲೂ ಎತ್ತರಕ್ಕೆ ಹೋದಂತೆ ಸವಾಲಿನ ಸರಪಳಿಗಳೇ.

ಇಷ್ಟೊಂದು ಸಂಕಷ್ಟದ ನಡುವೆಯೂ ನಿರ್ಮಾಣ ಹಂತದಲ್ಲಿರುವಾಗ ಪ್ರಾಣ ಕಳೆದುಕೊಂಡದ್ದು ಒಬ್ಬ ಮಾತ್ರ. ಅದೂ ಆತ್ಮಹತ್ಯೆ ಮಾಡಿಕೊಂಡು. ಸಾಮಾನ್ಯ ಕಟ್ಟಡಕ್ಕೆ ಒಂದು ಕಡೆಯಿಂದ ಕಾಂಕ್ರೀಟ್ ಆರಂಭಿಸಿ ಇನ್ನೊಂದು ಕಡೆಗೆ ಮುಗಿಸುತ್ತಾರೆ. ಈ ಕಟ್ಟಡಕ್ಕೆ ಒಂದುಕಡೆಯಿಂದ ಆರಂಭಿಸಿದರೆ ಆ ಕಡೆ ಹೆಚ್ಚು ಭಾರವಾಗಿ ಧಕ್ಕೆ ಉಂಟಾಗಬಹುದು ಎಂದು ಮಧ್ಯದಿಂದ ಆರಂಭಿಸುತ್ತಿದ್ದರಂತೆ. ಇದು ಸಿವಿಲ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್ ಲೋಕಕ್ಕೆ ಒಂದು ಸವಾಲೂ ಹೌದು, ಉತ್ತರವೂ ಹೌದು.

ಒಂದು ಕಡೆ ಆಡ್ರಿಯನ್ ಸ್ಮಿತ್‌ನಂಥ ನೂರಾರು ಎಂಜಿನಿಯರ‍್ಸ್‌ಗಳು, ಆತನ ಕಂಪನಿ ಸ್ಕಿಡ್‌ಮೋರ್, ಓವಿಂಗ್ಸ್ ಎಂಡ್ ಮೆರಿಲ್ ಸೇರಿದಂತೆ ಎಮಾರ್, ಸ್ಯಾಮ್ಸಂಗ್‌ನಂಥ ಹತ್ತಾರು ದೊಡ್ಡ ಸಂಸ್ಥೆಗಳು, ಸಾವಿರಾರು ಕಾರ್ಮಿಕರು ಆರು ವರ್ಷ ಹಗಲಿರುಳೆನ್ನದೇ ಶ್ರಮಪಟ್ಟ ಪ್ರತಿಫಲ ಬುರ್ಜ್ ಖಲೀಫ್. ಇನ್ನೊಂದೆಡೆ ಕೇವಲ ಮೂರು ತಿಂಗಳು (ಆಕೆಯೇ ಹೇಳಿಕೊಳ್ಳುವಂತೆ) ಅಶ್ಲೀಲ ಚಿತ್ರಗಳಲ್ಲಿ ನಟಿಸಿ ಹೆಸರುಗಳಿಸಿದ ಮಿಯಾ ಖಲೀಫ್.

ಅತಿ ಎತ್ತರದಲ್ಲಿ ಸಿಡಿಮದ್ದಿನ ಪ್ರದರ್ಶನ ಮಾಡಿದ ದಾಖಲೆ ಬರೆದ ಬುರ್ಜ್ ಒಂದುಕಡೆ, ಅಂಗಾಂಗ ಪ್ರದರ್ಶನದಿಂದ ಕೆಲವೇ ವರ್ಗದವರನ್ನು ಆಕರ್ಷಿಸುವ ಮಿಯಾ ಇನ್ನೊಂದು ಕಡೆ. ಒಂದೊಂದೇ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡ ಬುರ್ಜ್ ಒಂದುಕಡೆ, ವಿವಾದಗಳನ್ನು ಉಡುಗೆಯಾಗಿಸಿಕೊಂಡ ಮಿಯಾ ಇನ್ನೊಂದೆಡೆ.

ಒಂದುವರೆ ಬಿಲಿಯನ್ ಡಾಲರ್ ವ್ಯಯಿಸಿ ನಿರ್ಮಿಸಿದ ಬುರ್ಜ್ ಖಲೀಫಾ ಎಲ್ಲಿ, ಮೂರು ಮಿಲಿಯನ್ ಆಸ್ಥಿ ಹೊಂದಿದ ಮಿಯಾ ಖಲೀಫಾ ಎಲ್ಲಿ? ಏನೂ ಇಲ್ಲದವರಿಗೆ ಪ್ರಚಾರ ಕೊಟ್ಟು ಪ್ರಚಾರಕ್ಕೆ ತರುವ ನಮ್ಮ ಮಾಧ್ಯಮದವರಿಗೆ ಏನು ಹೇಳುವುದು?
‘ಛೀ ಛೀ… ಆಯ್ತು, ಥ್ಯಾಂಕ್ಸ್, ಮತ್ತೆ ಆರಾಮ ಅಲ್ವಾ? ಎಂದು ಫೋನ್ ಇಟ್ಟ ಮಿತ್ರ. ನನಗೆ ನಗಬೇಕೋ ಅಳಬೇಕೋ ಅರ್ಥ ವಾಗಲಿಲ್ಲ. ಮುಂದಿನ ಕರೆ ಯಾವಾಗ ಬಂದೀತು ಎಂಬ ಆತಂಕದಲ್ಲಿದ್ದೇನೆ.