Friday, 22nd November 2024

ಕಮಲ ಪಾಳಯದಂತೆ ಕೈ ಪಾಳಯದಲ್ಲೂ ಕ್ಷಿಪ್ರಕ್ರಾಂತಿಯ ಕನಸು

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರಕ್ರಾಂತಿಯಾಗುತ್ತದೆ ಎಂಬ ನಿರೀಕ್ಷೆ ಆಡಳಿತಾರೂಢ ಬಿಜೆಪಿಯಲ್ಲಿ ಮಾತ್ರವಲ್ಲ, ಪ್ರತಿಪಕ್ಷ
ಕಾಂಗ್ರೆಸ್ ನಲ್ಲೂ ಇದೆ. ಕ್ಷಿಪ್ರಕ್ರಾಂತಿ ಎಂಬುದರ ಅರ್ಥ ಹಾಲಿ ನಾಯಕತ್ವ ಬದಲಾಗಲಿದೆ ಎಂಬುದು.

ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಕು ಎಂಬ ಪ್ರಯತ್ನ ನೆನ್ನೆ, ಮೊನ್ನೆಯ ದಲ್ಲ. ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ ಸರಕಾರವನ್ನು ಪತನಗೊಳಿಸಿ ಯಡಿಯೂರಪ್ಪ ಯಾವಾಗ ಮುಖ್ಯಮಂತ್ರಿ
ಹುzಯಲ್ಲಿ ವಿರಾಜಮಾನರಾದರೋ? ಅವತ್ತಿನಿಂದ ಶುರುವಾದ ಯಡಿಯೂರಪ್ಪ ಹಟಾವೋ ಆಪರೇಷನ್ ಇನ್ನೂ ಜೀವಂತ ವಾಗಿದೆ.

ಬರೀ ಜೀವಂತವಾಗಿರುವುದು ಮಾತ್ರವಲ್ಲ, ಮಾರ್ಚ್ ಗಳಲ್ಲಿ ರಾಜ್ಯ ಬಜೆಟ್ ಮಂಡನೆಯಾದ ನಂತರ ವರಿಷ್ಠರು ಯಡಿಯೂರಪ್ಪ ಅವರನ್ನು ಬದಲಿಸಲಿದ್ದಾರೆ ಎಂಬುದು ಲೇಟೆಸ್ಟ್ ವರ್ಷನ್ನು. ಯಡಿಯೂರಪ್ಪ ಇತ್ತೀಚೆಗೆ ತಮ್ಮ ಪುತ್ರ ವಿಜಯೇಂದ್ರ ಅವರೊಂದಿಗೆ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿದರಲ್ಲ? ಇದಾದ ನಂತರ ಯಡಿಯೂರಪ್ಪ ಅವರ
ಪದಚ್ಯುತಿಯ ಎಲ್ಲ ಪ್ರಯತ್ನಗಳಿಗೆ ಬ್ರೇಕ್ ಬೀಳುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಬಜೆಟ್ ಅಧಿವೇಶನ ಹತ್ತಿರವಾಗುತ್ತಿದ್ದಂತೆಯೇ ಮತ್ತೆ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲು ಹೈಕಮಾಂಡ್ ತಯಾರಾಗಿದೆ ಎಂಬ ಗುಸು ಗುಸು ಶುರುವಾಗಿದೆ. ಹೀಗೆ ಶುರುವಾಗಿರುವ ಗುಸು, ಗುಸು ಮಾತುಗಳಿಗೆ ಶಕ್ತಿ ಒದಗಿಸಿರುವುದು ಮೀಸಲಾತಿ ಕೋರಿ ಜಾತಿಗಳು ನಡೆಸುತ್ತಿರುವ ಹೋರಾಟ. ವೀರಶೈವ – ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿಗಳು ಮಾತ್ರವಲ್ಲ, ಇನ್ನೂ ಹಲ ಒಳಪಂಗಡಗಳು ಮೀಸಲಾತಿಗೆ ಧ್ವನಿ ಎತ್ತರಿಸಿವೆ.

ಗಮನಿಸಬೇಕಾದ ಸಂಗತಿ ಎಂದರೆ ಪಂಚಮಸಾಲಿಗಳ ಹೋರಾಟ ಏನಿದೆ? ಇದು ಪರ್ಯಾಯ ನಾಯಕತ್ವದ ಅನ್ವೇಷಣೆಗೆ ಸಹಕಾರಿಯಾಗಲಿದೆ ಎಂಬ ಮಾತು ಕೇಳುತ್ತಿರುವುದು. ಯಡಿಯೂರಪ್ಪ ಅವರ ಜಾಗಕ್ಕೆ ಮತ್ತೊಬ್ಬ ನಾಯಕ ಬರಬೇಕು ಎಂದರೆ ಅದಕ್ಕೂ ಮುನ್ನ ಲಿಂಗಾಯತ ಮತಬ್ಯಾಂಕ್ ಮೇಲೆ ಹಿಡಿತ ಹೊಂದಿರುವ ಮತ್ತೊಬ್ಬ ನಾಯಕ ಎಮರ್ಜ್ ಆಗಬೇಕು ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.

ಇದೇ ಕಾರಣಕ್ಕಾಗಿ ಅದು ಪಂಚಮಸಾಲಿಗಳ ಮೀಸಲಾತಿ ಹೋರಾಟಕ್ಕೆ ತೆರೆಯ ಹಿಂದಿನಿಂದ ಕುಮ್ಮಕ್ಕು ನೀಡುತ್ತಿದೆ ಎಂಬುದು ಬಿಜೆಪಿಯ ಒಳವಲಯಗಳಿಂದಲೇ ಕೇಳಿ ಬರುತ್ತಿರುವ ಮಾತು. ಇದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಕೂಡಾ ಮಾಸ್ಟರ್ ಪ್ಲಾನು ರೆಡಿ ಮಾಡಿದ್ದಾರೆ. ಕೇವಲ ಪಂಚಮಸಾಲಿಗಳು ಮಾತ್ರವಲ್ಲ ವೀರಶೈವ – ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡ ಗಳನ್ನೂ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ನಲವತ್ತು ಮಂದಿ ಮಠಾಧೀಶರು ಮನವಿ ಸಲ್ಲಿಸಿರುವುದು ಈ ಮಾಸ್ಟರ್ ಪ್ಲಾನಿನ ಭಾಗ.

ಯಡಿಯೂರಪ್ಪ ಅವರಿಗೆ ಸಮಸ್ತ ವೀರಶೈವ – ಲಿಂಗಾಯತ ಸಮುದಾಯ ಒಗ್ಗಟ್ಟಾಗಿರಬೇಕು. ಅದು ಹಾಗಿದ್ದರೇನೇ ಅವರ ನಾಯಕತ್ವಕ್ಕೆ ಶಕ್ತಿ. ಹೀಗಾಗಿ ಪಂಚಮಸಾಲಿಗಳಿಗೆ ಮಾತ್ರ ಹಿಂದುಳಿದ ಪ್ರವರ್ಗ 2 ಎ ಅಡಿ ಮೀಸಲಾತಿ ಒದಗಿಸುವ ವಿಷಯದಲ್ಲಿ ಅವರಿಗೆ ಆಸಕ್ತಿ ಇಲ್ಲ. ಆದರೆ ಈ ಎಲ್ಲದರ ನಡುವೆ ಹಲ ಜಾತಿಗಳು ತಮಗೆ ಮೀಸಲಾತಿ ದಕ್ಕಬೇಕೆಂದೋ? ಮೀಸಲಾತಿಯ ಪ್ರಮಾಣ ಹೆಚ್ಚಬೇಕು ಅಂತಲೋ ಬೇಡಿಕೆ ಮುಂದಿಟ್ಟು ಹೋರಾಟ ಮಾಡುತ್ತಿವೆ.

ಈ ಹೋರಾಟಗಳು ಯಡಿಯೂರಪ್ಪ ಅವರ ಪಾಲಿಗೆ ತಲೆನೋವಾಗಿರುವುದು ಹೌದು. ಮತ್ತು ಇದರ ಭರಾಟೆಯೇ ಅವರ ನಾಯಕತ್ವದ ಶಕ್ತಿ ಕುಗ್ಗುವಂತೆ ಮಾಡಲಿದೆ ಎಂಬುದು ಅವರ ವಿರೋಧಿಗಳ ವಾದ. ಇಂತಹ ಎಲ್ಲ ಕಿರಿಕಿರಿಗಳ ನಡುವೆ ಬಜೆಟ್ ನಂತರ ಯಡಿಯೂರಪ್ಪ ಕೆಳಗಿಳಿಯಲಿzರೆ ಎಂಬುದು ಅವರ ಲೆಕ್ಕಾಚಾರ. ಬಿಜೆಪಿಯಲ್ಲಿ ಇಂತಹ ಲೆಕ್ಕಾಚಾರಗಳು ನಡೆಯು ತ್ತಿದ್ದರೆ, ಈ ಲೆಕ್ಕಾಚಾರಕ್ಕೆ ಪೂರಕವಾಗಿ ಪ್ರತಿಪಕ್ಷ ಕಾಂಗ್ರೆಸ್‌ನಲ್ಲೂ ನಾಯಕತ್ವ ಬದಲಾವಣೆಯ ನಿರೀಕ್ಷೆ ಹಲವರಿಗಿದೆ.

ಯಡಿಯೂರಪ್ಪ ಅವರು ಕೆಳಗಿಳಿಯುವ ಸನ್ನಿವೇಶ ಹತ್ತಿರವಾಗಿದೆ. ಮತ್ತು ಇಂತಹ ಬೆಳವಣಿಗೆ ನಡೆಯುವ ಕಾಲಕ್ಕೆ ಪ್ರಬಲ ಲಿಂಗಾಯತ ಸಮುದಾಯವನ್ನು ಸೆಳೆಯಲು ನಾವು ಸಜ್ಜಾಗಬೇಕಿದೆ ಎಂಬ ಮಾತು ಕೈ ಪಾಳೆಯದಲ್ಲಿ ಕೇಳುತ್ತಿದೆ. ಅದರ ಪ್ರಕಾರ; ಯಡಿಯೂರಪ್ಪ ಸಿಎಂ ಹುದ್ದೆಯಿಂದ ಕೆಳಗಿಳಿದರೆ ಕಾಂಗ್ರೆಸ್ ಪಕ್ಷ ಮೂಕವಾಗಿರಬಾರದು. ಬದಲಿಗೆ ಹಾಲಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರನ್ನು ಕೆಳಗಿಳಿಸಿ ಆ ಜಾಗಕ್ಕೆ ಲಿಂಗಾಯತ ನಾಯಕ ಎಂ.ಬಿ. ಪಾಟೀಲರನ್ನು ತರಬೇಕು ಎಂಬುದು ಕಾಂಗ್ರೆಸ್‌ನ ದೊಡ್ಡ ಬಣದ ವಾದ.

1989ರಲ್ಲಿ ಬೊಮ್ಮಾಯಿ ನೇತೃತ್ವದ ಜನತಾದಳ ಸರಕಾರವನ್ನು ಅಂದಿನ ರಾಜ್ಯಪಾಲ ಪಿ.ವೆಂಕಟಸುಬ್ಬಯ್ಯ ವಜಾ ಮಾಡಿದ ರಲ್ಲ? ಆ ಸಂದರ್ಭದಲ್ಲಿ ತುಂಬ ಜಾಣ್ಮೆಯಿಂದ ವರ್ತಿಸಿದ ಕಾಂಗ್ರೆಸ್ ಹೈಕಮಾಂಡ್ ಲಿಂಗಾಯತ ಸಮುದಾಯಕ್ಕೇ ಸೇರಿದ ವೀರೇಂದ್ರ ಪಾಟೀಲರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತು.

ಪರಿಣಾಮವಾಗಿ, ಬೊಮ್ಮಾಯಿ ಸರಕಾರವನ್ನು ವಜಾ ಮಾಡಿಸಿದ ಅಪಖ್ಯಾತಿ ಲೆಕ್ಕಕ್ಕೆ ಬಾರದೆ, ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಇದೇ ಸೂತ್ರವನ್ನು ಬೇರೊಂದು ರೂಪದಲ್ಲಿ ಅನುಷ್ಠಾನ ಗೊಳಿಸಿದರೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ವಾದ ಹೈಕಮಾಂಡ್ ಮುಂದೆ ಮಂಡನೆಯಾಗಿದೆ. ಯಡಿಯೂರಪ್ಪ ಪತನವನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಅದೇ ಸಮುದಾಯಕ್ಕೆ ಸೇರಿದ ಎಂ.ಬಿ.ಪಾಟೀಲರನ್ನು ತಂದು ಕೂರಿಸಬೇಕು ಎಂಬ ಮಾತು ಕೈ ಪಾಳೆಯದಲ್ಲಿ ಗಟ್ಟಿಯಾಗುತ್ತಿರುವುದಕ್ಕೆ ಇದೇ ಕಾರಣ.

ಅಂದ ಹಾಗೆ ಡಿ.ಕೆ.ಶಿವಕುಮಾರ್ ಅವರನ್ನು ಪದಚ್ಯುತಗೊಳಿಸುವ ಪ್ರಯತ್ನಕ್ಕೆ ಪಕ್ಷದ ಹೈಕಮಾಂಡ್ ಕೈ ಹಾಕದೆ ಇರಬಹುದು. ಆದರೆ ಮುಂದಿನ ಕೆಲವೇ ಕಾಲದಲ್ಲಿ ಡಿ.ಕೆ.ಶಿವಕುಮಾರ್ ತಾವಾಗಿಯೇ ಕೆಳಗಿಳಿಯುವ ಸನ್ನಿವೇಶ ನಿರ್ಮಾಣವಾಗಲಿದೆ ಅಂತ ಪಕ್ಷದ ಬಹುದೊಡ್ಡ ಬಣ ಭಾವಿಸಿದೆ.

ಅದರ ಪ್ರಕಾರ ಕೇಂದ್ರ ಸರಕಾರದ ಐಟಿ ದಾಳಿ ಪ್ರಕರಣಗಳು ಪುನರಾವರ್ತನೆ ಆಗುತ್ತಲೇ ಇವೆ ಮತ್ತು ಮುಂದಿನ ದಿನಗಳಲ್ಲೂ ನಡೆಯುತ್ತವೆ. ಇಂತಹ ಪರಿಸ್ಥಿತಿಯನ್ನು ಕಂಪ್ಲೇಂಟ್ ಆಗಿ ಪರಿವರ್ತಿಸಬೇಕು. ಹೈಕಮಾಂಡ್ ಗಮನಕ್ಕೆ ತಂದು; ಇಂತವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರೆ ನಾವು ಮುಜುಗರ ಅನುಭವಿಸಬೇಕಾಗುತ್ತದೆ ಅಂತ ಹೇಳತೊಡಗಿದರೆ ಹೈಕಮಾಂಡ್ ಅನುಭವಿಸುವ ವೇದನೆಯನ್ನು ಕಂಡು ಡಿ.ಕೆ. ಶಿವಕುಮಾರ್ ಅವರೇ ಪದತ್ಯಾಗ ಮಾಡುತ್ತಾರೆ ಎಂಬುದು ಈ ಬಣದ ಲೆಕ್ಕಾಚಾರ.

ಅಂದ ಹಾಗೆ ಇಂತಹ ಲೆಕ್ಕಾಚಾರ ಪಕ್ಷದಲ್ಲಿ ನಡೆದಿರುವುದರಿಂದಲೇ ಎಂ.ಬಿ.ಪಾಟೀಲ್ ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಉಳಿದಿ ದ್ದಾರೆ. ವಾಸ್ತವವಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ತಮ್ಮನ್ನು ಮಂತ್ರಿ ಮಾಡದ ಕ್ರಮ ಎಂ.ಬಿ.ಪಾಟೀಲರ ಆಕ್ರೋಶಕ್ಕೆ ಕಾರಣವಾಗಿತ್ತು. 1990ರಲ್ಲಿ ವೀರೇಂದ್ರ ಪಾಟೀಲರ ಪತನದ ವೈಖರಿಯಿಂದ ಮುನಿಸಿ ಕೊಂಡು ಕಾಂಗ್ರೆಸ್‌ನಿಂದ ದೂರವಾಗಿದ್ದ ಲಿಂಗಾಯತ ಸಮುದಾಯವನ್ನು ಮೂರು ದಶಕಗಳ ನಂತರ ಕಾಂಗ್ರೆಸ್ ಕಡೆ ಸೆಳೆಯುವ ತಮ್ಮ ಯತ್ನ ಜಾರಿಯಲ್ಲಿರುವಾಗ ಈ ರೀತಿ ತಮ್ಮನ್ನು ನಿರ್ಲಕ್ಷಿಸಬಾರದಿತ್ತು ಎಂಬುದು ಎಂ.ಬಿ.ಪಾಟೀಲರ ಸಿಟ್ಟು.
ಇದೇ ಕಾರಣಕ್ಕಾಗಿ ಕೆಲ ತಿಂಗಳ ಹಿಂದೆ ಬಿಜೆಪಿಗೆ ಸೇರುವಂತೆ ಆ ಪಕ್ಷದ ನಾಯಕರು ಕರೆ ನೀಡಿದಾಗ ಪಾಟೀಲರು ಹೊಸ ಗೆಟಪ್ಪಿಗೆ ತಯಾರಾಗಿದ್ದರು.

ಬಿಜೆಪಿಗೆ ಸೇರಿ ಕೇಂದ್ರ ಸಚಿವರಾಗುವ ಆರಂಭಿಕ ಪ್ರಸ್ತಾಪದ ಬಗ್ಗೆ ಪಾಟೀಲರಿಗೂ ಆಸಕ್ತಿ ಇತ್ತು. ಅಂದ ಹಾಗೆ ಸುರೇಶ್ ಅಂಗಡಿ ಅವರ ನಿಧನದ ನಂತರ ಕೇಂದ್ರ ಸಚಿವ ಸಂಪುಟದಲ್ಲಿ ಲಿಂಗಾಯತರ ಕೋಟಾ ಖಾಲಿ ಇದೆ. ಆ ಜಾಗವನ್ನು ಭರ್ತಿ ಮಾಡಲು ಅವಕಾಶ ಸಿಗುವುದಾದರೆ ನಾನು ರೆಡಿ ಎಂಬ ಸಂದೇಶ ಪಾಟೀಲರಿಂದ ರವಾನೆ ಆಗಿತ್ತು. ಆದರೆ ಇನ್ನೇನು ಅದು ವರ್ಕ್ ಔಟ್
ಆಗಬೇಕು ಅನ್ನುವಷ್ಟರಲ್ಲಿ ಬಿಜೆಪಿ ಹೈಕಮಾಂಡ್ ಇನ್ನಷ್ಟು ಕಾಲ ಕಳೆಯಲಿ ಎಂದು ಬಿಟ್ಟಿತು.

ಅರ್ಥಾತ್, ಈ ಪ್ರಪೋಸಲ್ಲು ಇನ್ನೂ ಜೀವಂತವಾಗಿದೆ. ಕುತೂಹಲದ ಸಂಗತಿ ಎಂದರೆ ಈ ಕುರಿತ ವಿವರ ಸಿಗುತ್ತಲೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚೆತ್ತುಕೊಂಡರು. ಪಾಟೀಲರ ಜತೆಗೂ ಮಾತುಕತೆ ನಡೆಸಿದರು. ಪಾಟೀಲರೇ, ನೀವು ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬ ಆಸೆ ನನಗೂ ಇತ್ತು. ಲಿಂಗಾಯತ ಪ್ಲಸ್ ಅಹಿಂದ ಮತಬ್ಯಾಂಕ್ ಅನ್ನು ಕ್ರೋಡೀಕರಿಸಿ ಚುನಾವಣೆಗೆ ಹೋದರೆ ಗೆಲುವು ನಿಶ್ಚಿತ ಎಂದು ಮೇಡಂ ಸೋನಿಯಾಗಾಂಧಿ ಅವರಿಗೂ ಹೇಳಿದ್ದೆ. ಆದರೆ ಅವರ ಗೇಮ್ ಪ್ಲಾನ್ ಬೇರೆಯಿತ್ತು. ಆದರೆ ಈಗಲೂ ಹೇಳುತ್ತೇನೆ.

ನಾವು ಲಿಂಗಾಯತ ಪ್ಲಸ್ ಅಹಿಂದ ಮತಬ್ಯಾಂಕ್ ಅನ್ನು ಕ್ರೋಡೀಕರಿಸಿಕೊಂಡರೆ ಮರಳಿ ಅಧಿಕಾರಕ್ಕೆ ಬರುತ್ತೇವೆ. ನಾನು ಸಿಎಂ, ನೀವು ಡಿಸಿಎಂ ಕ್ಯಾಂಡಿಡೇಟುಗಳು ಅಂತ ಚುನಾವಣೆಗೆ ಹೋದರೆ ಸಾಕು. ಆದರೆ ಅದಕ್ಕಾಗಿ ನೀವು ಸ್ವಲ್ಪ ಕಾಲ ಸಹನೆಯಿಂದಿರ ಬೇಕು ಎಂದರು. ಇದಾದ ನಂತರ ಎಂ.ಬಿ.ಪಾಟೀಲರು ಮೌನವಾಗಿದ್ದಾರೆ. ಆದರೆ ಕಾಂಗ್ರೆಸ್‌ನ ಒಂದು ಗುಂಪು; ಸದ್ಯದ ಕ್ಷಿಪ್ರಕ್ರಾಂತಿಯಾಗಿ ಡಿ.ಕೆ. ಶಿವಕುಮಾರ್ ಇಳಿಯುವುದು ನಿಶ್ಚಿತ ಎನ್ನುತ್ತಿದೆ. ಮುಂದೆ ಏನೇನಾಗುತ್ತದೋ ಗೊತ್ತಿಲ್ಲ. ಆದರೆ ಕಮಲ ಪಾಳೆಯದಂತೆ ಕೈ ಪಾಳೆಯದಲ್ಲೂ ಕ್ಷಿಪ್ರಕ್ರಾಂತಿಯ ನಿರೀಕ್ಷೆ ಕಾಣುತ್ತಿರುವುದು ಸಣ್ಣ ಸಂಗತಿಯಂತೂ ಅಲ್ಲ.