Friday, 15th November 2024

ಷೇರುಪೇಟೆಯ ಏರಿಳಿತಕ್ಕೆ ನಿಜವಾದ ಕಾರಣ ಏನು ?

ಅವಲೋಕನ

ರಮಾನಂದ ಶರ್ಮಾ

ಮುಂಬೈ ಷೇರುಪೇಟೆಯಲ್ಲಿ (ದಲಾಲ್ ಸ್ಟ್ರೀಟ್) 23.03.2020 ರಂದು ಕರಾಳ ದಿನ: ಅಂದು ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 3935 ಅಂಕ ಪತನಗೊಂಡು, ಹೂಡಿಕೆದಾರರು 14.22  ಲಕ್ಷ ಕೋಟಿ ನಷ್ಟ ಅನುಭವಿಸಿದ್ದರು. ದಲಾಲ್ ಸ್ಟ್ರೀಟ್ ಪರಿಣಿತರ ಪ್ರಕಾರ ಮುಂಬೈ ಷೇರುಪೇಟೆಯ ಇತಿಹಾಸದಲ್ಲಿ ಒಂದೇ ದಿನ ಸಂವೇದಿ ಸೂಚ್ಯಂಕ ಈ ರೀತಿ ಪತನಗೊಂಡಿರುವುದು ಒಂದು ದಾಖಲೆ.

ಹಾಗೆಯೇ ಎರಡೇ ವಾರದಲ್ಲಿ ಸೂಚ್ಯಂಕ 15000 ಅಂಕಗಳಷ್ಟು ಇಳಿದಿದ್ದು ಕೂಡಾ ಒಂದು ದಾಖಲೆಯಾಗಿತ್ತು. ಇದೇ ರೀತಿ 30.03.2020ರಂದೂ, ಸಂವೇದಿ ಸೂಚ್ಯಂಕ ಹಾವು – ಏಣಿ ಆಟದಲ್ಲಿ ಹಾವಿನ ಬಾಯಿಗೆ ಸಿಕ್ಕಂತೆ ಪಾತಾಳಕ್ಕಿಳಿದು ಹೂಡಿಕೆ ದಾರರು ನಷ್ಟವನ್ನು ಲೆಕ್ಕ ಹಾಕುತ್ತಿರುವಂತೆ ಸೂಚ್ಯಂಕ ಶೇ.10ಕ್ಕೆ ಇಳಿದು ಸರ್ಕಿಟ್ ಬ್ರೇಕ್ ಆಗಿ, ಸುಮಾರು 45 ನಿಮಿಷ ವಹಿವಾಟನ್ನು ನಿಲ್ಲಿಸಲಾಗಿತ್ತು.

ಸೂಚ್ಯಂಕ ಶೇ.13.15ಕ್ಕೆ ಇಳಿದು 25581ರಲ್ಲಿ ನಿಂತಿದ್ದು, ಇದನ್ನು ಷೇರು ಸಂವೇದಿ ಸೂಚ್ಯಂಕದ ಸಾರ್ವಕಾಲಿಕ ಕನಿಷ್ಠ
ಎಂದು ಹೇಳಲಾಗುತ್ತದೆ. ಅದೇ ರೀತಿ ನಿಫ್ಟಿ ಕೂಡಾ ಶೇ.12.98 ಇಳಿದು 7915ಕ್ಕೆ ನಿಂತಿತ್ತು. ಈ ಇಳಿತ ಹೂಡಿಕೆದಾರರ 52 ಲಕ್ಷ ಕೋಟಿಯನ್ನು ಸ್ವಾಹ ಮಾಡಿತ್ತು. ಜಾಗತಿಕವಾಗಿಯೂ ಷೇರು ಮೌಲ್ಯಗಳು ಶೇ.35ರಷ್ಟು ಕುಸಿದಿದ್ದು, ದೇಶದ ದೊಡ್ಡ
ಉದ್ಯಮಿಯೊಬ್ಬರು 19 ಬಿಲಿಯನ್ ಡಾಲರ್ ಕಳೆದುಕೊಂಡಿದ್ದರಂತೆ. ಇದು ಅವರ ಒಟ್ಟೂ ಅಸ್ತಿಯ ಶೇ.30ರಷ್ಟು. ಅಂದರೆ ಹೂಡಿಕೆದಾರರ ನಿರೀಕ್ಷೆಗೆ ಮೀರಿ ಸೂಚ್ಯಂಕ ಬೀಳಲು ಆರಂಭವಾದಾಗ, ಸಾಮಾನ್ಯವಾಗಿ ಇದು ಶೇ.5-6 ಮೀರಿದಾಗ ಸರ್ಕಿಟ್ ಬ್ರೇಕ್ ಅಗುತ್ತಿದ್ದು, ವಹಿವಾಟು ಸ್ಥಗಿತ ಗೊಳ್ಳುತ್ತದೆ.

ಈ ಬೀಳುವಿಕೆ ಸ್ವಾಭಾವಿಕವೋ ಅಥವಾ ಪ್ರೇರಿತವೋ ಎನ್ನುವುದನ್ನು ಚಿಂತಿಸಿ. ಹೂಡಿಕೆಯನ್ನು ನಿಲ್ಲಿಸಬೇಕೋ ಅಥವಾ ರಿವರ್ಸ್ ಮಾಡಬೇಕೋ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಲು, ಮಾರುಕಟ್ಟೆಯ ಏರಿಳಿತವನ್ನು ತಹಬಂದಿಗೆ ತರಲು ಈ ಸ್ಥಗಿತ ಹೂಡಿಕೆ ದಾರರಿಗೆ ಅವಕಾಶ ನೀಡುತ್ತದೆ. 1987ರಲ್ಲಿ ಷೇರುಪೇಟೆ ವ್ಯವಹಾರವನ್ನು ಗಣಕೀಕರಣಗೊಳಿಸಿದ ಮೇಲೆ ಈ ವ್ಯವಸ್ಥೆ ಜಾರಿಗೆ ಬಂದಿದೆ.

2008ರ ಆರ್ಥಿಕ ಹಿಂಜರಿಕೆ ಸಮಯದಲ್ಲಿ ಷೇರು ಮಾರುಕಟ್ಟೆಯಲ್ಲಿ ಇದೇ ರೀತಿ ರಕ್ತಪಾತವಾಗುತ್ತಿರಲು ಹಲವು ಬಾರಿ ಸರ್ಕಿಟ್ ಬ್ರೇಕ್ ಆಗಿತ್ತು. ಕರೋನಾಘಾತದಿಂದ ತತ್ತರಿಸಿದ ಷೇರು ಮಾರುಕಟ್ಟೆ ಸಾವರಿಸಿಕೊಳ್ಳಲು ವರ್ಷಗಳೇ ಬೇಕಾಗಬಹುದೆಂದು, ಹೂಡಿಕೆ ತಜ್ಞರು, ದಲಾಲ್ ಸ್ಟ್ರೀಟ್ ಪರಿಣಿತರು ಮತ್ತು ಆರ್ಥಿಕ ತಜ್ಞರು ಪುಟಗಟ್ಟಲೆ ಬರೆದಿದ್ದರು. ಹೂಡಿಕೆದಾರರು ಕೂಡಾ ಇದೇ ಅಭಿಪ್ರಾಯವನ್ನು ಹೊರಹಾಕುತ್ತಿದ್ದರು. ಷೇರು ಮಾರುಕಟ್ಟೆ ವ್ಯವಹಾರದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ತೊಡಗಿಸಿ ಕೊಂಡ ಲಕ್ಷಾಂತರ ಜನರು ತಲೆ ಮೇಲೆ ಕೈಕಟ್ಟಿ ಕುಳಿತಿದ್ದರು.

ಮಾರ್ಚ್ ೨೦೨೦ರ ಹೊತ್ತಿಗೆ ಸೂಚ್ಯಂಕ 50000 ತಲುಪಬಹುದು ಎನ್ನುವ ದೃಢ ವಿಶ್ವಾಸದಲ್ಲಿದ್ದ ಎಲ್ಲಾ ರೀತಿಯ ಹೂಡಿಕೆ ದಾರರು ಭ್ರಮನಿರಸನಗೊಂಡಿದ್ದರು. ಷೇರು ಮಾರುಕಟ್ಟೆಯ ವ್ಯವಹಾರದ ಮೂಲಕ ಮಹಲು ಕಟ್ಟುವ ಕನಸು ಕಂಡ ಹಲವರು ಬೀದಿಗೆ ಬಿದ್ದಿದ್ದರು. ನಷ್ಟ ಭರಿಸಲಾಗದೇ ಕೆಲವರು ನೇಣಿಗೆ ಶರಣಾಗಿದ್ದರು. ಈಗ ಈ ಎಲ್ಲಾ ನಿರಾಶೆ, ಭ್ರಮನಿರಸನ, ಹತಾಶೆ ಕೇವಲ ಕನಸು ಎನ್ನುವಂತೆ ಷೇರು ಮಾರುಕಟ್ಟೆ ಪುಟಿದೆದ್ದಿದೆ.

ಮುಂಬೈ ಷೇರು ಮುಂಬೈ ಸಂವೇದಿ ಸೂಚ್ಯಾಂಕವು ಆರ್ಥಿಕ ಜಗತ್ತು, ಹೂಡಿಕೆದಾರರು, ಮಾಧ್ಯಮ, ಆರ್ಥಿಕ ತಜ್ಞರು, ಷೇರು ಪೇಟೆ ಪರಿಣಿತರು, ಹೂಡಿಕೆ ಗುರುಗಳು ಮತ್ತು ವಿಶ್ಲೇಷಕರು ಅಚ್ಚರಿಪಡುವಂತೆ ಸಾರ್ವಕಾಲಿಕ ಎತ್ತರಕ್ಕೆ ಏರಿದ್ದು 04.02.2021 ರಂದು 50731 ತಲುಪಿತ್ತು. ಬಜೆಟ್ ದಿನ ಇದು 2315 ಪಾಯಿಂಟ್ ಏರಿತ್ತು. ಬಜೆಟ್ ನಂತರದ ಮೂರು – ನಾಲ್ಕು ದಿನಗಳಲ್ಲಿ ಭಾರೀ ಏರುಗತಿ ಕಂಡರೂ, ಸೂಕ್ಷ್ಮವಾಗಿ ಗಮನಿಸಿದರೆ ಕರೋನಾದ ಆರಂಭದ ದಿನಗಳಲ್ಲಿ ಸೂಚ್ಯಂಕ ಹಿನ್ನಡೆ ಅನುಭವಿಸಿ ದರೂ, ಕ್ರಮೇಣ ಚೇತರಿಸಿಕೊಂಡು ಏರುತ್ತಲೇ ಇತ್ತು.

ಅದು ಬಜೆಟ್ ಪ್ರೇರಣೆಯೇ ಇಲ್ಲದೇ 47000 ಗಡಿ ದಾಟಿತ್ತು. ಹೂಡಿಕೆದಾರರು ಇದು ಬಜೆಟ್ ಮೊದಲೇ 50000 ತಲುಪ
ಬಹುದು ಎಂದು ನಿರೀಕ್ಷಿಸಿದ್ದರು. ಸದ್ಯದ ಏರಿಕೆ ಗತಿಯನ್ನು ನೋಡಿದರೆ ಸೂಚ್ಯಂಕ 60000 ಗಡಿಯನ್ನು ಕೆಲವೇ ದಿನಗಳಲ್ಲಿ
ತಲುಪಿದರೆ ಆಶ್ಚರ್ಯ ಎನಿಸದು. ವಿಚಿತ್ರವೆಂದರೆ, ಹಣಕಾಸು ಮಾಧ್ಯಮಗಳ ಪ್ರಕಾರ ಕರೋನಾದ ಮೊದಲೇ ದೇಶದಲ್ಲಿ
ಆರ್ಥಿಕ ಹಿಂಜರಿಕೆ ಕಾಣುತ್ತಿತ್ತು. ಆರ್ಥಿಕ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ಹಲವಾರು ಸಮೀಕ್ಷೆಗಳನ್ನು ಕ್ರೋಡೀಕರಿಸಿ ಅಂಕೆ ಸಂಖ್ಯೆಗಳ ಮೂಲಕ ವಿವರಿಸುತ್ತಿದ್ದವು.

ಕೆಲವು ಅಂತಾರಾಷ್ಟ್ರೀಯ ಎಜೆನ್ಸಿಗಳೂ ಇದಕ್ಕೆ ಪೂರಕವಾಗಿ ಹೇಳಿಕೆ ನೀಡುತ್ತಿದ್ದವು. ಕರೋನಾ ಬಿಗಡಾಯಿಸಿದಂತೆ ಔದ್ಯೋಗಿಕ ಚಟುವಟಿಕೆಗಳು, ಕುಂಠಿತಗೊಂಡು ಉತ್ಪಾದನಾ ಕ್ಷೇತ್ರ ಹದಗೆಟ್ಟಿತು. ಪ್ರೊಡಕ್ಟಿವಿಟಿ ಕಡಿಮೆಯಾಯಿತು. ನಿರುದ್ಯೋಗ ಹೆಚ್ಚಿತು. ಮಾರುಕಟ್ಟೆಯಲ್ಲಿ ವ್ಯವಹಾರ ಕಡಿಮೆಯಾಗಿ ಹಣದ ಹರಿವೂ ಕಡಿಮೆಯಾಯಿತು. ಕರೋನಾ ಲಾಕ್ ‌ಡೌನ್ ನಿಂದಾಗಿ ಆರ್ಥಿಕತೆ ಕುಸಿಯಿತು. ಉದ್ಯಮದ ಪುನಶ್ಚೇತನಕ್ಕೆ ಸರಕಾರವು ಭರಪೂರ ಉತ್ತೇಜನಾ ಪ್ಯಾಕೇಜ್
ನೀಡುವಂತಾಯಿತು.

ಒಟ್ಟಾರೆ ದೇಶದ ಆರ್ಥಿಕ ಸ್ಥಿತಿ ಮತ್ತು ಉದ್ಯೋಗ ನಷ್ಟ ನಿರಾಸೆಯ ಕಾರ್ಮೋಡವನ್ನು ಗಮನಿಸಿದಾಗ ಷೇರು ಮಾರ್ಕೆಟ್‌ನಲ್ಲಿ ಇಳಿತ ಇನ್ನೂ ಕೆಲಕಾಲ ಮುಂದುವರಿಯುವ ಲಕ್ಷಣ ಕಾಣುತ್ತಿತ್ತು. ಆದರೆ, ಈ ಚಿಂತನೆಗೆ ವ್ಯತಿರಿಕ್ತವಾಗಿ ಷೇರುಪೇಟೆ ಕ್ರಮೇಣ
ಚೇತರಿಸಿಕೊಂಡಿದ್ದು, ಹೂಡಿಕೆದಾರರ 40000 ಸೆನ್ಸೆಕ್ಸ್ ಗುರಿಯನ್ನೂ ದಾಟಿ, ಷೇರುಪೇಟೆಯ ಏರಿಳಿತಕ್ಕೆ ನಿಜವಾದ ಕಾರಣ ಏನು ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ.

ವಾಸ್ತವದಲ್ಲಿ ಷೇರುಗಳ ಖರೀದಿ ಮತ್ತು ಮಾರಾಟದ ಬೆಲೆ ಸಂಬಂಧಪಟ್ಟ ಕಂಪನಿಗಳ ಫಂಡಮೆಂಟಲ್ಸ್ ಮೇಲೆ ನಿರ್ಧಾರಿತ ವಾಗುತ್ತದೆ . ಸಾಮಾನ್ಯವಾಗಿ ಷೇರುಗಳ ಬೆಲೆ, ಆ ಕಂಪನಿಯ ಪ್ರವರ್ತಕರು, ಮಾಲಿಕರು, ನಿರ್ದೇಶಕರ ಮಂಡಳಿ, ಮ್ಯಾನೇಜ್ ‌ಮೆಂಟ್ ಕ್ವಾಲಿಟಿ, ಹೂಡಿದ ಬಂಡವಾಳ, ಉತ್ಪಾದನೆಗೆ ಇರುವ ಬೇಡಿಕೆ, ಉತ್ಪಾದನೆ ಪ್ರಮಾಣ, ಕಂಪನಿಯ ಒಟ್ಟೂ ವ್ಯವಹಾರ, ಗಳಿಸಿದ ಲಾಭ, ಪಾವತಿಸಿದ ತೆರಿಗೆ, ಕಾರ್ಮಿಕರ ಕೌಶಲ್ಯ, ಘೋಷಿಸಿದ ಡಿವಿಡೆಂಡ್, ಆ ಕಂಪನಿಯ ಮೇಲೆ ಇರುವ ಸಾಲದ ಹೊರೆ,
ಸಾಲ ತೀರಿಸುವ ಸಾಮರ್ಥ್ಯ, ಮಾಡಿರುವ ಅಸ್ತಿ, ಕಂಪನಿಯ ಕಂಟಿನ್ಯುಯಿಟಿ, ಬ್ಯಾಲೆನ್ಸ್‌ಶೀಟ್, ತ್ರೈಮಾಸಿಕ ಹಣಕಾಸು ವರದಿ ಗಳು, ಮಾಧ್ಯಮ ವಿಶ್ಲೇಷಣೆ ಮುಂತಾದವುಗಳ ಮೇಲೆ ಅವಲಂಬಿಸಿರುತ್ತದೆ.

ಕಂಪನಿಯು ಸೌಂಡ್ ಆಗಿದ್ದು, ಹೆಚ್ಚು ಲಾಭಗಳಿಸುವ ಸೂಚನೆ ಇದ್ದರೆ, ಆ ಕಂಪನಿಯು ಹೆಚ್ಚು ಡಿವಿಡೆಂಡ್ ನೀಡುವಂತಿದ್ದರೆ, ಹೂಡಿಕೆದಾರರು ಷೇರುಗಳನ್ನುಹೆಚ್ಚು ಬೆಲೆಗೆ ಖರೀದಿಸಿ ಮುಂದಿನ ದಿನಗಳಲ್ಲಿ ಲಾಭ ಗಳಿಸುತ್ತಾರೆ. ಇದು ಷೇರುಗಳ ಖರೀದಿ ಮತ್ತು ಮಾರಾಟದ ಬೆಲೆಯ ಹಿಂದಿನ ಕಥೆ. ಇದನ್ನು ಷೇರು ಬೆಲೆಯ ಹಿಂದಿನ ಫಂಡಮೆಂಟಲ್ಸ್ ಎಂದೂ ಕರೆಯುತ್ತಾರೆ. ಆದರೆ, ವಾಸ್ತವದಲ್ಲಿ ಷೇರುಗಳ ಬೆಲೆ ಕಂಪನಿಯ ಫಂಡಮೆಂಟಲ್ಸ್ ಮೇಲೆ ನಿರ್ಧಾರವಾಗದೇ, ವದಂತಿಗಳ ಮೇಲೆ, ಊಹಾಪೋಹ ಗಳ
ಮೇಲೆ ಮತ್ತು ಕೆಲವು ASSUMPTIONS ಮತ್ತು  HYPOTHISIS ಮೇಲೆ ನಿರ್ಧಾರಿತವಾಗುವ ಪ್ರಮೇಯಗಳೇ ಹೆಚ್ಚು ಎನ್ನುವ ಭಾವನೆ ಇದೆ. ಷೇರು ಬೆಲೆಯ ಹಿಂದಿನ ಈ ಸೂತ್ರ ಷೇರು ಖರೀದಿಯಲ್ಲಿ ಮತ್ತು ಮಾರುವುದರಲ್ಲಿ ಮತ್ತು ಮೌಲ್ಯ ನಿರ್ಧರಿಸುವು ದರಲ್ಲಿ ಫಾಲೋ ಆಗುತ್ತಿದೆಯೇ ಎನ್ನುವುದು ತಿಳಿಯದು.

ಷೇರು ಬೆಲೆಗಳಲ್ಲಿಯ ಏರಿಳಿತ ಮತ್ತು ಸಮಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಅವು ಅಂತಾರಾಷ್ಟ್ರೀಯ ಮಾರುಕಟ್ಟೆ, ಅಮೆರಿಕನ್ ಫೆಡ್‌ರೇಟ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ, ತೈಲ ಉತ್ಪನ್ನ ಪ್ರಮಾಣ, ಡಾಲರ್ ದರ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಬದಲಾವಣೆಗಳು, ಬ್ಯಾಂಕ್ ರೇಟ್ (ದೇಶೀಯ ಮತ್ತು ಅಂತಾರಾಷ್ಟ್ರೀಯ – ಮುಖ್ಯವಾಗಿ ಅಮೆರಿಕಾ ಮತ್ತು ಇಂಗ್ಲೆಂಡ್) ಯುದ್ದ – ಯುದ್ದದ ಕಾರ್ಮೋಡಗಳು, ಚಿನ್ನದ ದರ, ಅಂತಾರಾಷ್ಟ್ರೀಯ ಒಡಂಬಡಿಕೆಗಳು, ವ್ಯಾಪಾರ ಒಪ್ಪಂದಗಳು, ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ನಿಯಮಾವಳಿಗಳ ಪರಾಮರ್ಶೆ, ವಿದೇಶಿ ವಿನಿಮಯ ದರ, ದೇಶದ
ಆಯವ್ಯಯದಲ್ಲಿನ ಪ್ರಸ್ತಾವನೆ ಗಳು, ಕಾರ್ಪೋರೇಟ್ ಹೌಸ್ ಗಳ ಆಂತರಿಕ ತುಮುಲ – ಆಡಳಿತದಲ್ಲಿ ಬದಲಾವಣೆ, ಚುನಾವಣೆ – ಚುನಾವಣೆ ಫಲಿತಾಂಶ, ರೇಟಿಂಗ್ ಎಜೆನ್ಸಿಗಳ ವರದಿ, ರಿಸರ್ವ್ ಬ್ಯಾಂಕ್ ಸುತ್ತೋಲೆಗಳು, ರೇಟಿಂಗ್ ಎಜೆನ್ಸಿಗಳ ವಿಶ್ಲೇಷಣೆ, ಮಾಧ್ಯಮ ವರದಿಗಳು ಹೀಗೆ ಹಲವು ಆಯಾಮದಲ್ಲಿ ಷೇರುಗಳ ಬೆಲೆ ನಿಗದಿಯಾಗುತ್ತದೆ ಮತ್ತು ವಹಿವಾಟು ಅಗುತ್ತದೆ.

ಇವು ಯಾವ ರೀತಿ ಷೇರುಗಳ ಬೆಲೆಯನ್ನು ನಿರ್ಧರಿಸುತ್ತವೆ ಮತ್ತು ಅವುಗಳ ಖರೀದಿ ಮತ್ತು ಮಾರಾಟದ ಪ್ರಮಾಣವನ್ನು ಲೆಕ್ಕ ಹಾಕುತ್ತವೆ ಎನ್ನುವುದು ಚಿದಂಬರ ರಹಸ್ಯ ಮತ್ತು ಗೊಂದಲಕಾರಿ ಸಮೀಕರಣ ಆಗಿರುತ್ತದೆ. ಹೂಡಿಕೆದಾರರು ಕಂಪನಿಗಳ ಬ್ಯಾಲೆನ್ಸ್ ಮತ್ತು ಪ್ರೊಫೈಲ್‌ಗಳನ್ನು ಹಿಡಿದು ಅಡ್ಡಾಡುವುದು ಅಪರೂಪದ ದೃಶ್ಯಗಳು.

ಯಾರೋ ಹೂಡಿಕೆ ಮಾಡಿದರು ಎಂದು ತಾವೂ ಹೂಡಿಕೆ ಮಾಡುವುದನ್ನು ಅಲ್ಲಗಳೆಯಲಾಗದು. ಹಾಗೆ ಮಾಡಿ ಕಳೆದು ಕೊಳ್ಳುವ ಪ್ರಮೇಯಗಳೂ ಸಾಕಷ್ಟಿವೆ. ಷೇರು ಮಾರುಕಟ್ಟೆಯಲ್ಲಿನ ಇತ್ತೀಚಿನ ಭಾರೀ ಉಬ್ಬರದ ಬಗೆಗೆ ಸಾಕಷ್ಟು ವಾದ – ವಿವಾದ ಗಳು ಮತ್ತು ತರ್ಕಗಳು ಇವೆ. ಸದ್ಯದ ಏರಿಕೆ ಬಗೆಗೆ ಬಜೆಟನ್ನು ಪ್ರೇರಕವಾಗಿ ಬಿಂಬಿಸಲಾಗುತ್ತಿದೆ. ಇದರಲ್ಲಿ ಸತ್ಯವಿಲ್ಲದಿಲ್ಲ. ಹಾಗೆಯೇ ಇದನ್ನೇ ಮುಖ್ಯ ಕಾರಣವೆಂದೂ ಹೇಳಲಾಗದು.

ಜಗತ್ತಿನಾದ್ಯಂತ ಷೇರುಗಳ ಬೆಲೆ ಸಂಬಂಧಪಟ್ಟ ಕಂಪನಿಯ ಸತ್ವವನ್ನು ಮತ್ತು ಬಂಡವಾಳವನ್ನು ಬಿಚ್ಚಿಡುವುದಿಲ್ಲ ಎನ್ನುವ
ಗುಮಾನಿ ಜಗತ್ತಿನಾದ್ಯಂತ ಇದೆ. ಕೆಲವು ಅಪವಾದಗಳು ಇರಬಹುದು. ವಾಸ್ತವದಲ್ಲಿ ಷೇರುಗಳ ಬೆಲೆ ನಿರ್ಧಾರಿತವಾಗುವ ಮಾನದಂಡವೇ ಬೇರೆ ಎಂದು ಪ್ರಜ್ಞಾವಂತರು ಹೇಳುತ್ತಾರೆ. ಈ ದೇಶದಲ್ಲಿ ಜನಪ್ರಿಯ ಕಾರ್ಪೋರೇಟ್ ಹೌಸ್‌ನ ಎಂ.ಡಿ.ಯ ಆರೋಗ್ಯ ಕ್ಷೀಣಿಸಿದರೆ, ಆ ಕಂಪನಿಯ ಷೇರುಗಳು ಕೆಳಗಿಳಿಯ ತೊಡಗುತ್ತದೆ.

ಒಂದು ಕಂಪನಿಯ ಮುಖ್ಯಸ್ಥ ಇನ್ನೊಂದು ಕಂಪನಿಯ ಮುಖ್ಯಸ್ಥನನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರೆ (ವಿಷಯ ಯಾವುದೇ ಇರಲಿ), ಉದ್ಯಮಿಯೊಬ್ಬ ತೀರಿ ಹೋದರೆ, ಯಾವುದೋ ವದಂತಿ ಹರಡಿ, ಆ ಕಂಪನಿಗಳ ಷೇರುಗಳು ಏರಿಳಿತ ಕಾಣುತ್ತವೆ ಎಂದು ಖ್ಯಾತ ಆರ್ಥಿಕ, ತೆರಿಗೆ ತಜ್ಞ ಮತ್ತು ವಕೀಲರೊಬ್ಬರು ತಮಾಷೆ ಮಾಡಿದ್ದರು. ಇನ್ನೂ ಉತ್ಪಾದನೆ ಆರಂಭಿಸದ ಕಂಪನಿಗಳ ಷೇರುಗಳು ಬೇಡಿಕೆ ಯಲ್ಲಿರುವುದನ್ನು ಅಲ್ಲಗಳೆಯಲಾಗದು.

ಒಮ್ಮೊಮ್ಮೆ ಒಂದು ಕಂಪನಿಯಲ್ಲಿ ಯಾರು ಹೂಡಿಕೆ ಮಾಡಿzರೆ ಎನ್ನುವುದರ ಮೇಲೂ ಷೇರುಗಳ ಬೆಲೆ ಏರಿಳಿತವಾಗುತ್ತದೆ. ಟಾಟಾ ಒಂದು ಕಂಪನಿಯಲ್ಲಿ ಹೂಡಿಕೆ ಮಾಡಿದ ಮಾಹಿತಿ ದೊರಕಿದರೆ, ನಾರಾಯಣ ಮೂರ್ತಿ ಯಾವುದೋ ಸಾಫ್ಟ್’ವೇರ್ ಕಂಪನಿ ಬಗೆಗೆ ಮಾತನಾಡಿದರೆ ಆ ಕಂಪನಿಗಳ ಷೇರುಗಳು ದಿಢೀರ್ ಮೇಲೆರುವುದನ್ನು ಅಲ್ಲಗೆಳೆಯಲಾಗದು.

ಷೇರುಗಳ ಬೆಲೆ ಆ ಕಂಪನಿಗಳ ಫಂಡಮೆಂಟಲ್ಸ್‌ಗಳ ಮೇಲೆ ನಿರ್ಧಾರ ಆಗಬೇಕೇ ವಿನಾ ಸಂಬಂಧವಿಲ್ಲದ ವದಂತಿಗಳ ಮೇಲೆ
ಆಗಬಾರದು ಎಂದು ಕಾರ್ಪೋರೇಟ್ ತಜ್ಞರು ಹೇಳುತ್ತಾರೆ.

ಭಾರತೀಯ ಹೂಡಿಕೆದಾರರು, ಇಂಥ ಅರ್ಥವಿಲ್ಲದ ಮಾನದಂಡದ ಮೇಲೆ ಹೂಡಿಕೆ ಮಾಡಿ, ಅಂತ್ಯದಲ್ಲಿ ಚಿಪ್ಪು ಹಿಡಿಯದಂತೆ ಮಾಡಲು ಷೇರುಗಳ ಬೆಲೆಯು ಇವುಗಳಿಗೆ ಸ್ಪಂದಿಸದಂತೆ ಇಮ್ಯೂನ್ ಮಾಡುವ ಕಾಲ ಸನ್ನಿಹಿತವಾಗಿದೆ. ಷೇರುಗಳ ಬೆಲೆ ಕಂಪನಿಯ ಆರ್ಥಿಕ ದೃಢತೆಯ ಮೇಲೆ ನಿರ್ಧಾರವಾಗಲಿ. ಕೆಲವರು ನಡೆಸುವ ಕೈಚಳಕಕ್ಕೆ ಷೇರು ಮಾರುಕಟ್ಟೆ ಸ್ಪಂದಿಸದಿರಲಿ. ಹರ್ಷದ ಮೆಹತಾ ಮತ್ತು ಪಾರೇಖರಂಥ ಘಟನೆಗಳು ಮತ್ತು ಬೆಳವಣಿಗೆಗಳು ಪುನಾರಾವರ್ತನೆ ಯಾಗದಿರಲಿ. ಹೂಡಿಕೆದಾರರ ಬೆವರಿನ ಹಣ ಕೈಬಿಡದಿರಲಿ.

ವಾಸ್ತವವನ್ನು ನೋಡದೇ ದುರಾಸೆಯಿಂದ inflated ಬೆಲೆಗೆ ಷೇರುಗಳನ್ನು ಕೊಂಡರೆ ಎಷ್ಟೋ ಬಾರಿ ಷೇರುಗಳು ಬರೀ ಕಾಗದದ ತುಂಡಾಗುವ ಪ್ರಮೇಯವಿರುತ್ತದೆ. ಕಂಪನಿಯ ಅಡಿಗಲ್ಲು ಮತ್ತು ಬೆಳವಣಿಗೆ ಮಾನದಂಡ ವಾಗಲಿ. ಒಂದು ಕಂಪನಿಯ ಷೇರು ಯಾವುದೇ ಲಾಜಿಕ್ ಇಲ್ಲದೇ ದಿಢೀರ್ ಮೇಲೆದ್ದರೆ, ಅದು ಅಷ್ಟೇ ವೇಗದಲ್ಲಿ ಕೆಳಗಿಳಿಯುವ ಸಾಧ್ಯತೆಗಳಿರುತ್ತದೆ. ಅಂತೆಯೇ ಇಂಥ ಷೇರುಗಳನ್ನು ಖರೀದಿಸುವಾಗ ಎರಡೆರಡು ಬಾರಿ ಯೋಚಿಸಬೇಕಾಗುತ್ತದೆ. ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ ಎನ್ನುವ
ದಾಸರಪದವನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡಿರಬೇಕು.