ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ರಾಜ್ಯದಲ್ಲಿ ಕರೋನಾ ಕಾಲದ ನಂತರ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಸರಕಾರದ ಕೌಶಲ್ಯ ಅಭಿವೃದ್ಧಿ ಇಲಾಖೆ ಕೈ ಕಟ್ಟಿ ಕುಳಿತಿದೆ. ಕರೋನಾ ಇಳಿಮುಖದ ನಂತರದ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆೆ ಶೇ.30ರಷ್ಟು ಹೆಚ್ಚಾಗಿದ್ದು, ಒಟ್ಟಾರೆ 60 ಲಕ್ಷ ಜನ ನಿರುದ್ಯೋೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ.
ಕೋವಿಡ್ ನಂತರ ರಾಜ್ಯದಲ್ಲಿ ಬೀದಿ ಬದಿ ವ್ಯಾಪಾರ ಹಾಗೂ ಹೋಟೆಲ್ ಮತ್ತು ಇತರ ಕೈಗಾರಿಕೋದ್ಯಮಗಳು ಮಾತ್ರ ಪುನರಾ ರಂಭಗೊಂಡಿದ್ದು, ಉಳಿದ ಬಹುತೇಕ ಉದ್ಯೋಗಗಳು ನೆಲಕಚ್ಚಿವೆ. ಹೀಗಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಕರೋನಾ ಕಾಲದಲ್ಲಿ ರಾಜ್ಯವನ್ನು ತ್ಯಜಿಸಿದ್ದ 10 ಲಕ್ಷಕ್ಕೂ ಹೆಚ್ಚಿನ ಅನ್ಯ ರಾಜ್ಯಗಳ ನಿರುದ್ಯೋಗಿಗಳಲ್ಲಿ ಶೇ.20 ರಷ್ಟು ಮಂದಿ ಮಾತ್ರ ವಾಪಸ್ ಬಂದಿದ್ದು, ಉಳಿದವರು ನಿರ್ವಹಿಸುತ್ತಿದ್ದ ಕೆಲಸಗಳಿಗೆ ನೇಮಕಗೊಳ್ಳಲು ರಾಜ್ಯದ ನಿರುದ್ಯೋಗ ಗಳಲ್ಲಿ ಕೌಶಲ್ಯವಿಲ್ಲ.
ಇದ್ದರೂ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಅಂದರೆ ರಾಜ್ಯದಲ್ಲಿ ಶೇ.2ರಷ್ಟು ಉದ್ಯೋಗಗಳು ಸರಕಾರಿ ಸ್ವಾಮ್ಯದಲ್ಲಿದ್ದು, ಶೇ.98
ರಷ್ಟು ಉದ್ಯೋಗ ಖಾಸಗಿ ವಲಯದಲ್ಲಿವೆ. ಆದರೆ ಇಷ್ಟು ದೊಡ್ಡ ಪ್ರಮಾಣದ ಅವಕಾಶ ಇರುವ ಖಾಸಗಿ ವಲಯದಲ್ಲಿ ಉದ್ಯೋಗಗಳನ್ನು ರಾಜ್ಯದ ನಿರುದ್ಯೋಗಿಗಳಿಗೆ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿಲ್ಲ. ಅಂದರೆ ಖಾಸಗಿ ಉದ್ಯೋಗಗಳಿಗೆ ಬೇಕಾದ ಕೌಶಲ್ಯ ಅಭಿವೃದ್ಧಿ, ತರಬೇತಿ ಹಾಗೂ ಮಾರ್ಗದರ್ಶನಗಳಂಥ ಕಾರ್ಯಗಳು ಸರಕಾರದಿಂದ ನಡೆಯುತ್ತಿಲ್ಲ ಎಂದು ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ.
ಉದ್ಯೋಗ ಮೇಳ ಸ್ಥಗಿತ: ಕೌಶಲ್ಯ ಅಭಿವೃದ್ಧಿ ಇಲಾಖೆ ಸ್ಥಾಪನೆಯಾದಾಗಿನಿಂದ ರಾಜ್ಯದ 28 ಜಿಲ್ಲೆಗಳಲ್ಲಿ ಅನೇಕ ಕಡೆ ಉದ್ಯೋಗ ಮೇಳಗಳನ್ನು ನಡೆಸಿ ಸುಮಾರು 8ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳನ್ನು ನೋಂದಾಯಿಸಲಾಗಿತ್ತು. ಇವರಲ್ಲಿ ಸುಮಾರು 1.5ಲಕ್ಷಕ್ಕೂ ಯುವ ಜನತೆಗೆ ಕೈಗಾರಿಕೆ, ಮಾರ್ಕೆಟಿಂಗ್, ಸಾಫ್ಟ್‌ವೇರ್, ಹಾರ್ಡ್‌ವೇರ್ ಹಾಗೂ ಇತರ ತಾಂತ್ರಿಕ ವಲಯಕ್ಕೆ ಸೇರಿದ 100ಕ್ಕೂ ಅಧಿಕ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಲಾಗಿತ್ತು. ಆದರೆ ಈಗ ಉದ್ಯೋಗ ಮೇಳಗಳು
ಸ್ಥಗಿತವಾಗಿದ್ದು, ಖಾಸಗಿ ಸಂಸ್ಥೆಗಳು ಉದ್ಯೋಗಿಗಳನ್ನು ಕೇಳುವ ಗೋಜಿಗೂ ಹೋಗುತ್ತಿಲ್ಲ.
ಸ್ವಯಂ ಉದ್ಯೋಗಕ್ಕೂ ನೆರವು ಇಲ್ಲ: ಸ್ವಯಂ ಉದ್ಯೋಗ ಅವಕಾಶಗಳೂ ಕೈ ಜಾರಿವೆ. ಪಿಟ್ಟರ್, ಪ್ಲಂಬರ್, ಪಾರ್ಲರ್, ಮೊಬೈಸ್ ಸವೀಸ್, ಕೇಬಲ್ ರಿಪೇರ್ ಹಾಗೂ ಹೋಟೆಲ್ ವ್ಯವಸ್ಥೆ ಸೇರಿದಂತೆ ಅನೇಕ ರೀತಿಯ ತರಬೇತಿಗಳಿಗೆ ನೆರವು ಸಿಗುತ್ತಿತ್ತು. ಈ ಹಿಂದೆ ಸುಮಾರು 10ಸಾವಿರಕ್ಕೂ ಹೆಚ್ಚು ಜನರಿಗೆ ತರಬೇತಿ ಪ್ರಮಾಣಪತ್ರ ಸಿಕ್ಕಿತ್ತು. ಆದರೆ ಈಗ ಯಾವುದೇ ತರಬೇತಿಗಳೂ ನಡೆದಿಲ್ಲ. ಖಾಸಗಿ ಸಂಸ್ಥೆಗಳ ಒಪ್ಪಂದಗಳೂ ಆಗದೇ ನಿರುದ್ಯೋಗಿಗಳಿಗೆ ಕೆಎಸ್‌ಎಫ್‌ಸಿ ಹಾಗೂ ಎಸ್‌ಐಡಿಬಿ ಸೇರಿದಂತೆ ಇತರ
ಸಂಸ್ಥೆಗಳ ನೆರವು ದೊರೆಯುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಕೇಂದ್ರದ ಅನುದಾನ ಪಡೆಯುವಲ್ಲಿ ವಿಫಲ
ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿ ಹೆಚ್ಚಿಸಲು ಕೇಂದ್ರದಿಂದ ಈಗ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಆತ್ಮನಿರ್ಭರ ಹಾಗೂ ವಿಶ್ವಬ್ಯಾಂಕ್ ಸಾಲ ಸೇರಿದಂತೆ ಅನೇಕ ನೆರವುಗಳು ಸಿಗುತ್ತವೆ. ಅದರೆ ಇವುಗಳನ್ನು ಬಳಸಿಕೊಳ್ಳಲು ರಾಜ್ಯದಲ್ಲಿ ಯೋಜನೆಗಳು ಮತ್ತು ಪ್ರಸ್ತಾವಗಳನ್ನು ಸಿದ್ಧಗೊಳಿಸಿ ಕೇಂದ್ರಕ್ಕೆ ಸಲ್ಲಿಸಲು ಇಲಾಖೆ ಹಿಂದೆ ಬಿದ್ದಿದೆ ಎನ್ನಲಾಗಿದೆ. ಈ ವಿಚಾರದಲ್ಲಿ
ಆಂಧ್ರಪ್ರದೇಶ, ಒರಿಸ್ಸಾ, ಅಸ್ಸಾಂ, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಕೇಂದ್ರದ ಅನುದಾನವನ್ನು ಸರಿಯಾಗಿ ಬಳಸಿ ಕೊಂಡಿದ್ದು, ಕರ್ನಾಟಕ ಎಲ್ಲರಿಗಿಂತ ಹಿಂದೆ ಬಿದ್ದಿದೆ. ಕೇಂದ್ರ ಸರಕಾರ ಹಿಂದಿನ ವರ್ಷಗಳಲ್ಲಿ ರಾಜ್ಯಕ್ಕೆ ಸುಮಾರು 800 ಕೋಟಿ ರು. ವರೆಗೂ ಅನುದಾನ ನೀಡಿತ್ತು. ರಾಜ್ಯ ಪ್ರಯತ್ನಿಸಿದ್ದರೆ 1,000 ಕೋಟಿ ರು. ವರೆಗೂ ಪಡೆಯಬಹುದಿತ್ತು. ಆದರೆ ಈ ನಿಟ್ಟಿನಲ್ಲಿ ಸರಕಾರ ಸರಿಯಾದ ಯೋಜನೆಗಳನ್ನು ರೂಪಿಸಿಲ್ಲ.
ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಸರಕಾರವಿದೆ. ಆದರೂ ಸಚಿವರು ಬರೀ ವಿದೇಶಿ ತರಬೇತಿ ಮತು ಕೌಶಲ್ಯ
ವಿಶ್ವವಿದ್ಯಾಲಯಗಳ ಬಗ್ಗೆೆ ಮಾತನಾಡುತ್ತಿದ್ದಾರೆ. ಆದರೂ ಸರಕಾರ ಈತನಕ ಕೌಶಲ್ಯ ಅಭಿವೃದ್ಧಿ ಮಾಡಿ ಉದ್ಯೋಗ ಹೆಚ್ಚಿಸುವ ಪ್ರಯತ್ನ ಮಾಡಲಿಲ್ಲ.
-ಮುರಳೀಧರ ಹಾಲಪ್ಪ, ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ