Sunday, 15th December 2024

ಆಫ್ರಿಕಾ, ನೀನೇಕೆ ಇಷ್ಟು ಬಡವ !

ಶಿಶಿರ ಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಸಮಯ ಹದಿನಾಲ್ಕನೆಯ ಶತಮಾನದ ಅಂತ್ಯ. ಲಿಸ್ಬನ್ ನಗರದ ಪ್ರೇಮಿಗಳಿವರು. ಬೆಲ್ಲಾ ಮತ್ತು ಗೇಬ್ರಿಯಲ್‌. ಬೆಲ್ಲಾ ಯಹೂದಿ – ಗೇಬ್ರಿಯಲ್ ಕ್ರಿಶ್ಚನ್. ಅಗಾಧವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುತ್ತಾರೆ.

ಅಂತಸ್ತು ಮತ್ತು ಜಾತಿ ಪ್ರೀತಿಗೆ ಅಡ್ಡಬರುತ್ತದೆ. ಬೆಳ ಮದುವೆಯಾಗುವ ಆಸೆ ಮುಂದಿಟ್ಟ ಗೇಬ್ರಿಯಲ್‌ನ ಬಡತನವನ್ನು ಆಕೆಯ
ಶ್ರೀಮಂತ ವ್ಯಾಪಾರಿ, ಯಹೂದಿ ತಂದೆ ಹಂಗಿಸುತ್ತಾನೆ. ಈ ಘಟನೆಯಿಂದಾಗಿ ಗೇಬ್ರಿಯಲ್ ಹೇಗಾದರೂ, ಏನಾದರೂ ಮಾಡಿ ಹಣ ಮಾಡಬೇಕು ಎಂದು ನಿರ್ಧರಿಸುತ್ತಾನೆ. ಅದಾಗಲೇ ವಾಸ್ಕೋ ಡಾ ಗಮ ತನ್ನ ಮೊದಲ ಭಾರತದ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ವಾಪಸ್ಸಾಗಿ, ಮುಂದಿನ ಇನ್ನೊಂದು ಪ್ರಯಾಣಕ್ಕೆ ತಯಾರಾಗುತ್ತಿರುತ್ತಾನೆ.

ವಾಸ್ಕೋ ಡಾ ಗಾಮಾನ ಪ್ರಯಾಣ ಅಂತಹ ಸುಲಭದ ಇಂದಿನ ಹಡಗಿನ ಯಾನದಂತಲ್ಲ. ಹೋದವರು ಬದುಕಿ ಬರುತ್ತಾರೆ ಎನ್ನುವ ಗ್ಯಾರಂಟೀ ಇಲ್ಲ. ಆದರೂ, ಅದೆಲ್ಲ ತಿಳಿದಿದ್ದರೂ ಗೇಬ್ರಿಯಲ್ ಗೆಳತಿಯನ್ನು ಹಿಂದೆ ಬಿಟ್ಟು ಅವಮಾನಕ್ಕೆ ಪ್ರತ್ಯುತ್ತರವಾಗಿ ಇಂಥದ್ದೊಂದು ಸಾಹಸಕ್ಕೆ, ಭಾರತಕ್ಕೆ ಹೊರಟು ನಿಲ್ಲುತ್ತಾನೆ. ಆಗ ಬೆ ಇಡೀ ಸ್ಥಿತಿ ಮತ್ತು ಗೇಬ್ರಿಯಲ್‌ನ ಹುಚ್ಚು ಸಾಹಸದ ಮಾತುಗಳನ್ನು ಕೇಳಿ ಸಿಟ್ಟಿಗೇಳುತ್ತಾಳೆ.

ಗೇಬ್ರಿಯಲ್ ಯಾವುದನ್ನೂ ಕೇಳದ ಸ್ಥಿತಿಯಲ್ಲಿ. ನಿಮ್ಮಪ್ಪನಂಥವರಿಂದ ಬಡತನದ ಕಾರಣಕ್ಕೆ ಅವಮಾನಕ್ಕೆ ಗುರಿಯಾಗುವು ದಕ್ಕಿಂತಲೂ ಸುಡುವ ಬೆಂಕಿಯಲ್ಲಿ ಬೆಂದು ಹೋಗುವುದೇ ಉತ್ತಮ, ಜಗತ್ತಿಗೆ ನನ್ನ ಶಕ್ತಿಯನ್ನು ತೀರಿಸುವುದೇ ಈಗ ನನ್ನ ಸದ್ಯದ ಗುರಿ ಎಂದು ಗೇಬ್ರಿಯಲ. ಪ್ರವಾಸದ ಸಾವು ನೋವಿನ ಅರಿವಿದ್ದ ಬೆ ನೀನು ಶ್ರೀಮಂತರಾಗಿ ಜೀವಂತ ಮರಳಿದ ಸ್ನೇಹಿತರನ್ನಷ್ಟೇ ನೋಡುತ್ತಿದ್ದೀಯ, ಸಮುದ್ರ ಪ್ರವಾಸದಲ್ಲಿ ಸತ್ತವರ ವಿಷಯವನ್ನು ಜಾಣತನದಿಂದ ಇಗ್ನೋರ್ ಮಾಡುತ್ತಿದ್ದೀಯ’ ಎನ್ನುತ್ತಾಳೆ.

ಗೇಬ್ರಿಯಲ್ ಅದಾಗಲೇ ನಿರ್ಧರಿಸಿಯಾಗಿಬಿಟ್ಟಿದೆ. ಭಾರತಕ್ಕೆ ಹೋಗಲೇ ಬೇಕು – ಶ್ರೀಮಂತನಾಗ ಬೇಕು, ಮರಳಬೇಕು ಎನ್ನುವುದೇ ಅವನ ಹುಂಬ ಛಲ. ಬೆಲ್ಲಾ ಸಿಟ್ಟಿಗೇಳುತ್ತಾಳೆ. ಆಕೆಯ ಕೋಪ ಪರಿಸ್ಥಿತಿಗೆ ಎನ್ನುವುದಕ್ಕಿಂತ ಭಾರತದ ಮೇಲೆ, ಭಾರತದ ಶ್ರೀಮಂತಿಕೆಯ ಮೇಲೆ. ತನ್ನ ಶ್ರೀಮಂತಿಕೆಯ ಸೊಕ್ಕಿನಿಂದ ಆ ಭಾರತವೆಂಬ ದೇಶ ನನ್ನ ಪ್ರಿಯಕರನನ್ನು ನನ್ನಿಂದ ಕಿತ್ತುಕೊಳ್ಳು ತ್ತಿದೆ. ಅದಕ್ಕಾಗಿ ನಾನು ಭಾರತವನ್ನು ದ್ವೇಷಿಸುತ್ತೇನೆ. ಸಿರಿತನದ ಅಹಂಕಾರ ಭಾರತಕ್ಕಿದೆ.

ಇಕೋ ಆ ದೇಶಕ್ಕೆ ಈ ನೊಂದ ಪ್ರೇಮಿಯ ಶಾಪವಿದೆ’ ಎಂದು ನಿಟ್ಟುಸಿರು ಬಿಡುತ್ತಾಳೆ. ಸ್ನೇಹಿತ, ನನ್ನ ನೆಚ್ಚಿನ ಲೇಖಕ
ವಸುಧೆಂದ್ರರ ತೇಜೋ ತುಂಗಭದ್ರಾ ಕಾದಂಬರಿ ಹೀಗೆ ಶುರುವಾಗುತ್ತದೆ. ಇದೊಂದು ಕಾಲ್ಪನಿಕವಿರಬಹುದು, ಆದರೆ ಇಲ್ಲಿನ ಸ್ಥಿತಿ ವಿವರಣೆ ಮತ್ತು ಭಾವನೆಗಳು ಕಾಲ್ಪನಿಕವಲ್ಲ, ವಾಸ್ತವ ಇತಿಹಾಸ. ಇಲ್ಲಿ ಗ್ರಹಿಸಬೇಕಾದದ್ದು ಒಂದು ವಿಚಾರ. ಈ ಚಾಪ್ಟರ್ ಅಂದಿನ ಇಡೀ ಯುರೋಪ್‌ನ ಭಾರತದೆಡೆಗಿನ, ಭಾರತದ ಶ್ರೀಮಂತಿಕೆಯೆಡೆಗಿನ ಡೆಸ್ಪರೇಷನ್ ಅನ್ನು ಬಹಳ ನಾಜೂಕಾಗಿ ವಿವರಿಸುತ್ತದೆ. ಇಲ್ಲಿ ಗೇಬ್ರಿಯಲ್ ಇಡೀ ಯುರೋಪ್‌ನ ಅಂದಿನ ಯುವಕರನ್ನು ಪ್ರತಿನಿಧಿಸುತ್ತಾನೆ.

ಯುವ ಪ್ರೇಮಿಯೊಬ್ಬನ ಶ್ರೀಮಂತ ನಾಗಬೇಕು, ಜೀವವನ್ನಾದರೂ ಬಿಟ್ಟೇನು, ಭಾರತಕ್ಕೆ ಹೋಗಲೇಬೇಕು ಎಂದು ಹೊರಡುವ ಹತಾಶೆಯೇನಿದೆಯಲ್ಲ ಅದು ಅಂದಿನ ಯುರೋಪ್‌ನ ಸಾಮಾಜಿಕ ಸ್ಥಿತಿ, ಭಾರತವೆಂಬ ಮಾಯಾ ದೇಶದ ಎಡೆಗಿನ ಉತ್ಕಟತೆ ಮತ್ತು ಸೆಳೆತವನ್ನು ಯಥಾವತ್ ವಿವರಿಸುತ್ತದೆ. ಗೇಬ್ರಿಯಲ್‌ನ ಭಾರತದೆಡೆಗಿನ ಸೆಳೆತ ಪ್ರೇಮ ಮತ್ತು ಜೀವದ ಹಂಗನ್ನೂ ಮೀರಿದ್ದು ಎಂದು ಲೇಖಕರು ಬಹಳ ನಯವಾಗಿ ಚಿತ್ರಿಸಿದ್ದಾರೆ.

ಖಚಿತವಾಗಿ ಜೀವಂತವಾಗಿ ಮರಳುತ್ತೇವೆ ಎಂದು ತಿಳಿದಿಲ್ಲ – ಕಡಲಿನಲ್ಲಿ ಸಾಗುವಾಗ ನೂರೆಂಟು ವಿಘ್ನ, ರೋಗಗಳ ಸಾಧ್ಯತೆ, ಆಮೇಲೆ ಭಾರತಕ್ಕೆ ಕಾಲಿಟ್ಟ ಮೇಲೆ ರಾಜರ ಕೆಂಗಣ್ಣಿಗೆ ಗುರಿಯಾಗುವ ಇಲ್ಲವೇ ಭಾರತೀಯರ ದಾಳಿಯಿಂದ ಸಾಯಬಹುದು – ಹೀಗೆ ನೂರೆಂಟು ಜೀವ ಕಳೆದುಕೊಳ್ಳುವ ಸಾಧ್ಯತೆಯನ್ನು ಮೀರುವ ಯುರೋಪಿಯನ್ನರ ಡೆಸ್ಪರೇಷನ್‌ನ ಚಿತ್ರಣವದು.
ಈ ರೀತಿಯ ಹೊಸ, ಶ್ರೀಮಂತ, ಸಂಪದ್ಭರಿತ ಜಾಗದ ಎಡೆಗಿನ ಡೆಸ್ಪರೇಷನ್ ಕೇವಲ ಮನುಷ್ಯನಲ್ಲಿ ಮಾತ್ರವಲ್ಲ. ಇದು ಎಲ್ಲ ಪ್ರಾಣಿಗಳಲ್ಲೂ ಯಾವತ್ತೂ ಇದೆ. ಆದಿ ಮಾನವನಲ್ಲೂ ಇತ್ತು. ಹುಲ್ಲು ಹಸನಾಗಿದೆ ಎಂದರೆ ಕಾಡೆಮ್ಮೆಯ ಗುಂಪು ಎಂತಹ ಕಂದಕವನ್ನೂ ನೆಗೆದು ಹಾರುತ್ತದೆ.

ಆಕಳುಗಳು ಒಳ್ಳೆಯ ಬಾಳೆ ಗಿಡ ಕಂಡರೆ ಎಂತಹ ಬೇಲಿ ಕೂಡ ಅವನ್ನು ತಡೆಯುವುದಿಲ್ಲ. ತೆಂಗಿನ ಮರದಲ್ಲಿನ ಕಾಯಿ, ಬಾಳೆ
ತೋಟದಲ್ಲಿ ಬಾಳೆಕಾಯಿ ಬಿಟ್ಟದ್ದು ಕಂಡರೆ ಮಂಗಗಳು ಕೂಡ ಅದೆಂತಹ ಡೇಂಜರ್ ಅನ್ನು ಎದುರಿಸುವ ಸಾಹಸಕ್ಕೆ ಕೈ ಹಾಕುತ್ತವೆ. ಅನಾದಿಕಾಲದಿಂದ ಯುದ್ಧಗಳು ನಡೆದದ್ದೇ ಈ ಡೆಸ್ಪರೇಷನ್‌ನ ಕಾರಣದಿಂದ. ಎಲ್ಲರಿಗೂ ಸಂಪತ್ತು ಬೇಕು – ಬೇರೆ ಬೇರೆ ಪ್ರಾಣಿಗಳಿಗೆ ಸಂಪತ್ತು ಬೇರೆ ಬೇರೆಯವು ಅಷ್ಟೇ. ಹಾಗೆ ನೋಡಿದರೆ ಜೀವಿಗಳ ಉಳಿವೀಣೆ ರೇಸ್‌ಗೆ ಇದು ತೀರಾ
ಅವಶ್ಯಕವೂ ಹೌದು. ದೈವ ಸೃಷ್ಟಿಯನ್ನು ಒಪ್ಪುವುದಾದರೆ ಪ್ರಪಂಚದಲ್ಲಿ ಜೀವ ಸೃಷ್ಟಿಯ ಜತೆಯ ಹುಟ್ಟಿದ ಭಾವವಿದು.

ಹಾಗೆ ನೋಡಿದರೆ ಬದುಕೇ ಹೋರಾಟ ಎನ್ನುವ ಮಾತಿನ ಆಳದಲ್ಲಿ ಇಣುಕುವುದು ಕೂಡ ಇದೇ ಭಾವ, ಇದೇ ಡೆಸ್ಪರೇಷನ್.
ಈ ಸಂಪತ್ತಿನೆಡೆಗಿನ ಸೆಳೆತ ಯಾವತ್ತೂ ಹೆಚ್ಚುತ್ತಲೇ ಹೋಗುವಂಥದ್ದು. ಮನುಷ್ಯ ಬೆಳೆದಂತೆಲ್ಲ ಇವು ತನ್ನ ಬಣ್ಣವನ್ನು
ಬದಲಿಸಿಕೊಂಡಿವೆ, ಇನ್ನಷ್ಟು ಸೊ-ಸ್ಟಿಕೇಟ್ ಆಗಿವೆ ಅಥವಾ ಕ್ರೂರವಾಗುತ್ತ ಸಾಗಿವೆ. ಅಂದು ಭಾರತದೆಡೆಗಿನ ಸೆಳೆತ ಕಾಲ
ಕಳೆದಂತೆ ತೈಲದೇಶಗಳತ್ತ ಹೊರಳಿತು. ಆ ಕಾರಣಕ್ಕೆ ದೇಶ ದೇಶಗಳು ಕೈ ಕೈ ಮಿಲಾಯಿಸಿದವು, ಯುದ್ಧಗಳಾದವು.

ಅಮೆರಿಕಾ, ರಷ್ಯಾ, ಯುರೋಪಿಯನ್ ರಾಷ್ಟ್ರಗಳು ಪೈಪೋಟಿಗಿಳಿದವು. ಒಂದಿಂದು ಕಾರಣವನ್ನಿಟ್ಟು ಇರಾಕ್, ಇರಾನ್, ಅಫ್ಘಾನ್ ಯುದ್ಧಗಳಾದವು. ಇಂದಿಗೂ ಯುದ್ಧ ನಡೆಯುತ್ತಲೇ ಇದೆ. ಅ-ನ್ ದೇಶದ ಹಿಡಿತಕ್ಕೆ ಭಾರತವೂ ಪೈಪೋಟಿ ನಡೆಸಿದ್ದು ಇವೆಲ್ಲ ಕಳೆದ ವರ್ಷಗಳಲ್ಲಿ ನಾವು ನೋಡಿದ್ದೇವೆ. ಇಲ್ಲಿ ಯಾವುದು ಸಂಪತ್ತು ಎನ್ನುವುದು ಕಾಲಕಾಲಕ್ಕೆ ಬದಲಾಗುತ್ತ ಹೋಯಿತು ಅನ್ನುವ ಸೂಕ್ಷ್ಮವನ್ನು ಗ್ರಹಿಸಬೇಕು. ಯುರೋಪಿಯನ್ ರಾಷ್ಟ್ರಗಳು ಭಾರತಕ್ಕೆ ಬರುವಾಗ ಸಾಂಬಾರು ಪದಾರ್ಥವೇ ಸಂಪತ್ತಾಗಿತ್ತು. ನಂತರದಲ್ಲಿ ಇಲ್ಲಿನ ಚಿನ್ನ ಮೊದಲಾದ ಅನ್ಯ ಸಂಪತ್ತಿನ ಮೇಲೆ ಅವರ ಕಣ್ಣು ಬಿದ್ದದ್ದು, ರುಚಿ ಹತ್ತಿದ್ದು. ನಂತರದಲ್ಲಿ ಸಂಪತ್ತೆಂದರೆ ತೈಲ ಎನ್ನುವ ಕಾಲ ಬಂತು.

ಈಗ ಸಂಪತ್ತು ಎಂದರೆ ಬೇರೆಯದೇ ಆಗಿದೆ. ಇದೆಲ್ಲ ಮನುಷ್ಯನ ಅವಶ್ಯಕತೆಗನುಗುಣವಾಗಿ ಬದಲಾಗಿದ್ದು ಇತಿಹಾಸದಲ್ಲಿ ಗ್ರಹಿಸಬಹುದು. ಈಗ ಒಂದು ದಶಕದಿಂದ ಜಗತ್ತಿನ ಹಲವಾರು ಬಲಿಷ್ಠ – ಬೆಳೆದ, ಬೆಳೆಯಲು ಹವಣಿಸುವ ರಾಷ್ಟ್ರಗಳ ವಾರೆ ನೋಟ ಬಿದ್ದದ್ದು ಆಫ್ರಿಕಾದ ಮೇಲೆ. ಅದಕ್ಕೆ ಸಂಪತ್ತಿನ ಪರಿವರ್ತಿತ ಆವೃತ್ತಿ ಕಾರಣ. ಆಫ್ರಿಕಾ ಒಂದು ದೇಶವಲ್ಲ ಖಂಡ ಎನ್ನುವುದು ನಿಮಗೆ ಗೊತ್ತು. ಆದರೆ ಅಲ್ಲಿನ ದೇಶಗಳನ್ನೆಲ್ಲ ಒಟ್ಟಾಗಿ – ಒಂದಾಗಿ ನೋಡಬೇಕಾಗಿದೆ.

ಆಗ ಸ್ಥಿತಿಯ, ಪೈಪೋಟಿಯ ಒಂದು ಅಂದಾಜು ಸಿಗುತ್ತದೆ. ಆ ಕಾರಣಕ್ಕೆ ಆಫ್ರಿಕಾ ದೇಶಗಳೆಲ್ಲ ಸೇರಿ ಒಂದೇ ಎಂದು ಇಲ್ಲಿ ಬಳಸಲಾಗಿದೆ. ಆಫ್ರಿಕಾ – ಅಲ್ಲಿನ ದೇಶಗಳೆಂದಾಕ್ಷಣ ನಮಗೆ ಮೊದಲು ಕಣ್ಣಿಗೆ ಬರುವುದೇ ಅಲ್ಲಿನ ಬಡತನ, ಮೂಲ ಸೌಕರ್ಯ ಗಳೇ ಇಲ್ಲದ ವ್ಯವಸ್ಥೆ, ಆಂತರಿಕ ದಂಗೆಗಳು ಇತ್ಯಾದಿ. ಇಂದಿಗೂ ನಮ್ಮಲ್ಲಿ ಬಹುತೇಕರಿಗೆ ಆಫ್ರಿಕಾದ ಸ್ಥಿತಿಗಳನ್ನು ಓದುವಾಗ
ಕಣ್ಣೆದುರಿಗೆ ಬಂದು ಕಾಡುವುದು ಕೆವಿನ್ ಕಾರ್ಟರ್ ತೆಗೆದ, ಪುಲಿಟ್ಜರ್ ಪ್ರಶಸ್ತಿ ಪಡೆದ The vulture and the little girl ಫೋಟೋ. ಅದು ಹದ್ದೊಂದು ಕುಪೋಷಿತ ಮಗುವಿನ ಸಾವಿಗಾಗಿ ಕಾದು ಕುಳಿತಿರುವ ದೃಶ್ಯ. ಇಡೀ ಜಗತ್ತಿನ ಸಹೃದಯರ ಮನಸ್ಸನ್ನು ಕಲಕಿದ ಚಿತ್ರವದು. ಮಿಲೇನಿಯಲ್ ಗಳಿಗೆ ಆಫ್ರಿಕಾ ಎಂದರೆ ಅದು ಆಫ್ರಿಕಾ – ಊಟಕ್ಕೆ ಗತಿಯಿಲ್ಲದವರ ದೇಶ.

ಅಮೆರಿಕಾದ ಸುದ್ದಿ ಪತ್ರಿಕೆಗಳನ್ನು ನೋಡಿದರಂತೂ ಆಫ್ರಿಕಾದ ಜನರ ಹೊಟ್ಟೆ ಹೊರುತ್ತಿರುವವರೇ ಇವರು ಎಂದೆನಿಸುತ್ತದೆ. ಎಲ್ಲಿಲ್ಲದ ಏಡ್‌ಗಳು, ಸಹಾಯ ಹಸ್ತ ಕೊಡಲು ಅಮೆರಿಕಾ ಮತ್ತು ಯುರೋಪಿಯನ್ ದೇಶಗಳಾದ ಯುನೈಟೆಡ್ ಕಿಂಗ್ಡಮ, ಜರ್ಮನಿ, ಸ್ವಿಟ್ಜರ್ಲ್ಯಾಂಡ್ ಮತ್ತು ಹತ್ತಾರು ದೇಶಗಳು ಪೈಪೋಟಿಯಲ್ಲಿ ನಿಂತು ತಾವೇ ದೊಡ್ಡ ಹ್ಯುಮಾನಿಟೇರಿಯನ್ ಎಂದು ಪೋಸ್ ಕೊಡುತ್ತವೆ.

ಇತ್ತೀಚೆಗಂತೂ ಈ ದಾನ ಧರ್ಮ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಮೊಸಳೆ ಕಣ್ಣೀರು ಜಾಸ್ತಿಯಾಗುತ್ತಲೇ ಇದೆ. ಹಾಗಂತ
ನಾವಂದುಕೊಂಡದ್ದಕ್ಕಿಂತ ವಿಭಿನ್ನವಾಗಿಲ್ಲ ಆಫ್ರಿಕಾದ ಪರಿಸ್ಥಿತಿ. ಇವತ್ತಿಗೂ ಅಲ್ಲಿನ ಜೀವ ದುಸ್ತರವೇ. ಆದರೆ ಈ ದಾನ ಧರ್ಮ
ಒಮ್ಮಿಂದೊಮ್ಮೆಲೆ ಹೆಚ್ಚಾಗಲು ಕಾರಣ ಮಾತ್ರ ಬೇರೆಯದೇ ಇದೆ. ಅದಕ್ಕೆ ಕಾರಣ ಅಲ್ಲಿನ ಸಂಪತ್ತು , ಸಾಧ್ಯತೆ, ಲೂಟಿಮಾಡಲು
ಇರುವ ಅವಕಾಶಗಳು. ಆಫ್ರಿಕಾ ೫೪ ದೇಶಗಳ ಖಂಡ. ಅಷ್ಟೊಂದು ದೇಶಗಳಿದ್ದರೂ ಅಲ್ಲಿನ ಜನಸಂಖ್ಯೆ ಜಗತ್ತಿನ ಕೇವಲ ಶೇ.೧೭. ವಿಯೋನ್ ವರದಿಯ ಪ್ರಕಾರ ಸುಮಾರು ಶೇ.೧೦ದಷ್ಟು ಜಗತ್ತಿನ ಪೆಟ್ರೋಲಿಯಂ ಉತ್ಪನ್ನ, ಶೇ.೯೦ ಅತೀ ಮೌಲ್ಯವುಳ್ಳ ಪ್ಲಾಟಿನಂ, ಕೋಬಾಲ್ಟ, ಶೇ.೫೦ ಚಿನ್ನ, ಶೇ.೬೬ ಮ್ಯಾಂಗನೀಸ್, ಶೇ.೩೫ ಯುರೇನಿಯಂ, ಶೇ.೭೫ರಷ್ಟು ಕೋಲ್ಟಾನ್ ಜಗತ್ತಿಗೆ ಸರಬರಾಜು ಮಾಡುವುದೇ ಆಫ್ರಿಕಾ.

ಭಾರೀ ಪ್ರಮಾಣದ ವಜ್ರ ಮತ್ತು ತಾಮ್ರ ನಿಕ್ಷೇಪ ಇರುವುದು ಕೂಡ ಆಫ್ರಿಕಾದಲ್ಲಿಯೇ. ವಾಷಿಂಗ್ಟನ್ ಪೋಸ್ಟ್‌ನ ವರದಿಯ ಪ್ರಕಾರ ಆಫ್ರಿಕಾದ ಶೇ.೯೦ರಷ್ಟು ಪ್ರದೇಶ ಇನ್ನೂ ಯಾರು ಎಕ್ಸ್ಪ್ಲೋರ್ ಮಾಡಿಯೇ ಇಲ್ಲ. ಆ ಕಾರಣಕ್ಕೆ ಆಫ್ರಿಕಾ ಭವಿಷ್ಯದ ಗೋಲ್ಡ್ ಮೈನ್. ಅಲ್ಲದೆ ಇಲ್ಲಿನ ದೇಶಗಳ ಆಂತರಿಕ ರಾಜಕೀಯ ಕುಲಗೆಟ್ಟ ಸ್ಥಿತಿಯಿರುವುದರಿಂದ, ಆಂತರಿಕ ಯುದ್ಧಗಳು, ಬಂಡುಕೋರರ ಸ್ಥಿತಿ ಯಿರುವುದರಿಂದ ಹಿಡಿತ ಸಾಧಿಸಬೇಕೆನ್ನುವ ಬಲಿಷ್ಠ ದೇಶಕ್ಕೆ ಇದೊಂದು ಅವಕಾಶ. ಅದಲ್ಲದೆ ಯುನೈಟೆಡ್ ನೇಶನ್ಸ್‌ನ ಸಾಮಾನ್ಯ ಸದಸ್ಯತ್ವದ ೫೪ ವೋಟ್ ಅಲ್ಲಿನ ೫೪ ದೇಶಗಳಿಂದ. ಈ ಎಲ್ಲ ಕಾರಣದಿಂದ ಇಂದಿನ ಎಲ್ಲ ಗ್ಲೋಬಲ್ ಪವರ್‌ಗಳಿಗೆ ಆಫ್ರಿಕಾ ಬೇಕು. ಆದಷ್ಟು ಬೇಗ ಅಲ್ಲಿ ಹಿಡಿತ ಸಾಧಿಸಬೇಕು.

ಥೇಟ್ ಭಾರತದತ್ತ ಹದಿನೈದನೇ ಶತಮಾನದಲ್ಲಿದ್ದ ಬಲಾತ್ಕಾರಿ ದೃಷ್ಟಿ ಇಂದು ಜಗತ್ತಿಗೆ ಆಫ್ರಿಕಾದ ಮೇಲಿದೆ. ಇದಕ್ಕೆ ತಾಮುಂದು
ತಾಮುಂದು ಎಂದು ಹೊರಟಿರುವ ದೇಶಗಳೇ ಚೈನಾ, ಅಮೆರಿಕಾ, ಯುಕೆ, ಇಸ್ರೇಲ, ಸೌದಿ, ಕೆನಡಾ ಮತ್ತು ಭಾರತ. ಈ ಎಲ್ಲ ದೇಶಗಳಿಗೆ ಸ್ಪರ್ಧೆಯಲ್ಲಿ ಈಗ ಆಫ್ರಿಕಾವನ್ನು ಗೆದ್ದವರು ಮುಂದೆ ಜಗತ್ತನ್ನು ಗೆಲ್ಲಬಹುದು ಎನ್ನುವ ಮನವರಿಕೆಯಾಗಿದೆ. ಈ ಓಟದಲ್ಲಿ ಮುಂಚೂಣಿಯಲ್ಲಿರುವುದೇ ಚೈನಾ ಮತ್ತು ಅಮೆರಿಕಾ. ಇಂದು ಅಮೆರಿಕಾ ಮತ್ತು ಚೈನಾದ ಮುಸುಕು ಗುದ್ದಾಟ ನಡೆಯುತ್ತಿರುವುದು ಬೇರಿನ್ನೆಲ್ಲೂ ಅಲ್ಲ, ಆಫ್ರಿಕಾದ ನೆಲದಲ್ಲಿ.

ಅಮೆರಿಕಾ ಮತ್ತು ಚೀನಾದ ಅತಿ ಹೆಚ್ಚು ಇನ್ವೆಸ್ಟ್ಮೆಂಟ್ ಗಳು ಇತ್ತೀಚಿನ ದಿನಗಳಲ್ಲಿ ಆಗುತ್ತಿರುವುದೇ ಆಫ್ರಿಕಾದಲ್ಲಿ. ಎಲ್ಲ
ದೇಶಗಳೂ ಜಗತ್ತಿಗೆ ಹೇಳುತ್ತಿರುವುದು ನಾವಲ್ಲಿ ಸಹಾಯ, ದಾನ ಧರ್ಮ ಎಂಬಿತ್ಯಾದಿ ಮಾಡುತ್ತಿದ್ದೇವೆ ಎಂದು. ಆದರೆ ಅಸಲಿಗೆ
ಅವೆಲ್ಲವಕ್ಕೂ ಆಫ್ರಿಕಾದ ಮೇಲೆ ಹಿಡಿತ ಸಾಧಿಸಲು ಅಲ್ಲಿನ ಸಂಪತ್ತು, ಜಿಯೋಪೊಲಿಟಿಕಲ್‌ಗಳೇ ಕಾರಣ. ಮೇಲ್ನೋಟಕ್ಕೆ
ಆಫ್ರಿಕಾ ವನ್ನು ಉದ್ಧಾರ ಮಾಡಲು ಪಣ ತೊಟ್ಟಂತೆ ಕಂಡರೂ ಅಲ್ಲಿ ಆಂತರ್ಯದಲ್ಲಿ ಅಡಗಿರುವ ಉದ್ದೇಶ ಹೊಡೆದಾಟಗಳ
ಮಧ್ಯೆ ಆಚೆ ಬರುತ್ತಲಿದೆ. ಆಫ್ರಿಕಾದ ರಾಜಕೀಯ ಸ್ಥಿತಿ ಹಾಗೆ ನೋಡಿದರೆ ದುರ್ಬಲ ಆದರೆ ಪೈಪೋಟಿಯ ಕಾರಣದಿಂದ
ಹಿಡಿತ ಸಾಧಿಸುವುದು ಕಷ್ಟವಾಗಿದೆ.

ಅಂದು ಯುರೋಪ್ ದೇಶಗಳು ಭಾರತದ ಮೇಲೆ ಹಿಡಿತ ಸಾಧಿಸಲು ಪರಸ್ಪರ ಪೈಪೋಟಿ ನಡೆಸಿದ್ದು, ಬಡಿದಾಡಿದ್ದು ಎಲ್ಲ ನಮಗೆ ಗೊತ್ತಲ್ಲ – ಅದೇ ಸ್ಥಿತಿ ಇಂದು ಜಗತ್ತಿನಲ್ಲಿ ಆಫ್ರಿಕಾದೆಡೆಗೆ ನಿರ್ಮಾಣ ವಾಗಿದೆ. ಅಂದಿನ ಭಾರತ – ಇಂದಿನ ಆಫ್ರಿಕಾ. ಭಾರತವೂ ಈ
ಪೈಪೋಟಿಯಲ್ಲಿ ಸಣ್ಣಗೆ ಬಾಲ ಬಿಚ್ಚಿ ಆಗಿದೆ. ಅಮೆರಿಕಾ ಇರಲಿ ಅಥವಾ ಯಾವುದೇ ಯುರೋಪಿಯನ್ ರಾಷ್ಟ್ರಗಳಿರಲಿ, ಯಾವ ದೇಶಕ್ಕೂ ಆಫ್ರಿಕಾವನ್ನು ಉದ್ಧಾರ ಮಾಡುವ ದರ್ದು ಇಲ್ಲ. ಉದ್ಧಾರದ ಸೋಗಿನಲ್ಲಿ ಸಹಾಯ ಮಾಡುತ್ತಿರುವ ಯಾವ ದೇಶದಿಂದಲೂ ಇನ್ನುವರೆಗೆ ಯಾವುದೇ ಆಫ್ರಿಕಾದ ದೇಶಗಳ ಪರಿಸ್ಥಿತಿ ಸುಧಾರಿಸಿಲ್ಲ.

ಇದನ್ನು ವಿವರಿಸಲು ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ – ಜಾಂಬಿಯಾ. ಜಾಂಬಿಯಾ ಜಗತ್ತಿನ ಅತಿ ಹೆಚ್ಚು ತಾಮ್ರ ನಿಕ್ಷೇಪವಿರುವ ದೇಶಗಳಲ್ಲಿ ಒಂದು. ತಾಮ್ರ ಇಂದು ಅತ್ಯಂತ ಬೆಲೆಯುಳ್ಳ ಸರಕುಗಳಲ್ಲಿ ಒಂದು. ಕಳೆದ ದಶಕವೊಂದರ ಜಾಂಬಿಯಾ ದೇಶದಿಂದ ರಫ್ತಾಗಿರುವ ತಾಮ್ರದ ವ್ಯಾಲ್ಯೂ ಬರೋಬ್ಬರಿ ೨೯ ಬಿಲಿಯನ್ ಅಮೆರಿಕನ್ ಡಾಲರ್‌ಗೆ ಸಮ. ಆದರೆ ವಿಚಿತ್ರವೆಂದರೆ ಜಾಂಬಿಯಾದ ಜಿಡಿಪಿ ಇಂದು ಕೇವಲ ೨೩ ಬಿಲಿಯನ್ ಡಾಲರ್.

ಅದೇಕೆ ಹೀಗೆ, ಇಷ್ಟೊಂದು ಪ್ರಮಾಣದ ಒಂದೇ ವಸ್ತುವನ್ನು ರಫ್ತು ಮಾಡುವ ದೇಶ ಇಂದಿಗೂ ಜಗತ್ತಿನ ಇಪ್ಪತ್ತು ಅತಿ ಬಡ
ದೇಶಗಳಲ್ಲಿ ಒಂದಾಗಿರುವುದಕ್ಕೆ ಕಾರಣವೇನು ಎಂದು ಕೆದಕುತ್ತ ಹೋದರೆ ಒಂದು ಕರಾಳ ಕಥೆ ಹೊರಗೆ ಬರುತ್ತದೆ. ಇಂದು
ಜಾಂಬಿಯಾದ ಎಲ್ಲ ತಾಮ್ರ ತೆಗೆಯುವ ಕಂಪನಿಗಳು ವಿದೇಶಿ ಕಂಪನಿಗಳು. ಅವು ಮೊದಲು, ದಶಕದ ಹಿಂದೆ ಈ ದೇಶಕ್ಕೆ
ಬಂದಾಗ – ನಮ್ಮಲ್ಲಿ ತಂತ್ರಜ್ಞಾನವಿದೆ, ನಿಮ್ಮಲ್ಲಿ ಸಂಪತ್ತಿದೆ, ನಾವು ಇದನ್ನು ತೆಗೆಯಲು ಸಹಾಯ ಮಾಡುತ್ತೇವೆ, ನೀವು ಲೀಸ್
ನಮಗೆ ಕೊಡಿ – ಅದಕ್ಕೆ ಪ್ರತಿಯಾಗಿ ಒಂದು ದಶಕದಲ್ಲಿ ಉದ್ಯೋಗ, ಇನ್ರಾಸ್ಟ್ರಕ್ಚರ್ ಜತೆ ನಿಮಗೆ ಬಿಲಿಯನ್ ಹಣ ಕೊಡುತ್ತೇವೆ ಮತ್ತು ತೆಗೆದು ಮಾರಿದ ತಾಮ್ರದಿಂದ ಬರುವ ಹಣದಲ್ಲಿ ಶೇ.೭೦ ಹಣ ನಿಮಗೆ, ಶೇ.೩೦ ನಮಗೆ ಎಂದು ಒಪ್ಪಿಸಿಕೊಂಡವು.

ಜಾಂಬಿಯಾ ಬಕ್ರಾ ಆಗಿದ್ದೇ ಅಲ್ಲಿ. ಅದಕ್ಕೆ ಇದು ತನ್ನನ್ನು ಬಲಿಕೊಡಲು ಮಾಡಿದ ಹುನ್ನಾರ ಎಂದು ಆಗ ತಿಳಿಯಲಿಲ್ಲ. ಈ ಕೆಲಸಕ್ಕೆ ಮೊದಲು ಕೈ ಹಾಕಿದ್ದು ಸ್ವಿಟ್ಜರ್ಲ್ಯಾಂಡ್ ಎಂಬ ಒಂದು ಸಣ್ಣ ದೇಶ. ಕಂಪನಿ ಸ್ಥಾಪಿತವಾಯಿತು, ಜನರಿಗೆ ಉದ್ಯೋಗ ಸಿಕ್ಕಿತು. ಲೆಕ್ಕಾಚಾರದ ಪ್ರಕಾರ ಸುಮಾರು ಇಪ್ಪತ್ತು ಬಿಲಿಯನ್ ಆದಾಯ ಜಾಂಬಿಯಾ ಗೆ ಬರಬೇಕು. ಆದರೆ ಹಾಗಾಗಲೇ ಇಲ್ಲ.
ಈ ರೀತಿ ಕಂಪನಿಗಳನ್ನು ಸ್ಥಾಪಿಸಿದ ಬಹುರಾಷ್ಟ್ರೀಯ ಕಂಪನಿಗಳು ತಾಮ್ರವನ್ನೇನೋ ಹೊರತೆಗೆದವು.

ಆದರೆ ಒಪ್ಪಂದದ ಪ್ರಕಾರ ಮಾರಿದ ಶೇ.೭೦ ಹಣ ಜಾಂಬಿಯಾಕ್ಕೆ ಕೊಡಬೇಕು. ಈ ಕಂಪನಿಗಳು ತಾವು ತೆಗೆದ ತಾಮ್ರವನ್ನು
ತಮ್ಮದೇ ಹೊರದೇಶದಲ್ಲಿರುವ ಕಂಪನಿಗಳಿಗೆ ಡರ್ಟ್ ಚೀಪ್ – ಪುಡಿಕಾಸಿಗೆ ಮಾರಿದವು, ಕಾಕಣ್ಣ ಗುಬ್ಬಣ್ಣನ ಲೆಕ್ಕ ತೋರಿಸಿದವು.
ಇದರಿಂದ ಜಾಂಬಿಯಾ ದೇಶಕ್ಕೆ ಬರಬೇಕಾಗಿದ್ದ ಹಣದ ಶೇ.ಕೂಡ ಬರಲಿಲ್ಲ. ಅದಾಗಲೇ ಈ ಕಂಪನಿಗಳು ರಾಜಕೀಯ
ಹಿಡಿತವನ್ನು ಕೂಡ ಅಲ್ಲಿ ಸಾಧಿಸಿ ಒಪ್ಪಂದವನ್ನು ಪ್ರಶ್ನಿಸದಂತೆ ನೋಡಿಕೊಂಡವು. ಕಣ್ಣೆದುರೇ, ಹಾಡ ಹಗಲೇ ಲೂಟಿ
ಅವ್ಯಾಹತವಾಗಿ ಸಾಗಿತು – ಇಂದಿಗೂ ಈ ದರೋಡೆ ಮುಂದುವರಿಯುತ್ತಲೇ ಇದೆ. ಜಾಂಬಿಯಾ ಬಡವಾಗಿಯೇ ಇದೆ. ಈ ಲೂಟಿ ಯಲ್ಲಿ ಈ ಮಲ್ಟಿನ್ಯಾಷನಲ್ ಕಂಪನಿಗಳು ಅವ್ಯಾಹತವಾಗಿ ಬೆಳೆದವು. ಅಗ್ಗದ ಬೆಲೆಗೆ ತಮ್ಮದೇ ಶೆಲ್ ಕಂಪನಿಗೆ ಮಾರುವುದು, ಆ ಕಂಪನಿಗಳು ಜಾಗತಿಕ ಬೆಲೆಗೆ ತಾಮ್ರವನ್ನು ಹೊರದೇಶಗಳಲ್ಲಿ ಮಾರುವುದು ನಡೆಯುತ್ತಲೇ ಹೋಯಿತು.

ಇದೊಂದು ಅತಿ ಚಿಕ್ಕ ಉದಾಹರಣೆಯಷ್ಟೆ. ಇಂತಹ ಲೀಚಿಂಗ್ ನೀಚ ಕಂಪನಿಗಳು ಆಫ್ರಿಕಾದ ದೇಶಗಳಲೆಲ್ಲ ಈ ರೀತಿಯ ಲೂಟಿ ಅವ್ಯಾಹತವಾಗಿ ನಡೆಸುತ್ತಿವೆ. ಇಂತಹ ಬರೋಬ್ಬರಿ ಎಂಟು ಸಾವಿರದಷ್ಟು ಕಂಪನಿಗಳು ಇಂದು ಆಫ್ರಿಕಾದಲ್ಲಿ ಎಗ್ಗಿಲ್ಲದೇ ವ್ಯವಹಾರ ನಡೆಸುತ್ತಿವೆ ಮತ್ತು ಆಫ್ರಿಕಾದ ರಕ್ತ ಹೀರುತ್ತಲೇ ಇವೆ. ಆ ಕಾರಣಕ್ಕೆ ಸಂಪತ್ತು ಅಗಾಧವಾಗಿದ್ದರೂ ಆಫ್ರಿಕಾದ ದೇಶಗಳು ಇಂದಿಗೂ ಬಡವಾಗಿಯೇ ಇವೆ. ಅಲ್ಲಿನ ಆಡಳಿತ ಸರಕಾರ ಸ್ವಲ್ಪವೇ ಪ್ರಶ್ನಿಸಿದರೂ ದಂಗೆಯೇಳುವಂತೆ ನೋಡಿಕೊಂಡ ಅದೆಷ್ಟೋ ಉದಾಹರಣೆಗಳಿವೆ.

ಇದೆಲ್ಲದರ ನಡುವೆ ದಾನ ಧರ್ಮದ ಕೆಲಸ ಮಾತ್ರ ಕಣ್ಣು ಕಟ್ಟಲು ಈ ಕಂಪನಿಯ ಲಾಭ ಪಡೆಯುವ ದೇಶಗಳು ಮಾಡುತ್ತಲೇ ಇವೆ. ಇದೊಂದು ರೀತಿಯಲ್ಲಿ ಉಸಿರುಗಟ್ಟಿಸುತ್ತಿರುವವರೇ ವೆಂಟಿಲೇಟರ್ ಕೊಡುತ್ತಿರುವ ಸೋಗು. ಇಂದು ಅಮೆರಿಕಾ, ಯುಕೆ, ಸ್ವಿಟ್ಜರ್ಲ್ಯಾಂಡ್, ಚೈನಾ ಈ ಎಲ್ಲ ದೇಶಗಳು ಪುಕ್ಸಟ್ಟೆ ಹಣವನ್ನೇನೋ ಆಫ್ರಿಕಾಕ್ಕೆ ಕೊಡುತ್ತಿವೆ. ನೋಡಿದರೆ ಇವೆಲ್ಲ ದೇಶಗಳು ಮೇಲ್ನೋಟಕ್ಕೆ ದಾನಶೂರರೇ ಕರ್ಣನ ಅವತಾರವೇ !

ಆದರೆ ಇಂದು ಆಫ್ರಿಕಾ ಪಡೆಯುತ್ತಿರುವ ಜಾಗತಿಕ ಏಡ್ – ಸಹಾಯದ ಮೊತ್ತಕ್ಕೆ ಹೋಲಿಸಿದರೆ ಅದಕ್ಕೆ ಹದಿನಾರು ಪಟ್ಟು
ಸಂಪತ್ತು ಆಫ್ರಿಕಾದಿಂದ ಆಚೆ ಸಾಗಿಸಲಾಗುತ್ತಿದೆ. ಈ ಕಂಪನಿಗಳು ಥೇಟ್ ಆಧುನಿಕ ಈಸ್ಟ್ ಇಂಡಿಯಾ ಕಂಪನಿಗಳಂತೆ
ವ್ಯವಹರಿಸುತ್ತಿವೆ, ಆಫ್ರಿಕಾವನ್ನು ಬಲಾತ್ಕರಿಸುತ್ತಲೇ ಇವೆ. ಇಂದಿನ ಆಧುನಿಕ ಸರಬರಾಜು ವ್ಯವಸ್ಥೆಯ ಸಾಧ್ಯತೆ ಯಿಂದಾಗಿ ಲೂಟಿಯ ಪ್ರಮಾಣ ಮತ್ತು ವೇಗವೂ ಜಾಸ್ತಿ.

ಭಾರತವನ್ನು ನೂರು ವರ್ಷಗಳ ಕಾಲ ಲೂಟಿ ಮಾಡಿದ ಪ್ರಮಾಣದಲ್ಲಿ ಲೂಟಿ ಮಾಡಲು ಇಂದಿನ ವ್ಯವಸ್ಥೆಗೆ ಕೇವಲ ಒಂದೆರಡು ವರ್ಷ ಸಾಕು. ಯಾವುದೇ ದೇಶ ಆಫ್ರಿಕಾದ ಉದ್ಧಾರಕ್ಕೆ ಹೊರಟಿದೆ ಎನ್ನುವ ಸುದ್ದಿ ಓದಿದಲ್ಲಿ ಅದರ ಹಿಂದಿನ
ಸ್ವಾರ್ಥ ಸಾಧನೆಯ ಉದ್ದೇಶ ಗ್ರಹಿಸಬೇಕಾಗುತ್ತದೆ. ಯಾಕೋ ಇದನ್ನೆ ತಿಳಿದಾಗ ಮತ್ತೆ ಕೆವಿನ್ ಕಾರ್ಟರ್ The vulture and
the little gir ಫೋಟೋ ನೆನೆಪಾಗುತ್ತದೆ.

ಈ ಚಿತ್ರವನ್ನು ಮ್ಯೂಸಿಯಂನಲ್ಲಿ ವೈನ್ ಗ್ಲಾಸ್ ಹಿಡಿದು ನೋಡುತ್ತ ಪುಚಕ್ ಎಂದು ರೋಧಿಸುವ ಮಲ್ಟಿನ್ಯಾಷನಲ್ ಕಂಪನಿಯ ಮಾಲೀಕರು ಮತ್ತು ಜಗತ್ತಿನ ಬಲಿಷ್ಠ ರಾಷ್ಟ್ರಗಳು ರಣ ಹದ್ದಿನಂತೆ, ಆ ಸುಡಾನ್ ದೇಶದ ಸಾವಿನ ಕ್ಷಣಗಣನೆಯಲ್ಲಿರುವ ಆ ಚಿಕ್ಕ ಕೂಸು ಇಡೀ ಆಫ್ರಿಕಾದಂತೆ ಭಾಸವಾಗುತ್ತದೆ. ಹುಹ್ಹ್..