Saturday, 23rd November 2024

ಬಾಲಾಕೋಟ್ ವಾಯು ದಾಳಿ ವಾರ್ಷಿಕೋತ್ಸವ: ಸಶಸ್ತ್ರ ಸೇನೆಗೆ ನಮಿಸಿದ ರಕ್ಷಣಾ ಸಚಿವ

ನವದೆಹಲಿ: ಬಾಲಾಕೋಟ್ ವಾಯು ದಾಳಿ ವಾರ್ಷಿಕೋತ್ಸವ ಅಂಗವಾಗಿ, ನಮ್ಮ ಭಾರತೀಯ ವಾಯು ಪಡೆಯ ಅಸಾಧಾರಣ ಧೈರ್ಯ, ಶ್ರದ್ಧೆ ಮತ್ತು ಸಾಹಸಕ್ಕೆ ನಮಿಸುತ್ತೇನೆ. ತಾಯಿನಾಡನ್ನು ಸುರಕ್ಷೆತೆ ಮತ್ತು ಸುರಕ್ಷಿತವಾಗಿಡುವ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಭಾರತೀಯ ವಾಯುಪಡೆಯ ಫೈಟರ್ ಜೆಟ್‍ಗಳು ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನದ ಬಾಲಕೋಟ್‍ನ ಭಯೋ ತ್ಪಾದಕ ತಾಣಗಳನ್ನು ನಾಶಪಡಿಸಿದ್ದು, ಭಯೋತ್ಪಾದನೆ ವಿರುದ್ಧ ನಮ್ಮ ಇಚ್ಛಾಶಕ್ತಿಯನ್ನು ತೋರಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಫೆ.26, 2019ರಂದು ಭಾರತೀಯ ವಾಯು ಪಡೆಯ ಫೈಟರ್ ಜೆಟ್ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ, ಪಾಕಿಸ್ತಾನದ ಪ್ರದೇಶದೊಳಗೆ ನುಗ್ಗಿ ಬಾಲಕೋಟ್ ಭಯೋತ್ಪಾದಕ ಲಾಂಚ್ ಪ್ಯಾಡ್‍ಗಳನ್ನು ಧ್ವಂಸಗೊಳಿಸಿ ಇಂದಿಗೆ ಎರಡು ವರ್ಷವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಕೇಂದ್ರ ಮೀಸಲು ಪಡೆಯ 40 ಸಿಬ್ಬಂದಿ ಮೃತಪಟ್ಟ ಕೆಲವೇ ದಿನಗಳಲ್ಲಿ ಬಾಲಕೋಟ್ ಮೇಲೆ ದಾಳಿ ನಡೆಸಿ ಭಯೋತ್ಪಾದಕ ನೆಲೆಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಯಿತು.