Friday, 1st November 2024

ವಂಚಕರಿಗೆ ಪೊಲೀಸರೇ ಟಾರ್ಗೆಟ್‌ ?

ದೊಡ್ಡವರ ಹೆಸರಲ್ಲಿ ಮೆಸೇಜ್ ಬಂದರೆ ಹುಷಾರಾಗಿರಿ

ವಿಶೇಷ ವರದಿ: ಮಂಜುನಾಥ.ಕೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆ ನಿರ್ವಹಿಸಿ ನಿವೃತ್ತಿ ಹೊಂದಿದ ಇಬ್ಬರು ಪೊಲೀಸ್
ಅಧಿಕಾರಿಗಳ ಖಾತೆಗೆ ಹ್ಯಾಕರ್‌ಗಳು ಕನ್ನ ಹಾಕಿ ಲಕ್ಷಾಂತರ ರು. ದೋಚಿರುವ ಪ್ರಕರಣ ನಡೆದಿದ್ದು, ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಹೀಗಾದರೆ ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡತೊಡಗಿದೆ.

ನಿವೃತ್ತ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಅಜಯ್ ಕುಮಾರ್‌ಸಿಂಗ್ ಅವರ ಬ್ಯಾಂಕ್ ಖಾತೆಯನ್ನು ಹ್ಯಾಕರ್‌ಗಳು
ಹ್ಯಾಕ್ ಮಾಡಿ 2.13 ಲಕ್ಷ ರು.ಗಳನ್ನು ದೋಚಿದ್ದಾರೆ. ಮತ್ತೊಂದೆಡೆ ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರಿ ಬಿದರಿ ಇ-ಮೇಲ್ ಐಡಿ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಅವರ ಸ್ನೇಹಿತರಿಗೆ ಇ-ಮೇಲ್ ಮೂಲಕ ಹಣ ವಂಚಿಸಿರುವ ಪ್ರಕರಣ ಇತ್ತೀಚೆಗೆ
ನಡೆದಿದೆ.

ಪ್ರಕರಣ-1: ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್ ಅವರ ಬ್ಯಾಂಕ್ ಖಾತೆಯನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿ 2.13 ಲಕ್ಷ ರು.ಗಳನ್ನು ದೋಚಿದ್ದಾರೆ. ಈ ಸಂಬಂಧ ಅಜಯ್‌ಕುಮಾರ್ ಸಿಂಗ್, ನಗರದ ಪೂರ್ವ ವಿಭಾಗದ ಸಿಇಎನ್ ಠಾಣೆಗೆ ಕಳೆದ ವಾರ
ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ರಿಚರ್ಡ್ ಟೌನ್‌ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ಖಾತೆ ಹೊಂದಿರುವ ಅವರ ಮೊಬೈಲ್‌ಗೆ 50ಕ್ಕೂ ಹೆಚ್ಚು ಒಟಿಪಿ ಬಂದಿತ್ತು. ಬ್ಯಾಂಕ್  ಅಕೌಂಟ್ ಹ್ಯಾಕ್ ಮಾಡಿಕೊಂಡು ಹಂತ-ಹಂತವಾಗಿ 2.13 ಲಕ್ಷ ರು.ನ್ನು ಸೈಬರ್ ಕಳ್ಳರು ಲಪಟಾಯಿಸಿದ್ದರು.

ಈ ಸಂಬಂಧ ಹಣ ಕಡಿತಗೊಂಡ ಬಗ್ಗೆ ಬ್ಯಾಂಕ್ ನಿಂದ ಆಲರ್ಟ್ ಮೆಸೇಜ್ ಬಂದಿತ್ತು. ಈ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ ಖಾತೆಯಿಂದ ಸೈಬರ್ ಖದೀಮರು ಹಣ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಜಯ್ ಕುಮಾರ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ 2 (ಶಂಕರಿ ಬಿದರಿ ಇ-ಮೇಲ್ ಐಡಿ ಹ್ಯಾಕ್): ನಿವೃತ್ತ ಡಿಜಿ ಮತ್ತು ಐಜಿಪಿ ಶಂಕರಿ ಬಿದರಿ ಇ-ಮೇಲ್ ಐಡಿ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ಅವರ ಸ್ನೇಹಿತರಿಗೆ ಇ-ಮೇಲ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟು ಹಣ ಪಡೆದು ವಂಚಿಸಿರುವ
ಪ್ರಕರಣ ಬೆಳಕಿಗೆ ಬಂದಿದೆ. ಇ-ಮೇಲ್ ಸಂದೇಶದ ಜತೆಗೆ ಖಾಸಗಿ ಬ್ಯಾಂಕ್ ಅಕೌಂಟ್ ವಿವರ ಕಳಿಸಿದ್ದಾರೆ. ಶಂಕರ್ ಬಿದರಿ ಯವರೇ ಇ-ಮೇಲ್ ಮಾಡಿದ್ದಾರೆಂದು ಭಾವಿಸಿ, ಅವರ ಸ್ನೇಹಿತರೊಬ್ಬರು ಆ ಬ್ಯಾಂಕ್ ಖಾತೆಗೆ 25 ಸಾವಿರ ಹಣ ಹಾಕಿದ್ದಾರೆ. ಸ್ನೇಹಿತರು 25 ಸಾವಿರ ಹಣ ಜಮೆ ಮಾಡಿರುವ ವಿಚಾರ ಗಮನಕ್ಕೆ ಬಂದ ಕೂಡಲೇ ಇ-ಮೇಲ್ ಐಡಿ ಹ್ಯಾಕ್ ಆಗಿರುವುದು ಗೊತ್ತಾಗಿದ್ದು, ಶಂಕರ್ ಬಿದರಿಯವರು ಫೆ.26ರಂದು ಆಗ್ನೇಯ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇ-ಮೇಲ್ ಐಡಿ ಹ್ಯಾಕ್ ಮಾಡಿದವರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಶಂಕರ್ ಬಿದರಿ ಕೋರಿದ್ದಾರೆ.

ಜನಸಾಮಾನ್ಯರ ಗತಿಯೇನು?: ಹ್ಯಾಕರ‍್ಸ್‌ ನಿವೃತ್ತ ಪೊಲೀಸ್ ಅಧಿಕಾರಿಗಳ ಖಾತೆಗೆ ಯಾವುದೇ ಭಯವಿಲ್ಲದೇ ಹ್ಯಾಕ್ ಮಾಡಿ ವಂಚನೆ ಮಾಡಿದ್ದಾರೆ. ಪೊಲೀಸರನ್ನೇ ಬಿಡದೆ ವಂಚಿಸಿರುವ ಖದೀಮರು, ಇನ್ನು ಜನಸಾಮಾನ್ಯರನ್ನು ಯಾವ ರೀತಿ ವಂಚಿಸುವುದಿಲ್ಲ ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ ಪೊಲೀಸ್ ಇಲಾಖೆ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಹೆಡೆಮುರಿ ಕಟ್ಟಬೇಕಿದೆ. ಇಲ್ಲವಾದರೆ ಹ್ಯಾಕರ್‌ಗಳು ಮತ್ತಷ್ಟು ಮಂದಿಯ ಖಾತೆಗೆ ರಾಜಾರೋಷವಾಗಿ ಕನ್ನ ಹಾಕಿ ವಂಚನೆ
ಮಾಡಲಿದ್ದಾರೆ.

ಹಿಂದೆ ಪ್ರವೀಣ್ ಸೂದ್ ಹೆಸರಿನಲ್ಲಿಯೂ ವಂಚನೆ ಈ ಹಿಂದೆ ಹಲವು ಪೊಲೀಸ್ ಅಧಿಕಾರಿಗಳ ಹೆರಿನಲ್ಲಿ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆ ತೆರೆದು ಖದೀಮರು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವಂಚಿಸಿದ್ದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಸೇರಿ ಹಲವು ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಂಚಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಿಐಡಿ ಸೈಬರ್ ಕ್ರೈಂ ಪೊಲೀಸರು, ಕಳೆದ ವರ್ಷ ಅಕ್ಟೋಬರ್ 21 ರಂದು ರಾಜಸ್ಥಾನ ಮೂಲದ ಅನ್ಸರ್, ಬಲ್ವಿಂದರ್ ಸಿಂಗ್, ಸದ್ದಾಂ, ಸೈನಿ ಎಂಬ ಆರೋಪಿಗಳನ್ನು ಬಂಧಿಸಿದ್ದರು.

ನಾವೇನು ಮಾಡಬೇಕು?
ಮೇಲ್ ಐಡಿ, ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಿಗೆ ಸ್ಟ್ರಾಂಗ್ ಆದ ಪಾಸ್‌ವರ್ಡ್ ಇಟ್ಟುಕೊಳ್ಳಬೇಕು.
ಡೇಟ್ ಆಫ್ ಬರ್ತ್ ಸೇರಿ ಸುಲಭದ ಪಾಸ್‌ವರ್ಡ್ ಇಡಬಾರದು.
ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಲಾಕ್ ಮಾಡಬೇಕು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು
ಅಪರಿಚಿತರ ಸ್ನೇಹದ ರಿಕ್ವೆಸ್ಟ್‌ ಸ್ವೀಕರಿಸುವ ಮುನ್ನ ಎಚ್ಚರಿಕೆ ವಹಿಸಿ.
ಗೂಗಲ್‌ನಲ್ಲಿ have i been pwned ಎಂದು ಟೈಪ್ ಮಾಡಿ ಅಲ್ಲಿ ನಿಮ್ಮ ಮೇಲ್ ಐಡಿ ಹಾಕಿದರೆ ನಿಮ್ಮ ಮೇಲ್ ಐಡಿ ಹ್ಯಾಕ್ ಆಗಿದ್ದರೆ ಅಥವಾ ಹ್ಯಾಕ್ ಮಾಡಲು ಯತ್ನಿಸಿದ್ದರೆ ತೋರಿಸುತ್ತದೆ.

ಒಂದು ವೇಳೆ ಹ್ಯಾಕ್ ಆಗಿದ್ದರೆ, ಕೂಡಲೇ ಮೇಲ್ ಐಡಿ ಪಾರ್ಸ್‌ವರ್ಡ್ ಬದಲಿಸಿ ಸ್ಟ್ರಾಂಗ್ ಪಾಸ್ ವರ್ಡ್ ಇಟ್ಟುಕೊಳ್ಳಬೇಕು.

***

ಶಂಕರ್ ಬಿದರಿ ಅವರ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ತೆರೆದು ಸ್ನೇಹಿತರಿಗೆ ಮೇಲ್ ಮಾಡಿ ಹಣ ಪಡೆದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ. ಯಾವ ಖಾತೆಗೆ ಹಣ ಹೋಗಿದೆ ಎಂಬುದನ್ನು ಪತ್ತೆಹಚ್ಚಿ 25 ಸಾವಿರ ಹಣವನ್ನು ಸೀಜ್ ಮಾಡಿಸಿದ್ದೇವೆ. ಹಣ ಕಳೆದುಕೊಂಡವರ ಖಾತೆಗೆ ಹಣ ವಾಪಸ್ ಹೋಗುವಂತೆ ಕ್ರಮ ಕೈಗೊಳ್ಳಲಾಗಿದೆ.
– ಎಲ್.ವೈ.ರಾಜೇಶ್, ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಇನ್ಸ್’‌ ಪೆಕ್ಟರ್