Saturday, 23rd November 2024

ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಜೈಲು ಶಿಕ್ಷೆ

ಪ್ಯಾರಿಸ್: ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರು ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿ, ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರಿಗೆ ಲಂಚ ನೀಡಿಕೆ, ಕಾನೂನಿನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಶಿಕ್ಷೆಗೆ ಗುರಿಯಾಗಿದ್ದಾರೆ.

ಮೂರು ವರ್ಷ ಶಿಕ್ಷೆಯಲ್ಲಿ ಎರಡು ವರ್ಷದ ಶಿಕ್ಷೆ ಅಮಾನತು ಮಾಡಲಾಗಿದೆ. ಹೀಗಾಗಿ ಒಂದು ವರ್ಷದ ಅವಧಿಗೆ ಮಾತ್ರ ಸರ್ಕೋಜಿ ಜೈಲಿಗೆ ಹೋಗಬೇಕಾಗುತ್ತದೆ. 2007 ರಿಂದ 2012ರವರೆಗೆ ಫ್ರಾನ್ಸ್ ಅಧ್ಯಕ್ಷರಾಗಿದ್ದ ಅವರು ತಾವು ತಪ್ಪು ಎಸಗಿಲ್ಲ ಎಂದು ಆರೋಪ ಅಲ್ಲಗಳೆದಿದ್ದಾರೆ.

ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರ್ಕೋಜಿ ಅವರಿಗೆ ಹತ್ತು ದಿನಗಳ ಅವಕಾಶ ನೀಡಲಾಗಿದೆ. ಜಾಕ್ವೆಸ್ ಚಿರಾಕ್ ಅವರು ಭ್ರಷ್ಟಾಚಾರದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ಫ್ರಾನ್ಸ್ ನಲ್ಲಿ ಶಿಕ್ಷೆಗೆ ಒಳಗಾಗುತ್ತಿರುವ ಎರಡನೇ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೂ ಒಳಗಾಗಿದ್ದಾರೆ.