ಹುಬ್ಬಳ್ಳಿ: ಧಾರವಾಡ ವಲಯ ವ್ಯಾಪ್ತಿಯ ಮಹಿಳಾ ಕ್ರಿಕೆಟಿಗರಿಗೆ ಸ್ಥಳೀಯವಾಗಿತರಬೇತಿ ಒದಗಿಸಲು ಮುಂದಿನ ವರ್ಷ ಅಕಾಡೆಮಿ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸಂತೋಷ ಮೆನನ್ ತಿಳಿಸಿದರು.
ಬುಧವಾರ ಕೆಎಸ್ಸಿಎ ಕ್ರೀಡಾಂಗಣದಲ್ಲಿ ‘ಆಟಗಾರ್ತಿಯರು ಅಭ್ಯಾಸ ಹಾಗೂ ಪಂದ್ಯಗಳನ್ನಾಡಲು ಬೆಂಗಳೂರನ್ನೇ ನೆಚ್ಚಿಕೊಳ್ಳ ಬೇಕಾಗಿದೆಯಲ್ಲ’ ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.
2016ರಲ್ಲಿ ಬೆಂಗಳೂರು ಸಮೀಪದ ಆಲೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಏಕಕಾಲಕ್ಕೆ ಕ್ರೀಡಾಂಗಣಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಮೂರೂ ಕಡೆ ಮೈದಾನ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆದರೆ ಹುಬ್ಬಳ್ಳಿ ಮತ್ತು ಬೆಳಗಾವಿ ಯಲ್ಲಿ ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ತಲಾ ₹25 ಕೋಟಿ ಮೀಸಲಿಡಲಾಗಿದ್ದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸ ಲಾಗುವುದು’ ಎಂದು ಭರವಸೆ ನೀಡಿದರು.
ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಪಂದ್ಯಗಳನ್ನು ಈ ವರ್ಷ ನಡೆಸಲಾಗುವುದು ಎಂದು ಹೇಳಿದರು.
ಕೋವಿಡ್ನಿಂದಾಗಿ ವಾರ್ಷಿಕ ಕ್ರಿಕೆಟ್ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಿದೆ. ಬಿಸಿಸಿಐ ವರ್ಷದ ವೇಳಾಪಟ್ಟಿ ನಿರ್ಧರಿಸಿಲ್ಲ. ವೇಳಾಪಟ್ಟಿ ಬಿಡುಗಡೆಯಾದ ಬಳಿಕ ದೇಶಿ ಟೂರ್ನಿಗಳು ಇಲ್ಲದ ಸಮಯದಲ್ಲಿ ಕೆಪಿಎಲ್ ನಡೆಸಲಾಗುವುದು ಎಂದರು.
ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ಜೆ. ಅಭಿರಾಮ್, ಆಡಳಿತ ಮಂಡಳಿ ಸದಸ್ಯ ತಿಲಕ್ ನಾಯ್ಡು, ಧಾರವಾಡ ವಲಯದ ನಿಮಂತ್ರಕ ಅವಿನಾಶ ಪೋತದಾರ, ಅಧ್ಯಕ್ಷ ವೀರಣ್ಣ ಸವಡಿ, ಧಾರವಾಡ ವಲಯದ ಕ್ರಿಕೆಟ್ ಟೂರ್ನಿ ಸಮಿತಿ ಮುಖ್ಯಸ್ಥ ಅಲ್ತಾಫ್ ಕಿತ್ತೂರು ಇದ್ದರು.