ನವದೆಹಲಿ/ ಆಗ್ರಾ: ಬಾಂಬ್ ಬೆದರಿಕೆ ಕರೆ ಬಂದ ಬೆನ್ನಲ್ಲೇ ತಾಜ್ ಮಹಲ್ ಆವರಣದಲ್ಲಿದ್ದ ಸುಮಾರು ಸಾವಿರ ಪ್ರವಾಸಿಗರನ್ನು ಸ್ಥಳದಿಂದ ಕಳುಹಿಸಿ, ಬಾಂಬ್ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ.
ಅನಾಮಿಕ ವ್ಯಕ್ತಿಯೊಬ್ಬ ಉತ್ತರ ಪ್ರದೇಶ ಪೊಲೀಸರ 112 ತುರ್ತು ಸ್ಪಂದಿಸುವ ಸಂಖ್ಯೆಗೆ ಕರೆ ಮಾಡಿ, ಭಾರತೀಯ ಪುರಾತತ್ವ ಇಲಾಖೆ ನಿರ್ವಹಣೆಯಲ್ಲಿರುವ ಆಗ್ರಾದ ತಾಜ್ ಮಹಲ್ ಒಳಗೆ ಬಾಂಬ್ ಇರುವುದಾಗಿ ಮಾಹಿತಿ ನೀಡಿದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಸಿಬ್ಬಂದಿ ತಾಜ್ ಮಹಲ್ ಭದ್ರತೆ ವಹಿಸಿದ್ದು, ಪೊಲೀಸರು ಕೂಡಲೇ ಸಿಐಎಸ್ಎಫ್ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ.
‘ಬಹುತೇಕ ಪರಿಶೀಲನೆ ಪೂರ್ಣಗೊಂಡಿದ್ದು, ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ’ ಎಂದು ಸಿಐಎಸ್ಎಫ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್ನಿಂದ ಸುಳ್ಳು ಬೆದರಿಕೆ ಕರೆ ಬಂದಿರುವುದಾಗಿ ಪತ್ತೆ ಮಾಡಲಾಗಿದೆ.