Friday, 22nd November 2024

ಬ್ಯಾಟಿಂಗ್‌ ಕುಸಿತ: ಪ್ರವಾಸಿಗರಿಗೆ ಬಲ ನೀಡದ ಸ್ಟೋಕ್ಸ್‌ ಫಿಫ್ಟಿ

ಅಹಮದಾಬಾದ್: ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸಮಯೋಚಿತ ಅರ್ಧಶತಕದ ಹೊರತಾ ಗಿಯೂ ಇಂಗ್ಲೆಂಡ್ ತಂಡವು ಭಾರತ ವಿರುದ್ಧ ಬ್ಯಾಟಿಂಗ್ ಕುಸಿತ ಅನುಭವಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, 15 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಡಾಮಿನಿಕ್ ಸಿಬ್ಲಿ (2) ಹಾಗೂ ಜ್ಯಾಕ್ ಕ್ರಾಲಿ (2) ಅವರನ್ನು ಕಳೆದ ಪಂದ್ಯದ ಹೀರೊ ಅಕ್ಷರ್ ಪಟೇಲ್ ಪೆವಿಲಿಯನ್‌ಗೆ ಅಟ್ಟಿದರು.

ಅಪಾಯಕಾರಿ ಜೋ ರೂಟ್ (5) ಅವರನ್ನು ಮೊಹಮ್ಮದ್ ಸಿರಾಜ್ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಈ ನಡುವೆ ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟದಲ್ಲಿ ಭಾಗಿಯಾದರು. ಭೋಜನ ವಿರಾಮದ ಬೆನ್ನಲ್ಲೇ ಜಾನಿ ಬೈರ್‌ಸ್ಟೋ ಅವರನ್ನು (28) ಸಿರಾಜ್ ಹೊರದಬ್ಬಿದರು.

ಸ್ಟೋಕ್ಸ್, ಸಮಯೋಚಿತ ಅರ್ಧಶತಕ ಬಾರಿಸಿದರು. ಅರ್ಧಶತಕದ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಸ್ಟೋಕ್ಸ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಈ ವಿಕೆಟ್ ವಾಷಿಂಗ್ಟನ್ ಸುಂದರ್ ಪಾಲಾಯಿತು.

ಒಲ್ಲಿ ಪಾಪ್ (29) ರವಿಚಂದ್ರನ್‌ ಅಶ್ವಿನ್‌ಗೆ ವಿಕೆಟ್‌ ಒಪ್ಪಿಸಿದರು. ಡ್ಯಾನಿಯಲ್ ಲಾರೆನ್ಸ್ 35 ರನ್‌ ಗಳಸಿ ಆಟ ಮುಂದುವರಿಸಿ ದ್ದಾರೆ. ಭಾರತದ ಪರ ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಹಾಗೂ ಅಶ್ವಿನ್‌ ತಲಾ ಎರಡು ವಿಕೆಟ್‌ ಕಿತ್ತರು. ಸುಂದರ್ ಒಂದು ವಿಕೆಟ್ ಪಡೆದರು.