Thursday, 19th September 2024

ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ಜಿದ್ದಾಜಿದ್ದಿನ ಹೋರಾಟ: ಪಂತ್ ಅರ್ಧಶತಕ

ಅಹಮದಾಬಾದ್: ಇಂಗ್ಲೆಂಡ್‌ನ ಪ್ರಥಮ ಇನ್ನಿಂಗ್ಸ್ 205 ರನ್‌ಗಳಿಗೆ ಉತ್ತರವಾಗಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, 75 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಕೂಡ ಕಳಪೆ ಪ್ರದರ್ಶನ ನೀಡಿದರು. ಇನ್ನಿಂಗ್ಸ್ ಮುನ್ನಡೆಗಾಗಿ ನಾಲ್ಕು ವಿಕೆಟ್ ಬಾಕಿ ಉಳಿದಿರುವಂತೆಯೇ 52 ರನ್ ಗಳಿಸಬೇಕಾದ ಅಗತ್ಯವಿದೆ.

ಭಾರತ ಎರಡನೇ ದಿನದಾಟದಲ್ಲೂ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ್ದು, ಮುಳುವಾಗಿ ಪರಿಣಮಿಸಿತ್ತು. 66 ಎಸೆತಗಳಲ್ಲಿ 17 ರನ್ ಗಳಿಸಿದ್ದ (1 ಬೌಂಡರಿ) ಚೇತೇಶ್ವರ್ ಪೂಜಾರ, ಸ್ಪಿನ್ನರ್ ಜ್ಯಾಕ್ ಲೀಚ್ ದಾಳಿಯಲ್ಲಿ ಔಟಾದರು. ಬಳಿಕ ಕ್ರೀಸಿಗಿಳಿದ ನಾಯಕ ವಿರಾಟ್ ಕೊಹ್ಲಿ (0) ಖಾತೆ ತೆರೆಯುವಲ್ಲಿ ವಿಫಲವಾದರು. 41 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.

ರೋಹಿತ್ ಶರ್ಮಾ ಆಸರೆಯಾದರು. ಇವರಿಗೆ ಉಪ ನಾಯಕ ಅಜಿಂಕ್ಯ ರಹಾನೆ ಸಾಥ್ ನೀಡಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ನೀಡಿದರು. ಆದರೆ ಭೋಜನ ವಿರಾಮಕ್ಕೆ ರಹಾನೆ ಹೊರದಬ್ಬಿದ ಜೇಮ್ಸ್ ಮಗದೊಂದು ಆಘಾತ ನೀಡಿದರು. ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ ಅವರನ್ನು ಬೆನ್ ಸ್ಟೋಕ್ಸ್ ಪೆವಿಲಿಯನ್‌ಗೆ ಅಟ್ಟಿದರು. ಕೇವಲ ಒಂದು ರನ್ ಅಂತರದಿಂದ ಅರ್ಧಶತಕ ಮಿಸ್ ಮಾಡಿಕೊಂಡರು.

ವಿಕೆಟ್‌ ಕೀಪರ್‌ ರಿಷಭ್ ಪಂತ್ ಹೋರಾಟ ಮುಂದುವರಿಸಿದ್ದಾರೆ. 82 ಎಸೆತಗಳನ್ನು ಎದುರಿಸಿರುವ ಪಂತ್ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅರ್ಧ ಶತಕ (55)ಹೊಡೆದರು. ಇವರಿಗೆ ವಾಷಿಂಗ್ಟನ್ ಸುಂದರ್ (24) ಸಾಥ್ ನೀಡುತ್ತಿದ್ದಾರೆ.

ಇಂಗ್ಲೆಂಡ್ ತಂಡದ ಪರ ಆಯಂಡರ್ಸನ್, ಸ್ಟೋಕ್ಸ್ ಹಾಗೂ ಜ್ಯಾಕ್ ಲೀಚ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.

Leave a Reply

Your email address will not be published. Required fields are marked *