Friday, 22nd November 2024

ಕರೋನಾ ’ಸಂಕಷ್ಟ’ದ ಬದಲು ’ಸಂತಸದ ಬಜೆಟ್‌’

ಸಿಎಂಗೆ ಧೈರ್ಯ ತುಂಬಿದ ವಾಣಿಜ್ಯ ತೆರಿಗೆ, ರಾಜ್ಯ ಬೊಕ್ಕಸ ತುಂಬಿಸಿದ ಪೆಟ್ರೋಲ್, ಡೀಸೆಲ್ ತೆರಿಗೆ

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು: ರಾಜ್ಯ ಸರಕಾರ ಕರೋನಾ ಸಂಕಷ್ಟದ ಬಜೆಟ್ ಗಿಂತ ಚುನಾವಣೆ ಮಾದರಿಯ ಸಂತೋಷದ ಬಜೆಟ್
ಮಂಡಿಸಲು ಸಿದ್ಧತೆ ನಡೆಸಿದೆ.

ಮಹಾಮಾರಿ ಕರೋನಾ ಮತ್ತು ಲಾಕ್ ಡೌನ್ ಸಂಕಷ್ಟದ ಪರಿಣಾಮ ಈ ಬಾರಿ ಸಂಕಷ್ಟದ ಬಜೆಟ್ ಮಂಡಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸುತ್ತಿರುವವರಿಗೆ ಸರಕಾರ ಶಾಕ್ ನೀಡುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟದಲ್ಲೂ ಈ ಬಾರಿ ಹೆಚ್ಚಿನ ಗಾತ್ರದ
ಜನಪ್ರಿಯ ಬಜೆಟ್ ಮಂಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಂತಿಮ ಕಸ ರತ್ತು ನಡೆಸಿದ್ದಾರೆ. ಯಡಿಯೂರಪ್ಪ

ಅವರ ಈ ಪ್ರಯತ್ನಕ್ಕೆ ಪೂರಕವಾಗಿದ ಅಂಶವೆಂದರೆ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಆಗಿರುವ ಹೆಚ್ಚಳ. ಸರಕಾರದ ಬಜೆಟ್ ರಚನೆಗೆ ಮೂಲ ಆಧಾರವಾಗಿರುವ ವಾಣಿಜ್ಯ ತೆರಿಗೆ ಸಾಧನೆ ( ಸ್ವಂತ ತೆರಿಗೆ ) ಈ ಬಾರಿ ಲಾಕ್ ಡೌನ್ ಮತ್ತು ಕರೋನಾ
ಸಂಕಷ್ಟದಲ್ಲೂ ಯಡಿಯೂರಪ್ಪ ಅವರ ಕೈ ಹಿಡಿದೆ. ಅದರಲ್ಲೂ ಪೆಟ್ರೋಲ್, ಡಿಸೆಲ್ ದರ ಹೆಚ್ಚಾಗಿದ್ದು, ಇದು ಬಜೆಟ್ ರೂಪಿಸಲು ವರದಾನವಾಗಿದೆ. ಇದನ್ನೇ ನಂಬಿ ಯಡಿಯೂರಪ್ಪ ಅವರು ಅನೇಕ ಜನಪ್ರಿಯ ಯೋಜನೆಗಳನ್ನು ರೂಪಿಸುವ ಧೈರ್ಯ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖಜಾನೆಗೆ ಕಾಣಿಕೆ ನೀಡಿದ್ದು ಯಾರು ?
ಆರ್ಥಿಕ ಸಂಕಷ್ಟ ಹಾಗೂ ಕೋವಿಡ್ ಪರಿಣಾಮದಿಂದ ಬರಿದಾಗಿದ್ದ ಬೊಕ್ಕಸಕ್ಕೆ ಕಾಣಿಕೆ ನೀಡಿದ್ದು ವ್ಯಾಪಾರಿಗಳು ಮತ್ತು ಗ್ರಾಹಕರು. ಅಂದರೆ ಇವರಿಂದ ಸಂಗ್ರಹವಾಗುವ ವಾಣಿಜ್ಯ ತೆರಿಗೆ. ಕಳೆದ ವರ್ಷ ಸೆಪ್ಟೆಂಬರ್ ವರೆಗೂ ಜರ್ಜರಿತವಾಗಿದ್ದ ವ್ಯಾಪಾರಿಗಳು ಅಕ್ಟೋಬರ್ ನಂತರದಲ್ಲಿ ಸಕ್ರಿಯವಾಗಿದ್ದು ಇದರಿಂದ ರಾಜ್ಯದಲ್ಲಿ ಜೆಎಸ್ ಟಿ ಸಂಗ್ರಹದಲ್ಲಿ ಉತ್ತಮ ಸಾಧನೆ ಯಾಗಿದೆ. ಜೆಎಸ್ ಟಿ ಯಲ್ಲಿ (2019-20) ಕಳೆದ ವರ್ಷ 56.927ಕೋಟಿ ರು. ಸಂಗ್ರಹವಾಗಿತ್ತು. ನಂತರದ 2020-21ರಲ್ಲಿ (ಕೋವಿಡ್ ವರ್ಷ) 57,147ಕೋಟಿ ರು.ಸಂಗ್ರಹವಾಗಿದೆ. ಅಂದರೆ ಈ ವರ್ಷ ಕಳೆದ ವರ್ಷಕ್ಕಿಂತ 180ಕೋಟಿ ರು. ಹೆಚ್ಚಾಗಿಯೇ ಸಂಗ್ರಹ ವಾಗಿದೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹ ಕೂಡ 14,164ಕೋಟಿ ಲಭಿಸಿದೆ. ಹಾಗೆಯೇ ವೃತ್ತಿ ತೆರಿಗೆ ಕೂಡ 860ಕೋಟಿ ರು.ಸಂಗ್ರಹವಾಗಿದ್ದು, ಇದರಲ್ಲಿ ಉತ್ತಮ ಸಾಧನೆಯಾಗಿದೆ.

ಒಟ್ಟಾರೆ ರಾಜ್ಯದ ಸ್ವಂತ ತೆರಿಗೆಯಾದ ವಾಣಿಜ್ಯ ತೆರಿಗೆಯಿಂದ ಸುಮಾರು 72,172ಕೋಟಿ ರು. ದೊರೆತಿದೆ. ಅಂದರೆ 2019-20ರಲ್ಲಿ 74,000ಕೋಟಿ ವಾಣಿಜ್ಯ ತೆರಿಗೆ ಸಂಗ್ರಹವಾಗಿದ್ದು, ಈ ವರ್ಷ (2020-21 ) 72,200ಕೋಟಿ ರು. ಸಂಗ್ರಹವಾಗಿದೆ. ಮಾರ್ಚ್ ಅಂತ್ಯದ ವರೆಗೂ ಸಂಗ್ರಹದ ಪ್ರಮಾಣ ಸುಮಾರು 73,000ಕೋಟಿ ವರೆಗೂ ಏರಿಕೆಯಾಗಲಿದ್ದು, ಇದು ಕರೋನಾ ಕಾಲದ ಉತ್ತಮ ಸಾಧನೆಯಾಗಿದ್ದು, ಇದು ಜನಪ್ರಿಯ ಬಜೆಟ್ ರೂಪಿಸಲು ಪೂರಕವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಬೊಕ್ಕಸ ತುಂಬಿಸಿದ ಪೆಟ್ರೋಲ್
ಈ ಮಧ್ಯೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ನಿರಂತರವಾಗಿ ಹೆಚ್ಚಾಗಿದ್ದು ರಾಜ್ಯದ ಬೊಕ್ಕಸ ಭರ್ತಿಗೆ ಅನುಕೂಲ ವಾಗಿದೆ. ರಾಜ್ಯಕ್ಕೆ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ ಶೇ.35ರಷ್ಟು ತೆರಿಗೆ ಲಭಿಸಲಿದ್ದು, ಡೀಸೆಲ್ ಮೇಲೆ ಶೇ.24ರಷ್ಟು ತೆರಿಗೆ ಸಿಗಲಿದೆ. 2020 ಅವಧಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಇದರಿಂದ ಸಾಮಾನ್ಯರ ಸುಲಿಗೆಯಾಗಿದ್ದರೂ ಸರಕಾರಕ್ಕೆ ಮಾತ್ರ ಲಾಭವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಿಂದ ಕಳೆದ ವರ್ಷ (ಕೋವಿಡ್ ಗೂ ಮುನ್ನ ) 15,981ಕೋಟಿ ರು. ಸಂಗ್ರಹವಾಗಿತ್ತು. ನಂತರದ ವರ್ಷದಲ್ಲಿ 14,164ಕೋಟಿ ರು. ಸಂಗ್ರಹವಾಗಿದೆ. ಈ ವರ್ಷದ ಮಾರ್ಚ್ 31ರ ವರೆಗೂ ಸುಮಾರು 15,000 ಕೋಟಿ ರು.ತನಕ ವಸೂಲಿಯಾಗುವ ಸಾಧ್ಯತೆ ಇದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಹೆಚ್ಚು ಧೈರ್ಯ ತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

***

ಕೋವಿಡ್ ನಡುವೆಯೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿ ಸಾಕಷ್ಟು ಪ್ರಗತಿಯಾಗುತ್ತಿದ್ದು, ಇದರಿಂದ ಆಶಾದಾಯಕ ರೀತಿಯಲ್ಲಿ ಬಜೆಟ್ ರೂಪಿಸುವುದಕ್ಕೆ ಸಾಧ್ಯವಿದೆ.

-ಬಿ.ಟಿ.ಮನೋಹರ್ ತೆರಿಗೆ ತಜ್ಞರು

ಸರಕಾರ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸಿ ಜನರಿಗೆ ತೊಂದರೆ ಮಾಡಿದೆ. ಆದರೆ ಈಗ ಎಲ್ಲದಕ್ಕೂ ಕೋವಿಡ್
ಕಾರಣ ಹೇಳುತ್ತಿದೆ. ಆರ್ಥಿಕ ನಿರ್ವಹಣೆ ಸರಿಯಾಗಿದ್ದರೆ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಬಹುದಿತ್ತು.
-ಬಸವರಾಜ ರಾಯರೆಡ್ಡಿ ಕಾಂಗ್ರೆಸ್ ನ ಹಿರಿಯ ನಾಯಕ