ಕೋಲ್ಕತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಭಾನುವಾರ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿರುವ ಈ ಸಂದರ್ಭದಲ್ಲೇ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬೆಲೆ ಏರಿಕೆ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಪ್ರಧಾನಿ ಮೋದಿ ಕೋಲ್ಕತಾದಲ್ಲಿ ನಡೆಸುತ್ತಿರುವ ಮೊದಲ ರ‍್ಯಾಲಿ ಇದಾಗಿದೆ. ಬ್ರಿಗೇಡ್ ಪರೇಡ್ ಗ್ರೌಂಡ್ಸ್‌ನಲ್ಲಿ ಮೋದಿ ರ‍್ಯಾಲಿ ನಡೆಸಲು ಉದ್ದೇಶಿಸಿದ್ದಾರೆ. ಮಮತಾ ಬ್ಯಾನರ್ಜಿ ಎಲ್‌ಪಿಜಿ ಬೆಲೆ ಏರಿಕೆ ವಿರುದ್ಧ ಸಿಲಿಗುರಿಯಲ್ಲಿ ಪಾದಯಾತ್ರೆಯಲ್ಲಿ ಸಾಗಿ ಬೃಹತ್ ರ‍್ಯಾಲಿ ನಡೆಸಲು ಮುಂದಾಗಿದ್ದಾರೆ. ಈ ರ‍್ಯಾಲಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳಲಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ, ಬೆಲೆ ಏರಿಕೆಯನ್ನು ವಿರೋಧಿಸುವ ಉದ್ದೇಶದಿಂದ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ರ‍್ಯಾಲಿಯಲ್ಲಿ ಪ್ರದರ್ಶಿಸಲಾಗುವುದು ಎಂದು ಮಮತಾ ಹೇಳಿದ್ದಾರೆ.
ಈ ಮೊದಲು ಮಮತಾ ಬ್ಯಾನರ್ಜಿ ಬೈಕ್ ರ‍್ಯಾಲಿ ನಡೆಸಿ, ಇಂಧನ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಿದ್ದರು. ಈ ಬಾರಿ ಎಲ್‌ಪಿಜಿ ಬೆಲೆ ಏರಿಕೆ ವಿರೋಧಿಸಿ ಪಾದಯಾತ್ರೆ ನಡೆಸುವ ಮೂಲಕ ಪ್ರಧಾನಿ ಕೋಲ್ಕತಾ ಭೇಟಿ ನೀಡುತ್ತಿರುವ ದಿನವೇ ಪ್ರತಿ ಭಟನೆ ಕೈಗೊಳ್ಳುತ್ತಿದ್ದಾರೆ.