ವಾರದ ತಾರೆ: ಡಾ.ಸ್ವಾತಿ ಮೋಹನ್
ವಿಶೇಷ ಲೇಖನ: ವಿರಾಜ್ ಕೆ.ಅಣಜಿ
2020 ಜುಲೈ 30ರಂದು ಭೂಮಿಯಿಂದ ಹಾರಿದ್ದ Perseverance Rover, ಸತತ 203 ದಿನಗಳ ಸುದೀರ್ಘ ಪ್ರಯಾಣ ಮಾಡಿ, ಮಂಗಳ ಗ್ರಹಕ್ಕೆ ಯಶಸ್ವಿಯಾಗಿ ಹೋಗಿ ಇಳಿದಿದೆ. ಅದನ್ನು ಸುಲಲಿತವಾಗಿ ಲ್ಯಾಂಡಿಂಗ್ ಮಾಡಿಸಿದ್ದೇ ನಮ್ಮ ಕನ್ನಡತಿ!
ವಿಶ್ವದ ದೊಡ್ಡಣ್ಣ ಎಂಬುದು ಅಮೆರಿಕ ಸಂಪಾದಿಸಿಕೊಂಡಿರುವ ಹೆಸರು. ಭೂಗರ್ಭವಿರಲಿ, ಬಾಹ್ಯಾಕಾಶವೇ ಇರಲಿ ಎಲ್ಲದ
ರಲ್ಲೂ ತಾನು ಮೊದಲಿರಬೇಕೆಂಬ ಹಪಾಹಪಿ. ಅದಕ್ಕಾಗಿ ವಿಶ್ವದ ಎಲ್ಲಿಯೇ ಜ್ಞಾನಿಗಳು, ಬುದ್ಧಿವಂತರಿದ್ದರೂ ಅವರಿಗೆ ರಾಜ
ಮರ್ಯಾದೆ ಕೊಟ್ಟು ತನ್ನ ಮಡಿಲಿನಲ್ಲಿ ಇಟ್ಟುಕೊಳ್ಳುವುದು ಅಮೆರಿಕದ ಗುಣ. ಆದರೆ ಈಗ ಹೇಳಲು ಹೊರಟಿರುವುದು
ಅಮೆರಿಕದ ಕತೆಯಲ್ಲ.
ಅಮೆರಿಕದಲ್ಲಿ ಕುಳಿತು ಭಾರತೀಯರು, ವಿಶೇಷವಾಗಿ ಕನ್ನಡಿಗರೇ ಬೆನ್ನು ತಟ್ಟಿಕೊಳ್ಳುವಂತೆ ಮಾಡಿದ ಡಾ.ಸ್ವಾತಿ ಮೋಹನ್ ಎಂಬ ವಿಜ್ಞಾನಿ, ಸುಜ್ಞಾನಿಯ ಕತೆ. ಇದೇ ಫೆಬ್ರವರಿ 20ರಂದು, ಅಮೆರಿಕದ ನಾಸಾ ಉಡಾವಣೆ ಮಾಡಿದ್ದ ‘ಪರ್ಸೀವರೆನ್ಸ್’ ರೋವರ್ ಯಶಸ್ವಿಯಾಗಿ ಮಂಗಳ ಗ್ರಹದ ಮೇಲೆ ಇಳಿಯಿತು ಎಂಬ ಸುದ್ದಿ ವಿಶ್ವಾದ್ಯಂತ ಕೇಳಿಬಂತು. ವೆರಿಗುಡ್ ಅಮೆರಿಕ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳ ಗ್ರಹದ ಮೇಲೆ ರೋವರ್ ಲ್ಯಾಂಡ್ ಮಾಡಿದವರ ಚಿತ್ರವನ್ನು ಅಂದು ನಾಸಾ ಪ್ರಕಟಿಸಿತು. ಆಗ ಮೊದಲು ಕಣ್ಣು ಅರಳಿದ್ದು ಭಾರತೀಯರದ್ದು. ಏಕೆಂದರೆ, ಆ ತಂತ್ರಜ್ಞೆ ಚೆಂದವಾಗಿ ತಲೆ ಬಾಚಿಕೊಂಡು, ಹಣೆಗೆ ಕುಂಕುಮ ಇಟ್ಟುಕೊಂಡಿದ್ದ ಅಪ್ಪಟ ಭಾರತೀಯಳಂತೆ ಕಂಗೊಳಿದ್ದರು. ಅರೆರೇ ಯಾರಿದು ನಾವೆಲ್ಲ ಹುಬ್ಬೇರಿಸಿದ್ದಾಗ ಗೊತ್ತಾಗಿದ್ದು, ರೋವರ್‌ನ ಆ್ಯಲ್ಟಿಟ್ಯೂಡ್ ಕಂಟ್ರೋಲ್ ಹಾಗೂ ಲ್ಯಾಂಡಿಂಗ್ ಸಿಸ್ಟಮ್ನ ಅಭಿವೃದ್ಧಿಗೆ ನಾಯಕಿಯೇ ಡಾ.ಸ್ವಾತಿ ಮೋಹನ್.
ಎಲ್ಲರಿಗೂ ಅಚ್ಚರಿ, ಹೆಮ್ಮೆ, ಸಂತೋಷದ ಕ್ಷಣವದು. ಮೋಹನ್-ಜ್ಯೋತಿ ದಂಪತಿ ಅಮೆರಿಕಕ್ಕೆ ವಲಸೆ ಹೋದಾಗ ಸ್ವಾತಿ ಇನ್ನೂ ಒಂದು ವರ್ಷದ ಕೂಸು. ಉತ್ತರ ವರ್ಜೀನಿಯಾ- ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ ನೆಲೆ ನಿಂತರು. ಅಲ್ಲಿಯೇ ಸ್ವಾತಿ ಅವರ ಶಾಲೆಗೆ ಸೇರಿದ್ದರು. ಉತ್ಸಾಹಿ, ಕುತೂಹಲ ತುಂಬಿದ, ಬೆರಗು ಕಂಗಳ ಬಾಲಕಿ ಸ್ವಾತಿ ತಮ್ಮ 9ನೇ ವಯಸ್ಸಿನಲ್ಲಿ ‘ಸ್ಟಾರ್ ಟ್ರೆಕ್’ ಎಂಬ ಸೈನ್ಸ್ ಸೀರೀಸ್ ವೀಕ್ಷಿಸಿದ್ದರಂತೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅದೇ ಸ್ವಾತಿಯವರ ಜೀವನಕ್ಕೆ ಮೊದಲ ಬೀಜವಾಗಿತ್ತು.
ಹೊಸ ಪ್ರದೇಶಗಳ ಸುಂದರ ಚಿತ್ರಣಗಳು ಅವರ ಕುತೂಹಲಗಳನ್ನು ಹೆಚ್ಚಿಸತೊಡಗಿದವು. ವಿಶ್ವದ ಹೊಸ ಮತ್ತು ಸುಂದರವಾದ ಸ್ಥಳಗಳನ್ನು ಹುಡುಕಿ ಅದರ ಬಗ್ಗೆ ಅರಿಯಬೇಕು ಎಂಬ ಬಯಕೆ ಮೊಳಕೆಯೊಡೆಯಿತು. ಅದೇ ಹಾದಿಯಲ್ಲಿ ಮುನ್ನಡೆದು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಪದವಿಯನ್ನು ಸ್ವಾತಿ ಪಡೆಯುತ್ತಾರೆ. ಮುಂದೆ ಏರೋನಾಟಿಕ್ಸ್ ನಲ್ಲಿ ಎಂಐಟಿಯಿಂದ ಎಂಎಸ್ ಮತ್ತು ಪಿಎಚ್.ಡಿ ಕೂಡ ಸ್ವಾತಿ ಅವರನ್ನು ಅಲಂಕರಿಸುತ್ತದೆ. ವಿಜ್ಞಾನದಲ್ಲೇ ಶಿಕ್ಷಣ, ಸಂಶೋಧನೆ ಮಾಡಿದ್ದ ಸ್ವಾತಿ ಅವರಿಗೆ ನಾಸಾ ರತ್ನಗಂಬಳಿ ಹಾಕಿ ಸ್ವಾಗತಿಸಿತ್ತು.
ಪಾಸಡೆನಾದಲ್ಲಿರುವ ನಾಸಾದ ಪರ್ಸೆವೆರೆನ್ಸ್ ರೋವರ್ ಮಿಷನ್‌ಗೆ ಆರಂಭದಿಂದಲೂ ಸದಸ್ಯೆಯಾಗಿದ್ದಾರೆ. ಕ್ಯಾಸಿನಿ
(ಮಿಷನ್ ಶನಿ ) ಮತ್ತು ಗ್ರೇಲ್ (ಚಂದ್ರನಲ್ಲಿಗೆ ಜೋಡಿ ರಚನೆಯ ಬಾಹ್ಯಾಕಾಶ ನೌಕೆ ಉಡಾವಣೆ ) ಪರಿಣಿತೆ ಎಂದು ಗುರುತಿಸಿ ಕೊಂಡಿದ್ದಾರೆ. ಪರ್ಸೆವೆರೆನ್ಸ್ ರೋವರ್ ಮಿಷನ್ ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಾಸಾದ ಸಾಧನೆಯ ಕ್ಷಣಗಳನ್ನು ನೇರ ಪ್ರಸಾರದಲ್ಲಿ ನೋಡಿ, ಎಕ್ಸೆಲೆಂಟ್ ಎಂದು ಹುರಿದುಂಬಿಸಿದ್ದರು. ಈ ಮಿಷನ್ ಮಂಗಳ ಗ್ರಹದಲ್ಲಿ ಜೀವಗಳ ಇರುವಿಕೆಯ ಕುರುಹು ಹುಡುಕಲಿದೆ. ಮಂಗಳ ಗ್ರಹದಿಂದ ಮಾದರಿ ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವುದು ಮಿಷನ್ ಮುಖ್ಯ ಉದ್ದೇಶ.
ಶಿಶು ವೈದ್ಯೆಯಾಗಬೇಕು ಎಂದು ಒಂದಷ್ಟು ದಿನ ಕನಸು ಕಂಡಿದ್ದ ಸ್ವಾತಿಗೆ ಬಾಹ್ಯಾಕಾಶ ಅಪ್ಪಿಕೊಂಡಿತ್ತು. ಆದರೆ, ಸ್ವಾತಿ
ಅವರ ಪತಿ ಸಂತೋಷ್ ಮಕ್ಕಳ ರೋಗ ತಜ್ಞರಾಗಿರುವುದು ಸ್ವಾತಿಯವರ ಕನಸು ಇನ್ನೊಂದು ರೀತಿ ಈಡೇರಿದಂತಾಗಿದೆ.
ಇಬ್ಬರು ಮುದ್ದು ಮಕ್ಕಳ ಚೆಂದದ ಸಂಸಾರ ಸ್ವಾತಿ ಸಂತೋಷ್ ಅವರದ್ದು. ಬೆಂಗಳೂರಿನ ಜತೆಗೆ ಈಗಲೂ ಸ್ವಾತಿಗೆ ಬಲವಾದ
ನಂಟು. ಮೂರ್ನಾಲ್ಕು ವರ್ಷಕ್ಕೊಮ್ಮೆ ಅಜ್ಜಿಯ ಮನೆಗೆ ಓಡಿ ಬರುವ ಮಕ್ಕಳಂತೆ ಬೆಂಗಳೂರಿಗೆ ಬರುತ್ತಾರಂತೆ.
ತಮ್ಮೆಲ್ಲ ಸಂಬಂಧಿಕರ ಮನೆಗೂ ಓಡಾಡಿ ಭಾರತದಲ್ಲಿ ಕೆಲ ಕಾಲ ಕಳೆಯುತ್ತಾರೆ. ನಮ್ಮ ದೇಶವೆಂಬ ಪ್ರೀತಿ, ಆದರ, ಅಭಿಮಾನ
ಅವರಿಗೆಂದೂ ಕಡಿಮೆಯಾಗಿಲ್ಲ. ಆದರೆ, ಇಲ್ಲೇ ಇರುವ ನಾವು, ಸಿಟ್ಟು ಬಂದಾಗ ಬಸ್ಸು, ಬೀದಿ ದೀಪಗಳಿಗೆ ಕಲ್ಲು ತೂರುವ ಕೆಟ್ಟ
ಚಾಳಿಯನ್ನು ಬಿಟ್ಟಿಲ್ಲ. ಈ ಬಗ್ಗೆ ಒಮ್ಮೆ ಯೋಚಿಸಿ ನೋಡಿ.