ಹೈದರಾಬಾದ್: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ತೆಲಂಗಾಣ ಸರ್ಕಾರ ಮಹಿಳಾ ಉದ್ಯೋಗಿಗಳಿಗೆ ಮಾರ್ಚ್ 8ರ ಸೋಮವಾರ ವಿಶೇಷ ಸಾಂದರ್ಭಿಕ ರಜೆ ಸಿಗಲಿದೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಈ ಕುರಿತು ಸೂಚನೆ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೆಶ್ ಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿಗಳು ಎಲ್ಲಾ ಮಹಿಳೆಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯ ಗಳನ್ನು ಕೋರಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಮಹಿಳೆಯರಿಗೆ ಅವಕಾಶಗಳನ್ನು ನೀಡಿದರೆ ಅದ್ಭುತಗಳನ್ನು ಸೃಷ್ಟಿ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ. ಸರ್ಕಾರ ರಚನೆ ಮಾಡಿರುವ SHE ತಂಡಗಳು ಹಿರಿಯ ಮಹಿಳೆಯರಿಗೆ, ಒಂಟಿ ಮಹಿಳೆಯರಿಗೆ, ಪತಿಯನ್ನು ಕಳೆದುಕೊಂಡವರಿಗೆ ಅಗತ್ಯ ನೆರವು ನೀಡಲು ಸಹಕಾರಿ ಆಗಲಿದೆ. ಆಶಾ ಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ಸರ್ಕಾರ ಹೆಚ್ಚಳ ಮಾಡಿದೆ. ಕಲ್ಯಾಣ ಲಕ್ಷ್ಮೀ ಮತ್ತು ಕೆಸಿಆರ್ ಕಿಟ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.