Thursday, 12th December 2024

ಜನನಿ ತಾನೆ ಮೊದಲ ಗುರುವು

ಅಭಿವ್ಯಕ್ತಿ

ಎಲ್‌.ಶರ್ಮಿಳಾ ಆನಂದ

Education is not the learning of Facts but the training of the mind to think. – Albert Einsteinಶಿಕ್ಷಣ ಎನ್ನುವುದು ಕೇವಲ ಭೌತಿಕ ವಸ್ತುಗಳನ್ನು ಕಲಿಯುವುದಲ್ಲ ನಮ್ಮ ಮನಸ್ಸನ್ನು ಆಲೋಚಿಸುವಂತೆ ತರಬೇತಿ ಮಾಡುವುದು. ಎಂದಿದ್ದಾರೆ ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್.

ಈ ಮಾತುಗಳು ಶಿಕ್ಷಣದ ಆಳ ಮತ್ತು ವಿಸ್ತಾರತೆಯನ್ನು ತಿಳಿಸುತ್ತದೆ. ನಮ್ಮ ವೇದೋಪನಿಷತ್ತುಗಳೂ ಸಹ ಇದನ್ನೆಲ್ಲ ಪ್ರತಿಪಾದಿಸುತ್ತವೆ ನಹಿ ಜೈನೇನ ಸದೃಶಂ ಎಂದರೆ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅಂದಕ್ಕೆ ಸರಿಸಮಾನದ ವಸ್ತು ಜಗತ್ತಿನಲ್ಲಿ ಇರಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಶಿಕ್ಷಣದ ಮಹತ್ವವನ್ನು ಸಾರಿ ಹೇಳುತ್ತವೆ. ಅಂತೆಯೇ ಶಿಕ್ಷಣ ಸಮಾನವಾದ ಹಕ್ಕು.

ಇದು ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಲಿಂಗತಾರತಮ್ಯ ವಿಲ್ಲದೇ ದೊರಕಲೇಬೇಕಾದ ಕಡ್ಡಾಯ ವಸ್ತು. ಆ ನಿಟ್ಟಿನಲ್ಲಿ ಚಿಂತಿಸುವುದಾದರೆ ಸ್ತ್ರೀ ಸಮಾನತೆಯ ಕೂಗು ಶಿಕ್ಷಣದ ಆಂತರ್ಯದಲ್ಲಿ ಹುದುಗಿದೆ. ‘ಯತ್ರನಾರ್ಯಸ್ತು ರಮಂತೆ ತತ್ರದೇವತಾ’ ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳೂ ಸಹ ನೆಲೆಸಿರುತ್ತಾರೆ ಎಂಬುದು ಮೇಲಿನ ವಾಕ್ಯದ ತಾತ್ಪರ್ಯ. ಈ ವಾಕ್ಯಗಳನ್ನು ಗಮನಿಸಿದಾಗ ಸ್ತ್ರೀಗೆ ಶಿಕ್ಷಣದ ಅಗತ್ಯ ಅರಿವು ಅತ್ಯಗತ್ಯಎಂಬುದು ಮನದಟ್ಟಾಗುತ್ತದೆ.

ಸ್ತ್ರೀಯರ ಬಗ್ಗೆ ಅವರ ಶಿಕ್ಷಣದ ಬಗ್ಗೆ ಮಾತನಾಡುವಾಗ ಥಟ್ಟನೆ ನೆನಪಾಗುವುದು ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿ ಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿ ಬಾಯಿ ಫುಲೆ. 150 ವರ್ಷಗಳ ಹಿಂದೆಯೇ ಶಿಕ್ಷಣದಲ್ಲಿ ವೈವಿಧ್ಯತೆಯನ್ನು ತಂದು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಶಿಕ್ಷಣವನ್ನು ಪಡೆಯಲೇಬೇಕು ಎಂಬ ಹಠ ತೊಟ್ಟು ತಮಗೆ ಎದುರಾದ ಅಪಮಾನ ಗಳನ್ನು ಸಹಿಸಿ ಸಾಮಾಜಿಕ ಸಂಘನೆಗಳ ಮೂಲಕ ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆಕೊಟ್ಟರು. ಇಂದಿನ ಅಕ್ಷರಸ್ಥ ಭಾರತೀಯ ಪ್ರತಿಯೊಬ್ಬ ಮಹಿಳೆಯ ಮನದಲ್ಲಿ ಸಾವಿತ್ರಿ ಬಾಯಿ ಫುಲೆ ಇದ್ದಾರೆ.

ಮಾನವ ಕಂಪ್ಯೂಟರ್ ಎಂದೇ ಖ್ಯಾತಿಗಳಿಸಿದ್ದ ವಿಶ್ವವಿಖ್ಯಾತ ಭಾರತೀಯ ಗಣೀತ ಶಾಸ್ತ್ರಜ್ಞೆ ಶಕುಂತಲದೇವಿ, ಸ್ವಾತಂತ್ರ್ಯ ಹೋರಾಟಗಾರ್ತಿ ಉತ್ತರ ಪ್ರದೇಶ ಮೊದಲ ಮಹಿಳಾ ರಾಜ್ಯಪಾಲರಾಗಿದ್ದ ಸರೋಜಿನಿನಾಯ್ಡು, ಭಾರತದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಸುಚೀತ ಕೃಪಲಾನಿ, ಭಾರತದ ಕೀರ್ತಿ ಪತಾಕೆಯನ್ನು ಗಗನದ ಎತ್ತರಕ್ಕೇರಿಸಿದ ಮೊದಲ ಭಾರತ ಸಂಜಾತ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ, 45ಕ್ಕೂ ಹೆಚ್ಚು ವರ್ಷಗಳ ಕಾಲ ಬಡವರ ರೋಗಿಗಳ ಅನಾಥರ ಮತ್ತು ಮರಣ ಸಂಕಟ ದಲ್ಲಿರುವವರ ದನಿಯಾಗಿ ತಮ್ಮ ಜೀವಮಾನವನ್ನೇ ಮುಡಿಪಿಟ್ಟ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಜಗತ್ತಿನ ತಾಯಿ ಮದರ್ ತೆರೇಸಾ, ಅಷ್ಟೇ ಏಕೆ ಅನೇಕ ನಮ್ಮನಾಳಿದ ನಮ್ಮ ನಾಡು ನುಡಿಗಾಗಿ ಶ್ರಮಿಸಿದ ಸ್ವಾತಂತ್ರ್ಯ ಹೋರಾಟ ಗಾರ್ತಿಯರು, ರಾಣಿಯ ರಾದ ಕಸ್ತೂರಬಾ, ಝನ್ಸಿ ರಾಣಿ ಲಕ್ಷ್ಮೀಭಾಯಿ, ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ ಒನಕೆ ಓಬಮ್ಮ ಹಾಗೂ ತಮ್ಮ ವಚನಗಳ ಮೂಲಕ ಸಾಮಾಜಿಕ ಕಳಕಳಿಯನ್ನು ಜಾಗೃತಗೊಳಿಸಿದ ವಚನಗಾರ್ತಿಯರು.

ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಇನ್ನು ಹತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುವ ಪ್ರತಿಯೊಬ್ಬ ಮಹಿಳೆಯ ಕ್ಷೇಮಾಭಿವೃದ್ಧಿ ಸ್ತ್ರೀ ಶಿಕ್ಷಣದ ಮಹತ್ವವನ್ನು ಸಾರಿ ಹೇಳುತ್ತದೆ. ಒಂದು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ. ಮನೆಯೇ ಮೊದಲ ಪಾಠಶಾಲೆ. ಜನನಿ ತಾನೆ ಮೊದಲ ಗುರುವು. ಜನನಿಯಿಂದ ಕಲಿತ ನಾವೇ ಧನ್ಯರು ಎಂಬ ನಾಣ್ಣುಡಿಯಂತೆ ಮಹಿಳೆಯರಿಗೆ ಉತ್ತಮ ಶಿಕ್ಷಣ ಉನ್ನತಿ ಹೊಂದುವುದು ನಿಶ್ಚಿತ. ಜನ್ಮ ನೀಡಿದ ಮಾತೆ, ವಿದ್ಯೆ ನೀಡುವ ಎಲ್ಲಾ ವಿದ್ಯಾದೇವತೆಯರು, ಸ್ತ್ರೀ ಶಿಕ್ಷಣದ ಮೌಲ್ಯ ಸಾರುವ ಜ್ವಲಂತ ನಿರ್ದೇಶನಗಳು.