ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಪ್ರತಿವರ್ಷ ಬಜೆಟ್ ಬಂದಾಗ, ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿಬರುವ ಪ್ರಶ್ನೆ, ಈ ಬಾರಿ ನಮಗೇನು? ಎನ್ನುವು ದಾಗಿರುತ್ತದೆ.
ಮಾಧ್ಯಮದವರ ಸಹಜ ಮಾತು ಸಹ ಈ ಬಾರಿ ಜನರಿಗೆ ಸರಕಾರದ ಕೊಡುಗೆ ಏನು ಎನ್ನುವುದಾಗಿರುತ್ತದೆ. ಆದರೆ ಪ್ರತಿ ಬಾರಿಯೂ ಸರಕಾರಗಳು ಈ ರೀತಿ ಕೊಡುಗೈ ದಾನಿಗಳ ರೀತಿ ಜನರಿಗೆ ಭರಪೂರ ಕೊಡುಗೆ ನೀಡಲು ಸಾಧ್ಯವೇ? ಕೊಟ್ಟರೂ ಪ್ರಾಯೋಗಿಕವಾಗಿ ಇದು ಕಾರ್ಯಸಾಧುವೇ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ ಎನ್ನಬಹುದಾಗಿದೆ.
ಹೌದು, ಭಾರತ ಅಥವಾ ಯಾವುದೇ ರಾಜ್ಯದಲ್ಲಿ ಚುನಾವಣೆ ಅಥವಾ ಬಜೆಟ್ ಬಂತೆಂದರೆ ಸಹಜವಾಗಿಯೇ ವಿವಿಧ ಯೋಜನೆ ಗಳನ್ನು ಘೋಷಿಸುತ್ತಾರೆ. ಈ ಯೋಜನೆ ಗಳಲ್ಲಿ ಬಹುತೇಕ ಯೋಜನೆಗಳು, ದೀರ್ಘಕಾಲೀನ ಯೋಜನೆಗಳಾಗಿರದೇ, ಅಂದಿನ ದಿನಮಾನಕ್ಕೆ ಅಥವಾ ಒಂದು ಸಮುದಾಯವನ್ನು ಓಲೈಸುವ ರೀತಿಯ ಘೋಷಣೆಗಳಾಗಿರುತ್ತದೆ. ಆ ಸರಕಾರ ಘೋಷಿಸಿದ ಬಳಿಕ, ಮತ್ತೊಂದು ಸರಕಾರ ಬಂದು ಅನೇಕ ಬಾರಿ ಆ ಯೋಜನೆ ಗಳನ್ನೇ ಸ್ಥಗಿತಗೊಳಿಸಿರುವ ಉದಾಹರಣೆಗಳು ನಮ್ಮ ಮುಂದಿದೆ.
ಈ ರೀತಿ ಓಲೈಕೆಯ ಕಾರ್ಯಕ್ರಮಗಳಿಂದ ಆಡಳಿತ ನಡೆಸುವ ಹಾಗೂ ಆ ಪಕ್ಷಕ್ಕೆ ಸರಕಾರವಾಗುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಇದರಿಂದ ರಾಜ್ಯ ಅಥವಾ ದೇಶದ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಿಲ್ಲ. ಇರುವ ಅನುದಾನವೆಲ್ಲ ಒಂದು ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟರೆ ಇನ್ನುಳಿದವರ ಮೂಲಸೌಲಭ್ಯಗಳಿಗೆ ಅಥವಾ ಅಭಿವೃದ್ಧಿಗೆ ಏನು ಮಾಡಬೇಕು ಎನ್ನುವ ಪ್ರಶ್ನೆಗಳು ಆಗ್ಗಾಗೆ ಕೇಳಿಬರುತ್ತದೆ. ಆದರೆ ಇದಕ್ಕೆ ಉತ್ತರ ಮಾತ್ರ ಸಿಕ್ಕಿಲ್ಲ.
ಹಾಗೇ ನೋಡಿದರೆ, ಈ ರೀತಿ ಓಲೈಸುವ ಯೋಜನೆಗಳು ಜಾರಿಗೆ ಹೆಚ್ಚಾಗಿ ಜಾರಿಗೊಳಿಸಿರುವುದು ಕಾಂಗ್ರೆಸ್ ಸರಕಾರ ಎಂದರೆ ತಪ್ಪಲ್ಲ. ಕಳೆದ ಏಳು ವರ್ಷದಿಂದ ದೇಶವನ್ನು ಆಳುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರವಾಗಲಿ, ಈ ಹಿಂದೆ ಅಟಲ್
ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರಕಾರವಾಗಲಿ, ಈ ರೀತಿಯ ಯೋಜನೆಗಿಂತ ಹೆಚ್ಚಾಗಿ ದೀರ್ಘಕಾಲಿನ ಕಾರ್ಯಕ್ರಮ
ಗಳಿಗೆ ಹೆಚ್ಚಿನ ಮಹತ್ವ ನೀಡಿವೆ. ಈ ರೀತಿಯ ನಿರ್ಧಾರಗಳಿಂದ, ಆ ಸಮಯದಲ್ಲಿ ಸಾರ್ವಜನಿಕರಿಗೆ ಬೇಸರಿಸಬಹುದು ಅಥವಾ ಜನ ವಿರೋಧಿ ಸರಕಾರ ಎನಿಸಬಹುದು. ಆದರೆ ಅದಾದ ಬಳಿಕ ದೀರ್ಘ ಕಾಲದಲ್ಲಿ ಆಗುವ ಲಾಭ ಪಡೆದಾಗ ಅದರ ಮಹತ್ವ
ತಿಳಿಯುತ್ತದೆ.
ಅಂದ ಮಾತ್ರಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಓಲೈಕೆ ಯೋಜನೆಗಳು ಜಾರಿಗೊಳಿಸಿಯೇ ಇಲ್ಲ ಎಂದಲ್ಲ. ಆದರೆ ಇತರ ಸರಕಾರದ ಅವಧಿಗೆ ಹೋಲಿಸಿದರೆ, ಕಡಿಮೆ ಎನ್ನಬಹುದು. ಇನ್ನು 2021-22ನೇ ಸಾಲಿನ ಕೇಂದ್ರ ಸರಕಾರದ ಬಜೆಟ್ ಮಂಡನೆ ಯಾದಾಗ ಈ ರೀತಿಯ ಓಲೈಕೆಯ ಘೋಷಣೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿರಲಿಲ್ಲ. ಇದಕ್ಕೆ ಕರೋನಾ ಕಾರಣ ಇದ್ದರೂ ಇರಬಹುದು. ಆದರೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಎಲ್ಲಿಯೂ ಸಹಾಯ ಧನಕ್ಕೆ ಅವಕಾಶ ನೀಡದೇ, ಭವಿಷ್ಯವನ್ನು ಕಟ್ಟಿಕೊಳ್ಳಲು ಬೇಕಿರುವ ಯೋಜನೆಗಳಿಗೆ ಬುನಾದಿಯ ರೀತಿ ಕೆಲವು ಅಂಶಗಳನ್ನು ಮಂಡಿಸಿದ್ದರು.
ಇದರೊಂದಿಗೆ ಶಿಕ್ಷಣ ಹಾಗೂ ಇಂದಿನ ಅಗತ್ಯವಾಗಿರುವ ಆರೋಗ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ರಕ್ಷಣಾ ವಲಯದಲ್ಲಿ ಹಾಗೂ ಈ ಮೇಲೆ ಹೇಳಿದ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದೇಶವನ್ನು ಗಟ್ಟಿಗೊಳಿಸುವುದಕ್ಕೆ ಬೇಕಿರುವ ಅಂಶಗಳನ್ನು ಮಾತ್ರ ಸೇರಿಸಲಾಗಿತ್ತು. ಇನ್ನು ಈ ಬಾರಿಯ ಬಜೆಟ್ನಲ್ಲಿ ಕರೋನಾ ಫ್ಯಾಕ್ಟರ್ ಇತ್ತು ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.
ಈ ರೀತಿ ಓಲೈಕೆ ಘೋಷಣೆ ಇಲ್ಲದೇ ಬಜೆಟ್ ಮಂಡಿಸಿದಾಗಲೆಲ್ಲ, ಪ್ರತಿಪಕ್ಷಗಳು ಸೇರಿದಂತೆ ಸಾರ್ವಜನಿಕರು ಸರಕಾರದ ವಿರುದ್ಧ ಮಾತನಾಡುವುದು ಸಹಜ. ಆದರೆ ಭವಿಷ್ಯದ ಯೋಜನೆ ಇಲ್ಲದೇ, ಬಜೆಟ್ ಮಂಡಿಸಿದರೆ, ದೇಶದ ಅಭಿವೃದ್ಧಿಗೆ ಅಗತ್ಯವಿರುವ ಆರ್ಥಿಕತೆಗೆ ಹೊಡೆತ ಬೀಳುವುದರಲ್ಲಿ ಎರಡನೇ ಮಾತಿಲ್ಲ. ಅಂದ ಮಾತ್ರಕ್ಕೆ, ಬಿಜೆಪಿ ಅಧಿಕಾರದಲ್ಲಿರುವ ಸರಕಾರಗಳೆಲ್ಲ ಓಲೈಕೆ ರಾಜಕಾರಣವನ್ನು ಮನದಲ್ಲಿರಿಸಿಕೊಂಡು ಯೋಜನೆ ರೂಪಿಸಿಯೇ ಇಲ್ಲ ಎಂದಲ್ಲ.
ಹಲವು ಬಾರಿ ಬಿಜೆಪಿ ಆಡಳಿತ ನಡೆಸುವ ಸರಕಾರಗಳು ಈ ರೀತಿ ಘೋಷಣೆ ಮಾಡಿವೆ. ಇನ್ನು ಈ ರೀತಿಯ ಘೋಷಣೆ ಕೇವಲ ಬಜೆಟ್ನಲ್ಲಿ ಇರುವುದಲ್ಲ. ಕೇಂದ್ರ ಸರಕಾರದ ದೃಷ್ಟಿಯಲ್ಲಿ ನೋಡುವುದಾದರೆ, ಚುನಾವಣೆ ನಡೆಯುವ ರಾಜ್ಯಗಳಿಗೆ ವಿಶೇಷ
ಪ್ಯಾಕೇಜ್ ರೂಪದಲ್ಲಿ ಕೋಟ್ಯಂತರ ರುಪಾಯಿ ಘೋಷಣೆ ಮಾಡಿದರೆ, ರಾಜ್ಯ ಸರಕಾರಗಳು ಚುನಾವಣೆ ಬರುವ ಹಿಂದಿನ ಬಜೆಟ್ ಜನರಿಗೆ ಭರಪೂರ ಘೋಷಣೆಗಳನ್ನು ನೀಡುವುದು ಸಹಜ. ಆದರೆ ಆ ಯೋಜನೆಗಳು ಬರುವ ಸರಕಾರಗಳು ನಿಜಕ್ಕೂ ಜಾರಿಗೊಳಿಸುತ್ತವೆಯೇ ಎನ್ನುವುದಕ್ಕೆ ಪರಿಪಕ್ವ ಉತ್ತರ ಸಿಗುವುದಿಲ್ಲ. ಅನೇಕ ಬಾರಿ ಆಡಳಿತ ಪಕ್ಷ ಜಾರಿಗೆ ತರಲು ಉದ್ದೇಶಿಸುವ ಯೋಜನೆಗಳಿಗೆ ಅಧಿಕಾರಿಗಳು ಒಪ್ಪಿಗೆಯನ್ನೇ ನೀಡಿರುವುದಿಲ್ಲ.
ಆರ್ಥಿಕವಾಗಿ ಭಾರಿ ಹೊರೆಯಾಗುವ ಯೋಜನೆಗಳಿಂದ ಒಟ್ಟಾರೆ ಅಭಿವೃದ್ಧಿಗೆ ಸಮಸ್ಯೆಯಾಗಲಿದೆ ಎನ್ನುವುದನ್ನು ಮನವರಿಕೆ ಯಾದರೂ, ರಾಜಕೀಯ ಆಟದ ಒತ್ತಡಕ್ಕೆ ಮಣಿದು ಬಜೆಟ್ನಲ್ಲಿ ಅಂಶಗಳನ್ನು ಸೇರಿಸುತ್ತಾರೆ ಎನ್ನುವುದು ಸೆಕ್ರೆಟರಿಯಟ್
ಅನ್ನು ಬಲ್ಲ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಇನ್ನು ಈ ರೀತಿಯ ಘೋಷಣೆಗಳನ್ನು ಜಿದ್ದಿಗೆ ಬಿದ್ದು ಘೋಷಣೆ ಮಾಡು ವವರಲ್ಲಿ ಮೊದಲ ಸಾಲಿನಲ್ಲಿ ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಸರಕಾರಗಳು ಮುಂಚೂಣಿಯಲ್ಲಿರುತ್ತವೆ. ಅದರಲ್ಲಿಯೂ ಜಯಲಲಿತಾ ಹಾಗೂ ಕರುಣಾನಿಧಿ ಕಾಲದಲ್ಲಿ ಈ ಓಲೈಕೆಯ ಘೋಷಣೆಗಳು ಮಿತಿ ಮೀರುತ್ತಾ ಸಾಗಿದವು.
ಒಂದೆಡೆ ಅಮ್ಮ ಟಿವಿ ಇದ್ದರೆ, ಇನ್ನೊಂದೆಡೆ ಕುಕ್ಕರ್ ಕೊಡುವುದಾಗಿ ಕರುಣಾನಿಧಿ ಪಕ್ಷ ಹೇಳುತ್ತಾ ಸಾಗಿತ್ತು. ಇದು ಯಾವ ಹಂತಕ್ಕೆ ಮಿತಿ ಮೀರಿತು ಎಂದರೆ, ತಮಿಳುನಾಡು ಮನೆಮನೆಯಲ್ಲಿಯೂ ಜಯಲಲಿತಾ ಹಾಗೂ ಕರುಣಾನಿಧಿ ಸರಕಾರಗಳು ಜಿದ್ದಿಗೆ ಬಿದ್ದು ನೀಡುತ್ತಿದ್ದ ಸರಕಾರದ ಅಧಿಕೃತ ಉಡುಗೊರೆಯಲ್ಲಿಯೇ ಮನೆ ತುಂಬಿ ಹೋಗಿವೆ. ಆರಂಭದಲ್ಲಿ ಇದು ಅಲ್ಲಿನ ಜನರಿಗೆ ಇಷ್ಟುವಾಗುತ್ತಿದ್ದರೂ, ಬಳಿಕ ಈ ನಡೆಗೆ ಭಾರಿ ವಿರೋಧ ವ್ಯಕ್ತವಾಯಿತು.
ಇದೇ ರೀತಿ ಆಂಧ್ರ ಪ್ರದೇಶದಲ್ಲಿಯೂ ಬಜೆಟ್ನಲ್ಲಿ ಹಲವು ಓಲೈಕೆಯ ಘೋಷಣೆಗಳಿವೆ. ಕರ್ನಾಟಕದ ಮಟ್ಟಿಗೆ ಹಾಗೇ ನೋಡಿ ದರೆ ಈ ರೀತಿ ಓಲೈಕೆಯ ಘೋಷಣೆ ಮಾಡಿದ್ದು ತೀರಾ ಕಡಿಮೆ. ದೇವರಾಜ ಅರಸರು, ಬಡವರ ಅಭಿವೃದ್ಧಿಗೆ ಪೂರಕವಾದ ಕೆಲವು ಯೋಜನೆಗಳನ್ನು ರೂಪಿಸಿದ್ದರು. ಅದು ಬಿಟ್ಟರೆ, ಸಿದ್ದರಾಮಯ್ಯ ಅವರ ಕಾಲದಲ್ಲಿ ಬಂದ ಸಾಲು ಸಾಲು ಭಾಗ್ಯಗಳನ್ನು, ಜನರನ್ನು ಮೆಚ್ಚಿಸುವುದಕ್ಕೆ ಘೋಷಿಸಿದರು.
ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಹೀಗೆ ಹೀಗೆ ಸಾಲು ಸಾಲು ಯೋಜನೆಗಳನ್ನು ಘೋಷಿಸಿದರು. ಇದರೊಂದಿಗೆ
ತಮಿಳು ನಾಡಿನ ಅಮ್ಮ ಕ್ಯಾಂಟೀನ್ ಮಾದರಿಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿದರು. ಈ ಯೋಜನೆಗಳೆಲ್ಲ
ಬಡವರ ಜೀವನವನ್ನು ಹಸನಾಗಿಸಲು ರೂಪಿಸಿದ ಯೋಜನೆಗಳಾದರೂ, ಎಲ್ಲೋ ಒಂದು ಕಡೆ ಇದು ಸರಕಾರದ ಬೊಕ್ಕಸಕ್ಕೆ ಭರಿಸಲಾಗದ ದೊಡ್ಡ ಮೊತ್ತವಾಗುತ್ತಾ ಸಾಗಿತು.
ಇನ್ನು ಎಲ್ಲ ಸರಕಾರಗಳಲ್ಲಿಯೂ ಘೋಷಣೆ ಮಾಡಿರುವ ಸಾಲಮನ್ನಾ ಯೋಜನೆಗಳು ರಾಜ್ಯದ ಬೊಕ್ಕಸವನ್ನು ಒಂದಲ್ಲ
ಒಂದು ರೀತಿ ಹಿಂಡಿ ಹಿಪ್ಪೆ ಮಾಡಿವೆ ಎಂದರೆ ತಪ್ಪಾಗುವುದಿಲ್ಲ. ಅದಕ್ಕೆ ಕೇಂದ್ರದ ಹಣಕಾಸು ಸಚಿವರಾಗಿದ್ದ ದಿವಂಗತ
ಅರುಣ್ ಜೇಟ್ಲಿ ಅವರು, ಸಾಲಮನ್ನಾ ಯೋಜನೆಗಳಿಗೆ ಸದಾ ವಿರೋಧಿಸುತ್ತಿದ್ದರು. ರೈತರ ಸಾಲಮನ್ನಾ ಮಾಡುವುದಕ್ಕಿಂತ ರೈತರು ಸಾಲ ಮಾಡದ ರೀತಿ ಅವರ ಜೀವನವನ್ನು ಹಸನಾಗಿಸಬೇಕು ಎಂದು ಹೇಳಿದ್ದರು. ಈ ಮಾತು ಅನೇಕರಿಗೆ ಸಹ್ಯ ವಾಗದಿದ್ದರೂ, ಇದು ಸತ್ಯ ಎನ್ನುವುದನ್ನು ಒಪ್ಪಲೇಬೇಕು.
ಇನ್ನು ಇದೆಲ್ಲ ಬಜೆಟ್ ಘೋಷಣೆಗಳಾದರೆ, ಇದಕ್ಕೆ ನೂರುಪಟ್ಟು ಘೋಷಣೆಗಳನ್ನು ಎಲ್ಲ ಪಕ್ಷಗಳು ಚುನಾವಣಾ
ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತವೆ. ಪ್ರಣಾಳಿಕೆ ಘೋಷಣೆ ಕೇವಲ ಒಂದೊಂದು ವಿಷಯಕ್ಕೆ ಸೀಮಿತವಾಗಿರುವುದಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ಕ್ಷೇತ್ರಕ್ಕೊಂದು ಪ್ರಣಾಳಿಕೆಗಳನ್ನು ಘೋಷಿಸಿದ್ದವು. ಈ ಪ್ರಣಾಳಿಕೆಯಲ್ಲಿರುವ ಅಂಶಗಳು ನಿಜಕ್ಕೂ ಜಾರಿಯಾದರೆ, ಭಾರತ ರಾಮ ರಾಜ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಆದರೆ ಪ್ರಣಾಳಿಕೆಯ ಈ ಅಂಶಗಳು ನಿಜಕ್ಕೂ ಜಾರಿಯಾಗುವುದೇ ಎನ್ನುವುದನ್ನು
ನೋಡಿದರೆ, ಸಕಾರಾತ್ಮಕ ಉತ್ತರ ಸಿಗುವುದಿಲ್ಲ.
ಅನೇಕ ಬಾರಿ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ನೀಡಿರುವ ಆಶ್ವಾಸನೆಗಳಲ್ಲಿ ಶೇ.50ರಷ್ಟು ಜಾರಿಯಾದರೂ, ಅದು ದೊಡ್ಡ
ಸಾಧನೆಯೇ ಆಗಿರುತ್ತದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ರೀತಿಯ ಅಂಶಗಳಿಗಿಂತ, ದುಡಿಯುವ ಕೈಗಳಿಗೆ ಶಕ್ತಿ ನೀಡುವ, ಕೆಲಸ ಸಿಗುವಂತೆ ಮಾಡುವ ಹಾಗೂ ಸ್ವಯಂ ಉದ್ಯೋಗಕ್ಕೆ ಮಾನ್ಯತೆ ನೀಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರು.
ಕಳೆದ ಎಲ್ಲ ಬಜೆಟ್ಗಳಲ್ಲಿಯೂ ಇದು ಕಾಣಿಸುತ್ತಿದೆ ಸಹ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾಡು ಇಲ್ಲವೇ ಮಡಿ ಸ್ಥಿತಿ ಯಲ್ಲಿರುವ ಬಿಜೆಪಿ, ಓಲೈಕೆಯ ಘೋಷಣೆಗೆ ಮುಂದಾಗಿದೆ.
ಕಳೆದ ವಾರ ಪಶ್ಚಿಮ ಬಂಗಾಳದ ರ್ಯಾಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ರೈತರ ಖಾತೆಗೆ 18 ಸಾವಿರ ರು.ಗಳನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ಅಂಕಿ ಅಂಶಗಳ ಪ್ರಕಾರ ಬಂಗಾಳದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ರೈತರಿದ್ದಾರೆ. ಅವರಿಗೆ 450,0000000 ರುಪಾಯಿ ಹೊರೆ ಬೀಳಲಿದೆ. ಈ ಹಿಂದೆ ಕೇಂದ್ರ ಸರಕಾರ ದೇಶದ ಎಲ್ಲ ರೈತರಿಗೆ ಕೃಷಿ ಸಮ್ಮಾನ್
ಯೋಜನೆಯಲ್ಲಿ ನೀಡಿದ್ದು ಸಹ ಚುನಾವಣಾ ಸಮಯದಲ್ಲಿಯೇ ಎನ್ನುವುದನ್ನು ಮರೆಯುವಂತಿಲ್ಲ.
ಈ ರೀತಿ ಹೆಚ್ಚಿನ ಅನುದಾನವನ್ನು ಸಮಾಜ ಕಲ್ಯಾಣಕ್ಕಾಗಿಯೇ ಮೀಸಲಿಟ್ಟರೆ, ಇತರ ಯೋಜನೆಗಳಿಗೆ ಎಲ್ಲಿಂದ ಅನುದಾನ ಒದಗಿಸಬೇಕು ಎನ್ನುವ ಪ್ರಶ್ನೆಯನ್ನು ಒಮ್ಮೆ ಸಚಿವ ಮಾಧುಸ್ವಾಮಿ ಅವರು ಸದನದಲ್ಲಿ ಬಹಿರಂಗವಾಗಿ ಪ್ರಶ್ನಿಸಿದ್ದರು. ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ರಾಜ್ಯದಲ್ಲಿರುವ ಆರ್ಥಿಕ ಸಂಪನ್ಮೂಲದ ಶೇ.60ಕ್ಕೂ ಹೆಚ್ಚು ಪಾಲು ಬದ್ಧ ಖರ್ಚಿಗೆ ಖಾಲಿಯಾಗುತ್ತಿದೆ. ಇದರಲ್ಲಿ ವೇತನ, ಪಿಂಚಣಿಯನ್ನು ಹೊರತುಪಡಿಸಿದರೆ, ಶೇ.50ಕ್ಕೂ ಹೆಚ್ಚು ಪಾಲು ಈ ರೀತಿ ವಿವಿಧ ಭಾಗ್ಯಗಳಿಗೆ ಖರ್ಚಾಗುತ್ತದೆ.
ಇದೇ ರೀತಿ ಮುಂದುವರಿದರೆ, ಮುಂದಿನ ಕೆಲವೇ ವರ್ಷ ದಲ್ಲಿ ಬದ್ಧ ವೆಚ್ಚ ಶೇ.90ರಷ್ಟು ದಾಟುವುದರಲ್ಲಿ ಅನುಮಾನ ವಿಲ್ಲ.
ಹೀಗಾದರೆ, ರಾಜ್ಯದಲ್ಲಿ ಎಲ್ಲಿಯ ರಸ್ತೆ ಅಭಿವೃದ್ಧಿ, ಎಲ್ಲಿಯ ಕೈಗಾರಿಕಾ ಪೂರಕ ವಾತಾವರಣ ನಿರ್ಮಾಣ ಸಾಧ್ಯವಾಗುತ್ತದೆ
ಎಂದಿದ್ದರು. ಒಂದು ಅರ್ಥದಲ್ಲಿ ಇದು ನಿಜ. ಬಡವರನ್ನು ಉದ್ಧಾರ ಮಾಡುವ ನೆಪದಲ್ಲಿ ಎಲ್ಲವನ್ನು ಪುಕ್ಕಟೆಯಾಗಿ ನೀಡಿದರೆ, ಅವರಿಗೆ ದುಡಿಮೆ ಅಗತ್ಯವಾದರೂ ಎಲ್ಲಿಂದ ಬರಬೇಕು? ಇದರ ಬದಲು, ಬಡವರಿಗೆ ಈ ರೀತಿ ಯೋಜನೆ ನೀಡುವ ಬದಲು, ದುಡಿಯುವ ಕೈಗಳಿಗೆ ಕೆಲಸ ಕೊಡುವ, ಉದ್ಯೋಗ ಕೊಡಿಸುವುದಕ್ಕೆ ಬೇಕಿರುವ ಅಗತ್ಯ ತಯಾರಿ, ಎರಡನೇ ಹಾಗೂ ಮೂರನೇ ಹಂತದ ನಗರಗಳಲ್ಲಿ ಕೈಗಾರಿಕಾ ಸ್ಥಾಪನೆ ಮಾಡುವುದಕ್ಕೆ ಬೇಕಿರುವ ಮೂಲ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ.
ದೇಶದ ಸರ್ವಾಂಗೀಣ ಅಭಿವೃದ್ಧಿಯತ್ತ ಆಡಳಿತ ನಡೆಸುವ ಸರಕಾರಗಳು ನೋಡಬೇಕು ಹೊರತು, ವೋಟ್ ಬ್ಯಾಂಕ್
ರಾಜಕಾರಣವನ್ನು ಮನದಲ್ಲಿರಿಸಿಕೊಂಡು, ಯೋಜನೆಗಳನ್ನು ರೂಪಿಸಬಾರದು. ಅದರ ಬದಲು, ಯೋಜನೆಗಳನ್ನು,
ಅಸಹಾಯಕರಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸಿದ್ಧಪಡಿಸಬೇಕು. ಈ ನಿಟ್ಟಿನಲ್ಲಿ ಆಡಳಿತ ನಡೆಸುವವರು ಹಾಗೂ ಚುನಾವಣಾ ಪ್ರಣಾಳಿಕೆ ಸಿದ್ಧ ಪಡಿಸಿರುವವರು ಗಂಭೀರ ಚಿಂತನೆ ನಡೆಸದಿದ್ದರೆ, ಭವಿಷ್ಯದಲ್ಲಿ ಸರಕಾರ ಅಭಿವೃದ್ಧಿ ಯೋಜನೆಗೆ ಅನುದಾನ ನೀಡುವ ಬದಲು, ಬಹುಪಾಲು ಅನುದಾನವನ್ನು ಜನರ ಓಲೈಸುವುದಕ್ಕೆ ಮೀಸಲಿಡಬೇಕಾಗುತ್ತದೆ ಎನ್ನುವುದನ್ನು ಮರೆಯಬಾರದು.