ಸ್ಮರಣೆ
ಸುಜಯಾ ಆರ್.ಕೊಣ್ಣೂರ್
ನೀ ಸಿಗದೆ ಬಾಳೊಂದು ಬಾಳೇ ಕೃಷ್ಣಾ, ಎನ್ನುತ್ತಾ, ತುದಿ ಮೊದಲು ತಿಳಿಯದ ನೀಲಾಗಸದಲ್ಲಿ, ಯಾರೋ ಮಾಡಿ ಎಸೆದ ಮಣ್ಣ ಬೊಂಬೆ ಎಂಬ ದೇವರ ಲೀಲೆಯನ್ನು ಜಗತ್ತಿಗೆ ತಮ್ಮ ಸುಂದರ ಕವನಗಳ ಮೂಲಕ ಸಾರಿ ಹೇಳಿದ ಸುಂದರ ಕವಿ ನಮ್ಮ ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು.
ನಮ್ಮ ನಾಡಿನ ಶ್ರೇಷ್ಠ ಕವಿಗಳಾದ ನಿಸಾರ್ ಅವರನ್ನು ಕಳೆದುಕೊಂಡ ಮನದಲ್ಲಿ ಭಾರವಾದ ಮೌನ ಇನ್ನೂ ಇಳಿಯುವ ಮುನ್ನವೇ ಮತ್ತೊಬ್ಬ ಕನ್ನಡದ ಕವಿಯನ್ನು ಕಳೆದುಕೊಂಡೆವು. ಎಲ್ಲಿ ಜಾರಿತೋ ಮನವು ಎಂಬ ಭಾವ ತುಂಬಿದ ಕವಿತೆಯಲ್ಲಿ ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು ಯಾರೋ ನೀರೆ ಎಂಬ ಸಾಲುಗಳನ್ನು ಸುಲೋಚನಾ ಅವರ ಧ್ವನಿಯಲ್ಲಿ ಕೇಳಿದಾಗ, ಇಂದಿಗೂ ನಮ್ಮ ಮನಸ್ಸೊಮ್ಮೆ ಜಾರಿ ಹೋಗುವುದು.
ಮೀರಾ ಭಜನ್ ಮತ್ ಜಾ ಮತ್ ಜಾ ಜೋಗಿ ಹಾಡನ್ನು ತೊರೆದು ಹೋಗದಿರು ಜೋಗಿ , ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ ಈ ಹಾಡುಗಳೆ ಅನುವಾದಿತವಾದರೂ, ಅದರ ಸುಳಿವೂ ಸಿಗದಂತೆ ತನ್ನ ಛಾಪನ್ನು ಮೂಡಿಸಿವೆ. ಇವೆ ನಮ್ಮ ಅಂತರಂಗದ ಕದವ ತಟ್ಟುವ ಹಾಡುಗಳು. ಆಗೆ ಈಗಿನಂತೆ ಗೂಗಲಮ್ಮ, ಸಿಡಿ ಎಲ್ಲಾ ಇರಲಿಲ್ಲ.
ಹಳ್ಳಿಯಲ್ಲಿನ ನಮ್ಮ ಮನೆಯ ಪಕ್ಕದ ಮನೆಯಲ್ಲಿ ರೇಡಿಯೋದಲ್ಲಿ ಎಲ್ಲಿ ಜಾರಿತೋ ಮನವು ಎಂಬ ಹಾಡನ್ನು ಕೇಳಿದಾಗ ಅದನ್ನು ಬರೆದು ಕೊಳ್ಳಲು ಪಾಗಾರ ಕಟ್ಟೆ ಹಾರಿ ಓಡಿ ಹೋಗಿ ಬಿದ್ದದ್ದು ಇಂದಿಗೂ ನೆನಪಿದೆ. ಒಮ್ಮೊಮ್ಮೆ ಆ ಹಾಡು
ಬಂದಾಗಲೂ ಎರಡೆರಡು ಸಾಲನ್ನು ಮಾತ್ರ ಬರೆದುಕೊಂಡು, ಕೊನೆಗೊಮ್ಮೆ ಪೂರ್ತಿ ಹಾಡು ಸಿಕ್ಕಿದಾಗ ಏನೋ ದೊಡ್ಡ ಸಾಧನೆ ಮಾಡಿದ ಖುಷಿ ಆಗಿತ್ತು. ಇಂದಿಗೂ ಜನಮಾನಸದಲ್ಲಿ ಅವರ ಹಾಡುಗಳು ಮೆರೆಯುತ್ತಿವೆ.
ಅವು ಎಂದೆಂದಿಗೂ ನವ ನವೀನ ಭಾವವನ್ನು ಹೊಮ್ಮಿಸುವ ಕವನಗಳು. ಅವರ ಸಮಕಾಲೀನರಾದ ಕೆ.ಸಿ. ಶಿವಪ್ಪನವರು, 1970-80 ದಶಕದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಭಟ್ಟರ ಒಡನಾಟವನ್ನು ನೆನಪಿಸಿಕೊಂಡು, ಅವರು ಉತ್ತಮ ವಾಗ್ಮಿ, ಕನ್ನಡ ಗೀತೆಗಳ ಧ್ವನಿಸುರುಳಿಗೊಂದು ವಿಶಿಷ್ಟ ಆಯಾಮ ತಂದುಕೊಟ್ಟ ಮೇರು ಪ್ರತಿಭೆ, ಸೂಕ್ಷ್ಮ ಸಂವೇದನೆಯ ಕವಿ ಎಂದು, ಅವರ ಅಗಲಿಕೆಗೆ ತಮ್ಮ ಮನದ ನೋವನ್ನು ವ್ಯಕ್ತಪಡಿಸಿದರು. ಈ ಆಗಸ, ಈ ತಾರೆ, ಝುಳಝುಳನೆ ಹರಿವ ಜಲಧಾರೆ, ಮುಗಿಲ ಮಲೆಯ ಸಾಲೇ ಎಂದು ಮಲೆನಾಡಿನ ಸೊಬಗನ್ನು ಕಣ್ಣ ಮುಂದಿರಿಸಿ, ತಾವು ಹಿಂದೆ ಸರಿದು, ನಮ್ಮ ಮನದಾಳವನ್ನು ಆರ್ದ್ರ ಗೊಳಿಸಿದ ಕವಿಗಿದೋ ನಮ್ಮ ನುಡಿನಮನ.