Thursday, 12th December 2024

ನೆಮ್ಮದಿಯ ನಾಳೆಗಳಿಗೆ ನದಿಗಳನ್ನು ಇಂದೇ ರಕ್ಷಿಸೋಣ

ತನ್ನಿಮಿತ್ತ

ಗುರುರಾಜ ಎಸ್‌.ದಾವಣಗೆರೆ 

ಮಾರ್ಚ್ 14, ನದಿಗಳ ಕುರಿತು ಯೋಚಿಸಿ ಕಾರ್ಯ ಪ್ರವೃತ್ತವಾಗಬೇಕಾದ ದಿನ. ನಾಗರಿಕತೆಯ ಜತೆ ಬದುಕನ್ನೂ ನೀಡಿ
ತಲೆಮಾರುಗಳನ್ನು ಪೋಷಿಸಿದ ನದಿಗಳ ಸ್ಥಿತಿ ಚೆನ್ನಾಗಿಲ್ಲ. ನೀರಿನ ಹಂಚಿಕೆಗಾಗಿ ರಾಜ್ಯಗಳ ನಡುವೆ ಮುಗಿಯದ ಯುದ್ಧಗಳಿವೆ.

ಕಾನೂನು ಹೋರಾಟ ಶುರುವಾಗಿ ಅರ್ಧ ಶತಮಾನಗಳೇ ಕಳೆದಿದ್ದರೂ ಒಮ್ಮತದ ನಿರ್ಧಾರ ಸಾಧ್ಯವಾಗಿಲ್ಲ. ಏರುತ್ತಿರುವ ಜನಬಾಹುಳ್ಯ, ಜನ – ಜಾನುವಾರು, ಕೈಗಾರಿಕೆಗಳು ಎಸೆಯುತ್ತಿರುವ ತ್ಯಾಜ್ಯ ನೇರ ನದಿಗೇ ಸೇರಿ ದೇಶದ ಅರ್ಧಕ್ಕೂ ಹೆಚ್ಚು ನದಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ನದಿಗಳ ಶುದ್ಧೀಕರಣ, ನದಿ ಚೋಡಣೆ, ಆಣೆಕಟ್ಟು ನಿರ್ಮಾಣದಂಥ ಯೋಜನೆಗಳಿಗೆ
ಲಕ್ಷಾಂತರ ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿರುವ ಸರಕಾರಗಳು ಅಂದುಕೊಂಡ ಗುರಿ ತಲುಪಲಾಗದೆ ಒದ್ದಾಡುತ್ತಿವೆ.

ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದೇಶದ ನದಿಗಳ ಜಲಾನಯನ ಪ್ರದೇಶಗಳ ನಿರ್ವಹಣೆಗೆ ಪ್ರಾಽಕಾರ ಸ್ಥಾಪನೆ, ಅಂತರ ರಾಜ್ಯ ನದೀ ನೀರಿನ ತ್ಯಾಜ್ಯ ಬಗೆಹರಿಸಲು ಡಿಸ್ಪ್ಯೂಟ್ ರೆಸಲೂಶನ್ ಕಮಿಟಿ (BSA) ರಚನೆ ಮತ್ತು ಅಣೆಕಟ್ಟುಗಳ ಮೇಲಿನ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ವರ್ಗಾಯಿಸುವ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಕಳೆದ ಆಗಸ್ಟ್ ನಲ್ಲಿ ಮಂಡಿಸಿ ಚರ್ಚೆಗೆ ಮುಂದಾಯಿತು.

ಸಂವಿಧಾನದ ಪ್ರಕಾರ ನದಿಯ ಅಧಿಕಾರ ರಾಜ್ಯದ್ದೇ ಎಂದಿರುವಾಗ ರಾಜ್ಯಗಳ ಬಳಿಯೇ ಇರಲಿ ಎಂದು ಕೆಲವರು ವಾದಿಸಿದರು.
ರಾಜ್ಯ ಸರಕಾರಗಳು ಮನಬಂದಂತೆ ಆಡಿ ಹಠ ಹಿಡಿಯುತ್ತವೆ. ಆದ್ದರಿಂದ ನದಿಗಳ ಮೇಲಿನ ಅಧಿಕಾರ ಕೇಂದ್ರದ ಬಳಿ ಇರಲಿ ಎಂದು ರಾಜ್ಯಸಭೆಯಲ್ಲಿ ಹಲವು ನಾಯಕರು ವಾದಿಸಿದರು. ಗಲಾಟೆಯಾದಾಗಲೆಲ್ಲ ಕೇಂದ್ರ ಮಧ್ಯ ಪ್ರವೇಶಿಸಿ ಬಗೆ ಹರಿಸಲು ಪ್ರಯತ್ನಿಸುತ್ತಿರುವುದರಿಂದ ನೀರು ಹಂಚಿಕೆ ಮತ್ತು ನದಿಗಳ ಮೇಲಿನ ಅಧಿಕಾರ ರಾಜ್ಯಗಳ ಬಳಿಯೇ ಇರಲಿ ಎಂಬ ಅಭಿಪ್ರಾಯ
ಲೋಕಸಭೆಯಲ್ಲಿ ವ್ಯಕ್ತವಾಯಿತು. ಅಂತರರಾಜ್ಯ ನದಿ ವ್ಯಾಜ್ಯ ಬಂದಾಗ ಒಂದು ವರ್ಷದಲ್ಲಿ ಟ್ರಿಬ್ಯುನಲ್ ನೇಮಿಸುವ ಅಧಿಕಾರ ಕೇಂದ್ರಕ್ಕಿದೆ ಮತ್ತು ಟ್ರಿಬ್ಯುನಲ್‌ಗಳು ಐದು ವರ್ಷದ ಅವಧಿಯಲ್ಲಿ ವ್ಯಾಜ್ಯ ಬಗೆಹರಿಸಬೇಕೆಂದು ಸರಕಾರಿ ಕಮಿಷನ್ ಹೇಳುತ್ತದೆ.

ಈಗ ಮಂಡನೆಯಾಗಿರುವ ಮಸೂದೆಯ ಪ್ರಕಾರ ರಾಜ್ಯ ಸರಕಾರ ವ್ಯಾಜ್ಯವನ್ನು ಕೇಂದ್ರದ ಬಳಿ ತರದೇ ಇದ್ದರೂ, ಕೇಂದ್ರ  ಸರಕಾರ ತನ್ನ ಅಧಿಕಾರ ಬಳಸಿ ಸ್ವಯಂ ನಿರ್ಧರಿಸಿ ಟ್ರಿಬ್ಯುನಲ್ ನೇಮಿಸಬಹುದು. ಹಾಗಾಗಿ ಈಗಿನ ವ್ಯವಸ್ಥೆಯೇ ಮುಂದುವರಿ ಯಲಿ ಎಂಬುದಾಗಿ ಅನೇಕರು ಪಟ್ಟು ಹಿಡಿದರು. ಖಾಸಗಿ ಅಣೆಕಟ್ಟುಗಳ ಬೇಕಾಬಿಟ್ಟಿ ವರ್ತನೆಗೆ ಕಡಿವಾಣ ಹಾಕುವ ಮಾತೂ ಅಲ್ಲಿತ್ತು. ಭಾರತದ ನಾಲ್ಕು ಸಾವಿರ ನದಿಗಳಲ್ಲಿ ಅರ್ಧದಷ್ಟು ಸುಸ್ಥಿತಿಯಲಿಲ್ಲ. ದೊಡ್ಡ ನದಿಗಳಾದ ಗಂಗಾ, ಮಹಾನದಿ, ನರ್ಮದಾ, ಬ್ರಹ್ಮಪುತ್ರ, ಕೃಷ್ಣಾ, ಕಾವೇರಿ, ಗೋದಾವರಿಗಳ ಮೇಲೆ ಜನಬಾಹುಳ್ಯದ ದೊಡ್ಡ ಒತ್ತಡವಿದೆ.

ಹಲವು ನದಿಗಳು ಮಲಿನಗೊಂಡಿವೆ. ಪಾಪ ತೊಳೆಯುವ ಗಂಗೆಯನ್ನೇ ತೊಳೆಯಲು ಸಾವಿರಾರು ಕೋಟಿ ವ್ಯಯವಾಗುತ್ತಿದೆ. ಯಮುನಾ ನದಿಯ ನೀರು ಶುದ್ಧೀಕರಿಸಿದ ನಂತರವೂ ಕುಡಿಯಲು, ಕೃಷಿಗೆ ಬಳಸಲು ಆಗದಷ್ಟು ಮಲಿನಗೊಂಡಿದೆ. ಇತ್ತ ಕರ್ನಾಟಕದಲ್ಲಿ ಲಕ್ಷಣತೀರ್ಥ, ಆರ್ಕಾವತಿ, ಮಲಪ್ರಭ, ತುಂಗಭಧ್ರ, ಕಾವೇರಿ, ಕಾಳಿ, ಕಾಗಿನ, ಕೃಷ್ಣ, ಭದ್ರಾ, ಯಗಚಿ, ಶಿಂಷಾ, ನೇತ್ರಾವತಿ, ಕುಮಾರಧಾರ, ಭೀಮಾ, ತುಂಗಾ, ಕಬಿನಿ ನದಿಗಳ ಅತ್ಯಂತ ಕಲುಷಿತವಾದ 17 ಭಾಗಗಳನ್ನು ಗುರುತಿಸಿರುವ
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಹೀಗೇ ಮುಂದುವರಿದರೆ ನದಿಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಹಾಗೆಯೇ ದೇಶಾದ್ಯಂತ 351 ಅತ್ಯಂತ ಕಲುಷಿತ ನದಿ ಭಾಗಗಳೂ ಪಟ್ಟಿಯಲ್ಲಿವೆ. ಇವುಗಳ ನೀರಿನ ಬಿಓಡಿ (ಬಯಾಲಾಜಿಕಲ್ ಆಕ್ಸಿಜನ್ ಡಿಮ್ಯಾಂಡ್) ಲೀಟರ್‌ಗೆ 3 ಮಿಲಿಗ್ರಾಂ ನಷ್ಟಿದ್ದು ನೀರು ಕುಡಿಯಲು ಯೋಗ್ಯವಾಗಿಲ್ಲ. ಶುದ್ಧ ಕುಡಿಯುವ ನೀರಿನ ಬಿಓಡಿ ಲೀಟರಿಗೆ 2 ಮಿಲಿಗ್ರಾಂ ಇರಬೇಕು. ಲಕ್ಷ್ಮಣ ತೀರ್ಥ, ಅರ್ಕಾವತಿ, ಮಲಪ್ರಭ ಮತ್ತು ತುಂಗಭದ್ರ ನದಿಗಳ ನೀರಿನ ಬಿಓಡಿ ಲೀಟರಿಗೆ 10 ರಿಂದ 20 ಮಿಲಿಗ್ರಾಂನಷ್ಟಿದೆ.

ಗುರುತಿಸಿರುವ 17 ಮಾಲಿನ್ಯಯುಕ್ತ ನದಿ ಭಾಗಗಳು ವ್ಯಾಪಕ ನಗರಿಕರಣ, ಔದ್ಯೋಗೀಕರಣ, ಜನಸಂಖ್ಯೆಯ ಹೆಚ್ಚಳದಿಂದ ತತ್ತರಿಸಿ ಹೋಗಿವೆ. ಗೃಹ, ಕಾರ್ಖಾನೆ, ಕೃಷಿ, ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ಪುರಸಭೆ / ನಗರ ಸಭೆಗಳ ಘನ ತ್ಯಾಜ್ಯವೆಲ್ಲ ನೇರ ನದಿಗಳಿಗೇ ಸೇರಿ ನದಿಗಳ ಆರೋಗ್ಯವೂ ಏರುಪೇರಾಗಿದೆ. ಅನಿಯಂತ್ರಿತ ನಗರೀಕರಣ ನದಿ ನೀರಿನ ಭೌತಿಕ, ರಸಾಯನಿಕ ಮತ್ತು ಜೈವಿಕ ಸ್ವರೂಪ ಗಳನ್ನೇ ಹಾಳುಗೆಡವಿದೆ. ಜಲಾನಯನ ಪ್ರದೇಶಗಳ ಜೀವ ವೈವಿಧ್ಯದಲ್ಲಾಗುವ ಬದಲಾವಣೆಗಳು ನದಿಯ ಸ್ವರೂಪದ ಮೇಲೆ ಗಂಭೀರ ಪರಿಣಾಮಗಳನ್ನುಂಟು ಮಾಡಿವೆ.

ನಗರ ಪ್ರದೇಶಗಳಿಗಂಟಿಕೊಂಡಿರುವ ನದಿಗಳ ನೀರಿನಲ್ಲಿ ಅತಿಕ್ಷಾರತೆ, ಭಾರದ ಲೋಹ, ನೈಟ್ರೇಟ್ ಅಂಶ, ಆಮ್ಲೀಕರಣ, ಬಿಓಡಿ ಮತ್ತು ಸಿಓಡಿ (ಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್), ಸಾವಯವ ಮಾಲಿನ್ಯಕಾರಕಗಳು ಅತೀ ಹೆಚ್ಚಿನ ಪ್ರಮಾಣದಲ್ಲಿರುವುದು ಪತ್ತೆಯಾಗಿದೆ. ಪ್ರತೀ ದಿನ ನದಿಗಳ ಮೇಲಿನ 42 ನಗರ ಪ್ರದೇಶಗಳಿಂದ 88.5 ಕೋಟಿ ಲೀಟರ್‌ನಷ್ಟು ತ್ಯಾಜ್ಯ ನೀರು ಉತ್ಪತ್ತಿ ಯಾಗುತ್ತದೆ. ಇದರಲ್ಲಿ66.5 ಕೋಟಿ ಲೀಟರ್‌ನಷ್ಟು ತ್ಯಾಜ್ಯ ನೀರನ್ನು ಎಸ್‌ಟಿಪಿಗಳ ಮೂಲಕ ಶುದ್ಧೀಕರಿಸಲಾಗುತ್ತದೆ. ಉಳಿದ 22 ಕೋಟಿ ಲೀಟರ್ ಹೊಲಸು ನೀರು ನದಿಗಳಿಗೆ ನೇರವಾಗಿ ಸೇರುತ್ತದೆ.

ಅಲ್ಲದೆ ಪ್ರತಿ ದಿನ 1860.7 ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅದರಲ್ಲಿ 1670 ಟನ್ ತ್ಯಾಜ್ಯ ಸಂಗ್ರಹಗೊಂಡು ಕೇವಲ 844 ಟನ್ ಸಂಸ್ಕರಣಗೊಳ್ಳುತ್ತದೆ. ಉಳಿದದ್ದು ನದಿಗಳ ಜಲಾನಯನ ಪ್ರದೇಶಗಳಿಗೆ ಹೋಗಿ ಶೇಖರಣೆಗೊಂಡು ನೀರನ್ನು ವಿಷಮಯಗೊಳಿಸುತ್ತದೆ. ಈ ಅವಘಡವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹದಿನೇಳೂ ಜಾಗಗಳ ಮೇಲೆ ತೀವ್ರ ನಿಗಾವಹಿಸಿದ್ದು ನೀರಿನ ಕ್ಷಾರತೆ, ಕರಗಿರುವ ಆಮ್ಲಜನಕ, ಬಿಓಡಿ, ಮಲದ ಬ್ಯಾಕ್ಟೀರಿಯ ಮತ್ತು ಇತರ ರೋಗಕಾರಕ ಬ್ಯಾಕ್ಟೀರಿಯಗಳ ಪ್ರಮಾಣವನ್ನು ಸತತವಾಗಿ ಅಳತೆ ಮಾಡಿ ಬೇಕಾದ ಕ್ರಮಕ್ಕೆ ಮುಂದಾಗಿದೆ.

ನದಿ ಪುನಶ್ಚೇತನ ಯೋಜನೆಯ ಅಡಿಯಲ್ಲಿ ಹೆಚ್ಚುವರಿಯಾಗಿ 44 ತ್ಯಾಜ್ಯ ಸಂಸ್ಕರಣೆ ಘಟಕ (TUP)ಗಳನ್ನು ಸ್ಥಾಪಿಸಿ ೩೪
ಕೋಟಿ ಲೀಟರ್ ತ್ಯಾಜ್ಯವನ್ನು ಪ್ರತಿನಿತ್ಯ ಶುದ್ಧೀಕರಿಸುವ ಯೋಜನೆ ಹಮ್ಮಿಕೊಂಡಿದೆ. ಬೆಂಗಳೂರು, ಟಿ ನರಸೀಪುರ,
ರಾಮದುರ್ಗ, ಶಿವಮೊಗ್ಗ, ದಾಂಡೇಲಿ, ಬೆಳ್ತಂಗಡಿ, ಅಯ್ನಾಪುರ, ಸೌದತ್ತಿಗಳಲ್ಲಿ ಈ ಘಟಕಗಳು ತಲೆ ಎತ್ತಲಿವೆ. ವಾಯುಗುಣ ತುರ್ತು ಪರಿಸ್ಥಿತಿ ಎದುರಾಗಿರುವ ಪ್ರಸಕ್ತ ದಿನಗಳಲ್ಲಿ ಪ್ರಕೃತಿಯೊಂದಿಗಿನ ನಮ್ಮ ಸಂಬಂಧ ನಾಜೂಕಿನದ್ದೂ, ಅಂತಃಕರಣದ್ದೂ ಆಗಬೇಕಾದ ಅನಿವಾರ್ಯತೆಯಿದೆ. ದೈನಂದಿನ ಅವಶ್ಯಕತೆ ಮತ್ತು ಅಭಿವೃದ್ಧಿಯ ಹೊಡೆತಕ್ಕೆ ಸಿಕ್ಕು ನೈಸರ್ಗಿಕ ಸಂಪತ್ತು ಚಿಂದಿಯಾಗಿ, ಏರುತ್ತಿರುವ ಜನಸಂಖ್ಯೆಗೆ ಉಸಿರಾಡಲು ಶುದ್ಧಗಾಳಿ, ಕುಡಿಯಲು ಶುದ್ಧ ನೀರು ಸಿಗದೆ ಜಗತ್ತೇ ತಲ್ಲಣಿಸುತ್ತಿದೆ.

ಸಮುದ್ರಕ್ಕೆ ಸೇರುವ ಮುಂಚೆಯೇ ಅನೇಕ ನದಿಗಳು ಒಣಗುತ್ತವೆ. ಪ್ರತಿಯೊಂದು ಜೀವಿಯ ಬದುಕಿನ ಮೂಲಾಧಾರವೆನಿಸಿರುವ, ನಾಗರಿಕತೆಗಳನ್ನು ಹುಟ್ಟುಹಾಕಿದ, ಪೋಷಿಸಿ ಮನುಷ್ಯನಿಂದ ವಿಪರೀತ ಒತ್ತಡ ಅನುಭವಿಸುತ್ತಿರುವ ನದಿಗಳಿಗೆ ಸ್ವಚ್ಛ, ಶುದ್ಧ ಹರಿವಿನ ಹಕ್ಕಿಲ್ಲವೆ? ಪವಿತ್ರ ನದಿ ಎಂದು ದಂಡೆಯಲ್ಲಿ ಕೋಟ್ಯಂತರ ಜನರ ಕುಂಭಮೇಳ ನಡೆಸಿ ಕೃತಾರ್ಥರಾಗುತ್ತೇವೆ. ನಮ್ಮ ಪಾಪ ಕಳೆಯುತ್ತದೋ ಇಲ್ಲವೊ? ನದಿಗಳನ್ನು ಮತ್ತಷ್ಟು ಕೊಳೆಮಾಡುತ್ತೇವೆ.

ನದಿಗಳನ್ನು ಜೀವನದಿ ಎಂದು ವರ್ಣಿಸುತ್ತೇವೆ. ಅವುಗಳ ಜೀವವುಳಿದಿದೆಯೆ? ನದಿಗಳು ರಾಷ್ಟ್ರೀಯ ಸಂಪತ್ತು. ದೇಶವೊಂದರ ಪ್ರಜೆಗೆ ನದಿಗಳನ್ನು ಬಳಸುವ ಹಕ್ಕಿರುವಂತೆ ಅವುಗಳನ್ನು ಶುದ್ಧವಾಗಿಡುವ ಜವಾಬ್ದಾರಿಯೂ ಇದೆ. ಇರುವ ನದಿಗಳಿಗೆ ವಿಷವುಣಿಸಿರುವ ನಾವು ಎಂದೋ ಮರೆಯಾದ ಸರಸ್ವತೀ ನದಿಯನ್ನರಸುತ್ತಿದ್ದೇವೆ. ಸಿಕ್ಕರೆ ಅದನ್ನೂ ಹಾಳು ಮಾಡುವುದಿಲ್ಲ ಎಂಬುದಕ್ಕೆ ಗ್ಯಾರಂಟಿ ಇದೆಯಾ? ಅನಾಹುತಗಳಾದಾಗ ಸಾವಿರಾರು ಕೋಟಿ ವ್ಯಯಿಸುವ ಬದಲು ಮುನ್ನೆಚ್ಚರಿಕೆವಹಿಸಿ ನದಿಗಳನ್ನು ರಕ್ಷಿಸಲು ಮುಂದಾಗಬೇಕು.

ನಗರವಾಸಿಗಳಿಗೆ ಕಲುಷಿತ ನೀರು ಹರಿಯುವ ಜಾಗಗಳಿಂದ ಕುಡಿಯುವ ನೀರನ್ನು ಬಳಸುವಂತೆ ತಾಕೀತು ಮಾಡಬೇಕು. ಕೃಷಿಕರು ನೆಲ – ಜಲ ಮಾಲಿನ್ಯ ಗೊಳಿಸುವ ರಸಾಯನಿಕ ಗೊಬ್ಬರದ ಬಳಕೆ ನಿಲ್ಲಿಸಿ ಸಾವಯವ ಕೃಷಿ ಮಾಡಬೇಕು. ಉದ್ಯಮಗಳು ಶುದ್ಧೀಕರಿಸಿದ ನೀರನ್ನಷ್ಟೇ ನದಿಗೆ ಹರಿಸಬೇಕು. ಪಾಲಿಸದ ಉದ್ಯಮಗಳಿಗೆ ಭಾರೀ ದಂಡ ವಿಧಿಸಿ ಜೈಲಿಗೆ ಹಾಕಬೇಕು. ಆಗ ನದಿಯ ಶೋಷಣೆ ನಿಂತು ಅದು ಮೂಲರೂಪ ಪಡೆಯುತ್ತದೆ.

ದೇಶದ ನಲವತ್ತು ಬೃಹತ್ ನಗರಗಳು ನದಿ ಪಾತ್ರದ ಮೇಲೆಯೇ ನಿಂತಿವೆ. ದೆಹಲಿಗೆ ಯಮುನ, ಬೆಂಗಳೂರಿಗೆ ವೃಷಭಾವತಿ, ಹೈದ್ರಾಬಾದ್‌ಗೆ ಮುಸಿ, ಲಕ್ನೋಗೆ ಗೋಮತಿ, ಚೆನ್ನೆ ಗೆ ಅಡ್ಯಾರ್, ಕೋಲ್ಕತಾಗೆ ಹೂಗ್ಲಿ, ಕಾಶಿಗೆ ಗಂಗೆ, ಅಲಹಾಬಾದ್ ಗೆ ತ್ರಿವೇಣಿ ಸಂಗಮ, ಕಾರವಾರಕ್ಕೆ ಕಾಳಿ, ಮಂಗಳೂರಿಗೆ ನೇತ್ರಾವತಿ, ಶಿವಮೊಗ್ಗಕ್ಕೆ ತುಂಗ, ಹೊಸಪೇಟೆಗೆ ತುಂಗಭದ್ರ, ಹೊನ್ನಾವರಕ್ಕೆ ಶರವಾತಿಗಳೇ ಜೀವನಾಡಿಗಳು. ಇವನ್ನೆಲ್ಲ ಸುಸ್ಥಿತಿಯಲ್ಲಿಡಲೇಬೇಕು.