ತಿಳಿರುತೋರಣ
ಶ್ರೀವತ್ಸ ಜೋಶಿ
ಅಮೆಝಾನ್ ಮತ್ತಿತರ ಮಳಿಗೆಗಳಲ್ಲಿ ಮಾರಾಟವಾಗುವ ವಸ್ತುಗಳ ಜಾಹಿರಾತುಗಳು ಫೇಸ್ಬುಕ್ ನಲ್ಲಿ, ಬೇರೆಲ್ಲ ವೆಬ್ ಪುಟಗಳಲ್ಲೂ ಇಣುಕುತ್ತಿರುವುದು ಹೊಸ ವಿಚಾರವೇನಲ್ಲ. ನೀವೂ ಗಮನಿಸಿಯೇ ಇರುತ್ತೀರಿ.
ಅಲ್ಲದೇ, ಕದ್ದಾಲಿಸುವಿಕೆಯನ್ನೇ ಕಾಯಕ ಮಾಡಿಕೊಂಡಿರುವ ಸ್ಮಾರ್ಟ್ಫೋನ್ಗಳೂ, ಅಲೆಕ್ಸಾಳಂಥ ಧ್ವನಿಸೇವಕ – ಸೇವಕಿ ಯರೂ ಇರುವಾಗ ಮನೆಮಂದಿಯ ಮಾತಿನಲ್ಲಿ ಏನೋ ಸುಮ್ಮನೆ ಒಂದು ವಸ್ತುವಿನ ಹೆಸರು ಬಂದರೆ ಸಾಕು, ಆಮೇಲೆ ಫೇಸ್ ಬುಕ್ನಲ್ಲಿ ಮತ್ತೆಮತ್ತೆ ಅದರದೇ ಜಾಹಿರಾತು! ಈ ಅನುಭವವೂ ನಮಗೆಲ್ಲ ಆಗಿರುವಂಥದ್ದೇ. ಮೊದಮೊದಲು ಸೋಜಿಗವೆನಿಸಿ ಈಗ ಕಿರಿಕಿರಿಯೆನಿಸುವ ಹಂತವನ್ನು ತಲುಪಿಯೂ ಆಗಿದೆ.
ಆದರೇನು ಮಾಡೋಣ, ಉಚಿತ ಸೇವೆಗಳನ್ನು ಆನಂದಿಸಲು ಜಾಹಿರಾತುಗಳನ್ನು ಸಹಿಸಿಕೊಳ್ಳಲೇ ಬೇಕು. ಇನ್ನು, ಅಮೆಝಾನ್ ನಲ್ಲಂತೂ ಏನು ಸಿಗುತ್ತದೆ ಏನು ಸಿಗುವುದಿಲ್ಲ ಅಂತಾಗಬೇಕೇ. ಎ ಇಂದ ಝೆಡ್ಗೆ ಬಾಣ ಎಳೆದಿರುವುದೇ ಎ-ಟು-ಝೆಡ್ ಎಲ್ಲ ಸಿಗುತ್ತದೆ ಎಂಬ ಅರ್ಥದಲ್ಲಿ. ಆದ್ದರಿಂದಲೇ ಜಾಹಿರಾತುಗಳ ಸುರಿಮಳೆ. ಹಾಗೆ ಮೊನ್ನೆ ಒಂದು ದಿನ ಫೇಸ್ಬುಕ್
ನೋಡುತ್ತಿರಬೇಕಾದರೆ ಒಂದು ಅಮೆಝಾನ್ ಜಾಹಿರಾತು ಕಣ್ಣಿಗೆ ಬಿತ್ತು.
Indian Spice Box For Kitchen ಎಂಬ ವಿವರಣೆ, ಜೊತೆಗೊಂದು ಒಗ್ಗರಣೆ ಡಬ್ಬಿಯ ಚಿತ್ರ. ಅದೇ – ನಮ್ಮ ನಿಮ್ಮ ಅಡುಗೆ ಮನೆಗಳ ಅವಿಭಾಜ್ಯ ಅಂಗವಾದ ಒಗ್ಗರಣೆ ಡಬ್ಬಿ ಅಥವಾ ಮಸಾಲೆ ಡಬ್ಬಿ. ಟಿಪಿಕಲ್ ಒಂದು ಹತ್ತಿಂಚು ವ್ಯಾಸದ ಸ್ಟೀಲ್ ಡಬ್ಬದಲ್ಲಿ ಏಳು ಪುಟ್ಟಪುಟ್ಟ ಸ್ಟೀಲ್ ಕಂಟೇನರ್ಗಳು. ಒಂದು ಚಿಕ್ಕ ಚಮಚ. ಆ ಕಂಟೇನರ್ಗಳಲ್ಲಿ ಕೆಂಪುಮೆಣಸು, ಸಾಸಿವೆ, ಜೀರಿಗೆ, ಅರಸಿನವೇ ಮೊದಲಾದ ಮಸಾಲೆ ಪದಾರ್ಥಗಳನ್ನು ತುಂಬಿಸಿದ್ದೂ ಇತ್ತು.
ಬಹುಶಃ ಡಬ್ಬಿಯ ಉಪಯೋಗ ಹೇಗೆ ಎಂದು ತಿಳಿಸುವುದಕ್ಕೆ ಚಿತ್ರದಲ್ಲಿ ಮಾತ್ರ ಹಾಗೆ ತುಂಬಿಸಿದ್ದು. ಆ ಡಬ್ಬಿಯ ಬೆಲೆ ಹತ್ತೋ
ಹನ್ನೆರಡೋ ಡಾಲರ್ ಅಂತಿತ್ತೆಂದು ನೆನಪು. ನಾನು ಸಾಮಾನ್ಯವಾಗಿ ಅಂಥ ಜಾಹಿರಾತುಗಳ ಮೇಲೆ ಕ್ಲಿಕ್ ಮಾಡುವವನಲ್ಲ. ಅವುಗಳ ಪ್ರಲೋಭನೆಗೆ ಒಳಗಾಗುವವನಲ್ಲ. ಆದರೆ ಅಮೆರಿಕದ ಅಮೆಝಾನ್ ಡಾಟ್ ಕಾಮ್ ಇ-ಮಳಿಗೆಯಲ್ಲಿ ಭಾರತದ ಒಗ್ಗರಣೆ ಡಬ್ಬಿಯ ವಿವರಗಳು ಏನಿರಬಹುದು ನೋಡೋಣ ಅಂತೊಂದು ಕುತೂಹಲ ಮೂಡಿತು. ಸರಿ, ಚಿತ್ರದ ಮೇಲೆ ಕ್ಲಿಕ್ಕಿಸಿದ್ದಾಯ್ತು.
ಹೊಸ ಪುಟ ತೆರೆದುಕೊಂಡಿತು. ಅಲ್ಲಿ ತರಹೇವಾರಿ ವಿನ್ಯಾಸದ, ಸೈಜಿನ, ಮತ್ತು ಅದಕ್ಕೆ ತಕ್ಕಂತೆ ತರಹೇವಾರಿ ಬೆಲೆಯ ಒಗ್ಗರಣೆ ಡಬ್ಬಿಗಳು ಸಾಲುಸಾಲಾಗಿ ಕಂಗೊಳಿಸುತ್ತಿದ್ದವು. ಹತ್ತಿಪ್ಪತ್ತರಿಂದ ಹಿಡಿದು 50, 60 ಡಾಲರ್ ಬೆಲೆಯವು ಕೆಲವು. ಮತ್ತೂ ಕೆಳಗೆ ಸ್ಕ್ರೋಲ್ ಮಾಡಿದಾಗ 145 ಡಾಲರ್ ಪ್ರೈಸ್ ಟ್ಯಾಗ್ನದೂ ಒಂದು ಕಂಡುಬಂತು. ರೂಪಾಯಿಗಳಲ್ಲಾದರೆ ಸರಿಸುಮಾರು ಹತ್ತುಸಾವಿರದ ಐದುನೂರರಷ್ಟು ಬೆಲೆ!
ಒಗ್ಗರಣೆ ಡಬ್ಬಿ ಸಹ ಬಂಗಾರದ್ದನ್ನೇ ಮಾಡಿ ಮಾರುತ್ತಿದ್ದಾರೋ ಏನು ಕಥೆ ಎಂದು ನೋಡಿದರೆ Premium Heavy Gold Brass Hammered Masala Box ಅಂತಲೇ ಇತ್ತು ಅದರ ಹೆಸರು. ಅಂದರೆ, ಹಿತ್ತಾಳೆಯಿಂದ ಮಾಡಿದ್ದಾದರೂ ಗೋಲ್ಡ್ನದೇ
ಅಂತನ್ನಿಸುವಷ್ಟು ಥಳಥಳಿಸುವ ಸುವರ್ಣ – ಸಂಭಾರ ಡಬ್ಬಿ. ವಿವರಗಳನ್ನು ಓದಿದಾಗ ತಿಳಿದುಬಂದದ್ದಿಷ್ಟು: ಅದನ್ನು
ಅಮೆಝಾನ್ ಡಾಟ್ ಕಾಮ್ ಮಳಿಗೆಗೆ ಸರಬರಾಜು ಮಾಡುತ್ತಿರುವುದು ಹ್ಯಾಂಡ್ಮೇಡ್ ವಿಂಟೇಜ್ ಇಂಡಿಯನ್ ಸ್ಟೋರ್ ಎಂಬ ಅಂಗಡಿ. ಅದು ಇರುವುದು ಭಾರತದಲ್ಲಿ ಮುಂಬಯಿಯಲ್ಲಿ!
‘ವಿಶ್ವಗ್ರಾಮ’ ಕಲ್ಪನೆ ಅಂದರೆ ಇದೇ ಅಲ್ಲವೇ? ಆಗಲೇ ಹೇಳಿದಂತೆ ನಾನೇನೂ ಒಗ್ಗರಣೆ ಡಬ್ಬಿ ಕೊಳ್ಳಲಿಕ್ಕೆಂದು ವೆಬ್ ಶಾಪಿಂಗ್ ಮಾಡಿದ್ದಲ್ಲ. ಇಲ್ಲಿ ನಮ್ಮ ಅಡುಗೆಮನೆಯಲ್ಲಿ, ಇಪ್ಪತ್ತು ವರ್ಷಗಳ ಹಿಂದೆ ಈ ದೇಶಕ್ಕೆ ಬರುವಾಗ ಬೆಂಗಳೂರಿಂದಲೇ ತಂದಿದ್ದ ಮಾಮೂಲಿ ಒಗ್ಗರಣೆ ಡಬ್ಬಿ, ಸ್ಟೀಲ್ನದು ನಿರಂತರ ಸೇವೆ ಒದಗಿಸುತ್ತ ಬಂದಿದೆ. ಅದೇ ಸಾಕು ನಮಗೆ. ಆದರೆ, ಜಾಹಿರಾತಿನ ಮೇಲೆ ಕ್ಲಿಕ್ಕಿಸಿದ್ದರಿಂದಾಗಿ ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯ್ತು. ಗೋಲ್ಡ್ ಕೋಟೆಡ್ ಸ್ಪೈಸ್ ಬಾಕ್ಸೂ ಇರುತ್ತದೆಯೆಂಬ ಜ್ಞಾನವಂತೂ ಸಿಕ್ಕಿತು.
ಜೊತೆಯಲ್ಲೇ, ಒಗ್ಗರಣೆ ಡಬ್ಬಿಯ ಅಗಾಧತೆಯ ಹಲವಾರು ಅಂಶಗಳು, ಅದರಲ್ಲಿ ತುಂಬಿಸಲ್ಪಡುವ ಮಸಾಲೆಗಳಂತೆಯೇ
ತರಹೇವಾರಿಯಾದಂಥವು, ಮನಸ್ಸಿನಲ್ಲೊಮ್ಮೆ ಸುಳಿದುಹೋದವು. ‘ಒಗ್ಗರಣೆ ಡಬ್ಬಿ ಮುಗಿಲಿಕ್ಕೆ ಬಂದದ…’ ಅಂತೊಂದು
ಹಾಸ್ಯಲಹರಿ, ಕೆಲ ವರ್ಷಗಳ ಹಿಂದೆ ಅಪರಂಜಿ ಮಾಸಪತ್ರಿಕೆಯಲ್ಲಿ ಓದಿದ್ದು ನೆನಪಾಯಿತು. ಅದನ್ನು ಬರೆದವರು ಪ್ರಶಾಂತ ಅಡೂರ. ಕುಟ್ಟವಲಕ್ಕಿ, ಗಿರ್ಮಿಟ್ ಮುಂತಾಗಿ ಬಾಯಿಯಲ್ಲಿ ನೀರೂರಿಸುವ ಹೆಸರುಗಳೊಂದಿಗೆ ಧಾರ್ವಾಡ್ ಭಾಷಾದಾಗ ಭಾಳ ಛಲೋತ್ನಾಗಿ ಹಾಸ್ಯರಸಾಯನ ಹರಿಸುವ ನನ್ನಿಷ್ಟದ ಲೇಖಕ. ನನ್ನ ಸಂಗ್ರಹದಲ್ಲಿದ್ದ ಆ ಒಗ್ಗರಣೆ ಬರಹದ ಆರಂಭದ ಸ್ವಲ್ಪ
ಭಾಗವನ್ನು ಯಥಾವತ್ತಾಗಿ ಎತ್ತಿಕೊಂಡರೆ ಅಪರಂಜಿ ಪತ್ರಿಕೆಯವರಾಗಲೀ ಅಡೂರರಾಗಲೀ ನನ್ನ ಮೇಲೆ ಕ್ರಮ ಕೈಗಳೊಳ್ಳಲು ಮುಂದಾಗಲಾರರೆಂಬ ವಿಶ್ವಾಸದಿಂದ ಇಲ್ಲಿ ಸೇರಿಸಿದ್ದೇನೆ.
ಧಾರ್ವಾಡ್ ಕನ್ನಡದ ಸೊಗಡನ್ನು ಸವಿಯಲಿಕ್ಕೆ, ಮತ್ತು ಒಗ್ಗರಣೆ ಡಬ್ಬಿಯದೊಂದು ಒಪ್ಪವಾದ ಚಿತ್ರಣಕ್ಕಾಗಿ ನೀವೂ ಒಮ್ಮೆ ಓದಿ ಆನಂದಿಸಿ: ‘ನಾ ಮನಿಗೆ ಹೊಟ್ಟಿ ಹಸಗೊಂಡ ಬಂದ ‘ಅವ್ವಾ, ಲಗೂನ ತಾಟ ಹಾಕ, ನಂಗೆ ಹೊಟ್ಟಿ ಭಾಳ ಹಸ್ತದ’ ಅಂದರೆ ನಮ್ಮವ್ವ ‘ಒಂದು ಹತ್ತ ನಿಮಿಷ ತಡಿ. ಅನ್ನ ಆಗೇದ ತವಿಗೊಂದ ಒಗ್ಗರಣೆ ಹಾಕಿದರ ಮುಗದ ಹೋತ’ ಅನ್ನೋಕಿ. ಇದ ದಿವಸಾ
ಮಧ್ಯಾಹ್ನದ ಕಥಿ. ನಾ ಹೊಟ್ಟಿ ಹಸಗೊಂಡ ಬಂದರ ಒಂದ ದಿವಸ ಸಾರ ಮಳ್ಳಲಿಕತ್ತದ ತಡಿ, ಮತ್ತೊಂದ ದಿವಸ ಹುಳಿ
ಕುದಿಲಿಕ್ಕತ್ತದ ತಡಿ ಅನ್ನೋಕಿ. ಆಮ್ಯಾಲೆ ನಾ ‘ಯಾಕ ನಾ ಬರೋಕಿಂತ ಮೊದ್ಲ ಮಾಡಲಿಕ್ಕೆ ಬರಂಗಿಲ್ಲೇನ?’ ಅಂದರ
‘ಒಂದ ಹತ್ತ ನಿಮಿಷ ತಡಿಯೋ. ಕುದುರೆ ಏರಿ ಬರ್ತಿ ನೋಡ.
ಒಗ್ಗರಣೆ ಡಬ್ಬಿ ಮುಗಿಲಿಕ್ಕೆ ಬಂದದ ತಡಿ’ ಅನ್ನೋಕಿ. ಒಗ್ಗರಣೆ ಡಬ್ಬಿ ಮುಗಿಲಿಕ್ಕೆ ಬಂದದಂತ? ಯಾರದರ ಮನ್ಯಾಗ ಒಗ್ಗರಣೆ
ಮುಗಿಯೋದ ಕೇಳಿರೇನ? ನಮ್ಮ ಮನ್ಯಾಗ ದಿವಸಾ ಮುಗಿತದ. ಇಕಿ ಹತ್ತ ನಿಮಿಷ ತಡಿ ಅಂದಿದ್ದ ತವಿಗೆ ಒಗ್ಗರಣೆ ಹಾಕಲಿಕ್ಕೆ ಅಲ್ಲ. ಆ ‘ಝೀ ಕನ್ನಡಾ’ ಟಿ.ವಿ ಒಳಗಿನ ಒಗ್ಗರಣೆ ಡಬ್ಬಿ ಧಾರಾವಾಹಿ ಮುಗಿಸಿ ಆಮ್ಯಾಲೆ ತವಿಗೆ ಒಗ್ಗರಣೆ ಹಾಕಲಿಕ್ಕೆ. ದಿನಂಪ್ರತಿ ಇದ ಹಣೇಬರಹ. ಕರೆಕ್ಟ ನಾ ಮನಿಗೆ ಮಧ್ಯಾಹ್ನ ಬರೋದಕ್ಕು ಆ ಒಗ್ಗರಣೆ ಡಬ್ಬಿ ಧಾರಾವಾಹಿ ಮುಗಿಲಿಕ್ಕೆ ಬಂದಿರತದ. ನಮ್ಮವ್ವ ಅದನ್ನ ಮುಗಿಸಿನ ತವಿ ಇಲ್ಲಾ ಸಾರಿಗೆ ಒಗ್ಗರಣೆ ಹಾಕಲಿಕ್ಕೆ ಡಬ್ಬಿ ತೆಗೆಯೋಕಿ.
ಯಾರರ ಮಂದಿ ನೋಡಿದರ ಪಾಪ ನಮ್ಮವ್ವಗ ಒಗ್ಗರಣೆ ಹಾಕಲಿಕ್ಕೆ ಬರಂಗಿಲ್ಲಾ, ಟಿ.ವಿ ಒಳಗ ನೋಡೆ ಒಗ್ಗರಣೆ ಹಾಕತಾಳ
ಅನ್ಕೋಬೇಕ. ಹಂಗ ಅಕಸ್ಮಾತ ಏನರ ನಾ ಭಾಳ ಅವಸರಾ ಮಾಡೀದೆ ಅಂದ್ರ ಒಂದನೇ ಸರತೆ ಅನ್ನಕ್ಕ ಹಾಲು ಮಸರ
ಹಾಕಿ ಬಿಡ್ತಾಳ. ಇನ್ನ ಆ ಒಗ್ಗರಣೆ ಡಬ್ಬಿ ಒಳಗ ಏನರ ಇಂಟರಿಸ್ಟಿಂಗ ಐಟಮ್ ಇದ್ದರ ಮುಗದಹೋತ ಆಕಿ ಮಾಡಿದ್ದ ಭಜ್ಜಿ, ಪಲ್ಯಾ ಫ್ರಿಡ್ಜನಾಗ ಹಂಗ ಇರತಾವ, ಊಟಕ್ಕ ಬಡಸೋದ ಹಾಕೋದ ಮರತ ಬಿಟ್ಟಿರತಾಳ. ಈ ಸುಡಗಾಡ ಧಾರಾವಾಹಿ ನೋಡೊದರಾಗ ಆಕಿ ಮರತ ಮರಿತಾಳ.’ ಪ್ರಶಾಂತ ಅಡೂರ ಬರೆದದ್ದು ‘ಒಗ್ಗರಣೆ ಡಬ್ಬಿ’ ಎಂಬ ಟಿ.ವಿ.ಧಾರಾವಾಹಿ ಅಡುಗೆ ಶೋ ಬಗ್ಗೆ. ಸಾವಿರಕ್ಕೂ ಹೆಚ್ಚು ಸಂಚಿಕೆಗಳು ಪ್ರಸಾರವಾಗಿ, ಪುಸ್ತಕಗಳ ರೂಪದಲ್ಲೂ ಪ್ರಕಟವಾದ ಜನಪ್ರಿಯ ಕಾರ್ಯಕ್ರಮ ಅದು.
ನಾನು ನೋಡಿಲ್ಲವಾದರೂ ಅಡೂರರ ಒಗ್ಗರಣೆಯಿಂದ ಅಷ್ಟು ತಿಳಿದುಕೊಂಡೆ. ‘ಯಾರದರ ಮನ್ಯಾಗ ಒಗ್ಗರಣೆ ಮುಗಿಯೋದ ಕೇಳಿರೇನ?’ ಎಂದು ಅವರು ಬರೆದದ್ದು ಒಗ್ಗರಣೆ ಡಬ್ಬಿ ಟಿ.ವಿ ಧಾರಾವಾಹಿ ಮುಗಿಯುವುದೇ ಇಲ್ಲವಲ್ಲ ಎಂಬ ಅಸಹನೆ ಯಿಂದಲೇ ಇರಬಹುದು; ಆದರೆ ನಿಜವಾದ ಒಗ್ಗರಣೆ ಡಬ್ಬಿ ಅಡುಗೆಮನೆಯಲ್ಲೊಂದು ಅಕ್ಷಯ ಪಾತ್ರೆ ಇದ್ದಂತೆ ಎಂಬುದನ್ನೂ ನಾವು ಗಮನಿಸಬೇಕು. ಒಮ್ಮೆ ಆಲೋಚಿಸಿ: ಒಗ್ಗರಣೆ ಡಬ್ಬಿಯಿಲ್ಲದ ಅಡುಗೆ ಮನೆಯುಂಟೇ? ನನಗನಿಸುತ್ತದೆ ‘ವೇದವನೋದದ ವಿಪ್ರ ತಾನೇಕೆ… ಕಾದಲರಿಯದ ಕ್ಷತ್ರಿಯನೇಕೆ… ಕ್ರೋಧವ ಬಿಡದ ಸಂನ್ಯಾಸಿ ತಾನೇಕೆ… ಆದರವಿಲ್ಲದ ಅಮೃತಾನ್ನವೇಕೆ…’
ಎಂದು ಹಾಡಿದ ಪುರಂದರದಾಸರು ನಿಜವಾಗಿಯಾದರೆ ಆ ಕೀರ್ತನೆಯಲ್ಲಿ ‘ಒಗ್ಗರಣೆ ಇಲ್ಲದ ಅಡುಗೆ ಅದೇಕೆ… ಒಗ್ಗರಣೆ ಡಬ್ಬಿ ಯಿಲ್ಲದ ಅಡುಗೆಮನೆಯೇಕೆ…’ ಎಂಬೆರಡು ಸಾಲುಗಳನ್ನೂ ಸೇರಿಸಬೇಕಿತ್ತು.
ಅಷ್ಟೂ ಹಾಸುಹೊಕ್ಕಾಗಿದೆ ಭಾರತೀಯರ ಅಡುಗೆಮನೆಗಳಲ್ಲಿ ಒಗ್ಗರಣೆ ಡಬ್ಬಿ. ಹೆಚ್ಚೆಂದರೆ ಪ್ರದೇಶದಿಂದ ಪ್ರದೇಶಕ್ಕೆ ಹೋದಂತೆಲ್ಲ ಅದರಲ್ಲಿ ಸ್ಥಾನ ಪಡೆಯುವ ಮಸಾಲೆ ಸಾಮಗ್ರಿಗಳ ಪಟ್ಟಿ ಬೇರೆಯಾದೀತು ಅಷ್ಟೇ. ಗಂಭೀರವಾಗಿ ವಿಚಾರ ಮಾಡಿದರೆ ಒಗ್ಗರಣೆ ಡಬ್ಬಿಯಲ್ಲಿ ಬರಿ ಒಗ್ಗರಣೆಯ ಸಾಮಗ್ರಿಯಷ್ಟೇ ಇರುವುದಲ್ಲ, ನಮ್ಮ ಭರತ ಭೂಮಿಯ ಇತಿಹಾಸವೇ ಇದೆ. ಮತ್ತಷ್ಟು ಗಹನವಾಗಿ ಚಿಂತಿಸಿದರೆ ಮನುಷ್ಯನ ಜೀವನವಿಧಾನ ಪರಿವರ್ತನೆಗೊಂಡ ರೀತಿಯನ್ನು ತಿಳಿಸುವ ಸಮಾಜಶಾಸ್ತ್ರವೂ ಇದೆ! ಅನಾದಿಕಾಲದಿಂದಲೂ ನಮ್ಮ ಭಾರತ ದೇಶವು ‘ಮಸಾಲೆ ಪದಾರ್ಥಗಳ ಬೋಗುಣಿ’ (Spice Bowl of the World) ಎಂದೇ
ಹೆಸರುವಾಸಿಯಾದುದು. ಅಂದರೆ, ಪ್ರಪಂಚವು ಒಂದು ಮನೆ ಎಂದಾದರೆ ಭಾರತ ಅಡುಗೆಮನೆ. ಅಥವಾ, ಪ್ರಪಂಚವು
ಒಂದು ಅಡುಗೆಮನೆ ಅಂತಾದರೆ ಭಾರತ ಅದರಲ್ಲಿನ ಒಗ್ಗರಣೆ ಡಬ್ಬಿ.
ಅತ್ಯಂತ ಪ್ರಾಚೀನವೆನ್ನಲಾದ ವೇದಗಳಲ್ಲಿ, ರಾಮಾಯಣ ಮಹಾಭಾರತ ಕಾವ್ಯಗಳಲ್ಲೂ ಸುಮಾರಷ್ಟು ಮಸಾಲೆ ಪದಾರ್ಥಗಳ ಉಲ್ಲೇಖ ಬರುತ್ತದಂತೆ. ಆ ಕಾಲದಲ್ಲೇ ಅಡುಗೆಗಾಗಿ, ಔಷಧವಾಗಿ ಅವುಗಳ ಉಪಯೋಗವಾಗುತ್ತಿತ್ತಂತೆ. ಆದರೆ ಮಸಾಲೆಗಳ ತವರೆಂಬ ಆ ಹಿರಿಮೆಯೇ ಭಾರತಕ್ಕೆ ಒಂದು ರೀತಿಯಲ್ಲಿ ಮುಳುವಾಯಿತೆನ್ನುವುದೂ ನಮಗೆಲ್ಲ ಗೊತ್ತಿರುವ ಸತ್ಯವೇ.
ಸಕ್ಕರೆಗೆ ಇರುವೆ ಮುತ್ತುವಂತೆ ಮಸಾಲೆಗಳಿಗೋಸ್ಕರ ಭಾರತವನ್ನು ವಿದೇಶಿ ಆಕ್ರಮಣಕಾರರು ಮುತ್ತಿಕೊಂಡರು. ಅರೇಬಿ ಯನ್ನರು, ರೋಮನ್ನರು, ಚೀನೀಯರು, ಪೋರ್ಚುಗೀಸರು, ಬ್ರಿಟಿಷರು… ಎಲ್ಲರೂ ಬಂದದ್ದು ಭಾರತದಲ್ಲಿ ಸಮೃದ್ಧವಾಗಿದ್ದ ಮಸಾಲೆ ಪದಾರ್ಥಗಳ ಆಕರ್ಷಣೆಯಿಂದಲೇ. ವ್ಯಾಪಾರಿಗಳಾಗಿ ಬಂದವರು ಭಾರತಮಾತೆಯ ಪಾಲಿಗೆ ವ್ಯಭಿಚಾರಿಗಳಾದರು. ದಬ್ಬಾಳಿಕೆ ನಡೆಸಿದರು.
ಸಂಪತ್ತನ್ನು ದೋಚಿದರು. ನಮ್ಮನ್ನು ದಾಸ್ಯಶೃಂಖಲೆ ಯಿಂದ ಕಟ್ಟಿಹಾಕಿದರು. ಆಮೇಲೆ ಸಾವಿರಾರು ದೇಶಪ್ರೇಮಿಗಳ ತ್ಯಾಗ – ಬಲಿದಾನದಿಂದಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದೆವೆನ್ನಿ. ಅಷ್ಟಾದರೂ ಇಂದಿಗೂ ಭಾರತದ ಮಸಾಲೆ ಪದಾರ್ಥಗಳೆಂದರೆ, ಅವುಗಳಿಂದ ರುಚಿ – ಬಣ್ಣ – ಪರಿಮಳ ಹೆಚ್ಚಿಸಿಕೊಂಡ ಅಡುಗೆಯೆಂದರೆ ಜಗತ್ತೇ ಜೊಲ್ಲು ಸುರಿಸುತ್ತದೆ. ಇದು ಉತ್ಪ್ರೇಕ್ಷೆಯಲ್ಲ. ಇಲ್ಲಿ ಭಾರತೀಯ ರೆಸ್ಟೊರೆಂಟ್ಗಳಿಗೆ ಅಮೆರಿಕನ್ನರು ಮುಗಿಬೀಳುವ ಪರಿಯನ್ನು, ಬ್ರಿಟನ್ನಲ್ಲಿ Curry ಎಂಬುದು ರಾಷ್ಟ್ರೀಯ
ಖಾದ್ಯವೇ ಆಗಿಹೋಗಿರುವುದನ್ನು, ನೋಡಿದರೆ ಇದು ಅರ್ಥವಾಗುತ್ತದೆ.
ಮಸಾಲೆ ಪದಾರ್ಥಗಳನ್ನು ತನ್ನೊಳಗೆ ತುಂಬಿಸಿಟ್ಟುಕೊಳ್ಳುವ ಒಗ್ಗರಣೆ ಡಬ್ಬಿಯದೂ ರೋಚಕ ಇತಿಹಾಸವೇ. ಹಿಂದಿನ ಕಾಲ ದಲ್ಲಿ, ಮುಖ್ಯವಾಗಿ ಹಳ್ಳಿಗಳ ಮನೆಗಳಲ್ಲಿ ಬಳಕೆಯಲ್ಲಿದ್ದ ಅಡುಗೆ ಪರಿಕರಗಳನ್ನು ನೀವು ನೋಡಿರಬಹುದು. ಪಾತ್ರೆಪಗಡ ಗಳಲ್ಲಿ ಕೆಲವು ಮರದಿಂದ ಮಾಡಿದ್ದಿರುತ್ತಿದ್ದವು. ಒಗ್ಗರಣೆ ಡಬ್ಬಿ ಸಹ ಅವುಗಳಲ್ಲೊಂದು. ಸ್ವಾರಸ್ಯವೆಂದರೆ ಅದರ ಬೋಗುಣಿ ಯಾಕಾರ, ಐದು ಕಂಪಾರ್ಟ್ಮೆಂಟ್ ಗಳು, ಮುಚ್ಚಳ ಮತ್ತು ಅದರ ತಿರುಗಣೆ – ಎಲ್ಲವೂ ಸಿಂಗಲ್ ಪೀಸ್ ವುಡ್ ಅಂದರೆ ಮರದ ಒಂದೇ ತುಂಡಿನಿಂದ ಕೆತ್ತನೆ ಮಾಡಿದ್ದು. ನಮ್ಮ ಮನೆಯಲ್ಲೂ ಅದೇಥರ ಮರದಿಂದ ಮಾಡಿದ್ದ ಒಗ್ಗರಣೆ ಡಬ್ಬಿ ಇದ್ದದ್ದು ನನಗೆ ನೆನಪಿದೆ.
ಗಾತ್ರದಲ್ಲೂ ಅದು ಸಾಕಷ್ಟು ದೊಡ್ಡದಿರುತ್ತಿತ್ತು. ಅದರ ಒಂದೊಂದು ಕಂಪಾರ್ಟ್ಮೆಂಟ್ನಿಂದ ಸಾಸಿವೆ, ಬೇಳೆ ಇತ್ಯಾದಿಯನ್ನು ಮುಷ್ಟಿಯಲ್ಲಿ ತೆಗೆಯುವುದಕ್ಕಾಗುವಷ್ಟು! ಹಿಂದೆಲ್ಲ ಕೂಡುಕುಟುಂಬಗಳಿದ್ದಲ್ಲಿ, ಒಂದು ಮನೆಯಲ್ಲಿ ಹತ್ತಿಪ್ಪತ್ತು ಜನರಿದ್ದಲ್ಲಿ, ಅಡುಗೆ – ಒಗ್ಗರಣೆ ತಯಾರಿಯೂ ಹಾಗೆಯೇ ಇರಬೇಕಾಗುತ್ತಿತ್ತು. ಕಾಲಕ್ರಮೇಣ ಕುಟುಂಬಗಳ ಗಾತ್ರ ಚಿಕ್ಕದಾಗುತ್ತಿದ್ದಂತೆ,
ಜೊತೆಯಲ್ಲೇ ಸ್ಟೈನ್ಲೆಸ್ ಸ್ಟೀಲ್ ಪಾತ್ರೆಗಳ ಯುಗ ಬರುತ್ತಿದ್ದಂತೆ ಒಗ್ಗರಣೆ ಡಬ್ಬಿಯೂ ಸ್ಟೀಲ್ ಕರಡಿಗೆಯ ರೂಪ ಪಡೆಯಿತು. ಮನೆಯಲ್ಲಿರುವ ಮೂರೂವರೆ ಜನರಿಗೆ ಮಾಡುವ ಅಡುಗೆಯ ಒಗ್ಗರಣೆಗೆ ಬೇಳೆ – ಸಾಸಿವೆ ಚಿಟಿಕೆ ಅಳತೆಯಲ್ಲಿ ಸಾಕು. ಆದ್ದರಿಂದ ಹದಾ ದೊಡ್ಡದೊಂದು ಡಬ್ಬಿಯೊಳಗೆ ಏಳು ಪುಟ್ಟಪುಟ್ಟ ಕಪ್ಗಳು.
ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಮೆಂತ್ಯ, ಮೆಣಸು, ಜೀರಿಗೆ, ಕೊತ್ತಂಬರಿ – ಒಂದೊಂದಕ್ಕೆ ಒಂದೊಂದು. ಒಗ್ಗರಣೆ ಡಬ್ಬಿಯ
ಈ ರೂಪ ಜನಪ್ರಿಯವಾಯಿತು, ಸಿದ್ಧ ಮಾದರಿ ಅನಿಸಿಕೊಂಡಿತು. ಆದರೆ ಬದಲಾವಣೆ ಅನ್ನೋದು ನಿರಂತರವಷ್ಟೆ? ಮನೆಯಲ್ಲಿರ ವುದೇ ಒಬ್ಬರು ಅಥವಾ ಇಬ್ಬರೆಂದಾದಾಗ ಅಡುಗೆಯಲ್ಲಿ ಒಗ್ಗರಣೆ ಸಾಮಗ್ರಿ ಚಿಟಿಕೆಯಷ್ಟೂ ಬೇಡ. ಟೇಬಲ್ಸಾಲ್ಟ್ ಉದುರಿಸಿದಂತೆ ಪುಟ್ಟಪುಟ್ಟ ಡಬ್ಬಿಗಳಿಂದ ಉದುರಿಸಿದರಾಯ್ತು. ಅಂತಹ ಮಾಡರ್ನ್ ಒಗ್ಗರಣೆ ಡಬ್ಬಿಗಳು ಈಗ ಅನೇಕರ
ಅಡುಗೆಮನೆಗಳಲ್ಲಿವೆ. ಅಥವಾ ಬ್ಯಾಚಲರ್ಗಳ ಅಡುಗೆಮನೆಗಳಲ್ಲಿ ಒಗ್ಗರಣೆ ಡಬ್ಬಿ ಎಂಬ ಪರಿಕರವೇ ಇಲ್ಲದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಇದ್ದರೂ, ಆರಂಭದಲ್ಲಿ ಅಮ್ಮ ಬಂದು ಒಪ್ಪವಾಗಿ ಜೋಡಿಸಿಕೊಟ್ಟದ್ದು ಎರ್ರಾಬಿರ್ರಿಯಾದ ಮೇಲೆ ರಿಪ್ಲೆನಿಷ್ ಮೆಂಟ್ ಆಗಿರುವುದಿಲ್ಲ. ಒಗ್ಗರಣೆ ಡಬ್ಬಿಯ ಗಾತ್ರ, ವಿನ್ಯಾಸಗಳಲ್ಲಿನ ಈ ಮಾರ್ಪಾಡು ಒಂಥರದಲ್ಲಿ ಡಾರ್ವಿನ್ನ ವಿಕಾಸ ವಾದ ಇದ್ದಂತೆಯೇ ಅಂತನಿಸುವುದಿಲ್ಲವೇ? ಆದರೆ ಇಲ್ಲಿ ಒಗ್ಗರಣೆ ಡಬ್ಬಿ ವಿಕಸಿತಗೊಂಡಿದ್ದಲ್ಲ, ಸಂಕುಚಿತ ಆಗುತ್ತ ಬಂದಿರುವುದು.
ಹೇಗಂತೀರಾ? ಕೂಡುಕುಟುಂಬ ಪದ್ಧತಿ ಇದ್ದಾಗ ಒಗ್ಗರಣೆ ಡಬ್ಬಿಯ ಆಕಾರ ಒಂದು ದೊಡ್ಡ ಮನೆಯಂತೆ, ಅದರಲ್ಲಿ ಎಲ್ಲರ ಸಹಬಾಳ್ವೆ ಎಂಬ ಭಾವನೆ ಮೂಡಿಸುವಂತೆ ಇರುತ್ತಿತ್ತು.
ಚ್ಚುಹೆಚ್ಚು ನಗರೀಕರಣ ಮತ್ತು ತತ್ಪರಿಣಾಮವಾಗಿ ನ್ಯೂಕ್ಲಿಯಸ್ ಫ್ಯಾಮಿಲಿಗಳು ಹೆಚ್ಚಿದಂತೆಲ್ಲ ಒಗ್ಗರಣೆ ಡಬ್ಬಿ ಒಂದು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ನಂತಾಯಿತು. ನೆರೆಹೊರೆ ಯವರು ಹತ್ತಿರದಲ್ಲಿದ್ದೂ ಪರಿಚಯ ಆತ್ಮೀಯತೆ ಇಲ್ಲದಂತಾಯ್ತು. ಮುಂದೊಮ್ಮೆ ಅದು ಒತ್ತೊತ್ತಾಗಿರುವ ಜೋಪಡಿಗಳಂತೆ ಕಂಡುಬಂದರೂ ಅಚ್ಚರಿಯಿಲ್ಲ. ಅದಕ್ಕೇ ಹೇಳಿದ್ದು, ಈ ಪ್ರಕ್ರಿಯೆ ವಿಕಸನವಲ್ಲ, ಸಂಕೋಚನ. ಮನುಷ್ಯ ಸಂಬಂಧಗಳು ದಿನೇದಿನೇ ಸಂಕುಚಿತಗೊಳ್ಳುತ್ತಿರುವ, ಪ್ರತಿಯೊಬ್ಬ ಮನುಷ್ಯನೂ ಭಾವನಾತ್ಮಕವಾಗಿ ಒಂದೊಂದು ದ್ವೀಪ ದಂತಾಗುತ್ತಿರುವ ಸಾಮಾಜಿಕ ಪರಿವರ್ತನೆಯ ಪ್ರತಿಫಲನ.
ಈಗಿನ ಅಡುಗೆಮನೆಗಳಲ್ಲಿರುವ ಒಗ್ಗರಣೆ ಡಬ್ಬಿ ಅದಕ್ಕೊಂದು ಒಳ್ಳೆಯ ನಿದರ್ಶನ. ಚಿತ್ಪಾವನಿ ಮರಾಠಿ ಭಾಷೆಯಲ್ಲಿ ನಾವು ಒಗ್ಗರಣೆ ಡಬ್ಬಿಯನ್ನು ‘ಸಂಭಾರಬೊಟ್ವೊ’ ಅಂತೇವೆ. ವಿವಿಧ ಸಾಂಬಾರ ಪದಾರ್ಥ ಗಳನ್ನಿಡುವ ಪೆಟ್ಟಿಗೆ ಎಂಬರ್ಥದಲ್ಲಿ. ನನಗೆ
ಗೊತ್ತಿದ್ದಂತೆ ಹಿಂದಿಯಲ್ಲಿ ಇದನ್ನು ‘ಮಸಾಲಾ ದಾನಿ’ ಎನ್ನುತ್ತಾರೆ. ತೆಲುಗಿನಲ್ಲಿ ‘ಪೋಪುಲ ಪೆಟ್ಟಿ’ (ಪೋಪು ಎಂದರೆ ಒಗ್ಗರಣೆ) ಎಂದು, ಮತ್ತು ತಮಿಳಿನಲ್ಲಿ ‘ಅಂಜರೈಪೆಟ್ಟಿ’ (ಅಂಜಿ ಅರೈ ಪೆಟ್ಟಿ = ಐದು ಕಂಪಾಟ್ ಮೆಂಟ್ಗಳ ಪೆಟ್ಟಿಗೆ) ಎಂದೂ ಕರೆಯು ತ್ತಾರೆ.
ಐದಾರು ದಶಕಗಳ ಹಿಂದೆ ಹಳ್ಳಿಯ ನಮ್ಮನೆಯಲ್ಲಿದ್ದ ಒಗ್ಗರಣೆ ಡಬ್ಬಿ ಐದು ಕಂಪಾರ್ಟ್ಮೆಂಟ್ಗಳದೇ. ಅಂತರಜಾಲದಲ್ಲಿ ನನಗೆ ಪೋಪುಲಪೆಟ್ಟಿ, ಅಂಜರೈಪೆಟ್ಟಿ ಹೆಸರಿನ ಬ್ಲಾಗುಗಳು ಸಿಕ್ಕಿವೆ. ಆ ಹೆಸರಿನ ಟಿವಿ ಸೀರಿಯಲ್ಗಳೂ ಆಯಾ ಭಾಷೆಗಳಲ್ಲಿ
ಜನಪ್ರಿಯವಾಗಿದ್ದವು ಎಂಬ ಮಾಹಿತಿ ದೊರೆತಿದೆ. ಬಂಗಾಳದಲ್ಲಿ ‘ಪಂಚ ಫೊರೊನ್’ ಎಂಬ ಜನಪ್ರಿಯ ಖಾದ್ಯವೇ ಇದೆಯಂತೆ, ಮಸಾಲೆಡಬ್ಬಿಯ ಐದು ಸಾಮಗ್ರಿಗಳಿಂದ ತಯಾರಾದದ್ದೆಂದು ಆ ಹೆಸರು. ಗುಜರಾತಿ ಬ್ಲಾಗಿಗಳೊಬ್ಬಳು ತನ್ನ ಮಸಾಲೆಡಬ್ಬಿಯ ಬಗ್ಗೆ ಭಾವುಕಳಾಗಿ ಬರೆದುಕೊಂಡಿದ್ದಾಳೆ.
ಮದುವೆಯಲ್ಲಿ ತನ್ನ ಅಜ್ಜಿ ಅದನ್ನು ಉಡುಗೊರೆಯಾಗಿ ಕೊಟ್ಟದ್ದು, ತಾನದನ್ನು ಅಮೆರಿಕಕ್ಕೆ ತಂದದ್ದು, ಅದರ ಏಳು ಕಪ್ಗಳಲ್ಲಿ ಆರನ್ನಷ್ಟೇ ವಿವಿಧ ಮಸಾಲೆ ಗಳಿಂದ ತುಂಬಿಸಿ ಒಂದರಲ್ಲಿ ‘ಪ್ರೀತಿ’ಯನ್ನು ತುಂಬಿಸಿಟ್ಟದ್ದು, ಅದರಿಂದಾಗಿ ತಾನು ಮಾಡಿದ ಅಡುಗೆ ಮನೆಮಂದಿಗೂ ಅತಿಥಿಗಳಿಗೂ ತುಂಬ ಇಷ್ಟವಾಗುವುದು… ಎಂದು ಸಾಗುತ್ತದೆ ಆಕೆಯ ಲಹರಿ. ಅಂತೂ ಸಾರಾಂಶವೇನೆಂದರೆ – ಪಂಜಾಬ ಸಿಂಧ ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ… ಒಗ್ಗರಣೆ ಡಬ್ಬಿ ಮಾತ್ರ ಭಾರತೀಯರೆಲ್ಲರ
ಅಡುಗೆ ಮನೆಯ ಅವಿಭಾಜ್ಯ ಅಂಗ!