ವಾರದ ತಾರೆ: ಕೊನೇರು ಹಂಪಿ
ವಿಶೇಷ ಲೇಖನ: ವಿರಾಜ್ ಕೆ.ಅಣಜಿ
ಬೇಕಿದ್ದರೆ ಪುಟಾಣಿಗಳಿಗೋ, ಯುವ ಜನರನ್ನೊಮ್ಮೆ ಕೇಳಿ ನೋಡಿ, ಕೊನೇರು ಹಂಪಿ ಗೊತ್ತಾ ಎಂದರೆ, ಇಲ್ಲ ಎನ್ನುತ್ತಾರೆ. ಅದೇ ಪಬ್‌ಜಿ ಎಂದರೆ ಕಣ್‌ಕಣ್ ಬಿಡ್ತಾರೆ, ಕಾಲವೇ ಹಾಗಾಗಿದೆ. ಆದರೆ, ನಮ್ಮ ಮಕ್ಕಳಿಗೆ ಮಾದರಿಯಾಗಿ ಯಾರನ್ನೆಲ್ಲ ನಾವು ತೋರಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ‘ನಮ್ಮ ಹಂಪಿ’.
‘ನಾನು ಎಂಟು ವರ್ಷದವ ಇದ್ದಾಗಿನಿಂದ, ನನ್ನ ಕನಸು ಮನಸ್ಸಿನಲ್ಲಿ ಚದುರಂಗದ ಕಪ್ಪು ಬಿಳುಪು ಮನೆಗಳು ಮನೆ
ಮಾಡಿವೆ. ಅರ್ಧ ರಾತ್ರಿಯಲ್ಲಿ ನಿದ್ದೆ ಕೆಡಿಸಿಕೊಂಡು ಚಾವಣಿ ನೋಡ್ತಾ, ನಕ್ಷತ್ರಗಳ ಮೂವ್‌ಮೆಂಟ್‌ಸ್ ಊಹಿಸಿಕೊಂಡು, ಆಟ
ರೂಪಿಸಿಕೊಂಡು ಶ್ರಮ ಪಟ್ಟಿದೀನಿ. ನನ್ನ ಜತೆಯ ಹುಡುಗ್ರೆಲ್ಲ ಅನುಭವಿಸೋ ಸಂತೋಷ ಬಿಟ್ಟು, ಭಾರತದ ಗ್ರಾಂಡ್
ಮಾಸ್ಟರ್ ಹೇಗೆ ಆಗಬೇಕು ಅನ್ನೋ ಒಂದೇ ಕನಸಲ್ಲಿ ಒಂದೊಂದೇ ಮೆಟ್ಟಿಲು ಹತ್ತಿದೀನಿ.
ಆದರೆ, ನನ್ನ ಕಡೆ ಬೆರಳು ತೋರಿಸೋಕೂ ಯೋಗ್ಯತೆ ಇಲ್ಲದ ಈ ಜನ, ಇವತ್ತು ನನ್ನ ಜೀವನದಿಂದ ಚೆಸ್ ದೂರ ಮಾಡಲು ಹೊಂಚು ಹಾಕ್ತಿದಾರೆ’ ಅಂತ ಕಣ್ಣೀರು ಹಾಕುತ್ತಾ ರೇವಂತ್(ಅನಂತನಾಗ್) ‘ಬೆಳದಿಂಗಳ ಬಾಲೆ’ ಚಿತ್ರದಲ್ಲಿ ಹೇಳುತ್ತಿದ್ದರೆ ನಮ್ಮ ಕಣ್ಣೂ ತುಂಬಿಕೊಳ್ಳದೆ ಇರದು. ಇಂತಹದ್ದೇ ರೀತಿ ಚಪ್ಪಾಳೆ, ಶಿಳ್ಳೆಗಳ ದನಿಯಿಲ್ಲದೇ ಧ್ಯಾನ, ಭಕ್ತಿಯಂಥೆ ಚೆಸ್ ಒಲಿಸಿಕೊಂಡಿರುವ, ಧೇನಿಸಿರುವ ಚದುರಂಗದ ಚತುರೆ ಕೊನೇರು ಹಂಪಿ.
ಆಂಧ್ರದ ವಿಜಯವಾಡದಲ್ಲಿ 1987ರಲ್ಲಿ ಜನಿಸಿದ ಪುತ್ರಿಗೆ Humphy ಎಂದು ಕೊನೇರು ಅಶೋಕ್ ಹೆಸರಿಟ್ಟರು. ಚೆಸ್ ಆಟಗಾರ ನಾಗಿದ್ದ ಅವರಿಗೆ ತಮ್ಮ ಮಗಳೂ ಚೆಸ್‌ನಲ್ಲಿ ಮಹತ್ತರ ಸಾಧನೆ ಮಾಡಬೇಕು ಎಂಬ ಹಂಬಲವಿತ್ತು. ಅದಕ್ಕಾಗೇ ಕಪ್ಪು-
ಬಿಳುಪಿನ ಚೆಸ್ ಬೋರ್ಡ್ ಮುಂದೆ ಮೊದಲ ಬಾರಿ ಕುಳ್ಳಿರಿಸಿದಾಗ, ಪುಟಾಣಿ ಬಾಲೆ ಹಂಪಿಗಿನ್ನೂ ಐದರ ಪ್ರಾಯ.
‘ಪೋಲ್ಗಾರ್ ಸಿಸ್ಟರ‍್ಸ್’ ಎಂದೇ ಖ್ಯಾತರಾಗಿದ್ದ ಚೆಸ್ ಚಾಂಪಿಯನ್‌ಗಳಾದ ಸುಷಾನ್ ಜುಡಿತ್ ಮತ್ತು ಸೋಫಿಯಾ ಅವರ
ಕತೆಗಳನ್ನು ತಮ್ಮ ಮಗಳಿಗೆ ಹೇಳುತ್ತಿದ್ದರು. ಕತೆಗಳೇ ಬದುಕಿನ ಹಾದಿಗೆ ಬೆಳಕಾದವು. ಅಂದಹಾಗೆ ಹಂಪಿ ಎಂದರೆ ರಷ್ಯನ್
ಭಾಷೆಯಲ್ಲಿ ಚಾಂಪಿಯನ್ ಎಂಬ ಅರ್ಥ!
ಹಂಪಿಗೆ 8ನೇ ವಯಸ್ಸಿದ್ದಾಗ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಉದ್ಯೋಗಕ್ಕೇ ರಾಜೀನಾಮೆ ಕೊಟ್ಟು ತಮ್ಮ ಮಗಳಿಗೆ
ಪೂರ್ಣಕಾಲಿಕ ಕೋಚ್ ಆಗಲು ನಿರ್ಧರಿಸಿದ್ದವರು ಅಶೋಕ್, ಇದೆಂಥ ಹುಚ್ಚು ಧೈರ್ಯ ಎಂದವರೇ ಎಲ್ಲರೂ. ಆದರೆ,
ತನ್ನಪ್ಪ ತನಗಾಗಿ ಮಾಡಿದ ತ್ಯಾಗ, ಬದುಕನ್ನೇ ಪಣಕ್ಕಿಟ್ಟು ತೆಗೆದುಕೊಂಡ ರಿಸ್ಕ್ ವ್ಯರ್ಥವಾಗಲು ಹಂಪಿ ಬಿಡಲಿಲ್ಲ. ಕೇವಲ
ಹತ್ತು ವರ್ಷದವಳಿದ್ದಾಗ ಮೊದಲ ವಿಶ್ವ ಚಾಂಪಿಯನ್‌ಶಿಪ್‌ಗೆ ಹಂಪಿ ಕೊರಳೊಡಿದ್ದರು. ಅಲ್ಲಿಂದ 12, 14, 20 ವರ್ಷ
ದೊಳಗಿನ ಎಲ್ಲ ಟೂರ್ನಿಯಲ್ಲೂ ಹಂಪಿಯೇ ಚಾಂಪಿಯನ್ ಆದರು.
14ನೇ ವಯಸ್ಸಿನಲ್ಲೇ ಹಂಪಿ ವಿಶ್ವದ ರ್ಯಾಂಕಿಂಗ್ ಪಟ್ಟಿ ಯಲ್ಲಿ 3ನೇ ಸ್ಥಾನ ಗಳಿಸಿದ್ದರೆಂದರೆ, ಆಕೆಯ ನರನಾಡಿಗಳಲ್ಲಿ
ಚೆಸ್ ಹೇಗೆ ಬೆರೆತು ಹೋಗಿತ್ತು ಎಂಬುದನ್ನು ಊಹಿಸಬಹುದು. 1997ರಲ್ಲಿ 10ನೇ ವರ್ಷದೊಳಗಿನವರ ವಿಶ್ವ ಚಾಂಪಿಯನ್
ಶಿಪ್‌ನಲ್ಲಿ ಹಂಪಿ ಮೂರು ಚಿನ್ನದ ಪದಕ ಗೆದ್ದಿದ್ದರು. ಎರಡು ವರ್ಷಗಳ ಬಳಿಕ ಅಹಮದಾಬಾದ್‌ನಲ್ಲಿ ನಡೆದ ಏಷಿಯನ್
ಯೂತ್ ಚಾಂಪಿಯನ್‌ಶಿಪ್‌ನಲ್ಲಿ, 12 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಮತ್ತೆರೆಡು ಚಿನ್ನ ಗೆದ್ದರು. ಆಗ, ಹಂಪಿ ಗೆದ್ದಿದ್ದು
ಬಾಲಕರ ವಿರುದ್ಧ ಎಂಬುದು ಮತ್ತೊಂದು ವಿಶೇಷ.
2001ರಲ್ಲಿ ನಡೆದ ವಿಶ್ವ ಜೂನಿಯರ್ ಗರ್ಲ್ಸ್ ಚಾಂಪಿಯನ್ ಶಿಪ್ ಗೆಲುವಿನ ಮೂಲಕ ವಿಶ್ವ ಗ್ರ್ಯಾಂಡ್ ಮಾಸ್ಟರ್ ಎಂಬ ಹಿರಿಮೆಗೂ ಹಂಪಿ ಪಾತ್ರರಾದರು. ಸತತ ನಾಲ್ಕು ವರ್ಷ ಮಾಸ್ಟರ್ ಎನಿಸಿಕೊಂಡು ಭಾರತಕ್ಕೆ ಕೀರ್ತಿ ತಂದರು. ಅರ್ಜುನ ಪ್ರಶಸ್ತಿ
2003 ಪುರಸ್ಕೃತರಾದರು, 2007ರಲ್ಲಿ ಪದ್ಮಶ್ರೀ ಕೂಡ ಅರಸಿ ಬಂತು. 2015ರಲ್ಲಿ ಚೀನಾದಲ್ಲಿ ನಡೆದ ಮಹಿಳಾ ವಿಶ್ವ ಚಾಂಪಿ
ಯನ್‌ಶಿಪ್‌ನಲ್ಲಿ ಹಂಪಿ ವೈಯುಕ್ತಿಕವಾಗಿ ಕಂಚಿನ ಪದಕ ಗೆದ್ದರು. ಈಗಲೂ ಪದಕಗಳ ಮೇಲೆ ಪದಕ ಗೆಲ್ಲುತ್ತಲೇ ಇದ್ದಾರೆ.
ವಿಶ್ವ ಮಹಿಳಾ ರ್ಯಾಪಿಡ್ ಚೆಸ್ ಚಾಂಪಿಯನ್ಶಿಪ್‌ನಲ್ಲೂ ಗೆಲುವು ಕಂಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ
ಮಹಿಳೆ ಹಾಗೂ ವಿಶ್ವನಾಥನ್ ಆನಂದ್ ನಂತರದ ಪಟು ಎನಿಸಿಕೊಂಡಿದ್ದಾರೆ. ಬಾಲ್ಯದಲ್ಲಿ ಕತೆಯಲ್ಲಿ ಕೇಳುತ್ತಿದ್ದ ಜುಡಿತ್
ಪೊಲ್ಗಾರ್ ಅವರಷ್ಟೇ 2600 ಎಲೊ ಸ್ಕೋರ್ ಪಡೆದು, ಇಷ್ಟು ಅಂಕ ಪಡೆದ ದ್ವಿತೀಯ ಮಹಿಳಾ ಚೆಸ್ ಆಟಗಾರ್ತಿ ಆದರು.
2002ರಲ್ಲಿ ಮಹಿಳಾ ಗ್ರಾಂಡ್ ಮಾಸ್ಟರ್ ಹಾಗೂ ಏಕೈಕ ಮಹಿಳಾ ಗ್ರಾಂಡ್ ಮಾಸ್ಟರ್ ಆದಾಗ ವಯಸ್ಸಿನ್ನೂ 15 ವರ್ಷ, 1 ತಿಂಗಳು, 27 ದಿನಗಳಷ್ಟೇ.
2014ರಲ್ಲಿ ದಾಸರಿ ಅನ್ವೇಶ್ ಅವರನ್ನು ವಿವಾಹವಾದ ಹಂಪಿ, 2016ರಲ್ಲಿ ಹೆಣ್ಣು ಮಗುವಿಗೆ ತಾಯಿಯಾಗಿ, ಸದ್ಯ ONGC ಲಿಮಿಟೆಡ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಇಂಡಿಯನ್ ಕ್ವೀನ್ ಆಫ್ ಚೆಸ್ ಖ್ಯಾತಿಯ ಹಂಪಿಗೆ, ಮಹಿಳೆಯರಲ್ಲಿ 16 ಬಾರಿ ನಂಬರ್ 1 ರ್ಯಾಂಕ್ ಗಳಿಸಿದ ದಾಖಲೆಯಿದೆ. ಹಾಗೆಯೇ ILO(ಇಲೋ) ರೇಟಿಂಗ್‌ನಲ್ಲಿ ಈವರೆಗೂ ಹೆಚ್ಚು ಸ್ಕೋರ್ ಗಳಿಸಿದ ಜ್ಯೂನಿಯರ್ ಬಾಲಕಿಯರ ವಿಭಾಗದಲ್ಲಿ ಹಂಪಿ ಹೆಸರಿದೆ.
ಬಹುಷಃ ಚೆಸ್ ಆಟ ಒಲಿಂಪಿಕ್ಸ್ ನಲ್ಲಿ ಇದ್ದಿದ್ದರೆ ಭಾರತಕ್ಕೆ ಒಂದಷ್ಟು ಪದಕಗಳಂತೂ ಪಕ್ಕಾ ತಂದಿರತ್ತಿದ್ದರು. ಹಂಪಿಯವರ ಚೆಸ್ ಬೋರ್ಡ್ ಕೀಲಿಮಣಿಗಳು ಅವರಿಗೆ ಎಲ್ಲಿಲ್ಲದ ಗೆಲುವು, ಕೀರ್ತಿ, ಬಿರುದು ತಂದುಕೊಟ್ಟಿವೆ. ಇದೇ ವಾರವಷ್ಟೇ BBC’s Indian
sportswoman of the Year ಭಾಜನರಾಗಿದ್ದಾರೆ.
ಇನ್ನಷ್ಟು ಗೌರವಗಳು ಅವರನ್ನು ಅರಸಿ ಬರಲಿ. ವಿಶ್ವ ರ್ಯಾಂಕಿಂಗ್ ನಲ್ಲಿ ನಂ.2ರಲ್ಲಿರುವ ಅವರಿಗೆ ನಂಬರ್ 1 ಪಟ್ಟದ ಕನಸೂ
ಶೀಘ್ರ ಈಡೇರಲಿ ಎಂದು ಆಶಿಸೋಣ.