Sunday, 15th December 2024

ಕರ್ನಾಟಕ ಕಂಡ ಸಜ್ಜನ ರಾಜಕಾರಣಿ

ಸ್ಮರಣೆ

ನಂ.ಶ್ರೀಕಂಠ ಕುಮಾರ್‌

ಕರ್ನಾಟಕ ಕಂಡ ರಾಜಕಾರಣಿಗಳಲ್ಲಿ ರಾಜ್ಯದ ಹಾಗೂ ರಾಷ್ಟ್ರದ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದ ನಾಯಕರುಗಳಲ್ಲಿ ಪ್ರಮುಖವಾಗಿ ಕಾಣಬಹುದಾದ ಹಲವಾರು ವ್ಯಕ್ತಿಗಳಲ್ಲೇ ಸಜ್ಜನ ರಾಜಕಾರಣಿ ಎಂದೇ ಮೆಚ್ಚುಗೆ ಗಳಿಸಿ ‘ಮಲ್ಲಿಕ್’ ಎಂದೇ ಎಲ್ಲರಿಂದ ಪ್ರೀತಿ ಪಾತ್ರರಾದವರು ತುಮಕೂರಿನ ಮಾನ್ಯ ಎಸ್.ಮಲ್ಲಿಕಾರ್ಜುನಯ್ಯನವರು.

ತುಮಕೂರು ಜಿಲ್ಲೆಯ ಹೊನಸಿಗೆರೆ ಗ್ರಾಮದ ರೈತ ಕುಟುಂಬದ ಸಿದ್ದಪ್ಪ ನಂಜಪ್ಪ ಮತ್ತು ಲಕ್ಷ್ಮೀದೇವಮ್ಮ ದಂಪತಿಗಳ
ಪುತ್ರರಾಗಿ 1931ರ ಜೂನ್ 26ರಲ್ಲಿ ಜನನ. ಗ್ರಾಮೀಣ ಬದುಕಿನ ನಡುವೆಯೇ ವಿದ್ಯಾಭ್ಯಾಸವನ್ನು ಪಡೆಯುತ್ತಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದರ್ಶಗಳಿಗೆ ಆಕರ್ಷಿತರಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾಗಿ ಹಲವಾರು ಜವಬ್ದಾರಿಗಳನ್ನು ನಿರ್ವಹಿಸಿದರು.

ಬೆಂಗಳೂರಿನ ರಾಮ್ ನಾರಾಯಣ್ ಚಲ್ಲಾರಾಮ್ ಕಾಲೇಜಿನಲ್ಲಿ ಕಾಮರ್ಸ್ ಪದವಿಯನ್ನು ಪಡೆದು ನಂತರ ಮೈಸೂರಿನ ಶಾರದಾ ವಿಲಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಪದವಿ ಪಡೆದರು. ಆನಂತರ ತುಮಕೂರಿನಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಾ ಹಾಗೆಯೇ ತಮ್ಮ ಸಾಮಾಜಿಕ ಹಾಗೂ ರಾಜಕೀಯ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡು ಜನಪ್ರಿಯ ನಾಯಕರಾಗಿ ಹೊರಹೊಮ್ಮಿದರು.

ಹಾಗೆಯೇ 1952ರಲ್ಲಿ ಸ್ಥಾಪನೆಯಾದ ಭಾರತೀಯ ಜನಸಂಘದ ಕಾರ್ಯಕರ್ತರಾಗಿ ರಾಜಕೀಯ ಚಟುವಟಿಕೆಗಳಲ್ಲೂ ತಮ್ಮನ್ನು ವಿಸ್ತರಿಸಿಕೊಂಡರು. ಪ್ರಥಮವಾಗಿ 1956ರಲ್ಲಿ ತುಮಕೂರು ಪುರಸಭಾ ಸದಸ್ಯರಾಗಿ ಆಯ್ಕೆಗೊಂಡು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1971 ರಿಂದ 1977ರವರೆಗೆ ಭಾರತೀಯ ಜನಸಂಘದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಜನಸಂಘವನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಶ್ರಮವಹಿಸಿದರು.

ಪ್ರಥಮವಾಗಿ 1971ರಲ್ಲಿ ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಜನಸಂಘದಿಂದ ಸ್ಪರ್ಧಿಸಿ ಚುನಾಯಿತ ರಾದರು. ಒಟ್ಟಾರೆ ಸತತ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡ ಹೆಮ್ಮೆಯಿದೆ. ಹಾಗೂ ಇದೇ ವೇಳೆ ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ನೇಮಕಗೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹಿರಿಮೆ ಅವರದು.

1975ರಲ್ಲಿ ರಾಷ್ಟ್ರಾದ್ಯಂತ ತುರ್ತುಪರಿಸ್ಥಿತಿಯನ್ನು ಹೇರಿದ ಹಿನ್ನೆಲೆಯಲ್ಲಿ ಸೆರೆಮನೆ ವಾಸವನ್ನು ಅನುಭಸಿದರು. ಬೆಂಗಳೂರಿನ ಸೆರೆಮನೆ ವಾಸದಲ್ಲಿ ಇವರೊಡನೆ ನೇತಾರರಾದ ಲಾಲ್ ಕೃಷ್ಣ ಅದ್ವಾನಿ, ಮಧು ದಂಡವತೆ, ಜಾರ್ಜ್ ಫೆರ್ನಾಂಡಿಸ್, ಮೈಕೆಲ್ ಫೆರ್ನಾಂಡಿಸ್ ಅವರುಗಳು ಸಹ ರಾಜಕೀಯ ಖೈದಿಯಾಗಿದ್ದರು. 1977ರಲ್ಲಿ ರಚನೆಯಾದ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಸಂಘಟನೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡು ಪಕ್ಷವನ್ನು ಸಂಘಟಿಸಿದರು. ಆನಂತರ ಬದಲಾದ ರಾಷ್ಟ್ರದ ರಾಜಕೀಯ ಸಿದ್ಧಾಂತದ ಹಿನ್ನೆಲೆಯಲ್ಲಿ 1980ರಲ್ಲಿ ಜನತಾ ಪಕ್ಷ ವಿಭಜನೆಗೊಂಡು ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲ್ ಕೃಷ್ಣ ಅದ್ವಾನಿಯವರ ನೇತೃತ್ವದಲ್ಲಿ ಉದಯವಾದ ಭಾರತೀಯ ಜನತಾ ಪಕ್ಷದ ಪ್ರಥಮ ರಾಜ್ಯ ಉಪಾಧ್ಯಕ್ಷ ರಾಗಿ ನೇಮಕಗೊಂಡು ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಿ, ಕಾರ್ಯಕರ್ತರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಸಂಘಟನೆಯಲ್ಲಿ ಮಹತ್ವದ ಪಾತ್ರವಹಿಸಿದರು.

ಅಂದಿನ ಕ್ಲಿಷ್ಟ ರಾಜಕೀಯದ ನಡುವೆ ಉತ್ತರ ಭಾರತಕ್ಕಷ್ಟೇ ಸೀಮಿತವಾಗಿದ್ದ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಟ್ಟುವಲ್ಲಿ
ಶ್ರಮವಹಿಸಿದರು. 1991ರಲ್ಲಿ ನಡೆದ ಹತ್ತನೇ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿ ಆಯ್ಕೆಗೊಂಡು
1991-96ರ ಅವಧಿಯಲ್ಲಿ ಲೋಕಸಭೆಯ ಉಪಸಭಾಪತಿ ಆಗಿ ಉತ್ತಮ ಆಡಳಿತ ನಡೆಸಿದರು. ನಂತರವೂ ಸಹ 1996ರ
ಹನ್ನೆರಡನೆಯ ಲೋಕಸಭಾ ಚುನಾವಣೆ ಹಾಗೂ 2004ರ ಹದಿನಾಲ್ಕನೇ ಲೋಕಸಭಾ ಚುನಾವಣೆಯಲ್ಲೂ ಮರು ಆಯ್ಕೆ ಗೊಂಡು ಜನಪ್ರಿಯ ಲೋಕಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದರು.

ತಮ್ಮ ಆಡಳಿತಾವಧಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಸುಮಾರು ಹನ್ನೊಂದು ದೇಶಗಳಲ್ಲಿ ಪ್ರವಾಸ ಮಾಡಿದ ಇವರು ಪ್ರಮುಖ ವಾಗಿ 1998ರಲ್ಲಿ ನಡೆದ ಕಾಮನ್ ವೆಲ್ತ್ ಸಮ್ಮೇಳನದಲ್ಲಿ ಸಂಸದೀಯ ಸಮಿತಿಯ ಸದಸ್ಯರಾಗಿ ಭಾಗಿಯಾಗಿದ್ದರು. ತಮ್ಮ ಸಾಮಾಜಿಕ ಸೇವೆಯಲ್ಲಿ ಹೆಚ್ಚಿನದಾಗಿ ಅಸ್ಪೃಶ್ಯತಾ ನಿವಾರಣೆಯತ್ತ ಇವರ ಪ್ರಯತ್ನ ಗಮನಾರ್ಹವಾದುದು. ರಾಜಕೀಯ ಚಟುವಟಿಕೆಗಳಲ್ಲಿ ಎಲ್ಲಿಯೂ ಭ್ರಷ್ಟಾಚಾರಕ್ಕೆ ಆಸ್ಪದ ನೀಡದ ಸಜ್ಜನ ರಾಜಕಾರಣಿಯಾಗಿ ಜನಪ್ರಿಯರಾಗಿದ್ದರು.

ತಮ್ಮ ಧಣಿವರಿಯದ ನಿರಂತರ ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳಿಂದಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ‘ಮಲ್ಲಿಕ್’ 83ನೇ ವಯಸ್ಸಿನಲ್ಲಿ 2014ರ ಮಾ.13ರಂದು ಶಿವೈಕ್ಯರಾದರು. ಆ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ ಲಾಲ್‌ಕೃಷ್ಣ
ಅದ್ವಾನಿಯವರು ಮೊದಲ್ಗೊಂಡು ಹಲವಾರು ರಾಷ್ಟ್ರ ಹಾಗೂ ರಾಜ್ಯ ನಾಯಕರುಗಳು ಆಗಮಿಸಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.