Thursday, 19th September 2024

ಕಥಕ್ಕಳಿ ಮಾಂತ್ರಿಕ ಚೆಮಂಚೇರಿ ಕುನ್ಹಿರಾಮನ್ ನಾಯರ್ ಇನ್ನಿಲ್ಲ

ಕೋಝಿಕ್ಕೋಡು: ಕಥಕ್ಕಳಿ ಮಾಂತ್ರಿಕ ಚೆಮಂಚೇರಿ ಕುನ್ಹಿರಾಮನ್ ನಾಯರ್(105) ಸೋಮವಾರ ಕೇರಳದ ಕೋಝಿಕ್ಕೋಡು ಜಿಲ್ಲೆಯಲ್ಲಿರುವ ಕೊಯಿಲಾಂಡಿ ಸಮೀಪ ಚೆಲಿಯಾನಲ್ಲಿ ನಿಧನರಾದರು.

90 ವರ್ಷದವರೆಗೂ ಕಥಕ್ಕಳಿ ನೃತ್ಯ ಮಾಡುತ್ತಿದ್ದ ಅವರ ಕೃಷ್ಣ ಮತ್ತು ಕುಚೇಲ ಪಾತ್ರಗಳು ಬಹಳ ಪ್ರಖ್ಯಾತವಾದವು. 100ನೇ ವಯಸ್ಸಿನಲ್ಲಿ ಕೋಝಿಕ್ಕೋಡು ಟೌನ್ ಹಾಲ್ ನಲ್ಲಿ ಗುರು ಪರಶುರಾಮ ಪಾತ್ರವನ್ನು ನೃತ್ಯ ಮಾಡಿ ಸಾರ್ವಜನಿಕರ ಮುಂದೆ ಪ್ರದರ್ಶಿಸಿದ್ದರು.

ನಾಲ್ಕನೇ ತರಗತಿಯವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಗಳಿಸಿದ್ದ ನಾಯರ್, ಕಥಕ್ಕಳಿ ಕಲಿಯಬೇಕೆಂಬ ತುಡಿತದಿಂದ ಮನೆ ಬಿಟ್ಟು ಓಡಿಹೋಗಿದ್ದರಂತೆ. ಕೇರಳದಲ್ಲಿ 1944ರಲ್ಲಿ ಕಣ್ಣೂರಿನಲ್ಲಿ ಭಾರತೀಯ ನೃತ್ಯ ಕಲಾಲಯಂ ಎಂಬ ಸಾಂಪ್ರದಾಯಿಕ ನೃತ್ಯ ಕಲಿಕೆ ಶಾಲೆ ಆರಂಭಿಸಿದ್ದರು.

ನಟ ವಿನೀತ್ ಅವರ ಹಲವು ಮಂದಿ ಶಿಷ್ಯರಲ್ಲಿ ಒಬ್ಬರು. 2017ರಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಗೌರವ ಸೇರಿದಂತೆ ಹತ್ತು ಹಲವು ಸನ್ಮಾನ, ಪ್ರಶಸ್ತಿ, ಗೌರವಗಳು ಅವರಿಗೆ ಲಭಿಸಿತ್ತು.