ನವದೆಹಲಿ : ನವದೆಹಲಿಯಲ್ಲಿ 2008ರಲ್ಲಿ ನಡೆದಿದ್ದ ಬಾಟ್ಲಾ ಎನ್‌ಕೌಂಟರ್ ವೇಳೆ ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆ ಗೈದಿದ್ದ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಉಗ್ರ ಆರಿಝ್ ಖಾನ್‌ಗೆ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಎನ್‌ಕೌಂಟರ್ ನಡೆದಲ್ಲಿಂದ ತಪ್ಪಿಸಿಕೊಂಡಿದ್ದ ಆರಿಝ್ ನನ್ನು 2018ರ ಫೆಬ್ರವರಿಯಲ್ಲಿ ದಿಲ್ಲಿ ಪೊಲೀಸರ ವಿಶೇಷ ತಂಡ ಬಂಧಿಸಿತ್ತು. ಉತ್ತರಪ್ರದೇಶ ಮೂಲದ ಈತನನ್ನು ನ್ಯಾಯಾಲಯ ಕಳೆದ ವಾರ ಅಪರಾಧಿ ಎಂದು ಘೋಷಿಸಿ, ಶಿಕ್ಷೆಯ ಪ್ರಮಾಣದ ಪ್ರಕಟನೆಯನ್ನು ಮಾ. 15ಕ್ಕೆ ನಿಗದಿಪಡಿಸಿತ್ತು. 2008ರಲ್ಲಿ ದಿಲ್ಲಿ, ರಾಜಸ್ಥಾನ, ಗುಜರಾತ್ ಮತ್ತು ಉತ್ತರ ಪ್ರದೇಶ ಗಳಲ್ಲಿ ನಡೆದ ಸರಣಿ ಸ್ಫೋಟಗಳ ರೂವಾರಿಯೂ ಆಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
2008ರ ಸೆ. 19ರಂದು ದಿಲ್ಲಿಯ ಜಾಮಿಯಾ ನಗರದಲ್ಲಿರುವ ಬಾಟ್ಲಾ ಹೌಸ್‌ನಲ್ಲಿ ಅಡಗಿದ್ದ ಮುಜಾಹಿದೀನ್ ಉಗ್ರರು ತಮ್ಮ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದ ದಿಲ್ಲಿ ಪೊಲೀಸ್ ವಿಶೇಷ ಕಾರ್ಯಪಡೆಯ ಸಿಬಂದಿ ಜತೆಗೆ ಗುಂಡಿನ ಚಕಮಕಿ ನಡೆಸಿದ್ದರು.