Sunday, 15th December 2024

ಯಕ್ಷಗಾನ ವೇಷಗಾರಿಕೆ ಎಂಬ ಸಾರೂಪ್ಯ ಸ್ಥಿತಿ

ಅಭಿಮತ

ರವಿ ಮಡೋಡಿ

ಯಕ್ಷಗಾನವೆಂದರೆ ನಮಗೆ ನೆನಪಾಗುವುದು ಚಂಡೆ ಮದ್ದಲೆಗಳ ನಿನಾದ, ಭಾಗವತರ ಶ್ರುತಿಬದ್ಧ ಹಾಡುಗಾರಿಕೆಯ ಮಧ್ಯದಲ್ಲಿ ಬಣ್ಣಗಳಲ್ಲಿ ಮೂಡುವ ಪಾತ್ರಗಳು, ಆಕರ್ಷಕವೆನಿಸುವ ವೇಷಭೂಷಣ, ಮಾತುಗಾರಿಕೆಯ ಸೊಗಸು, ಮನೋಸ ನೀಡುವ ಹೆಜ್ಜೆಗಾರಿಕೆ ಇತ್ಯಾದಿಗಳು.

ಪುರಾಣದ ಅತಿಮಾನುಷ ಪಾತ್ರಗಳು ನಾಲ್ಕು ಚೌಕಟ್ಟಿನ ರಂಗಸ್ಥಳದಲ್ಲಿ ಬಂದು, ದೃಶ್ಯ ವೈವಿಧ್ಯತೆಗಳಲ್ಲಿ ರಸಾನುಭವವನ್ನು ಉಂಟುಮಾಡುತ್ತವೆ. ಲೌಕಿಕ ವ್ಯವಸ್ಥೆಯಲ್ಲಿ ಆ ಪಾತ್ರಗಳು ನಮ್ಮ ಅನುಭವಕ್ಕೆ ನಿಲುಕದ ಪಾತ್ರಗಳಾದರೂ ಕೂಡ ರಂಗದಲ್ಲಿ ತಾನೇತಾನಾಗಿ ಅಭಿವ್ಯಕ್ತಗೊಂಡು ಪ್ರೇಕ್ಷಕರಾದ ನಮ್ಮನ್ನು ಮೈಮರೆಸುವಂತೆ ಮಾಡುತ್ತವೆ. ಇಂತಹ ತಾದಾತ್ಮ್ಯತೆಯ ಸ್ಥಿತಿಯು ಜನರಿಗೆ ಆನಂದವನ್ನು ಮತ್ತು ಆಪ್ತತೆಯನ್ನು ಒದಗಿಸುತ್ತದೆ.

ಇದು ಅಧ್ಯಾತ್ಮದ ಚಿಂತನೆಯಲ್ಲಿ ಬಹಳ ಉನ್ನತವಾದುದೆಂದು ಭಾವಿಸಬಹುದು. ನಮ್ಮ ಅಧ್ಯಾತ್ಮ ಚಿಂತನೆಯಲ್ಲಿ ಶಾಶ್ವತವಾದ ಆನಂದವನ್ನು ಪಡೆಯುವುದಕ್ಕೆ ಹಲವು ದಾರಿಗಳಿವೆ. ಭಕ್ತಿಪಂಥದಲ್ಲಿ ಈ ವಿಧಾನಕ್ಕೆ ಮೋಕ್ಷವೆಂದು ಕರೆದಿದ್ದಾರೆ. ಇದು ಹುಟ್ಟು ಸಾವುಗಳಿಂದ ಬಿಡುಗಡೆಯನ್ನು ಹೊಂದಿ, ಶಾಶ್ವತವಾದ ಸ್ಥಿತಿಯನ್ನು ಹೊಂದುವುದಾಗಿದೆ. ಶಾಸದ ಕಲ್ಪನೆಯಲ್ಲಿ ನಾಲ್ಕು ವಿಧವಾದ ಮೋಕ್ಷಗಳನ್ನು ಸೂಚಿಸುತ್ತಾರೆ. ಸಾಲೋಕ್ಯ, ಸಾರೂಪ್ಯ, ಸಾಯುಜ್ಯ ಹಾಗೂ ಸಾಮೀಪ್ಯ ಎಂಬ ನಾಲ್ಕು ಬೇರೆ ಬೇರೆ ಕ್ರಮಗಳಿಂದ ಮೋಕ್ಷವನ್ನು ಸಂಪಾದಿಸಬಹುದು.

ಇಲ್ಲಿ ಸಾಲೋಕ್ಯವೆಂದರೆ ಇಷ್ಟದೇವತಾ ಲೋಕವನ್ನು ಸೇರಿ ಆನಂದಿಸುವುದಾದರೆ ಸಾಮೀಪ್ಯವು ಪರಮಾತ್ಮನ ಹತ್ತಿರವಿದ್ದು
ಆನಂದಿಸುವುದಾಗಿದೆ. ಇನ್ನು ಸಾಯುಜ್ಯವು ಪರಮಾತ್ಮನನ್ನು ಸೇರಿ ಆನಂದಿಸುವುದಾದರೆ ಸಾರೂಪ್ಯವೆಂದರೆ ದೇವತಾ ರೂಪವನ್ನೇ ಪಡೆದು ಆನಂದಿಸುವುದು ಎನ್ನುವ ಚಿಂತನೆ ಇದೆ. ಇಲ್ಲಿ ಸಾರೂಪ್ಯ ಸ್ಥಿತಿಯ ಬಗ್ಗೆ ಮಾತನ್ನು ಆಡುವುದಾದರೆ, ಪುರಾಣ ಲೋಕವನ್ನು ಕಟ್ಟಿಕೊಡುವ ಯಕ್ಷಗಾನದ ವೇಷಗಾರಿಕೆಗೂ ಇದನ್ನು ಸಮನ್ವಯಗೊಳಿಸುವುದಕ್ಕೆ ಸಾಧ್ಯವಿದೆ.

ಇಲ್ಲಿ ಒಂದು ಬಗೆಯ ಸಾಮ್ಯತೆಯನ್ನು ಕಾಣಬಹುದು. ಈ ಚಿಂತನೆಯೂ ನಿಜಾರ್ಥದಲ್ಲಿ ಮೋಕ್ಷದ ನಿಲುವುಗಳಿಗೆ ಪರಿಪೂರ್ಣವಾಗಿ ಹೊಂದುವುದೋ ಎಂಬುದರ ಬಗ್ಗೆ ಶಂಕೆಯಿದ್ದರೂ ಯಕ್ಷಗಾನ ವೇಷಗಾರಿಕೆಯು ಸಾರೂಪ್ಯ ಸ್ಥಿತಿಯಂತೆ ಆನಂದದಾಯಕವೆಂಬುದನ್ನು ಹೇಳಬಹುದಾಗಿದೆ. ಯಕ್ಷಗಾನದ ವೇಷಗಾರಿಕೆ ಎಂಬುದು ಸಾಮಾನ್ಯ ಸ್ಥಿತಿಯಲ್ಲ. ಇದು ಬಣ್ಣ, ಪರಿಕರ, ವೇಷಭೂಷಣಗಳು ಇತ್ಯಾದಿಗಳನ್ನು ಬಳಸಿಕೊಂಡು ಹೊಸತೊಂದು ಪಾತ್ರವನ್ನು ಸೃಷ್ಟಿಸುವುದಾಗಿದೆ. ಇಲ್ಲಿ ಬಳಸುವ ವಸ್ತುಗಳು ಕೇವಲ ಭೌತಿಕ ವಸ್ತುಗಳಲ್ಲ. ಅವುಗಳು ಸಂಕೇತ ಸ್ವರೂಪಗಳು.

ಬಳಸುವ ನಾಮ, ಮುದ್ರೆ, ವಸಗಳ ಬಣ್ಣ ಹೀಗೆ ಪ್ರತಿಯೊಂದು ಆಹಾರ್ಯದ ವಸ್ತುಗಳು ಪಾತ್ರದ ರೂಪಕವಾಗಿ ಅದರ ಗುಣ, ಸ್ವಭಾವ, ಭಾವಗಳ ಸೂಚಕಗಳಾಗಿ ಬದಲಾಗುತ್ತವೆ. ಜತೆಗೆ ಇವು ವೇಷಧಾರಿಯ ಮೂಲ ಅಸ್ತಿತ್ವವನ್ನು ಮರೆಸುತ್ತ ಪಾತ್ರವಾಗಿ ರೂಪಿಸುತ್ತವೆ. ಒಂದರ್ಥದಲ್ಲಿ ಇದು ಭೌತಿಕವಾಗಿ ಪಾತ್ರದ ಸಾರೂಪ್ಯ ಸ್ಥಿತಿಯನ್ನು ಧರಿಸಿಕೊಳ್ಳುವುದಾಗಿದೆ. ಇಲ್ಲಿ ಆಹಾರ್ಯವು ಕೇವಲ ಪಾತ್ರದ ಪ್ರಾಪಂಚಿಕ ಸ್ಥಿತಿಯನ್ನು ಮಾತ್ರ ಹೇಳುತ್ತದೆ. ಅದು ನಿಜವಾಗಿಯೂ ಪ್ರೇಕ್ಷಕರಿಗೆ ಒಪ್ಪಿತವಾಗುವುದು ಅದರ ರಂಗದ ಅಭಿವ್ಯಕ್ತಿಯಿಂದಲೇ. ರಂಗಸ್ಥಳದಲ್ಲಿನ ಮಾತು, ಭಾಷೆ, ನರ್ತನ ಇತ್ಯಾದಿಗಳು ಪಾತ್ರಗಳ ಅಂತಃಸತ್ವ, ಗುಣ ಇತ್ಯಾದಿಗಳನ್ನು ಸುವ್ಯವಸ್ಥಿತವಾಗಿ ಪ್ರೇಕ್ಷಕನಿಗೆ ತಲುಪಿಸುತ್ತದೆ.

ಒಂದು ಸಲ ಪ್ರೇಕ್ಷಕನ ಮನಸ್ಸಿನಲ್ಲಿ ಇದು ಈ ಪಾತ್ರವೆಂದು ಒಪ್ಪಿಸಿದ ಮೇಲೆ ಪಾತ್ರಧಾರಿಯ ಆಹಾರ್ಯ ಗೌಣವಾಗುತ್ತದೆ. ಆಹಾರ್ಯದಿಂದ ನಿರ್ಮಾಣವಾದ ಪಾತ್ರದ ಸಾರೂಪ್ಯ ಸ್ಥಿತಿಯು ನಿಜಾರ್ಥದಲ್ಲಿ ಕಾಣಿಸದೇ ಮುಂದೆ ಭಾವ ಸಾರೂಪ್ಯ ಸ್ಥಿತಿ ಮಾತ್ರ ಗೋಚರಗೊಂಡು ನಿಜವಾದ ಪಾತ್ರವೆಂಬಂತೆ ನಿರೂಪಗೊಳ್ಳುತ್ತದೆ. ಇಲ್ಲಿಂದ ಪಾತ್ರವು ಸಾಗುವುದು ವೇಷಧಾರಿಯ
ಅಭಿವ್ಯಕ್ತಿಯ ಕ್ರಮದಿಂದಲೇ. ಹಾಗಾಗಿಯೇ ಇಲ್ಲಿ ಪ್ರೇಕ್ಷಕ ಹಾಗೂ ವೇಷಧಾರಿಯ ಮಧ್ಯೆ ಅಗೋಚರವಾದ ಸಂಬಂಧಗಳು ಏರ್ಪಡುತ್ತವೆ. ಅದು ನಿರಂತರವಾಗಿ ಪಾತ್ರದೊಂದಿಗೆ ಸಂವಹನವನ್ನು ನಡೆಸುವುದಕ್ಕೆ ಪ್ರಾರಂಭಿಸುತ್ತದೆ.

ಇದೇ ಕಾಲಘಟ್ಟದಲ್ಲಿ ಪ್ರೇಕ್ಷಕ ಹಾಗೂ ವೇಷಧಾರಿಯ ಭಾವಕೋಶದಲ್ಲಿ ಬೇರೆ ಬೇರೆ ಪರಿಣಾಮಗಳು ಅವ್ಯಾಹತವಾಗಿ
ನಡೆಯುತ್ತಿರುತ್ತವೆ. ಇಬ್ಬರಿಗೂ ಪಾತ್ರದಿಂದ ಅವ್ಯಕ್ತವಾದ ಆನಂದ ಪ್ರಾಪ್ತವಾಗುತ್ತಿರುತ್ತದೆ. ಮತ್ತೊಂದು ಕಡೆಯಲ್ಲಿ
ಪಾತ್ರಧಾರ ಯಲ್ಲಿಯೂ ಕೂಡ ಆ ಕ್ಷಣದಲ್ಲಿ ಅನೂಹ್ಯವಾದ ಮಾನಸಿಕ ಸ್ಥಿತಿ ನಿರ್ಮಾಣಗೊಂಡಿರುತ್ತದೆ. ನಾನು ಮತ್ತು
ಪಾತ್ರಗಳ ಮಧ್ಯೆ ಒಂದು ನಿರಂತರ ಸಂಘರ್ಷ ಏರ್ಪಟ್ಟಿರುತ್ತದೆ. ಎರಡು ಕೂಡ ಅಸ್ತಿತ್ವದ ಪ್ರತಿಪಾದನೆಗಾಗಿ ಹೋರಾಟವನ್ನು ಮಾಡಿದರೂ ಪಾತ್ರದ ಮಧ್ಯದಲ್ಲಿ ’ನಾನು’ ಎನ್ನುವುದು ಇಣುಕುತ್ತಿರುತ್ತದೆ.

ಇಲ್ಲಿ ಆನಂದವೆನ್ನುವುದು ಪೂರ್ಣವಾಗಿ ಪ್ರಾಪ್ತವಾಗುವುದು ಈ ಇಣಕುತನದಿಂದಲೇ. ಇದರ ಜೊತೆಗೆ ಎರಡು ಅಸ್ತಿತ್ವಗಳು ಏಕಕಾಲದಲ್ಲಿ ಸಂವಹನಗೊಳಿಸುವಷ್ಟು ಉಚ್ಚ್ರಾಯ ಸ್ಥಿತಿಯನ್ನು ಹೊಂದುವುದಕ್ಕೆ ವೇಷಧಾರಿಗೆ ಸಾಧ್ಯವಿದೆ. ಅದು ಸಾರೂಪ್ಯ ಸ್ಥಿತಿಯನ್ನು ಅರ್ಥವಿಸಿಕೊಂಡ ರೀತಿಯನ್ನು ಅವಲಂಬಿಸಿರುತ್ತದೆ. ವೇಷಧಾರಿಯಾಗಿ ಸಾರೂಪ್ಯ ಸ್ಥಿತಿಯನ್ನು ಹೊಂದಿ ಪರಕಾಯವನ್ನು ಧರಿಸಿಕೊಂಡು, ಪುರಾಣದ ಅತಿಮಾನುಷ ಪಾತ್ರಗಳನ್ನು ಸಚಿತ್ರಗೊಳಿಸುವ ಬಗೆ ಉನ್ನತವೆನಿಸುತ್ತದೆ. ಈ ಬಗೆಯಲ್ಲಿ ಯಕ್ಷಗಾನ ಮಾಧ್ಯಮಕ್ಕೆ ವಿಫಲವಾದ ಅವಕಾಶಗಳಿವೆ.